ಗುಂಡಣ್ಣ ಚಿಕ್ಕಮಗಳೂರು
ಫುಟ್ಬಾಲ್ ಆಟ ಆಡಿದರೆ, ಮುಸ್ತಫಾನನ್ನು ಮುಟ್ಟಿಸಿಕೊಂಡು ಆಡಬೇಕು, ಬದಲಿಗೆ ಕ್ರಿಕೆಟ್ ಆಡಿದರೆ ಅವನ ದೈಹಿಕ ಸಂಪರ್ಕ ನೇರವಾಗಿ ಆಗುವುದಿಲ್ಲ ಎನ್ನುವ ಮನೋಬಾವ; ಅದಕ್ಕೆ ಪೂರಕವಾಗಿ ಅಸಮಂಜಸ ತರ್ಕಗಳನ್ನು ಹೇಳಿ ಸ್ನೇಹಿತರನ್ನು ಮತ್ತು ಕ್ರೀಡಾ ಚಟುವಟಿಕೆಯ ಮೇಷ್ಟ್ರನ್ನು ಒಪ್ಪಿಸುವುದು; ಫುಟ್ಬಾಲ್ ತಂಡ ಕಟ್ಟಿದಲ್ಲಿ ಮುಸ್ತಫಾ ಕ್ಯಾಪ್ಟ್ನ್ ಆಗುತ್ತಾನೆ, ಬದಲಿಗೆ ಕ್ರಿಕೆಟ್ನ ತಂಡ ಮಾಡಿದಲ್ಲಿ ನಾನು ಕ್ಯಾಪ್ಟ್ನ್ಆ ಗಬಹುದು ಎನ್ನುವ ರಾಮಾನುಜನ ಸಣ್ಣತನದ ಆಲೋಚನೆ; ಪ್ರತಿದಿನ ಮುಸ್ತಫಾ ಬಿರಿಯಾನಿ ತಿನ್ನುತ್ತಾನೆ ಎನ್ನುವ ಕಲ್ಪಿತ ಆಲೋಚನೆ; ಎಲ್ಲರನ್ನೂ ಅವನು ತಬ್ಬಿಕೊಳ್ಳುತ್ತಾನೆ ಎನ್ನುವ ರೋಮಾಂಚನ ಹಾಗು ಭಯದ ಮಿಶ್ರ ಆಲೋಚನೆಯ ರಮಾಮಣಿ; ಹೊದಿಸಿದ ಬಟ್ಟೆಗೆ ಬೆಂಕಿ ತಗುಲಿ ಹೋರಿ ಎಲ್ಲರನ್ನೂ ತಿವಿದು ದೊಂಬಿ ಆದಾಗ, ಅದನ್ನು ಹಿಂದು-ಮುಸ್ಲಿಂ ಗಲಾಟೆ ಎಂದು ಸುಳ್ಳು ಸುದ್ದಿ ಹಬ್ಬಿಸುವುದು; ಇಂತಹ ವಿಚಾರಗಳು ಅನೇಕ ಸಣ್ಣ ಸಣ್ಣ ದೃಶ್ಯ ಮತ್ತು ಸಂಭಾಷಣೆಗಳ ಮುಖಾಂತರ ಪರಿಣಾಮಕಾರಿಯಾಗಿ ಮೂಡಿಬಂದಿವೆ. ಅದೇ ಸಮಯದಲ್ಲಿ ಮುಸ್ತಫಾ ಮ್ಯಾಜಿಕ್ ಮಾಡುವಾಗ ಕೋಳಿಮೊಟ್ಟೆಯ ದೃಶ್ಯ ಬೇಕಿರಲಿಲ್ಲ; ನೋಡುವ ಪ್ರೇಕ್ಷಕರು ಎಲ್ಲರೂ ಪ್ರಬುದ್ಧರಾಗಿರುತ್ತಾರೆ ಎಂದು ಭಾವಿಸಿಕೊಳ್ಳುವುದು ಸರಿಯಲ್ಲ.
ಒಂದು ತೋಟದಲ್ಲಿ ನೂರು ಹೂವು ಅರಳಲಿ ಎಲ್ಲ ಕೂಡಿ ಆಡುವಂತ ಗಾಳಿ ಬೀಸಲಿ ಅನೇಕತೆಯಲ್ಲೇ ದೇಶ ಸೇರಿದೆ ಸರ್ವಜನಾಂಗದ ಶಾಂತಿಯ ತೋಟ. ಇದು ಡೇರ್ ಡೆವಿಲ್ ಮುಸ್ತಫಾ ಚಿತ್ರದ ಕೊನೆಯಲ್ಲಿ ಬರುವ ಹಾಡು. ಈ ಸಾಹಿತ್ಯದ ಸತ್ವ ಮತ್ತು ತತ್ವ ನಮ್ಮ ದೇಶಕ್ಕೆ ದಿಕ್ಸೂಚಿಯಾಗಬೇಕಿದೆ. ಆಶಯದ ಹಾಡಾಗಬೇಕಿದೆ. ಡೇರ್ ಡೆವಿಲ್ ಮುಸ್ತಫಾ ಪೂರ್ಣಚಂದ್ರ ತೇಜಸ್ವಿಯವರ ಹೆಸರಾಂತ ಸಣ್ಣ ಕತೆ. ಅರವತ್ತು-ಎಪ್ಪತ್ತರ ದಶಕದಲ್ಲಿ ಈ ಕತೆಯನ್ನು ಓದದ ಸಾಹಿತ್ಯ ಪ್ರೇಮಿಯೇ ಇಲ್ಲ. ಫುಟ್ಬಾಲ್ ಆಟದ ಮುಸ್ತಫಾ, ಪೂರ್ಣ ಚಂದ್ರ ತೇಜಸ್ವಿ ಅವರ ಕತೆಯಲ್ಲಿ ಮಾಡದ ಸಾಹಸವಿಲ್ಲ. ಎಲ್ಲ ಸನ್ನಿವೇಶಗಳಲ್ಲೂ ಧೈರ್ಯವಾಗಿ ಮುನ್ನುಗ್ಗುವ ಕಾರಣಕ್ಕೇ ಅವನಿಗೆ ಡೇರ್ ಡೆವಿಲ್ ಎಂಬ ಅಡ್ಡ ಹೆಸರು ಬರಲು ಕಾರಣ.
ಕರ್ವಾಲೋ ಕತೆಯ ಮಂದಣ್ಣ ಮತ್ತು ಡೇರ್ ಡೆವಿಲ್ ಕತೆಯ ಮುಸ್ತಫಾ ಇವರಿಬ್ಬರೂ ತೇಜಸ್ವಿ ಅವರ ಮಾನಸ ಪುತ್ರರು ಎಂದರೂ ತಪ್ಪಲ್ಲ. ಇನ್ನೊಂದು ಅನಿಸಿಕೆಯಲ್ಲಿ ಈ ಪಾತ್ರಗಳು ಪೂರ್ಣ ಚಂದ್ರ ತೇಜಸ್ವಿ ಅವರೇ ಅಷ್ಟು ಗಾಢವಾದ ಪಾತ್ರಗಳು ಇವು. ಮಂದಣ್ಣ ತನ್ನ ಮುಗ್ದತೆ, ದಡ್ಡತನ ಇವುಗಳಿಂದ ನಮ್ಮ ಸುತ್ತಲ ಸಮಾಜ ಕಲಿಯಬೇಕಾದ ಸರಿಯಾದ ಪಾಠ ಹೇಳಿದರೆ, ಮುಸ್ತಫಾ ತನ್ನ ಧೈರ್ಯ,ಸಾಹಸಗಳಿಂದ ಅದೇ ರೀತಿಯ ಪಾಠವನ್ನು ಹೇಳುತ್ತಾನೆ. ಮುಸ್ತಫಾ ಮಂದಣ್ಣನಂತೆ ಮುಗ್ದನಲ್ಲಾ. ಅವನ ನಿಲುವುಗಳು ಎಲ್ಲರನ್ನೂ ಮೆಚ್ಚಿಸಬಲ್ಲ ನಿಲುವುಗಳು.
ಡೇರ್ ಡೆವಿಲ್ ಮುಸ್ತಫಾ ಚಲನಚಿತ್ರವನ್ನು ಯುವ ನಿರ್ದೇಶಕ ಶಶಾಂಕ ಸೋಗಾಲ್ ಅವರು ನಿರ್ದೇಶಿಸಿದ್ದಾರೆ. ಇದು ಅವರ ಪೂರ್ಣಪ್ರಮಾಣದ ನಿರ್ದೇಶನದ ಮೊದಲ ಚಿತ್ರ. ಮೊದಲನೇ ಚಿತ್ರದಲ್ಲೇ ಅವರು ನಿರ್ದೇಶನದ ವೃತ್ತಿಯಲ್ಲಿ ಹಾಗೂ ಧನಾತ್ಮಕ ಸಾಮಾಜಿಕ ಚಿಂತನೆಯಲ್ಲಿ ವೃತ್ತಿ ಪರತೆಯ ಪಾರಮ್ಯವನ್ನು ಸಾಕಷ್ಟು ಯಶಸ್ವಿಯಾಗಿ ತೋರಿಸಿದ್ದಾರೆ. ಇಂತಹ ನವಿರಾದ ಹಾಸ್ಯದ ಲೇಪನವುಳ್ಳ ಕೋಮು ಸೌಹಾರ್ಧತೆ ಸತ್ವದ ಚಿತ್ರಗಳು ನಮಗೆ ಇಂದಿನ ಕಾಲಘಟ್ಟದಲ್ಲಿ ಅತಿ ಅವಶ್ಯ. ಸರಿಯಾದ ಕತೆಯ ಆಯ್ಕೆ, ಉತ್ತಮ ಸಂಭಾಷಣೆ ಹಾಗೂ ಯುವ ಕಲಾವಿದರ ಪ್ರಬುದ್ದ ಅಭಿನಯ, ಇವೆಲ್ಲವೂ ಸೇರಿ ಡೇರ್ ಡೆವಿಲ್ ಚಿತ್ರ ಒಂದು ಯಶಸ್ವಿ ಚಲನಚಿತ್ರವಾಗಿದೆ. ಕುಟುಂಬದ ಎಲ್ಲ ಸದಸ್ಯರ ಜೊತೆ ಕೂತು ಯಾವುದೇ ಮುಜುಗರಗಳಿಲ್ಲದೆ ನೋಡಲು ಸಾಧ್ಯವಿರುವ ಒಂದು ಚಲನಚಿತ್ರವಾಗಿದೆ. ಕೋಮು ಸಾಮರಸ್ಯ ಸಾರಬಲ್ಲ ಇಂತಹ ಒಂದು ಗಟ್ಟಿಧ್ವನಿಯ ಕತೆಯನ್ನು 50- 60 ವರುಷಗಳ ಹಿಂದೆಯೇ ಬರೆದ ಪೂರ್ಣಚಂದ್ರ ತೇಜಸ್ವಿಯವರಿಗೂ ನಾವು ಅಭಿನಂದನೆಗಳನ್ನು ಹೇಳಲೇಬೇಕು.
ಸಂಪೂರ್ಣ ಬ್ರಾಹ್ಮಣ್ಯದ ಹಿನ್ನಲೆಯ ಆಚಾರ-ವಿಚಾರಗಳಲ್ಲೇ ಬೆಳೆದು ಬರುವ ಕುಟುಂಬದ ಶಾಲಾ-ಕಾಲೇಜು ಮಕ್ಕಳಿಗೆ ಹೇಗೆ ಜಾತಿ,ಮತ,ಧರ್ಮಗಳು ಒಂದು ಅನಾರೋಗ್ಯದ ಸೋಂಕಾಗಿ ಅವರನ್ನು ಆಕ್ರಮಿಸಿಕೊಂಡಿರುತ್ತದೆ; ಮನಸ್ಸು ಎಷ್ಟು ಸಂಕುಚಿತ ಚಿಂತನೆ,ವಿಚಾರಗಳಿಂದ ಕೂಡಿರುತ್ತದೆ ಎಂಬುದನ್ನು ನಾವು ರಾಮಾನುಜ ಅಯ್ಯಂಗಾರಿ ಪಾತ್ರದ ಮುಖಾಂತರ ಕಾಣಬಹುದು. ಸಮಾಜವು ಕೋಮು ದ್ವೇಶದ ಚಿಂತನೆಗಳಲ್ಲಿ ಮುಳುಗಿದ್ದಾಗ, ಪರ ಜಾತಿ,ಧರ್ಮದ ಜನಾಂಗದವರು ಮಾಡುವ ಒಳ್ಳೆಯ ಕೆಲಸಗಳೂ ಸಹ ಹೇಗೆ ದುಷ್ಕೃತ್ಯದ ರೀತಿಯಲ್ಲಿ ಕಾಣುತ್ತದೆ ಮತ್ತು ಸುಳ್ಳು ಕಟ್ಟುಕತೆಗಳ ರೆಕ್ಕೆಪುಕ್ಕಗಳನ್ನು ಪಡೆಯುತ್ತವೆ ಎಂಬುದನ್ನು ಮುಸ್ತಫಾ ಪಾತ್ರದ ಮುಖಾಂತರ ಕಾಣಬಹುದು. ಸಮಾಜದಲ್ಲಿ ವಿದ್ಯೆಯನ್ನು ಕಲಿಸುವ ಗುರುಗಳೂ ಸಹ ಹೇಗೆ ಇಂತಹ ಸೂಕ್ಷ್ಮ ವಿಷಯಗಳನ್ನು ಕಲಿಸುವ ಜವಾಬ್ದಾರಿಗಳಲ್ಲಿ ವಿಫಲರಾಗುತ್ತಾರೆ ಎಂಬುದನ್ನು ಇತಿಹಾಸ, ಕನ್ನಡ , ವಿಜ್ಞಾನ ಮೇಷ್ಟುಗಳ ಮುಖಾಂತರ ಕಟ್ಟುಕೊಟ್ಟಿದ್ದಾರೆ. ಮಿಲಿಟರಿ ಸೇವೆ ಸಲ್ಲಿಸಿ ದೈಹಿಕ ಚಟುವಟಿಕೆ ಮತ್ತು ಕ್ರೀಡಾ ಚಟುವಟಿಕೆಗಳ ಮೇಷ್ಟ್ರರಾಗಿ ಬರುವ ವ್ಯಕ್ತಿ ಮುಖಾಂತರ, ಸ್ವಸ್ಥ್ಯ ಸಮಾಜದ ದ ಸಮತೋಲನವನ್ನು ಕಾಪಾಡುವ ತೀರ್ಮಾನ,ನಿಲುವುಗಳನ್ನು ತೆಗೆದುಕೊಳ್ಳಲು ಹೇಗೆ ಸಾದ್ಯ ಎಂಬುದು ನಿದರ್ಶಿತವಾಗಿದೆ.
ಇದನ್ನೂ ಓದಿ:‘ಡೇರ್ ಡೆವಿಲ್ ಮುಸ್ತಫಾ’ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುವಂತೆ ಚಿತ್ರತಂಡದಿಂದ ಸಿಎಂಗೆ ಮನವಿ
ಕಾಲೇಜಿನ ಆವರಣದಲ್ಲಿ ಮುಸ್ತಫಾ ನ ಹೆಸರೇ ಇತರ ಹುಡುಗರಿಗೆ ಹೆದರಿಕೆ , ಅಸಹ್ಯ. ಮುಜುಗರ ತರುವ ಒಂದು ಹೆಸರು. ಅನೇಕಾನೇಕ ಸುಳ್ಳು ಕಲ್ಪನೆಗಳಲ್ಲಿ , ಗಾಳಿ ಮಾತಿನಲ್ಲೇ ಅವನನ್ನು ಸೃಷ್ಟಿಸಿಕೊಂಡು, ಈ ನಮ್ಮ ಕಾಲೇಜಿಗೇ ಸೇರಬಾರದ ಒಂದು ಸಮೂಹದ ವಿದ್ಯಾರ್ಥಿ ಎಂದು ಪರಿಗಣಿಸಿರುವ ಸಮಯದಲ್ಲೇ ಅವನ ಪ್ರವೇಶ. ಮುಸ್ತಫಾನನ್ನು ಮುಟ್ಟಿಸಿಕೊಳ್ಳುವುದಿರಲಿ, ನಡೆದಾಡುವಾಗ ಅವನ ಗಾಳಿಕೂಡಾ ಸೋಂಕಬಾರದು ಎನ್ನುವ ರೀತಿಯ ನಡುವಳಿಕೆಗಳು ಕೇವಲ ವಿದ್ಯಾರ್ಥಿಗಳಲ್ಲಿ ಮಾತ್ರ ಅಲ್ಲ, ಅವರಿಗೆ ವಿದ್ಯೆಯನ್ನು ಹೇಳಿಕೊಟ್ಟು ಸಮಾಜದಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಾದ ಮೇಷ್ಟ್ರಯಗಳಲ್ಲೂ ಅದೇ ಮನೋಭಾವ ಇರುವುದನ್ನು ಚಿತ್ರ ಬಹಳ ಸಮರ್ಥವಾಗಿ ರೂಪಿಸಿದೆ.
ಫುಟ್ಬಾಲ್ ಆಟ ಆಡಿದರೆ, ಮುಸ್ತಫಾನನ್ನು ಮುಟ್ಟಿಸಿಕೊಂಡು ಆಡಬೇಕು, ಬದಲಿಗೆ ಕ್ರಿಕೆಟ್ ಆಡಿದರೆ ಅವನ ದೈಹಿಕ ಸಂಪರ್ಕ ನೇರವಾಗಿ ಆಗುವುದಿಲ್ಲ ಎನ್ನುವ ಮನೋಬಾವ; ಅದಕ್ಕೆ ಪೂರಕವಾಗಿ ಅಸಮಂಜಸ ತರ್ಕಗಳನ್ನು ಹೇಳಿ ಸ್ನೇಹಿತರನ್ನು ಮತ್ತು ಕ್ರೀಡಾ ಚಟುವಟಿಕೆಯ ಮೇಷ್ಟ್ರನ್ನು ಒಪ್ಪಿಸುವುದು; ಫುಟ್ಬಾಲ್ ತಂಡ ಕಟ್ಟಿದಲ್ಲಿ ಮುಸ್ತಫಾ ಕ್ಯಾಪ್ಟ್ನ್ ಆಗುತ್ತಾನೆ, ಬದಲಿಗೆ ಕ್ರಿಕೆಟ್ನ ತಂಡ ಮಾಡಿದಲ್ಲಿ ನಾನು ಕ್ಯಾಪ್ಟ್ನ್ಆ ಗಬಹುದು ಎನ್ನುವ ರಾಮಾನುಜನ ಸಣ್ಣತನದ ಆಲೋಚನೆ; ಪ್ರತಿದಿನ ಮುಸ್ತಫಾ ಬಿರಿಯಾನಿ ತಿನ್ನುತ್ತಾನೆ ಎನ್ನುವ ಕಲ್ಪಿತ ಆಲೋಚನೆ; ಎಲ್ಲರನ್ನೂ ಅವನು ತಬ್ಬಿಕೊಳ್ಳುತ್ತಾನೆ ಎನ್ನುವ ರೋಮಾಂಚನ ಹಾಗು ಭಯದ ಮಿಶ್ರ ಆಲೋಚನೆಯ ರಮಾಮಣಿ; ಹೊದಿಸಿದ ಬಟ್ಟೆಗೆ ಬೆಂಕಿ ತಗುಲಿ ಹೋರಿ ಎಲ್ಲರನ್ನೂ ತಿವಿದು ದೊಂಬಿ ಆದಾಗ, ಅದನ್ನು ಹಿಂದು-ಮುಸ್ಲಿಂ ಗಲಾಟೆ ಎಂದು ಸುಳ್ಳು ಸುದ್ದಿ ಹಬ್ಬಿಸುವುದು; ಇಂತಹ ವಿಚಾರಗಳು ಅನೇಕ ಸಣ್ಣ ಸಣ್ಣ ದೃಶ್ಯ ಮತ್ತು ಸಂಭಾಷಣೆಗಳ ಮುಖಾಂತರ ಪರಿಣಾಮಕಾರಿಯಾಗಿ ಮೂಡಿಬಂದಿವೆ. ಅದೇ ಸಮಯದಲ್ಲಿ ಮುಸ್ತಫಾ ಮ್ಯಾಜಿಕ್ ಮಾಡುವಾಗ ಕೋಳಿಮೊಟ್ಟೆಯ ದೃಶ್ಯ ಬೇಕಿರಲಿಲ್ಲ; ನೋಡುವ ಪ್ರೇಕ್ಷಕರು ಎಲ್ಲರೂ ಪ್ರಬುದ್ಧರಾಗಿರುತ್ತಾರೆ ಎಂದು ಭಾವಿಸಿಕೊಳ್ಳುವುದು ಸರಿಯಲ್ಲ.
ಪ್ರಜ್ಙಾವಂತ ನಾಗರೀಕರು ಎಂದು ಭಾವಿಸುವ ನಾವುಗಳು ಇಲ್ಲಿ ಗುರುತಿಸಬೇಕಾದ ಮುಖ್ಯ ಅಂಶವೆಂದರೆ, ಮನಸ್ಸು, ಮಿದುಳು ವಿಕಾಸಗೊಳ್ಳುವ ವಿದ್ಯಾರ್ಥಿ ಜೀವನದ ಸಮಯದಲ್ಲೇ ಯುವ ವಿದ್ಯಾರ್ಥಿ ಮನಸ್ಸುಗಳು ಹೀಗೆ ಜಾತಿ ಧರ್ಮಗಳ ಸೂಕ್ಷತೆಯಲ್ಲಿ ಸಂಕುಚಿತ ಮನೋಭಾವಕ್ಕೆ ಈಡಾದರೆ, ಈ ದೇಶವನ್ನು ಸಂವಿಧಾನದ ಪ್ರಮುಖ ಆಶಯವಾದ ಧರ್ಮ ಸಹಿಷ್ಣುತೆಯ ದೇಶವನ್ನಾಗಿ ಕಟ್ಟಲು ಹೇಗೆ ಸಾಧ್ಯ? ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಅರಳಿಸಲು ಹೇಗೆ ಸಾಧ್ಯ? ಎಂಬುದು ನಮ್ಮ ಚಿಂತನೆಗೆ ಒಳಗಾಗಬೇಕಾದ ಪ್ರಮುಖ ಅಂಶ; ನಮ್ಮ ಮಕ್ಕಳ್ಳಲ್ಲಿ ವಿಕಾಸಗೊಳ್ಳುವ ಹಾಗೆ ನಾವು ನೋಡಿಕೊಳ್ಳಬೇಕಾದ ಪ್ರಮುಖ ಚಿಂತನೆ. ಈ ಚಿಂತನೆ ಚಿತ್ರದಲ್ಲಿ ಎರಡು ಸಂದರ್ಭದಲ್ಲಿ ಯಶಸ್ವಿಯಾಗಿ ಮೂಡಿಬಂದಿದೆ.
ಮೊದಲನೆಯದು ಎಂದರೆ, ಈಗಾಗಲೇ ಸಹೃದಯ ಪ್ರೇಕ್ಷಕರು ಗುರುತಿಸಿರುವ ಭಾವನಾತ್ಮಕ ಕ್ಷಣದ ಸಂದರ್ಭ – ರಾಮಾನುಜ ಕೊನೆಯ ಕ್ಷಣದಲ್ಲಿ ಮನಸ್ಸು ಬದಲಿಸಿ ಕ್ರಿಕೆಟ್ ಪಂದ್ಯವನ್ನು ಗೆಲ್ಲಿಸುವುದು ಹಾಗೂ ಅದಕ್ಕೆ ಅವಶ್ಯವಾಗಿರುವ ಒಂದು ರನ್ಗೆ ಮುಸ್ತಫಾ ಜೊತೆ ಓಡುವುದು. ಆದರೆ ಇದಕ್ಕಿಂತ ಪ್ರಮುಖವಾದ ಪರಿಣಾಮಕಾರಿ ದೃಶ್ಯವೆಂದರೆ, ಚಿತ್ರದ ಕೊನೆಯಲ್ಲಿ, ರಾಮಾನುಜ ತನ್ನ ಮನೆಯಲ್ಲಿನ ಕೌಟುಂಬಿಕ ಫೋಟೋದಲ್ಲಿ ಮುಚ್ಚಟ್ಟಿರುವ ತನ್ನ ತಂಗಿಯ ಫೋಟೋ ಭಾಗವನ್ನು ಹೊರತೆಗೆದು ಪೂರ್ಣ ಫೋಟೋವನ್ನು ಎಲ್ಲರಿಗೂ ಕಾಣುವ ಹಾಗೆ ಗೋಡೆಗೆ ಮತ್ತೆ ನೇತುಹಾಕುವುದು. ಈ ಒಂದು ಸನ್ನಿವೇಶದಲ್ಲಿ ಚಿತ್ರ ಧರ್ಮ ಸಹಿಷ್ಣುತೆಯ, ರ್ಯಾದ ಹತ್ಯೆಯ ನೂರಾರು ಅರ್ಥಗಳನ್ನು ಸಕಾರಾತ್ಮಕವಾಗಿ ತೆರೆದಿಡುತ್ತದೆ. ನಿರ್ದೇಶಕ ಶಶಾಂಕ ಸೋಗಾಲ್ ಅವರು ಈ ಚಿತ್ರದ ಯಶಸ್ವಿ ನಿರ್ದೇಶಕ ಎನ್ನಿಸಿಕೊಳ್ಳುವುದು ಈ ಒಂದು ದೃಶ್ಯದಿಂದ ಎನ್ನುವ ಮಾತನ್ನು ಅಭಿಮಾನದಿಂದ ಹೇಳಲೇಬೇಕಾಗುತ್ತದೆ.
