ಪ್ರಕಾಶ್ ಕಾರತ್
ಅನು: ವಿಶ್ವ
ಏಪ್ರಿಲ್ ೯ರಂದು ಈಸ್ಟರ್ ದಿನ ಪ್ರಧಾನಿ ನರೇಂದ್ರ ಮೋದಿ ನವ ದೆಹಲಿಯ ಸೇಕ್ರೆಡ್ ಹಾರ್ಟ್ ಕೆಥಡ್ರಲ್ ಚರ್ಚ್ಗೆ ಭೇಟಿ ನೀಡಿದ್ದು ಗಮನಾರ್ಹವಾಗಿದೆ. ಯಾಕೆಂದರೆ, ಒಂಬತ್ತು ವರ್ಷಗಳ ಹಿಂದೆ ಪ್ರಧಾನಿಯಾದ ನಂತರ ಅವರು ಯಾವುದೇ ಒಂದು ಚರ್ಚ್ಗೆ ಭೇಟಿ ನೀಡಿದ್ದು ಇದೇ ಮೊದಲ ಸಲವಾಗಿದೆ. ಅದೇ ದಿನ, ಅಂದರೆ ಈಸ್ಟರ್ ಭಾನುವಾರ, ನಾನಾ ಕಡೆಗಳಲ್ಲಿ ಬಿಜೆಪಿ ನಾಯಕರು ಚರ್ಚ್ ಮುಖಂಡರು ಮತ್ತು ಕ್ರೈಸ್ತರ ಮನೆಗಳಿಗೆ ಭೇಟಿ ನೀಡಿ ಈಸ್ಟರ್ ಶುಭಾಶಯ ಕೋರಿದರು.
ಕ್ರೈಸ್ತರ ಕುರಿತ ಈ ಹಠಾತ್ ಪ್ರೀತಿ ಹಲವರನ್ನು ಅಚ್ಚರಿಗೊಳಿಸಿದೆ. ಆದರೆ, ಇದರ ಉದ್ದೇಶ ಏನೆಂಬುದನ್ನು ಸ್ವತಃ ಮೋದಿಯೇ ಸೂಚ್ಯವಾಗಿ ಹೇಳಿದ್ದಾರೆ. ತಿಂಗಳ ಹಿಂದೆ ನಡೆದ ಮೂರು ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶಗಳನ್ನು ಸಂಭ್ರಮಿಸಲು ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಮೋದಿ, ಕ್ರೈಸ್ತರೇ ಹೆಚ್ಚಿರುವ ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಯಶಸ್ಸು ಪಡೆದಿದೆ ಎಂದು ಎತ್ತಿ ಹೇಳಿದ್ದರು. ಕ್ರೆöÊಸ್ತ ಸಮುದಾಯಕ್ಕೂ ಬಿಜೆಪಿ ಅಂಗೀಕಾರಾರ್ಹವಾಗಿದೆ ಎನ್ನುವುದರ ಸೂಚನೆ ಇದಾಗಿದೆ ಎಂದ ಮೋದಿ, ಕೇರಳವೇ ಬಿಜೆಪಿಯ ಮುಂದಿನ ಗುರಿ (ಟಾರ್ಗೆಟ್) ಎಂದಿದ್ದರು. ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಕ್ರೈಸ್ತರ ಬೆಂಬಲ ದೊರಕಿದೆ ಎಂದು ಹೇಳುವುದೇ ಟೊಳ್ಳು ಹೇಳಿಕೆಯಾಗಿದೆ. ಯಾಕೆಂದರೆ ಮೇಘಾಲಯದ ೬೦ ಸ್ಥಾನಗಳಲ್ಲಿ ಬಿಜೆಪಿ ಪಡೆದಿರುವುದು ಕೇವಲ ಎರಡು ಸ್ಥಾನ. ನಾಗಾಲ್ಯಾಂಡ್‌ನಲ್ಲಿ ಅದು ಆಳುವ ಕೂಟದಲ್ಲಿ ಕಿರಿಯ ಪಾಲುದಾರ ಪಕ್ಷವಾಗಿದೆ ಅಷ್ಟೇ.
