ರೈತ ನಾಯಕ ಎಚ್.ಆರ್. ನವೀನ್ ಕುಮಾರ್ ದೆಹಲಿ ರೈತ ಚಳುವಳಿ ಅನುಭವ ಹಂಚಿಕೊಂಡಿದ್ದಾರೆ
ನಾವು ದೆಹಲಿಗೆ ಹೋದ ಮೊದಲ ದಿನವೇ ಸಿಂಗು ಗಡಿಗೆ ಹೋಗಿದ್ದೆವು ಆದರೆ ಅಂದು ನಾವು ಹೋಗುವುದರೊಳಗಾಗಿಯೇ ತಡವಾಗಿದ್ದರಿಂದ ಹೆಚ್ಚಿನ ಸಮಯ ಕಳೆಯಲಾಗಿರಲಿಲ್ಲ ಅದಕ್ಕಾಗಿ ಮತ್ತೊಮ್ಮೆ ಸಿಂಗು ಗಡಿಗೆ ಹೋಗಲು ನಿರ್ಧರಿಸಿದೆವು. ದೆಹಲಿಯಿಂದ ಟ್ಯಾಕ್ಸಿ ಮಾಡಿಕೊಂಡು ಹೋದೆವು ಸುಮಾರು 40 ಕಿಲೋ ಮೀಟರ್ ದೂರವಿರುವ ಕಾರಣ ಸಾಕಷ್ಟು ಟ್ರಾಫಿಕ್ ನಿಂದಾಗಿ ಈ ಗಡಿಗೆ ತಲುಪುವುದರಲ್ಲಿ ಮಧ್ಯಾನ 12.30 ಗಂಟೆಯಾಗಿತ್ತು. ಸುಮಾರು ಅರ್ದ ಕಿಲೋಮೀಟರ್ ದೂರದಲ್ಲೇ ವಾಹನವನ್ನ ತಡೆಯಲಾಗಿತ್ತು. ಇಳಿದು ಅಲ್ಲಿಂದ ಹೊರಟರೆ ನಮಗೆ ಆಶ್ಚರ್ಯ ಇದೇನಿದು ರೈತರ ಪ್ರತಿಭಟನೆಯ ಬದಲಿಗೆ ಪೋಲೀಸಿನವರ ಸಮಾವೇಶವನ್ನೇನಾದರು ಏರ್ಪಡಿಸಲಾಗಿದೆಯೇ ಎಂದು ಅನುಮಾನ ಕಾಡಲು ಶುರುವಾಯಿತು ಅಷ್ಟೊಂದು ಪೋಲೀಸಿನವರು ಸೇರಿದ್ದರು. ಅವರ ಸಮವಸ್ತ್ರಗಳನ್ನು ನೋಡಿದರೆ ಗಡಿಗಳಲ್ಲಿ ಯುದ್ದಕ್ಕೆ ಸಜ್ಜಾಗಿ ನಿಂತ ಶಸ್ತ್ರ ಸಜ್ಜಿತ ಸೈನಿಕನಂತೆ ಕಾಣುತ್ತಿತ್ತು.
ಒಂದು ಅಂದಾಜಿನ ಪ್ರಕಾರ ದೆಹಲಿಯಲ್ಲಿ 85 ಸಾವಿರ ಪೋಲೀಸಿನವರಿದ್ದಾರೆ. ಅದರಲ್ಲಿ ಸರಿಸುಮಾರು 65 ಸಾವಿರ ಪೋಲಿಸರನ್ನ ದೆಹಲಿಯ 5 ಗಡಿ ಭಾಗಗಳಲ್ಲಿ ರೈತರನ್ನು ನಿಯಂತ್ರಿಸಲು ನಿಯೋಜಿಸಲಾಗಿದೆ. ಇದೊಂದೇ ಸಾಕು ಪ್ರಭುತ್ವಕ್ಕೆ ಈ ಚಳುವಳಿ ನಡುಕ ಹುಟ್ಟಿಸಿದೆ ಎಂದು ಹೇಳಲು. ಚಳುವಳಿಯಲ್ಲಿ ರೈತರೇ ಇಲ್ಲ ಎಂದು ಹೇಳುವವರಿಗೆ ಒಂದು ಪ್ರಶ್ನೆ ಜನರಿಲ್ಲದ ಕಡೆ ಇಷ್ಟು ದೊಡ್ಡ ಪ್ರಮಾಣದ ಪೋಲೀಸ್ ನಿಯೋಜನೆ ಯಾಕೆ ಎಂದು.
