ಗಾಂಧಿನಗರ: ಅಹಮದಾಬಾದ್ನಲ್ಲಿ 2008ರಲ್ಲಿ ನಡೆದಿದ್ದ ಸರಣಿ ಬಾಂಬ್ ಸ್ಫೋಟ ಪ್ರಕರಣದ ತೀರ್ಪಿನ ಶಿಕ್ಷೆ ಪ್ರಕಟವಾಗಿದ್ದು, 49 ಅಪರಾಧಿಗಳ ಪೈಕಿ 38 ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದ್ದು, 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಗುಜರಾತ್ನ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ.ಆರ್ ಪಟೇಲ್ ಇಂದು (ಫೆ.18) ಆದೇಶ ನೀಡಿದ್ದಾರೆ.
ಅಪರಾಧಿಗಳು ಅಹಮದಾಬಾದ್, ಭೋಪಾಲ್, ಗಯಾ, ಬೆಂಗಳೂರು ಮತ್ತು ದೇಶದ ಇತರ ಭಾಗಗಳಲ್ಲಿರುವ ಜೈಲುಗಳಿಂದಲೇ ವೀಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ಭಾರತೀಯ ದಂಡ ಸಂಹಿತೆ, ಯುಎಪಿಎ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಸಾರ್ವಜನಿಕ ಆಸ್ತಿ ಹಾನಿ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿಯೂ ಒಬ್ಬ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ.
ಜುಲೈ 26, 2008 ರಂದು 70 ನಿಮಿಷಗಳ ಅವಧಿಯಲ್ಲಿ ಅಹಮದಾಬಾದ್ನ ವಿವಿಧ ಪ್ರದೇಶಗಳಲ್ಲಿ 20 ಬಾಂಬ್ಗಳು ಸ್ಫೋಟಗೊಂಡಿದ್ದವು. ಅದರಲ್ಲಿ 56 ಜನರು ಮೃತರಾಗಿದ್ದರೆ, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 77ಕ್ಕೂ ಅಧಿಕ ಶಂಕಿತರನ್ನು ವಿಚಾರಣೆಗೊಳಪಡಿಸಲಾಗಿತ್ತು. 2021ರ ಸೆಪ್ಟೆಂಬರ್ ತಿಂಗಳಲ್ಲಿ ವಿಚಾರಣೆ ಪೂರ್ಣಗೊಂಡಿತ್ತು. ಸುಮಾರು 13 ವರ್ಷಗಳ ಕಾಲ ಸುದೀರ್ಘ ವಿಚಾರಣೆ ನಡೆದಿದ್ದು, 49 ಮಂದಿ ತಪ್ಪಿತಸ್ಥರು ಎಂದು ನ್ಯಾಯಾಲಯವು ಫೆಬ್ರವರಿ 8, 2022 ರಂದು ಘೋಷಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 547 ಚಾರ್ಜ್ಶೀಟ್ ಗಳು ಸಲ್ಲಿಕೆಯಾಗಿದ್ದವು. 1,163 ಸಾಕ್ಷ್ಯಗಳ ಹೇಳಿಕೆ ಪಡೆದುಕೊಳ್ಳಲಾಗಿತ್ತು.
ಸಫ್ದರ್ ನಗೋರಿ, ಜಾವೇದ್ ಅಹ್ಮದ್, ಅತಿಕುರ್ ರೆಹಮಾನ್ ಶಿಕ್ಷೆಗೊಳಗಾದ ಉಗ್ರರ ಪಟ್ಟಿಯಲ್ಲಿದ್ದಾರೆ.
ಖುಲಾಸೆಗೊಂಡಿದ್ದ 28 ಆರೋಪಿಗಳು
ಪ್ರಕರಣದ 77 ಆರೋಪಿಗಳ ಪೈಕಿ 28 ಮಂದಿಯನ್ನು ಫೆಬ್ರವರಿ 8ರಂದು ನ್ಯಾಯಾಲಯ ಖುಲಾಸೆಗೊಳಿಸಿತ್ತು. ಉಳಿದ 49 ಜನರನ್ನು ಅಪರಾಧಿಗಳಿಗೆ ಇಂದು ಶಿಕ್ಷೆಯ ಪ್ರಮಾಣ ಘೋಷಿಸಲಾಗಿದೆ. ಗುಜರಾತ್ ಪೊಲೀಸರು ಈ ಹಿಂದೆ 85 ಜನರನ್ನು ಬಂಧಿಸಿದ್ದರು. ಆದರೆ, 78 ಜನರ ವಿರುದ್ಧ ಮಾತ್ರ ವಿಚಾರಣೆ ಪ್ರಾರಂಭವಾಗಿತ್ತು.
ಆರೋಪಿಗಳ ಮೇಲೆ ಕೊಲೆ, ಕ್ರಿಮಿನಲ್ ಪಿತೂರಿಯ ಆರೋಪಗಳನ್ನು ಹೊರಿಸಲಾಗಿತ್ತು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. 2013ರಲ್ಲಿ ಕೆಲವು ಆರೋಪಿಗಳು ವಿಚಾರಣೆಯ ಸಮಯದಲ್ಲಿ ಜೈಲಿನಲ್ಲಿ 213 ಅಡಿ ಉದ್ದದ ಸುರಂಗವನ್ನು ಕೊರೆದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು.
ಸ್ಫೋಟಗಳಲ್ಲಿ ಭಯೋತ್ಪಾದಕ ಸಂಘಟನೆ ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ)ಯ ಬಣವಾದ ಇಂಡಿಯನ್ ಮುಜಾಹಿದೀನ್(ಐಎಂ) ಸದಸ್ಯರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದರು. 2002ರ ಗೋಧ್ರಾ ನಂತರದ ಗಲಭೆಗೆ ಪ್ರತೀಕಾರವಾಗಿ ಐಎಂ ಭಯೋತ್ಪಾದಕರು ಸ್ಫೋಟಕ್ಕೆ ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದರು.