ಲಂಡನ್: ಭಾರತದಲ್ಲಿನ ಪ್ರಜಾಪ್ರಭುತ್ವಕ್ಕೆ ಭಾರೀ ಧಕ್ಕೆ ಎದುರಾಗಿದ್ದು, ಇದರಿಂದಾಗಿ ಜಾಗತಿಕವಾಗಿ ಸಾರ್ವಜನಿಕರ ಒಳಿತಾಗೂ ಧಕ್ಕೆ ಎದುರಾಗಲಿದೆ. ಭಾರತದ ಪ್ರಜಾಪ್ರಭುತ್ವ ಬಿರುಕಿನ ಪರಿಣಾಮದಿಂದ ಇಡೀ ಭೂ ಮಂಡಲಕ್ಕೆ ಸಮಸ್ಯೆಯಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ರಾಹುಲ್‍ಗಾಂಧಿ ಥಿಂಕ್ ಟ್ಯಾಂಕ್ ಸಂಘಟನೆ ಬ್ರಿಡ್ಜ್ ಇಂಡಿಯಾ ಆಯೋಜಿಸಿದ್ದ ‘ಐಡಿಯಾಸ್ ಫಾರ್ ಇಂಡಿಯಾ’ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತದ ಬಿಜೆಪಿ ನೇತೃತ್ವದ ಆಡಳಿತವು ಜನತೆಯ ಧ್ವನಿ ಮತ್ತು ಅಳಲನ್ನು ಹತ್ತಿಕ್ಕಲು ವ್ಯವಸ್ಥಿತವಾಗಿ ತೊಡಗಿದೆ. ನಾವು ಏನನ್ನು ಕೇಳುತ್ತಿದ್ದೇವೆ ಅವು ಎರಡು ಭಿನ್ನ ವಿಷಯಗಳಾಗಿವೆ ಮತ್ತು ಎರಡು ಭಿನ್ನ ವಿನ್ಯಾಸಗಳನ್ನು ಹೊಂದಿವೆ. ಒಂದು ಧ್ವನಿಯನ್ನು ನಿಗ್ರಹಿಸುತ್ತಿದೆ, ಮತ್ತೊಂದು ಜನರ ಅಳಲನ್ನು ಕೇಳುತ್ತಿದೆ. ದೇಶದ ವ್ಯವಸ್ಥೆಯ ಮೇಲೆ ಆಳವಾದ ಹಾನಿ ಮಾಡುವ ಸಿದ್ಧಾಂತದ ವಿರುದ್ಧ ಕಾಂಗ್ರೆಸ್ ಹೋರಾಟಕ್ಕೆ ಸಜ್ಜುಗೊಂಡಿದೆ ಎಂದಿದ್ದಾರೆ.
ಈಗಿನ ಭಾರತದ ವಿದೇಶಾಂಗ ನೀತಿಯೂ ಸಂಪೂರ್ಣವಾಗಿ ಬದಲಾಗಿದೆ. ಅಲ್ಲಿನ ಅಧಿಕಾರಿಗಳು ಯಾರ ಮಾತನ್ನು ಕೇಳುವುದಿಲ್ಲ, ಸೊಕ್ಕಿನಿಂದ ನಡೆದುಕೊಳ್ಳುತ್ತಾರೆ. ನಾನು ಯುರೋಪಿನ ಕೆಲವು ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೆ. ಅವರು ವಿದೇಶಾಂಗ ಸಚಿವಾಲಯ ಸಂಪೂರ್ಣವಾಗಿ ಬದಲಾಗಿದೆ ಮತ್ತು ಏನನ್ನೂ ಕೇಳುವುದಿಲ್ಲ. ಯಾವುದೇ ಸಂಭಾಷಣೆಯೂ ಇಲ್ಲ ಎಂದು ಹೇಳಿದ್ದರು ಎಂದರು.
ನಾನು ಕೇಳಲು ಬಯಸುತ್ತೇನೆ ಎಂಬ ಮನೋಭಾವವನ್ನು ಪ್ರಧಾನಿ ಹೊಂದಿರಬೇಕು, ಆದರೆ ಅದು ನಮ್ಮ ದೇಶದ ಪ್ರಧಾನಿಗೆ ಇಲ್ಲ. ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ಯವನ್ನು ಹತ್ತಿಕ್ಕಲಾಗುತ್ತಿದೆ. ಸಂವಾದಗಳನ್ನು ನಡೆಸಲು ಅನುಮತಿ ನೀಡುವ ಸಂಸ್ಥೆಗಳ ಮೇಲೆ ವ್ಯವಸ್ಥಿತ ದಾಳಿ ನಡೆಯುತ್ತಿದೆ. ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಭಾರತವೆಂದರೆ ನಾವು ಅದರ ಜನರು ಎಂದು ನಂಬುತ್ತೇವೆ. ಆದರೆ, ಬಿಜೆಪಿ ಮತ್ತು ಆರ್‍ಎಸ್‍ಎಸ್ ಭಾರತವನ್ನು ಭೌಗೋಳಿಕ ಎಂದು ನಂಬುತ್ತದೆ ಎಂದು ಕಿಡಿಕಾರಿದ ಅವರು, ನಮ್ಮ ಹೋರಾಟ ಶುದ್ಧ ರಾಜಕೀಯಕ್ಕಾಗಿ ಮಾತ್ರ. ಫಲಾನುಭವಿಗಳು ಅದನ್ನು ಇತರರಿಗೂ ಹಂಚಬೇಕು ಎಂದು ಕಾಂಗ್ರೆಸ್ ಸಿದ್ಧಾಂತವಾಗಿದೆ. ತನ್ಮೂಲಕ ಎಲ್ಲರೂ ಸಮಾನರಾಗಬೇಕು ಎಂದು ಮಹಾತ್ಮಾ ಗಾಂಜೀ ಹೇಳಿರುವುದನ್ನು ರಾಹುಲ್ ಉಲ್ಲೇಖಿಸಿದರು.
ಬಿಜೆಪಿಯು ಮಾಧ್ಯಮಗಳ ಮೇಲೆ ಶೇ.100ರಷ್ಟು ಹಿಡಿತವನ್ನು ಹೊಂದಿದೆ ಎಂದ ರಾಹುಲ್ ಗಾಂಧಿ, ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ನಡೆಸಲು ಸಿದ್ದಗೊಂಡಿದೆ. ಮುಂದಿನ ದಿನಗಳಲ್ಲಿ ಕೆಲ ಸ್ಥಾನಗಳು ಬದಲಾಗುತ್ತವೆ. ಅದಕ್ಕೆ ಎಲ್ಲರೂ ಹೊಂದಿಕೊಳ್ಳುತ್ತಾರೆ. ಮುಂಬರುವ ಹೋರಾಟದ ಫಲಿತಾಂಶದಲ್ಲಿ ಈಗೀನ ಭಾರತಕ್ಕಿಂತ ಉತ್ತಮವಾದದ್ದನ್ನು, ಮತ್ತು ಮೊದಲಿಗಿಂತ ಶ್ರೇಷ್ಠ ಭಾರತವನ್ನು ಹೊಂದಲಿದ್ದೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ ಕೇಳಿದಾಗ, ಚೀನಾ ಭಾರತದ ಮೇಲೆ ರಷ್ಯಾ ಮಾದರಿಯ ಕ್ರಮಗಳನ್ನು ಪಾಲನೆ ಮಾಡುತ್ತಿದೆ ಎಂದು ಹೇಳಿದರು. ರಷ್ಯಾ ಉಕ್ರೇನ್‍ನ ಪ್ರಾದೇಶಿಕ ಸೌರ್ವಭೌಮತ್ವವನ್ನು ಗೌರವಿಸಲು ನಿರಾಕರಿಸುತ್ತದೆ. ನ್ಯಾಟೋ ಜೊತೆಗೆ ಮೈತ್ರಿ ಮುಂದುವರೆಸಬಾರದು ಎಂದು ಒತ್ತಾಯಿಸುತ್ತದೆ. ಎರಡು ಪ್ರದೇಶಗಳು ನಮಗೆ ಸೇರಿವೆ ಎಂದು ಹೇಳುತ್ತಾ ದಾಳಿ ನಡೆಸಿದೆ. ಚೀನಾ ಕೂಡ ಭಾರತದ ಎರಡು ಭೂ ಭಾಗಗಳು ನಮಗೆ ಸೇರಿವೆ ಎಂದು ವಾದಿಸುತ್ತಿದೆ ಎಂದರು.
ಗಡಿಯಲ್ಲಿ ಸಮಸ್ಯೆ ಇದೆ ಎಂಬುದನ್ನು ಮೊದಲು ನಾವು ಅರಿತುಕೊಳ್ಳಬೇಕು. ನಾವು ಇಷ್ಟಪಡುತ್ತೇವೆಯೋ, ಇಲ್ಲವೋ ಅದು ಬೇರೆ ಮಾತು. ಆ ಸಮಸ್ಯೆಗಳಿಗೆ ನಾವು ಸಿದ್ಧರಾಗಿರಬೇಕು. ನಾವು ಕಾವಲುಗಾರರನ್ನು ಹಿಡಿಯುವುದಕ್ಕೆ ಸೀಮಿತವಾಗಬಾರದು. ಈ ವಿಷಯವಾಗಿ ಸರ್ಕಾರ ಚರ್ಚೆಗೆ ಅವಕಾಶವನ್ನೇ ನೀಡದಿರುವುದು ಸಮಸ್ಯೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಪಿಐ(ಎಂ)ನ ಸೀತಾರಾಮ್ ಯೆಚೂರಿ, ಆರ್‌ಜೆಡಿ ಪಕ್ಷದ ತೇಜಸ್ವಿ ಯಾದವ್ ಮತ್ತು ತೃಣಮೂಲ ಕಾಂಗ್ರೆಸ್‍ನ ಮಹುವಾ ಮೊಯಿತ್ರಾ ಸೇರಿದಂತೆ ವಿರೋಧ ಪಕ್ಷದ ನಾಯಕರು ಭಾಗವಹಿಸಿದ್ದರು.