ಪೋಲೀಸರ ಈ ದಂಡನ್ನ ದಾಟಿಕೊಂಡು ಪ್ರತಿಭಟನಾ ಸ್ಥಳಕ್ಕೆ ಹೋದೆವೆ. ಅಷ್ಟರಲ್ಲಿ ಅಲ್ಲಿಗೆ ಜೆ ಎನ್ ಯು ನಲ್ಲಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಪುರುಶೋತ್ತಮ ಬಿಳಿಮಲೆಯವರು ಬಂದರು. ಅವರ ಜೊತೆ ಮಾತನಾಡುತ್ತ ಹೆಜ್ಜೆಗಳನ್ನಾಕಿದೆವೆ.
ಇದನ್ನು ಓದಿ : ಮೋದಿಯವರ ಅಡ್ಡಗೋಡೆಗಳನ್ನು ದಾಟಿದ ದೇಶಪ್ರೇಮಿ ಹೋರಾಟ
ಮುಂದೆ ಹೋಗುತ್ತಿದ್ದಂತೆ ಅಲ್ಲಿ ಟೇಬಲ್ ಗಳ ಮೇಲೆ ಒಂದಷ್ಟು ಪುಸ್ತಕಗಳನ್ನು ಇಟ್ಟುಕೊಂಡು ಒಬ್ಬ ಯುವಕ ಕುಳಿತಿದ್ದ ಅದರಲ್ಲಿ “ಪುಸ್ತಕಗಳು ಮಾರಾಟಕ್ಕಿಲ್ಲ, ಕೇವಲ ಓದಲು ಮಾತ್ರ” ಎಂಬ ಬೋರ್ಡ್ ಇತ್ತು. ಅಲ್ಲಿನ ಪುಸ್ತಕಗಳನ್ನು ನೋಡುತ್ತ ಬಿಳಿಮಲೆ ಸರ್ ಆತನಿಗೆ ಒಂದು ಪ್ರಶ್ನೆ ಕೇಳಿದರು “ಚಳುವಳಿ ಪ್ರಾರಂಭವಾದಾಗ ಇದ್ದ ಹುಮ್ಮಸ್ಸು ಈಗಲೂ ಇದೆಯಾ” ಎಂದು ಅದಕ್ಕೆ ಅವನು “ಹುಮ್ಮಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಖಂಡಿತ ಕಡಿಮೆಯಾಗಿಲ್ಲ” ಎಂದ. ಅಲ್ಲೇ ಆ ಟೇಬಲ್ಲನ್ನ ಹೊರಗಿಕೊಂಡು ಕುಳಿತಿದ್ದ 84 ವರ್ಷದ ಮುದುಕನನ್ನ ಬಿಳಿಮಲೆ ಸರ್ ನಿಮ್ಮದು ಯಾವ ಊರು ಎಂದರು ಅವರು ಪಂಜಾಬಿನ ಲುದಿಯಾನ ಎಂದರು. ಮರಳಿ ಅವರು ನೀವು ಎಲ್ಲಿಂದ ಬಂದಿದ್ದೀರ ಎಂದು ಕೇಳಿದರು. ಅದಕ್ಕೆ ಇವರು ಕರ್ನಾಟಕ ಅಂದರು ಹಾಗೆ ಅಂದ ಕೂಡಲೇ ಅವರು ಮೇಲೇಳಲು ಕಷ್ಟವಾಗುತ್ತಿದ್ದತೂ ಮೇಲೆದ್ದು ಅತ್ಯಂತ ಆತ್ಮೀಯವಾಗಿ ಅಪ್ಪಿಕೊಂಡು “ನಾನು ಟ್ರಕ್ ಡ್ರೈವರ್ ಆಗಿ ಕೆಲಸ ಮಾಡುವಾಗ ಕರ್ನಾಟಕ, ತಮಿಳುನಾಡು ಸೇರಿದಂತೆ ದೇಶದೆಲ್ಲೆಡೆ ಸುತ್ತಿ ಬಂದಿದ್ದೇನೆ, ನೀವುಗಳು ಇಲ್ಲಿಗೆ ಬಂದಿರುವುದು ನನಗೆ ತುಂಬ ಸಂತೋಷವಾಗುತ್ತಿದೆ ಎಂದರು. ಬಿಳಿಮಲೆಯವರು ಈ ಹಿರಿಯರಿಗೂ ಅದೇ ಪ್ರಶ್ನೆಯನ್ನ ಮುಂದಿಟ್ಟರು “ಈ ಚಳುವಳಿಯ ಸ್ಪೂರ್ತಿ ಕಡಿಮೆಯಾಗಿದೆಯಾ” ಎಂದು ಅದಕ್ಕೆ ಅವರು ಹೇಳಿದ್ದು “ಕಡಿಮೆ ಯಾಗುವ ಮಾತೇ ಇಲ್ಲ, ದಿನದಿಂದ ದಿನಕ್ಕೆ ಈ ಚಳುವಳಿಯಲ್ಲಿ ಭಾಗವಹಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಮತ್ತು ಸ್ಪೂರ್ತಿಯೂ ಹೆಚ್ಚಾಗುತ್ತಿದೆ”. ಈ ಕಾನೂನು ವಾಪಸ್ ಆಗುವವರೆಗೆ ನಾವು ಇಲ್ಲಿಂದ ಕದಲುವುದಿಲ್ಲ ಎಂದರು. ಕೈಯಲ್ಲಿದ್ದ ಕೆಂಬಾವುಟ ಎರಡು ಬಾರಿ ಕೆಳಗೆ ಬಿದ್ದರೆ ಅದನ್ನ ಎತ್ತಿ ಜೋಪಾನ ಮಾಡಿ ಇಟ್ಟುಕೊಳ್ಳುತ್ತಿದ್ದರು.
ಒಮ್ಮೆ ಬಿಳಿಮಲೆಯರುರು ಭಾವುಟವನ್ನು ಎತ್ತಿಕೊಟ್ಟರು. ಮಾತನ್ನ ಮುಂದುವರೆಸಿದ ಬಿಳಿಮಲೆಯವರು 80 ರ ದಶಕದಲ್ಲಿ ಅವರು ಟ್ರಕ್ ನ ಡ್ರೈವರ್ ಗಳಾಗಿದ್ದ ಸರ್ದಾರ್ಜಿಗಳ ಜೊತೆ ನಡೆಸಿದ ಮಾತುಕತೆಗಳ ಬಗ್ಗೆ ಹೇಳಿದರು ಮತ್ತು ಜೊತೆಗೆ ಮತ್ತೊಂದು ಪ್ರಶ್ನೆಯನ್ನೂ ಮುಂದಿಟ್ಟರು ನೀವುಗಳೆಲ್ಲ ಇಲ್ಲೇ ಇದ್ದರೆ ಊರುಗಳಲ್ಲಿ ಕೃಷಿ ಕೆಲಸವನ್ನು ಮಾಡುವವರು ಯಾರು ಎಂದದ್ದಕ್ಕೆ “ಊರಿನಲ್ಲಿ ಮಗ ಇದ್ದಾನೆ ಅವನು ಕೃಷಿ ಕೆಲಸವನ್ನು ನೋಡಿಕೊಳ್ಳುತ್ತಾನೆ. ಇಲ್ಲಿರುವವರು ಸರದಿಯಂತೆ ಗುಂಪು ಗುಂಪಾಗಿ ಬರುವುದು, ಸ್ವಲ್ಪ ದಿನಗಳು ಹೋರಾಟದಲ್ಲಿ ಭಾಗವಹಿಸಿ ನಂತರ ಊರಿಗೆ ವಾಪಸ್ ಹೋಗುತ್ತಾರೆ. ಹಾಗು ಇನ್ನೊಂದು ಗುಂಪು ಬರುತ್ತದೆ. ಇಷ್ಟೆಲ್ಲ ಆದರೂ ಇಲ್ಲಿ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ ಎಂದರು. ಜನರು ಚಳುವಳಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಅಪಪ್ರಚಾರ ಮಾಡುವವರಿಗೆ ಇವರ ಮಾತು ಸರಿಯಾದ ಉತ್ತರ ಎಂದೆನಿಸಿತು.
