ಬೆಂಗಳೂರು : ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ತೌಕ್ಟೆಚಂಡಮಾರುತ, ಶನಿವಾರ ಇನ್ನಷ್ಟುಗಂಭೀರ ಸ್ವರೂಪ ಪಡೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಕರ್ನಾಟಕ ಸೇರಿದಂತೆ 5 ರಾಜ್ಯಗಳಲ್ಲಿ ಮುಂದಿನ ಕೆಲ ದಿನಗಳ ಕಾಲ ಸಾಮಾನ್ಯದಿಂದ ಭಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಈ ವೇಳೆ ಗಂಟೆಗೆ 150-175 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ಕರಾವಳಿ ಪ್ರದೇಶಗಳಲ್ಲಿ ಎಚ್ಚರದಿಂದ ಇರುವಂತೆ ಹವಾಮಾನ ಇಲಾಖೆ ಹೇಳಿದೆ.
ಲಕ್ಷದ್ವೀಪ ಬಳಿ ಉಂಟಾಗಿದ್ದ ವಾಯುಭಾರ ಕುಸಿತ ಶುಕ್ರವಾರ ಮತ್ತಷ್ಟುತೀವ್ರಗೊಂಡಿದೆ. ಹೀಗಾಗಿ ತೌಕ್ಟೆಚಂಡಮಾರುತ ಶನಿವಾರದ ವೇಳೆಗೆ ಗಂಭೀರ ಚಂಡಮಾರುತದ ಸ್ವರೂಪ ಪಡೆದುಕೊಂಡು, ಕರಾವಳಿ ರಾಜ್ಯಗಳಲ್ಲಿ ಭಾರೀ ಮಳೆಗೆ ಕಾರಣವಾಗಲಿದೆ. ಶನಿವಾರದಿಂದಲೇ ಲಕ್ಷದ್ವೀಪ, ಕೇರಳ, ತಮಿಳುನಾಡು, ಕರ್ನಾಟಕದ ಕರಾವಳಿ ತೀರದಲ್ಲಿ ಸಾಮಾನ್ಯದಿಂದ ಭಾರೀ ಮಳೆ ಸುರಿಯಲಿದೆ. ಈ ಪೈಕಿ ಕರ್ನಾಟಕದ ಕರಾವಳಿ ಮತ್ತು ಅದಕ್ಕೆ ಹೊಂದಿಕೊಂಡ ಘಟ್ಟಪ್ರದೇಶಗಳ ಕೆಲವೆಡೆ ಮೇ 15 ಮತ್ತು 16ರಂದು ಸಾಮಾನ್ಯ ಮಳೆ ಸುರಿಯಲಿದ್ದರೆ, ಕೆಲ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮೇ 17ರಂದು ಚಂಡಮಾರುತವು ಗುಜರಾತ್‌ನ ಸೌರಾಷ್ಟ್ರ ಜಿಲ್ಲೆಯ ಮೇಲೆ ಅಪ್ಪಳಿಸಲಿದೆ. ಹೀಗಾಗಿ ಮೇ 16ರಿಂದಲೇ ಅಲ್ಲಿ ಕೆಲ ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕೇರಳ, ತಮಿಳುನಾಡು, ಕರ್ನಾಟಕ, ಗೋವಾ, ಗುಜರಾತ್ ರಾಜ್ಯಗಳಲ್ಲಿ ಈ ಚಂಡಮಾರುತ ಆತಂಕವನ್ನು ಸೃಷ್ಟಿಸಿದೆ.
