ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ 65 ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟವನ್ನು ಹತ್ತಿಕ್ಕಲು ಗಲಭೆಯನ್ನು ನೆಪ ಮಾಡಿಕೊಳ್ಳುತ್ತಿದೆ ಕೇಂದ್ರ ಸರಕಾರ, ಯೋಗಿ ಆದೇಶಕ್ಕೆ ಡೋಂಟ್ ಕೇರ್ ಎನ್ನದ ಅನ್ನದಾತನ ಹೋರಾಟ ಬಲಗೊಳ್ಳುತ್ತಿದೆ.
ಜನವರಿ 26 ರಂದು ಕೆಂಪುಕೋಟೆ ಬಳಿ ರೈತರ ಮೇಲೆ ಹಿಂಸಾಚಾರ ನಡೆಸಿದ ಬೆನ್ನಲ್ಲೇ ಉತ್ತರ ಪ್ರದೇಶ ಸರಕಾರವು ಗುರುವಾರ ರಾತ್ರಿ ಘಾಜಿಪುರ ಗಡಿಯಿಂದ ಪ್ರತಿಭಟನ ನಿರತ ರೈತರನ್ನು ತೆರವುಗೊಳಿಸುವಂತೆ ಸೂಚನೆ ನೀಡಿದೆ. ಹೀಗಾಗಿ ಅಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಪೊಲೀಸರು ಜಮಾವಣೆಯಾಗಿದ್ದಾರೆ. ಉತ್ತರ ಪ್ರದೇಶ ಸರಕಾರ ಕಠಿಣ ನಿಲುವು ತಾಳಿದ್ದು, ರೈತರನ್ನು ಗುರುವಾರ ರಾತ್ರಿಯೇ ತೆರವು ಮಾಡಲು ಮುಂದಾಗಿದೆ.
ಐಪಿಸಿ ಸೆಕ್ಷನ್ 133ರ ಪ್ರಕಾರ ರೈತರಿಗೆ ನೋಟಿಸ್ ನೀಡಲಾಗಿದೆ. ಪ್ರತಿಭಟನೆ ಜಾಗದಲ್ಲಿ ನೀರು ಮತ್ತು ವಿದ್ಯುತ್ ಸರಬರಾಜು ಕಡಿತ ಮಾಡಲಾಗಿದೆ. ಇದನ್ನು ಪ್ರಶ್ನಿಸಿದ ರೈತರ ಮೇಲೆ ಮನಬಂದಂತೆ ಪೊಲೀಸರು ಥಳಿಸಿದ್ದಾರೆ. ಟೆಂಟ್ ಖಾಲಿ ಮಾಡುವಂತೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಇದ್ಯಾವುದಕ್ಕೂ ಜಗ್ಗದೆ ಯೋಗಿ ಆದೇಶಕ್ಕೆ ರೈತರು ಕ್ಯಾರೆ ಅನ್ನಲಿಲ್ಲ. ಕೃಷಿಕಾಯ್ದೆ ರದ್ದಾಗುವವರೆಗೂ ನಾವು ಇಲ್ಲಿಂದ ಹೋಗೊದಿಲ್ಲ ಎಂದು ರೈತರು ಪಟ್ಟು ಹಿಡಿದಾಗ ಪೊಲೀಸರು ಸುಮ್ಮನಾಗಬೇಕಾಯಿತು.
ರೈತರ ಹೋರಾಟಕ್ಕೆ ಹಿನ್ನಡೆಯಾಗುತ್ತಿದೆ, ಬಿರುಕು ಬಿಟ್ಟಿದೆ ಎಂಬುದಾಗಿ ಮೋದಿ ಕೃಪಾಪೋಷಿತ ಮಾಧ್ಯಮಗಳು ಸುದ್ಧಿಯನ್ನು ಬಿತ್ತರಿಸುತ್ತಿವೆ. ಆದರೆ ವಾಸ್ತವ ಏನೆಂದರೆ ರೈತರ ಹೋರಾಟ ಬಲಗೊಳ್ಳುತ್ತಿದೆ. ಹೋರಾಟ ತೀವ್ರಗೊಳ್ಳುತ್ತಿದ್ದು ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದೆ. ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನದ ರೈತರು ಹೋರಾಟದ ಗಡಿ ಭಾಗಕ್ಕೆ ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಬಿ.ಕೆ.ಯು ಮುಖಂಡ ರಾಕೇಶ್ ಟಿಕಾಯತ್ ಪ್ರತಿಕ್ರೀಯೆ ನೀಡಿದ್ದು, ಪೊಲೀಸ್ ಏಟುಗಳು ನಮ್ಮನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ. ಕಾಯ್ದೆ ರದ್ದಾಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಪೊಲೀಸರು ಗುಂಡು ಹಾಕಿದರು ನಾವು ಕದಲುವುದಿಲ್ಲ. ಸಾಮೂಹಿಕವಾಗಿ ಪೊಲೀಸರು ನಮ್ಮ ಮೇಲೆ ದಾಳಿ ನಡೆಸಲಿ ಚಿಂತೆ ಇಲ್ಲ. ದೇಶದ ಜನ, ರೈತರು ನಮ್ಮೊಟ್ಟಿಗಿದ್ದಾರೆ. ಕಾಯ್ದೆ ರದ್ದು ಮಾಡಿ ಎಂಬ ನಮ್ಮ ಶಾಂತಿಯುತ ಹೋರಾಟವನ್ನು ಮುಂದುವರೆಸುವುದಾಗಿ ರೈತ ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ.