ಹಾಗೆ ಮುಂದೆ ಹೋಗುತ್ತಿದ್ದೆವು ಅಲ್ಲಿ ಒಂದು ಕಡೆ ಒಬ್ಬ ವ್ಯಕ್ತಿ ಕೈಗೆ ಮತ್ತು ಕಾಲಿಗೆ ಸರಪಳಿ ಗಳಿಂದ ಬಂಧಿಸಿಕೊಂಡು ಪಕ್ಕದಲ್ಲಿ ಒಂದು ಫ್ಲಕಾರ್ಡ್ ಇಟ್ಟುಕೊಂಡಿದ್ದರು ಅದರಲ್ಲಿ ಸರ್ಕಾರ ಕೃಷಿ ಕನೂನುಗಳೆಂಬ ಸರಪಳಿಗಳಿಂದ ಬಂದಿಸಿದೆ ಎಂದಿತ್ತು ಅದನ್ನ ಫೋಟೋ ತೆಗೆಯಲೆಂದು ನಾನು ಅಲ್ಲೇ ನಿಂತುಕೊಂಡೆ ಬಿಳಿಮಲೆ ಸರ್ ಮತ್ತು ಜಗದೀಶ್ ಮುಂದೆ ಹೋದರು ಆದರೆ ನಾನು ಅಲ್ಲಿ ಒಂದು ನಿಮಿಷಕ್ಕೂ ಹೆಚ್ಚು ಸಮಯ ನಿಲ್ಲಲು ಸಾಧ್ಯವಾಗಲೇ ಇಲ್ಲ. ಯಾಕೆಂದರೆ ಹಿಂದಿನಿಂದ ಮುಂದಿನಿಂದ ಆ ರಸ್ತೆಯಲ್ಲಿ ಅಷ್ಟೊಂದು ಜನ ಆಚಿಂದೀಚೆಗೆ ಈಚಿಂದಾಚೆಗೆ ಹೋಡಾಡುತ್ತಿದ್ದರು ಇದು ಒಂದು ರೀತಿ ರೈತ ಚಳುವಳಿಯ ಉತ್ಸವದಂತಿತ್ತು.
