ಬದಲಾಗುತ್ತಿರುವ ಭಾರತಕ್ಕೆ ಹೊಸ ದಿಕ್ಕನ್ನು ತೋರುವುದು ದಲಿತ ಚಳುವಳಿಯ ಆದ್ಯತೆಯಾಗಬೇಕಿದೆ
ನಾ ದಿವಾಕರ
1980-90ರ ದಶಕದಲ್ಲಿ ದಲಿತ ಚಳುವಳಿಯ ವಿಘಟನೆಯ ಪರ್ವ ಆರಂಭವಾದ ದಿನದಿಂದಲೂ ಚಳುವಳಿಯಲ್ಲಿ ಅಂತರ್ಗತವಾಗಿದ್ದ ಭಿನ್ನತೆಯ ಬೇರುಗಳು ವಿಸ್ತರಿಸುತ್ತಲೇ ಹೋಗುತ್ತಿದ್ದು, 21ನೆಯ ಶತಮಾನದ ಭಾರತದ ಅಧಿಕಾರ ರಾಜಕಾರಣದ ಸಾಂಸ್ಥಿಕ ಹಾಗೂ ಸಂಘಟನಾತ್ಮಕ ನೆಲೆಗಳು ಈ ವಿಘಟನೆಯ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಮಾರುಕಟ್ಟೆ, ಬಂಡವಾಳ ಮತ್ತು ಸಾಮಾಜಿಕಾರ್ಥಿಕ ವೈರುಧ್ಯಗಳನ್ನೇ ಪ್ರಧಾನ ಅಸ್ತ್ರವಾಗಿ ಬಳಸಿಕೊಂಡುಬಂದಿವೆ. ಹಾಗಾಗಿಯೇ ಕಳೆದ ಮೂರು ದಶಕಗಳಿಂದಲೂ ಕೇಳಿಬರುತ್ತಿರುವ ʼದಲಿತ ಐಕ್ಯತೆʼಯ ಕೂಗು, ಉಗಮಿಸಿದ ವೇಗದಲ್ಲೇ ಮರೆಯಾಗುತ್ತಿರುವುದನ್ನೂ ಕಾಣುತ್ತಿದ್ದೇವೆ. ಸ್ವತಂತ್ರ ಭಾರತದ ಅಭಿವೃದ್ಧಿ ಪಥದಲ್ಲಿ ಅವಕಾಶವಂಚಿತರಾದ ಜನಸಮುದಾಯಗಳ ಹತಾಶೆ, ಆಕ್ರೋಶ ಮತ್ತು ಅಸಮಾಧಾನಗಳ ಕ್ರೋಢೀಕೃತ ಅಭಿವ್ಯಕ್ತಿಯಾಗಿ ಹೊರಹೊಮ್ಮಿದ 1970ರ ದಶಕದ ದಲಿತ ಚಳುವಳಿಗೆ ಕಾಲದಿಂದ ಕಾಲಕ್ಕೆ ಹೊಸ ಕಾಯಕಲ್ಪ ನೀಡುತ್ತಾ, ಬದಲಾದ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಚಳುವಳಿಯ ಮಾರ್ಗಗಳನ್ನೂ ಪರಿಷ್ಕರಿಸಬೇಕಿತ್ತು. ಹಾಗಾಗದಿರುವುದು ಇತಿಹಾಸ.
ಆದರೆ ಇಂದಿಗೂ ಅರೆ ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳನ್ನು ಸಂರಕ್ಷಿಸಿಕೊಂಡೇ ಬಂದಿರುವ ಭಾರತದ ಅಧಿಕಾರ ರಾಜಕಾರಣದ ನೆಲೆಗಳು, ಈ ಪರಿಷ್ಕರಣೆಯ ಮಾರ್ಗಗಳಿಗೆ ತಡೆಗೋಡೆಗಳನ್ನು ನಿರ್ಮಿಸಲು, ದಲಿತ ಚಳುವಳಿಯ ಜಾತಿ ವಿನಾಶದ ಆಶಯಗಳನ್ನೇ ಹೊಸಕಿ ಹಾಕಲು ಹಾಗೂ ಅವಕಾಶ ವಂಚಿತ ಸಮುದಾಯಗಳೂ ಸಹ ಶೋಷಕ ವ್ಯವಸ್ಥೆಯೊಡನೆ ಕೈಜೋಡಿಸುವಂತೆ ಮಾಡಲು ಹಲವು ಆಡಳಿತ ಮಾದರಿಗಳನ್ನು ಬಳಸಿಕೊಂಡಿವೆ. ನವ ಉದಾರವಾದ, ಜಾಗತೀಕರಣ, ರಾಜಕಾರಣದ ಪಾತಕೀಕರಣ, ಮತೀಯವಾದ ಮತ್ತು ಕೋಮುವಾದ ಮತ್ತು ವಿಡಂಬನೆ ಎನಿಸಿದರೂ, ಜಾತಿ ರಾಜಕಾರಣ , ಈ ಮಾರ್ಗಗಳ ಮೂಲಕವೇ ಭಾರತದ ಆಳುವ ವರ್ಗಗಳು ಶೋಷಿತ ಸಮುದಾಯಗಳ ಚಳುವಳಿಗಳನ್ನು ಹತ್ತಿಕ್ಕದೆ ಹೋದರೂ, ವಿಘಟನೆಯಾಗುವಂತೆ/ಒಂದಾಗದಂತೆ ಎಚ್ಚರವಹಿಸುತ್ತಾ ಬಂದಿವೆ. ಸಂವಿಧಾನದ ಚೌಕಟ್ಟಿನ ಒಳಗೇ, ಪ್ರಜಾಪ್ರಭುತ್ವದ ಆಶಯಗಳನ್ನು ಸಾಕಾರಗೊಳಿಸುವ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಾಂಸ್ಕೃತಿಕ ಸ್ವಾಯತ್ತತೆಯನ್ನು ಪಡೆದುಕೊಳ್ಳಲು ನಿರಂತರ ಹೋರಾಟ ನಡೆಸುತ್ತಿರುವ ಶೋಷಿತ ಸಮುದಾಯಗಳು ಈ ವಿಘಟನೆಯ ಪರಿಣಾಮವಾಗಿಯೇ, ಬಂಡವಳಿಗ ರಾಜಕೀಯ ಪಕ್ಷಗಳಿಗೆ ಕಾಲಾಳುಗಳಾಗಿ ಅಥವಾ ಒತ್ತಾಸೆಯಾಗಿ ನಿಲ್ಲುವಂತಾಗಿದೆ.
ಸಾಂವಿಧಾನಿಕ ಆಶಯಗಳ ನಿರ್ಲಕ್ಷ್ಯ
ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡ ಸಂದರ್ಭದಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರಾಡಿದ ಮಾತುಗಳು ನಮ್ಮ ನಡುವೆ ಇನ್ನೂ ಮೊಳಗುತ್ತಲೇ ಇದೆ ಎಂದರೆ, ನಾವು ಅಂಬೇಡ್ಕರ್ ಅವರ ಆಶಯಗಳನ್ನು ಮತ್ತು ಸಂವಿಧಾನದ ಮೂಲಕ ಅವರು ಜನತೆಯ ಮುಂದಿಟ್ಟ ಧ್ಯೇಯೋದ್ದೇಶಗಳನ್ನು ಅರ್ಥಮಾಡಿಕೊಂಡಿಲ್ಲ ಎಂದೇ ಹೇಳಬೇಕಾಗುತ್ತದೆ. ಹಾಗಾಗಿದ್ದರೆ ಈ ವೇಳೆಗೆ ಅವೆಲ್ಲವೂ ಸಾಕಾರಗೊಳ್ಳಬೇಕಿತ್ತು. ಪ್ರಜಾಪ್ರಭುತ್ವವನ್ನು ಸಾಮಾಜಿಕ ಹಾಗೂ ಆರ್ಥಿಕ ನೆಲೆಗಳಲ್ಲಿ ಸಾಧಿಸದೆ, ಕೇವಲ ರಾಜಕೀಯ ಚೌಕಟ್ಟಿನಲ್ಲಿ ಮಾತ್ರವೇ ಬೆಳೆಸುವುದು ಅಧಿಕಾರ ರಾಜಕಾರಣವನ್ನು ಮತ್ತಷ್ಟು ಗಟ್ಟಿಗೊಳಿಸುವ ಪ್ರಕ್ರಿಯೆಯೇ ಆಗಿರುತ್ತದೆ. ಭಾರತ ತನ್ನ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲೂ ದೇಶದಲ್ಲಿ ಸಾಮಾಜಿಕ ನ್ಯಾಯವನ್ನು, ಸಾಂಸ್ಕೃತಿಕ ಸ್ವಾಯತ್ತತೆಯನ್ನು ಮತ್ತು ಆರ್ಥಿಕ ಸುಸ್ಥಿರತೆಯನ್ನು ಸಾಧಿಸಲು ನಮಗೆ ಸಾಧ್ಯವಾಗಿಲ್ಲ ಅಂದರೆ, ಕಳೆದ ಏಳೂವರೆ ದಶಕಗಳ ಆಡಳಿತ ನೀತಿಗಳು ಯಾರನ್ನು ಗುರಿಯಾಗಿರಿಸಿವೆ, ಕಾನೂನು ಕಟ್ಟಳೆಗಳು ಯಾರನ್ನ ಪ್ರತಿನಿಧಿಸುತ್ತವೆ, ಆರ್ಥಿಕ-ಹಣಕಾಸು ನೀತಿಗಳು ಯಾರನ್ನು ಕೇಂದ್ರೀಕರಿಸುತ್ತವೆ ಎನ್ನುವುದನ್ನು ನಾವು ಪ್ರಶ್ನಿಸಬೇಕಿದೆ ಅಲ್ಲವೇ ?
ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಈ ಪ್ರಶ್ನಿಸುವ ಹಕ್ಕನ್ನು ಭಾರತದ ಸಂವಿಧಾನ ನಮಗೆ ನೀಡಿದೆ. ಹೀಗೆ ಪ್ರಶ್ನಿಸುವ ಮನಸುಗಳು ದೇಶಾದ್ಯಂತ ತಮ್ಮ ಹತಾಶೆ ಆಕ್ರೋಶಗಳನ್ನು ಹೊರಹೊಮ್ಮಿಸಿದ್ದರಿಂದಲೇ ದಲಿತ ಚಳುವಳಿಯೂ ಹುಟ್ಟಿಕೊಂಡಿದ್ದು ಈಗ ಇತಿಹಾಸ. ದಲಿತ ಚಳುವಳಿಗಳ ಏಳು ಬೀಳುಗಳು ಏನೇ ಇರಲಿ, ವಿಘಟನೆಗಳು ಎಷ್ಟೇ ಆಗಿರಲಿ, ಸಂವಿಧಾನದತ್ತ ಪ್ರತಿರೋಧದ ಹಕ್ಕುಗಳನ್ನು ಬಳಸುವ ಮೂಲಕವೇ ಶೋಷಿತ ಸಮುದಾಯಗಳು ಸ್ವತಂತ್ರ ಭಾರತದಲ್ಲಿ ಸಾಮಾಜಿಕ ನ್ಯಾಯದ ಆಶಯಗಳನ್ನು ಜೀವಂತವಾಗಿರಿಸುವುದು ಸತ್ಯ. ಆದರೆ ಮೀಸಲಾತಿಯನ್ನೂ ಒಳಗೊಂಡಂತೆ ಈ ಆಶಯಗಳು ಕ್ರಮೇಣ ನೇಪಥ್ಯಕ್ಕೆ ಸರಿಯುತ್ತಿರುವ ಕ್ಲಿಷ್ಟ ಸನ್ನಿವೇಶದಲ್ಲಿ ಇಂದು ಮತ್ತೊಮ್ಮೆ ವಿಘಟಿತ ಚಳುವಳಿಯನ್ನು ಪುನಃ ಸಂಘಟಿಸುವ ಪ್ರಯತ್ನಗಳು ನಡೆದಿವೆ. ಇದರ ಮೊದಲ ಹೆಜ್ಜೆಯಾಗಿ ಅಂಬೇಡ್ಕರ್ ಪರಿನಿಬ್ಬಾಣದ ದಿನದಂದು, ಬೆಂಗಳೂರಿನಲ್ಲಿ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶವೂ ನಡೆಯುತ್ತಿದೆ.
ದಲಿತ ಐಕ್ಯತೆ ಮತ್ತು ಸಾಮಾಜಿಕಾರ್ಥಿಕ ನೆಲೆಗಳು
ಈ ಐಕ್ಯತೆಯ ಪ್ರಯತ್ನದಲ್ಲಿ ದಲಿತ ಚಳುವಳಿಯು ಉಗಮವಾದ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದ ಎಲ್ಲ ನಾಯಕರೂ ಇರುವುದು ಮುನ್ನಡೆಯ ಹಾದಿಯ ಆತ್ಮಾವಲೋಕನಕ್ಕೆ ಅವಕಾಶಗಳನ್ನು ಕಲ್ಪಿಸುತ್ತದೆ. ಹಿಂದಿರುಗಿ ನೋಡುತ್ತಾ, ಎಡವಿದ ಹೆಜ್ಜೆಗಳನ್ನೇ ಗುರುತಿಸುತ್ತಾ ಮುನ್ನಡೆಯುವುದಕ್ಕಿಂತಲೂ ಭವಿಷ್ಯದ ಹಾದಿಯಲ್ಲಿ ಶೋಷಿತ ಸಮುದಾಯಗಳಿಗೆ ಎದುರಾಗಬಹುದಾದ ಅಪಾಯಗಳನ್ನು, ತಪ್ಪಿಹೋಗಬಹುದಾದ ಅವಕಾಶಗಳನ್ನು ಕುರಿತು ಗಂಭೀರ ಆಲೋಚನೆ ಮಾಡುವುದು ಇಂದಿನ ಅವಶ್ಯಕತೆಯಾಗಿದೆ. ಬಂಡವಳಿಗ (ಬೂರ್ಷ್ವಾ) ರಾಜಕೀಯ ಪಕ್ಷಗಳ ದೃಷ್ಟಿಯಲ್ಲಿ ದಲಿತ ಮತ್ತಿತರ ಶೋಷಿತ ಸಮುದಾಯಗಳು ಸದಾ ಕಾಲಕ್ಕೂ ಚುನಾವಣಾ ರಾಜಕಾರಣದ ಕಾಲಾಳುಗಳಾಗಿಯೇ ಕಾಣುತ್ತವೆ. ಹಾಗಾಗಿ ಸಂವಿಧಾನದತ್ತ ಸವಲತ್ತುಗಳನ್ನು ಒದಗಿಸುವುದರ ಮೂಲಕವೇ ಜಾತಿಪೀಡಿತ ಸಮಾಜದ ಆಂತರಿಕ ಬೇಗುದಿಗಳನ್ನು ಮತ್ತು ಅಂತರ್ಗತ ಶೋಷಣೆಯ ನೆಲೆಗಳನ್ನು ಹೋಗಲಾಡಿಸುವ ಪ್ರಯತ್ನಗಳನ್ನು ಸರ್ಕಾರಗಳೂ ಮಾಡುತ್ತಲೇ ಇರುತ್ತವೆ. ಇಲ್ಲಿ ಅಧಿಕಾರ ರಾಜಕಾರಣದ ಮೂಲ ನೆಲೆಗಳನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ಬುಡಮೇಲು ಮಾಡುವ ಪ್ರಯತ್ನಗಳೂ ಸದ್ದಿಲ್ಲದೆ ನಡೆಯುತ್ತಿರುತ್ತವೆ. ಆರ್ಥಿಕವಾಗಿ ಹಿಂದುಳಿದ ಜಾತಿಗಳಿಗೆ (EWS) ಶೇ 10ರಷ್ಟು ಮೀಸಲಾತಿ ನೀಡಿರುವುದು ಇಂತಹ ಒಂದು ಪ್ರಯತ್ನವಷ್ಟೆ.
75 ವರ್ಷಗಳ ಮೀಸಲಾತಿ ಸೌಲಭ್ಯ ಮತ್ತು ಅದರ ಸುತ್ತಲಿನ ರಾಜಕಾರಣ ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿರುವ ಸಾಮಾಜಿಕ ಅನ್ಯಾಯಗಳನ್ನಾಗಲೀ, ಆರ್ಥಿಕ ಅಸಮಾನತೆಗಳನ್ನಾಗಲೀ ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗಿಲ್ಲ ಎನ್ನುವುದಕ್ಕೆ ಪ್ರತ್ಯೇಕ ಸಾಕ್ಷ್ಯಾಧಾರಗಳು ಬೇಕಿಲ್ಲ. ನಮ್ಮ ಸುತ್ತಲೂ ಕಾಡುತ್ತಿರುವ ಹಸಿವು, ನಡೆಯುತ್ತಿರುವ ಜಾತಿ ದೌರ್ಜನ್ಯ, ಅಸ್ಪೃಶ್ಯತೆಯ ಆಚರಣೆ ಮತ್ತು ಜಾತಿ ವಿರೋಧಿ ನೆಲೆಗಳೇ ಇದನ್ನು ನಿರೂಪಿಸುತ್ತವೆ. ಕಳೆದ ಎರಡು ದಶಕಗಳಲ್ಲಿ ಜಾತಿ ರಾಜಕಾರಣ ಹೆಚ್ಚಾಗಿರುವಷ್ಟೇ ಪ್ರಮಾಣದಲ್ಲಿ ಜಾತಿ ದೌರ್ಜನ್ಯಗಳೂ ಹೆಚ್ಚಾಗಿರುವುದನ್ನು ಗಮನಿಸಿದಾಗ, ಭಾರತದ ಸಾಮಾಜಿಕ ಪರಿಸರದಲ್ಲಿ ಮೇಲ್ಜಾತಿಗಳ ಶ್ರೇಷ್ಠತೆಯ ಅಹಮಿಕೆಯೊಂದಿಗೇ ಊಳಿಗಮಾನ್ಯ ದಬ್ಬಾಳಿಕೆ ಮತ್ತು ಮತ್ತು ಸಿರಿವಂತಿಕೆಯ ದರ್ಪವೂ ಹೆಚ್ಚಾಗಿರುವುದೂ ಕಾಣಲೇಬೇಕಿದೆ. 1991ರಲ್ಲಿ ವಿಶ್ವ ಮಾರುಕಟ್ಟೆಗೆ ತೆರೆದುಕೊಂಡ ಭಾರತದ ನವ ಆರ್ಥಿಕತೆಯ ಫಲಾನುಭವಿಗಳು ಎಲ್ಲ ಸಮುದಾಯಗಳಲ್ಲೂ ಇದ್ದರೂ, ಸಹ ಇದರ ಸಿಂಹಪಾಲು ಪ್ರಬಲ ವರ್ಗಗಳ ಪಾಲಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಈ ಪ್ರಬಲ ವರ್ಗಗಳೇ ಇಂದು ರಾಜಕೀಯ ಆಧಿಪತ್ಯವನ್ನು ಸಾಧಿಸಿದ್ದು, ಈ ಪಾರಮ್ಯದ ಸಂರಕ್ಷಣೆಗಾಗಿಯೇ ಜಾತಿಗಳ ನಡುವಿನ ಗೋಡೆಗಳನ್ನು ಮತ್ತಷ್ಟು ಎತ್ತರಿಸುತ್ತಿವೆ.
ಮಾರುಕಟ್ಟೆ ಆರ್ಥಿಕತೆ ಮತ್ತು ನವ ಉದಾರವಾದದ ಡಿಜಿಟಲ್ ಕ್ರಾಂತಿ ಭಾರತದಲ್ಲಿ ಸೃಷ್ಟಿಸಿರುವ ಹಿತವಲಯದ ಬೃಹತ್ ಸಮೂಹ ಇಂದು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ವಿರೋಧಿಸುತ್ತಿದೆ. ಈ ಹಿತವಲಯದ ಒಂದು ಭಾಗವಾಗಿರುವ ಶೋಷಿತ ಸಮುದಾಯದ ಫಲಾನುಭವಿಗಳೂ ಸಹ ತಮ್ಮ ಸ್ವಯಂ ನಿರ್ಮಿತ ಕೋಶಗಳಿಂದ ಹೊರಬರಲಾಗದೆ, ಮಾರುಕಟ್ಟೆ ಮತ್ತು ಬಂಡವಾಳದ ಶೋಷಣೆಯ ಮಾರ್ಗಗಳಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಈ ಹಿತವಲಯವನ್ನು ಹಿಡಿದಿಟ್ಟುಕೊಳ್ಳಲೆಂದೇ ರಾಜಕೀಯ ಪಕ್ಷಗಳು ತಮ್ಮದೇ ಆದ ತಾತ್ವಿಕ ನೆಲೆಗಳನ್ನು ಬಳಸಿಕೊಳ್ಳುತ್ತಿವೆ. ಬಿಜೆಪಿ ಹಿಂದುತ್ವ ರಾಜಕಾರಣದ ಮೂಲಕ ಹಿಂದೂಗಳ ಐಕ್ಯತೆಯ ಪ್ರಶ್ನೆಯನ್ನು ಮುಂದಿಟ್ಟು ತನ್ನ ಅಧಿಕಾರ ನೆಲೆಗಳನ್ನು ವಿಸ್ತರಿಸಿಕೊಳ್ಳುತ್ತಿದೆ. ಕಾಂಗ್ರೆಸ್ ಈ ನೆಲೆಗಳನ್ನು ಭೇದಿಸಲು ಸಾಧ್ಯವಾಗದೆ ಮಾರುಕಟ್ಟೆ ಆರ್ಥಿಕತೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ಜೆಡಿಎಸ್‌ನಂತಹ ಪ್ರಾದೇಶಿಕ ಪಕ್ಷಗಳು ತಮ್ಮ ಪ್ರಬಲ ಜಾತಿ ಸಮೀಕರಣಗಳನ್ನು ಅವಲಂಬಿಸಿಯೇ, ಮಾರುಕಟ್ಟೆ ಆರ್ಥಿಕತೆಯನ್ನು ಪೋಷಿಸುವುದರ ಮೂಲಕ, ತನ್ನ ಊಳಿಗಮಾನ್ಯ ನೆಲೆಗಳನ್ನು ಸುರಕ್ಷಿತವಾಗಿರಿಸಿ, ಇದೇ ಹಿತವಲಯದ ಶೋಷಿತ ಸಮುದಾಯಗಳನ್ನು ಬಳಸಿಕೊಳ್ಳುತ್ತಿದೆ.
ಭಾರತದಲ್ಲಿ ಜಾಗತೀಕರಣ ಪ್ರಕ್ರಿಯೆಯು ತೀವ್ರತೆ ಪಡೆದುಕೊಂಡಿದ್ದು 2000ದ ನಂತರದಲ್ಲಿ. ಮೊಗಳ್ಳಿ ಗಣೇಶ್ ಅವರಂತಹ ಚಿಂತಕರೂ ಸಹ ಜಾಗತೀಕರಣದಿಂದ ದಲಿತ ಸಮುದಾಯಗಳ ಏಳಿಗೆ ಸಾಧ್ಯ ಎಂದು ಭಾವಿಸಿದ್ದೂ ಉಂಟು. ಮತ್ತೊಂದೆಡೆ ಜಾಗತೀಕರಣ ಪ್ರಕ್ರಿಯೆಯು ಹೇಗೆ ದಲಿತ-ಶೋಷಿತ ಸಮುದಾಯಗಳಿಗೆ ಮಾರಕವಾಗುತ್ತದೆ ಎಂದು ನಿರೂಪಿಸಿದ ಆನಂದ್ ತೇಲ್ತುಂಬ್ಡೆ ಅವರ ಅಭಿಪ್ರಾಯಗಳನ್ನು ಅಲ್ಲಗಳೆದಿದ್ದೂ ಹೌದು. ಆದರೆ ಭಾರತ ಇನ್ನೂ ಹಣಕಾಸು ಬಂಡವಾಳಕ್ಕೆ ತೆರೆದುಕೊಳ್ಳದಿದ್ದ ಸಂದರ್ಭದಲ್ಲಿದ್ದ ಸನ್ನಿವೇಶಗಳು ಡಿಜಿಟಲ್ ಯುಗದಲ್ಲಿ ಸಾಕಷ್ಟು ಬದಲಾಗಿವೆ. ಬಂಡವಾಳ ಕ್ರೋಢೀಕರಣ ಔದ್ಯಮಿಕ ಪ್ರಗತಿಗೆ ಪೂರಕವಾಗಿರುವುದಾದರೂ, ಹಣಕಾಸು ಬಂಡವಾಳದ ಮಾರುಕಟ್ಟೆ ವ್ಯವಸ್ಥೆಯಲ್ಲಿ ಮತ್ತು ಡಿಜಿಟಲ್ ಆರ್ಥಿಕತೆಯಲ್ಲಿ ಬಂಡವಾಳದ ಪ್ರಸರಣ, ವಿಂಗಡನೆ ಮತ್ತು ಹರಿವು ಇವೆಲ್ಲವೂ ಪ್ರಧಾನ ಅಂಶಗಳಾಗುತ್ತವೆ. ಸಂಪತ್ತಿನ ಕ್ರೋಢೀಕರಣದೊಂದಿಗೇ ಮಾರುಕಟ್ಟೆಯ ಮೇಲೆ ಆಧಿಪತ್ಯ ಸಾಧಿಸುವುದೂ ಮುಖ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಭಾರತದ ದಲಿತ-ಶೋಷಿತ ಸಮುದಾಯಗಳು ನವ ಉದಾರವಾದಿ-ಮಾರುಕಟ್ಟೆ ಆರ್ಥಿಕ ನೀತಿಗಳಿಂದ ತಮ್ಮ ಔದ್ಯಮಿಕ ಪ್ರಗತಿ ಸಾಧಿಸಲು ಸಾಧ್ಯವೇ ಎನ್ನುವುದು ವಿಶ್ಲೇಷಣೆಗೊಳಪಡಬೇಕಿದೆ.
ಆದರೆ ವಾಸ್ತವ ಪರಿಸ್ಥಿತಿಗಳನ್ನು ಗಮನಿಸಿದಾಗ, ಡಿಜಿಟಲ್ ಕ್ರಾಂತಿ ಮತ್ತು ಡಿಜಿಟಲ್ ಮಾರುಕಟ್ಟೆ ಆರ್ಥಿಕತೆಯ ಬಾಹುಗಳು ಭಾರತದ ಎಲ್ಲ ವಲಯಗಳನ್ನೂ ಆಕ್ರಮಿಸುತ್ತಿರುವಾಗ, ಶೋಷಿತ ಸಮುದಾಯಗಳು ಇನ್ನೂ ಹೆಚ್ಚು ಅವಕಾಶ ವಂಚಿತರಾಗುತ್ತಿರುವುದು ಢಾಳಾಗಿ ಕಾಣುತ್ತದೆ. ಡಿಜಿಟಲ್ ಯುಗದಲ್ಲಿ ಶೈಕ್ಷಣಿಕ ವಲಯವೂ ಸಹ ಕಾರ್ಪೋರೇಟೀಕರಣಕ್ಕೊಳಗಾಗುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಶಿಕ್ಷಣ ನೀತಿ, ಶೋಷಿತ ಸಮುದಾಯಗಳನ್ನು ಉನ್ನತ ಶಿಕ್ಷಣದಿಂದ ದೂರ ಇರಿಸುವ ಸಾಧ್ಯತೆಗಳಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಪ್ರಾಥಮಿಕ ಶಿಕ್ಷಣದ ವಾಣಿಜ್ಯೀಕರಣ ಮತ್ತು ಉನ್ನತ ಶಿಕ್ಷಣದ ಕಾರ್ಪೋರೇಟೀಕರಣ ಪ್ರಕ್ರಿಯೆಗಳು, ಇಂದಿಗೂ ಶಿಕ್ಷಣವಂಚಿತರಾಗಿ ಬದುಕುತ್ತಿರುವ ಕೋಟ್ಯಂತರ ದಲಿತ-ಆದಿವಾಸಿ-ಶೋಷಿತ ಸಮುದಾಯಗಳ ಮಕ್ಕಳನ್ನು ಮತ್ತಷ್ಟು ಅಂಚಿಗೆ ದೂಡುತ್ತದೆ. ಮತ್ತೊಂದೆಡೆ ನವ ಉದಾರವಾದದ ಅಡಿಯಲ್ಲೇ ಜಾರಿಯಾಗುತ್ತಿರುವ ನೂತನ ಕಾರ್ಮಿಕ ಸಂಹಿತೆಗಳು ಶೋಷಿತ ಸಮುದಾಯಗಳ ಉದ್ಯೋಗಾವಕಾಶಗಳನ್ನೂ ಕಸಿದುಕೊಳ್ಳುತ್ತವೆ.
ಮೀಸಲಾತಿ ಎಂದರೆ ಪ್ರತಿಭೆಯನ್ನು ಕಡೆಗಣಿಸುವ ಒಂದು ವಿಧಾನ ಎಂದು ಮೂದಲಿಸುತ್ತಿದ್ದ ಮೇಲ್ಜಾತಿಗಳೂ, ಮಧ್ಯವರ್ತಿ ಪ್ರಬಲ ಜಾತಿಗಳೂ ಸಹ ಇಂದು ಮೀಸಲಾತಿಗಾಗಿ ಹಾತೊರೆಯುತ್ತಿರುವುದು, ಆಗ್ರಹಿಸುತ್ತಿರುವುದು ಮತ್ತು ಒತ್ತಾಯಿಸುತ್ತಿರುವುದು ನವ ಉದಾರವಾದ ಸೃಷ್ಟಿಸಿರುವ ಸಾಮಾಜಿಕ ಅಭದ್ರತೆ ಮತ್ತು ಆರ್ಥಿಕ ಅನಿಶ್ಚಿತತೆಯ ಸಂಕೇತವೇ ಆಗಿದೆ. ಬಂಡವಾಳಶಾಹಿ ವ್ಯವಸ್ಥೆ ಮತ್ತು ಹಣಕಾಸು ಬಂಡವಾಳದ ಮಾರುಕಟ್ಟೆ ಆರ್ಥಿಕತೆಗೆ ನಿರ್ದಿಷ್ಟ ಗಡಿ ರೇಖೆಗಳಿಲ್ಲ ಎನ್ನುವುದು ಉಕ್ರೇನ್ ಯುದ್ಧದಿಂದ ಜಗತ್ತಿನಾದ್ಯಂತ ಉಂಟಾಗುತ್ತಿರುವ ಆರ್ಥಿಕ ವ್ಯತ್ಯಯಗಳೇ ನಿರೂಪಿಸುತ್ತವೆ. ಭಾರತವೂ ಇದರ ನೇರ ಪರಿಣಾಮವನ್ನು ಎದುರಿಸುತ್ತಿವೆ. ಆಡಳಿತಾರೂಢ ಪಕ್ಷಗಳು ಇದೇ ಮಾರುಕಟ್ಟೆ ವ್ಯವಸ್ಥೆಯನ್ನೇ ಪ್ರತಿನಿಧಿಸುವುದರಿಂದ, ಜಾರಿಯಾಗುವ ಆರ್ಥಿಕ ನೀತಿಗಳೂ ಸಹ ಮಾರುಕಟ್ಟೆಯನ್ನು ಪೋಷಿಸುವ, ಬಂಡವಾಳ ಕ್ರೋಢೀಕರಣವನ್ನು ಪ್ರಚೋದಿಸುವ ಮತ್ತು ಕಾರ್ಪೋರೇಟ್ ಶಕ್ತಿಗಳನ್ನು ಉದ್ಧೀಪನಗೊಳಿಸುವ ರೀತಿಯಲ್ಲೇ ಸಾಗುತ್ತವೆ. ಭಾರತದಲ್ಲಿ ಹೆಚ್ಚು ಚರ್ಚೆಗೊಳಗಾಗಿರುವ EWS ಕೋಟಾ ಮೀಸಲಾತಿಯ ಹಿಂದೆಯೂ ಇದೇ ನವ ಉದಾರವಾದದ ಪ್ರಭಾವ ಇರುವುದನ್ನು ದಲಿತ ಚಳುವಳಿಯು ಗಮನಿಸಬೇಕಿದೆ.
ದಲಿತ ಚಳುವಳಿ ಬಿಟ್ಟುಹೋದ ಹಾದಿಗಳು ಇಡಬೇಕಾದ ಹೆಜ್ಜೆಗಳು
- ದಲಿತರ ಹಕ್ಕು ಪ್ರತಿಪಾದನೆ ರಾಜಕೀಯ-ಸಾಮಾಜಿಕ ನೆಲೆಯಲ್ಲಿ ಗಟ್ಟಿಯಾಗಿರಬೇಕೆಂದರೆ ಭೂಮಿಯ ಪ್ರಶ್ನೆ ಪ್ರಧಾನವಾಗಿರಬೇಕು. ಆಂಧ್ರ ಪ್ರದೇಶ, ಒಡಿಷಾ, ಮಹಾರಾಷ್ಟ್ರ, ಬಿಹಾರ ರಾಜ್ಯಗಳಲ್ಲಿ ಇದನ್ನು ಗುರುತಿಸಬಹುದು. ಕರ್ನಾಟಕ ಇಲ್ಲಿ ಸೋತಿದೆ.
- 1990ರ ದಶಕದಿಂದ ಡಿಜಿಟಲ್ ಯುಗದವರೆಗೂ ಮಾರುಕಟ್ಟೆ ವಿರುದ್ಧ, ಹಣಕಾಸು ಬಂಡವಾಳ ಮತ್ತು ಜಾಗತೀಕರಣದ ವಿರುದ್ಧ ಹೋರಾಟಗಳಲ್ಲಿ ದಲಿತ ಚಳುವಳಿ ಮುಂಚೂಣಿಯಲ್ಲಿರುವುದು ಅತ್ಯವಶ್ಯ, ಅನಿವಾರ್ಯ.
- ಬಂಡವಳಿಗ ರಾಜಕೀಯ ಪಕ್ಷಗಳಲ್ಲಿ ಅಂತರ್ಗತವಾಗಿರುವ ಊಳಿಗಮಾನ್ಯ ಧೋರಣೆಯೂ, ಅವು ಬಿಂಬಿಸುವ ಮತೀಯ ನೆಲೆಯ ರಾಜಕಾರಣವೂ ಪರಸ್ಪರ ಸಂಬಂಧಿತವಾಗಿರುತ್ತದೆ. ಒಬಿಸಿ ರಾಜಕಾರಣ ಮತ್ತು ಹಿಂದುತ್ವ ರಾಜಕಾರಣ ಎರಡೂ ನೆಲೆಗಳಲ್ಲಿ ಇದನ್ನು ಗುರುತಿಸಬೇಕಾಗಿದೆ.
- ದಲಿತ ಸಮುದಾಯವನ್ನೇ ಪ್ರಧಾನವಾಗಿ ಪ್ರತಿನಿಧಿಸುವ ಬಿಎಸ್‌ಪಿ ಮುಂತಾದ ರಾಜಕೀಯ ಪಕ್ಷಗಳು, ನವ ಉದಾರವಾದದ ಬಗ್ಗೆ ದಿವ್ಯ ಮೌನ/ನಿರ್ಲಕ್ಷ್ಯ ವಹಿಸುವುದು, ರಾಜಕೀಯವಾಗಿ ಲಾಭದಾಯಕವಾದರೂ, ಸಾಮುದಾಯಿಕ ನೆಲೆಯಲ್ಲಿ ದೊಡ್ಡ ಹಿನ್ನಡೆಗೆ ಕಾರಣವಾಗುತ್ತದೆ.
- ಅಸ್ಪೃಶ್ಯತೆ, ಜಾತಿ ದೌರ್ಜನ್ಯ ಮತ್ತು ತಾರತಮ್ಯಗಳಿಗೂ, ಮಾರುಕಟ್ಟೆ ಆರ್ಥಿಕ ಸಂಬಂಧಗಳಿಗೂ ನೇರ ಸಂಬಂಧ ಇರುವುದನ್ನು ಅರ್ಥಮಾಡಿಕೊಳ್ಳದೆ ಹೋದರೆ, ಹಣಕಾಸು ಬಂಡವಾಳದಷ್ಟೇ ನಮ್ಯತೆಯಿಂದ, ನವಿರಾಗಿ ಜಾತಿ ವ್ಯವಸ್ಥೆಯ ಬೇರುಗಳೂ ವಿಸ್ತರಿಸುತ್ತಿರುತ್ತವೆ.
ಕರ್ನಾಟಕದ ದಲಿತ ಚಳುವಳಿಯ ಹೆಜ್ಜೆಗಳು
ಕರ್ನಾಟಕದಲ್ಲಿ ದಲಿತ ಚಳುವಳಿಯ ವಿಘಟನೆಗೆ ಕಾರಣಗಳೇನೇ ಇದ್ದರೂ, 1970ರ ಪ್ರಖರತೆಯನ್ನು ಕಳೆದುಕೊಂಡು ನಿಸ್ತೇಜವಾಗಿರಲು ಮೂಲ ಕಾರಣ 1990ರ ದಶಕದಲ್ಲಿ ಭಾರತವನ್ನು ಆಕ್ರಮಿಸಿದ ಜಾಗತೀಕರಣದ ಮಾರುಕಟ್ಟೆ ಆರ್ಥಿಕತೆಯನ್ನು ವಿರೋಧಿಸದೆ ಇದ್ದುದು. ಮತ್ತೊಂದು ಕಾರಣವೆಂದರೆ ಭೂಮಿಯ ಪ್ರಶ್ನೆಯನ್ನು ನಿರ್ಲಕ್ಷಿಸಿರುವುದು. ನವ ಉದಾರವಾದದಲ್ಲಿ ಭೂಮಿಯೂ ಒಂದು ಮಾರುಕಟ್ಟೆ ಸರಕಾಗಿದ್ದು, ಇಂದಿಗೂ ಭಾರತದ ಬಹುಸಂಖ್ಯಾತ ದಲಿತರ ಬದುಕಿನ ಮೂಲ ನೆಲೆಯಾಗಿರುವ ಭೂಮಿ ಈಗ ಮಾರುಕಟ್ಟೆ ಶಕ್ತಿಗಳ ಹಿಡಿತಕ್ಕೊಳಗಾಗುತ್ತಿದೆ. ಈ ಅಮೂಲ್ಯ ಸಂಪತ್ತಿನ ಮೇಲೆ ಯಜಮಾನಿಕೆಯನ್ನು ಸಾಧಿಸಿದವರೇ ಇಂದು ಅಧಿಕಾರ ರಾಜಕಾರಣದಲ್ಲೂ ನೆಲೆಯೂರಲು ಸಾಧ್ಯ. ಹಾಗಾಗಿಯೇ ಎಲ್ಲ ರಾಜ್ಯಗಳಲ್ಲೂ ಭೂಸ್ವಾಧೀನ ಕಾಯ್ದೆಗಳು, ಅರಣ್ಯ ಸಂರಕ್ಷಣಾ ಕಾಯ್ದೆಗಳು ಮಾರುಕಟ್ಟೆಗೆ ಪೂರಕವಾಗಿ ತಿದ್ದುಪಡಿಯಾಗುತ್ತಿವೆ. ತತ್ಪರಿಣಾಮ, ಅತ್ಯಂತ ಹೆಚ್ಚು ಶೋಷಣೆಗೊಳಗಾಗಿರುವ ನಿರ್ಲಕ್ಷಿತ ಹಾಗೂ ಅಂಚಿಗೆ ದೂಡಲ್ಪಟ್ಟಿರುವ ಸಮುದಾಯಗಳು ಇತ್ತ ಮೀಸಲಾತಿಯಂತಹ ಸಾಂವಿಧಾನಿಕ ಸವಲತ್ತುಗಳೂ ಇಲ್ಲದೆ, ಇತ್ತ ಭೂ ಸಂಬಂಧಗಳನ್ನೂ ಕಳೆದುಕೊಂಡು, ಬೀದಿ ಪಾಲಾಗುತ್ತಿವೆ. ಅರಣ್ಯಗಳಿಂದ ಹೊರಹಾಕಲ್ಪಡುತ್ತಿರುವ ಕೋಟ್ಯಂತರ ಆದಿವಾಸಿ ಜನಸಮೂಹ ಇತ್ತ ಸಾಂಸ್ಥಿಕ ನೆಲೆಯೂ ಇಲ್ಲದೆ, ಸಾಂಘಿಕ ಬಲವೂ ಇಲ್ಲದೆ ಮಾರುಕಟ್ಟೆ ಆರ್ಥಿಕತೆಗೆ, ದಬ್ಬಾಳಿಕೆಗೆ ಬಲಿಯಾಗುತ್ತಿವೆ. ದಲಿತ ಚಳುವಳಿಗಳು ಈ ಸಮುದಾಯಗಳ ಧ್ವನಿಗೆ ಧ್ವನಿಯಾಗಲು ಇನ್ನಾದರೂ ಪ್ರಯತ್ನಿಸಬೇಕಿದೆ.
ಮಾರುಕಟ್ಟೆ ಆರ್ಥಿಕತೆಯ ಬಲವರ್ಧನೆಯಾಗುತ್ತಿರುವಂತೆಲ್ಲಾ ಭಾರತದಲ್ಲಿ ಅರೆ-ನಿದ್ರಾವಸ್ಥೆಯಲ್ಲಿದ್ದ ಊಳಿಗಮಾನ್ಯ ಶಕ್ತಿಗಳೂ ಮತ್ತೊಮ್ಮೆ ಪುಟಿದೇಳುತ್ತಿರುವುದನ್ನು ಇತ್ತೀಚೆಗೆ ಕೋಲಾರ, ಹಾಸನ, ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಜಾತಿ ದೌರ್ಜನ್ಯ ಮತ್ತು ಅಸ್ಪೃಶ್ಯತೆಯ ಘಟನೆಗಳಲ್ಲಿ ಗುರುತಿಸಬಹುದಾಗಿದೆ. ತಮ್ಮ ಬದುಕು ಸವೆಸಲು ಸಾಂವಿಧಾನಿಕ ಸವಲತ್ತುಗಳನ್ನೇ ಅವಲಂಬಿಸುವ ಅಸಂಖ್ಯಾತ ಶೋಷಿತ ಜನತೆ ಮಾರುಕಟ್ಟೆ ಪೈಪೋಟಿಯ ಸಂಕೀರ್ಣತೆಯಲ್ಲಿ ಕಳೆದುಹೋಗುತ್ತಲೇ ತಮ್ಮ ಮೂಲ ನೆಲೆಯಾದ ಭೂ ಸಂಬಂಧಗಳನ್ನೂ ಕಳೆದುಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಕರ್ನಾಟಕದ ದಲಿತ ಚಳುವಳಿ ಭೂ ಹೋರಾಟಗಳನ್ನು ನಿರ್ಲಕ್ಷಿಸಿದ ಪ್ರಭಾವವನ್ನು ಡಿಜಿಟಲ್ ಕ್ರಾಂತಿಯ ಯುಗದಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದೇವೆ. ಅಸ್ಪೃಶ್ಯತೆ ಅಥವಾ ಜಾತಿ ದೌರ್ಜನ್ಯಗಳು ಶೂನ್ಯದಲ್ಲಿ ಸಂಭವಿಸುವುದಿಲ್ಲ. ಸುತ್ತಲಿನ ಸಾಮಾಜಿಕಾರ್ಥಿಕ ಸಂಬಂಧಗಳು ಮತ್ತು ಯಜಮಾನಿಕೆಗಳೂ ಇಲ್ಲಿ ತಮ್ಮದೇ ಪಾತ್ರ ವಹಿಸುತ್ತವೆ. ಅಸ್ಪೃಶ್ಯತೆಗೆ ಜಾತಿ ಶ್ರೇಷ್ಠತೆ ಪ್ರಧಾನ ಪ್ರೇರಣೆಯಾದರೆ, ಆರ್ಥಿಕ ಸಬಲತೆ ಮತ್ತು ಮೇಲರಿಮೆ ಅನುಷಂಗಿಕ ಪ್ರಚೋದನೆಯೂ ಆಗುತ್ತದೆ. ಇಲ್ಲಿಯೇ ನಾವು ಜಾತಿ ವ್ಯವಸ್ಥೆಯೊಳಗಿನ ವರ್ಗ ವೈರುಧ್ಯಗಳನ್ನು ಒರೆ ಹಚ್ಚಿ ನೋಡಬೇಕಿದೆ. ಮಾರ್ಕ್ಸ್‌ವಾದ ಎಂದರೆ ಮೂದಲಿಸುವ ಬದಲು, ಮಾರ್ಕ್ಸ್ ಮತ್ತು ಅಂಬೇಡ್ಕರ್ ಅವರ ಚಿಂತನೆಗಳ ಅನುಸಂಧಾನದ ಬಗ್ಗೆ ಯೋಚಿಸುವುದು, ಐಕ್ಯತಾ ಸಮಾವೇಶದ ಆದ್ಯತೆಯಾಗಬೇಕಿದೆ.
