ಹಾವೇರಿ: ಗೋದಾಮು ನಿರ್ಮಾಣ ಕಾಮಗಾರಿಯ ಬಿಲ್ ಮಂಜೂರು ಮಾಡಲು ಲಂಚ ಪಡೆಯುತ್ತಿದ್ದ ಆರೋಪದಡಿ ಸವಣೂರು ತಾಲ್ಲೂಕಿನ ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ದಾವಲಮಲಿಕ್ ಇಮಾಮಸಾಬ್ ಮುರುಡಿ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
‘ಹುಬ್ಬಳ್ಳಿ ಹೊಸ ಬಸ್ ನಿಲ್ದಾಣದ ಬಳಿಯ ಹೋಟೆಲ್‌ನಲ್ಲಿ ₹50 ಸಾವಿರ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿಯೇ ದಾಳಿ ಮಾಡಿ ಪಿಡಿಒ ದಾವಲಮಲಿಕ್‌ನನ್ನು ಬಂಧಿಸಲಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದರು.
ಇದನ್ನೂ ಓದಿ: ಭಾರತ-ಪಾಕಿಸ್ತಾನ ಮಿಲಿಟರಿ ಕ್ರಮಗಳ ನಿಲುಗಡೆ: ಯುಎಸ್ ಪಾತ್ರದ ಬಗ್ಗೆ ಇನ್ನೂ ಮೌನ
‘ತೆಗ್ಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಕ್ಕೀರನಂದಿಹಳ್ಳಿ ಗ್ರಾಮದಲ್ಲಿ ಗೋದಾಮು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು. ಕಾಮಗಾರಿ ಮೊತ್ತ ₹ 1.60 ಲಕ್ಷವನ್ನು ಮಂಜೂರು ಮಾಡುವಂತೆ ಗುತ್ತಿಗೆದಾರರು, ಪಿಡಿಒ ಅವರನ್ನು ಕೋರಿದ್ದರು. ಬಿಲ್ ಮಂಜೂರು ಮಾಡಲು ಪಿಡಿಒ ಅವರು ₹ 80 ಸಾವಿರ ಲಂಚಕ್ಕೆ ಬೇಡಿಕೆ ಇರಿಸಿದ್ದರು. ನಂತರ, ಚೌಕಾಶಿ ಮಾಡಿ ₹ 50 ಸಾವಿರ ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು. ನೊಂದ ಗುತ್ತಿಗೆದಾರ, ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.’
‘ಗುತ್ತಿಗೆದಾರರನ್ನು ಹುಬ್ಬಳ್ಳಿಗೆ ಕರೆಸಿಕೊಂಡಿದ್ದ ಪಿಡಿಒ, ₹ 50 ಸಾವಿರ ಪಡೆಯುತ್ತಿದ್ದರು. ಇದೇ ಸಂದರ್ಭದಲ್ಲಿ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯ ಆಸ್ತಿ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ’ ಎಂದು ಹೇಳಿದರು.
ಇದನ್ನೂ ನೋಡಿ: 25 ಕೋಟಿ ಜನಸಂಖ್ಯೆಯನ್ನು ಬಡತನದಿಂದ ಹೊರ ತಂದಿರುವುದಾಗಿ ಹೇಳುತ್ತಿರುವ ಮೋದಿ ಸರ್ಕಾರ ? ವಾಸ್ತವವೇನು?