ಈಗಾಗಲೇ ರಾಜ್ಯಾದ್ಯಂತ ಓದುಗರನ್ನು ತಲುಪಿ ತಲ್ಲಣ ಹುಟ್ಟು ಹಾಕುತ್ತಿರುವ ಹೆಚ್.ಆರ್.ನವೀನ್ ಕುಮಾರ್ ಅವರ “ಕದನಕಣ” ಎಂಬ ಪುಸ್ತಕ ನಿನ್ನೆ ಹಾಸನದಲ್ಲಿ ಬಿಡುಗಡೆಯಾಯಿತು. ದೆಹಲಿಯಲ್ಲಿ ರೈತ ಹೋರಾಟ ನಡೆಯುತ್ತಿರುವ ಬಗ್ಗೆ ಮಾಧ್ಯಮಗಳು ಸರ್ಕಾರದ ಜತೆ ಸೇರಿ ನಿರ್ಲಕ್ಷ್ಯ. ಮಾಡುತ್ತಿರುವ ಈ ಸಮಯದಲ್ಲಿ ನವೀನ್ ಕುಮಾರ್ ಅವರ ಪುಸ್ತಕ ಮಾಧ್ಯಮಗಳ ಹೊಣೆಗೇಡಿತನದ ಪರಿಚಯದ ಜೊತೆಗೆ ನಮ್ಮಲ್ಲಿ ಇರ ಬೇಕಾದ ಜವಬ್ದಾರಿಯನ್ನು ನೆನಪಿಸುತ್ತದೆ.
ಪುಸ್ತಕ ಬಿಡುಗಡೆ ಮಾಡಿ ಕಾರ್ಯಕ್ರಮ ಉದ್ಘಾಟನೆ ಮಾಡಿದ ಹಿರಿಯ ಪತ್ರಕರ್ತರಾದ ಆರ್.ಪಿ.ವೆಂಕಟೇಶ್ ಮೂರ್ತಿಯವರು, ಪುಸ್ತಕ ಪರಿಚಯ ಮಾಡಿದ ಪ್ರಾದ್ಯಾಪಕರಾದ ಸಿ.ಸುರೇಶ್ ಹಾಗು ದೆಹಲಿಗೆ ಹೋಗಿ ಬಂದ ಕೆ.ಎಸ್ ರವಿಕುಮಾರ್ ಅವರ ಮಾತುಗಳನ್ನ ಇಲ್ಲಿ ನೀಡಲಾಗಿದೆ.
ದೆಹಲಿಯ ರೈತ ಹೋರಾಟ ಸ್ಪೂರ್ತಿದಾಯಕವಾದುದು : ಆರ್.ಪಿ.ವೆಂಕಟೇಶಮೂರ್ತಿ, ಸಂಪಾದಕರು ಜನತಾ ಮಾಧ್ಯಮ ದಿನಪತ್ರಿಕೆ.
ತುರ್ತು ಪರಿಸ್ಥಿತಿಗಿಂತ ಭೀಕರವಾದ ಸ್ಥಿತಿಯಲ್ಲಿ ನಾವಿದ್ದೇವೆ. ಅಂತಹಾ ಒಂದು ಘಾತುಕ ಸರ್ಕಾರದ ಆಡಳಿತದ ಫಲವನ್ನು ನಾವು ನೋಡುತ್ತಿದ್ದೇವೆ. ನಾವು ರಾಜಾಸ್ಥಾನಕ್ಕೆ ಹೋದಾಗ ನಮಗೆ ರಗ್ಗು ಸಿಕ್ಕಿದರೂ ಚಳಿಯಲ್ಲಿ ನಲುಗಿ ಹೋಗಿದ್ದೆವು ಅಂತದ್ದರಲ್ಲಿ ನೂರು ದಿನಗಳ ಹೋರಾಟವನ್ನು ಆಳುವ ಸರ್ಕಾರದ ನಿಲುವಿನ ವಿರುದ್ಧ ರೈತ ಸಮುಧಾಯ ಹೋರಾಟ ಮಾಡುತ್ತಿದ್ದರೂ ಕೂಡ ಸಂವೇದನೆ ಇಲ್ಲದೇ ನಡೆದುಕೊಳ್ಳುತ್ತಿದೆ ಎಂದು ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶಮೂರ್ತಿ ತಿಳಿಸಿದರು.
ಎಲ್ಲವನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಅದನ್ನೇ ಸಾಧನೆ ಎಂದು ಹೇಳಿಕೊಳ್ಳುತ್ತಿದ್ದಾರೆ. ನಮ್ಮ ನಡುವೆ ಇರುವ ಸೋ ಕಾಲ್ಡ್ ಪ್ರಗತಿಪರರನ್ನು ನಾವು ಕನ್ವಿನ್ಸ್ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ.
ಇಂತಹಾ ಹತಾಶ ದಿನಗಳಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ನಿಜಕ್ಕೂ ನಮಗೆ ಧೈರ್ಯ ತಂದು ಕೊಟ್ಟಿದೆ. ಇಷ್ಟು ದಿನಗಳ ತನಕ ಹೋರಾಟ ಕಿಚ್ಚನ್ನು ಮುಂದುವರೆಸಿಕೊಂಡು ಬರುತ್ತಿರುವ ಅಲ್ಲಿನ ರೈತ ಹೋರಾಟದ ನಾಯಕರಿಗೆ ಎಷ್ಟು ನಮನ ಹೇಳಿದರೂ ಸಾಲದು.
ಸೋಲಾರ್ ಪ್ಯಾನಲ್ ಟೆಂಡರ್ ಗುಜರಾತಿನ ವ್ಯಾಪರಿಗೆ ಸಿಗುವಂತೆ ರೂಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ದಬ್ಬಾಳಿಕೆಯ ದಿನಗಳಲ್ಲಿ ನಾವಿದ್ದೇವೆ. ಇಂತಹಾ ದಿನಗಳಲ್ಲಿ ಹೆಚ್.ಆರ್ ನವೀನ್ ಕುಮಾರ್ ಅವರು ದೆಹಲಿಯ ಹೋರಾಟವನ್ನು ನಮ್ಮ ಮುಂದಿಟ್ಟಿರುವುದು ಒಳ್ಳೆಯ ಸಕಾಲಿಕ ನಡೆಯಾಗಿದೆ. ಇದೇ ಕದನ ಕಣ ಪುಸ್ತಕದಲ್ಲಿ ಪುರುಷೋತ್ತಮ ಬಿಳಿಮಲೆಯವರ ಸಂದರ್ಶನ ಬಹಳ ಮಹತ್ವದ್ದಾಗಿದೆ. ಈ ಹಿಂದೆ ಕಾಫಿ ಕ್ಷೇತ್ರವು ಮುಕ್ತ ಮಾರುಕಟ್ಟೆಗೆ ತೆರೆದುಕೊಂಡಿತು. ಅಂದು ಒಂದಷ್ಟು ವರ್ಷ ದುಡ್ಡು ಸಿಕ್ಕರೂ ಈಗ ಅದೇ ಕಾಫಿ ಬೆಳೆಗಾರ ಎಂತಹಾ ಸ್ಥಿತಿಗೆ ತಲುಪಿದ್ದಾನೆ ಎಂಬುದನ್ನು ನಾವು ನೋಡಬಹುದು. ಮುಕ್ತ ಮಾರುಕಟ್ಟೆ ಇರುವ ಕಾಫಿ ಮೆಣಸಿಗೆ ಯಾಕೆ ಬೆಲೆ ಸಿಗುತ್ತಿಲ್ಲ… ಹಾಗೆ ಸಿಗದೇ ಇದ್ದ ಮೇಲೆ ಈ ಮುಕ್ತ ಮಾರುಕಟ್ಟೆ ನಮಗೆ ಬೇಕಿದೆಯೇ…?
ಯಾವ ರಾಜಕೀಯ ಪಕ್ಷಕ್ಕೂ ಜಾಗತೀಕರಣಕ್ಕೆ ಪರ್ಯಾಯವಾದ ಆರ್ಥಿಕ ಯೋಜನೆ ಇಲ್ಲ. ಕಾಂಗ್ರೆಸ್ ಸ್ವಾಗತಿಸಿ ಒಂದಷ್ಟು ಜಾರಿಗೆ ತಂದಿತು.ಈಗ ಬಿ ಜೆ ಪಿ ಸರ್ಕಾರ ತೀವ್ರ ಸ್ವರೂಪದಲ್ಲಿ ಜಾರಿಗೆ ತರುತ್ತಿದ್ದು ಇದು ಅಪಾಯಕಾರಿ ನಡೆಯಾಗಿದೆ ಎಂದರು.
ಶಿಕ್ಷಣ ಹಾಗು ಆಂದೋಲನ ಬೇರೆ ಬೇರೆ ಮಾಡಿರೋದು ಹುನ್ನಾರ : ಸಿ. ಸುರೇಶ್ , ಪ್ರಾದ್ಯಾಪಕರು
ನಾವೀಗ ಕದನದ ಕಣದಲ್ಲಿ ಇದ್ದೇವೆ ಎಂಬುದು ಐತಿಹಾಸಿಕ ಸತ್ಯ. ನಾವು ಒಳ್ಳೆಯ ದಿನಗಳನ್ನು ನೋಡಬೇಕು ಎಂಬುದನ್ನು ಕದನದ ಮೂಲಕವೇ ತಂದುಕೊಂಡಿದ್ದೇವೆ ಎಂಬುದನ್ನು ನಮ್ಮ ಮಾನವ ಸಮಾಜಶಾಸ್ತ್ರ ನಿರೂಪಿಸುತ್ತಾ ಬಂದಿದೆ ಎಂದು ಪ್ರಾದ್ಯಾಪಕ ಸಿ.ಸುರೇಶ್ ಅಭಿಪ್ರಾಯ ಪಟ್ಟರು.
ಕದನದ ಒಂದು ಭಾಗವಾಗುತ್ತಾ ಒಂದು ವೈಭವಕ್ಕೆ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಜಾಗೃತರಾಗಿರಬೇಕು. ಈ ಸಮಾಜದಲ್ಲಿ ನಮ್ಮ ಪಾಲುದಾರಿಕೆ ಏನು ಎಂಬುದನ್ನು ಅರಿತುಕೊಳ್ಳಬೇಕಿದೆ. ಈ ಹಿಂದೆ ನಾವು ಏನನ್ನು ಪಡೆದುಕೊಂಡಿದ್ದೇವೆ ಅದೆಲ್ಲವೂ ಕದನದ ಮೂಲಕವೇ ಪಡೆದುಕೊಂಡಿದ್ದೇವೆ. ಅಂಬೇಡ್ಕರ್ ಸಂವಿಧಾನದ ರಚನೆಯ ಸಮಯದಲ್ಲಿ ಕೂಡ ಸಾಕಷ್ಟು ಹೋರಾಟ ಮಾಡಬೇಕಾಗಿ ಬಂದಿತ್ತು. ಅದೇ ಹೋರಾಟದ ಎಚ್ಚರವನ್ನು ನಾವು ಯಾವತ್ತಿಗೂ ಕಾಪಿಟ್ಟುಕೊಂಡು ಬರಬೇಕಾಗಿದೆ.
ಇದನ್ನೂ ಓದಿ : ರೈತರ ಹೋರಾಟದ ಬಗ್ಗೆ ಬರಹಗಾರರು ಮೌನ ಮುರಿಯಬೇಕಿದೆ – ಬಿಳಿಮಲೆ
ಹೆಚ್ ಆರ್.ನವೀನ್ ಕುಮಾರ್ ದೆಹಲಿಯ ರೈತ ಹೋರಾಟದ ಪ್ರತ್ಯಕ್ಷ ದರ್ಶಿಯಾಗಿ ಕದನಕಣ ಪುಸ್ತಕ ನಮ್ಮ ಮುಂದಿದೆ. ಈ ದೇಶದ ನಾಗರಿಕ ಮೂಲಭೂತ ಸೌಕರ್ಯಕಗಳನ್ನು ಕೇಳುತ್ತಿದ್ದಾನೆ. ಅದನ್ನು ಕೊಡಲಾಗದ ಹಠಮಾರಿ ಸ್ವಭಾವ ಹೊಂದಿರುವ ವ್ಯವಸ್ಥೆ ಬಹಳ ಅಪಾಯಕಾರಿಯಾದುದು.
ಜಾತಿ, ಧರ್ಮ,ವರ್ಗ ಸಂಘರ್ಷದ ಮೂಲ ಸಮಸ್ಯೆಗಳನ್ನು ಮರೆಮಾಚುವ ಸಲುವಾಗಿ ಕೋಮುವಾದವನ್ನು ಮುಂದು ಮಾಡಿ ದ್ವೇಷ ಬಿತ್ತಲಾಗುತ್ತದೆ. ಈ ಹಿನ್ನೆಲೆಯಲ್ಲಿ “ಕದನಕಣ” ಆಂದೋಲನ ಕಥನವಾಗಿದೆ. ಮೇಲ್ನೋಟಕ್ಕೆ ಪ್ರವಾಸಕಥನದಂತೆ ಕಂಡರೂ ಇದೊಂದು ಆಂದೋಲನ ಕಥನವಾಗಿದೆ. ನವೀನ್ ಕುಮಾರ್ ದೆಹಲಿಗೆ ಹೊರಡು ಮುಂದಿನಿಂದ ಹಿಡಿದು ವಾಪಾಸು ಬಂದು ಪುಸ್ತಕ ತರುವ ತನಕ ಬಹಳ ಎಚ್ಚರದ ಸ್ಥಿತಿಯಲ್ಲಿ ಇದ್ದರು. ಹಾಗಾಗಿಯೇ ಕದನಕಣ ಒಂದು ಮಹತ್ವದ ಪುಸ್ತಕವಾಗುವ ನಿಟ್ಟಿನಲ್ಲಿದೆ. ದೆಹಲಿಯ ಬೌಗೋಳಿಕ ಪರಿಚಯ ಕಣ್ಣಿಗೆ ಕಟ್ಟುವಂತಿದೆ. ಅಷ್ಟು ಚೆನ್ನಾಗಿ ಪುಸ್ತಕದಲ್ಲಿ ವಿವರಿಸುತ್ತಾ ಹೋಗುತ್ತಾರೆ. ಹೋರಾಟ ದೆಹಲಿಯನ್ನು ಸೇರುವ ಐದು ದಾರಿಗಳಲ್ಲಿ ಇರುವ ರೈತರ ಸ್ಥಿತಿಗಳ ಬಗ್ಗೆ ಹೇಳುತ್ತಾ ಹೋಗುತ್ತಾರೆ.
ರೈತರ ಸಮಸ್ಯೆಗಳ ಬಗ್ಗೆ ನಮ್ಮ ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಮಾತನಾಡಿದವರು ಜ್ಯೋತಿ ಬಾ ಪುಲೆ. ಅವರ “ಗುಲಾಮಗಿರಿ” ಎಂಬ ಪುಸ್ತಕ ಹಾಗು ಮತ್ತೊಂದು ರೈತನ ಚಾವಟಿ ಎಂಬ ಹೆಸರಿನ ಮರಾಠಿ ಪುಸ್ತಕದಲ್ಲಿ ರೈತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿರುವುದನ್ನು ನೋಡಿದ್ದೇವೆ.ಈ ಹೋರಾಟದ ಮೂಲ ಹಿನ್ನಲೆ ಪೂರ್ಣ ಅರ್ಥದಲ್ಲಿ ಜಾತಿ ಮತ್ತು ವರ್ಗ ಸಂಘರ್ಷದ ಪ್ರತಿಫಲದ ನಿಜದ ನಕರಾತ್ಮಕ ಫಲವನ್ನು ವಿರೋಧಿಸುವುದೇ ಆಗಿದೆ. ಆ ಕಾಲದಲ್ಲೇ ಮಾದ್ಯಮಗಳು ಅಂಬೇಡ್ಕರ್ ಅವರನ್ನು ಇಂಗ್ಲೀಷರ ಏಜೆಂಟ್ ಎಂದು ಬಿಂಬಿಸಿದ್ದವು. ಈಗ ಅದರ ಮುಂದುವರೆದ ಭಾಗವಾಗಿ ಇಂದಿನ ಮಾಧ್ಯಮಗಳು ಹೆಚ್ಚು ಕ್ರೂರವಾಗಿ ನಡೆದುಕೊಳ್ಳುತ್ತಿವೆ.ದೆಹಲಿಯ ಹೋರಾಟ ಒಂದು ನಿಜಭಾರತದ ಹೋರಾಟವಾಗಿದೆ. ಅಲ್ಲಿ ಹೋರಾಟದಲ್ಲಿ ಭಾಗವಹಿಸಿದವರನ್ನು ನೋಡಿದರೆ ಅದು ನಿಜಕ್ಕು ಭಾರತವನ್ನು ಪ್ರತಿನಿಧಿಸುವಂತಹುದೇ ಆಗಿದೆ. ಅದೇ ಸಮಯದಲ್ಲಿ ಈ ಹೋರಾಟ ಕೋಮು ಸೌಹಾರ್ದತೆಗೆ ಈ ದೇಶದಲ್ಲಿ ಇರುವ ನೆಲೆಯನ್ನು ಸ್ಪಷ್ಟವಾಗಿ ತೋರಿಸಿಕೊಡುತ್ತಿದೆ.
ಪ್ರಸ್ತುತ ನಮ್ಮ ಶಿಕ್ಷಣ ವ್ಯಕ್ತಿವಾದದ ಕಡೆಗೆ ಇದೆ. ಈ ಶಿಕ್ಷಣ ಕೇವಲ ತಾಂತ್ರಿಕ ನೆಲೆಯನ್ನು ಮಾತ್ರ ಪ್ರತಿನಿಧಿಸುತ್ತಿದೆ. ಆದರೆ ಶಿಕ್ಷಣ ಎಂಬುದು ಸಮುದಾಯವನ್ನು ನಾವು ಹೇಗೆ ಕಟ್ಟಬೇಕು ಮತ್ತು ಅದೇ ಸಮುಧಾಯ ಎಲ್ಲರೂ ಬದುಕುವುದಕ್ಕೆ ಅನುಕೂಲಕರವಾಗಿರಬೇಕು. ಆದರೆ ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಇಲ್ಲ. ಇದೂವರೆಗೂ ಶಿಕ್ಷಣ ಮತ್ತು ಆಂದೋಲನ ಒಟ್ಟೊಟ್ಟಿಗೆ ಬಂದಿವೆ. ಹಾಗಾಗಿಯೇ ಹೋರಾಟ ಗೆಲ್ಲಲು ಸಾಧ್ಯವಾಗಿತ್ತು. ಈಗ ಆಂದೋಲನ ಹಾಗು ಶಿಕ್ಷಣವನ್ನು ಬೇರೆ ಬೇರೆ ಮಾಡುತ್ತಾ ಬಂದಿದೆ. ಅದರ ಫಲವಾಗಿ ಶಿಕ್ಷಣ ಪಡೆದವನು ಆಂದೋಲನದ ಒಂದು ಭಾಗವಾಗುತ್ತಿಲ್ಲ. ಆಂದೋಲನದ ಜತೆಗೆ ಶಿಕ್ಷಣ ಬೇಕು ಎಂದರೆ ಈಗಿನ ವಿಧ್ಯಾರ್ಥಿಗಳು ದೆಹಲಿಯಲ್ಲಿ ನಡೆಯುತ್ತಿರುವ ಆಂದೋಲನವನ್ನು ಗಂಭೀರವಾಗಿ ನೋಡಬೇಕಿದೆ.
ದೆಹಲಿಗೆ ಹೋಗಲಾಗದಿದ್ದರೂ ಈ “ಕದನಕಣ” ಪುಸ್ತಕದ ಮೂಲಕ ಆಂದೋಲನವನ್ನು ಪರಿಚಯ ಮಾಡಿಕೊಳ್ಳಬೇಕಾಗಿದೆ. ಈಗಿನ ಶಿಕ್ಷಣ ನಿಜವಾದ ವ್ಯವಸ್ಥೆಯಿಂದ ಬಹಳ ದೂರವಿದ್ದೇವೆ ಎಂದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಮಾಧ್ಯಮಗಳು ನಮ್ಮ ದೇಶದಲ್ಲಿ ಅಪಾಯಕಾರಿಯಾಗಿದೆ : ಕೆ.ಎಸ್. ರವಿಕುಮಾರ್. ಚಿಂತಕರು
ಚಳವಳಿಗಳು ಚಳವಳಿಗಾರರ ಕಾರಣಕ್ಕೆ ವಿಶ್ವಾಸ ಕಳೆದುಕೊಂಡು ನಾಶದ ಕಡೆಗಿದ್ದೇವೆ. ಈ ಕಾಲದ ವಿಧ್ಯಾವಂತರ ಮಾನಸಿಕ ಗುಲಾಮಗಿರಿಯನ್ನು ನೋಡಿದರೆ ನರಮೇದ ಮಾಡಿದ ವ್ಯಕ್ತಿಗಿಂತ ನಮ್ಮ ಜತೆ ಇರುವ ಸ್ನೇಹಿತರ ಬಗ್ಗೆ ಬೇಸರವಾಗುತ್ತದೆ.