ಇದರೊಟ್ಟಿಗೆ ಮಾರುಕಟ್ಟೆ ಆರ್ಥಿಕತೆ ಮತ್ತು ಕಾರ್ಪೋರೇಟ್ ಬಂಡವಾಳ ಬಲಪಂಥೀಯ ರಾಜಕಾರಣವನ್ನು ನೇರವಾಗಿಯೇ ಪೋಷಿಸುತ್ತಿರುವುದು ಜಾಗತಿಕ ವಿದ್ಯಮಾನವಾಗಿದ್ದು, ಭಾರತವೂ ಇದಕ್ಕೆ ಹೊರತಾಗಿಲ್ಲ. ಭಾರತದಲ್ಲಿ ಬಿಜೆಪಿ ತನ್ನ ಹಿಂದುತ್ವ ರಾಜಕಾರಣದ ಮೂಲಕ, ಹಿಂದೂ ಐಕ್ಯತೆಯ ಹೆಸರಿನಲ್ಲಿ, ಜಾತಿ ವ್ಯವಸ್ಥೆಯೊಳಗಿನ ವೈರುಧ್ಯಗಳನ್ನು ಮರೆಮಾಚುತ್ತಲೇ ಇದ್ದರೂ, ಭಾರತದ ಜಾತಿ ಮನಸುಗಳು ಈ ಪರದೆಗಳನ್ನು ಭೇದಿಸಿಕೊಂಡು ಶೋಷಣೆಯ ನೆಲೆಗಳನ್ನು ಅತಿಕ್ರಮಿಸುತ್ತಿವೆ. ಈ ಜಾತಿ ಮನಸ್ಸುಗಳಿಗೆ ಮಾರುಕಟ್ಟೆ ಮತ್ತು ಹಿಂದುತ್ವದ ಸೈದ್ಧಾಂತಿಕ ನೆಲೆಗಳು ಒತ್ತಾಸೆಯಾಗಿ ನಿಲ್ಲುತ್ತವೆ. ಜಾತಿ ವ್ಯವಸ್ಥೆಯ ಮೂಲ ಬೇರುಗಳು ಶಿಥಿಲವಾದರೆ ಭಾರತದ ಶೋಷಕ ಸಾಮಾಜಿಕ ವ್ಯವಸ್ಥೆ ತಂತಾನೇ ಕುಸಿಯುತ್ತದೆ. ಈ ವಾಸ್ತವವನ್ನು ಅರಿತಿದ್ದೇ ಅಧಿಕಾರ ರಾಜಕಾರಣದ ವಾರಸುದಾರರು ಈ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಸತತ ಪ್ರಯತ್ನ ಮಾಡುತ್ತಿರುತ್ತಾರೆ. ದಲಿತರನ್ನೇ ಪ್ರತಿನಿಧಿಸುವ ರಾಜಕೀಯ ಪಕ್ಷಗಳೂ ಸಹ ಈ ಪ್ರಯತ್ನದ ಒಂದು ಭಾಗವಾಗಿರುವುದು ಶತಮಾನದ ದುರಂತ ಎನ್ನುವುದು ವಾಸ್ತವ.
ಅಂತಿಮವಾಗಿ
ಈ ಸವಾಲುಗಳ ನಡುವೆಯೇ ಕರ್ನಾಟಕದಲ್ಲಿ ದಲಿತ ಚಳುವಳಿಯ ಪ್ರಧಾನ ಬಣಗಳು ಐಕ್ಯತೆಯ ಸಂದೇಶದೊಂದಿಗೆ “ ಸಾಂಸ್ಕೃತಿಕ ಪ್ರತಿರೋಧ ”ದ ನೆಲೆಯಲ್ಲಿ ಸಮಾವೇಶ ನಡೆಸುತ್ತಿವೆ. ಭೂಮಿ, ಸಂಪತ್ತು, ಸಂಪನ್ಮೂಲ ಮತ್ತು ಆರ್ಥಿಕತೆಯ ವಿಭಿನ್ನ ನೆಲೆಗಳಲ್ಲಿ ದಲಿತ-ಶೋಷಿತ ಸಮುದಾಯಗಳ ಅಸ್ಮಿತೆ ಮತ್ತು ಅಸ್ತಿತ್ವವನ್ನು ಗಂಭೀರವಾಗಿ ಪರಾಮರ್ಶೆಗೊಳಪಡಿಸದೆ ಹೋದರೆ, ಸಾಂಸ್ಕೃತಿಕ ಪ್ರತಿರೋಧ ತನ್ನ ರಾಜಕೀಯ ಮೊನಚನ್ನು ಕಳೆದುಕೊಳ್ಳುವ ಅಪಾಯವೂ ಇರುತ್ತದೆ. ಸಾಮಾಜಿಕ ಪಾರಮ್ಯ, ಸಾಂಸ್ಕೃತಿಕ ಯಜಮಾನಿಕೆ, ಧಾರ್ಮಿಕ ಆಧಿಪತ್ಯ ಮತ್ತು ಮಾರುಕಟ್ಟೆ ಆರ್ಥಿಕತೆಯ ಪ್ರಾಬಲ್ಯ ಇವೆಲ್ಲವೂ ದಲಿತರು ನಿತ್ಯ ಎದುರಿಸುತ್ತಿರುವ ಅಸ್ಪೃಶ್ಯತೆ, ಶೋಷಣೆ, ತಾರತಮ್ಯ ಮತ್ತು ದೌರ್ಜನ್ಯಗಳ ಮುಖ್ಯಭೂಮಿಕೆಯಾಗಿವೆ. ಇವೆಲ್ಲವನ್ನೂ ಎದುರಿಸುವ ಒಂದು ಪ್ರಣಾಳಿಕೆ ಮತ್ತು ಕಾರ್ಯಸೂಚಿ ಡಿಸೆಂಬರ್ 6ರ “ಸಾಂಸ್ಕೃತಿಕ ಪ್ರತಿರೋಧ”ದ ವೇದಿಕೆಯಲ್ಲಿ ರೂಪುಗೊಳ್ಳುವುದಾದರೆ, ಅಂಬೇಡ್ಕರ್ ಅವರ ಪರಿನಿಬ್ಬಾಣದ ದಿನವೂ ಸಾರ್ಥಕವಾದೀತು.