ಎನ್‌ಡಿಆರ್‌ಎಫ್ ನಿಯೋಜನೆ: ಈ ನಡುವೆ ಚಂಡಮಾರುತದಿಂದ ಎದುರಾಗಬಹುದಾದ ಯಾವುದೇ ಪರಿಸ್ಥಿತಿ ಎದುರಿಸಲು 5 ರಾಜ್ಯಗಳಲ್ಲಿ ಎನ್‌ಡಿಆರ್‌ಎಫ್‌ನ 53 ತುಕಡಿಗಳನ್ನು ನಿಯೋಜಿಸಲಾಗಿದೆ. ಈ ತಂಡಗಳನ್ನು ಕೇರಳ, ಕರ್ನಾಟಕ, ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರದ ಕರಾವಳಿ ಪ್ರದೇಶಗಳಲ್ಲಿ ನಿಯೋಜಿಸಲಾಗುತ್ತಿದೆ ಎಂದು ಎನ್‌ಡಿಆರ್‌ಎಫ್ ಪ್ರಧಾನ ನಿರ್ದೇಶಕ ಎಸ್.ಎನ್. ಪ್ರಧಾನ್ ಟ್ವೀಟ್ ಮಾಡಿದ್ದಾರೆ. ಈ 53 ತಂಡಗಳ ಪೈಕಿ 24 ತಂಡಗಳನ್ನು ಈಗಾಗಲೇ ನಿಯೋಜಿಸಲಾಗಿದೆ. ಉಳಿದ ತಂಡಗಳು ಸಜ್ಜಾಗಿದ್ದು, ಅಗತ್ಯ ಬಂದಾಗ ಬಳಸಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಪ್ರತಿ ಎನ್‌ಡಿಆರ್‌ಎಫ್ ತಂಡವು 40 ಸಿಬ್ಬಂದಿಯನ್ನು ಹೊಂದಿರುತ್ತದೆ. ಅವರ ಬಳಿ ಮರ, ಕಂಬ ಕತ್ತರಿಸುವ ಸಾಧನಗಳು ಇರುತ್ತವೆ. ದೋಣಿ, ಮೂಲ ವೈದ್ಯಕೀಯ ಸಾಮಗ್ರಿ ಸೇರಿದಂತೆ ಇತರ ಪರಿಹಾರ ಸಾಧನಗಳು ಈ ತಂಡಗಳಲ್ಲಿ ಇರುತ್ತವೆ. ಅರಬ್ಬಿ ಸಮುದ್ರದಲ್ಲಿ ಲಕ್ಷದೀಪದ ಸಮೀಪ ಒತ್ತಡ ಸೃಷ್ಟಿಯಾಗಿದ್ದು, ದೇಶದ ಕರಾವಳಿ ತೀರದ ರಾಜ್ಯಗಳು ಎಚ್ಚರದಿಂದ ಇರಬೇಕು ಎಂದು ಭಾರತೀಯ ಹವಾಮಾನ ಇಲಾಖೆಯ ಸೂಚಿಸಿದೆ.
ಇದನ್ನು ಓದಿ: ಆಮ್ಲಜನಕ ಪೂರೈಸಬೇಕೆಂದು ಪ್ರಧಾನಿಗೆ ಪತ್ರ ಬರೆದ ಕೇರಳ ಸಿಎಂ
ಏನಿದು ತೌಕ್ತೆ ಚಂಡಮಾರುತ : ತೌಕ್ತೆ ( Tauktae) ಇದೊಂದು ಈಗ ತಾನೇ ಮಧ್ಯ ಅರಬಿ ಸಮುದ್ರದಲ್ಲಿ ಸೃಷ್ಟಿಯಾ ಗುತ್ತಿರುವ ಚಂಡ ಮಾರುತದ ಹೆಸರು. ಶನಿವಾರ ಮತ್ತು ರವಿವಾರ ಭಾರತದ ಪಶ್ಚಿಮ ಕರಾವಳಿಗೆ ರಭಸದ ಗಾಳಿಯೊಂದಿಗೆ ಮಳೆ ತರುವ ಚಂಡ ಮಾರುತವಿದು. ಈ ಚಂಡ ಮಾರುತದ ಹೆಸರು ತೌಕ್ತೆ.
