ನವದೆಹಲಿ: ಭಾರತಕ್ಕೆ ಅಪ್ಪಳಿಸಿರುವ ಗುಲಾಬ್ ಚಂಡಮಾರುತದ ಅಟ್ಟಹಾಸ ಕೊಂಚ ಕಡಿಮೆಯಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ಗುಲಾಬ್ ಚಂಡಮಾರುತ ಆಂಧ್ರಪ್ರದೇಶ, ಗುಜರಾತ್, ಒರಿಸ್ಸಾದಲ್ಲಿ ಭಾರೀ ಹಾನಿ ಮಾಡಿತ್ತು. ಈ ಚಂಡಮಾರುತದ ಪರಿಣಾಮದಿಂದ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗಿತ್ತು. ಇದೀಗ ಈ ಗುಲಾಬ್ ಚಂಡಮಾರುತ ದುರ್ಬಲವಾಗಿದ್ದು, ಮಳೆಯೂ ಕಡಿಮೆಯಾಗುತ್ತಿದೆ.
ಭಾನುವಾರ ಅಪ್ಪಳಿಸಿದ ಗುಲಾಬ್ ಚಂಡಮಾರುತದ ಪರಿಣಾಮವಾಗಿ ಕೆಲವೆಡೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಅವಘಡದಿಂದ ಸಾವಿಗೀಡಾದವರ ಸಂಖ್ಯೆ 3ಕ್ಕೆ ಏರಿದೆ. ಗುಲಾಬ್ ಚಂಡಮಾರುತ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ಕೆಲವೇ ಕ್ಷಣಗಳ ಮುಂಚಿತವಾಗಿ ಶ್ರೀಕಾಕುಳಂ ಜಿಲ್ಲೆಯ 6 ಮಂದಿ ಮೀನುಗಾರರು ಬಂಗಾಳಕೊಲ್ಲಿಯಲ್ಲಿ ನಾಪತ್ತೆಯಾಗಿದ್ದಾರೆ. ಅವರ ಶೋಧ ಕಾರ್ಯ ಮುಂದುವರೆದಿದೆ.
ಒಡಿಶಾ ಸರ್ಕಾರವು ಈಗಾಗಲೇ ಚಂಡಮಾರುತ ತಡೆಯುವ ಮತ್ತು ಎದುರಿಸಲು ಹಲವು ಸಿದ್ಧತೆಗಳನ್ನು ಮಾಡಿಕೊಂಡಿದೆ. ಆದರೆ, ಈ ಚಂಡಮಾರುತದಿಂದ ರಾಜ್ಯದಲ್ಲಿ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ಸರ್ಕಾರ ಹೇಳಿದೆ.
ಗುಲಾಬ್ ಚಂಡಮಾರುತ ಅರಬ್ಬಿ ಸಮುದ್ರದತ್ತ ತೆರಳಿದ್ದು, ಅಲ್ಲಿ ಶಾಹೀನ್ ಚಂಡಮಾರುತದ ರೂಪ ತಳೆದು ಮತ್ತೆ ಅಪ್ಪಳಿಸುವ ಸಾಧ್ಯತೆಯಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹವಾಮಾನ ಇಲಾಖೆ, ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಹಾಗೂ ಗುಜರಾತ್ ಕರಾವಳಿ ಪ್ರದೇಶದ ಸುತ್ತಮುತ್ತಲಿನ ಭಾಗಗಳಲ್ಲಿ ಸೆ. 30ರ ವೇಳೆಗೆ ಶಾಹೀನ್ ಚಂಡಮಾರುತ ಅಬ್ಬರಿಸುವ ಸಾಧ್ಯತೆ ಹೆಚ್ಚಾಗಿದೆ ಎಂದಿದೆ.
ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಗುಲಾಬ್ ಚಂಡಮಾರುತವು ಭಾನುವಾರ ಒಡಿಶಾ ರಾಜ್ಯವನ್ನು ಪ್ರವೇಶಿಸಿತು. ಸುಮಾರು 46,000ಕ್ಕೂ ಹೆಚ್ಚು ಜನರು ಸಿಲುಕಿಕೊಂಡಿದ್ದು ಅವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಮಹಾರಾಷ್ಟ್ರದ 36 ಜಿಲ್ಲೆಗಳಲ್ಲಿ ಮಳೆಯ ಪ್ರಮಾಣವು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮುನ್ಸೂಚನೆಯಂತೆ ಮುಂಬೈ ಮತ್ತು ನೆರೆಯ ಜಿಲ್ಲೆಗಳಾದ ಥಾಣೆ, ಪಾಲ್ಘರ್ ಸೇರಿದಂತೆ 17 ಜಿಲ್ಲೆಗಳಲ್ಲಿ ದಟ್ಟಪ್ರದೇಶಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ.
ನೆನ್ನೆ ರಾಯಘಡ, ರತ್ನಗಿರಿ, ಪುಣೆ, ಸಾತಾರ, ನಾಸಿಕ್, ಪರಭಿನ್, ಲಾತೂರ್, ಹಿಂಗೋಲಿ, ನಾಂದೇಡ್ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಚೆನ್ನೈ ಸಮಿಪದಲ್ಲಿ ಐಎನ್‌ಎಸ್ ನೌಕಾ ಪಡೆಗಳನ್ನು ಸಜ್ಜುಗೊಳಿಸಲಾಗಿದೆ. ಅಲ್ಲದೆ, ತುರ್ತು ಸಂದರ್ಭವನ್ನು ಎದುರಿಸಲು ಮತ್ತು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲು ಅನುಕೂಲವಾಗುವಂತೆ ಹೆಲಿಕಾಪ್ಟರ್‌ಗಳನ್ನು ಸಹ ಸಜ್ಜುಗೊಳಿಸಲಾಗಿದೆ. ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನೌಕಾಪಡೆ ತಿಳಿಸಿದೆ.
ಚಂಡಮಾರುತದಿಂದ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ಇಬ್ಬರು ಮೀನುಗಾರರು ಮೃತಪಟ್ಟಿದ್ದಾರೆ. ಚಂಡಮಾರುತವು ಕಳಿಂಗಪಟ್ಟಣಂ ಮತ್ತು ಗೋಪಾಲಪುರ ನಡುವೆ ಉತ್ತರ ಆಂಧ್ರ ಮತ್ತು ದಕ್ಷಿಣ ಒಡಿಶಾ ದಾಟಲಿದ್ದು ಕಳಿಂಗಪಟ್ಟಣಂನಲ್ಲಿ ಹೆಚ್ಚು ಗಾಳಿ ಬೀಸಿದೆ. ಅಲ್ಲದೆ ಮುಂದಿನ 12 ಗಂಟೆಗಳ ಕಾಲ ಬಂಗಾಳ ಕೊಲ್ಲಿಯ ಪಶ್ಚಿಮ ಕೇಂದ್ರ ಮತ್ತು ವಾಯುವ್ಯ ಭಾಗಗಳಲ್ಲಿ ಸಮುದ್ರಕ್ಕೆ ಇಳಿಯದಂತೆ ಆಂಧ್ರಪ್ರದೇಶ ಮತ್ತು ಒಡಿಶಾದ ಮೀನುಗಾರರಿಗೆ ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
ನಾಳೆಯಿಂದ ಈ ಗುಲಾಬ್ ಚಂಡಮಾರುತವು ಸಂಪೂರ್ಣ ಕಡಿಮೆಯಾಗಲಿದ್ದು, ಸೆಪ್ಟೆಂಬರ್ 30ರ ವೇಳೆಗೆ ಇದೇ ಅರಬ್ಬಿ ಸಮುದ್ರದಲ್ಲಿ ಶಾಹೀನ್ ಚಂಡಮಾರುತವಾಗಿ ರೂಪ ತಳೆಯಲಿದೆ.
ವರದಿ: ಸಾಗರ ಕೂಡಗಿ