ಬೆಂಗಳೂರು: ಕಾರ್ಮಿಕ ಬೇಡಿಕೆಗಳಿಗಾಗಿ ನಿರ್ಮಾಣ ವಲಯದ ಕಾರ್ಮಿಕರ ಎರಡು ದಿನಗಳ ರಾಷ್ಟ್ರೀಯ ಮುಷ್ಕರವನ್ನು ಡಿಸೆಂಬರ್ 2 ಮತ್ತು 3 ರಂದು ನಡೆಯಲಿದೆ. ರಾಜ್ಯದಲ್ಲಿ ಜಿಲ್ಲಾ-ತಾಲೂಕು ಕೇಂದ್ರ ಮತ್ತು ಕಾರ್ಮಿಕ ಇಲಾಖೆ ಕಚೇರಿಗಳು ಮತ್ತು ಬೆಂಗಳೂರಿನ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಎದುರು ಪ್ರತಿಭಟನೆಗಳು ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ(ಸಿಡಬ್ಲ್ಯೂಎಫ್‌ಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹಾಂತೇಶ್ ಹೇಳಿದರು.
ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್( ಸಿಐಟಿಯು) ರಾಜ್ಯದ ಕಟ್ಟಡ ನಿರ್ಮಾಣ ಕಾರ್ಮಿಕರು ಎದುರಿಸುತ್ತಿರುವ ಹತ್ತು ಹಲವು ಬೇಡಿಕೆಗಳ ಆಧಾರದಲ್ಲಿ ಈ ಮುಷ್ಕರವನ್ನು ನಡೆಸಲಾಗುತ್ತಿದೆ. ಅಲ್ಲದೇ ಪ್ರತಿಭಟನೆಯನ್ನು ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಮೊದಲನೆ ದಿನ ಡಿಸೆಂಬರ್ 2 ರಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ ಎರಡನೇ ದಿನ ಡಿಸೆಂಬರ್ 3 ರಂದು ಡೈರಿ ಸರ್ಕಲ್ ಬಳಿ ಇರುವ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಸುರಕ್ಷಾ ಭವನದ ಮುಂದೆ ಬೃಹತ್ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ದೇಶದ ಕಟ್ಟಡ ನಿರ್ಮಾಣ ವಲಯವು 2016/ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ನೋಟು ಅಮಾನ್ಯೀಕರಣ ಬಳಿಕ ಜಾರಿ ಮಾಡಲಾದ ಸರಕು ಸೇವಾ ತೆರಿಗೆ ನೀತಿಯಿಂದಾಗಿ ತೀವ್ರ ಬಿಕ್ಕಟ್ಟಿಗೆ ಸಿಲುಕಿತು. ಇದಾದ ಬಳಿಕ 2020 ಮಾರ್ಚನಲ್ಲಿ ದಾಳಿ ಮಾಡಿದ ಕರೋನಾ ರೋಗವು ಈ ಕ್ಷೇತ್ರವನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. ಇತ್ತೀಚಿಗೆ ನಿರಂತವಾಗಿ ಏರಿಕೆಯಾಗುತ್ತಿರುವ ಡಿಸೇಲ್ ಹಾಗೂ ಪೆಟ್ರೋಲಿಯಂ ತೈಲ ಬೆಲೆಗಳು ನಿರ್ಮಾಣ ವಲಯದ ಮೇಲೆ ಗಂಭೀರ ಪರಿಣಾಮ ಬೀರಿ ಲಕ್ಷಾಂತರ ಉದ್ಯೋಗಗಳ ನಾಶಕ್ಕೆ ಕಾರಣವಾಗುತ್ತಿವೆ. ನಮ್ಮ ದೇಶದಲ್ಲಿ ಕೃಷಿಕ್ಷೇತ್ರದ ಬಳಿಕ ಅತಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಿರುವ ನಿರ್ಮಾಣ ವಲಯದಲ್ಲಿ ಸುಮಾರು 10 ಕೋಟಿ ಜನರು ಕೆಲಸ ಮಾಡುತ್ತಿದ್ದಾರೆ ಇವರು ಕರೋನಾ ಲಾಕ್ ಡೌನ್ ನಲ್ಲಿ ಅತಿ ಹೆಚ್ಚು ತೊಂದರೆಗೊಳಪಟ್ಟ ಶ್ರಮಜೀವಿಗಳು. ಆದರೆ ಕರೊನ್ನೋತ್ತರ ಕಾಲಘಟ್ಟದಲ್ಲೂ ಅವರ ಸಂಕಷ್ಟಗಳು ದೂರವಾಗಿಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ರಾಜ್ಯ ಅಧ್ಯಕ್ಷ ಎನ್.ವೀರಸ್ವಾಮಿ, ಬೆಂಗಳೂರು ಉತ್ತರ ಜಿಲ್ಲೆ ಕಾರ್ಯದರ್ಶಿ ಹರೀಶ್ ಕುಮಾರ್ ಖಜಾಂಚಿ ಹನುಮಂತ ರಾವ್ ಇದ್ದರು. ಪ್ರತಿಭಟನೆಯ ಬೇಡಿಕೆಗಳು ಈ ಕೆಳಗಿನಂತಿವೆ.
ಅಖಿಲ ಭಾರತ ಬೇಡಿಕೆಗಳು :
- ಕಟ್ಟಡ ಉಧ್ಯಮವನ್ನು ರಕ್ಷಿಸಬೇಕು
- ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಾನೂನು 1996 ಹಾಗೂ ಸೆಸ್ ಕಾನೂನು 1996 ಕಾನೂನು ಪುನರ್ ಸ್ಥಾಪಿಸಬೇಕು.
- ದೇಶದ್ಯಾಂತ ಕಾನೂನುಬದ್ದವಾಗಿ ರಚನೆಯಾಗಿರುವ ಕಲ್ಯಾಣ ಮಂಡಳಿ ಉಳಿಯಬೇಕು
- ನಿರಂತರವಾಗಿ ಏರಿಕೆಯಾಗುತ್ತಿರುವ ಕಟ್ಟಡ ಸಾಮಾಗ್ರಿಗಳ ಬೆಲೆಗಳ ನಿಯಂತ್ರಣ ಮಾಡಬೇಕು
- ಕಟ್ಟಡ ಸಾಮಾಗ್ರಿಗಳ ಮೇಲೆ ವಿಧಿಸಲಾಗುತ್ತಿರುವ ಜಿ.ಎಸ್.ಟಿ ಕಡಿತಗೊಳಿಸಬೇಕು
- ಅಂತರ ರಾಜ್ಯ ವಲಸೆ ಕಾರ್ಮಿಕರ ಕಾನೂನು 1979 ರ ಪರಿಣಾಮಕಾರಿ ಜಾರಿ ಮಾಡಬೇಕು
ರಾಜ್ಯದ ಬೇಡಿಕೆಗಳು
- 3000 ರೂಪಾಯಿ ಲಾಕ್ಡೌನ್ ನಗದು ಪರಿಹಾರ ಎಲ್ಲರಿಗೂ ಕೂಡಲೇ ಪಾವತಿಯಾಗಬೇಕು
