ಜೈಪುರವೆಂಬ ಲೋಕಸಂಸ್ಕೃತಿಯ ನಾಡಿನಲ್ಲಿ ನಾಲ್ಕುದಿನ

  ಮಲ್ಲಿಕಾರ್ಜುನ ಕಡಕೋಳ
ರಾವನ್ ಅಥಾ ತಂತಿವಾದ್ಯ ಸಂಗೀತಕ್ಕೆ ಹತ್ತು ವರುಷದ ಬಾಲಕ ಕುಲದೀಪ ತಲೆಗೆ ಕೆಂಪು ಪಗಡಿ ಧರಿಸಿ ಸೊಗಸಾಗಿ ನೃತ್ಯ ಮಾಡುತ್ತಿದ್ದ. ಹಾಗೆ ಕುಲದೀಪ್ ನೃತ್ಯ ಮಾಡಿದ್ದು ಅವನ ಕಾಕಾ ಜಗದೀಪ್ ಸೊಗಸಾಗಿ ನುಡಿಸುತ್ತಿದ್ದ ರಾವನ್ ಅಥಾ ಎಂಬ ತಂತಿವಾದ್ಯ ಸಂಗೀತಕ್ಕೆ. ಬಹುತಂತಿ ನಾದಲೀಲೆಯ ಆ ಘಮಲು ಇನ್ನೂ ನನ್ನ ಮನದಲ್ಲಿ ಗುಂಯಿಗುಡುತ್ತಲಿದೆ. ಅಷ್ಟಕ್ಕೂ ಅದು ಆ ಊರಿನ ಒಂದು ದಿನದ ಸಂಗೀತ ನಾದ ನೃತ್ಯ ನಡವಳಿಕೆ ಆಗಿರಲಿಲ್ಲ. ಬಹಳಷ್ಟು ಕಡೆ ಅವು ನಿತ್ಯವೂ ಏರ್ಪಡುತ್ತವೆ….

ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹೀಗೆ ನಾಲ್ಕೂ ದಿಕ್ಕಿನ ಭಾರತದ ಪ್ರತಿಭಾಶಾಲಿ‌ ಮತ್ತು ಪ್ರಬುದ್ಧ ಪತ್ರಕರ್ತರು ಅಲ್ಲಿ ಸೇರಿದ್ದರು. ಅದು ರಾಜಸ್ಥಾನದ ರಾಜಧಾನಿ ಜೈಪುರ. ಅಲ್ಲಿನ ”ಜೈಪುರ ಇಂಟರ್ ನ್ಯಾಶನಲ್ ಸೆಂಟರ್” ಸಮಾವೇಶದ ಸ್ಥಳ. ಹೆಸರಿಗೆ ತಕ್ಕಂತೆ ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಮತ್ತು ಸುವಿಶಾಲವಾದ ನೂತನ ಸಾಂಸ್ಕೃತಿಕ ಭವನ. ಅದು ಅದೆಷ್ಟು ಚೆಂದವಿದೆ ಎಂದರೆ ಅದರ ಕುರಿತೇ ಪ್ರತ್ಯೇಕ ಲೇಖನ ಬರೆಯುವಷ್ಟು ಮತ್ತು ರಾಜಸ್ಥಾನದ ಸಾಂಸ್ಕೃತಿಕ ಪರಂಪರೆ ಮೆರೆಯುವಷ್ಟು. ಅಷ್ಟೇಯಾಕೆ ನಮ್ಮ ಕರ್ನಾಟಕ ಸರಕಾರವು ಅಂತಹದ್ದೊಂದು ಸುಂದರ ಸಾಂಸ್ಕೃತಿಕ ಭವನ ನಿರ್ಮಿಸ ಬೇಕೆನ್ನುವಷ್ಟು. ಕನ್ನಡ ಮತ್ತು ಸಂಸ್ಕೃತಿ ಸಚಿವರಲ್ಲಿ ಇದು ನನ್ನ ವಿನಮ್ರ ವಿನಂತಿಯೂ ಹೌದು.

