ಬಿಎಂ. ಹನೀಫ್, ಹಿರಿಯ ಪತ್ರಕರ್ತರು
ಮೈಸೂರಿಗೆ ವೈಯಕ್ತಿಕ ಕೆಲಸದ ಮೇಲೆ ಹೋದವನು ದಸರಾ ಪ್ರಧಾನ ಕವಿಗೋಷ್ಠಿಗೆ ಹಾಜರಾದೆ. ಹಲವು ವಿವಾದಗಳಿಂದ ವಾರದ ಹಿಂದೆಯೇ ಸುದ್ದಿಯಾಗಿದ್ದ ಕವಿಗೋಷ್ಠಿಯಲ್ಲಿ ಹಲವು ಅಚ್ಚರಿಗಳು ಕಾಣಿಸಿದವು.
- ಕವಿಗೋಷ್ಠಿಯ ಆರಂಭದಲ್ಲಿ ಕವಿಗಳೆಲ್ಲ ಕೆಳಗಿದ್ದರು. ಉದ್ಘಾಟಕ ಚಂದ್ರಶೇಖರ ಕಂಬಾರ ಮತ್ತು ಅಧ್ಯಕ್ಷತೆ ವಹಿಸಿದ್ದ ಎಚ್.ಎಸ್.ಶಿವಪ್ರಕಾಶ್ ಮಾತ್ರ ವೇದಿಕೆಯಲ್ಲಿ ಇದ್ದರು. ವೇದಿಕೆಯ ತುಂಬ ಆ ಸಮಿತಿ, ಈ ಸಮಿತಿಗಳ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿಗಳೇ ಆಸನಗಳನ್ನು ಅಲಂಕರಿಸಿದ್ದರು. ಸನ್ಮಾನ, ಹಾರ ತುರಾಯಿಗಳ ಸಂಭ್ರಮ 25 ನಿಮಿಷಗಳ ಕಾಲ ನಡೆಯಿತು.
- ಮೊದಲು ಸ್ವಾಗತ ಭಾಷಣ, ಬಳಿಕ ಉದ್ಘಾಟನಾ ಭಾಷಣ, ಆಮೇಲೆ ಸಚಿವರ ಎರಡು ಮಾತು, ತಕ್ಷಣ ಕವಿಗೋಷ್ಠಿಯ ಅಧ್ಯಕ್ಷ ಭಾಷಣ. ನಡುನಡುವೆ ಹಾಡುಗಳು, ಕೊನೆಗೆ ವಂದನಾರ್ಪಣೆ! ಕೆಳಗೆ ಕುಳಿತ ಕವಿಗಳು ಕಕ್ಕಾಬಿಕ್ಕಿ!
ಸಚಿವರು “ನನಗೆ ತಕ್ಷಣ ಹೋಗಬೇಕಿದೆ. ಆದರೆ ಅಧ್ಯಕ್ಷರ ಭಾಷಣ ಕೇಳಬೇಕೆಂದು ಆಸೆ” ಎಂದರಂತೆ. ಅದಕ್ಕೆ ಶಿವಪ್ರಕಾಶ್ ಅವರು ಕವಿಗಳು ಇನ್ನೂ ವೇದಿಕೆ ಏರುವ ಮುನ್ನವೇ ತಮ್ಮ ಅಧ್ಯಕ್ಷ ಭಾಷಣ ಮುಗಿಸಿದರು! ವಂದನಾರ್ಪಣೆ ಮುಗಿದ ಬಳಿಕ ಫಸ್ಟ್ ಬ್ಯಾಚ್ ಹತ್ತು ಕವಿಗಳನ್ನು ವೇದಿಕೆಗೆ ಕರೆಯಲಾಯಿತು. ವೇದಿಕೆಯಿಂದ ಕೆಳಗಿಳಿದ ಅಧ್ಯಕ್ಷರು ಮತ್ತು ಉದ್ಘಾಟಕರು ಪ್ರೇಕ್ಷಕರ ಜೊತೆ ಕುಳಿತುಕೊಂಡರು! ಕವಿಗಳು ಒಬ್ಬೊಬ್ಬರಾಗಿ ಕವಿತೆ ಓದಿದರು. ನಾಲ್ಕೈದು ಅಧಿಕಾರಿಗಳೂ ಕವಿಗಳ ಜೊತೆಗೆ ವೇದಿಕೆಯ ಕುರ್ಚಿಗಳನ್ನು ಆಕ್ರಮಿಸಿದ್ದರು.
