ದಮನಿತ, ಶೋಷಿತ ಸಮುದಾಯದ ಒಡಲೊಳಗಿಂದ ಚಿಮ್ಮಿದ ಕವಿ – ಡಾ ಸಿದ್ದಲಿಂಗಯ್ಯ: ಸಿಪಿಐ(ಎಂ) ಶ್ರದ್ಧಾಂಜಲಿ

ದಲಿತ ಕವಿ ಎಂದೇ ಪ್ರಖ್ಯಾತವಾಗಿರುವ ಕನ್ನಡದ ಬಂಡಾಯ ಕವಿ, ನಾಡೋಜ, ಡಾ. ಸಿದ್ದಲಿಂಗಯ್ಯ ನವರು ಕೊರೊನಾ ಬಾಧೆಗೆ ತುತ್ತಾಗಿ ನಿಧನರಾದ ಸುದ್ಧಿ ಆಘಾತಕಾರಿಯಾಗಿದೆ. ಬಂಡಾಯ ಕವಿಗಳ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದು ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿಯು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.

ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು ಬಸವರಾಜ ಅವರು ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.

ಕನ್ನಡ ಕಾವ್ಯದ ಸ್ವರೂಪವನ್ನೇ ಬದಲಾಯಿಸಿದ, ಒಂದು ಹೊಸ ಜನಪರ ಯುಗದ ಹರಿಕಾರರಾದ ಡಾ.ಸಿದ್ಧಲಿಂಗಯ್ಯನವರು, ದಮನಿತ, ಶೋಷಿತ ಸಮುದಾಯದ ಒಡಲ ಬೇಗುದಿಯಿಂದ ಚಿಮ್ಮಿದ ಬಂಡಾಯ ಕವಿಯಾಗಿದ್ದರು. ಮಹಾನ್ ತತ್ವಜ್ಞಾನಿ ಕಾರ್ಲ್‌ಮಾರ್ಕ್ಸ್‌ ಮತ್ತು ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಇಬ್ಬರ ಚಿಂತನೆಗಳನ್ನೂ ಮೈಗೂಡಿಸಿಕೊಂಡು ಹೊರ ಹೊಮ್ಮಿದ ಅಸಾಮಾನ್ಯ ಪ್ರತಿಭೆಯಾಗಿದ್ದರು ಎಂದು ಸಿಪಿಐ(ಎಂ) ಸ್ಮರಿಸುತ್ತದೆ ಎಂದು ತಿಳಿಸಿದೆ.

ಇದನ್ನು ಓದಿ: ಕವಿ ಡಾ. ಸಿದ್ದಲಿಂಗಯ್ಯ ನಿಧನ

1964ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಮಂಚನಬೆಲೆ ಎಂಬ ಗ್ರಾಮದ ಅತ್ಯಂತ ಕಡು ಬಡತನದ ದಲಿತ ಕುಟುಂಬದಲ್ಲಿ ಜನಿಸಿದ ಕವಿ ಸಿದ್ದಲಿಂಗಯ್ಯನವರು (67) ಬೆಂಗಳೂರಿನ ಶ್ರೀರಾಂಪುರದಲ್ಲಿನ ಗೋಪಾಲಸ್ವಾಮಿ ಅಯ್ಯರ್ ಹಾಸ್ಟೆಲ್‌ನಲ್ಲಿದ್ದು ಶಿಕ್ಷಣವನ್ನು ಪಡೆದರು. ನಂತರ ಬಡತನದಲ್ಲಿಯೇ, ಸರಕಾರಿ ಕಲಾ ಕಾಲೇಜು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣದ ವ್ಯಾಸಂಗ ಪೂರೈಸಿದರು. ಬಳಿಕ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಧ್ಯಾಪಕರಾಗಿ ಸೇವೆ ಸಲ್ಲಿಸಿದರು.

ಅವರ ಹೋರಾಟದ ಬದುಕು ಮತ್ತು ಪ್ರತಿಭೆಯ ಕಾರಣಗಳಿಂದಾಗಿ ಎರಡು ಬಾರಿ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು, ಸದನದೊಳಗೆ ಜನರ ನೋವು, ಸಂಕಟ, ಮೌಡ್ಯತೆ, ಅಂಧಶ್ರದ್ದೆಯಂತಹ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿಯೇ ಮಂಡಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಕನ್ನಡಕ್ಕಾಗಿ ದುಡಿದಿದ್ದಾರೆ.

ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಹಾಗೂ ಸಮುದಾಯ ಸಾಂಸ್ಕೃತಿಕ ಚಳುವಳಿಯ ಮತ್ತು ಸಿಪಿಐ(ಎಂ) ಪಕ್ಷದ ಚಟುವಟಿಕೆಗಳ ಜೊತೆ ತೊಡಗಿಸಿಕೊಂಡು, ವಿದ್ಯಾರ್ಥಿ ದೆಸೆಯಿಂದಲೇ ಮಾರ್ಕ್ಸ್‌ವಾದಕ್ಕೆ ಆಕರ್ಷಿತರಾಗಿ, ಆ ಮೂಲಕ ದಲಿತರ ಹಾಗೂ ಶೋಷಿತರ ಸಂಕಟಗಳಿಗೆ ಪರಿಹಾರಗಳನ್ನು ಕಂಡುಕೊಂಡರು. ದಲಿತ ಚಳುವಳಿ ಹಾಗೂ ಬಂಡಾಯ ಸಾಹಿತ್ಯ ಚಳುವಳಿಯನ್ನು ರಾಜ್ಯದಾದ್ಯಂತ ವಿಸ್ತರಿಸಲು ಶ್ರಮಿಸಿದರು.

ಸದರಿ ಅವರ ಚಿಂತನೆಗಳು ಅವರ ಸಾಹಿತ್ಯಿಕ ಕೃತಿಗಳಲ್ಲಿ ಮತ್ತು ಸಾರ್ವಜನಿಕ ಉಪನ್ಯಾಸಗಳಲ್ಲಿ ಪ್ರತಿಫಲನಗೊಂಡಿವೆ. ದಲಿತರ, ಶ್ರಮಿಕರ, ಒಟ್ಟಾರೆ ಶೋಷಿತರ ಧ್ವನಿಗಳು, ಅವರ ಹಾಡುಗಳು ಮತ್ತು ಕೃತಿಗಳಲ್ಲಿ ದಟ್ಟವಾಗಿ ಮೂಡಿಬಂದಿವೆ. ಅವರ ಹಲವು ಕ್ರಾಂತಿಗೀತೆಗಳು ಜನಚಳುವಳಿಗಳ ಧ್ವನಿಗಳಾಗಿ ಚಿರಸ್ಥಾಯಿಯಾಗಿವೆ.

ಕ್ರಾಂತಿಕಾರಿ ಹಾಡುಗಳಾಗಿ ರಾಜ್ಯದಾದ್ಯಂತ ಧ್ವನಿಸಿದ ಅವರ ಕಾವ್ಯವು, ಶೋಷಿತರ, ದಮನಿತರ, ನಿಟ್ಟುಸಿರು ಮತ್ತು ಶೋಷಣೆಗಳನ್ನು ಬಿಚ್ಚಿಡುತ್ತಲೇ, ಸಮಾನತೆ, ಸಮಸಮಾಜದ ನಿರ್ಮಾಣದ ತುಡಿತಗಳನ್ನು ಪ್ರಖರವಾಗಿ ಅಭಿವ್ಯಕ್ತಿಸಿಕೊಂಡು ತೀಕ್ಷ್ಣ ಮೊನಚು ಪಡೆದು, ಜನಪರ ಹೋರಾಟಗಳಿಗೆ ಸ್ಪೂರ್ತಿಯನ್ನು ತಂದು ಕೊಟ್ಟಿವೆ.