ಭಾರತದ ವಿವಿಧ ಭಾಷೆಗಳಲ್ಲಿ ಪ್ರಕಟಗೊಂಡ ಸಂವೇದನಾಶೀಲ ಕಥನಗಳನ್ನು ಹುಡುಕಿ ಆಯ್ಕೆಗೊಂಡ ಪತ್ರಕರ್ತರ ಮಾಧ್ಯಮ ಕಥನಗಳಿಗೆ ಸಲ್ಲುವ “ಜೆಂಡರ್ ಸೆನ್ಸಿಟಿವಿಟಿ ಪ್ರಶಸ್ತಿ” ಪ್ರದಾನ ಸಮಾರಂಭ. ಮುದ್ರಣ ಪತ್ರಿಕೋದ್ಯಮ ಮಾತ್ರವಲ್ಲದೇ ಆಕಾಶವಾಣಿ, ವಿದ್ಯುನ್ಮಾನ, ಸಾಮಾಜಿಕ ಜಾಲತಾಣಗಳ ವಿವಿಧ  ಬಗೆಯ ಮಾಧ್ಯಮಗಳಿಗೂ ಅಲ್ಲಿ ಅವಕಾಶ. ವಿಶೇಷವೆಂದರೆ ಲಿಂಗಸಂವೇದಿ ಸಂಕಥನಗಳ ಸಂಗತಿಗಳಿಗೆ ಸಲ್ಲುವ ರಾಷ್ಟ್ರಮಟ್ಟದ ಮಾಧ್ಯಮಗೌರವ ಕಾರ್ಯಕ್ರಮ ಅದಾಗಿತ್ತು.

Nothing is permanent except change ಅಂದರೆ ಬದಲಾವಣೆಯೊಂದನ್ನು ಹೊರತು ಪಡಿಪಸಿದರೆ ಯಾವುದೂ ಶಾಶ್ವತವಲ್ಲ. ಇದು ಲಾಡ್ಲಿ ಮೀಡಿಯಾ ಧ್ಯೇಯವಾಕ್ಯ. ಮುಂಬಯಿ ಮೂಲದ ‘ಲಾಡ್ಲಿ’ ಎಂಬ ಹೆಸರಲ್ಲೇ ಅದೇನೋ ಗುಣಸಂವೇದಿ ಆಮೋದ. ಮುದ್ದುಪ್ರೀತಿಯ ಸುಕೋಮಲ ಮೋದ. ಕೂಸು ಕಂದಮ್ಮನ ಕಳಕಳಿ ಮತ್ತು ಮಮಕಾರಗಳ ಅನುಭೂತಿ. ಅದನ್ನು ಮಹಿಳೆ, ಮಕ್ಕಳು, ಜನಾರೋಗ್ಯ ಮತ್ತು ಜೀವಸಂಕುಲದ ಸಂವೇದನೆಗಳ ಸಹಸ್ಪಂದನ ಎಂತಲೂ ಕರೆಯಬಹುದು.

ರಾಜಸ್ತಾನವೆಂದರೆ ಲೋಕಸಂಸ್ಕೃತಿಯ ನಾಡು. ಅಲಂಕಾರಿಕ ವೇಷಭೂಷಣ, ದೇಸೀಯ ನೃತ್ಯ, ಸಂಗೀತ, ಬಹುತಾರಿ ತಂತಿವಾದ್ಯಗಳ ಮಾಧುರ್ಯ. ಹೀಗೆ ಸಾಂಸ್ಕೃತಿಕವಾಗಿ ಇದೊಂದು ತೂಕದಪಾರಮ್ಯ. ಇನ್ನೊಂದು ಪಾರಮ್ಯವೆಂದರೆ “ಪಿಂಕ್ ಸಿಟಿ” ಹೆಸರಿನ ಜೈಪುರ ಅರಮನೆಗಳ ತವರೂರು ಈ ಊರು. ಲೋಕಪ್ರಸಿದ್ದ ರಾಜಾ ಮಾನಸಿಂಗ್ ಸೇರಿದಂತೆ ಅನೇಕ ಮಹಾರಾಜರುಗಳು ಆಳಿದ ನಾಡು. ಅವರುಗಳು ನಿರ್ಮಿಸಿದ ಅತಿಲೋಕ ಸುಂದರ ಅರಮನೆಗಳು, ಹವಾಯಿ, ಜಲ ಮಹಲುಗಳು, ಮ್ಯುಜಿಯಮ್, ಶಸ್ತ್ರಾಸ್ತ್ರ ಸಂಗ್ರಹಾಲಯಗಳೆಲ್ಲವೂ ಆಧುನಿಕೋತ್ತರ ಆಲೋಚನೆಗಳಿಗೂ ಸವಾಲು. ತಲೆಗೆ ವಸ್ತ್ರ – ಪಗಡಿಗಳಿಲ್ಲದವರನು ಈ ಊರಲ್ಲಿ ಹುಡುಕುವುದೇ ದುಸ್ತರ. ಮಹಿಳೆಯರಾದರೆ ಗಾಗರ್ ಚೋಲಿ ಕಡ್ಡಾಯವೇ ಆಗಿರುವಂತಿರುವ ವಸ್ತ್ರ ಪರಂಪರೆಯ ಮುಂದುವರಿಕೆ.

ಅವತ್ತಿ‌ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸಾಮಾಜಿಕ ಹೋರಾಟದ ದೇಸೀನಾಯಕಿ ಭನ್ವರಿದೇವಿ ತಮ್ಮ ನಿತ್ಯ ಸಂಪ್ರದಾಯದ ಜವಾರಿ ಉಡುಪಿನಲ್ಲೇ ಬಂದಿದ್ದರು. ಅವರ ಆಗಮನ ಇಡೀ ಸಮಾರಂಭದ ಸಾಂಸ್ಕೃತಿಕ ಸರಳತೆ ಮತ್ತು ಸೌಂದರ್ಯವನ್ನು ಹೆಚ್ಚಿಸಿತ್ತು. ವೇದಿಕೆಯ ಮೇಲೆ ಯಾವುದೇ ಶಿಷ್ಟಾಚಾರದ ಕುರ್ಚಿ ಮತ್ತಿತರೆ ಉಪಕರಣ, ಶಾಲು, ಹಾರ, ತುರಾಯಿಗಳೇನೂ ಇರಲಿಲ್ಲ. ಮುಖ್ಯವಾಗಿ ಅಲ್ಲಿ ರಾಜಕಾರಣಿಗಳು ಇರಲಿಲ್ಲ. ಅದು ಸರಳತೆಗೆ ಮತ್ತೊಂದು ನಿದರ್ಶನ. ಪ್ರಶಸ್ತಿ ಪ್ರದಾನ ಮಾಡುತ್ತಿದ್ದ ಹೆಸರಾಂತ ಸೆಲೆಬ್ರಿಟಿ ಮತ್ತು ಲಾಡ್ಲೀ ನ್ಯಾಷನಲ್ ಕೋಆರ್ಡಿನೇಟರ್ ಆಗಿರುವ ಡಾಲಿ ಠಾಕೂರ್ ಭನ್ವರಿದೇವಿಯನ್ನು ಅಪ್ಪಿ ಸಂತಸಪಟ್ಟರು. ಸಾಲದ್ದಕ್ಕೆ ಭನ್ವರಿದೇವಿ ಕುರಿತು ನಾಲ್ಕು ಮೆಚ್ಚುಗೆಯ ಮಾತುಗಳನ್ನು ಸಡಗರದಿಂದ ನುಡಿದರು. ಜೈಪುರ