ಅರೆ, ಇದೇನಿದು ವಿಚಿತ್ರ ಹೆಸರು,ಚಂಡ ಮಾರುತಕ್ಕೆ. ಮ್ಯಾನ್ಮಾರ್ ಚಂಡ ಮಾರುತಕ್ಕೆ ಈ ಹೆಸರನ್ನು ಸೂಚಿಸಿದೆ. ತೌಕ್ತೆ ಎಂದರೆ ಒಂದು ಜಾತಿಯ ಹಲ್ಲಿ. ಅರಬ್ಬಿ ಸಮುದ್ರ ಹಾಗೂ ಬಂಗಾಲ ಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತ ಗಳಿಗೆ ಇವುಗಳ ಸುತ್ತ ಇರುವ 13 ರಾಷ್ಟ್ರಗಳು ನಾಮ ಕರಣ ಮಾಡುತ್ತವೆ.
ಈ ಹೆಸರುಗಳನ್ನು ಮೊದಲೇ ಸೂಚಿಸಲಾಗುತ್ತವೆ. ಕಳೆದ ವರ್ಷ ಪ್ರತೀ ರಾಷ್ಟ್ರ 13 ಹೆಸರುಗಳ ಪಟ್ಟಿ ಕೊಟ್ಟ ಆಧಾರ ದಲ್ಲಿ 169 ಹೊಸ ಹೆಸರುಗಳ ಪಟ್ಟಿಯನ್ನು ಇಂಡಿ ಯನ್ ಮೆಟ್ರೋಲಾಜಿಕಲ್ ವಿಭಾಗ ಬಿಡುಗಡೆ ಮಾಡಿದೆ.
ಈ ಹೊಸ ಪಟ್ಟಿಯಲ್ಲಿ ಕ್ರಮವಾಗಿ ಬಾಂಗ್ಲಾದೇಶ, ಭಾರತ, ಇರಾನ್, ಮಾಲ್ಡೀವ್ಸ್, ಮ್ಯಾನ್ಮಾರ್, ಒಮಾನ್, ಪಾಕಿಸ್ಥಾನ, ಕತಾರ್, ಸೌದಿ, ಶ್ರೀಲಂಕಾ, ಥಾಯ್ಲೆಂಡ್, ಯುಎಇ ಮತ್ತು ಯೆಮೆನ್ ಹೀಗೆ 13 ರಾಷ್ಟ್ರಗಳ ಹೆಸರು ಕ್ರಮವಾಗಿ ಬರುತ್ತವೆ. ತೌಕ್ತೆ ಮ್ಯಾನ್ಮಾರ್ ದೇಶ ಕೊಟ್ಟ ಹೆಸರು.
ಮುಂದೆ ಬರುವ ಚಂಡ ಮಾರುತದ ಹೆಸರು ಯಾಸ್, ಅದು ಒಮಾನ್ ದೇಶದವರು ಸೂಚಿಸಿರುವುದು. ಈ ತೌಕ್ತೆ ಚಂಡಮಾರುತ ಈಗ ತಾನೆ ಮಧ್ಯ ಅರಬಿ ಸಮುದ್ರದಲ್ಲಿ, ಭಾರತದ ನೈಋತ್ಯದಲ್ಲಿ ಹುಟ್ಟಿ ಪೂರ್ವದ ಕಡೆಗೆ ಅಂದರೆ ನಮ್ಮ ಪಶ್ಚಿಮದ ಕರಾವಳಿ ಕಡೆಗೆ ಬರುತ್ತಿದೆ. ಹವಾಮಾನ ವಿಶ್ಲೇಷಕರ ಪ್ರಕಾರ ಮೇ 15 ಹಾಗೂ 16ರಂದು ಪಶ್ಚಿಮದಿಂದ ಉತ್ತರಕ್ಕೆ ಹೊರಟು ಗುಜರಾತ್‌ನ ದಕ್ಷಿಣ ತೀರಕ್ಕೆ 17ರಂದು ತಲುಪಲಿದೆ.