2002 ರಲ್ಲಿ ನಡೆದ ಗುಜರಾತ್ ನರಮೇದ ಇವತ್ತಿಗೂ ನಮ್ಮ ಸ್ಮೃತಿಪಟಲದಲ್ಲಿ ಇದೆ. ನಾನು ದೆಹಲಿಯಲ್ಲಿ ಇದ್ದಾಗ ಯಾವ ಸಮಯದಲ್ಲಿ ರೈತರ ಮೇಲೆ ದಾಳಿ ನಡೆಸಿ ನರಮೇಸ ನಡೆಸುತ್ತವೋ ಎಂಬ ಭಯವನ್ನು ಅನುಭವಿಸಿದ್ದೇನೆ. ತಾನೇ ನಿರ್ಮಿಸಿದ್ದ ರಸ್ತೆಯನ್ನು ತಾನೇ ಅಗೆದು ಹಾಳು ಮಾಡತ್ತದೆ ಎಂಬ ಸರ್ಕಾರದ ಕೆಲಸವನ್ನು ಜನರು ಹೇಗೆ ತೆಗದೆಕೊಳ್ಳಬೇಕು…? ಸರ್ಕಾರವೇ ನಿಂತು ಸಾರ್ವಜನಿಕ ಸ್ವತ್ತನ್ನು ಹಾಳು ಮಾಡುವುದನ್ನು ಜನ ಹಾಗು ಮಾಧ್ಯಮಗಳು ಹೇಗೆ ತೆಗೆದುಕೊಳ್ಳಬೇಕು..?
ಇಡೀ ಇತಿಹಾಸಲ್ಲಿ ಪ್ರತಿಭಟನೆಯ ವಿರುದ್ಧವಾಗಿ ರಸ್ತೆ ಅಗೆಯುವ, ರಸ್ತೆಗೆ ಮುಳ್ಳು ಹಾಕುವ ಹಿಂಸಾತ್ಮಕ ಕ್ರಮವನ್ನು ಎಂತಹಾ ಕೆಟ್ಟ ಸರ್ಕಾರ ಕೂಡ ತೆಗೆದುಕೊಂಡಿರಲಿಲ್ಲ. ಅದನ್ನ ಈಗ ಯಾವ ಮಾಧ್ಯಮ ಕೂಡ ಪ್ರಶ್ನೆ ಮಾಡುತ್ತಿಲ್ಲ.
ವಿದೇಶಿ ಪತ್ರಿಕೆಗಳು ನಮ್ಮ ದೇಶವನ್ನು ಪ್ರತಿನಿಧಿಸುತ್ತಿವೆ. ಆದರೆ ನಮ್ಮ ದೇಶದ ಮಾಧ್ಯಮಗಳು ನಮ್ಮ ದೇಶವನ್ನು ಪ್ರತಿನಿಧಿಸದೇ ಆಳುವ ವರ್ಗದ ಗುಲಾಮರಂತೆ ವರ್ತಿಸುತ್ತವೆ.
ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಇಡೀ ಪ್ರಪಂಚ ಅದರ ವಿರುದ್ಧ ಹೋರಾಡುತ್ತಿರುವಾಗ ಭಾರತ ಮಾತ್ರ ಕಾಯ್ದೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಗಂಭೀರವಾಗಿದೆ. ಈ ರೀತಿಯ ಕೆಲಸ ಮಾಡುವ ಪ್ರಪಂಚದ ಏಕೈಕ ದೇಶವಾಗಿದೆ ಎಂದರು.
ಕಾರ್ಯಕ್ರಮವನ್ನು ಪೃಥ್ವಿ ನಿರೂಪಿಸಿದರು. ಕುಮಾರ್ ಕಟ್ಟೆಬೆಳಗುಲಿ ಹಾಗು ವಾಸು ಅವರು ಪರಿಣಾಮಕಾರಿಯಾಗಿ ಹಾಡುಗಳನ್ನಾಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮೇಶ್ ವಹಿಸಿದ್ದರು. ಕದನಕಣ ಪುಸ್ತಕದ ರೂವಾರಿ ಹೆಚ್.ಆರ್ ನವೀನ್ ಕುಮಾರ್ ತಮ್ಮ ಅನುಭವಗಳನ್ನು ಹಂಚಿಕೊಂಡರು.
ವರದಿ : – ಚಲಂ ಹಾಡ್ಲಹಳ್ಳಿ