ನವದೆಹಲಿ: ಪರಿಷ್ಕರಿಸಲಾದ ಡಿಜಿಟಲ್ ವೈಯಕ್ತಿಕ ಡೇಟಾ ರಕ್ಷಣಾ ಮಸೂದೆಗೆ (ಡಿಪಿಡಿಪಿ) ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಮಸೂದೆಯ ನಿಯಮಗಳ ಉಲ್ಲಂಘನೆಯ ಪ್ರತಿ ಪ್ರಕರಣಕ್ಕೆ 250 ಕೋಟಿ ರೂಪಾಯಿ ದಂಡ ವಿಧಿಸುವ ಕಠಿಣ ನಿಯಮವನ್ನು ಅದು ಒಳಗೊಂಡಿದೆ. ಈ ಮಸೂದೆಯು ಜುಲೈ 20ಕ್ಕೆ ಆರಂಭವಾಗುವ ಮುಂಗಾರು ಅಧಿವೇಶನದಲ್ಲಿ ಮಂಡನೆ ಆಗಲಿದೆ.
ಮಸೂದೆಯ ಆರಂಭಿಕ ಕರಡನ್ನು ಕಳೆದ ವರ್ಷ ನವೆಂಬರ್ನಲ್ಲಿ ಮಂಡಿಸಿ ಸಾರ್ವಜನಿಕರು ಮತ್ತು ಸಂಬಂಧಿಸಿದವರಿಂದ ಪಡೆದ ಸಲಹೆಗಳನ್ನು ಆಧರಿಸಿ ಎರಡನೇ ಕರಡನ್ನು ರಚಿಸಿ ಅಂತರ್ ಸಚಿವಾಲಯದ ಚರ್ಚೆಗಳು ನಡೆದಿವೆ. ಈ ಮಸೂದೆಯು ಭಾರತದಲ್ಲಿ ಡಿಜಿಟಲ್ ವೈಯಕ್ತಿಕ ದತ್ತಾಂಶದ ಸಂಸ್ಕರಣೆ ಮೇಲೆ ಅಧಿಕಾರ ವನ್ನು ಹೊಂದಿರುತ್ತದೆ. ಆನ್‌ಲೈನ್ ಅಥವಾ ಆಫ್ ಲೈನ್ನಲ್ಲಿ ಸಂಗ್ರಹಿಸಿ ನಂತರ ಡಿಜಿಟಲೀಕರಿಸಿದ ಡೇಟಾವನ್ನು ಅದು ಒಳಗೊಂಡಿರು ತ್ತದೆ. ಸರಕುಗಳು ಮತ್ತು ಸೇವೆಗಳು ಅಥವಾ ಭಾರತದಲ್ಲಿ ವ್ಯಕ್ತಿಗಳ ವಿವರ (ಪ್ರೊಫೈಲಿಂಗ್) ಒಳಗೊಂಡಿದ್ದರೆ ಭಾರತದ ಹೊರಗೆ ಸಂಸ್ಕರಿಸಿದ ಡೇಟಾಕ್ಕೆ ಕೂಡ ಇದು ಅನ್ವಯವಾಗುತ್ತದೆ.
ಈ ಮಸೂದೆ ಪ್ರಕಾರ, ವೈಯಕ್ತಿಕ ಡೇಟಾಗಳನ್ನು ಸಂಬಂಧಿಸಿದ ವ್ಯಕ್ತಿಗಳ ಸಮ್ಮತಿಯೊಂದಿಗೆ ಕಾನೂನುಬದ್ಧ ಉದ್ದೇಶಗಳಿಗೆ ಮಾತ್ರವೇ ಸಂಸ್ಕರಿಸಬಹುದಾಗಿದೆ. ಕೆಲವು ಪ್ರಕರಣಗಳಲ್ಲಿ ಸಮ್ಮತಿಯು ಪರೋಕ್ಷವಾಗಿ ಒಳಗೊಂಡಿರ ಬಹುದಾಗಿದೆ. ಡೇಟಾ ಸಂರಕ್ಷಕರು ಡೇಟಾದ ನಿಖರತೆಯನ್ನು ಮತ್ತು ದತ್ತಾಂಶದ ಭದ್ರತೆಯನ್ನು ಖಾತರಿಪಡಿಸಬೇಕು. ಒಮ್ಮೆ ಉದ್ದೇಶ ಈಡೇರಿದ ಮೇಲೆ ಅದನ್ನು ಅಳಿಸುವಂತೆ (ಡಿಲೀಟ್) ಮಸೂದೆ ತಿಳಿಸಿದೆ. ಈ ಮಸೂದೆಯು ವ್ಯಕ್ತಿಗಳಿಗೆ ಕೆಲವು ನಿರ್ದಿಷ್ಟ ಹಕ್ಕುಗಳನ್ನು ಒದಗಿಸಿದೆ. ಮಾಹಿತಿ ಪಡೆಯುವ ಹಕ್ಕು, ತಿದ್ದುಪಡಿ ಮತ್ತು ಅಳಿಸಿಹಾಕಲು ಮನವಿ ಹಾಗೂ ಸಮಸ್ಯೆ ಪರಿಹಾರಕ್ಕೆ ಕೋರಿಕೆ ಮೊದಲಾದವು ಅದರಲ್ಲಿ ಸೇರಿವೆ ಎಂದು ತಿಳಿಸಿದೆ.
