- ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟದಿಂದ ವಿಧಾನಸೌಧ-ಹೈಕೋರ್ಟ್ ಚಲೋ
- ಗಣರಾಜ್ಯೋತ್ಸವ ಕಾರ್ಯಕ್ರಮದಂದು ಡಾ. ಅಂಬೇಡ್ಕರ್ ಭಾವಚಿತ್ರ ತೆಗೆಸಿದ ಪ್ರಕರಣ
- ರಾಯಚೂರು ಜಿಲ್ಲಾ ನ್ಯಾಯಾಧೀಶರಾಗಿದ್ದ ಮಲ್ಲಿಕಾರ್ಜುನ ಗೌಡ ವಿರುದ್ಧ ಕ್ರಮಕ್ಕೆ ಆಗ್ರಹ
ಬೆಂಗಳೂರು: ಗಣರಾಜ್ಯೋತ್ಸವ ದಿನದಂದು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅಗೌರವ ಸೂಚಿಸಿದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಿರುದ್ಧ ಬೆಂಗಳೂರಿನಲ್ಲಿ ವಿವಿಧ ಸಂವಿಧಾನ ಪರ ಸಂಘಟನೆಗಳು‘ವಿಧಾನಸೌಧ-ಹೈಕೋರ್ಟ್ ಚಲೋ’ ನಡೆಸಲಾಯಿತು.
ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿಗೆ ಆಗಮಿಸಿದ್ದ ಲಕ್ಷಾಂತರ ಮಂದಿ ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಗಿದ್ದರು. ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೆ ನಾನಾ ದಲಿತರ ಸಂಘಟನೆಗಳ ಮುಖಂಡರು, ಪ್ರಗತಿಪರ ಚಿಂತಕರು, ಕಲಾವಿದರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ವಜಾಕ್ಕೆ ಹಾಗೂ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಲು ಒತ್ತಾಯಿಸಿದರು.
ನ್ಯಾಯಾಲಯಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ರವರ ಭಾವಚಿತ್ರವನ್ನು ಅಳವಡಿಸಬೇಕು. ಗಣ ರಾಜ್ಯೋತ್ಸವ ದಿನದಂದು ಅಂಬೇಡ್ಕರ್ ರವರ ಬಗ್ಗೆ ಅಪಮಾನ ಮಾಡಿರುವ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಪಾಟೀಲ್ ಗೆ ತಕ್ಕ ಶಿಕ್ಷೆ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಪ್ರತಿಭಟನಾಕಾರರು ಒತ್ತಾಯಿಸಿದರು.
ಬೃಹತ್ ಪ್ರತಿಭಟನೆಯಲ್ಲಿ ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಗೋಪಾಲಕೃಷ್ಣ ಅರಳಹಳ್ಳಿ, ನಟ ಚೇತನ್, ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಬಿ.ಗೋಪಾಲ್, ಎಂ.ವೆಂಕಟಸ್ವಾಮಿ, ಜಿಗಣಿ ಶಂಕರ್, ಅಣ್ಣಯ್ಯ, ಲಕ್ಷ್ಮೀನಾರಾಯಣ ನಾಗವಾರ, ಶ್ರೀಧರ್ ಕಲಿವೀರ, ವಿ.ನಾಗರಾಜ್, ಚನ್ನಕೃಷ್ಣಪ್ಪ, ಮರಿಯಪ್ಪ, ಹರಿರಾಂ, ಶ್ರೀನಿವಾಸ್, ಮಹಾದೇವ ಸ್ವಾಮಿ, ಎನ್.ಮೂರ್ತಿ, ಹೆಬ್ಬಾಳ ವೆಂಕಟೇಶ್, ಡಿ.ಶಿವಶಂಕರ್, ಪಾವಗಡ ಶ್ರೀರಾಮ್,ಯೋಗೀಶ್ ಮಾಸ್ಟರ್, ಹ.ರಾ.ಮಹೇಶ್ ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದರು.
ಸ್ಥಳಕ್ಕೆ ತೆರಳಿ ಮನವಿ ಸ್ವೀಕರಿಸಿದ ಸಿಎಂ:
‘ವಿಧಾನಸೌಧ ಮತ್ತು ಹೈಕೋರ್ಟ್ ಚಲೋ’ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಸಂವಿಧಾನ ಸಂರಕ್ಷಣಾ ಮಹಾ ಒಕ್ಕೂಟ-ಕರ್ನಾಟಕ ಹಮ್ಮಿಕೊಂಡಿದ್ದ ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೆರಳಿ ಮನವಿ ಸ್ವೀಕರಿಸಿದರು. ಒಕ್ಕೂಟದ ಬೇಡಿಕೆಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.