ಜನಸಂಖ್ಯೆಯಲ್ಲಿ ಮುಸ್ಲಿಮರು ಮತ್ತು ಕ್ರೆöÊಸ್ತರು ಶೇಕಡ ೪೫ರಷ್ಟಿರುವ ಕೇರಳದಲ್ಲಿ ತನ್ನನ್ನು ಸಂಸ್ಥಾಪಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸುತ್ತಲೇ ಇದ್ದು ಹೆಚ್ಚಿನ ಯಶಸ್ಸು ಅದಕ್ಕೆ ಸಿಕ್ಕಿಲ್ಲ. ಮುಸ್ಲಿಂ ಸಮುದಾಯದಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಂಡ ಬಿಜೆಪಿ, ಕೇರಳದ ಜನಸಂಖ್ಯೆಯ ಶೇಕಡ ೧೮ರಷ್ಟಿರುವ ಕ್ರೆöÊಸ್ತರ ನಡುವೆ ಪ್ರಭಾವ ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.
ಅದಕ್ಕಾಗಿ ಬಿಜೆಪಿ ಎರಡು ಬಗೆಯ ಧೋರಣೆಯನ್ನು ಅನುಸರಿಸುತ್ತಿದೆ: ಮೊದಲನೆಯದಾಗಿ, ಕ್ರೈಸ್ತ ಜನರ ನಡುವೆ ಮುಸ್ಲಿಂ-ವಿರೋಧಿ ಭಾವನೆ ಹುಟ್ಟುಹಾಕಲು ಬಿಜೆಪಿ ಯತ್ನಿಸಿದೆ. ಅದರಲ್ಲೂ ವಿಶೇಷವಾಗಿ ಕೇರಳದಲ್ಲಿ ಸಿರೊ-ಮಲಬಾರ್ ಎಂದು ಜನಜನಿತವಾದ ಕ್ಯಾಥೊಲಿಕ್ ಚರ್ಚ್ ನಡುವೆ ಈ ರೀತಿಯ ಪ್ರಯತ್ನ ನಡೆಸಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಚರ್ಚ್ ನಾಯಕರು `ಲವ್ ಜಿಹಾದ್’ ವಿರುದ್ಧ ಮಾತನಾಡಿದ್ದಾರೆ ಹಾಗೂ ಕ್ಷುಲ್ಲಕ ಕ್ರೈಸ್ತ ರಂಗವೊಂದನ್ನು ಹುಟ್ಟು ಹಾಕಲಾಗಿದ್ದು ಅದು ಮುಸ್ಲಿಂ-ವಿರೋಧಿ ಪ್ರಚಾರವನ್ನು ನಡೆಸುತ್ತಿದೆ. ಅಲ್ಲದೆ ಆರ್‌ಎಸ್‌ಎಸ್‌ನ ಕೆಲವು ಅಂಗಸಂಸ್ಥೆಗಳಿಗೆ ಅದು ಸಹಕಾರ ನೀಡುತ್ತಲೂ ಇದೆ. ಕ್ರಿಶ್ಚಿಯನ್-ಮುಸ್ಲಿಂ ವಿಭಜನೆಯಿಂದ ಲಾಭ ಪಡೆಯುವುದು ಬಿಜೆಪಿ ಹವಣಿಕೆಯಾಗಿದೆ. ಬಿಜೆಪಿ-ಆರ್‌ಎಸ್‌ಎಸ್ ರಾಜಕೀಯಕ್ಕೆ ಬಗ್ಗದವರನ್ನು ಕಿರುಕುಳ ಹಾಗೂ ಒತ್ತಡದ ಮೂಲಕ ಮಣಿಸಲು ಯತ್ನಿಸುವ ಮೋದಿ ಸರ್ಕಾರದ ಮಾಮೂಲಿ ತಂತ್ರ ಇನ್ನೊಂದು ವಿಧಾನವಾಗಿದೆ.