ಇದನ್ನು ಓದಿ: ಆರೋಗ್ಯ ಬಿಕ್ಕಟ್ಟಿನ ನಡುವೆ ಲಸಿಕೆ ಬೆಲೆಯಲ್ಲೂ ಹಗರಣ!
ಚಂಡಮಾರುತ ಎಂದರೆ ಸಮುದ್ರದಲ್ಲಿ ಒಂದು ಕಡೆ ನಿಮ್ನ ಒತ್ತಡ ಸೃಷ್ಟಿಯಾಗಿ ಸುತ್ತಲಿಂದಲೂ ಅಲ್ಲಿಗೆ ಗಾಳಿ ನುಗ್ಗುವುದು. ಅವು ನೇರ ನುಗ್ಗದೆ ಸುರುಳಿ ಆಕಾರದಲ್ಲಿ ಸುತ್ತುತ್ತ ಮೋಡಗಳನ್ನು ಎತ್ತಿ ಕೊಂಡು ಕೆಲವೇ ಗಂಟೆಗಳಲ್ಲಿ ಅತೀ ಪ್ರಬಲ ಶಕ್ತಿ ಪಡೆ ಯುತ್ತವೆ. ಧಾರಾಕಾರ ಮಳೆ, ಬಿರುಗಾಳಿ ಯೊಂದಿಗೆ ಸಮುದ್ರದ ತೀರಕ್ಕೆ ಅಪ್ಪಳಿಸಿ ಬೀಸಿ ಕೆಲವೇ ಗಂಟೆ ಗಳಲ್ಲಿ ಅನೇಕ ಅವಾಂತರಗಳನ್ನು ಉಂಟು ಮಾಡುತ್ತದೆ. ಭಾರತದ ಪೂರ್ವ ಕರಾವಳಿಯಲ್ಲಿ, ಬಂಗಾಲ ಕೊಲ್ಲಿಯಲ್ಲಿ ಹುಟ್ಟುವ ಚಂಡಮಾರುತ ಪ್ರತೀ ವರ್ಷವಿರುತ್ತದೆ. ಅದು ಅಪರೂಪವೇನಲ್ಲ. ಅದರ ಪಾರ್ಶ್ವ ಪರಿಣಾಮಗಳನ್ನು ಮಾತ್ರವೇ ನಾವು ಇದುವರೆಗೆ ಎದುರಿಸಿರುವುದು. ಆದರೆ ಪಶ್ಚಿಮ ಕರಾವಳಿಯಲ್ಲಿರುವ ನಮಗೆ ಚಂಡಮಾರುತ ಅತೀ ಅಪರೂಪ. ಬಹುಶಃ ಸಮುದ್ರ ತೀರಕ್ಕೆ ಗೋಡೆಯಂತಿರುವ ಸಸ್ಯ ಶ್ಯಾಮಲೆ ಯಾಗಿದ್ದ ಪಶ್ಚಿಮಘಟ್ಟವೇ ಇದಕ್ಕೆ ಕಾರಣವಿದ್ದಿರಬೇಕು.
ಈಗ ಕಾಡು ಬೋಳಾಗಿರುವುದ ರಿಂದ ಭೂಮಿಯ ಉಷ್ಣತೆ ಸುಮಾರು 1.5 ಡಿಗ್ರಿ ಏರಿರುವುದ ರಿಂದ ಅರಬಿ ಸಮುದ್ರದಲ್ಲೂ ಚಂಡಮಾರುತ ಭಾರತದ ಪೂರ್ವ ಕರಾವಳಿಯಲ್ಲಿ ಪ್ರತೀ ವರ್ಷ ಬರುವಂತೆ ಮಾಮೂಲಾಗಿ ಬರುತ್ತಿದೆ. ಪ್ರಕೃತಿ ಮುನಿ ದರೆ ಹೀಗೆಯೇ. ಅನುಭವಿಸಬೇಕಷ್ಟೆ ಎನ್ನುತ್ತಾರೆ ತಜ್ಙರು.