ಬಿಜೆಪಿ ಮುಖಂಡನ ದೌರ್ಜನ್ಯದಿಂದ ಗ್ರಾಮ ತೊರೆಯುವುದಾಗಿ ಪೋಸ್ಟರ್ ಅಂಟಿಸಿದ 4 ಕುಟುಂಬ

ಮೀರತ್: “ಉತ್ತರ ಪ್ರದೇಶದ ಬಲೂಂದರ್‍ಶಹರ್ ಜಿಲ್ಲೆಯ ಅರಣಿಯಾ ತಾಲೂಕಿನ ಬಿಜೆಪಿ ಮುಖ್ಯಸ್ಥ ಹಾಗೂ ಆತನ ಬೆಂಬಲಿಗರ ಕಿರುಕುಳದಿಂದ ಕಂಗೆಟ್ಟು ಗ್ರಾಮವನ್ನು ತೊರೆಯುವುದು ಅನಿವಾರ್ಯವಾಗಿದೆ” ಎಂಬ ಕೈಬರಹಗಳ ಭಿತ್ತಿಪತ್ರವನ್ನು ನಾಲ್ಕು ದಲಿತ ಕುಟುಂಬಗಳ 18-20 ಸದಸ್ಯರು ತಮ್ಮ ಮನೆ ಮುಂದೆ ಹಚ್ಚಿರುವ ಘಟನೆ ಬೆಳಕಿಗೆ ಬಂದಿದೆ.

ಜಿಲ್ಲೆಯ ದೇವ್ರಾಲಾ ಗ್ರಾಮದ ದಲಿತ ಕುಟುಂಬಗಳು ಈ ಪೋಸ್ಟರ್ ಹಚ್ಚಿವೆ. “ಮೇ 14ರಂದು ನಮ್ಮ ಕುಟುಂಬದ, ಮೋಟರ್‍ಸೈಕಲ್ ಮೆಕ್ಯಾನಿಕ್‍ಗಳಾದ ಅಚ್ಚನ್ ಕುಮಾರ್ (27) ಮತ್ತು ಸಚಿನ್ ಗೌತಮ್ (25) ಎಂಬುವವರು ಮನೆಗೆ ಬರುತ್ತಿದ್ದಾಗ, ಬಿಜೆಪಿ ಮುಖಂಡ ಸುರೇಂದ್ರ ಪ್ರಮುಖ್ ಸೇರಿದಂತೆ ಸುಮಾರು 10 ಮಂದಿ ದಾಳಿ ಮಾಡಿದ್ದಾರೆ” ಎಂದು ಕುಟುಂಬಗಳು ಆಪಾದಿಸಿವೆ.

ಇದನ್ನೂ ಓದಿಕೋವಿಡ್ ಸಾವಿನ ಲೆಕ್ಕ ತಪ್ಪುತ್ತಿದೆಯೆ? ಈ ಲೆಕ್ಕಾಚಾರ ಕೋವಿಡ್ ಹೋರಾಟಕ್ಕೆ ಹಿನ್ನಡೆಯಾಗುತ್ತಿದೆಯೇ?

ಅದೇ ದಿನ ಬೆಳಿಗ್ಗೆ ಸುರೇಂದ್ರ ಅವರ ಮನೆಯ ಹೊರಗೆ ಆಟವಾಡುತ್ತಿದ್ದ ಮಗುವಿಗೆ ಸುರೇಂದ್ರ ಅವರ ತಂದೆ ಹೊಡೆದಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎಂದು ಅಚ್ಚನ್ ಅವರ ತಂದೆ ವಿಜೇಂದ್ರ ದೂರಿದ್ದಾರೆ. ಮಗುವಿಗೆ ಹೊಡೆದದ್ದನ್ನು ನಾವು ಆಕ್ಷೇಪಿಸಿದ್ದೆವು. ಆ ದಿನ ಸಂಜೆಯೇ ದಾಳಿ ನಡೆದಿದೆ. ಇಟ್ಟಿಗೆ ಮತ್ತು ದೊಣ್ಣೆಗಳಿಂದ ಅಚ್ಚನ್ ಹಾಗೂ ಸಚಿನ್ ಮೇಲೆ ಹಲ್ಲೆ ಮಾಡಲಾಗಿದ್ದು, ಇಬ್ಬರಿಗೂ ತಲೆಗೆ ಗಾಯಗಳಾಗಿವೆ ಎಂದು ಅವರು ವಿವರಿಸಿದ್ದಾರೆ.

ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಮೊದಲು ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ. 30-40 ಜನರು ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿ ಪ್ರತಿಭಟನೆ ನಡೆಸಿದ ಬಳಿಕ ಸುರೇಂದ್ರ ಮತ್ತು ಇತರ ಎಂಟು ಜನರ ವಿರುದ್ಧ ಕೊಲೆ ಯತ್ನ, ಗಲಭೆ ಮತ್ತು ಕ್ರಿಮಿನಲ್ ಬೆದರಿಕೆಯ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಅವರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಕುಟುಂಬ ಆರೋಪಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿ ದೇವರಾಲಾ ನಿವಾಸಿಗಳಾದ ಭೂರಾ ಸಿಂಗ್, ಬಬ್ಲೂ ಕುಮಾರ್ ಮತ್ತು ಗೌತಮ್ ಕುಮಾರ್ ಎನ್ನುವವರನ್ನು ಬಂಧಿಸಲಾಗಿದೆ. ತನಿಖೆ ನಡೆಯುತ್ತಿದೆ ಮತ್ತು ಶೀಘ್ರದಲ್ಲೇ ಹೆಚ್ಚಿನವರನ್ನು ಬಂಧಿಸಲಾಗುವುದು ಎಂದು ಶಿಕಾರ್ಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ (ಅಪರಾಧ) ಕಾಮೇಶ್ ಕುಮಾರ್ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *