ಪಶ್ಚಿಮ ಬಂಗಾಳ : 145 ವರ್ಷಗಳ ಇತಿಹಾಸ ಹೊಂದಿರುವ, ಪರ್ವತ ಶ್ರೇಣಿಯ ರಾಣಿ(Queen) ಅಂತಲೇ ಕರೆಯಲ್ಪಡುವ ಟಾಯ್ ಟ್ರೈನ್ ಗೆ ಮತ್ತೊಂದು ಗರಿ ಮೂಡಿದೆ. ಅದು ಏರಿಳಿತ, ಅಂಕುಡೊಂಕಿನ ಪರ್ವತ ಶ್ರೇಣಿಗಳಿಂದ ಕೂಡಿರುವ ರೈಲ್ವೆ ಮಾರ್ಗ. ಇಲ್ಲಿನ ಸುಂದರ ಪರಿಸರ ಆಕರ್ಷಣೀಯವಾಗಿದ್ದು, ಯುನೆಸ್ಕೋ ವಿಶ್ವ ಪರಂಪರೆಯ ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆಗೆ ನೇಮಕ ಆಗುವ ಮೂಲಕ ಗೂರ್ಖಾ ನೆಲದ ಮಣ್ಣಿನ ಮಗಳು ಟಿಸಿ ಸರಿತಾ ಯೋಲ್ಮೋ ಇತಿಹಾಸ ನಿರ್ಮಿಸಿದ್ದಾರೆ.
ಸರಿತಾ ಅವರು NJP ಯಿಂದ ಡಾರ್ಜಿಲಿಂಗ್‌ಗೆ ಹೆರಿಟೇಜ್ ಟಾಯ್ ರೈಲಿನ ಹಿರಿಯ ಟಿಕೆಟ್ ಕಲೆಕ್ಟರ್ ಆಗಿ ಸೇವೆ ಸಲ್ಲಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇದೇ ಫೆಬ್ರವರಿ 5 ರಿಂದ ಟಾಯ್ ಟ್ರೈನ್‌ನ ಟಿಕೆಟ್ ಕಲೆಕ್ಟರ್ ಆಗಿ ಅವರು ತಮ್ಮ ಕರ್ತವ್ಯಕ್ಕೆ ಹಾಜರಾದರು. ಆದರೆ ಈ ಅವಕಾಶ ಒದಗಿ ಬಂದಾಗ ಮೊದ ಮೊದಲು ತನಗೆ ಭಯ ಆಗುತಿತ್ತು ಎಂದು ಹೇಳಿದ್ದಾರೆ.
ಸರಿತಾ ಅವರ ಪತಿ ದಾವಾ ಯೋಲ್ಮೋ ಕೂಡ ಇದೇ ರೈಲಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಪತ್ನಿಗೆ ಧೈರ್ಯ ತುಂಬಿದರು. ಪತಿ ಕೂಡ ಒಂದು ವರ್ಷದ ಹಿಂದೆಯಷ್ಟೇ ಸೇವೆಯಿಂದ ನಿವೃತ್ತರಾಗಿದ್ದಾರೆ.
ಇದನ್ನೂ ಓದಿ : ದಲಿತರ ಮೇಲೆ ದೌರ್ಜನ್ಯವೆಸಗಿದವರ ವಿರುದ್ದ ಕ್ರಮ: ಪ್ರತಿಭಟನೆ
ಈ ಜವಾಬ್ದಾರಿಯ ಮೊದಲ ದಿನದಂದು ಪ್ರಯಾಣಿಕರಿಂದ ನನಗೆ ದೊರೆತ ಪ್ರತಿಕ್ರಿಯೆ ಮತ್ತು ಸ್ವಾಗತವನ್ನು ನಾನು ಎಂದಿಗೂ ಮರೆಯುವುದಿಲ್ಲ. ಎಲ್ಲಾ ಪ್ರವಾಸಿಗರು ಮುಂದೆ ಬಂದು ರೈಲಿನಲ್ಲಿ ನನ್ನೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ನಾನು ಹೆರಿಟೇಜ್ ಟಾಯ್ ರೈಲಿನ ಮೊದಲ ಮಹಿಳಾ ಟಿಕೆಟ್ ಕಲೆಕ್ಟರ್. ಅದಕ್ಕಾಗಿಯೇ ಅವರು ಈ ಐತಿಹಾಸಿಕ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ತಮ್ಮ ಈ ಹೊಸ ಜವಾಬ್ದಾರಿಯ ಬಗ್ಗೆ ಅನುಭವ ಹಂಚಿಕೊಂಡ ಸರಿತಾ, “ಗುಡ್ಡಗಾಡು ಪ್ರದೇಶದ ಮಹಿಳೆಯಾಗಿ ಹೆರಿಟೇಜ್ ಟಾಯ್ ಟ್ರೈನ್ ಹತ್ತುವುದು ನನಗೆ ವಿಶೇಷ ಅನುಭವ. ಈ ಚಿತ್ರ ನನ್ನ ಜೀವನದ ಅಮೂಲ್ಯ ನಿಧಿಯಾಗಲಿದೆ. ಪ್ರವಾಸಿಗರ ಈ ಮಾತುಗಳು ನನ್ನನ್ನು ರೋಮಾಂಚನಗೊಳಿಸುತ್ತಿವೆ. ಇದು ನನ್ನ ಹೊಸ ಜವಾಬ್ದಾರಿಗೆ ಇನ್ನಷ್ಟು ಉತ್ಸಾಹವನ್ನು ನೀಡುತ್ತದೆ” ಎಂದರು.
“ಮೊದಲಿಗೆ ನನಗೆ ಸ್ವಲ್ಪ ಭಯವಾಗಿತ್ತು. ಏಕೆಂದರೆ ಇತರೆ ರೈಲುಗಳಲ್ಲಿ ನನ್ನೊಂದಿಗೆ ಅನೇಕ ಸಹೋದ್ಯೋಗಿಗಳು ಇರುತ್ತಿದ್ದರು. ಆದರೆ ಈ ಟಾಯ್ ರೈಲಿನಲ್ಲಿ, ನಾನು ಒಬ್ಬಂಟಿಯಾಗಿದ್ದೇನೆ. ಪ್ರಯಾಣಿಕರು ಮತ್ತು ಪ್ರವಾಸಿಗರ ಎಲ್ಲಾ ಜವಾಬ್ದಾರಿಗಳು ನನ್ನ ಮೇಲಿವೆ. ಮೊದಲ ದಿನದ ಪ್ರಯಾಣವನ್ನು ಮುಗಿಸಿದ ಬಳಿಕ ನಾನು ತುಂಬಾ ಖುಷಿಯಾಗಿದ್ದೆ” ಎಂದು ಹೇಳಿಕೊಂಡರು.
ಸರಿತಾ ಈ ಹಿಂದೆ ನ್ಯೂ ಜಲ್ಪೈಗುರಿ ನಿಲ್ದಾಣದ ಸಿಟಿಸಿ ಆಗಿಯೂ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ರಾಜಧಾನಿ, ಗುವಾಹತಿ-ಬೆಂಗಳೂರು ಎಕ್ಸ್‌ಪ್ರೆಸ್, ಅಮೃತ್ ಭಾರತ್ ಎಕ್ಸ್‌ಪ್ರೆಸ್‌ನಿಂದ ಹಿಡಿದು ಅನೇಕ ರೈಲುಗಳಲ್ಲಿ ಟಿಕೆಟ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸರಿತಾ ಡಾರ್ಜಿಲಿಂಗ್‌ನ ಸೋನಾಡದಲ್ಲಿ ಜನಿಸಿದರು. ಅವರು ಪ್ರಸ್ತುತ ಕೆಲಸದ ಕಾರಣದಿಂದಾಗಿ ಸಿಲಿಗುರಿಯ ಹೊರವಲಯದಲ್ಲಿರುವ ದಾಗಪುರದ ಪಂಚನೈ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
55 ವರ್ಷದ ಗೂರ್ಖಾ ಮಹಿಳೆಯಾದ ನನ್ನನ್ನು ಹೆರಿಟೇಜ್ ರೈಲಿಗೆ ಪ್ರಧಾನ ಟಿಸಿ ಆಗಿ ವರ್ಗಾಯಿಸಲಾಗುತ್ತೆ ಅನ್ನೋದರ ಬಗ್ಗೆ ಎಂದಿಗೂ ನಾನು ಕನಸು ಕಂಡಿರಲಿಲ್ಲ ಎಂದು ಸರಿತಾ ಆಶ್ಚರ್ಯ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿರುವ ಸರಿತಾ, ” ನನಗೆ ಈಗಾಗಲೇ ದೇಶದಲ್ಲಿ ದೂರ ದೂರದ ರೈಲುಗಳಲ್ಲಿ ಟಿಕೆಟ್ ಪರಿಶೀಲಕಿಯಾಗಿ ಕೆಲಸ ಮಾಡಿರುವ ಅನುಭವ ಇದೆ. ಆದ್ರೆ ಈ ಹೆರಿಟೇಜ್ ಟ್ರೈನ್‌ನ 145 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಥಮ ಮಹಿಳಾ ಟಿಸಿ ಆಗಿ ನೇಮಕ ಆಗಿರುವುದು ವಿಶೇಷ. ಅಲ್ಲದೆ, ನಾನು ಇದೇ ಪ್ರದೇಶದಲ್ಲಿ ಹುಟ್ಟಿ, ಬೆಳೆದವಳು. ಮೊದಲಿನಿಂದಲೂ ಪುರುಷ ಪ್ರಧಾನ ಸಮಾಜವಿರುವ ದೇಶದಲ್ಲಿ ಓರ್ವ ಮಹಿಳೆಯಾಗಿ ಟಾಯ್ ಟ್ರೈನ್‌ಗೆ ಟಿಕೆಟ್ ಕಲೆಕ್ಟರ್ ಆಗಿ ಬಂದಿರುವುದು ಮಹಿಳೆಯರ ಶಕ್ತಿಯ ಧ್ಯೋತಕವಾಗಿದೆ. ಇಲ್ಲಿನ ಪರ್ವತಗಳ ನಡುವಿನ ಏರಿಳಿತಗಳ ಮಧ್ಯೆ ಟಾಯ್ ಟ್ರೈನ್ ಸಾಗುವುದನ್ನು ನೋಡುವುದೇ ತುಂಬಾ ಸಂತಸದ ಕ್ಷಣ” ಎಂದು ಅಭಿಪ್ರಾಯ ಹಂಚಿಕೊಂಡರು.
