ನವದೆಹಲಿ: ಭಾರತೀಯ ಮಿಲಿಟರಿ ತಯಾರಿಕೆ-ನಿರ್ವಹಣಾ ವಲಯದಲ್ಲಿ `ಆತ್ಮನಿರ್ಭರ್ ಭಾರತ್’ಗೆ ಉತ್ತೇನ ನೀಡಲು ರಕ್ಷಣಾ ಸಚಿವಾಲಯ ಕ್ರಮಕೈಗೊಂಡಿದೆ. ಅದರ ಭಾಗವಾಗಿ ರಕ್ಷಣಾ ಸ್ವಾಧೀನ ಪ್ರಕ್ರಿಯೆ (ಡಿಎಪಿ) ಕೈಪಿಡಿಯನ್ನು ತಿದ್ದುಪಡಿ ಮಾಡಲು ಮುಂದಾಗಿದೆ. ಇದರೊಂದಿಗೆ ಖಾಸಗಿ ವಲಯಕ್ಕೆ ಭಾರತೀಯ ರಕ್ಷಣಾ ಕ್ಷೇತ್ರದ ಸಾರ್ವಜನಿಕ ವಲಯದ ಉದ್ಯಮ(ಪಿಎಸ್‌ಯು)ಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ಉತ್ಪಾದನೆ ಮಾಡಲು ಅನುಮತಿ ನೀಡುವುದಾಗಿ ಮುಂದಾಗಿದೆ ಎಂದು ತಿಳಿದುಬಂದಿದೆ.
ಅಧಿಕಾರಿಗಳ ಪ್ರಕಾರ, ಉದ್ಯಮದಲ್ಲಿನ ಈ ಸಹಯೋಗವನ್ನು ಭಾರತೀಯ ಬಹುವಿಭಾಗೀಯ ಹೆಲಿಕಾಪ್ಟರ್ ತಯಾರಿಕೆ ಮತ್ತು ಅಭಿವೃದ್ಧಿಯಲ್ಲಿ ಪರೀಕ್ಷಿಸಲಾಗುತ್ತದೆ. ಅಂತಿಮವಾಗಿ ಭಾರತೀಯ ಮಿಲಿಟರಿಯ ಪ್ರಸ್ತುತ ದಾಸ್ತಾನುಗಳಲ್ಲಿ ರಷ್ಯಾ ನಿರ್ಮಿತ ಎಲ್ಲಾ ಎಂಐ-17 ಮತ್ತು ಎಂಐ-8 ಹೆಲಿಕಾಪ್ಟರ್‌ಗಳನ್ನು ಬದಲಾಯಿಸುತ್ತದೆ. ಇದರೊಂದಿಗೆ ವಾಯು ದಾಳಿ, ಜಲಾಂತರ್ಗಾಮಿ ನೌಕೆಗಳು, ಮಿಲಿಟರಿ ಸಾರಿಗೆ ಹಾಗೂ ಮೊದಲಾದ ವಿಭಾಗಗಳಲ್ಲಿ ಖಾಸಗೀ ರಂಗವು ಪ್ರಮುಖ ಪಾತ್ರ ವಹಿಸಲಿದೆ.
ಖಾಸಗಿ ವಲಯದ ಸಂಸ್ಥೆಗಳು ಈಗಾಗಲೇ ಇಂತಹ ಮಹತ್ವದ ಯೋಜನೆಯಲ್ಲಿ ಭಾಗವಹಿಸಲು ಉತ್ಸುಕತೆ ತೋರಿದ್ದು, ಮುಂದಿನ 7 ವರ್ಷಗಳಲ್ಲಿ ಶಸ್ತ್ರಾಸ್ತ್ರ ಉತ್ಪಾದನೆ ಪ್ರಾರಂಭಿಸಲು ರಕ್ಷಣಾ ಸಚಿವಾಲಯ ತಿಳಿಸಿದೆ. ಫ್ರೆಂಚ್ ಸಫ್ರಾನ್ ಕಂಪನಿಯು ಈಗಾಗಲೇ (ಜುಲೈ 8ರಂದು) ಹೆಚ್.ಎ.ಎಲ್. ನೊಂದಿಗೆ ಸಹಿಹಾಕಿದೆ. ಈ ಮೂಲಕ ನೌಕಾರೂಪ ಸೇರಿದಂತೆ ಭಾರತೀಯ ಬಹುವಿಭಾಗೀಯ ಹೆಲಿಕಾಪ್ಟರ್ ಎಂಜಿನ್ ಅನ್ನು ಉತ್ಪಾದಿಸಿ, ಅಭಿವೃದ್ಧಿಪಡಿಸಲು ಹಾಗೂ ಹೊಸದಾಗಿ ಜಂಟಿ ಉದ್ಯಮ ಸೃಷ್ಟಿಸಲು ಮುಂದಾಗಿವೆ ಎಂದು ವರದಿಯಾಗಿದೆ.
ಖಾಸಗಿ ವಲಯದ ಕಂಪೆನಿಗಳು ಉತ್ಪಾದನೆಯಾಗುವ ಪ್ರಮಾಣದಲ್ಲಿ ಶೇ. 25 ಪ್ರತಿಶತವನ್ನು 3ನೇ ದೇಶಗಳಿಗೆ ರಫ್ತು ಮಾಡಲು ಹಾಗೂ ವಿದೇಶಿ ವಿನಿಮಯವನ್ನೂ ಮಾಡಿಕೊಳ್ಳಲು ಅನುಮತಿಸಲಾಗುತ್ತದೆ. ಅಭಿವೃದ್ಧಿ ಹೊಂದಿದ ಹೆಲಿಕಾಪ್ಟೆರ್ ಅನ್ನು ಖರೀದಿಸಲು ಭಾರತೀಯ ಸಶಸ್ತ್ರ ಪಡೆಗಳಿಗೆ ತಿಳಿಸಲಾಗಿದೆ. ಮುಂದಿನ 5 ವರ್ಷಗಳಲ್ಲಿ ಹೆಲಿಕಾಪ್ಟರ್ ತಯಾರಿಸಿದರೆ, ಸಮಯಕ್ಕೆ ಮುಂಚಿತವಾಗಿ ಖರೀದಿಸುವಂತೆ ಖಾಸಗಿ ಕಂಪನಿಗಳು ಕೋರಿವೆ.
ಖಾಸಗಿ ವಲಯವು ಶೇ. 51 ಪ್ರತಿಶತ ಪಾಲನ್ನು ಸ್ವಾಧೀನಪಡಿಸಿಕೊಳ್ಳಲು ಹಾಗೂ ಭಾರತೀಯ ಪಿಎಸ್‌ಯು ಗಳೊಂದಿಗೆ ಜಂಟಿ ಉದ್ಯಮ ರೂಪಿಸಲು ಅನುಮತಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಭಾರತೀಯ ಬಹುವಿಭಾಗೀಯ ಹೆಲಿಕಾಪ್ಟರ್ ಅನ್ನು ಮುಂಬರುವ 5 ರಿಂದ 7 ವರ್ಷಗಳಲ್ಲಿ ಹೊರತರುವ ನಿರೀಕ್ಷೆಯಿದೆ. ಭಾರತೀಯ ನೌಕಾಪಡೆಯು ತನ್ನ ಮೊದಲ ಜಲಾಂತರ್ಗಾಮಿ ವಿರೋಧಿ ಯುದ್ಧದ ಸಿರ್ಕೋರ್ಸ್ಕಿ ಎಂಹೆಚ್-60ಆರ್ ಸೀಹಾಕ್ ಹೆಲಿಕಾಪ್ಟರ್‌ಗಳನ್ನು ಈ ವರ್ಷದ ಅಂತ್ಯದ ವೇಳೆಗೆ ಭಾರತದಲ್ಲಿ ವಿತರಿಸುವ ನಿರೀಕ್ಷೆಯಿದೆ. ಮೊದಲ 2-3 ಹೆಲಿಕಾಪ್ಟರ್‌ಗಳನ್ನು ಈಗಾಗಲೇ ಯುನೈಟೆಡ್ ಸ್ಟೇಟ್ಸ್‌ನ ಸ್ಯಾನ್ ಡಿಯಾಗೋ ನೌಕಾ ನಿಲ್ದಾಣದಿಂದ ತರಬೇತಿ ಉದ್ದೇಶಗಳಿಗಾಗಿ ಭಾರತೀಯ ನೌಕಾಪಡೆಗೆ ಹಸ್ತಾಂತರಿಸಲಾಗಿದೆ. ಉಳಿದ 21 ಹೆಲಿಕಾಪ್ಟರ್‌ಗಳ ವಿತರಣೆಗಳು 2.3 ಶತಕೋಟಿ ಡಾಲರ್ ಫೆಬ್ರವರಿ 2020ರ ಒಪ್ಪಂದದಂತೆ ಆಗಲಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.