ಗದಗ: ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದಲ್ಲಿ ಕಳೆದ ಆರು ವರ್ಷಗಳ ಹಿಂದೆ ಪ್ರೀತಿಸಿ ಅಂತರಜಾತಿ ಮದುವೆ ಮಾಡಿಕೊಂಡಿದ್ದ ರಮೇಶ್ ಮಾದರ ಹಾಗೂ ಗಂಗಮ್ಮ ರಾಠೋಡ ಎನ್ನುವವರನ್ನು ನಡು ರಸ್ತೆಯಲ್ಲಿಯೇ ಭೀಕರವಾಗಿ ದೊಣ್ಣೆಯಿಂದ ಥಳಿಸಿ ಚಾಕು ಚುಚ್ಚಿ ಕೊಲೆ ಮಾಡಿದ್ದ ಗಂಗಮ್ಮಳ ನಾಲ್ವರು ಕುಟುಂಬಸ್ಥರಿಗೆ ಕೋರ್ಟ್ನಿಂದ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಮರ್ಯಾದೆ ಹತ್ಯೆ ಸಾಬೀತಾದ ಹಿನ್ನೆಲೆಯಲ್ಲಿ ನಾಲ್ವರು ಅಪರಾಧಿಗಳಿಗೆ ಜಿಲ್ಲಾ ನ್ಯಾಯಾಲಯದಿಂದ ಮರಣ ದಂಡನೆ ಶಿಕ್ಷೆ ವಿಧಿಸಿದ್ದಾರೆ. ಗದಗ ಜಿಲ್ಲಾ & ಸತ್ರ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ. ಪ್ರೀತಿಸಿ ಮದುವೆಯಾಗಿದ್ದ ಜೋಡಿಯನ್ನು ನಡುಬೀದಿಯಲ್ಲಿಯೇ ಚಾಕು, ಚೂರಿ, ಕಲ್ಲು, ದೊಣ್ಣೆಗಳಿಂದ ಹಲ್ಲೆ ಮಾಡಿ ಹತ್ಯೆಗೈದಿದ್ದರು.
ಈ ಘಟನೆ ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿತ್ತು. ಜೊತೆಗೆ, ಮರ್ಯಾದೆಗೇಡು ಹತ್ಯೆಯಿಂದ ಪ್ರೀತಿ ಮಾಡುವ ಎಲ್ಲ ಜೋಡಿಗಳಿಗೂ ನಡುಕ ಉಂಟಾಗಿತ್ತು. ಕೊಲೆಯ ನಂತರವೂ ಗ್ರಾಮದಲ್ಲಿ ನಿರ್ಭೀತಿಯಿಂದ ತಾವು ಮಾಡಿದ್ದೇ ಸರಿ ಎಂಬಂತೆ ಓಡಾಡುತ್ತಿದ್ದ ಈ ನಾಲ್ವರು ಆರೋಪಿಗಳು ಇದೀಗ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ವಿರುದ್ದ ಪ್ರತಿಭಟನೆ: ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಸಾಲ ಮನ್ನ
ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಲಕ್ಕಲಕಟ್ಟಿ ಗ್ರಾಮದ ರಮೇಶ ಮಾದರ ಮತ್ತು ಗಂಗಮ್ಮ ರಾಠೋಡ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇಬ್ಬರೂ ಮನೆಯವರನ್ನು ವಿರೋಧಿಸಿ ಅಂತರಜಾತಿ ಮದುವೆಯಾಗಿ ತಮ್ಮ ಪಾಡಿಗೆ ತಾವು ಜೀವನ ಕಟ್ಟಿಕೊಳ್ಳುತ್ತಿದ್ದರು. ಇದನ್ನು ನೋಡಿ ಸಹಿಸಿಕೊಳ್ಳದ ಗಂಗಮ್ಮ ಅವರ ಸಂಬಂಧಿಕರು ಈ ಇಬ್ಬರೂ ಪ್ರೇಮಿಗಳನ್ನು 2019ರ ನವೆಂಬರ್ 6ರಂದು ನಡು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಎಲ್ಲರೂ ಗುಂಪು ಸೇರಿಕೊಂಡು ಭೀಕರವಾಗಿ ಥಳಿಸಿ ಕೊಲೆ ಹತ್ಯೆ ಮಾಡಿದ್ದು, ಈ ಸಂಬಂಧಪಟ್ಟ ವಿಡಿಯೋಗಳು ಕೂಡ ವೈರಲ್ ಆಗಿದ್ದವು.
ಈ ಘಟನೆಗೆ ಸಂಬಂಧಿಸಿದಂತೆ ರಮೇಶ್ ಮಾದರ ಅವರ ಕುಟುಂಬಸ್ಥರು ನೀಡಿದ ದೂರಿನ ಅನ್ವಯ ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐಪಿಸಿ 427, 449, 302, 506(2) ಅಡಿಯಲ್ಲಿ ನ್ಯಾಯಾಲಕ್ಕೆ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಚಾರ್ಜ್ಶೀಟ್ ವಿಚಾರಣೆ ಮಾಡಿದ್ದ ಗದಗ ಜಿಲ್ಲಾ ಸತ್ರ ನ್ಯಾಯಾಲಯವು ನಾಲ್ವರು ಆರೋಪಿಗಳು ಭೀಕರವಾಗಿ ಕೊಲೆ ಮಾಡಿರುವುದು ಹಾಗೂ ಸಮಾಜದಲ್ಲಿ ಭಯದ ವಾತಾವರಣ ನಿರ್ಮಿಸಿದ್ದರಿಂದ ಶಿವಪ್ಪ ರಾಠೋಡ, ರವಿಕುಮಾರ ರಾಠೋಡ, ರಮೇಶ ರಾಠೋಡ ಹಾಗೂ ಸಾರಿಗೆ ಇಲಾಖೆ ಚಾಲಕ ಪರಶುರಾಮ ರಾಠೋಡ ಎಂಬ ನಾಲ್ವರು ಆರೋಪಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿದೆ.
ಇದನ್ನೂ ನೋಡಿ: ಹಿಂದೂ ರಾಷ್ಟ್ರಕ್ಕೆ ಸಂವಿಧಾನ | ಆರ್ಎಸ್ಎಸ್ನ ಅಪಾಯಕಾರಿ ನಡೆ Janashakthi Media