ಬೆಂಗಳೂರು: ಕೇಂದ್ರ ಸರ್ಕಾರವು ಕೃಷಿ ಮತ್ತು ಕಾರ್ಮಿಕ ಸಂಬಂಧಿ ಕಾಯ್ದೆಗಳಿಗೆ ರೈತ ಮತ್ತು ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ತರುವ ಮೂಲಕ ಶ್ರಮವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದನ್ನು ವಿರೋಧಿಸಿ ದೆಹಲಿ ಗಡಿ ಮತ್ತು ದೆಹಲಿಯಲ್ಲಿ ರೈತರು ಆರು ದಿನಗಳಿಂದ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಮತ್ತು ರೈತರ ಬೇಡಿಕೆಗಳನ್ನು ಪರಿಹರಿಸುವಂತೆ ರಾಜ್ಯಾದ್ಯಂತ ರೈತ ಮತ್ತು ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮುಖಂಡರು, ಕಳೆದ ಮೂರು ತಿಂಗಳಿನಿಂದಲೂ ಕೇಂದ್ರ ಸರ್ಕಾರದ ಕೃಷಿ ಮತ್ತು ವಿರೋಧಿ ನೀತಿಗಳುಳ್ಳ ತಿದ್ದುಪಡಿಗಳನ್ನು ವಿರೋಧಿಸುತ್ತಾ ಬರಲಾಗಿತ್ತು. ಈ ಸಂಬಂಧ ಕಾಂಗ್ರೆಸ್ ತಂದಿದ್ದ ಪ್ರಸ್ತಾಪಗಳನ್ನೂ ವಿರೋಧಿಸಲಾಗಿತ್ತು. ಬಿಜೆಪಿ ನೇತೃತ್ವದ ಸರ್ಕಾರ ಸದರಿ ಪ್ರಸ್ತಾಪಗಳನ್ನು ಕಾಯ್ದೆಯನ್ನಾಗಿ ಮಾಡಿ ರೈತವಿರೋಧಿ ಎಂದು ನಿರೂಪಿಸಿದೆ. ಕೇಂದ್ರ ಸರ್ಕಾರದ ವಿರೋಧಿ ನೀತಿ ವಿರೋಧಿಸಿ ಅಖಿಲ ಭಾರತ ಮುಷ್ಕರ ಮತ್ತು 500ಕ್ಕೂ ಹೆಚ್ಚು ರೈತಸಂಘಟನೆಗಳು ಕರೆ ನೀಡಿದ್ದ ನವೆಂಬರ್ 26-27ರ ಅಖಿಲ ಭಾರತ ಹೋರಾಟದ ಕರೆಗೆ ದೇಶಾದ್ಯಂತ ಕೋಟ್ಯಂತರ ಕಾರ್ಮಿಕರು, ನೌಕರರು, ರೈತರು ಮತ್ತು ಕೃಷಿ ಕಾರ್ಮಿಕರು ಭಾಗವಹಿಸಿದರು.
ಇದರೊಂದಿಗೆ ದೆಹಲಿಯ ಗಡಿಯಲ್ಲಿ ಆರಂಭವಾಗಿರುವ ಪಂಜಾಬ್ ಮತ್ತು ಹರಿಯಾಣ ರೈತರ ಹೋರಾಟ ಐತಿಹಾಸಿಕ ವ್ಯಾಪ್ತಿಯನ್ನು ತಲುಪಿದೆ. ಬಿಜೆಪಿ ಕೇಂದ್ರ ಸರ್ಕಾರ ಮತ್ತು ಬಿಜೆಪಿ ನೇತೃತ್ವದ ಹರಿಯಾಣ ರಾಜ್ಯ ಸರ್ಕಾರದ ಭಾರಿ ದಬ್ಬಾಳಿಕೆಯ ನಂತರವೂ ಕಳೆದ ಮೂರು ದಿನಗಳಿಂದ ಲಕ್ಷಾಂತರ ರೈತರು ಹರಿಯಾಣ ಮತ್ತು ದೆಹಲಿ ನಡುವಿನ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಜಮಾಯಿಸಿದ್ದಾರೆ. ಅವರ ಸಂಖ್ಯೆ ಪ್ರತಿದಿನ ಹೆಚ್ಚುತ್ತಿದೆ. ರೈತರ ಆಕ್ರೋಶ ಇನ್ನೂ ಹೆಚ್ಚುವ ಮುನ್ನ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ರೈತವಿರೋಧಿ ಮತ್ತು ಕಾರ್ಪೊರೇಟ್ ಪರ ವಾದ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವುದು ಮತ್ತು ವಿದ್ಯುತ್ ಮಸೂದೆ- 2020 ಅನ್ನು ಹಿಂತೆಗೆದುಕೊಳ್ಳಬೇಕು ಎಂಬ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಅಖಿಲ ಭಾರತ ಕಿಸಾನ್ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತಸಂಘ, ಕರ್ನಾಟಕ ಪ್ರಾಂತ ರೈತಸಂಘ, ಸಿಐಟಿಯು, ದಲಿತ ಸಂಘಟನೆಗಳು, ಕೃಷಿಕೂಲಿಕಾರರ ಸಂಘ, ಮಹಿಳಾ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.