ಡೇರ್ ಡೆವಿಲ್ ಮುಸ್ತಫಾ ಚಲನಚಿತ್ರದಲ್ಲಿ, ಪ್ರಮುಖ ಪಾತ್ರವನ್ನು ಮಾಡಿರುವ ಎಲ್ಲ ನಟ-ನಟಿಯರೂ ರಂಗಭೂಮಿಯ ಹಿನ್ನಲೆಯವರು. ಅದರಲ್ಲೂ ಇವರೆಲ್ಲರೂ ಮೈಸೂರಿನ ಪ್ರತಿಷ್ಟಿತ ರಂಗ ಶಾಲೆ, ರಂಗ ತಂಡ “ನಟನ” ದ ವಿದ್ಯಾರ್ಥಿಗಳು ಎಂಬುದನ್ನು ನಾವು ಹೆಮ್ಮೆಯಿಂದ ಗುರುತಿಸಬೇಕು. ಇಂತಹ ಖ್ಯಾತನಾಮರಲ್ಲದ ನಟರನ್ನು ಗುರುತಿಸಿ, ನಟಿಸಲು ಅವಕಾಶ ನೀಡಿ ಯಶಸ್ವಿಯಾಗಿರುವ ಯುವ ನಿರ್ದೇಶಕ ಶಶಾಂಕ ಸೋಗಾಲ್ ಅವರಿಗೆ ಧನ್ಯವಾದಗಳನ್ನು ಎಷ್ಟು ಹೇಳಿದರೂ ಸಾಲದು. ಹಾಗೆಯೇ ಪೋಷಕ ಪಾತ್ರಗಳಲ್ಲಿ ಹಿರಿಯ ರಂಗ ಹಾಗೂ ಚಿತ್ರ ನಟ ಎಮ್ ಎಸ್ ಉಮೇಶ್, ಇಂದಿನ ಜನಪ್ರಿಯ ಹಾಗೂ ಪ್ರಬುದ್ಧ ನಟ ಮಂಡ್ಯ ರಮೇಶ್, ಸುಂದರ್ ವೀಣಾ, ಹರಿಣಿ ಶ್ರೀಕಾಂತ್,ಮೈಸೂರು ಆನಂದ್, ವಿಜಯ್ ಶೋಭರಾಜ್ ಪಾವೂರ್ ಮುಂತಾದ ನಟರ ಬಳಗ ಸಹ ಚಿತ್ರಕ್ಕೆ ಅವಶ್ಯಕವಾದ ಅಭಿನಯವನ್ನು ನೀಡಿ, ಚಿತ್ರದ ಯಶಸ್ಸಿಗೆ ಸಹಕಾರಿಯಾಗಿದ್ದಾರೆ.
ಕ್ರೀಡಾ ಚಟುವಟಿಕೆಗಳ ಮೇಷ್ಟ್ರರಾಗಿ ಅಭಿನಯಿಸಿರುವ ವಿಜಯ್ ಶೋಭರಾಜ್ ಪಾವೂರ್ ಅವರು ಮೊದಲ ಬಾರಿಗೆ ವಿಭಿನ್ನ ಪಾತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ, ಅದೇ ರೀತಿ ಚಿತ್ರ ಮುಗಿದ ಮೇಲೂ ನಮ್ಮ ಮನಸ್ಸಿನಲ್ಲಿ ಉಳಿಯುವ ಪಾತ್ರವೆಂದರೆ, ಕಾಲೇಜಿನ ಅಟೆಂಡರ್ ಪಾತ್ರದ ಮೈಸೂರು ಆನಂದ್ ಅವರ ಅಭಿನಯದ ಪಾತ್ರ. ನಟ ಮಂಡ್ಯ ರಮೇಶ್ ಅವರ ಅಭಿನಯದ ಬಗ್ಗೆ ಏನು ಹೇಳುವುದು? ಎಷ್ಟು ಸಹಜವಾಗಿ ಅಭಿನಯಿಸಿದ್ದಾರೆ ಎಂದರೆ, ಸಹಜ ನಟನೆಯನ್ನು ರಮೇಶ್ ಅವರಿಂದ ಕಲಿಯಬೇಕು ಎಂದು ಮಾತ್ರ ನಾನು ಹೇಳಬಲ್ಲೆ. ಕೇವಲ ಮೂರು ನಾಲ್ಕು ಅರ್ಥಪೂರ್ಣ ಸಾಹಿತ್ಯದ ಗೀತೆಗಳನ್ನು ಇಟ್ಟುಕೊಂಡು ಚಿತ್ರ ನಿರ್ದೇಶಿಸಿರುವ ಶಶಾಂಕ್ ಸೋಗಾಲ್ ಅವರು ದೊಡ್ಡ ಸವಾಲನ್ನೇ ಎದುರಿಸಿ ಯಶಸ್ವಿಯಾಗಿದ್ದಾರೆ.
ಮರ ಸುತ್ತುವ ಹಾಡುಗಳು, ಡಿಜಿಟಲ್ ನೃತ್ಯಗಳು ಇಲ್ಲದೆ ಸಹ ಚಿತ್ರವನ್ನು ಯಶಸ್ವಿಯಾಗಿ ಮಾಡಬಹುದು ಎಂಬುದಕ್ಕೆ ಉತ್ತಮ ನಿದರ್ಶನವಾಗಿದ್ದಾರೆ. ರಂಗಭೂಮಿಯ ಎಲ್ಲ ರಂಗತಂಡಗಳೂ ಖುಷಿಯ ಗಳಿಗೆಗಳಲ್ಲಿ ಹಾಡಿ ಕುಣಿದಾಡುವ ರಂಗಗೀತೆ, ಸಮುದಾಯ ತಂಡದ ಹುತ್ತವ ಬಡಿದರೆ ನಾಟಕದ ಮೈಸೂರು ರಾಜ್ಯದ ದೊರೆಯೇ ಹಾಡು (ರಚನೆ: ಸಿ ವೀರಣ್ಣ) ಪರಿಣಾಮಕಾರಿಯಾಗಿ ಮೂಡಿಬಂದಿದೆ.