ಪ್ರಜಾವಾಣಿ ಕನ್ನಡ ದೈನಿಕದ ಹಿರಿಯ ಉಪಸಂಪಾದಕಿ ಆಗಿರುವ ಮಗಳು ಮಂಜುಶ್ರೀ ಎಂ. ಕಡಕೋಳ ಈ ಹಿಂದೆಯೇ ಲಾಡ್ಲಿ ಸಮೂಹದಿಂದ ಫಲೋಶಿಪ್ ಗೌರವಕ್ಕೆ ಭಾಜನಳು. ಆಗ ಅವಳಿಗೆ ಅಧ್ಯಯನಕ್ಕೆಂದು ಅರ್ಧಲಕ್ಷದಷ್ಟು ಹಣಕಾಸು ಲಾಡ್ಲೀ ನೀಡಿತ್ತು. ಇದೀಗ ಅವಳು ಪ್ರಜಾವಾಣಿಯಲ್ಲಿ ರೂಮಿ ಹರೀಶ್ ಕುರಿತು ಬರೆದ “ಲಿಂಗದ ಹಂಗು ತೊರೆದು…” ಎಂಬ ಅಗ್ರಲೇಖನಕ್ಕೆ ಲಾಡ್ಲೀ ಮೀಡಿಯಾ ಅವಾರ್ಡ್ ದೊರಕಿದೆ. ಹಾಗೆಯೇ ಪ್ರಜಾವಾಣಿಯ ಸೋದರ ಪತ್ರಿಕೆ ಡೆಕ್ಕನ್ ಹೆರಾಲ್ಡ್ ಆಂಗ್ಲ ದೈನಿಕದ ವೀಡಿಯೋ ಜರ್ನಲಿಸ್ಟ್ ರಜತ್ ಶರ್ಮಾ ರೂಪಿಸಿದ ಶಿವಮೊಗ್ಗೆಯ ಅಹರ್ನಿಶಿ ಪ್ರಕಾಶನ ಕುರಿತ ಕಥನಕ್ಕು ಲಾಡ್ಲೀ ಮೀಡಿಯಾ ಅವಾರ್ಡ್ ದೊರಕಿದೆ. ರಾಷ್ಟ್ರವ್ಯಾಪಿ ವಿವಿಧ ಭಾಷೆಗಳ ಎಂಬತ್ತೇಳಕ್ಕು ಹೆಚ್ಚುಮಂದಿ ಲಾಡ್ಲೀ ಮೀಡಿಯಾ ಪ್ರಶಸ್ತಿಗೆ ಭಾಜನರು. ಅದರಲ್ಲಿ ಬಹುಪಾಲು ತರುಣಿಯರದೇ ಮೇಲುಗೈ.

