ಹಾಸನ : 2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರೈತರ ಆಧಾಯವನ್ನು ಡಬಲ್ ಮಾಡುತ್ತೇನೆ. ಡಾ.ಎಂ.ಎಸ್ ಸ್ವಾಮಿನಾಥನ್ ಶಿಫಾರಸ್ಸುಗಳನ್ನು ಜಾರಿಗೊಳಿಸುತ್ತೇನೆ, ರೈತರ ಸಾಲ ಮನ್ನಾ ಮಾಡುತ್ತೇನೆ, ರೈತರು ಬೆಳೆದ ಬೆಳೆಗಳಿಗೆ ಸಿ2+50% ಆಧಾರದಲ್ಲಿ ಬೆಲೆ ನಿಗದಿ ಮಾಡುತ್ತೇನೆ ಎಂದು ದೇಶದ ರೈತ ಸಮುದಾಯಕ್ಕೆ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ ಕೊಟ್ಟ ಭರವಸೆಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರಾದ ಎಚ್.ಆರ್.ನವೀನ್ ಕುಮಾರ್ ಆರೋಪಿಸಿದ್ದಾರೆ.
ಮಾತ್ರವಲ್ಲ ಇಂದೆಂದು ಕಂಡು ಕೇಳರಿಯದ ರೀತಿಯಲ್ಲಿ ರೈತ ಸಮುದಾಯವನ್ನು ಅವಮಾನಿಸಿ, ಅನ್ನದಾತರನ್ನು ಬೀದಿಯಲ್ಲಿ ನಿಲ್ಲಿಸಿ ಕೆಟ್ಟದಾಗಿ ನಡೆಸಿಕೊಂಡಿದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಡಾ.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಲು ಸಾಧ್ಯವಿಲ್ಲವೆಂದು ಸುಪ್ರಿಂಕೋಟ್‌ಗೆ ಅಫಿಡೆವಿಟ್ ಸಲ್ಲಿಸಿದೆ. ಭೂಸ್ವಾಧಿನ ಕಾಯ್ದೆಗೆ ತಿದ್ದುಪಡಿ ತಂದು ರೈತರ ಭೂಮಿಯನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದೆ. ವಿದ್ಯುತ್ ಖಾಸಗೀಕರಣ ಮಸೂದೆ ತರುವ ಮೂಲಕ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ನೀಡುತ್ತಿದ್ದ ಉಚಿತ ವಿದ್ಯುತ್ ನಿಲ್ಲಿಸಿ ಸ್ಮಾರ್ಟ್ ಮೀಟರ್ ಅಳವಡಿಸಲು ಮುಂದಾಗಿದೆ. ಇಂತಹ ರೈತ ವಿರೊಧಿ ಮೋದಿ ನೇತೃತ್ವದ ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಜೆಡಿಎಸ್ ಅಭ್ಯರ್ಥಿಗಳನ್ನು ಈ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಬೇಕೆಂದು ರಾಜ್ಯದ ರೈತ ಸಮುದಾಯದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ರಾಜ್ಯ ರೈತ ಸಂಘಟನೆಗಳು ಮನವಿ ಮಾಡಿಕೊಳ್ಳುತ್ತವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆರೋಪಿಸೆದೆ.
ಸಂಕಷ್ಟದಲ್ಲಿರುವ ರೈತರನ್ನು ಕೈಹಿಡಿದು ಮೇಲೆತ್ತುವ ಬದಲಾಗಿ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದು ಸಣ್ಣ ರೈತರ ಮೇಲೆ ಅವಲಂಬಿತವಾಗಿರುವ, ದೊಡ್ಡಸಂಖ್ಯೆಯ ಉದ್ಯೋಗವನ್ನು ಸೃಷ್ಠಿಸಿರುವ ಬಾರತದ ಕೃಷಿಯನ್ನ ಕಾರ್ಪೋರೇಟ್ ಕಂಪನಿಗಳ ಪಾಲು ಮಾಡಲು ಮೋದಿ ಸರ್ಕಾರ ತೀರ್ಮಾನಿಸಿತು. ಇದರ ವಿರುದ್ಧ ರೈತರು ಸಂಘಟಿತರಾಗಿ ಪ್ರತಿಭಟಿಸಲು ದೆಹಲಿಯತ್ತ ತೆರಳಿದರೆ ಅವರ ಮೇಲೆ ಗುಂಡಿನ ದಾಳಿ, ಅಶೃವಾಯು, ಜಲಫಿರಂಗಿ, ಲಾಠಿ ಜಾರ್ಜ್ ಮಾಡಿ ರೈತರು ಮತ್ತು ಅವರ ಟ್ರ್ಯಾಕ್ಟರ್‌ಗಳು ದೆಹಲಿಯತ್ತ ಬರದಂತೆ ಹೆದ್ದಾರಿಗಳಲ್ಲಿ ಗುಂಡಿ ನಿರ್ಮಾಣ ಮಾಡಿ, ಚೂಪಾದ ಕಬ್ಬಿಣದ ಸಲಾಕೆಗಳನ್ನು ರಸ್ತೆಗೆ ಜಡಿದು, ಕಾಂಕ್ರೀಟ್ ಅಡ್ಡಗೋಡೆಗಳನ್ನು ನಿರ್ಮಾಣ ಮಾಡಿದರು. ರೈತರನ್ನು ಭಯೋತ್ಪಾದಕರೆಂದು ಕರೆದರು. ಇದನ್ನು ಪ್ರತಿಭಟಿಸಿ ದೆಹಲಿಯ 5 ರಾಷ್ಟ್ರೀಯ ಹೆದ್ದಾರಿಗಳಲ್ಲೇ ಲಕ್ಷಾಂತರ ರೈತರು ಸತತ 13 ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿ ರೈತ ವಿರೊಧಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಲು ಸಾಧ್ಯವಾಯಿತು.