ಬಿಳಿಮಲೆ ಸರ್ ಜೊತೆಮಾತುಗಳನ್ನು ಮುಂದುವರೆಸುತ್ತಾ ಹೋರಾಟದ ಕಣದಲ್ಲಿ ಹೆಜ್ಜೆಹಾಕುತ್ತಾ ಸಾಗಿದೆವು. ದೆಹಲಿಯ ನಿವಾಸಿಯಾಗಿರುವ ಬಿಳಿಮಲೆಯವರು ಈ ಚಳುವಳಿ ಪ್ರಾರಂಬವಾದಾಗಿನಿಂದ ವಿವಿಧ ಗಡಿಗಳಿಗೆ ಹಲವು ಬಾರಿ ಬಂದು ಭೇಟಿ ಕೊಟ್ಟು ಇಲ್ಲಿಯ ರೈತರೊಂದಿಗೆ ನೇರವಾಗಿ ಮಾತನಾಡಿದ್ದಾರೆ. ನಾನು ಅವರಿಗೆ ಸರ್ ಈ ಚಳುವಳಿಯ ಬಗ್ಗೆ ನಿಮ್ಮ ಅನುಭವ ಏನು ಎಂದು ಕೇಳಿದೆ ಅದಕ್ಕೆ ಅವರು “ನನ್ನ ಪ್ರಕಾರ ಇದು ಬರಿಯ ಹೋರಾಟವಲ್ಲ ಇದೊಂದು ಬಯಲು ವಿಶ್ವವಿದ್ಯಾಲಯ ಇಲ್ಲಿಂದ ಕಲಿಯಲು ಸಾಕಷ್ಟಿದೆ. ಮಾತ್ರವಲ್ಲ ಬಹುತೇಕ ಸಂದರ್ಭಗಳಲ್ಲಿ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲಿ ಕಲಿಯಲು ಸಾಧ್ಯವಾಗದಿರುವ ಅನೇಕ ಸಂಗತಿಗಳನ್ನು ಇಲ್ಲಿಯ ರೈತರ ಜೀವಂತ ಅನುಭವದಿಂದ ಕಲಿಯುತ್ತೇವೆ. ನಾನೊಬ್ಬ ಸಾಹಿತ್ಯದ ವಿದ್ಯಾರ್ಥಿಯಾಗಿ ಅತ್ಯಂತ ಕುತೂಹಲದಿಂದ ಇಲ್ಲಿಗೆ ಬರುತ್ತಿದ್ದೇನೆ ಎಂದರು.”
ನಾನು ಅವರನ್ನು ಇನ್ನೊಂದು ಮಾತು ಕೇಳಿದೆ ಸರ್ ಇಡೀ ಚಳುವಳಿಯಲ್ಲಿ ನಿಮಗೆ ಅತ್ಯಂತ ಇಷ್ಟವಾದ ಸಂಗತಿ ಯಾವುದು ಎಂದು ಅದಕ್ಕೆ ಅವರು “ಇಲ್ಲಿಯ ರೈತರು ಈ ಚಳುವಳಿಗೆ ಬಂದವರನ್ನ ನಡೆಸಿಕೊಳ್ಳುತ್ತಿರುವ ರೀತಿ, ಆ ಆತ್ಮೀಯತೆ, ಎಲ್ಲರನ್ನು ಅತಿಥಿಗಳಿಗಿಂತ ಹೆಚ್ಚಾಗಿ ಪ್ರೀತಿಯಿಂದ ಕಾಣುವ ಮಮಕಾರ ನನಗೆ ತುಂಬ ಹತ್ತಿರವಾಯಿತು.” ಎಂದರು ಇದನ್ನ ಕೇಳಿದ ಮೇಲೆ ನನಗೆ ಅನಿಸಿದ್ದು ಮನುಷ್ಯನ ವಿಕಾಸದ ನಂತರ ಅವನು ಕೃಷಿ ಮಾಡಲು ಪ್ರಾರಂಬ ಮಾಡಿದಾಗಿನಿಂದ ಇಲ್ಲಿಯವರೆಗೆ ಅವನು ಸಮಾಜವನ್ನ ತನ್ನ ಕೃಷಿಯ ಮೂಲಕ ಪೋಷಿಸಿಕೊಂಡು ಬಂದಿದ್ದಾನೆ. ಆದರೆ ಅವನನ್ನ ಇಡೀ ಸಮಾಜ ಅದರಲ್ಲೂ ಆಳುವ ವರ್ಗ ನಿರಂತರವಾಗಿ ಶೋಷಣೆ ಮಾಡಿ ಈಗ ಅಳಿವಿನ ಅಂಚಿಗೆ ತಳ್ಳುತ್ತಿದ್ದರೂ ಈಗಲೂ ರೈತರು ತಮ್ಮ ಕಾಯಕದಿಂದ ಸಂಪೂರ್ಣ ವಿಮುಖರಾಗಿಲ್ಲ ಯಾಕೆಂದರೆ ಅಲ್ಲಿ ಒಂದು ರೀತಿಯ ತಾಯಿಯ ವಾತ್ಸಲ್ಯ ಇದೆ. ತಾಯಿ ತಾನು ಉಪವಾಸವಿದ್ದರೂ ಎಂದಿಗೂ ತನ್ನ ಮಕ್ಕಳನ್ನ ಜೊವಾಸ ಕೆಡವುದಿಲ್ಲ. ನನಗೆ ದೇಶದ ಇಡೀ ರೈತ ಸಮುದಾಯ ಎಲ್ಲರನ್ನು ಸಲಹುವ ತಾಯಿಯಂತೆ ಕಾಣಿಸುತ್ತದೆ.
