ತುಮಕೂರು: ದಲಿತ ಬಗರ್ ಹುಕುಂ ಸಾಗುವಳಿದಾರರ ಮೇಲೆ ನಡೆಯುತ್ತಿರುವ ಭೂಮಿ ದೌರ್ಜನ್ಯಗಳನ್ನು ಖಂಡಿಸಿ ಗುರುವಾರದಂದು ದಲಿತ ಹಕ್ಕುಗಳ ಸಮಿತಿ ಹಾಗೂ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಮಾತನಾಡಿ ʻಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ದಲಿತರಿಗೆ ಭೂಮಿ ಸಿಗುತ್ತಿಲ್ಲ, ಭೂಮಿಯ ಮೇಲಿನ ಹಕ್ಕು ದೊರೆಯದೇ ಭೂಮಿಯನ್ನು ಬಲಾಢ್ಯರ ಅತಿಕ್ರಮಣದಿಂದ ರಕ್ಷಿಸಿಕೊಳ್ಳಲು ಆಗದೇ, ಪೊಲೀಸ್ ಠಾಣೆಗಳಲ್ಲಿ ರಕ್ಷಣೆಯೂ ಸಿಗದೆ ಬಡ ದಲಿತರು ಒದ್ದಾಡುತ್ತಿದ್ದಾರೆ. ಶೀಘ್ರವೇ ಸಮಿತಿ ಸಭೆಯನ್ನು ಕರೆದು ದಲಿತ ಉಳಿಮೆದಾರರಿಗೆ ಭೂಮಿ ಹಕ್ಕಿನ ಒಡೆತನ ಕೂಡಬೇಕುʼ ಎಂದು ಒತ್ತಾಯಿಸಿದರು,
ತುಮಕೂರು ಜಿಲ್ಲಾ ಸಂಚಾಲಕ ರಾಜು ವೆಂಕಟಪ್ಪ ʻಇತ್ತೀಚಿಗೆ ಕುಣಿಗಲ್ ತಾಲ್ಲೂಕಿನಲ್ಲಿ ಬಗರ್ ಹುಕುಂ ಭೂಮಿ ವ್ಯಾಜ್ಯಗಳು ಹೆಚ್ಚುತ್ತಿದೆ ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಪರಸ್ಪರ ವಿಳಂಬ ನೀತಿ ಅನುಸರಿಸುತ್ತಿವೆ, ಪೊಲೀಸ್ ಠಾಣೆಯಲ್ಲಿ ನೊಂದವರಿಗೆ ಅದರಲ್ಲೂ ದಲಿತರ ದೂರುಗಳು ವಿಳಂಬವಾಗತ್ತಿವೆ, ಇದರಿಂದ ಸಮಸ್ಯೆ ಬಗೆಹರಿಯದೆ ಗ್ರಾಮೀಣ ಭಾಗದಲ್ಲಿ ಶಾಂತಿ ಸೌಹಾರ್ದತೆ ಹಾಳಾಗಿ ಜಾತಿ ವೈಷಮ್ಯಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಪೊಲೀಸ್ ಅಧಿಕಾರಿಗಳು ಹಾಗೂ ತಾಲ್ಲೂಕು ಆಡಳಿತ ತಕ್ಷಣ ಮಧ್ಯ ಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ತಿಳಿಸಿದರು.
ಸಂಘಟನೆಗಳ ವತಿಯಿಂದ ನೊಂದ ದಲಿತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಪ್ರತಿಭಟನೆಯ ಮೂಲಕ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ವೇದಿಕೆ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಕುಮಾರ್, ಕುಣಿಗಲ್ ತಾಲ್ಲೂಕು ಅಧ್ಯಕ್ಷರಾದ ಶಿವರಾಜು ಜಿ.ಬಿ, ತಿಮ್ಮಪ್ಪ ಟಿ.ಎಮ್, ಗೌರಮ್ಮ, ದಲಿತ ಹಕ್ಕುಗಳ ಸಮಿತಿ ರಾಜ್ಯ ಸಮಿತಿ ಸದಸ್ಯ ಹೆಚ್. ಜಿ.ನಾಗಣ್ಣ, ಶ್ರೀನಿವಾಸ್ ಕಗ್ಗೆರೆ, ಶ್ರೀನಿವಾಸ್ ಯಲಿಯೂರು, ಗೋವಿಂದರಾಜು ಮಾದಿಹಳ್ಳಿ, ರಾಜು ತುವ್ವೇಕೆರೆ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.