ಇದನ್ನೂ ಓದಿ : ಓಕಳಿಯ ‘ಸೀಬಿ’ ಪಾಟೀಲ ಗೌಡರೆಂದರೆ… ಜೈಪುರ

ಪ್ರಶಸ್ತಿ ಪ್ರದಾನ ಸಮಾರಂಭದ ಮತ್ತೊಂದು ವಿಶೇಷವೆಂದರೆ ಲೋಕಸಂಗೀತ ಮತ್ತು ನೃತ್ಯ ಪ್ರದರ್ಶನಗಳ ಸಾಂಸ್ಕೃತಿಕ ಸಮಾಗಮ. ಸ್ಥಳೀಯ ಸಾಂಸ್ಕೃತಿಕ ಪ್ರತಿಷ್ಠಾನ, ಸಂಘಟನೆಗಳ ಸಹಭಾಗಿತ್ವ. ಬದ್ನವಾ ಎಂಬ ಹಳ್ಳಿಯ ಜನಪದಗಾಯಕ ಮೆಹರ್ದಿನ್ ಲಂಗ್ ಮತ್ತು ಸಿಕಂದರ್ ಸಂಗಡಿಗರು ಪ್ರಸ್ತುತ ಪಡಿಸಿದ ” ಜೀಣೋರೆ ಹಲರಿಯ ಸೋಣಿ…” ಲೋಕಗೀತೆಯ ಗುಂಗಿನಿಂದ ಹೊರಬರಲು‌ ನನಗಂತೂ ಸಾಧ್ಯವಾಗದು. ಢೋಲಕ್, ಖರ್ತಾಲ್, ಸಾರಂಗಿಗಳಂತಹ ಸಂಪ್ರದಾಯದ ವಾದ್ಯಬಳಕೆ ಅದರಲ್ಲೂ ಮೆಹರ್ದಿನ್ ಏಕಕಾಲಕ್ಕೆ ಎರಡು ಕೊಳಲುಗಳನ್ನು ಏಕ ಉಸಿರಿಗೆ ನುಡಿಸುವುದು ಅಸಾಧಾರಣ. ತಂಡದ ಜಾನಪದದ ಹಾಡಿಗೆ ಅಮೋಘ ಅಲಂಕಾರದ ತರುಣಿಯರ ಕಲ್ಬೇಲಿಯ ಶೃಂಗಾರ ನೃತ್ಯವಂತೂ ಮನೋಜ್ಞವಾಗಿತ್ತು. ಅಂತೆಯೇ ಮೆಹರ್ದಿನ್ ತಂಡ ರಾಷ್ಟ್ರೀಯ ಖ್ಯಾತಿ ಪಡೆದಿದೆ. ಸೂಫಿ ಸಂತರ ದೋಹೆ, ಅನುಭಾವದ ಪದಗಳ ಮಾಧುರ್ಯಕ್ಕೆ ಮತ್ತೊಂದು ಹೆಸರೇ ಮೆಹರ್ದಿನ್ ತಂಡ.

ಅಂದಹಾಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಗಿದ ಮೇಲೆ ಸುಗ್ರಾಸ ಭೋಜನದ ಆದರಾತಿಥ್ಯ. ಯಾವುದೇ ಸ್ಟಾರ್ ಹೋಟೆಲ್ಲಿಗೂ ಕಮ್ಮಿ ಇಲ್ಲದ ಉತ್ಕೃಷ್ಟ ಮಟ್ಟದ ಭೋಜನಾಲಯ ವ್ಯವಸ್ಥೆ ಅಲ್ಲೇ ಇತ್ತು. ಊಟದ ನಂತರ ಗಾಯಕರ ತಂಡವನ್ನು ಕಂಡು ಮಾತಾಡಿಸಿದೆ. ಸಹಜವಾಗಿ ನಾನು ಆರಾಧಿಸುವ ರಾಜಸ್ತಾನಿ ಮೂಲದ  ಸೂಫಿಗಾಯಕಿ ರೇಷ್ಮಾ ಕುರಿತು ಮತ್ತು ಪರ್ವೇಜ್ ಮೇಹ್ದಿ ಹಸನ್ ಕುರಿತು ನಾನು ಪ್ರಸ್ತಾಪಿಸುವುದೇ ತಡ., ಸಿಕಂದರ್ ” ಗೋರಿಯೇ ಜಾಣಾ ಪರ್ದೇಸ್… ಮಾಹೀರೇ…” ಆಲಾಪನೆ ಶುರುಮಾಡಿದ. ಹಾಗೆಯೇ ಒಂದೊಂದಾಗಿ ದಿಲ್ ಖುಷ್ ಚೀಜ್ ಗಳು. ನನಗೆ ಅಗ್ದೀ ಖಾಸ್ ಎನಿಸಿದ ಹಾಡುಗಳನ್ನೇ ಹಾಡ ತೊಡಗಿದ.