ಇದನ್ನು ಓದಿ : ‘ಅಚ್ಚೇದಿನ’ಗಳಿಗೆ 10 ವರ್ಷ ಕಾದಿದ್ದು ಮರೆತು ಬಿಡಿ! ಗ್ಯಾರಂಟಿಗಳಿರುವ ‘ವಿಕಸಿತ ಭಾರತ’ಕ್ಕೆ 23 ವರ್ಷ ಕಾಯಿರಿ!
ಈ ಧೀರೋದ್ದಾತ್ತ ಹೋರಾಟದಲ್ಲಿ 752 ರೈತರು ಹುತಾತ್ಮರಾದರು. ಇದೇ ರೀತಿ ದೇಶಾದ್ಯಂತ ನಡೆದ ರೈತರ ಪ್ರತಿಭಟನೆಗಳನ್ನು ಹತ್ತಿಕ್ಕಲು ಬಿಜೆಪಿ ನೇತೃತ್ವದ ಸರ್ಕಾರಗಳು ನಿರಂತರವಾಗಿ ಪ್ರಯತ್ನಿಸಿವೆ. ಉತ್ತರ ಪ್ರದೇಶದ ಲಕ್ಕೀಂಪುರ್‌ಖೇರಿಯಲ್ಲಿ ಕೇಂದ್ರ ಕೃಷಿ ಸಚಿವರ ಬೆಂಗಾವಲು ವಾಹನ ಐವರು ರೈತರು ಮತ್ತು ಒಬ್ಬ ಪತ್ರಕರ್ತರನ್ನು ಬಲಿತೆಗೆದುಕೊಂಡಿತು.
ಮೋದಿಯ ಅಧಿಕಾರದ ಅವಧಿಯಲ್ಲಿ 2014-2022 ನಡುವೆ 1,00,474 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಮೋದಿ ಸರ್ಕಾರ ತಿರಸ್ಕಾರದ ದೋರಣೆ ಅನುಸರಿಸಿದೆ. ಮಾತ್ರವಲ್ಲ ರೈತರು ಪರಿಹಾರಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಕೃಷಿ ಸಚಿವ ಹೇಳಿಕೆ ನೀಡಿ ರೈತರನ್ನು ಅವಮಾನಿಸಿದ್ದಾರೆ. ರೈತರ ಸಾಲ ಮನ್ನಾ ಮಾಡುತ್ತೇನೆಂದು ಹೇಳಿ ಅಧಿಕಾರಕ್ಕೆ ಬಂದು ಕಾರ್ಪೋರೇಟ್ ಕಂಪನಿಗಳ ಸಾಲ ಮನ್ನಾ ಮಾಡಿದ ರೈತ ವಿರೋಧಿ ಮೋದಿ ಸರ್ಕಾರ. ಈ ಅವಧಿಯಲ್ಲಿ ರೈತರ ಆಧಾಯ ವಿಪರೀತವಾಗಿ ಕುಸಿದಿದೆ.