ಮೊದಲ ಬ್ಯಾಚ್ ನಲ್ಲೇ ಕವಯತ್ರಿ ಚಂದ್ರಿಕಾ ಅವರು ಬಂಡಾಯದ ಬಾವುಟ ಹಾರಿಸಿದರು. ಒಂದು ವಿಭಿನ್ನ ಕವಿತೆ ಓದಿದ ಅವರು “ನನ್ನನ್ನು ಕವಿಗೋಷ್ಠಿಗೆ ಕರೆದಿಲ್ಲ. ನನ್ನ ಅನುಮತಿ ಇಲ್ಲದೆ ಹೆಸರು ಹಾಕಿದ್ದಾರೆ. ಇಲ್ಲಿ ಆತಿಥ್ಯವೂ ಸರಿಯಿಲ್ಲ. ಇದನ್ನು ಪ್ರತಿಭಟಿಸಿ ನಾನು ಟಿಎ ಡಿಎ ನಿರಾಕರಿಸುತ್ತೇನೆ” ಎಂದಂದು ಕುಳಿತರು. ಅಷ್ಟಕ್ಕೇ ಕವಿಗೋಷ್ಠಿ ಸಮಿತಿಯವರೊಬ್ಬರು ಪೋಡಿಯಂಗೆ ಬಂದು, ಕವಯತ್ರಿ ಹೇಳಿದ್ದು ಸುಳ್ಳು. ನನ್ನ ಬಳಿ ಕರೆದದ್ದಕ್ಕೆ ವಾಟ್ಸಪ್ ದಾಖಲೆ ಇದೆ. ಅವರ ಗಂಡನ ಜೊತೆಗೂ ಫೋನ್ ನಲ್ಲಿ ಮಾತನಾಡಿದ್ದೇನೆ. ಅಷ್ಟಕ್ಕೂ ತಪ್ಪಾಗಿದ್ದರೆ ಕ್ಷಮೆ ಕೇಳುವೆ.. ಎಂದರು. ಚಂದ್ರಿಕಾ ಅವರು ಎದ್ದು ನಿಂತು ನನ್ನನ್ನು ಕರೆದಿಲ್ಲ, ನನಗೆ ಆಹ್ವಾನ ಕಳಿಸಿಲ್ಲ… ಎಂದು ಮತ್ತೆ ಮತ್ತೆ ಹೇಳಿದರು. ಸಮಿತಿಯವರು ಮೊಬೈಲನ್ನು ಸಭೆಗೆ ಎತ್ತಿ ತೋರಿಸುತ್ತಾ ಇಲ್ಲಿದೆ…ಇಲ್ಲಿದೆ…ವಾಟ್ಸಪ್ ಮೆಸೇಜ್.. ಎನ್ನತೊಡಗಿದರು. ವಾಗ್ವಾದದ ಬಳಿಕ ಅಸಮಾಧಾನಗೊಂಡ ಕವಯತ್ರಿ ವೇದಿಕೆಯಿಂದ ಕೆಳಗಿಳಿದು ಪ್ರೇಕ್ಷಕರ ಸಾಲಲ್ಲಿ ಕುಳಿತರು.
ಉಳಿದ ಕವಿಗಳು ತಮಗೂ ಇದಕ್ಕೂ ಸಂಬಂಧ ಇಲ್ಲ ಎಂಬಂತೆ ಕವಿತೆಗಳನ್ನು ಓದುತ್ತಾ ಹೋದರು. ಸನ್ಮಾನ, ಚಪ್ಪಾಳೆಯ ಹಾಡು, ಹಾರ ತುರಾಯಿ, ಪಾಲಿಕೆಯ ಸದಸ್ಯರ, ಸಮಿತಿಗಳ ಅಧ್ಯಕ್ಷ ಉಪಾಧ್ಯಕ್ಷರ ಉದ್ದನೆಯ ಪಟ್ಟಿಯೊಂದನ್ನು ಓದಿ ಹೇಳಿದ ಒಬ್ಬರು ಅವರೆಲ್ಲ ಬಂದು ಸನ್ಮಾನ ಮಾಡಬೇಕು ಎಂದರು. ಬಳಿಕ ಎರಡನೇ ಬ್ಯಾಚ್ ಕವಿಗಳನ್ನು ವೇದಿಕೆಗೆ ಕರೆಯಲಾಯಿತು. ಕವಿಗೋಷ್ಠಿಯ ಅಧ್ಯಕ್ಷರು, ಉದ್ಘಾಟಕರು ಕೆಳಗೇ ಇದ್ದರು. ಕವಿತಾ ವಾಚನ, ಸನ್ಮಾನ, ಹಾರ, ಉಪಸಮಿತಿಯ ಹತ್ತಿಪ್ಪತ್ತು ಸದಸ್ಯರ ಅಧಿಕಾರಿಗಳ ಓಡಾಟ…! ಎರಡನೇ ಬ್ಯಾಚ್ ನಲ್ಲಿ ಕೊನೆಯದಾಗಿ ಕವಿತೆ ಓದಿದ ಚ.ಹ.ರಘುನಾಥ, ಕವಯತ್ರಿಯೊಬ್ಬರಿಗೆ ಎಲ್ಲರ ಎದುರು ಆದ ಅವಮಾನಕ್ಕೆ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಬಳಿಕ ಎಲ್ಲರೂ ಕೆಳಗಿಳಿದರು.
ಆಮೇಲೆ ಮೂರನೇ ಬ್ಯಾಚ್ ಕವಿಗಳು ವೇದಿಕೆ ಏರಿದರು. ಕವಿತೆಗಳ ಓದು ಶುರುವಾಯಿತು. ಅಷ್ಟು ಹೊತ್ತಿಗೆ ಮಧ್ಯಾಹ್ನ ಒಂದೂವರೆ ದಾಟಿತ್ತು. ಪ್ರೇಕ್ಷಕರು ಹಸಿದಿದ್ದರು. ಹೊರಗೆ ಶೌಚಾಲಯದ ಬಾಗಿಲ ಎದುರು ಊಟ ಬಡಿಸುವವರು ಟೇಬಲ್ ಹಾಕಿ ನಿಂತಿದ್ದರು. ಪ್ರೇಕ್ಷಕರು ಗುಂಪು / ಕ್ಯೂನಲ್ಲಿ ಬಂದು ತಟ್ಟೆ ಹಿಡಿದು ನಿಂತು ಅಲ್ಲೇ ಊಟ ಮಾಡತೊಡಗಿದರು. ಅರ್ಧಕ್ಕರ್ಧ ಸಭೆ ಖಾಲಿಯಾಗಿತ್ತು. ಕವಿಗೋಷ್ಠಿಗಿಂತ ಊಟ ಮುಖ್ಯ ಎನ್ನುವ ಆಯೋಜಕರ ದೂರದೃಷ್ಟಿ ನಿಜಕ್ಕೂ ಖುಷಿ ಕೊಟ್ಟಿತು. ಆದರೆ ಶೌಚಾಲಯದ ಮುಂದೆ ಊಟ ಬಡಿಸಿದ್ದು ಯಾಕೆಂದು ಗೊತ್ತಾಗಲಿಲ್ಲ. ಒಳಗೆ ಕವಿತೆ, ಹೊರಗೆ ಊಟ. ನಾನು ಎದ್ದು ಹೊರಗೆ ಬಂದೆ. ಆಮೇಲೆ ಏನಾಯಿತೋ ಗೊತ್ತಾಗಲಿಲ್ಲ. ಗೆಳೆಯರೊಬ್ಬರು ಹೇಳಿದ ಪ್ರಕಾರ ಗೋಷ್ಠಿಯ ಅಧ್ಯಕ್ಷರು ಕೊನೆಯ ಬ್ಯಾಚ್ ನಲ್ಲಿ ಮತ್ತೆ ವೇದಿಕೆ ಏರಿ ಎರಡನೆಯ ಅಧ್ಯಕ್ಷ ಭಾಷಣ ಮಾಡಿದರಂತೆ.
ಕವಿಗೋಷ್ಠಿಯ ಆರಂಭದಲ್ಲೇ ಅಧ್ಯಕ್ಷರ ಭಾಷಣ ಮುಗಿದ ಬಳಿಕ ಕವಿಗಳನ್ನು ವೇದಿಕೆಗೆ ಕರೆದು ಕವಿತೆ ಓದಿಸುವ ಹೊಸ ಕ್ರಮ ಮುಂದಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗಬಹುದೇ? ಏನಿದ್ದರೂ 30 ಕ್ಕೂ ಹೆಚ್ಚು ಕವಿಗಳನ್ನು ಒಂದೇ ಕವಿಗೋಷ್ಠಿಗೆ ಕರೆಯುವುದು ಅಷ್ಟು ಒಳ್ಳೆಯ ಕ್ರಮ ಅಲ್ಲ ಅನ್ನಿಸಿತು. ಇದರ ಮಧ್ಯೆಯೂ ಹತ್ತಕ್ಕೂ ಹೆಚ್ಚು ಉತ್ತಮ ಕವಿತೆಗಳನ್ನು ಕೇಳುವ ಖುಷಿ ನನ್ನದಾಯಿತು.