- ರೇಷನ್ ಕಿಟ್, ಟೂಲ್ ಕಿಟ್, ಸುರಕ್ಷಾ ಕಿಟ್,ಬೂಸ್ಟರ್ ಕಿಟ್ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡದೇ ಇರುವುದು ಹಾಗು ಮಂಡಳಿಯ ನಿಯಮಾವಳಿ, ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಕಾರ್ಮಿಕ ಇಲಾಖೆ ನಿರ್ದೇಶನ ಉಲ್ಲಂಘನೆ ಈ ವಿಚಾರದಲ್ಲಿ ತನಿಖೆಗೆ ಒತ್ತಾಯ
- ವೈದ್ಯಕೀಯ ಸಹಾಯಧನ ಹೆಚ್ಚಿಸಿ ಬಾಕಿ ಇರುವ ವೈಧ್ಯಕೀಯ ಅರ್ಜಿಗಳು ಇತ್ಯರ್ಥವಾಗಬೇಕು
- ಮದುವೆ ಸಹಾಯಧನ ವಿಳಂಬ ಮತ್ತು ಬಾಂಡ್ ವಿತರಣೆ ಸರಿಪಡಿಸಿ
- ಸಹಜ ಮರಣ ಪರಿಹಾರದ ಮೊತ್ತ ಕೂಡಲೇ ೨ ಲಕ್ಷಕ್ಕೆ ಹೆಚ್ಚಿಸಬೇಕು:
- ಅಪಘಾತ ಮರಣ ಪರಿಹಾರದ ಮತ್ತವನ್ನು ೧೦ ಲಕ್ಷ ರೂಪಾಯಿಗೆ ಹೆಚ್ಚಿಸಬೇಕು
- ಹೆರಿಗೆ ಭತ್ಯೆಯನ್ನು ಪುರುಷ ಫಲಾನುಭವಿಯ ಪತ್ನಿಗೂ ವಿಸ್ತರಿಸಬೇಕು
- ಮನೆ ನಿರ್ಮಾಣಕ್ಕೆ ೫ ಲಕ್ಷ ರೂಪಾಯಿ ಸಹಾಯಧನ ಜಾರಿಗೊಳಿಸಿ
- ಶೈಕ್ಷಣಿಕ ಸಹಾಯಧನ ಅರ್ಜಿಗಳ ತಂತ್ರಾಂಶ ಕೂಡಲೇ ಆರಂಭಿಸಿ
- ಅರ್ಜಿಗಳ ವಿಳಂಬ ವಿಲೇವಾರಿ ನಿಲ್ಲಬೇಕು: ಕಾರ್ಮಿಕ ಅದಾಲತ್ ನೆಪಕ್ಕೆ ಮಾತ್ರ ಬೇಡ
- ಬೋಗಸ್ ಕಾರ್ಡ್ಗಳಿಗೆ ನಿಯಂತ್ರಣ ಹಾಕಿ ತಪ್ಪಿತ್ತಸ್ಥರಿಗೆ ಶಿಕ್ಷೆ ಯಾಗಲಿ
- ಸಕ್ರಮಗೊಳಿಸಲಾದ ಅನಧಿಕೃತ ಕಟ್ಟಡಗಳಿಂದ ಸೆಸ್ ಸಂಗ್ರಹಕ್ಕೆ ಕ್ರಮವಹಿಸಿ
- ಪ್ರತ್ಯೇಕ ಸಾಫ್ಟ್ವೇರ್ ಅಳವಡಿಕೆ ಕಾರ್ಯ ಶೀಘ್ರ ಆಗಲಿ:
- ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ನೋಂದಣಿಗೆ ಪ್ರತ್ಯೇಕ ಐಡಿ ಜಾರಿಯಾಗಲಿ
- ಕಲ್ಯಾಣ ಮಂಡಳಿಯಲ್ಲಿ ಸಿಐಟಿಯುನ ಗೆ ಕಾರ್ಮಿಕ ಪ್ರಾತಿನಿದ್ಯ ಸಿಗಬೇಕು:
- ಮಂಡಳಿ-ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ಭರ್ತಿ ಮಾಡಬೇಕು
- 2016 ರಿಂದ ನವೀಕರಣಗೊಳ್ಳದಿರುವ ಕಾರ್ಮಿಕರಿಗೆ ನವೀಕರಣಕ್ಕೆ ಅವಕಾಶ ನೀಡಬೇಕು.