ದಾರ್ಜಿಲಿಂಗ್ ಹಿಮಾಲಯನ್ ರೈಲ್ವೆ ನಿರ್ದೇಶಕ ರಿಷಬ್ ಚೌಧರಿ ಮಾತನಾಡಿ, ”ಈವರೆಗೆ ಈ ಟಾಯ್ ಟ್ರೈನ್ನಲ್ಲಿ ಮಹಿಳಾ ಟಿಸಿಯೊಬ್ಬರು ಕೆಲಸ ನಿರ್ವಹಿಸಿದ ದಾಖಲೆಯೇ ಇಲ್ಲ. ಸರಿತಾ ಯೋಲ್ಮೋ ಅವರ ಈ ಸಾಧನೆ ಮಹಿಳೆಯರಿಗೆ ಭವಿಷ್ಯದಲ್ಲಿ ದೊಡ್ಡ ಕನಸುಗಳನ್ನು ಕಾಣಲು ಸ್ಫೂರ್ತಿ ಆಗುತ್ತದೆ ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸರಿತಾ ಅವರ ಪತಿ ದಾವಾ ಯೋಲ್ಮೋ ಮಾತನಾಡಿ, ” ಬ್ರಿಟಿಷ್ ಆಡಳಿತಾವಧಿಯಲ್ಲಿ ಆರಂಭವಾಗಿದ್ದ ಈ ಟಾಯ್ ಟ್ರೈನ್ ಭಾರತೀಯ ರೈಲ್ವೆಗೆ ಹೆಮ್ಮೆಯ ಪ್ರತೀಕವಾಗಿದೆ. ಮತ್ತು ನನ್ನ ಪತ್ನಿ ಈ ಹೆರಿಟೇಜ್ ರೈಲಿಗೆ ಮೊದಲ ಮಹಿಳಾ ಟಿಕೆಟ್ ಕೆಲೆಕ್ಟರ್ ಆಗಿರುವುದು ತುಂಬಾ ಖುಷಿಯ ವಿಚಾರ” ಎಂದು ಸಂತಸ ಹಂಚಿಕೊಂಡರು.
ಈವರೆಗೆ ಪರ್ವತ ಶ್ರೇಣಿಯಲ್ಲಿನ ದಾರ್ಜಿಲಿಂಗ್ ಹಿಮಾಲಯನ್ ರೈಲ್ವೆ ಇಲಾಖೆ ಹೆರಿಟೇಜ್ ಟಾಯ್ ಟ್ರೈನ್ ಮತ್ತು ಅತಿ ಹೆಚ್ಚು ಆದಾಯದಿಂದ ದಾಖಲೆ ಬರೆದಿದೆ. ಇದಕ್ಕೆ ಓರ್ವ ಮಹಿಳಾ ಟಿಸಿ ಸೇರ್ಪಡೆಯಿಂದ ಮತ್ತೊಂದು ಹೊಸ ದಾಖಲೆ ಸೇರ್ಪಡೆಯಾಗಿದೆ.
ಇದನ್ನೂ ನೋಡಿ : ಗುತ್ತಿಗೆ ಜೀವನಕ್ಕೆ ಅಂತ್ಯ ಬೇಕು – ಫೆ 12ಕ್ಕೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಮುಷ್ಕರ | ಎಸ್ ವರಲಕ್ಷ್ಮಿ
