ಹಿಂದೂ ಬಹುಸಂಖ್ಯಾವಾದಕ್ಕೆ ರಾಜಕೀಯ ಭೂಮಿಕೆಯಾಗಿ ಉತ್ತರಪ್ರದೇಶ ಸಿದ್ಧ
ಮೂಲ: ಅಸೀಮ್ ಅಲಿ(ದ ಹಿಂದೂ 11 ಮಾರ್ಚ್ 22)
ಅನುವಾದ: ನಾ ದಿವಾಕರ
ಉತ್ತರಪ್ರದೇಶ ಒಂದು ಹೊಸ ರಾಜಕೀಯ ಶಕೆಯನ್ನು ಪ್ರವೇಶಿಸಿದೆ. ಮೂರನೆ ಎರಡರಷ್ಟು ಬಹುಮತ ಪಡೆಯುವ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದು, ಕಳೆದ ಮೂರು ದಶಕಗಳಲ್ಲಿ ಮರಳಿ ಅಧಿಕಾರ ಪಡೆದ ಪ್ರಪ್ರಥಮ ಪಕ್ಷವಾಗಿ ಹೊರಹೊಮ್ಮಿದೆ. ತನ್ನ ಮುಸ್ಲಿಂ-ಯಾದವ ಮತಬ್ಯಾಂಕನ್ನು ದಾಟಿ ತನ್ನದೇ ಆದ ಮತದಾರ ವಲಯವನ್ನು ಸೃಷ್ಟಿಸಿಕೊಳ್ಳುವ ಸಮಾಜವಾದಿ ಪಕ್ಷದ ಪ್ರಯತ್ನ ವಿಫಲವಾಗಿದೆ. ಕಾಂಗ್ರೆಸ್ ಮತ್ತು ಬಹುಜನ ಸಮಾಜ ಪಕ್ಷ ಸಂಪೂರ್ಣ ಅವನತಿಯತ್ತ ಸಾಗಿವೆ.
ಪ್ರಧಾನ ನಿರೂಪಣೆಯ ಜನಾದೇಶ
ಬಿಜೆಪಿ ಗಳಿಸಿರುವ ಸ್ಥಾನಗಳ ಸಂಖ್ಯೆ ನಿರೀಕ್ಷೆಯನ್ನು ಮೀರಿದ್ದರೂ ಪಕ್ಷದ ಗೆಲುವು ಅನಿರೀಕ್ಷಿತವೇನೂ ಆಗಿರಲಿಲ್ಲ. ಯಾವುದೇ ಅಲೆಯ ಪ್ರಭಾವ ಇಲ್ಲದೆಯೇ ಈ ಚುನಾವಣೆಗಳು ನಡೆದಿದ್ದವು. ಮಾಧ್ಯಮಗಳ ಚುನಾವಣಾ ವರದಿಗಳಲ್ಲೂ ಸಹ ಆಡಳಿತ ವಿರೋಧಿ ಧೋರಣೆಯಾಗಲೀ, ಸರ್ಕಾರದ ಪರವಾದ ಧೋರಣೆಯಾಗಲೀ ಕಂಡುಬಂದಿರಲಿಲ್ಲ. ಆದರೂ ಬಿಜೆಪಿ ಸಾಧಿಸಿರುವ ಅಭೂತಪೂರ್ವ ಗೆಲುವಿಗೆ ಕಾರಣಗಳೇನು ಎನ್ನುವುದು ಚರ್ಚೆಗೊಳಗಾಗಬೇಕಿದೆ. ಯಾವುದೇ ರಾಜಕೀಯ ಜನಾದೇಶವನ್ನು ಆಳಕ್ಕಿಳಿದು ವಿಸಂಕೇತಿಸುವುದು ಸಂಕೀರ್ಣವಾದ ಕೆಲಸ. ಒಂದು ಕೆಲವು ರಾಜಕೀಯ ತಜ್ಞರು ಈ ಚುನಾವಣೆಗಳ ಫಲಿತಾಂಶವನ್ನು ಯೋಗಿ ಆದಿತ್ಯನಾಥ್ ಆಳ್ವಿಕೆಯ ಸಾಧನೆಗಳ ಫಲ ಎಂದೇ ವ್ಯಾಖ್ಯಾನಿಸಿದ್ದಾರೆ. ಜನಕಲ್ಯಾಣ ಯೋಜನೆಗಳ ಅನುಷ್ಟಾನ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಿರುವುದೇ ಕಾರಣ ಎಂದೂ ಹೇಳಲಾಗುತ್ತದೆ. ಇನ್ನು ಕೆಲವು ವಿಶ್ಲೇಷಕರು, ಬಿಜೆಪಿಯ ಸಂಘಟನಾತ್ಮಕ ರಚನೆ ಮತ್ತು ಮಾಧ್ಯಮಗಳ ನಿರ್ವಹಣೆಯೇ ಈ ಗೆಲುವಿಗೆ ಕಾರಣ ಎಂದು ಅಭಿಪ್ರಾಯಪಡುತ್ತಾರೆ. ಈ ಎರಡೂ ಅಭಿಪ್ರಾಯಗಳಲ್ಲಿ ಸತ್ಯಾಂಶವಿದೆ. ಆದರೂ ಈ ವಿಶ್ಲೇಷಣೆಗಳಲ್ಲಿ, ಉತ್ತರಪ್ರದೇಶದ ಜನಾದೇಶದ ಹಿಂದಿರುವ ಸೈದ್ಧಾಂತಿಕ ಶಕ್ತಿಯನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ. ಈ ಸೈದ್ಧಾಂತಿಕ ಶಕ್ತಿಯೇ ಹಿಂದೂ ಬಹುಸಂಖ್ಯಾವಾದ. ಹಿಂದೂ ಬಹುಸಂಖ್ಯಾವಾದವೇ ಬಿಜೆಪಿಯ ಚುನಾವಣಾ ಪ್ರಚಾರದ ಪ್ರಧಾನ ನಿರೂಪಣೆ ಎಂದು ಹೇಳಬಹುದು. ಉಳಿದೆಲ್ಲಾ ನಿರೂಪಣೆಗಳೂ ಸಹ ಈ ಪ್ರಧಾನ ನಿರೂಪಣೆಗೆ ಪೂರಕವಾಗಿಯೇ ಕಂಡುಬರುತ್ತದೆ.
ಕಳೆದ ಒಂದು ದಶಕದ ಅವಧಿಯಲ್ಲಿ ಬಿಜೆಪಿ ಕ್ರೋಢೀಕರಿಸಿದ್ದ, ಧೃವೀಕರಿಸಿದ್ದ ಹಿಂದೂ ಮತದಾರರ ಸಾಮಾಜಿಕ ಮೈತ್ರಿಯನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವುದು ಬಿಜೆಪಿಯ ಪಾಲಿಗೆ ಸವಾಲಿನ ಪ್ರಶ್ನೆಯಾಗಿತ್ತು. ಮೇಲ್ಜಾತಿ ಸಮುದಾಯಗಳು, ಯಾದವರನ್ನು ಹೊರತುಪಡಿಸಿದ ಹಿಂದುಳಿದ ಜಾತಿಗಳು, ಜಾಟವರನ್ನು ಹೊರತುಪಡಿಸಿದ ದಲಿತ ಸಮುದಾಯ ಈ ಮೈತ್ರಿಕೂಟದಲ್ಲಿ ಪ್ರಮುಖವಾಗಿದ್ದವು. ಹಿಂದಿನ ಚುನಾವಣೆಗಳಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ ಉಂಟುಮಾಡಿದ್ದ ಅನೇಕ ರೀತಿಯ ಸಾರ್ವಜನಿಕರ ಅಸಮಾಧಾನಗಳು ಹೊಗೆಯಾಡುತ್ತಿದ್ದುದು ಪಕ್ಷಕ್ಕೆ ಪ್ರಮುಖ ಸವಾಲಾಗಿತ್ತು. ಇವುಗಳಲ್ಲಿ ಪ್ರಧಾನವಾಗಿ ನಿರುದ್ಯೋಗದ ಬವಣೆ, ಬೆಲೆ ಏರಿಕೆ, ಸ್ಥಗಿತಗೊಂಡಿದ್ದ ಆದಾಯದ ಮೂಲಗಳು, ಗ್ರಾಮೀಣ ಬಿಕ್ಕಟ್ಟು, ಕೋವಿದ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಉಂಟಾಗಿದ್ದ ಹಲವು ದುರಂತಗಳು, ಲಾಕ್ ಡೌನ್ ದುಷ್ಪರಿಣಾಮಗಳು ಯೋಗಿ ಸರ್ಕಾರದ ಸುಗಮ ಹಾದಿಗೆ ಅಡ್ಡಿಯಾಗುವ ಸಾಧ್ಯತೆಗಳಿದ್ದವು. ಸರ್ಕಾರದ ಈ ಎಲ್ಲ ವೈಫಲ್ಯಗಳನ್ನೂ ಮೀರಿ ಯೋಗಿ ಸರ್ಕಾರದ ಉಚಿತ ಪಡಿತರ ನೀಡುವ ಯೋಜನೆ ಫಲಕಾರಿಯಾಗಿದೆ ಎಂದು ಹೇಳುವುದು ಬಹುಶಃ ಭೋಳೆತನದ ಮಾತಾಗುತ್ತದೆ. ಉಚಿತವಾಗಿ ನೀಡಲಾಗುವ ಆಹಾರ ಧಾನ್ಯಗಳನ್ನು ಒದಗಿಸುವ ಪದ್ಧತಿಗೆ ಭಾರತದ ಮತದಾರರು ಕಳೆದ ಐವತ್ತು ವರ್ಷಗಳಿಂದಲೂ ಒಗ್ಗಿಹೋಗಿರುವುದರಿಂದ, 21ನೆಯ ಶತಮಾನದ ಮೂರನೆಯ ದಶಕದಲ್ಲಿ ಮತದಾರರು ಈ ಯೋಜನೆಗಳಿಂದ ಭ್ರಮಾಧೀನರಾಗುತ್ತಾರೆ ಎಂದು ನಂಬುವುದು ಕಷ್ಟವಾದೀತು.
ಜನಕಲ್ಯಾಣ ಯೋಜನೆಯನ್ನೂ ಮೀರಿದ ಸಂಗತಿ
ಅನೇಕ ಜನಪರ ಕಲ್ಯಾಣ ಯೋಜನೆಗಳಡಿ ನೇರ ನಗದು ಪಾವತಿ ಮಾಡುವ ಪದ್ಧತಿ, ಉದಾಹರಣೆಗೆ ರೈತರ ಆದಾಯ ಬೆಂಬಲ, ಶೌಚಾಲಯ ನಿರ್ಮಾಣ, ವಸತಿ ಯೋಜನೆ, ಶಾಲಾ ಬ್ಯಾಗುಗಳು ಇತ್ಯಾದಿ,, ಒಂದು ಪ್ರಬಲ ಅಸ್ತ್ರವಾಗಿಯೇ ಕಾಣುತ್ತದೆ. ಆದರೆ ಚುನಾವಣೆಯ ಮತದಾನದ ಏರುಪೇರುಗಳನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಇಲ್ಲಿಯೂ ಸಹ ವಿಶ್ಲೇಷಕರು ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾಗುತ್ತದೆ. ಏಕೆಂದರೆ ಇತ್ತೀಚೆಗೆ ನಡೆದ ಹರಿಯಾಣ, ಮಹಾರಾಷ್ಟ್ರ ಮತ್ತ್ ಜಾರ್ಖಂಡ್ ಚುನಾವಣೆಗಳಲ್ಲಿ ಈ ಕಲ್ಯಾಣ ಯೋಜನೆಗಳ ನೇರ ನಗದು ಪಾವತಿ ಬಿಜೆಪಿಯನ್ನು ಅಧಿಕಾರಕ್ಕೆ ತರಲಿಲ್ಲ. ಅಲ್ಲಿ ಬಿಜೆಪಿ ಮತದಾರರ ಅವಕೃಪೆಯನ್ನು ಎದುರಿಸಬೇಕಾಯಿತು. ಎರಡನೆಯದಾಗಿ, ಚುನಾವಣಾ ಸಮೀಕ್ಷೆಗಳಾಗಲೀ, ಮಾಧ್ಯಮಗಳ ವರದಿಗಳಾಗಲೀ ಈ ರೀತಿಯ ಬೃಹತ್ ಪ್ರಮಾಣದ ಜನಾದೇಶಕ್ಕೆ ಪೂರಕವಾದ ಜನೋತ್ಸಾಹವನ್ನು ಬಿಂಬಿಸಿರಲಿಲ್ಲ. ಚುನಾವಣೆಗಳಿಗೆ ಎರಡು ತಿಂಗಳ ಮುಂಚೆ ನಡೆಸಲಾದ ಸಮೀಕ್ಷೆಗಳಲ್ಲೂ ಸಹ ಸಾರ್ವಜನಿಕ ಅಭಿಪ್ರಾಯಗಳು ಅಸ್ಪಷ್ಟತೆಯಿಂದಲೇ ಕೂಡಿದ್ದವು.
ಸಮೀಕ್ಷೆಗೊಳಪಟ್ಟ ಮೂರನೆ ಎರಡರಷ್ಟು ಮತದಾರರು ಸರ್ಕಾರದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಕೆಲವೇ ಸಂಖ್ಯೆಯ ಜನ ಯೋಗಿ ಸರ್ಕಾರ ಮರಳಿ ಅಧಿಕಾರಕ್ಕೆ ಬರುವಂತೆ ಆಶಿಸಿದ್ದರು. ಹಾಗಾಗಿಯೇ ಇಲ್ಲಿ ಮತ್ತಾವುದೋ ಅಂಶ ಪ್ರಧಾನವಾಗಿರುವುದನ್ನು ಗುರುತಿಸಬೇಕಿದೆ. ಇಲ್ಲಿ ನಿರ್ಣಾಯಕವಾಗಿ ಕಾಣುವುದು ಹಿಂದುತ್ವ ಬಹುಸಂಖ್ಯಾವಾದ. ಈ ಬಹುಸಂಖ್ಯಾವಾದವೇ, ಯಾದವರು ಮತ್ತು ಜಾಟವರನ್ನು ಹೊರತುಪಡಿಸಿ, ಬಿಜೆಪಿ ಮತ್ತು ಹಿಂದೂ ಮತದಾರರ, ನಡುವೆ ಭಾವನಾತ್ಮಕವಾದ ಸೇತುವೆಯನ್ನು ನಿರ್ಮಿಸಿದೆ. ಉತ್ತರ ಪ್ರದೇಶದ ಹಿಂದೂ ಮತದಾರರಲ್ಲಿ ಒಂದು ಸಮಾನ ಪ್ರಜ್ಞೆಯನ್ನು ಗುರುತಿಸಬಹುದು ಎಂದು ಯೋಗೇಂದ್ರ ಯಾದವ್ ತಮ್ಮ ಸಮೀಕ್ಷೆಯಲ್ಲಿ ಹೇಳಿದ್ದುದನ್ನು ಸ್ಮರಿಸಬಹುದು. ಈ ಸಮಾನ ಪ್ರಜ್ಞೆಯ ಮೂಲವನ್ನು ಯಾದವ್ ಅವರು ಹಿಂದೂ-ಮುಸ್ಲಿಂ ವಿಭಜನೆಯಲ್ಲಿ ಗುರುತಿಸುತ್ತಾರೆ. ಈ ಪ್ರಜ್ಞೆಯ ಪ್ರಭಾವದಿಂದಲೇ ಜನರು ತಮ್ಮ ಭೌತಿಕ ಸಂಕಷ್ಟಗಳನ್ನೂ ಬದಿಗೆ ಸರಿಸಿ , ರಾಜ್ಯ ಸರ್ಕಾರದ ದುರಾಡಳಿತವನ್ನೂ ಲೆಕ್ಕಿಸದೆ “ ತಮ್ಮವರ” ಪರ ವಹಿಸಿ ಮತ ಚಲಾಯಿಸಿದ್ದಾರೆ.
ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಸಂಘರ್ಷ
ಉತ್ತರಪ್ರದೇಶ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ಏರ್ಪಟ್ಟಿದ್ದ ಸೈದ್ಧಾಂತಿಕ ಸಂಘರ್ಷ ಮೂಲತಃ ಯಾದವೇತರ ಹಿಂದುಳಿದ ವರ್ಗಗಳ ಮತದಾರರ ಸುತ್ತಲೂ ಹೆಣೆಯಲ್ಪಟ್ಟಿತ್ತು. ಉಳಿದ ಮತದಾರರಾದ ಮೇಲ್ಜಾತಿಗಳು, ಮುಸ್ಲಿಮರು, ಯಾದವರು ಮತ್ತು ಜಾಟರು ತಮ್ಮದೇ ಆದ ಪ್ರಭಾವಿ ವಲಯದಲ್ಲಿ ಗುರುತಿಸಿಕೊಂಡಿದ್ದರಿಂದ, ಹಿಂದುಳಿದ ವರ್ಗಗಳ ಮತದಾರರೇ ಚುನಾವಣೆಯಲ್ಲಿ ನಿರ್ಣಾಯಕರಾಗಿದ್ದರು. ಕೊಂಚ ಮಟ್ಟಿಗೆ ಜಾಟವರನ್ನು ಹೊರತುಪಡಿಸಿದ ದಲಿತ ಮತದಾರರೂ ನಿರ್ಣಾಯಕರಾಗಿದ್ದರು. ಈ ಮತದಾರ ವಲಯವನ್ನೇ ಅಖಿಲೇಶ್ ಯಾದವ್ ಹೆಚ್ಚಾಗಿ ಅವಲಂಬಿಸಿದ್ದರು. ಹಕ್ಕು ಮತ್ತು ಸಮಾನ ಪ್ರಾತಿನಿಧ್ಯ ಈ ಎರಡು ಮಂಡಲ್ ರಾಜಕಾರಣದ ಮೂಲ ಧಾತುಗಳನ್ನು ಅವಲಂಬಿಸಿದ್ದ ಅಖಿಲೇಶ್ ಯಾದವ್ ಹಿಂದುಳಿದ ವರ್ಗಗಳ ಕ್ರಾಂತಿಯ ಭರವಸೆಯನ್ನೂ ನೀಡಿದ್ದರು.
