ಮೈಸೂರು : ಖಾಸಗಿ ಆಸ್ಪತ್ರೆಯೊಂದರ ಸರ್ವರ್ ಅನ್ನು ಹ್ಯಾಕ್ ಮಾಡಿದ ಹ್ಯಾಕರ್ ಗಳು ಬಿಟ್ ಕಾಯಿನ್ ಗಾಗಿ ಬೇಡಿಕೆ ಇಟ್ಟಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೊರೊನಾ ಮೂರನೇ ಅಲೆಯ ಆತಂಕದ ನಡುವೆ ನಗರದಲ್ಲಿ ಖಾಸಗಿ ಆಸ್ಪತ್ರೆಯ ಮೇಲೆ ಸೈಬರ್ ಕಳ್ಳರು ದಾಳಿ ನಡೆಸಿದ್ದು, ಆಸ್ಪತ್ರೆಯ ದತ್ತಾಂಶವನ್ನು ಹ್ಯಾಕ್ ಮಾಡಿ ಬಿಟ್ ಕಾಯಿನ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.
ಜಗತ್ತಿನಾದ್ಯಂತ ಆಸ್ಪತ್ರೆಗಳ ಮೇಲೆ ಸೈಬರ್ ದಾಳಿಯ (ರಾನ್ ಸಮ್ ವೇರ್) ಬೆದರಿಕೆ ಹೆಚ್ಚುತ್ತಿರುವ ಈ ಸಮಯದಲ್ಲೇ ಮೈಸೂರಿನ ಖಾಸಗಿ ಆಸ್ಪತ್ರೆ ಮೇಲೆ ಸೈಬರ್ (ರಾನ್ ಸಮ್ ವೇರ್) ದಾಳಿ ನಡೆದಿದೆ. ಸೈಬರ್ ಅಪರಾಧಿಗಳು ಆಸ್ಪತ್ರೆಯ ಮುಖ್ಯ ಹಣಕಾಸು ಸರ್ವರ್ ಅನ್ನು ಹ್ಯಾಕ್ ಮಾಡಿ ಹಣಕಾಸಿನ ಡೇಟಾ ಮತ್ತು ರೋಗಿಗಳ ಡೇಟಾವನ್ನು ಹ್ಯಾಕ್ ಮಾಡಿದ್ದಾರೆ. ಡೇಟಾವನ್ನು ಎನ್‌ಕ್ರಿಪ್ಟ್ ಮಾಡುವ ಮೂಲಕ ಸಿಸ್ಟಮ್‌ಗೆ ಪ್ರವೇಶವನ್ನು ನಿರ್ಬಂಧಿಸಿರುವ ಸೈಬರ್ ಕ್ರಿಮಿನಲ್‌ಗಳು ಡೇಟಾವನ್ನು ಬಿಡುಗಡೆ ಮಾಡಲು ಆಸ್ಪತ್ರೆಯಿಂದ ಬಿಟ್‌ಕಾಯಿನ್ ರೂಪದಲ್ಲಿ ಸುಲಿಗೆಗೆ ಒತ್ತಾಯಿಸಿದ್ದಾರೆ. ಆಸ್ಪತ್ರೆಯ ಮಾಲೀಕರು ನೀಡಿದ ದೂರಿನ ಮೇರೆಗೆ ನಗರದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಮಾಹಿತಿ ಪಡೆದಿರುವ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : ಬಿರುಗಾಳಿ ಎಬ್ಬಿಸಿದ ಬಿಟ್ ಕಾಯಿನ್ ಹಗರಣ, ಸಿಎಂ ಮೇಲೆ ತೂಗುಕತ್ತಿ
ಏತನ್ಮಧ್ಯೆ, ಖಾಸಗಿ ಆಸ್ಪತ್ರೆಯ ಆಡಳಿತವು ತಮ್ಮ ಆಸ್ಪತ್ರೆಯಲ್ಲಿ ransomware ದಾಳಿ ವರದಿಯಾಗಿದೆ ಎಂದು ದೃಢಪಡಿಸಿದೆ. ಆದರೆ ರೋಗಿಗಳ ಡೇಟಾ ಸೋರಿಕೆಯಾಗಿದೆ ಎಂಬ ಅಂಶವನ್ನು ನಿರಾಕರಿಸಿದೆ. ‘ಕೆಲ ದಿನಗಳ ಹಿಂದೆ ಆಸ್ಪತ್ರೆಯ ಕಂಪ್ಯುಟರ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇದು ತಾಂತ್ರಿಕ ದೋಷ ಇರಬಹುದು ಅಂದುಕೊಂಡು ಆಸ್ಪತ್ರೆಯ ಸಿಬ್ಬಂದಿ ಸುಮ್ಮನಿದ್ದರು. ಸ್ವಲ್ಪ ಹೊತ್ತಿನ ಬಳಿಕ ಹ್ಯಾಕರ್‌ಗಳು ಮೆಸೇಜ್ ಕಳುಹಿಸಿದ್ದಾರೆ. ನಿಮ್ಮ ಆಸ್ಪತ್ರೆಯ ದತ್ತಾಂಶಗಳನ್ನು ಹ್ಯಾಕ್ ಮಾಡಲಾಗಿದ್ದು, ಹಣವನ್ನು ಬಿಟ್ ಕಾಯಿನ್ ರೂಪದಲ್ಲಿ ನೀಡಿದ ನಂತರವಷ್ಟೇ ದತ್ತಾಂಶವನ್ನು ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು. ಆದರೆ, ಈ ಎಲ್ಲ ದತ್ತಾಂಶ ಹಾರ್ಡ್ ಡಿಸ್ಕ್‌ನಲ್ಲೂ ಸೇವ್ ಆಗಿರುವ ಹಿನ್ನೆಲೆಯಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿಗಳು ಹೇಳಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರು, ತನಿಖೆಗೆ ಇನ್ಸ್‌ಪೆಕ್ಟರ್ ಶೇಖರ್ ನೇತೃತ್ವದಲ್ಲಿ ತಂಡ ರಚಿಸಿದ್ದಾರೆ. ದೇಶದ ಆಸ್ಪತ್ರೆಗಳ ದತ್ತಾಂಶಗಳನ್ನು ಅಳಿಸಿ ಹಾಕಲು ಸೈಬರ್ ಹ್ಯಾಕರ್‌ಗಳು ಯತ್ನಿಸುತ್ತಿರುವ ಸಾಧ್ಯತೆ ಇದ್ದು, ಈ ಬಗ್ಗೆ ಎಚ್ಚರ ವಹಿಸುವಂತೆ ‘ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾ’ ವರ್ಷದ ಹಿಂದೆಯೇ ಎಚ್ಚರಿಕೆ ನೀಡಿತ್ತು. ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿಯೇ ಅಮೆರಿಕ ಸೇರಿದಂತೆ ಕೆಲ ರಾಷ್ಟ್ರಗಳ ಆಸ್ಪತ್ರೆಗಳು ಸೈಬರ್ ದಾಳಿಯ ಭೀತಿಯನ್ನು ಎದುರಿಸಿದ್ದವು.