ಸುಂಪ್ರೀಕೋರ್ಟ್ ನ ಹಿರಿಯ ವಕೀಲರಾದ ಬಾನು ಪ್ರತಾಪ್ ಸಿಂಹಾರವರು ಹಿಂಸಾಚಾರದ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಪೊಲೀಸರು ಮತ್ತು ಸರಕಾರ ಟ್ರ್ಯಾಕ್ಟರ್ ಪರೇಡ್ ಗೆ ಅನುಮತಿ ನೀಡಿತ್ತು. ಡಿವೈಡರ್ ಗಳನ್ನು ತೆಗೆಯುವುದಾಗಿ ಹೇಳಿತ್ತು, ಆದರೆ ಟ್ರ್ಯಾಕ್ಟರ್ ಗಳು ಬರದಂತೆ ಸಂಚು ರೂಪಿಸಿದ್ದು, ರೈತರ ಮೇಲೆ ದಾಳಿ ನಡೆಸಿದ್ದರಿಂದ ಮಾರ್ಗದ ದಾರಿಯನ್ನು ಬದಲಾಯಿಸಬೇಕಾಯಿತು. ಈ ಹಿಂಸಾಚಾರಕ್ಕೆ, ಸರಕಾರ ಮತ್ತು ಪೊಲೀಸರ ಕಾರಣ ಆಗಿದ್ದಾರೆ.
ಪ್ರಧಾನಿ ಮೋದಿಯವರ ದಿನಗಳು ಬೆರಳಣಿಕೆಯಷ್ಟು ಮಾತ್ರ ಇವೆ. ಅವರ ಬಳಿ ಇದ್ದ ಎಲ್ಲಾ ಅಸ್ತ್ರಗಳು ಮುಗಿದು ಹೋಗಿವೆ. ಈ ಹಿಂಸೆ ಇಂದಲ್ಲ ನಾಳೆ ನಿಲ್ಲುತ್ತದೆ, ನಾಡಿದ್ದಾದರೂ ನಿಲ್ಲುತ್ತದೆ, ಒಂದು ದಿನ ನಿಂತು ಹೋಗುತ್ತದೆ. ರೈತರು ಆಗ ಗೆಲ್ಲುತ್ತಾರೆ ಎಂದು ಬಾನು ಪ್ರತಾಪ್ ಸಿಂಹ ಅಭಿಪ್ರಯಾಯ ವ್ಯಕ್ತಪಡಿಸಿದ್ದಾರೆ.
ಗಣತಂತ್ರ ದಿನದಂದು ದಿಲ್ಲಿಯಲ್ಲಿ ನಡೆದಿರುವ ಘಟನೆಗಳು ಬಿಜೆಪಿ ಸರಕಾರ ಮತ್ತು ದಿಲ್ಲಿ ಪೋಲಿಸ್ ಛಿದ್ರಕಾರಿಗಳಿಗೆ ಪ್ರಚೋದನೆ ನೀಡುವಲ್ಲಿ ಶಾಮೀಲಾಗಿರುವುದರತ್ತ ಸ್ಪಷ್ಟವಾಗಿ ಬೊಟ್ಟು ಮಾಡಿ ತೋರಿಸುತ್ತವೆ ಎಂದು ಅಖಿಲ ಭಾರತ ಕಿಸಾನ್ ಸಭಾ ಹೇಳಿದೆ. ಬಿಜೆಪಿ ಸರಕಾರ ಮತ್ತು ದಿಲ್ಲಿ ಪೋಲಿಸ್ ರಿಗೆ ಎಐಕೆಎಸ್ ಏಳು ಪ್ರಶ್ನೆಗಳನ್ನು ಕೇಳಿದ್ದು, ಆ ಪ್ರಶ್ನೆಗಳಿಗೆ ಉತ್ತರಿಸುವಂತೆ ಆಗ್ರಹ ಪಡಿಸಲಾಗಿದೆ.
- ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿರದ ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿ (ಕೆ.ಎಂ.ಎಸ್.ಸಿ.) ಗೆ ಪ್ರತ್ಯೇಕವಾಗಿ ಅನುಮತಿ ನೀಡಿದ್ದೇಕೆ? ಸಂಯುಕ್ತ ಕಿಸಾನ್ ಮೋರ್ಚಾ ಅಣಿನೆರೆಸಿದ ರೈತರ ಸುತ್ತ ಭಾರೀ ಬ್ಯಾರಿಕೇಡ್‌ಗಳನ್ನು ಹಾಕಿರುವಾಗ ಕೆಎಂಎಸ್‌ಸಿ ಸುತ್ತ ಬ್ಯಾರಿಕೇಡ್‌ಗಳು ಇರಲಿಲ್ಲ ಏಕೆ? ಕೆಎಂಎಸ್‌ಸಿಯೊಂದಿಗೆ ಬಿಜೆಪಿ ಸರಕಾರ ಮತ್ತು ದಿಲ್ಲಿ ಪೋಲಿಸ್ ಸಂಬಂಧವೇನು?
- 2. ಪೋಲೀಸರು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡತ್ವದೊಂದಿಗೆ ಒಪ್ಪಿಕೊಂಡಿದ್ದ ಮಾರ್ಗದ ಬದಲಾಗಿ ಕೆ.ಎಂ.ಎಸ್.ಸಿ.ಗೆ ಬೇರೆ ದಾರಿಯಲ್ಲಿ ಕೆಂಪುಕೋಟೆಯ ವರೆಗೆ ಹೋಗಲು ಬಿಟ್ಟಿದ್ದೇಕೆ?
- ಕೆಂಪು ಕೋಟೆಯಲ್ಲಿ ಬಾವುಟ ಹಾರಿಸಿದ ದೀಪ್ ಸಿಧು ಮತ್ತು ಇತರರೊಂದಿಗೆ ಪ್ರಧಾನ ಮಂತ್ರಿ ಮೋದಿ ಮತ್ತು ಬಿಜೆಪಿಯ ಸಂಬಂಧಗಳೇನು? ಅವರನ್ನು ಇನ್ನೂ ಏಕೆ ಬಂಧಿಸಿಲ್ಲ?
- ಕೆಂಪುಕೋಟೆಯಲ್ಲಿ ದಾಂಧಲೆ ನಡೆಸಿದ ಅಮ್ರೀಕ್ ಮಿಕಿ ಮತ್ತು ಬಿಜೆಪಿ ಹಾಗು ಅದರ ಸಂಸದ್ ಸದಸ್ಯರಾದ ಪರ್ವೆಶ್ ಸಾಹಿಬ್ ಸಿಂಗ್ ವರ್ಮ ಮತ್ತು ಮನೋಜ್ ತಿವಾರಿ ನಡುವಿನ ಸಂಬಂಧವೇನು?
- ಪಲ್ವಲ್ ನಿಂದ ಹೊರಟ ಪರೇಡ್‌ಗೆ 45 ಕಿ.ಮೀ.ವರೆಗಿನ ಮಾರ್ಗವನ್ನು ಒಪ್ಪಿದ್ದರೂ, ಅದು ಶಾಂತಿಯುತವಾಗಿ 15ಕಿ.ಮೀ. ದಾಟಿದ ಮೇಲೆ ಸಿಕ್ರಿಯಲ್ಲಿ ಯಾವ ಪ್ರಚೋದನೆಯೂ ಇಲ್ಲದೆ ಅದರ ಮೇಲೆ ಅಮಾನುಷ ಲಾಠೀ ಪ್ರಹಾರ ಮಾಡಿದ್ದೇಕೆ? ಇಬ್ಬರು ಯುವಜನ ಸೇರಿದಂತೆ ಹಲವರನ್ನು ಗಾಯಗೊಳಿಸಿದ್ದೇಕೆ? ಸ್ವತಃ ಎಸ್.ಪಿ.ಯೇ 5-6 ಟ್ರಾಕ್ಟರುಗಳ ಟಯರುಗಳ ಗಾಳಿ ತೆಗೆಯಲು ಪ್ರಯತ್ನಿಸಿದ್ದೇಕೆ? ಪೋಲಿಸರ ಬಳಿಯಿಂದಲೇ ಕೆಲವರು ಪ್ರತಿಭಟನಾಕಾರರ ಮೇಲೆ ಕಲ್ಲು ತೂರುತ್ತಿದ್ದಾಗ ಪೋಲಿಸರು ಸುಮ್ಮನಿದ್ದುದೇಕೆ?