ಪ್ರದಾನಮಂತ್ರಿ ಫಸಲ್ ಭಿಮಾ ಯೋಜನೆ ಸಣ್ಣ ರೈತರಿಗೆ ಅನುಕೂಲ ಮಾಡಿಕೊಡುವ ಬದಲಿಗೆ ಖಾಸಗಿ ವಿಮಾ ಕಂಪನಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಪ್ರೀಮಿಯಂ ಭರಿಸಿದ ರೈತರಿಗೂ ಸರಿಯಾದ ಬೆಳೆವಿಮಾ ಪರಿಹಾರ ನೀಡಲಿಲ್ಲ. ರಾಜ್ಯದಲ್ಲಿ 232 ತಾಲ್ಲೂಕುಗಳು ಬರಪೀಡಿತವಾಗಿದ್ದರೂ ಮೋದಿ ಸರ್ಕಾರ ರಾಜಕೀಯ ಕಾರಣಗಳಿಗಾಗಿ ಬರ ಪರಪರಿಹಾರದ ಹಣವನ್ನು ಬಿಡುಗಡೆ ಮಾಡದೆ ಕರ್ನಾಟಕದ ರೈತರಿಗೆ ದ್ರೋಹ ಮಾಡಿದೆ.
ರೈತ ವಿರೊಧಿ ಬಿಜೆಪಿ ಜೊತೆ ಸೇರಿದ ಜೆಡಿಎಸ್ ಕೂಡ ರೈತ ವಿರೋಧಿಯಾಗಿದೆ.
ರೈತರ ಪಕ್ಷ, ಮಣ್ಣಿನ ಮಕ್ಕಳ ಪಕ್ಷ ಎಂದು ಹೇಳಿಕೊಂಡು ಬರುತ್ತಿದ್ದ ಜಾತ್ಯಾತೀತ ಜನತಾದಳ ರೈತ ವಿರೊಧಿ ಮೋದಿ ಪಕ್ಷ ಬಿಜೆಪಿಯ ಜೊತೆ ಕುಟುಂಬದ ಸ್ವಾರ್ಥಕ್ಕಾಗಿ ಚುನಾವಣಾ ಮೈತ್ರಿ ಮಾಡಿಕೊಂಡಿದ್ದಾರೆ. ಮೋದಿ ಸರ್ಕಾರದ ಎಲ್ಲಾ ರೈತ ವಿರೊಧಿ ನೀತಿಗಳನ್ನು ಬೆಂಬಲಿಸುತ್ತಾ ಇವರೂ ರೈತ ವಿರೊಧಿಗಳಾಗಿದ್ದಾರೆ. ಜಿಲ್ಲೆಯಲ್ಲಿ ಸತತವಾಗಿ ಗೆಲುವನ್ನು ಕಾಣುತ್ತಿರುವ ಜೆಡಿಎಸ್ ರೈತರ ಪರವಾದ ಯಾವ ನಿರ್ಣಾಯಕ ಕೆಲಸಗಳನ್ನು ಮಾಡಿಲ್ಲ. ಜಿಲ್ಲೆಯ ಅಸ್ಮಿತೆ ಆಲೂಗೆಡ್ಡೆ ಬೆಳೆ ನಷಿಸಿಹೋಗಿದೆ.
ಮಲೆನಾಡಿನಲ್ಲಿ ಕಾಡಾನೆಗಳ ಹಾವಳಿಯಿಂದ ಜನ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತಿಲ್ಲ, ಶುಂಟಿಯಿಂದ ರೈತರ ಭೂಮಿ ಬಂಜರಾಗುತ್ತಿದೆ. ಕೊಬ್ಬರಿ ಬೆಳೆಗಾರರು ಬೆಲೆ ಸಿಗದೆ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಕೃಷಿಯೇ ಜಿಲ್ಲೆಯ ಪ್ರಧಾನ ಆಧಾಯದ ಮೂಲವಾಗಿದ್ದರೂ ಇಷ್ಟು ವರ್ಷಗಳಲ್ಲಿ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಜೆಡಿಎಸ್‌ನಿಂದ ಆಯ್ಕೆಯಾದವರೂ ಪ್ರಮಾಣಿಕವಾಗಿ ಪ್ರಯತ್ನಿಸಲೇ ಇಲ್ಲ ಎಂದು ವ್ಯಕ್ತಪಡಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಅಧ್ಯಕ್ಷರಾದ ಸಿ.ಎ.ನಾಗರತ್ನ ಮತ್ತು ಚನ್ನರಾಯಪಟ್ಟಣದ ತಾಲ್ಲೂಕು ಅಧ್ಯಕ್ಷರಾದ ಎಸ್.ಎಸ್.ರಾಮಚಂದ್ರ ಭಾಗಿಯಾಗಿದ್ದರು.
ಇದನ್ನು ನೋಡಿ : ರಾಮ ನವಮಿ ವಿಶೇಷ : ರಾಮಯ್ಯ ಬಾರಯ್ಯ ಮೋದಿಯ ಕೇಳಯ್ಯ Janashakthi Media