ಡಿಜಿಟಲ್ ನಾಗರಿಕರು : ದೇಶದ ನಾಗರಿಕರೀಗ ಡಿಜಿಟಲ್ ನಾಗರಿಕರಾಗಿದ್ದಾರೆ. ಬಹುತೇಕ ಪಾವತಿಗಳು ಡಿಜಿಟಲ್ ಮೂಲಕ ಆಗುತ್ತಿವೆ. 136 ಕೋಟಿ ಪ್ರಜೆಗಳಿರುವ ನಮ್ಮ ದೇಶದಲ್ಲಿ 120 ಕೋಟಿ ಮಂದಿ ಮೊಬೈಲ್ ಹಾಗೂ 60 ಕೋಟಿ ಮಂದಿ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ. ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳು ಸಾಮಾನ್ಯ ಎನಿಸಿವೆ. ಗ್ರಾಮೀಣ ಜನತೆ ಕೂಡ ಆನ್‌ಲೈನ್ ಪಾವತಿಗಳನ್ನು ಕಲಿತಿದ್ದಾರೆ. 2022ರಲ್ಲಿ 90 ಕೋಟಿ ಡಿಜಿಟಲ್ ಪಾವತಿಗಳು ಆಗಿವೆ. ಆದರೆ ಬಳಕೆ ಹೆಚ್ಚಾದಂತೆ, ದೇಶದ ಪ್ರಜೆಗಳ ವೈಯಕ್ತಿಕ ಡೇಟಾದ ದುರ್ಬಳಕೆ ಕೂಡ ಹೆಚ್ಚಿದೆ. ಕೆಲವು ಖಾಸಗಿ ಕಂಪನಿಗಳು ತಾವಾಗಿಯೇ ಡೇಟಾವನ್ನು ಗ್ರಾಹಕರನ್ನು ಸೆಳೆಯಲು ಬಳಸುತ್ತಿವೆ; ಇನ್ನು ಕೆಲವು ಈ ಮಾಹಿತಿಗಳನ್ನು ಮಾರಿಕೊಳ್ಳುತ್ತಿವೆ. ಇದ್ಯಾವುದನ್ನೂ ಕಾನೂನಾತ್ಮಕವಾಗಿ ಪ್ರಶ್ನಿಸಲು ಅಗತ್ಯವಾದ ಕಾಯಿದೆ ಇದುವರೆಗೆ ಇರಲಿಲ್ಲ. ಹಾಗಾಗಿ ಇಂಥದೊಂದು ಸಮಗ್ರ ಡೇಟಾ ಸಂರಕ್ಷಣೆ ಕಾಯಿದೆ ಅತ್ಯಗತ್ಯವಾಗಿದೆ.
2019ರಲ್ಲೇ ಡೇಟಾ ಸುರಕ್ಷತಾ ಮಸೂದೆಯನ್ನು ಸರ್ಕಾರ ಮಂಡಿಸಿತ್ತು. ಆದರೆ, ಕಳೆದ ಆಗಸ್ಟ್ನಲ್ಲಿ ಸುಪ್ರೀಂಕೋರ್ಟ್, ಖಾಸಗಿತನ ಕೂಡ ಮೂಲಭೂತ ಹಕ್ಕು ಎಂದು ಹೇಳಿದ್ದರಿಂದ ಈ ಮಸೂದೆಯನ್ನು ಸರ್ಕಾರ ಹಿಂಪಡೆಯಿತು. ನಂತರ ಅದನ್ನು ಪರಿಷ್ಕರಿಸಿ ನವೆಂಬರ್ನಲ್ಲಿ ಸಾರ್ವಜನಿಕರಿಂದ ಸಲಹೆ, ಆಕ್ಷೇಪ ಆಹ್ವಾನಿಸಿತು.