ದಂತಕಥೆಯಾದ ಬಂಗಾಳದ ವೀರ ಹುತಾತ್ಮ ಖುದಿರಾಮ್ ಬೋಸ್

ನಿತ್ಯಾನಂದಸ್ವಾಮಿ

ಅಂದು ಆಗಸ್ಟ್ 12, 1908. ಅಮೃತ್ ಬಜಾರ್ ಪತ್ರಿಕೆಯು ದೊಡ್ಡ ಅಕ್ಷರಗಳುಳ್ಳ ತಲೆ ಬರಹದ ಸುದ್ದಿಯೊಂದನ್ನು ಪ್ರಮುಖವಾಗಿ ಪ್ರಕಟಿಸಿತ್ತು. “ಖುದಿರಾಮನ ಅಂತ್ಯ: ಆತ ಉಲ್ಲಾಸಭರಿತವಾಗಿ ನಗುನಗುತ್ತಾ ಸಾವನ್ನಪ್ಪಿದನು. ಆತನ ಅಂತ್ಯಸಂಸ್ಕಾರ ಸರಳವಾಗಿತ್ತು.” ಪತ್ರಿಕೆಯು ಸಮಾಚಾರವನ್ನು ಮುಂದುವರೆಸುತ್ತಾ “ಖುದಿರಾಮ್‌ರನ್ನು ಅಗಸ್ಟ್ 11 ರ ಬೆಳಿಗ್ಗೆ 6 ಗಂಟೆಗೆ ಗಲ್ಲಿಗೇರಿಸಲಾಯಿತು. ಆತನು ದೃಢಚಿತ್ತದಿಂದ ಉಲ್ಲಾಸಿತನಾಗಿ ಗಲ್ಲುಗಂಬದತ್ತ ನಡೆದನು; ಆತನಿಗೆ ಮುಖ ಮುಚ್ಚುವ ಹೊದಿಕೆಯನ್ನು ತೊಡಿಸುವಾಗ ಅವನು ಮುಗುಳ್ನಗುವುದು ಕಂಡುಬಂತು.”

ಬ್ರಿಟಿಷ್ ಆಡಳಿತಕ್ಕೆ ಸೇರಿದ `ದಿ ಎಂಪಾಯರ್’ ಪತ್ರಿಕೆಯು ಇದೇ ಘಟನೆಯನ್ನು ವರದಿ ಮಾಡುತ್ತಾ “ಖುದಿರಾಮ್ ಬೋಸ್‌ರನ್ನು ಬೆಳಿಗ್ಗೆ ನೇಣಿಗೆ ಹಾಕಲಾಯಿತು. ಆತನ ದೇಹ ನೆಟ್ಟಗಿತ್ತು. ಆತ ನಗುನಗುತ್ತಾ ಗಲ್ಲುಗಂಬವನ್ನೇರಿದನು. ಇನ್ನುಳಿದ ಅನೇಕ ಬ್ರಿಟಿಷ್ ಪತ್ರಿಕೆಗಳು ಭಾರತದ ಕ್ರಾಂತಿಕಾರಿಯೊಬ್ಬನ ಸಾವಿಗೆ ಯಾವುದೇ ಮಹತ್ವ ನೀಡಲಿಲ್ಲ.

ಖುದಿರಾಮ್ ಆಗ ಹದಿಹರೆಯದ ಉತ್ಸಾಹಿ ಯುವಕನಾಗಿದ್ದನು. ನ್ಯಾಯಾಧೀಶರೊಬ್ಬರ ಮಾತುಗಳಲ್ಲಿ ಹೇಳುವುದಾದರೆ ಆತ ಭಯಭೀತಿಯಿಲ್ಲದ, ಜಗ್ಗದ, ಬಗ್ಗದ ಯುವಕನಾಗಿದ್ದನು. ಆತನ ಧೈರ್ಯವನ್ನು ಗಮನಿಸಿ ಆಶ್ಚರ್ಯಪಟ್ಟ ಆ ನ್ಯಾಯಾಧೀಶ “ನಿನ್ನ ವಿರುದ್ಧ ನೀಡಲು ಉದ್ದೇಶಿಸಲಾದ ತೀರ್ಪಿನ ಗಂಭೀರತೆ ನಿನಗೆ ಅರ್ಥವಾಗಿದೆಯಾ’ ಎಂದು ಪ್ರಶ್ನಿಸುವಂತಾಯಿತು. ಆಗಲೂ ಸಹ ಖುದಿರಾಮ್ ಧೈರ್ಯಗುಂದಲಿಲ್ಲ. ಖುದಿರಾಮ್‌ನನ್ನು ಅಗಸ್ಟ್ 11 ರ ಬೆಳಿಗ್ಗೆ ಮುಜಾಫರ್‌ಪುರ್‌ನಲ್ಲಿ ಗಲ್ಲಿಗೇರಿಸಲಾಯಿತು. ಅದು ಆತನ ತವರು ಜಿಲ್ಲೆ ಮಿದಿನಾಪುರದಿಂದ ತುಂಬಾ ದೂರದಲ್ಲಿತ್ತು. ನೇಣಿಗೇರಿಸುವ ಪ್ರಕ್ರಿಯೆ ಕೆಲವೇ ನಿಮಿಷಗಳಲ್ಲಿ ಮುಗಿದು ಹೋಯಿತು. ನಾಲ್ಕು ಜನ ಪೊಲೀಸರು ಆತನೊಂದಿಗೆ ನೇಣುಕಂಬಕ್ಕೆ ಹೆಜ್ಜೆಹಾಕಿದರು. ಆತ ಪೊಲೀಸರನ್ನೇ ನೇಣುಕಂಬಕ್ಕೆ ಕರೆದೊಯ್ಯುತ್ತಿದ್ದಾನೆ ಎಂಬಂತೆ ದೃಢವಾಡ ಹೆಜ್ಜೆಗಳನ್ನು ಹಾಕುತ್ತಿದ್ದನು. ಅವನು ಪೊಲೀಸರತ್ತ ನೋಡಿ ನಕ್ಕದ್ದನ್ನು ದಾಖಲಿಸಲಾಗಿದೆ. ಜಾನಪದ ಹಾಡುಗಾರನೊಬ್ಬ ಈ ಘಟನೆಯನ್ನು ಅಮರಗೊಳಿಸಿದ್ದು ಹೀಗೆ: “ಹೋಗಿ ಬರುತ್ತೇನೆ ಅವ್ವ, ಬಿಡು ನನ್ನ ನೇಣಿಗೆ ಹೋಗಲು. ಭಾರತೀಯರು ನೋಡುವಂತೆ ನಾನು ಅಪ್ಪಿಕೊಳ್ಳುವೆ ಆ ಗಲ್ಲುಗಂಬವನ್ನು.”

ಖುದಿರಾಮ್ ಬೋಸ್ ಗಲ್ಲಿಗೇರಿ ಹುತಾತ್ಮನಾದದ್ದು ಆಕಸ್ಮಿಕವಲ್ಲ. ಅದು ಅಂದಿನ ದಿನಗಳಲ್ಲಿ ಬಂಗಾಳ, ಪಂಜಾಬ್ ಮತ್ತು ಮುಂಬೈ ಮುಂತಾದ ಕಡೆಗಳಲ್ಲಿ ಕ್ರಾಂತಿಕಾರಿಗಳು ನಡೆಸುತ್ತಿದ್ದ ಕ್ರಾಂತಿಕಾರಿ ಚಟುವಟಿಕೆಗಳ ಭಾಗವಾಗಿತ್ತು. ಇಲ್ಲಿ ವಸಾಹತುಶಾಹಿ ವಿರುದ್ಧ ಅತ್ಯಂತ ಶ್ರೀಮಂತವಾದ ಸಶಸ್ತ್ರ ಹೋರಾಟದ ಪರಂಪರೆ ಬೆಳೆದು ಬಂದಿತ್ತು. ಒಂದರ ನಂತರ ಒಂದರಂತೆ ಕ್ರಾಂತಿಕಾರಿ ಹೋರಾಟದ ಅಲೆ ಜನತೆಯನ್ನು ಆಕರ್ಷಿಸತೊಡಗಿತ್ತು. 18ನೇ ಶತಮಾನದ ಕೊನೆಯಿಂದ 19ನೇ ಶತಮಾನದ ಉದ್ದಕ್ಕೂ ಅನೇಕ ಸ್ವಯಂ ನಿರ್ಧಾರದ ದಂಗೆಗಳು ಬುಗಿಲೆದ್ದವು. ಸನ್ಯಾಸಿಗಳ ಮತ್ತು ಫಕೀರರ ದಂಗೆ, ಮಲಬಾರ್ ಮಾಪಿಳ್ಳೆಯರ ಆಂದೋಲನ, ಆದಿವಾಸಿ ಸಂತಾಲರ ಸಶಸಸ್ತ್ರ ದಂಗೆ, ವಹಾಬಿಗಳ ಹೋರಾಟ, ನೀಲಿ ಬೆಳೆಗಾರರ ಚಳುವಳಿ, ಪರೈಝಿಯರ ಚಳವಳಿ ಮಹಾರಾಷ್ಟ್ರದ ವಾರ್ಲಿ ಆದಿವಾಸಿಗಳ ಹೋರಾಟ ಮೊದಲಾದ ಸಮರಶೀಲ ಚಳುವಳಿಗಳು ವಸಾಹತುಶಾಹಿ ಆಡಳಿತಕ್ಕೆ ಒಂದು ಬಲವಾದ ಸವಾಲನ್ನು ಎಸೆದವು ಮಾತ್ರವಲ್ಲ ಕ್ರಾಂತಿಕಾರಿಗಳ ದಾರಿಯನ್ನು ಸ್ಪಷ್ಟಗೊಳಿಸಿದವು. ಇದರೊಂದಿಗೆ ಸ್ವಾತಂತ್ರ್ಯ ಚಳುವಳಿಯಲ್ಲಿ ಸಶಸ್ತ್ರ ರಾಷ್ಟ್ರೀಯತೆಯ ಉದಯವಾಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಒಡೆಯಿತು. ಗೋಖಲೆ, ಸುರೇಂದ್ರನಾಥ ಬ್ಯಾನರ್ಜಿ ಮೊದಲಾದವರನ್ನು ಒಳಗೊಂಡ ಒಂದು ವಿಭಾಗ, ಶಾಂತಿಯಿಂದ ಸ್ವಾತಂತ್ರ್ಯವನ್ನು ಪಡೆಯಲು ಬಯಸಿತು. ತಿಲಕ್, ಅರವಿಂದ್, ಘೋಷ್, ಬಿಪಿನ್ ಪಾಲ್, ಲಜಪತ್ ರಾಯ್ ಮೊದಲಾದವರು ಸಂಪೂರ್ಣ ಸ್ವಾತಂತ್ರ್ಯದೊಂದಿಗೆ ರಾಜಿ ಮಾಡಿಕೊಳ್ಳಲು ಸಿದ್ಧರಿರಲಿಲ್ಲ. ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಅವರು ಕರೆ ನೀಡಿದರು. 1907 ರ ಕಾಂಗ್ರೆಸಿನ ಸೂರತ್ ಅಧಿವೇಶನದಲ್ಲಿ ಕಾಂಗ್ರೆಸಿನ ಎರಡು ವಿಭಾಗಗಳ ನಡುವೆ ಬಹಿರಂಗ ಸಂಘರ್ಷವೇ ನಡೆಯಿತು.

ಇದೇ ಸಮಯದಲ್ಲಿ ದೂರಗಾಮಿ ಪರಿಣಾಮ ಬೀರಿದ ಮತ್ತೊಂದು ಘಟನೆಯೂ ನಡೆಯಿತು. ಅದುವೇ ಬಂಗಾಳದ ವಿಭಜನೆ. ಅಂದು ವೈಸರಾಯಿ ಆಗಿದ್ದ ಲಾರ್ಡ್ ಕರ್ಜನ್ ಬಂಗಾಳವನ್ನು ಎರಡು ಭಾಗಗಳಾಗಿ ವಿಭಜಿಸಿದನು. ರಾಷ್ಟ್ರೀಯ ಚಳುವಳಿ ಪ್ರಬಲವಾಗಿ ಬೆಳೆಯುತ್ತಿದ್ದ ಬಂಗಾಳವನ್ನು ದುರ್ಬಲಗೊಳಿಸುವುದು ಬ್ರಿಟಿಷ್ ಆಡಳಿತಗಾರರ ದುರುದ್ದೇಶವಾಗಿತ್ತು. ಪೂರ್ವ ಬಂಗಾಳ ಮತ್ತು ಆಸ್ಸಾಂನ್ನು ಸೇರಿಸಿ ಡಾಕ್ಕಾವನ್ನು ಅದರ ರಾಜಧಾನಿ ಮಾಡಲಾಯಿತು. ಪಶ್ಚಿಮ ಬಂಗಾಳ, ಒರಿಸ್ಸಾ ಮತ್ತು ಬಿಹಾರ್ ಪ್ರದೇಶಗಳನ್ನು ಸೇರಿಸಿ ಕೊಲ್ಕತ್ತಾವನ್ನು ಅದರ ರಾಜಧಾನಿ ಮಾಡಲಾಯಿತು. ಬ್ರಿಟಿಷರ ದುರುದ್ದೇಶವನ್ನು ಮನಗಂಡ ದೇಶಬಾಂಧವರ ಆಕ್ರೋಶ ಸ್ಫೋಟಗೊಂಡಿತು. ಸ್ವದೇಶಿ ಚಳುವಳಿ ತೀವ್ರಗೊಂಡಿತು. ಕ್ರಾಂತಿಕಾರಿಗಳ ಗುಂಪುಗಳು ಹೆಚ್ಚಾದವು. ವಿದೇಶಿ ವಸ್ತುಗಳನ್ನು ಬಹಿರಂಗವಾಗಿ ಬೆಂಕಿಗೆ ಹಾಕಲಾಯಿತು. ಕ್ರಾಂತಿಕಾರಿ ಗುಂಪುಗಳ ಕಾರ್ಯಾಚರಣೆ ವ್ಯಾಪಕಗೊಂಡಿತು. ದೇಶದ ಉದ್ದಗಲಕ್ಕೂ ಸಾವಿರಾರು ಪ್ರತಿಭಟನಾ ಮೆರವಣಿಗೆಗಳನ್ನು ಹಾಗೂ ಪ್ರತಿಭಟನೆಗಳನ್ನು ಸಂಘಟಿಸಲಾಯಿತು. ಬ್ರಿಟಿಷರ ಒಡೆದು ಆಳುವ ನೀತಿಯನ್ನು ವಿರೋಧಿಸಿ ದೇಶ ಪ್ರೇಮಿಗಳು ಅಸಂಖ್ಯಾತ ಸಂಖ್ಯೆಯಲ್ಲಿ ಬೀದಿಗಿಳಿದು ಬಂದರು. ಬಂಗಾಳದಲ್ಲಂತೂ. `ವಂದೇ ಮಾತರಂ’ ಘೋಷಣೆ ಜನರನ್ನು ಬಡಿದೆಬ್ಬಿಸಿತ್ತು.

ನಮ್ಮ ದೇಶವನ್ನು, ದೇಶ ಬಾಂಧವರನ್ನು ಸಾಮ್ರಾಜ್ಯಶಾಹಿ ಬಂಧನದಿಂದ ವಿಮೋಚನೆ ಮಾಡಲು ತಮ್ಮ ಅಮೂಲ್ಯ ಪ್ರಾಣವನ್ನೇ ಬಲಿದಾನಗೈದ ವೀರ ಹುತಾತ್ಮರಲ್ಲಿ ಬಂಗಾಳದ ಖುದಿರಾಮ್ ಬೋಸ್ ಒಬ್ಬರು. ಆತ ಮೇದಿನಿಪುರ ಪಟ್ಟಣದ ಹತ್ತಿರದ ಹಬೀಬ್‌ಪುರದಲ್ಲಿ ಡಿಸೆಂಬರ್ 3, 1889 ರಲ್ಲಿ ಜನಿಸಿದ್ದರು. ಆತ 6 ವರ್ಷದವರಾಗಿದ್ದಾಗಲೇ ತಮ್ಮ ತಾಯಿ ತಂದೆಯರನ್ನು ಕಳೆದುಕೊಂಡಿದ್ದರು. ತನ್ನ ಅಕ್ಕನ ಮನೆಯಲ್ಲಿ ಇರುತ್ತಿದ್ದ ಆತ ಚಿಕ್ಕಂದಿನಿಂದಲೇ ಧೈರ್ಯಶಾಲಿಯೂ, ದೃಢ ಚಿತ್ತದವನೂ ಆಗಿದ್ದನು. ಗಂಭೀರ ಓದಿನತ್ತ ಆತನಿಗೆ ಹೆಚ್ಚೇನು ಆಸಕ್ತಿ ಇರಲಿಲ್ಲ. ಆದರೆ ಆತ ತನ್ನ ಶಿಕ್ಷಕರಿಗೆ ತುಂಬಾ ನಂಬಿಗಸ್ತನಾಗಿದ್ದ. ಮಿಡ್ನಾಪುರ ಶಾಲೆಗೆ ಸೇರಿದ ಬಳಿಕ ಆತ ಇಬ್ಬರು ಅಧ್ಯಾಪಕರ ವಿಶೇಷ ನಂಬಿಕೆಗೆ ಪಾತ್ರನಾದನು. ಒಬ್ಬರು ಜ್ಞಾನೇಂದ್ರನಾಥ್ ಬೋಸ್ ಮತ್ತು ಇನ್ನೊಬ್ಬರು ಹೇಮಚಂದ್ರ ಕನುಂಗೋ. ಅವರು ಖುದಿಮ್‌ರಾಮ್ ಬೋಸರಲ್ಲಿ ಆಳವಾದ ದೇಶ ಪ್ರೇಮವನ್ನು ಬಿತ್ತಿದ್ದರು. 1902 ರಲ್ಲಿ ಖುದಿಮ್ ರಾಮ್‌ರನ್ನು ಯುಗಾಂತರ್ ಎಂಬ ದೇಶಪ್ರೇಮಿ ಗುಂಪಿಗೆ ಸೇರಿಸಲಾಯಿತು. ಈ ಗುಂಪಿನವರು ಬ್ರಿಟಿಷರನ್ನು ದೇಶದಿಂದ ಬೇರು ಸಹಿತ ಕಿತ್ತೆಸೆಯುವ ಪಣತೊಟ್ಟಿರುವವರಾಗಿದ್ದರು. ಒಮ್ಮೆ ಕಾಂಗ್ಸ್‌ಬಾಟಿಯಲ್ಲಿ ನೆರೆ ಹಾವಳಿ ಉಂಟಾಗಿ ಕೊಲೆರಾ ಮತ್ತು ಮಲೇರಿಯಾ ಸಾಂಕ್ರಾಮಿಕ ರೋಗಗಳು ಹಬ್ಬಿಕೊಂಡಾಗ ಖುದಿರಾಮ್ ತನ್ನ ಗುಂಪಿನ ಸದಸ್ಯರೊಂದಿಗೆ ಮುಂಚೂಣಿಯಲ್ಲಿದ್ದು ಹಗಲು ರಾತ್ರಿ, ಊಟವಿಲ್ಲದೆ, ವಿಶ್ರಾಂತಿಯಿಲ್ಲದೆ ಬಡವರ, ಬಡರೋಗಿಗಳ ಸೇವೆಯಲ್ಲಿ ತೊಡಗುತ್ತಿದ್ದರು. 1905 ರಲ್ಲಿ ಖುದಿರಾಮ್ ಶಾಲೆಗೆ ಹೋಗುತ್ತಿರುವಾಗಲೇ ಬಂಗಾಳ ವಿಭಜನೆಯ ವಿರುದ್ಧದ ಹೋರಾಟದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. 1906 ರಲ್ಲಿ `ಸೋನಾರ್ ಬಾಂಗ್ಲಾ’ ಎಂಬ ಕ್ರಾಂತಿಕಾರಿ ಕರಪತ್ರಗಳನ್ನು ವಿತರಿಸುತ್ತಿದ್ದಾಗ ಪೊಲೀಸರು ಆತನನ್ನು ಸರ್ಕಾರದ ವಿರುದ್ಧದ ದ್ರೋಹದ ಆರೋಪ ಹೊರಿಸಿ ಬಂಧಿಸಿ ನಂತರ ಜೈಲಿನಲ್ಲಿ ಇಟ್ಟಿದ್ದರು. ಜೈಲಿನಲ್ಲಿ ಆತನ ಮೇಲೆ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಲಾಯಿತು. ನಂತರ ಆತನ ಅಪ್ರಾಪ್ತ ವಯಸ್ಸನ್ನು ಪರಿಗಣಿಸಿ ಆತನನ್ನು ಬಿಡುಗಡೆ ಮಾಡಲಾಯಿತು.

ಆದರೆ, 1907 ರಲ್ಲಿ ಮತ್ತೊಮ್ಮೆ ಖುದಿರಾಮ್ ಮತ್ತು ಆತನ ಕೆಲವು ಸಂಗಾತಿಗಳನ್ನು ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಗವರ್ನರ್ ಆಂಡ್ರೂ ಪ್ರೇಜರ್ ಮೇಲೆ ಬಾಂಬ್ ಎಸೆದ ಆರೋಪದ ಮೇಲೆ ಬಂಧಿಸಲಾಯಿತು. ಇದು ಮುಜಾಫರ್‌ಪುರ್ ಪಿತೂರಿ ಪ್ರಕರಣ ಎಂದು ಕರೆಯಲ್ಪಟ್ಟಿತು. ಗವರ್ನರ್ ಪ್ರೆಜರ್ ಒಬ್ಬ ಅತ್ಯಂತ ಕ್ರೂರ ವ್ಯಕ್ತಿಯಾಗಿದ್ದನು. ಒಮ್ಮೆ ಸುಶಿಲ್ ಸೇನ್ ಎಂಬ ಕೇವಲ 14 ವರ್ಷದ ಅಪ್ರಾಪ್ರ ವಯಸ್ಸಿನ ಹುಡುಗನನ್ನು `ವಂದೇ ಮಾತರಂ’ ಗೀತೆಯನ್ನು ಹಾಡಿದ ಅಪರಾಧಕ್ಕೆ ನ್ಯಾಯಾಲಯದ ಆವರಣದಲ್ಲಿ ಅಮಾನುಷವಾಗಿ ಹಲ್ಲೆ ಮಾಡಿಸಿದ್ದನು. ಸುಶಿಲ್ ಸೆನ್ ಧೈರ್ಯವಾಗಿ ಈ ಹಿಂಸೆಯನ್ನು ಎದುರಿಸಿದ್ದನು. ಗವರ್ನರ್ ಪ್ರೆಜರ್ ಬಾಂಬ್ ದಾಳಿಯಿಂದ ಬದುಕಿ ಉಳಿದನು. ಖುದಿರಾಮ್ ಮತ್ತು ಪ್ರಫುಲ್ಲ `ಚಾಕಿ ಬ್ರಿಟಿಷ್ ನ್ಯಾಯಾಧೀಶ ಡೊಗ್ಲಾಸ್ ಕಿಂಗ್ಸ್‌ಫರ್ಡ್‌ ನ್ನು ಸಾಯಿಸಲು ಯೋಜನೆ ರೂಪಿಸಿದರು. ಆದರೆ ಆತ ಬೇರೊಂದು ಬಂಡಿಯಲ್ಲಿ ಕುಳಿತ್ತಿದ್ದ ಪ್ರಯುಕ್ತ ದಾಳಿಯಿಂದ ತಪ್ಪಿಸಿಕೊಂಡನು. ಆದರೆ ಅಪ್ಪಿ ತಪ್ಪಿ ಇಬ್ಬರು ಬ್ರಿಟಿಷ್ ಮಹಿಳೆಯರು ಸಾವಿಗೀಡಾದರು. ಖುದಿರಾಮ್ ರವರಿಗೆ ಮರಣದಂಡನೆ ವಿಧಿಸಲಾಯಿತು. ಆಗ ಖುದಿರಾಮ್ ರವರ ವಯಸ್ಸು 18 ವರ್ಷ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಪ್ರಾಣಾರ್ಪಣೆ ಮಾಡಿದ ಅತಿ ಚಿಕ್ಕ ವಯಸ್ಸಿನ ಹುತಾತ್ಮರಲ್ಲಿ ಒಬ್ಬನು.

ಪೊಲೀಸರು ಖುದಿರಾಮ್ ಮತ್ತು ಪ್ರಫುಲ್ಲರನ್ನು ಅಟ್ಟಿಸಿಕೊಂಡು ಹೋಗುವಾಗ, ಪ್ರಫುಲ್ಲ ತನ್ನ ಸ್ವಂತ ರಿವಾಲ್ವರ್‌ನಿಂದ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡನು. ಆದರೆ ಖುದಿರಾಮ್ ಓಡಿಹೋಗಲು ಪ್ರಯತ್ನಿಸಲಿಲ್ಲ. ಅವನನ್ನು ಬಂಧಿಸಲಾಯಿತು. ಅಗಸ್ಟ್ 11, 1908 ರಂದು ಆತನನ್ನೂ ನೇಣುಗಂಬಕ್ಕೇರಿಸಲಾಯಿತು. ಖುದಿರಾಮ್ ಮತ್ತು ಅವನಂತಹ ಅಸಂಖ್ಯಾತ ಹುತಾತ್ಮರು ದೇಶಕ್ಕಾಗಿ ತಮ್ಮ ರಕ್ತವನ್ನು ಹರಿಸಿ ಅಮರರಾಗಿದ್ದಾರೆ. ಮುಂದಿನ ಯುವ ಪೀಳಿಗೆಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಅವರು ಚೆಲ್ಲಿದ ರಕ್ತ ಎಂದಿಗೂ ವ್ಯರ್ಥವಾಗದು. ಅವರು ಬಿದ್ದ ಮರಗಳಲ್ಲ, ಬಿತ್ತಿದ ಬೀಜಗಳು. ಅವರಿಗೆ ಶಸ್ತ್ರ ಬಳಸಿ ತಮ್ಮ ಗುರಿ ಮುಟ್ಟಲು ಸಾಧ್ಯವಾಗಿರಲಿಕ್ಕಿಲ್ಲ. ಆದರೆ ಅವರ ತ್ಯಾಗ ಬಲಿದಾನವನ್ನು, ದೇಶಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಎಂದಿಗೂ ಕಡೆಗಣಿಸಲಾಗದು. ಅವರಿಂದ ಅಪೂರ್ಣವಾದುದನ್ನು ನಾವು ಪೂರ್ಣಗೊಳಿಸಬೇಕಾಗಿದೆ. ರೈತರನ್ನು, ಕಾರ್ಮಿಕರನ್ನು, ವಿದ್ಯಾರ್ಥಿ ಯುವಜನರನ್ನು ಶೋಷಿತರನ್ನು, ದಮನಿತರನ್ನು ಒಂದುಗೂಡಿಸುವ, ಅವರನ್ನು ಸಮರಶೀಲ ಹೋರಾಟಕ್ಕೆ ಸಜ್ಜುಗೊಳಿಸುವ ಕೆಲಸಕ್ಕೆ ದೇಶ ಸಜ್ಜಾಗಲೇಬೇಕು. ಬಂಗಾಳದ ಸಮರಶೀಲ ಜನತೆ, ಅವರ ತ್ಯಾಗ ಬಲಿದಾನ ಮುಂದೆಯೂ ನಮಗೆ ದಾರಿದೀಪವಾಗಲಿದೆ. ದಾರಿದ್ರ್ಯ, ನಿರಕ್ಷರತೆ, ನಿರುದ್ಯೋಗ, ಅಸ್ಪೃಶ್ಯತೆ ಮುಕ್ತವಾದ ದೇಶವನ್ನು ಕಟ್ಟೋಣ.

ಇಂದು ನಮ್ಮನ್ನು ಆಳುವವರು ಬ್ರಿಟಿಷ್ ಆಳ್ವಿಕೆಯನ್ನೇ ನೆನಪಿಸುತ್ತಾರೆ. ಧರ್ಮದ ಹೆಸರಿನಲ್ಲಿ ನಮ್ಮನ್ನು ಒಡೆದು ಆಳುತ್ತಾರೆ. ಆಡಳಿತವನ್ನು ಠೀಕಿಸುವವರನ್ನು, ಪರ್ಯಾಯಕ್ಕಾಗಿ ಧ್ವನಿ ಎತ್ತುತ್ತಿರುವವರನ್ನು ದೇಶದ್ರೋಹಿಗಳೆಂದು ಆರೋಪಿಸಿ ಜೈಲಿನಲ್ಲಿ ಬಂಧಿಸಿಡುತ್ತಾರೆ. ಖುದಿರಾಮ್‌ರಂತವರ ತ್ಯಾಗ ಬಲಿದಾನ ವ್ಯರ್ಥವಾಗದಿರಲಿ. ಅವರ ಕನಸು ನನಸಾಗಲಿ. ತಾಯಿ ಕರೆಯುತ್ತಿದ್ದಾಳೆ.

Donate Janashakthi Media

Leave a Reply

Your email address will not be published. Required fields are marked *