ಬೆಂಗಳೂರು: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ರವರು, ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವಿನ ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದಲ್ಲಿ ತಲೆದೋರಿರುವ ಎಲ್‌ಪಿಜಿ ಮತ್ತು ಇಂಧನ ಕೊರತೆಯನ್ನು ನೀಗಿಸುವಂತೆ ಆಗ್ರಹಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಗೆ ಪತ್ರ ಬರೆದಿದ್ದಾರೆ.
ದೇಶದ ಯಾವುದೇ ಭಾಗದಲ್ಲಿ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ ನೈಸರ್ಗಿಕ ಅನಿಲಕ್ಕೆ ಕೊರತೆಯಾಗದಂತೆ ಕ್ರಮ ವಹಿಸಲು ಶಾಸಕರು ಮನವಿ ಮಾಡಿದ್ದಾರೆ. “ಈ ಬಿಕ್ಕಟ್ಟು ನಿಮ್ಮ ರಾಜತಾಂತ್ರಿಕ ಪ್ರೌಢಿಮೆಯನ್ನು ಪ್ರದರ್ಶಿಸಲು ಇರುವ ಒಂದು ಅವಕಾಶವಾಗಿದೆ. ತಕ್ಷಣವೇ ಮಿತ್ರ ರಾಷ್ಟ್ರಗಳೊಂದಿಗೆ ಮಾತುಕತೆ ನಡೆಸಿ ಅಗತ್ಯ ಪ್ರಮಾಣದ ನೈಸರ್ಗಿಕ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಆಮದು ಮಾಡಿಕೊಳ್ಳಲು ಸೂಕ್ತ ಮಾರ್ಗಗಳನ್ನು ಕಂಡುಕೊಳ್ಳಿ,” ಎಂದು ಅವರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಕೆಐಎಡಿಬಿ ಭೂ ಸ್ವಾಧೀನ ವಿರೋಧಿಸಿ ಮಾ.16ರಿಂದ ಅನಿರ್ದಿಷ್ಟಾವಧಿ ಧರಣಿ
ಸಿಲಿಂಡರ್ ಮರುಪೂರಣದ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಿರುವುದನ್ನು ದರ್ಶನ್ ಪುಟ್ಟಣ್ಣಯ್ಯ ವಿರೋಧಿಸಿದ್ದಾರೆ.
“ಗ್ರಾಹಕರು ಮುನ್ನೆಚ್ಚರಿಕೆಯಿಂದ ಸಿಲಿಂಡರ್ ಬುಕ್ ಮಾಡುವುದು ನಾಳೆಯ ಆತಂಕದಿಂದಲೇ ಹೊರತು ಲಾಭ ಮಾಡಲೆಂದಲ್ಲ. ಇಂತಹ ನಿರ್ಬಂಧಗಳು ನಾಗರಿಕರಿಗೆ ಮಾಡುವ ಅವಮಾನ. ಇದರ ಬದಲು ನೈಸರ್ಗಿಕ ಅನಿಲವು ಕಪ್ಪು ಮಾರುಕಟ್ಟೆ ಪಾಲಾಗದಂತೆ ಬಿಗಿ ಕ್ರಮ ಕೈಗೊಳ್ಳಿ,” ಎಂದು ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇಂಧನ ಸ್ವಾವಲಂಬನೆಗೆ ‘ಸ್ವರಾಜ್’ ಮಂತ್ರ
ದೀರ್ಘಕಾಲೀನ ಪರಿಹಾರವಾಗಿ ಭಾರತ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗುವಂತೆ ‘ಸ್ವರಾಜ್’ ಪರಿಕಲ್ಪನೆಯನ್ನು ಜಾರಿಗೆ ತರಲು ಅವರು ಕೋರಿದ್ದಾರೆ:
1. ಸೌರ ಮತ್ತು ಪವನ ಶಕ್ತಿ: ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಗರಿಷ್ಠ ಒತ್ತು ನೀಡಬೇಕು.
2. ಸ್ಟಾರ್ಟ್-ಅಪ್ ಮತ್ತು ಕೌಶಲ್ಯಾಭಿವೃದ್ಧಿ: ಈ ಕ್ಷೇತ್ರಗಳಲ್ಲಿ ಸೌರಶಕ್ತಿ ಆಧಾರಿತ ಯೋಜನೆಗಳಿಗೆ ಆದ್ಯತೆ ನೀಡಬೇಕು.
3. ರಿಯಾಯಿತಿಗಳು: ಸೌರ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ನೀಡಬೇಕು ಹಾಗೂ ಅಳವಡಿಸಿಕೊಳ್ಳುವ ನಾಗರಿಕರಿಗೆ ಸಬ್ಸಿಡಿ ನೀಡಬೇಕು.
4. ಸ್ವಾವಲಂಬಿ ಗ್ರಾಮ: ಹಳ್ಳಿಗಳು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾದರೆ ಅಂತರಾಷ್ಟ್ರೀಯ ರಾಜಕೀಯ ಬಿಕ್ಕಟ್ಟುಗಳು ನಮ್ಮ ನಾಗರಿಕರ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಬಿಕ್ಕಟ್ಟನ್ನು ಇಂಧನ ಸ್ವಾವಲಂಬನೆಗೆ ಒಂದು ಅವಕಾಶವನ್ನಾಗಿ ಬಳಸಿಕೊಳ್ಳುವಂತೆ ಮತ್ತು ತಕ್ಷಣವೇ ಜನರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಅವರು ಪತ್ರದ ಮೂಲಕ ಪ್ರಧಾನಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ನೋಡಿ: ಸಾಹಿತ್ಯ ಓದಿಗೆ ವಿಮರ್ಶಾತ್ಮಕ ದೃಷ್ಟಿ ಅಗತ್ಯ – ಬಂಜಗೆರೆ ಜಯಪ್ರಕಾಶ Janashakthi Media
