- ಪೆಟ್ರೋಲ್ 150 ರೂ, ಡೀಸೆಲ್ 140 ರೂ ಗೆ ಜಿಗಿತ ಸಾಧ್ಯತೆ
- ಸಾರ್ವಜನಿಕರಿಗೆ ‘ದರ’ ಏರಿಕೆಯ ಅಚ್ಚೆದಿನ್
ನವದೆಹಲಿ : ಇಂಧನ ಬೆಲೆ ಏರಿಕೆ ಬೆನ್ನಲ್ಲೇ ಮುಂದಿನ ವಾರ ಅಡುಗೆ ಅನಿಲದ ಬೆಲೆ ಹೆಚ್ಚಳವಾಗುವುದು ಬಹುತೇಕ ನಿಶ್ಚಿತವಾಗಿದೆ. ಮನೆ ಬಳಕೆಯ ಸಬ್ಸಿಡಿ ದರದ ಅನಿಲ, ಸಬ್ಸಿಡಿಯೇತರ ಹಾಗೂ ಕೈಗಾರಿಕಾ ಅನಿಲ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೈಲ ಕ್ಷೇತ್ರದಲ್ಲಿ ಉಂಟಾದ ನಷ್ಟದ ಹಿನ್ನೆಲೆಯಲ್ಲಿ ಬೆಲೆ ಹೆಚ್ಚಳಕ್ಕೆ ಯೋಚಿಸಲಾಗುತ್ತಿದೆ. ಅಂದಾಜು 100 ರೂ ಹೆಚ್ಚಳವಾಗುವ ಸಾಧ್ಯತೆ ಇದೆ. ಸರಕಾರ ನೀಡುವ ಅನುಮತಿಯ ಮೇಲೆ ಅವಲಂಬಿತವಾಗಿದೆ ಎಂದು ಹೇಳಲಾಗುತ್ತಿದೆ.
ಐದನೇ ಬಾರಿ ಹೆಚ್ಚಳ : ಸರಕಾರ ಅಡುಗೆ ಅನಿಲ ಬೆಲೆ ಏರಿಕೆಗೆ ಅನುಮತಿಸಿದರೆ ಇದು ಇತ್ತೀಚಿನ ಐದನೇ ಬಾರಿಯ ಏರಿಕೆಯಾಗಲಿದೆ. ಅಕ್ಟೋಬರ್ 6 ರಂದು ಎಲ್‌ಪಿಜಿ ದರವು ಪ್ರತಿ ಸಿಲಿಂಡರ್‌ಗೆ ₹ 15 ರಷ್ಟು ಹೆಚ್ಚಳವಾಗಿತ್ತು. ಇದೂ ಸೇರಿ ಜುಲೈನಿಂದ 14.2 ಕೆಜಿ ಸಿಲಿಂಡರ್‌ಗೆ ₹ 90 ಹೆಚ್ಚಳವಾಗಿದೆ. ಈಗ ಡಬಲ್ ಹೆಚ್ಚಳ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಸ್ತುತ, ದೆಹಲಿ ಮತ್ತು ಮುಂಬೈನಲ್ಲಿ ಪ್ರತಿ ಅಡುಗೆ ಅನಿಲ ಸಿಲಿಂಡರ್ ಬೆಲೆಯು ₹ 899.50 ಮತ್ತು ಕೋಲ್ಕತ್ತಾದಲ್ಲಿ ₹ 926 ಆಗಿದೆ. ಬೆಂಗಳೂರಿನಲ್ಲಿ ₹ 902.50 ಆಗಿದೆ.
ಐತಿಹಾಸಿಕ ಮಟ್ಟಕ್ಕೆ ತೈಲ ದರ : ಕಚ್ಚಾ ತೈಲ ದರದಲ್ಲಿ ಶೇ.30 ಹೆಚ್ಚಳವಾದರೆ ಪೆಟ್ರೋಲ್ ದರ ಲೀಟರ್‌ಗೆ 150 ರೂ.ಗೆ ಹೆಚ್ಚಳವಾಗಲಿದೆ. ಡೀಸೆಲ್ ದರ 140 ರೂ.ಗೆ ಜಿಗಿಯಲಿದೆ. ಈಗಾಗಲೆ ಮಧ್ಯಪ್ರದೇಶದ ಗಡಿ ಜಿಲ್ಲೆಅನುಪ್ಪುರ್‌ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 120 ರೂ.ಗೆ ಹಾಗೂ ಡೀಸೆಲ್ ದರ 110 ರೂ.ಗೆ ಜಿಗಿದಿದೆ. ಇದೇ ರೀತಿ ಬಾಲಾಘಾಟ್‌ನಲ್ಲಿ ಪೆಟ್ರೋಲ್ ದರ 119 ರೂ.ಗೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 111.70 ರೂ.ಗೆ ಜಿಗಿದಿದೆ. ಜಾಗತಿಕ ಮಟ್ಟದಲ್ಲಿ ಪ್ರತಿ ದಿನಕ್ಕೆ 99 ದಶ ಲಕ್ಷ ಬ್ಯಾರೆಲ್ (9.9 ಕೋಟಿ ) ತೈಲಕ್ಕೆ ಬೇಡಿಕೆ ಇದೆ. ಇದು 100 ದಶಲಕ್ಷ ಬ್ಯಾರೆಲ್‌ಗೆ (10 ಕೋಟಿ) ಏರಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ.
ಪರಿಣಾಮಗಳೇನು?
- ತೈಲಕ್ಕಾಗಿ ಆಮದು ಅವಲಂಬಿಸಿರುವುದರಿಂದ ಭಾರತದ ರೀಟೇಲ್ ದರದಲ್ಲೂ ಹೆಚ್ಚಳ
- ದರ ಹೆಚ್ಚಳದ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲಿರುವ ತೈಲ ಕಂಪನಿಗಳು
- ಸಾಗಣೆ ವೆಚ್ಚ, ಕಚ್ಚಾ ವಸ್ತುಗಳ ದರ ಏರಿಕೆಯಿಂದ ಸರಕು-ಸೇವೆಗಳು ದುಬಾರಿ
- ಮಧ್ಯಮ ವರ್ಗದ ಜನತೆ, ಜನ ಸಾಮಾನ್ಯರಿಗೆ ದೈನಂದಿನ ಬದುಕು ದುಸ್ತರ
- ಪೆಟ್ರೋಲ್- ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಒತ್ತಡ ಹೆಚ್ಚಬಹುದು
- ಎಲೆಕ್ಟ್ರಿಕ್ ವಾಹನಗಳ ಮರಾಟ ವೃದ್ಧಿ, ಪರ್ಯಾಯ ಇಂಧನಕ್ಕೆ ಬೇಡಿಕೆ ಹೆಚ್ಚಳ ಸಾಧ್ಯತೆ
ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆಗುತ್ತಿದೆ. ಇದರೊಂದಿಗೆ ಅಡುಗೆ ಅನಿಲ ದರ ಕೂಡ ಹೆಚ್ಚಳವಾಗುವುದರಿಂದ ಜನರಿಗೆ ಇನ್ನಷ್ಟು ಸಂಕಷ್ಟಗಳು ಎದುರಾಗಲಿವೆ. 7 ವರ್ಷಗಳಲ್ಲಿ ದರ ಏರಿಕೆಯ ಅಚ್ಚೆದಿನ್ ನೋಡಿದೆವು. ಇಂತಹ ಅಚ್ಚೆದಿನ್ ಕೊಡುತ್ತಾರೆ ಎಂದಿದ್ದರೆ ಬಿಜೆಪಿಗೆ ಮತ ಹಾಕುತ್ತಿರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.