ಚಳುವಳಿಯ ಜಾಗಕ್ಕೆ ಯಾರೇ ಬಂದರು ಅವರಿಗೆ ಕುಡಿಯಲು ನೀರು, ಮಜ್ಜಿಗೆ, ಚಾ, ಬಿಸ್ಕತ್ತು, ಊಟ, ಉಪಹಾರಗಳನ್ನು ನೀಡುತ್ತಾರೆ. ಎಷ್ಟರಮಟ್ಟಿಗೆ ಅಂದರೆ ಇದೇ ರೈತರನ್ನು ತಡೆದ ಪೋಲೀಸಿನವರಿಗೂ ಕಳೆದ 57 ದಿನಗಳಿಂದ ಇವರು ಊಟ ಕೊಟ್ಟು ಉಪಚರಿಸುತ್ತಿದ್ದಾರೆ. ಇದಕ್ಕಿಂತ ಮಾದರಿ ಇನ್ನೇನು ಬೇಕು. ಕುತೂಹಲಕ್ಕೆ ನಾನು ಒಬ್ಬ ರೈತರನ್ನು ಮಾತನಾಡಿಸಿ ಈ ವಿಚಾರವನ್ನು ಕೇಳಿದೆ. ನಿಮ್ಮನ್ನ ತಡೆದು, ಲಾಠಿಗಳಲ್ಲಿ ಹೊಡೆದ ಪೋಲೀಸಿನವರಿಗೆ ನೀವು ಊಟ ಕೊಡುತ್ತಿದ್ದೀರಲ್ಲ ಯಾಕೆ ಎಂದು. ಅದಕ್ಕೆ ಅವರು ಕೊಟ್ಟ ಉತ್ತರ ಎಷ್ಟು ಪ್ರಭುದ್ದವಾಗಿತ್ತೆಂದರೆ “ಪೋಲೀಸಿನವರು ನಮ್ಮ ಮಕ್ಕಳೇ ಬದುಕಿನ ಸಲುವಾಗಿ ಅಲ್ಲಿ ಕೆಲಸ ಮಾಡುತ್ತಿದ್ದಾರೆ.
ಕೆಲಸ ಮಾಡುವ ಜಾಗದಲ್ಲಿ ಅವರು ಮೇಲಿನ ನಿರ್ದೇಶನದಂತೆ ವರ್ತಿಸುತ್ತಾರೆ ಅಷ್ಟೆ. ಅದರಲ್ಲಿ ವೈಯಕ್ತಿಕವಾಗಿ ಅವರ ತಪ್ಪೇನು ಇಲ್ಲ. ಇದು ಸರ್ಕಾರದ ಕೆಲಸ, ಇದಕ್ಕಾಗಿ ಪೋಲೀಸಿನವರನ್ನು ದೂಷಿಸುವುದಾಗಲಿ ಅಥವ ಅವರಿಗೆ ಊಟ ಕೊಡದೆ ಇರುವುದಾಗಲಿ ಸರಿಯಲ್ಲ” ಎಂದರು. (ಮುಂದುವರೆಯುತ್ತದೆ).