- ಪಲ್ವಲ್ ನಲ್ಲಿ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಅಮಾನಷ ಲಾಠೀ ಪ್ರಹಾರ ಮಾಡಿದ ಪೋಲೀಸರು ಕೆಂಪುಕೋಟೆಯತ್ತ ಹೊರಟ ಗುಂಪನ್ನು ತಡೆಯಲು ಪ್ರಯತ್ನಿಸಲಿಲ್ಲ ಏಕೆ?
- ರೈತರ ಮುಖಂಡರ ಮೇಲೆ ಗುಂಡು ಹಾರಿಸಲೆಂದೇ ಬಂದ ಸಮಾಜ ಘಾತುಕ ವ್ಯಕ್ತಿಗಳನ್ನು ಪೋಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಜನವರಿ 26ರಂದು ಕೂಡ ಪ್ರಚೋದಕ ಏಜೆಂಟರನ್ನು ಹಿಡಿದು ಪೋಲೀಸರಿಗೆ ಒಪ್ಪಿಸಿದ ಹಲವು ಉದಾಹರಣೆಗಳಿವೆ. ಇವರಲ್ಲಿ ಕೆಲವರಂತೂ ತಮ್ಮನ್ನು ಪೋಲೀಸರೇ ಕಳಿಸಿದರು ಎಂದಿದ್ದರು. ಅವರ ಮೇಲೆ ಪೋಲಿಸ್ ಕೈಗೊಂಡಿರುವ ಕ್ರಮಗಳೇನು?
ಈ ಘಟನೆಗಳ ಹಿಂದಿರುವ ಸತ್ಯವನ್ನು ತಿಳಿಯಲು ಒಂದು ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕು ಎಂದು ಎಐಕೆಎಸ್ ಆಗ್ರಹಿಸಿದೆ. ರೈತಮುಖಂಡರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಬಂಧಿಸಿದರೆ ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತದೆ ಎಂದು ಅದು ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ನೀಡಿದೆ.
ದೆಹೆಲಿಯಲ್ಲಿ ರೈತರ ಮೇಲೆ ಪೊಲೀಸರು ನಡೆಸುತ್ತಿರುವ ಹಿಂಸಾಚಾರ ಹಾಗೂ ಮುಂದಿನ ಹೋರಾಟದ ಕುರಿತಾಗಿ ಅಖಿಲ ಭಾರತ ಕಿಸಾನ ಸಂಘರ್ಷ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕರಾದ ಜಿ.ಸಿ ಬಯ್ಯಾರೆಡ್ಡಿಯವರು ಪ್ರತಿಕ್ರೀಯೆ ನೀಡಿದ್ದಾರೆ.
ಮಹಾತ್ಮ ಗಾಂಧಿ ಹುತಾತ್ಮ ದಿನದ ಭಾಗವಾಗಿ ಶುಕ್ರವಾರ ರೈತರು ದೇಶಾಧ್ಯಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ, ರೈತರ ಈ ಸತ್ಯಾಗ್ರಹಕ್ಕೆ ಜನಪರ ಸಂಘಟನೆಗಳು ಕೈ ಜೋಡಿಸುತ್ತಿವೆ. ಒಟ್ಟಾರೆ ಕೃಷಿಕಾಯ್ದೆ ವಿರುದ್ಧ ರೈತರ ಹೋರಾಟ ಬಲಗೊಳ್ಳುತ್ತಿದೆ. ಇದೇ ವೇಳೆ ಬಜೆಟ್ ಅಧಿವೇಶನವೂ ಆರಂಭವಾಗಿದೆ. ರೈತರ ಹೋರಾಟವನ್ನು ಬೆಂಬಲಿಸಿರುವ ವಿಪಕ್ಷಗಳು ಅಧಿವೇಶನದಲ್ಲಿ ಕಾಯ್ದೆ ರದ್ದತಿಗೆ ಪಟ್ಟು ಹಿಡಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬೆಳಗ್ಗೆ ರಾಷ್ಪ್ರಪತಿಗಳ ಭಾಷಣವನ್ನು ವಿಪಕ್ಷಗಳು ಬಹಿಷ್ಕಾರ ಮಾಡಿದ್ದವು. ಕೇಂದ್ರ ಸರಕಾರ ಇನ್ನಾದರೂ ರೈತರ ಬೇಡಿಕೆ ಮಣಿದು ಕಾಯ್ದೆಯನ್ನು ರದ್ದು ಮಾಡಲು ಮುಂದಾಗಬೇಕಿದೆ.