ಈ ಚಿತ್ರದಲ್ಲಿ ನಿರ್ದೇಶಕರಷ್ಟೇ ಪ್ರಮುಖವಾಗಿ ಕೆಲಸ ಮಾಡಿ ಚಿತ್ರದ ಯಶಸ್ಸಿಗೆ ಕಾರಣವಾಗಿರುವವರು ಕಥಾ ವಿಸ್ತರಣೆಯ ವಿಭಾಗದಲ್ಲಿ ಕೆಲಸ ಮಾಡಿರುವ ಅನಂತ ಶಾಂದ್ರೇಯ ಅವರು. ಅನಂತ ಅವರು ಸಹ ಬೆಂಗಳೂರಿನ ಹಲವು ರಂಗತಂಡಗಳ ಚಿರಪರಿಚಿತ ಸ್ನೇಹಿತರು. ಒಂದು ರೀತಿಯಲ್ಲಿ ಅವರೂ ಸಹ ರಂಗಭೂಮಿಯವರೇ. ಅನೇಕ ಯಶಸ್ವಿ ಧಾರವಾಹಿಗಳ ಸಂಭಾಷಣೆಕಾರರು. ಅವರು ನಿರ್ದೇಶಕ ಶಶಾಂಕ ಸೋಗಾಲ ಅವರ ಜೊತೆ ನಿಂತು ಸಮಾನ ಮನಸ್ಕರಾಗಿ ಗುರುತಿಸಿಕೊಂಡು ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ಸರ್ಕಾರ ಈಗ ಈ ಚಿತ್ರಕ್ಕೆ ತೆರಿಗೆ ವಿನಾಯತಿಯನ್ನು ನೀಡಿ ಒಂದು ಉತ್ತಮ ಕೆಲಸವನ್ನು ಮಾಡಿದೆ. ವಿದ್ಯಾರ್ಥಿ ಸಮುದಾಯಕ್ಕೆ ಈ ಚಿತ್ರ ಹೆಚ್ಚು ಪ್ರದರ್ಶನವಾಗಬೇಕು. ಸಮೂಹ ಪ್ರದರ್ಶನಗಳಾಗಿ ಪ್ರದರ್ಶನದ ನಂತರದಲ್ಲಿ ಚರ್ಚೆಗಳಾಗಬೇಕು. ವಿದ್ಯಾರ್ಥಿ ಸಮೂಹ ಚಿತ್ರಮಂದಿರಗಳಿಗೆ ಬಂದು ನೋಡುವುದಕ್ಕೂ, ಚಿತ್ರವೇ ವಿದ್ಯಾರ್ಥಿ ಸಮೂಹದ ಹತ್ತಿರ ಹೋಗಿ, ಪ್ರಜ್ಙಾಪೂರ್ಣ ಚರ್ಚೆ ಆಗುವುದಕ್ಕೂ ಬಹಳ ಮೌಲ್ಯಾಧಾರಿತ ವೆತ್ಯಾಸವಿದೆ. ಹಾಗೆ ಆದಾಗ ಈ ಚಿತ್ರದ ಅಂತರಂಗದ ಆಶಯ ಮತ್ತು ಸಾಮಾಜಿಕ ಸ್ವಾಸ್ಥ್ಯದ ಸೂಕ್ಷ್ಮ ವಿಷಯಗಳು ಎಲ್ಲರನ್ನೂ ತಲುಪಲು ಸಾಧ್ಯ. ಒಂದು ಯಶಸ್ವಿ ಚಿತ್ರ ನಿರ್ದೇಶನ ಮಾಡಿದ್ದಕ್ಕೂ ಸಾರ್ಥಕತೆ ಮೂಡುತ್ತದೆ ಎಂದು ನನ್ನ ಭಾವನೆ,ಅನಿಸಿಕೆ.
ಕನ್ನಡ ಚಿತ್ರರಂಗಕ್ಕೆ ಒಂದು ಪರಿಣಾಮಕಾರಿ,ಅತಿ ಅವಶ್ಯಕ ಆಲೋಚನೆಗಳ ಯಶಸ್ವಿ ಚಿತ್ರ ಕೊಟ್ಟಿದ್ದಕ್ಕೆ ಸಿನಮಾಮರ ತಂಡದ ಎಲ್ಲರಿಗೂ ಹೃದಯ ತುಂಬಿದ ಅಭಿನಂದನೆಗಳು.