ಆದರೆ ಸಮಾಜವಾದಿ ಪಕ್ಷದ ಮಂಡಲ್ ರಾಜಕಾರಣದ ಪ್ರಭಾವಕ್ಕೆ ಹಿಂದುಳಿದ ವರ್ಗಗಳ ಮತದಾರರು ಬಲಿಯಾಗದಂತೆ ಬಿಜೆಪಿ ತಡೆಗಟ್ಟಿದ್ದಾದರೂ ಹೇಗೆ ? ಅಥವಾ ಹಿಂದುಳಿದ ವರ್ಗಗಳ ಮತದಾರರು ತಮ್ಮ ಮಂಡಲ್ ರಾಜಕಾರಣಕ್ಕೂ ವಿಮುಖರಾಗಿ, ಹಿಂದೂ ರಾಜಕೀಯ ಅಸ್ಮಿತೆಯನ್ನು ಅಪ್ಪಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಹಿಂದೂ ಬಹುಸಂಖ್ಯಾವಾದ ಯಶಸ್ವಿಯಾದದ್ದಾದರೂ ಹೇಗೆ ? ಇಲ್ಲಿ ಎರಡು ಅಂಶಗಳನ್ನು ಪರಿಶೀಲಿಸಬೇಕಾಗುತ್ತದೆ.
ಮೊದಲನೆಯದಾಗಿ, ಹಿಂದುಳಿದ ವರ್ಗಗಳಲ್ಲಿ ಭೌತಿಕ ಸುರಕ್ಷತೆಯ ಭರವಸೆಯನ್ನು ಉಂಟುಮಾಡಿದ್ದು. ಬುಲ್ಡೋಜರ್‌ಗಳು ಮತ್ತು ಎನ್ಕೌಂಟರ್‌ಗಳ ಸಂಕೇತಗಳ ಮೂಲಕ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿದ್ದು. ಹಿಂದೂ ಪ್ರಭಾವಳಿಯಲ್ಲಿರುವ ಹಿಂದುಳಿದ ವರ್ಗಗಳಲ್ಲಿ ತಾವು ಯಾದವ್ ಮತ್ತು ಮುಸ್ಲಿಂ ಕ್ರಿಮಿನಲ್‌ಗಳಿಂದ ಸುರಕ್ಷಿತವಾಗಿದ್ದೇವೆ ಎಂಬ ಭಾವನೆ ಮೂಡಿಸಿದ್ದು. ಕೋಮುವಾದಿ ಪೂರ್ವಗ್ರಹಗಳಿಗೆ ಸುರಕ್ಷತೆಯ ಹೊದಿಕೆಯನ್ನು ನೀಡುವ ಪ್ರಕ್ರಿಯೆ ಉತ್ತರಪ್ರದೇಶದಲ್ಲಿ ಪರಾಕಾಷ್ಠೆ ತಲುಪಿತ್ತು. ಮುಖ್ತಾರ್ ಅನ್ಸಾರಿ ಮತ್ತು ಅತೀಕ್ ಅಹಮದ್ ಅವರಂತಹ ಮುಸ್ಲಿಂ ಬಲಾಢ್ಯರನ್ನು ಮಾಫಿಯಾದೊಡನೆ ಬೆಸೆಯುವ ಪ್ರಕ್ರಿಯೆ ಒಂದೆಡೆಯಾದರೆ ಮತ್ತೊಂದೆಡೆ ಸಿಎಎ ವಿರೋಧಿ ಹೋರಾಟಗಾರರನ್ನು ದಂಗೆಕೋರರೊಂದಿಗೂ, ಲವ್ ಜಿಹಾದ್ ಆರೋಪಿಗಳು ಮತ್ತು ಗೋವು ಕಳ್ಳಸಾಗಾಣಿಕೆದಾರರನ್ನು ಸಮಾಜಘಾತುಕ ಶಕ್ತಿಗಳೊಂದಿಗೂ ಬೆಸೆಯುವುದರಲ್ಲಿ ಯೋಗಿ ಸರ್ಕಾರ ಯಶಸ್ವಿಯಾಗಿತ್ತು.