ಇದನ್ನೂ ಓದಿ : ಮತಾಂತರ ನಿಷೇಧ: ವ್ಯಕ್ತಿ ಸ್ವಾತಂತ್ರ್ಯದ ಕಗ್ಗೊಲೆ
ಚರ್ಚ್ ಆಫ್ ಸೌತ್ ಇಂಡಿಯಾದ ಮಾಡರೇಟರ್ ಬಿಷಪ್ ಧರ್ಮ ರಾಜ್ ಮತ್ತು ಕೆ.ಪಿ. ಯೊಹಾನನ್ ಮತ್ತು ಪೌಲ್ ದಿನಕರನ್ ಮುಂತಾದ ಧಾರ್ಮಿಕ ನಾಯಕರ ವಿರುದ್ಧ ಅನುಷ್ಠಾನ ನಿರ್ದೇಶನಾಲಯ (ಇ.ಡಿ.) ತನಿಖೆ ನಡೆಸಿದ್ದನ್ನು ಕೇರಳ ಕಂಡಿದೆ. ಕ್ಯಾಥೊಲಿಕ್ ಚರ್ಚ್ನ ಅತ್ಯುನ್ನತ ನಾಯಕ, ಎರ್ನಾಕುಳಂ ಅಂಗಮಲಿ ಆರ್ಚ್ಡಯೋಸಿಸ್‌ನ ಆರ್ಚ್ಬಿಷಪ್ ಕಾರ್ಡಿನಲ್ ಜಾರ್ಜ್ ಅಲೆಂಚರಿಯವರನ್ನು ಅನುಷ್ಠಾನ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಆರ್ಚ್ಡಯೋಸಿಸ್‌ನ ಆಸ್ತಿಗಳನ್ನು ಮಾರಾಟ ಮಾಡಿದ್ದ ವ್ಯವಹಾರದಲ್ಲಿ ಹಣಕಾಸು ದುರ್ಬಳಕೆ ಪ್ರಕರಣವನ್ನು ಅವರ ವಿರುದ್ಧ ಇ.ಡಿ. ದಾಖಲಿಸಿದೆ. ಕಟ್ಟುನಿಟ್ಟಿನ ವಿದೇಶಿ ದೇಣಿಗೆ ನಿಯಂತ್ರಣ ಕಾನೂನು (ಎಫ್‌ಸಿಆರ್‌ಎ) ಮೂಲಕವೂ ಒತ್ತಡ ಹೇರಲಾಗುತ್ತಿದೆ. ದಾನಧರ್ಮ ಮತ್ತು ಶೈಕ್ಷಣಿಕ ಕಾರ್ಯಗಳಿಗೆ ಚರ್ಚ್ಗಳು ಪಡೆಯುವ ವಿದೇಶಿ ಹಣವನ್ನು ಕಡಿತಗೊಳಿಸಲು ಈ ಮೂಲಕ ಪ್ರಯತ್ನಿಸಲಾಗುತ್ತಿದೆ.
ಇಂಥ ವಿಧಾನಗಳ ಮೂಲಕ ಕೆಲವು ಚರ್ಚ್ಗಳ ನಾಯಕರನ್ನು “ಮೃದುಗೊಳಿಸಿದ” ನಂತರ ಇದೀಗ ಬೆದರಿಕೆಗಳು ಮಾತ್ರವಲ್ಲದೆ ಪುಸಲಾಯಿಸುವಿಕೆಯ ತಂತ್ರ ಅನುಸರಿಸಲಾಗುತ್ತಿದೆ.
ಚರ್ಚ್ಗೆ ಮೋದಿ ಭೇಟಿ ಹಾಗೂ ಕೇರಳದಲ್ಲಿ ಚರ್ಚ್ ನಾಯಕರುಗಳನ್ನು ತಲುಪಲು ಬಿಜೆಪಿ ನಾಯಕರು ನಡೆಸಿದ ಕ್ರಮವನ್ನು ಈ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಮೃದು ಕೈಗವಸಿನಿಂದ ಸವರುವ ಈ ಧೋರಣೆಯಿಂದ ಕ್ರೈಸ್ತ ಸಮುದಾಯದ ನಡುವೆ ನುಸುಳಲು ತನಗೆ ಅನುಕೂಲವಾಗುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರವಾಗಿದೆ. ಆದರೆ ಭಾರತದ ಇತರ ಭಾಗಗಳಲ್ಲಿ ಬಿಜೆಪಿ ಆಡಳಿತದ ಅಡಿಯಲ್ಲಿ ಕ್ರೈಸ್ತರಿಗೆ ಏನಾಗುತ್ತಿದೆ ಎಂದು ನೋಡಿದಾಗ, ಕೇರಳದಲ್ಲಿನ ಈ ಕುಖ್ಯಾತ ತಂತ್ರವು ತೀರಾ ತದ್ವಿರುದ್ಧವಾಗಿ ಕಾಣಿಸುತ್ತದೆ.
೨೦೧೪ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿAದ ಕ್ರೆöÊಸ್ತರ ಪ್ರಾರ್ಥನಾ ಮಂದಿರಗಳು ಮತ್ತು ಕ್ರಿಶ್ಚಿಯನ್ನರ ಮೇಲೆ ದಾಳಿಗಳು ಒಂದೇ ಸಮನೆ ಹೆಚ್ಚಿದೆ. ಮುಸ್ಲಿಮರು ಮತ್ತು ಕ್ರೈಸ್ತರಿಬ್ಬರೂ ಹಿಂದೂ ಸಮಾಜಕ್ಕೆ ಹೊರಗಿನವರು ಎಂದು ಪರಿಗಣಿಸುವ ಆರೆಸ್ಸೆಸ್ ಸಿದ್ಧಾಂತದ ಪರಿಣಾಮವಾಗಿ ಕ್ರೆöÊಸ್ತರ ವಿರುದ್ಧ ದ್ವೇಷ ಹಾಗೂ ದಾಳಿಗಳು ನಡೆಯುತ್ತಿವೆ. ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಎಂ.ಎಸ್. ಗೋಲ್ವಾಲ್ಕರ್ ಮೂರು ಆಂತರಿಕ ಅಪಾಯಗಳ ಬಗ್ಗೆ ಮಾತನಾಡಿದ್ದಾರೆ: ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯೂನಿಸ್ಟರು ಆಂತರಿಕ ವೈರಿಗಳು ಎಂಬುದು ಅವರ ಅಭಿಪ್ರಾಯ.
ಭಾರತದಲ್ಲಿ ಕ್ರೈಸ್ತರು ಸಣ್ಣ ಅಲ್ಪಸಂಖ್ಯಾತ ಸುಮದಾಯವಾಗಿದ್ದು ಹಲವು ದಶಕಗಳಿಂದ ಅದು ಇಳಿಮುಖವಾಗುತ್ತಿದೆ. ೧೯೭೧ರಲ್ಲಿ ಶೇಕಡ ೨.೫೩ ರಷ್ಟಿದ್ದ ಕ್ರೈಸ್ತರು ೧೯೯೧ರಲ್ಲಿ ಶೇ. ೨.೪೩ಕ್ಕೆ ಇಳಿದಿದ್ದರು. ೨೦೦೧ರಲ್ಲಿ ೨.೩೪% ಆಗಿದ್ದಿದು ೨೦೧೧ರ ಜನಗಣತಿ ಅನ್ವಯ ೨.೩೦%ಕ್ಕೆ ಕುಸಿದಿದೆ. ಈ ಸಣ್ಣ ಸಮುದಾಯವು ಈಗ ದೇಶದ ಅನೇಕ ಭಾಗಗಳಲ್ಲಿ ದಿಗ್ಬಂಧನಕ್ಕೆ ಒಳಪಟ್ಟಿದೆ.
ಸಂಯುಕ್ತ ಕ್ರಿಶ್ಚಿಯನ್ ವೇದಿಕೆ (ಯುಸಿಎಫ್) ಪ್ರಕಾರ, ೨೦೨೨ರಲ್ಲಿ ಕ್ರೆöÊಸ್ತರ ಮೇಲಿನ ದಾಳಿ ತಾರಕಕ್ಕೇರಿರುವುದು ಅದರ ಸಮೀಕ್ಷೆಯಿಂದ ತಿಳಿದು ಬಂದಿದೆ. ೨೧ ರಾಜ್ಯಗಳಲ್ಲಿಕ್ರೈಸ್ತರ ಮೇಲಿನ ದಾಳಿಗಳ ೫೯೮ ಪ್ರಕರಣಗಳಿವೆ. ೨೦೧೮ರಲ್ಲಿ ಆಕ್ರಮಣದ ೨೯೨ ಪ್ರಕರಣ, ೨೦೧೯ರಲ್ಲಿ ೩೨೮ ಪ್ರಕರಣ ಹಾಗೂ ೨೦೨೦ರಲ್ಲಿ ಕೋವಿಡ್ ಸಾಂಕ್ರಾಮಿಕತೆ ಹಾಗೂ ಲಾಕ್‌ಡೌನ್‌ನಿಂದಾಗಿ ದಾಳಿ ಇಳಿಕೆಯಾಗಿ ೨೭೯ರಲ್ಲಿ ನಿಂತಿದ್ದು -ಇವೆಲ್ಲವೂ ದೇಶದಲ್ಲಿ ಕ್ರೈಸ್ತರ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ೨೦೨೧ರಲ್ಲಿ ಕೇಸ್‌ಗಳು ಮತ್ತೆ ಏರಿಕೆಯಾಗಿ ೫೦೫ ದಾಳಿಗಳು ನಡೆದಿವೆ.
೨೦೨೨ರ ಕೊನೆಯ ತ್ರೈಮಾಸಿಕದಲ್ಲಿ ಛತ್ತೀಸ್‌ಗಢದಲ್ಲಿ ಕ್ರೈಸ್ತ ಆದಿವಾಸಿಗಳ ಮೇಲೆ ವ್ಯಾಪಕ ದಾಳಿಗಳು ನಡೆದಿವೆ. ಆರೆಸ್ಸೆಸ್‌ನ ಅನೇಕ ಮುಂಚೂಣಿ ಸಂಸ್ಥೆಗಳು ಸ್ಥಾಪಿಸಿದ ಜನಜಾತಿ ಸುರಕ್ಷಾ ಮಂಚ್ ಹೆಸರಿನಲ್ಲಿ ಕ್ರೈಸ್ತರ ವಿರುದ್ಧ ವಿಷಕಾರಿ ಅಪಪ್ರಚಾರ ನಡೆಸಲಾಗುತ್ತಿದ್ದು, ಅದರ ಪರಿಣಾಮವಾಗಿ ದಕ್ಷಿಣ ಛತ್ತೀಸ್‌ಗಢದ ಮೂರು ಜಿಲ್ಲೆಗಳಲ್ಲಿ ವ್ಯಾಪಕ ದಾಳಿಗಳು ನಡೆದಿವೆ. ಹಿಂಸಾಚಾರ ಮತ್ತು ವಿವಿಧ ರೀತಿಯ ಸಾಮಾಜಿಕ ಬಹಿಷ್ಕಾರದ ಕಾರಣದಿಂದಾಗಿ ಸಾವಿರಾರು ಕ್ರೆöÊಸ್ತರು ತಮ್ಮ ಗ್ರಾಮಗಳನ್ನು ತೊರೆಯುವ ಬಲವಂತಕ್ಕೆ ಒಳಗಾಗಿದ್ದಾರೆ. ಛತ್ತೀಸ್‌ಗಢದ ಕ್ರೈಸ್ತ ಬುಡಕಟ್ಟು ಜನರ ಮೇಲೆ ನಡೆದ ದಾಳಿಗಳ ಬಗ್ಗೆ ಸಿಪಿಐ (ಎಂ) ನಿಯೋಗ ಸಿದ್ಧಪಡಿಸಿದ ಸಮಗ್ರ ವರದಿಯನ್ನು ಪ್ರಕಟಿಸಲಾಗಿದೆ.