ಮಾರ್ಕ್ಸ್‌ವಾದದ ತಾತ್ವಿಕತೆಯನ್ನು ಕಾವ್ಯದೊಳಗೆ ಹಾಸು ಹೊಕ್ಕಾಗಿಸಿ ಅರಳಿಸುವಲ್ಲಿ ಸಿದ್ದಲಿಂಗಯ್ಯನವರ ಅನುಭವ ಮತ್ತು ಪ್ರತಿಭೆ ಅನನ್ಯವಾದದ್ದು. ಭಾರತೀಯ ಸಮಾಜದಲ್ಲಿ ಸಮಾನತೆಯನ್ನು ತರುವಲ್ಲಿ ಜಾತಿ ಮತ್ತು ವರ್ಗ ಶೋಷಣೆಗೆ ವಿರೋಧವಾದ ಹೋರಾಟಗಳ ಮಹತ್ವವನ್ನು ಅವರು ಪ್ರತಿಪಾದಿಸಿದ್ದಾರೆ. ಹೀಗೆ ಜನ ಚಳುವಳಿಗಳಿಗೆ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ ಎಂದು ಸಿಪಿಐ( ಎಂ) ಸ್ಮರಿಸಿದೆ.

ಹೊಲೆ ಮಾದಿಗರ ಹಾಡು, ಮೆರವಣಿಗೆ, ಸಾವಿರಾರು ನದಿಗಳು, ಅಲ್ಲೇ ಕುಂತವ್ರೆ, ನನ್ನ ಜನಗಳು ಮತ್ತು ಇತರ ಕಾವ್ಯಗಳು, ಕಪ್ಪು ಕಾಡಿನ ಹಾಡುಗಳು ಇತ್ಯಾದಿ ಪ್ರಮುಖ ಕಾವ್ಯ, ಗ್ರಾಮ ದೇವತೆಗಳು, ಅವತಾರ, ಊರುಕೇರಿ ಅತ್ಮಕಥನ, ಹಲವು ನಾಟಕಗಳು, ಲೇಖನಗಳ ಸಂಗ್ರಹ ಮುಂತಾದವು ಪ್ರಮುಖ ಕೃತಿಗಳು.

ಡಾ.ಸಿದ್ದಲಿಂಗಯ್ಯ ನವರಿಗೆ ಪಂಪ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಡಾ.ಅಂಬೇಡ್ಕರ್ ಪ್ರಶಸ್ತಿ, ಮುಂತಾದವುಗಳು ಲಭಿಸಿದ್ದವು. ಶ್ರವಣ ಬೆಳಗೊಳದಲ್ಲಿ ನಡೆದ 81ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾದ್ಯಕ್ಷರಾಗಿ ನಾಡಿನ ಗೌರವ ಪಡೆದಿದ್ದಾರೆ ಎಂದು ತಿಳಿಸಿದೆ.

ಡಾ ಸಿದ್ದಲಿಂಗಯ್ಯನವರ ಅಗಲಿಕೆ ಕನ್ನಡ ನಾಡಿನ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಲೋಕಕ್ಕೆ ವಿಶೇಷವಾಗಿ ಜನ ಚಳುವಳಿಗಳಿಗೆ ಆಗಿರುವ ಅಪಾರ ನಷ್ಟ ಎಂದು ಸಿಪಿಐ(ಎಂ) ರಾಜ್ಯ ಸಮಿತಿಯು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.

ಡಾ.ಸಿದ್ದಲಿಂಗಯ್ಯನವರನ್ನು ಕಳೆದುಕೊಂಡಿರುವ ಅವರ ಕುಟುಂಬಕ್ಕೆ ಮತ್ತು ಬಂಧು, ಮಿತ್ರರಿಗೆ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ತೀವ್ರ ಸಂತಾಪ ಮತ್ತು  ಸಾಂತ್ವನವನ್ನು ತಿಳಿಸಿದೆ.

Donate Janashakthi Media

Leave a Reply

Your email address will not be published. Required fields are marked *