ಉದಾಹರಣೆಗೆ 2018-20ರ ಅವಧಿಯಲ್ಲಿ ಉತ್ತರಪ್ರದೇಶ ಸರ್ಕಾರ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿಸಲ್ಪಟ್ಟಿರುವ ಮೂರನೆ ಒಂದರಷ್ಟು ಆರೋಪಿಗಳು ಗೋವು ಕಳ್ಳಸಾಗಾಣಿಕೆಯ ಆರೋಪವನ್ನೇ ಎದುರಿಸುತ್ತಿದ್ದಾರೆ. ಈ ರೀತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಎಂದರೆ ಸಮಾಜದ ಸುರಕ್ಷತೆಯ ದೃಷ್ಟಿಯಿಂದ ಮುಸ್ಲಿಮರೇ ಅಪಾಯಕಾರಿ ಎಂದು ಬಿಂಬಿಸುವುದರಲ್ಲಿ, ಹಾಗೆಯೇ ಈ ಅಪಾಯವನ್ನು ಮಟ್ಟಹಾಕುವ ನಿಟ್ಟಿನಲ್ಲೂ ಸರ್ಕಾರ ಸಕ್ರಿಯವಾಗಿದೆ ಎಂದು ಪ್ರದರ್ಶಿಸುವಲ್ಲಿ ಯೋಗಿ ಸರ್ಕಾರ ಯಶಸ್ವಿಯಾಗಿದೆ. ಮೇಲ್ನೋಟಕ್ಕೆ ಹಿಂದೂ ಮುಸ್ಲಿಂ ಘರ್ಷಣೆಯು ಕಾಣುತ್ತಿಲ್ಲ ಎಂದು ಹಲವು ಪತ್ರಿಕಾ ವರದಿಗಾರರು ವರದಿ ಮಾಡಿದ್ದರೂ, ಆಂತರಿಕವಾಗಿ ಮತದಾರರ ನಡುವೆ ಆಳವಾಗಿ ಬೇರೂರಿರುವ ಕೋಮು ಭಾವನೆಗಳನ್ನು ಅಲ್ಲಗಳೆಯಲಾಗುವುದಿಲ್ಲ.
ಆರ್ಥಿಕ ಸುಭದ್ರತೆ
ಇಲ್ಲಿ ಗಮನಿಸಬೇಕಾದ ಎರಡನೆಯ ಅಂಶವೆಂದರೆ, ಹಿಂದುಳಿದ ಜಾತಿಗಳಿಗೆ ಒಂದು ರೀತಿಯ ಆರ್ಥಿಕ ಸುರಕ್ಷತೆಯನ್ನು, ಯಾವುದೇ ಜಾತಿ ಅಸ್ಮಿತೆಗಳನ್ನು ಸೂಚಿಸದೆಯೇ ಒದಗಿಸಿರುವುದು. ಆರ್ಥಿಕ ಸುರಕ್ಷತೆಯನ್ನು ಒದಗಿಸುವ ತಂತ್ರಗಾರಿಕೆಯು ರಾಜಕೀಯವಾಗಿ ನಿರ್ಣಾಯಕವಾಗುವಷ್ಟೇ ಅದನ್ನು ಜನರಿಗೆ ತಲುಪಿಸುವ ವಿಧಾನಗಳೂ ನಿರ್ಣಾಯಕವಾಗುತ್ತವೆ. ಉತ್ತರಪ್ರದೇಶದ ರಾಜಕಾರಣದಲ್ಲಿ ಮಂಡಲ್ ಮತ್ತು ದಲಿತ ರಾಜಕಾರಣವು ಹೆಚ್ಚು ಪ್ರಬಲವಾಗುತ್ತಿದ್ದರೂ ಮೂಲತಃ ಸಾರ್ವಜನಿಕ ಸವಲತ್ತುಗಳನ್ನು ಜನರಿಗೆ ತಲುಪುವಂತೆ ಮಾಡಲು ಜಾತಿ ಧೃವೀಕರಣವನ್ನು ಬಳಸಿಕೊಳ್ಳಲಾಗುತ್ತಿದೆ. ಬಿಜೆಪಿ ಸರ್ಕಾರ ಜಾರಿಗೊಳಿಸಿದ ಕಲ್ಯಾಣ ಯೋಜನೆಗಳು ಯೋಜನಾಬದ್ಧವಾಗಿದ್ದುದೇ ಅಲ್ಲದೆ ಸಾರ್ವತ್ರಿಕತೆಯನ್ನು ಪಡೆದುಕೊಂಡಿದ್ದವು. ನೇರ ನಗದು ವರ್ಗಾವಣೆಯ ಮಾರ್ಗವನ್ನು ಅನುಸರಿಸುವ ಮೂಲಕ ಮಧ್ಯವರ್ತಿಗಳ ಕಾಟದಿಂದ ಫಲಾನುಭವಿಗಳು ಮುಕ್ತರಾಗಿದ್ದರು. ಇದು ಸಹಜವಾಗಿಯೇ ಜಾತಿ ಅಸ್ಮಿತೆಗಳ ರಾಜಕೀಯ ಲಕ್ಷಣಗಳನ್ನು ಶಿಥಿಲವಾಗಿಸುತ್ತದೆ. ಈ ರೀತಿಯ ಜನೋಪಯೋಗಿ ರಾಜಕಾರಣ ಹಿಂದೂ ಬಹುಸಂಖ್ಯಾವಾದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವುದರಿಂದ ದಲಿತರು ಮತ್ತು ಹಿಂದುಳಿದ ಜಾತಿಗಳು ಕ್ರಮೇಣ ರಾಜಕೀಯವಾಗಿ ಹಿಂದೂಗಳಾಗಿಯೇ ಗುರುತಿಸಿಕೊಳ್ಳುವಂತಾಗುತ್ತದೆ.
ಈ ಹಿಂದೂ ಬಹುಸಂಖ್ಯಾವಾದವನ್ನು ಸೋಲಿಸುವಲ್ಲಿ ಸಮಾಜವಾದಿ ಪಕ್ಷದ ಮಂಡಲ್ ತಂತ್ರಗಾರಿಕೆ ಏಕೆ ವಿಫಲವಾಯಿತು ಎಂದೂ ಯೋಚಿಸಬೇಕಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಒಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಂಡಲ್ ರಾಜಕಾರಣವನ್ನು ಪುನರುಜ್ಜೀವನಗೊಳಿಸುವುದು ಬೃಹತ್ ಸವಾಲಾಗಿ ಪರಿಣಮಿಸುತ್ತದೆ. ಚುನಾವಣೆಗಳಿಗೂ ಮುನ್ನ ಸಮಾಜವಾದಿ ಪಕ್ಷವು ಬಿಜೆಪಿಯ ಪ್ರಮುಖ ಹಿಂದುಳಿದ ಜಾತಿಯ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ದಾರಾ ಸಿಂಗ್ ಚೌಹಾಣ್ ಮುಂತಾದ ನಾಯಕರನ್ನು ತನ್ನೆಡೆಗೆ ಸೆಳೆಯಲು ಯಶಸ್ವಿಯಾಗಿತ್ತು. ಯೋಗಿ ಆಡಳಿತದಲ್ಲಿ ಹಿಂದುಳಿದ ಜಾತಿಗಳು ಅಸಮಧಾನವನ್ನು ಹೊಂದಿವೆ ಎಂದು ನಿರೂಪಿಸುವ ತಂತ್ರ ಇದಾಗಿತ್ತು, ತನ್ಮೂಲಕ ಹಿಂದುಳಿದ ಜಾತಿಗಳ ಹಕ್ಕೊತ್ತಾಯಗಳನ್ನೇ ಚುನಾವಣೆಯ ಕೇಂದ್ರ ವಸ್ತುವನ್ನಾಗಿಸಲು ಸಮಾಜವಾದಿ ಪಕ್ಷ ಪ್ರಯತ್ನಿಸಿತ್ತು. ಆದರೆ ಈ ಬಹುತೇಕ ನಾಯಕರು ತಮ್ಮ ಸಮುದಾಯದ ಮೇಲೆ ಹೆಚ್ಚಿನ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಈ ನಾಯಕರ ಅವಕಾಶವಾದಿತನ ಮತ್ತು ವ್ಯಾವಹಾರಿಕ ಧೋರಣೆಯ ಪರಿಣಾಮ, ಸೈದ್ಧಾಂತಿಕ ನೆಲೆಗಳು ಲೆಕ್ಕಕ್ಕೆ ಬರದಂತಾಯಿತು. ಸಮಾಜವಾದಿ ಪಕ್ಷದ ಈ ಪ್ರಯತ್ನಗಳು ಬಹಳ ತಡವಾಗಿ ನಡೆಯಿತು ಎನ್ನುವುದನ್ನೂ ಗಮನಿಸಬೇಕು.
ಒಂದು ಪರ್ಯಾಯದ ರಚನೆಯತ್ತ
ಮಂಡಲ್ ರಾಜಕಾರಣವನ್ನು ಪುನಶ್ಚೇತನಗೊಳಿಸಿ, ಪುನರುಜ್ಜೀವನಗೊಳಿಸುವುದೆಂದರೆ ಅದಕ್ಕೆ ದೀರ್ಘ ಕಾಲಿಕ ಸಂಘಟನಾತ್ಮಕ ಹಾಗೂ ಸೈದ್ಧಾಂತಿಕ ಪುನರ್ ನಿರ್ಮಾಣದ ಅವಶ್ಯಕತೆ ಇದೆ. ಈ ಮಾರ್ಗದಲ್ಲೇ ಹಿಂದುತ್ವದ ನಮ್ಯ ಸ್ವರೂಪವನ್ನು ಎದುರಿಸಲು ಸಾಧ್ಯವಾದೀತು. ಬಿಜೆಪಿ ತನ್ನ ಹಿಂದೂ ಬಹುಸಂಖ್ಯಾವಾದದ ಪ್ರಚಾರವನ್ನು ವರ್ಷದುದ್ದಕ್ಕೂ ನಡೆಸುತ್ತಿರುತ್ತದೆ. ಪ್ರತಿ ವರ್ಷವೂ ನವೀಕರಿಸುತ್ತಿರುತ್ತದೆ. ಇದಕ್ಕೆ ಪೂರಕವಾದ ಸಂಘಟನಾತ್ಮಕ ಶಕ್ತಿಯೊಂದಿಗೇ ಸ್ನೇಹಪರ ಮಾಧ್ಯಮಗಳೂ ಸಹ ಇರುತ್ತವೆ. ಕೇವಲ ಮೂರು ತಿಂಗಳ ಕಾಲ ಬದುಕುಳಿಯುವ ಯಾವುದೇ ಪರ್ಯಾಯ ಸೈದ್ಧಾಂತಿಕ ನೆಲೆಗಳು ಈ ಸವಾಲನ್ನು ಎದುರಿಸಲು ಸಾಧ್ಯವಾಗುವುದಿಲ್ಲ.
ಯೋಗಿ ಆದಿತ್ಯನಾಥ್ ಕಳೆದ ಚುನಾವಣೆಗಳನ್ನು 80:20 ಅನುಪಾತದಲ್ಲಿ ಎದುರಿಸಿ ಗೆಲುವು ಸಾಧಿಸಿದ್ದಾರೆ. ಇದು ನೇರವಾಗಿಯೇ ಹಿಂದೂ:ಮುಸ್ಲಿಂ ರಾಜಕಾರಣವನ್ನು ಪ್ರತಿನಿಧಿಸುತ್ತದೆ. ಹಿಂದಿರುಗಿ ನೋಡಿದಾಗ ಈ ತಾತ್ವಿಕ ಚೌಕಟ್ಟು ವಾಸ್ತವ ಎನ್ನುವುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಮುಸಲ್ಮಾನರು ಎಂದಿನಂತೆ ಸಮಾಜವಾದಿ ಪಕ್ಷದ ಬೆನ್ನೆಲುಬಾಗಿದ್ದರು. ಆದರೆ ಬಿಜೆಪಿ ಬಹುಸಂಖ್ಯೆಯ ಹಿಂದೂಗಳನ್ನು ತನ್ನೆಡೆಗೆ ಸೆಳೆದಿತ್ತು. ಕಳೆದ ಮೂರು ಚುನಾವಣೆಗಳಿಂದಲೂ ಬಿಜೆಪಿ ರಚಿಸುತ್ತಿರುವ ಹಿಂದೂ ರಾಜಕೀಯ ಬಹುಸಂಖ್ಯೆ ಈ ಚುನಾವಣೆಗಳ ಮೂಲಕ ದೀರ್ಘ ಕಾಲ ಉಳಿಯುವ ಒಂದು ವಿದ್ಯಮಾನವಾಗಿ ಗೋಚರಿಸಿದೆ. ಗುಜರಾತ್‌ನಂತೆಯೇ ಉತ್ತರಪ್ರದೇಶವೂ ಈಗ ಬಿಜೆಪಿ ಪ್ರಭಾವಕ್ಕೊಳಗಾದ ರಾಜ್ಯವಾಗಿದೆ. ಇಲ್ಲಿನ ರಾಜಕೀಯ ಸಾಮಾನ್ಯ ಪ್ರಜ್ಞೆಯಲ್ಲಿ ಹಿಂದೂ ಬಹುಸಂಖ್ಯಾವಾದ ಆಳವಾಗಿ ಬೇರೂರಿದೆ.
(ಲೇಖಕರು ರಾಜಕೀಯ ಸಂಶೋಧಕ ಹಾಗೂ ಅಂಕಣಕಾರ)