ಮೀಸಲಾತಿ ವಂಚನೆ
ಛತ್ತೀಸ್‌ಗಢದಲ್ಲಿ ಕ್ರೈಸ್ತ ಬುಡಕಟ್ಟು ಜನರ ಮೇಲೆ ನಡೆಯುತ್ತಿರುವ ದಾಳಿಗಳನ್ನು ಆರೆಸ್ಸೆಸ್ ನೇತೃತ್ವದ ಆದಿವಾಸಿ ಸಂಘಟನೆಗಳು ನಡೆಸುತ್ತಿರುವ ಪ್ರಚಾರದ ಹಿನ್ನೆಲೆಯಲ್ಲೂ ನೋಡಬೇಕಾಗುತ್ತದೆ. ಕ್ರೈಸ್ತ ಆದಿವಾಸಿಗಳನ್ನು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ಪಟ್ಟಿಯಿಂದ ಕೈಬಿಡುವಂತೆ ಈ ಸಂಘಟನೆಗಳು ಒತ್ತಾಯಿಸುತ್ತಿವೆ. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಬುಡಕಟ್ಟು ಜನರು ಮೀಸಲಾತಿಗೆ ಅರ್ಹರಲ್ಲ ಎನ್ನುವುದು ಅವರ ವಾದವಾಗಿದೆ. ಇದರ ಪರಿಣಾಮ ಅಗಾಧವಾಗಿರುತ್ತದೆ. ಉದಾಹರಣೆಗೆ, ಈಶಾನ್ಯ ಭಾರತದ ಬಹಳಷ್ಟು ಬುಡಕಟ್ಟು ಸಮುದಾಯಗಳು ಕ್ರಿಶ್ಚಿಯನ್ ಆಗಿವೆ. ಮತ್ತು ಆರೆಸ್ಸೆಸ್‌ನ ಈ ಬೇಡಿಕೆಯಿಂದಾಗಿ ಅವುಗಳು ಎಸ್‌ಟಿ ಸ್ಥಾನಮಾನದಿಂದ ವಂಚಿತವಾಗಲಿವೆ.
ಕರ್ನಾಟಕದಲ್ಲಿ ಕರಾಳ ಕಾನೂನು :
ಬಲವಂತದ ಮತಾಂತರ ಮಾಡುತ್ತಾರೆ ಎಂದು ಆರೋಪಿಸುವುದು ಕ್ರೈಸ್ತರ ವಿರುದ್ಧದ ದಾಳಿಯ ಇನ್ನೊಂದು ಪ್ರಮುಖ ವಿಧಾನವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ “ಧಾರ್ಮಿಕ ಸ್ವಾತಂತ್ರ್ಯ ಹಕ್ಕು ರಕ್ಷಣೆ ಕಾನೂನು” ಎಂಬ ಮತಾಂತರ ವಿರೋಧಿ ಕಾನೂನನ್ನು ರೂಪಿಸಿದೆ. ೨೦೨೨ ಸೆಪ್ಟೆಂಬರ್‌ನಲ್ಲಿ ಈ ಕಾನೂನು ಅಂಗೀಕಾರವಾಗಿದೆ. ಬಲವಂತದಿಂದ ಮತಾಂತರಗೊಳಿಸಲಾಗಿದೆ ಎಂದು ಮತಾಂತರಗೊAಡ ವ್ಯಕ್ತಿಯ ಕುಟುಂಬದ ಹೊರಗಿನವರು ಕೂಡ ನೀಡಿದ ದೂರಿನ ಆಧಾರದಲ್ಲಿ ಚರ್ಚ್ಗಳು ಮತ್ತು ಪಾದ್ರಿಗಳನ್ನು ಬಂಧಿಸಲು ಅವಕಾಶ ಕೊಡುವ ಕರಾಳ ನಿಯಮ ಈ ಕಾನೂನಿನಲ್ಲಿದೆ. ಕರ್ನಾಟಕದಲ್ಲಿ ವಿವಿಧ ಚರ್ಚ್ಗಳು ಈ ಕಾನೂನಿನ ವಿರುದ್ಧ ಒಗ್ಗಟ್ಟಿನಿಂದ ಹೋರಾಡುತ್ತಿವೆ. ನ್ಯಾಯಕ್ಕಾಗಿ ಕೋರ್ಟ್ಗೂ ಮೊರೆಹೋಗಿವೆ.
ಕೇರಳದಲ್ಲಿ, ಕೇಂದ್ರದ ಬಿಜೆಪಿ ಆಡಳಿತಗಾರರ ಸತತ ಒತ್ತಡದಿಂದಾಗಿ ಕೆಲವು ಚರ್ಚ್ ನಾಯಕರು ಶರಣಾಗಿದ್ದು ತಲಶೇರಿ ಆರ್ಚ್ಡಯೋಸಿಸ್‌ನ ಆರ್ಚ್ಬಿಷಪ್ ಜೋಸೆಫ್ ಪಂಪ್ಲಾನಿಯಂಥವರು ರಾಜಿ ಮಾಡಿಕೊಂಡಿದ್ದಾರೆ. ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಪಡಿಸುವಂತೆ ಕೋರಿ ಕಾರ್ಡಿನಲ್ ಜಾರ್ಜ್ ಅಲಂಚೆರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ತಳ್ಳಿ ಹಾಕಿದೆ. ಅಂಥ ಅಲೆಂಚೆರಿಯೇ ಈಸ್ಟರ್ ಭಾನುವಾರ ಸಂದರ್ಶನವೊಂದರಲ್ಲಿ `ಮೋದಿ ಒಬ್ಬ ಒಳ್ಳೆಯ ನಾಯಕ’ ಎಂದು ಹೇಳಿದ್ದಾರೆ. ಬಿಜೆಪಿ ಆಡಳಿತದಲ್ಲಿ ಕ್ರೈಸ್ತರು ಅಸುರಕ್ಷಿತರಲ್ಲ ಎಂದೂ ಹೇಳಿದ್ದಾರೆ.
ಕೆಲವು ಚರ್ಚ್ ನಾಯಕರ ಇಂಥ ಹೇಳಿಕೆಗಳು ಆ ಚರ್ಚ್ನ ಅಥವಾ ಇಡೀ ಸಮುದಾಯದ ಅಭಿಪ್ರಾಯವೆಂದು ಭಾವಿಸಬೇಕಾಗಿಲ್ಲ. ಪಾಂಪ್ಲನಿಯ ಹೇಳಿಕೆಗಳನ್ನು ಕ್ಯಾಥೊಲಿಕ್ ಚರ್ಚ್ನ ಕೆಲವು ವಿಭಾಗದವರು ವಿರೋಧಿಸಿದ್ದಾರೆ. ಕೇರಳದಲ್ಲಿ ಕ್ರೈಸ್ತರು ಕೇರಳ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಜಾತ್ಯತೀತ ಬಂಧದ ಅವಿಭಾಜ್ಯ ಭಾಗವಾಗಿದ್ದಾರೆ. ಬಿಜೆಪಿ-ಆರೆಸ್ಸೆಸ್‌ನ ಕ್ರೈಸ್ತ-ವಿರೋಧಿ ಸ್ವರೂಪದ ಬಗ್ಗೆ ಅವರಿಗೆ ಅರಿವಿದೆ. ಹಾಗೂ ದೇಶದಾದ್ಯಂತ ಕ್ರೈಸ್ತ ಸಮುದಾಯ ಅನುಭವಿಸಿದ ನೋವಿನ ಅನುಭವದ ಬಗ್ಗೆಯೂ ಗೊತ್ತಿದೆ. ಬಿಜೆಪಿ ಮತ್ತು ಹಿಂದೂತ್ವ ಶಕ್ತಿಗಳ ಕುಟಿಲೋಪಾಯಗಳನ್ನು ಎದುರಿಸಲು ಬೇಕಾದ್ದೆಲ್ಲವನ್ನೂ ಮಾಡಲು ಕೇರಳದ ಎಡ ಪ್ರಜಾಸತ್ತಾತ್ಮಕ ರಂಗವನ್ನು ನೆಚ್ಚಿಕೊಳ್ಳಬಹುದಾಗಿದೆ.