ಬೆಂಗಳೂರು: ಇಲ್ಲಿನ ಕೋರಮಂಗಲದಲ್ಲಿ ಕಟ್ಟಡವೊಂದರ ಸಿಲಿಂಡರ್ ಸ್ಫೋಟಗೊಂಡು ಧಗಧಗೆನೇ ಹೊತ್ತಿ ಉರಿದಿದೆ. ನೆಕ್ಸಾ ಶೋ ರೂಂ ಕಟ್ಟಡದ ಮೇಲ್ಭಾಗದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಕೋರಮಂಗಲ
ಕೋರಮಂಗಲದ ನೆಕ್ಸಾ ಶೋ ರೂಂ ಕಟ್ಟಡದ ಮೇಲಿರುವ ಮಡ್ ಪೈಪ್ ಕೆಫೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಸಿಬ್ಬಂದಿ ಅಡುಗೆ ಮಾಡುವ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಅಡುಗೆ ಕೋಣೆಯಲ್ಲಿ ಸಿಲಿಂಡ್ ಸ್ಫೋಟವಾಗಿ ಬಳಿಕ ಕೆಫೆಯಲ್ಲಿದ್ದ ಕುಷನ್ ಫರ್ನಿಚರ್‌ಗೂ ಬೆಂಕಿ ಆವರಿಸಿದೆ.
ಇದನ್ನೂ ಓದಿ:ಆನೇಕಲ್ |ಪಟಾಕಿ ಮಳಿಗೆಯಲ್ಲಿ ಬೆಂಕಿ ಅವಘಡ :10 ಮಂದಿ ಕಾರ್ಮಿಕರ ಸಜೀವ ದಹನ
ಬೆಂಕಿಯ ಕೆನ್ನಾಲಿಯಿಂದ ತಪ್ಪಿಸಿಕೊಳ್ಳಲು ವ್ಯಕ್ತಿಯೊಬ್ಬ ಮಹಡಿ ಮೇಲಿಂದ ಜಿಗಿದಿದ್ದಾನೆ:
ನೋಡನೋಡುತ್ತಿದ್ದಂತೆ ಇಡೀ ನಾಲ್ಕನೇ ಮಹಡಿಯಲ್ಲಿದ್ದ ಕೆಫೆ ಸುಟ್ಟು ಕರಕಲಾಗಿದೆ. ಇತ್ತ ಕೆಫೆಯಲ್ಲಿದ್ದ ಸಿಬ್ಬಂದಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ನಾಲ್ಕನೇ ಮಹಡಿಯಿಂದ ಒಮ್ಮೆಲೆ ಜಿಗಿದಿದ್ದಾನೆ.
ಮಹಡಿಯಿಂದ ಜಿಗಿದ ವ್ಯಕ್ತಿಯನ್ನು ನೇಪಾಳ ಮೂಲದ ಪ್ರೇಮ್ ಸಿಂಗ್ (28) ಎಂದು ತಿಳಿದು ಬಂದಿದೆ. ಕೆಫೆಯಲ್ಲಿ ಪ್ರೇಮ್ ಶೆಫ್ ಆಗಿ ಕೆಲಸ ಮಾಡುತ್ತಿದ್ದರು. ಸದ್ಯ ಸಿಲಿಂಡರ್ ಸ್ಫೋಟದಿಂದ ತಪ್ಪಿಸಿಕೊಳ್ಳಲು ಹೋಗಿ ಕಟ್ಟಡದಿಂದ ಜಿಗಿದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ತಿಲಕ್ ನಗರದ ಕೆ.ಜಿ. ಆಸ್ಪತ್ರೆಗೆ ಪ್ರೇಮ್‌ನನ್ನು ದಾಖಲು ಮಾಡಲಾಗಿದೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಅಪೋಲೋ ಆಸ್ಪತ್ರೆಗೆ ರವಾನೆ ಮಾಡಲಾಗುತ್ತದೆ.
ಇತ್ತ ಯಾವುದೋ ಬಾಂಬ್‌ನಂತೆ ಸ್ಫೋಟ ಕೇಳಿ ಬಂದಿದ್ದರಿಂದ ಕೆಳಗಿದ್ದವರು ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ. ದಟ್ಟವಾದ ಹೊಗೆಯಿಂದ ನೆರೆಹೊರೆ ಕಟ್ಟಡದಲ್ಲಿನ ಜನರು ಹೊರ ಬಂದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ಟಿಯಾಗಿದ್ದಾರೆ. ಅವಘಡದಲ್ಲಿ ಕಟ್ಟಡದ ಕೆಳಗೆ ನಿಲ್ಲಿಸಿದ್ದ ಒಂದು ಕಾರು ಹಾಗೂ ನಾಲ್ಕೈದು ಬೈಕ್‌ಗಳು ಸುಟ್ಟು ಕರಕಲಾಗಿವೆ.
ಇದನ್ನೂ ಓದಿ:ಬೆಂಗಳೂರಲ್ಲಿ ಮತ್ತೊಂದು ಅಗ್ನಿ ಅವಘಡ : ಎರಡು ಫ್ಲ್ಯಾಟ್ಗಳಿಗೆ ಆವರಿಸಿದ ಬೆಂಕಿ
ಈ ಸಂಬಂಧ ಎಡಿಜಿಪಿ ಹರಿಶೇಖರನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಸುಮಾರಿಗೆ ಈ ಅವಘಡ ನಡೆದಿದೆ. ಫೈರ್ ಕಂಟ್ರೋಲ್ ರೂಂಗೆ ಕರೆ ಬಂದಾಗ, ಎಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಬಂದು ಕಾರ್ಯಾಚರಣೆ ಆರಂಭಿಸಿದರು.
ಮೂರನೇ ಮಹಡಿಯಲ್ಲಿ ರೆಸ್ಟೋರೆಂಟ್ ಇತ್ತು, ಅದರ ಒಂದು ಭಾಗದಲ್ಲಿ ಅಡುಗೆ ಮನೆ ಇದೆ. ಆ ಜಾಗದಲ್ಲಿ ಸುಮಾರು ಹದಿನೈದು ಸಿಲಿಂಡರ್‌ಗಳನ್ನು ಶೇಖರಿಸಿಟ್ಟಿದ್ದರು. ಅದರಲ್ಲಿ ಒಂದು ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಸ್ಫೋಟಗೊಂಡಿದೆ. ಆ ವೇಳೆ ಅಲ್ಲಿದ್ದ ಸಿಬ್ಬಂದಿ ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಹಾರಿದ್ದಾನೆ. ಗಾಯಾಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯಲ್ಲಿ ಒಂದು ಕಾರು, ನಾಲ್ಕು ಬೈಕ್ ಸುಟ್ಟು ಹೋಗಿವೆ. ಸದ್ಯ ರೆಸ್ಟೋರೆಂಟ್ ಮಾಲೀಕರು ನಾಪತ್ತೆಯಾಗಿದ್ದಾರೆ. ಲೈಸೆನ್ಸ್ ಪಡೆದುಕೊಂಡಿದ್ದಾರೋ, ಇಲ್ಲವೋ ಎಂದು ಪರಿಶೀಲನೆ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಕೆಫೆಯಲ್ಲಿ ಸುಮಾರು 15 ಮಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.