ಸೂಫಿ, ಗಝಲ್ ಇವುಗಳನ್ನೇ ಹಾಡುವ ವೈಶಿಷ್ಟ್ಯ ನನಗೆ ಖುಷಿ ಕೊಡುತ್ತಿರುವುದನ್ನು ಪ್ರಾಯಶಃ ಆತ ಮನಗಂಡಿದ್ದನೆಂದು ಕಾಣುತ್ತದೆ. ಅಂತೆಯೇ ರೇಷ್ಮಾ ಸಿರಿಕಂಠದ ವರ್ಲ್ಡ್ ಫೇಮಸ್ ಸಿನೆಮಾ ಹಾಡು ‘ಲಂಬಿ ಜುದಾಯಿ…’ ಎಂಬ ವಿದಾಯದ ಮಾಂತ್ರಿಕ ಗೀತೆ ಹಾಡತೊಡಗಿದ. ಮತ್ತೊಂದು ಟೇಬಲ್ ಬಳಿ ಕುಂತು ಲಘುವಾಗಿ ಅದನ್ನು ಆಲಿಸುತ್ತಿದ್ದ ಅಳಿಯ ಅನಂತ ಓಡೋಡಿ ಬಂದು ನಮ್ಮ ಟೇಬಲ್ಲಿಗೆ ಸೇರಿಕೊಂಡ. ಹೀಗೆ ನಮ್ಮ ಮೇಜು ಸಂಗೀತದ ಮೇಜವಾನಿ ಉಕ್ಕಿ ಹರಿಸುತ್ತಿರುವಾಗಲೇ ಸಿಕಂದರ್ ಮೊಬೈಲ್ ಸದ್ದುಮಾಡಿತು. ಹಾಡು ನಿಲ್ಲಿಸಿ ಸಿಕಂದರ್ ಅದನ್ನು ಅಟೆಂಡ್ ಮಾಡಿದ.

ಇದಿಷ್ಟು ಸಮಾರಂಭಕ್ಕೆ ಸಂಬಂಧಿಸಿದ ಸಂಕ್ಷೇಪ ಸಂಗತಿ. ಅದನ್ನು ಹೊರತು ಪಡಿಸಿ ಹೇಳುವುದಾದರೆ ಜೈಪುರದ ಅರಮನೆ, ಮಹಲುಗಳನು ಒಳಗೊಂಡ ಬಹುಪಾಲು ಸಾರ್ವಜನಿಕ ಆವರಣಗಳಲ್ಲಿ ಲೋಕಸಂಗೀತ ನೃತ್ಯಗಳಿಂದ ತುಂಬಿ ತುಳುಕುವ ಜನಸಂಸ್ಕೃತಿ ಈ ನಾಡಿನದಾಗಿದೆ. ಬಹುತೇಕ ಹಿಂದಿ ಸಿನೆಮಾಗಳಲ್ಲಿ ಹಳೆಯ ”ಮೊಗಲೇ ಆಝಮ್” ಸೇರಿದಂತೆ ಅದರಲ್ಲೂ ಇತ್ತೀಚಿನ “ಜೋದಾ ಅಕ್ಬರ್” ಸಿನೆಮಾದವರೆಗೂ ಅಲ್ಲಿನ ಅರಮನೆ, ಲೋಕಸಂಸ್ಕೃತಿಯ ಸಂಗೀತ ನೃತ್ಯಗಳ ಸದ್ಬಳಕೆಯಾಗಿದೆ. ಲಂಬೀ ಜುದಾಯಿಯಂತಹ ಹಾಡುಗಳು ಜಗತ್ ಪ್ರಸಿದ್ದಿ ಪಡೆದುದು ಇಲ್ಲಿಯ ಬಿಕಾನೇರ ಜಿಲ್ಲೆಯ ಲೋಹಾ ಎಂಬ ಹಳ್ಳಿಯ ಮೂಲದ ಮಹಾನ್ ಗಾಯಕಿ ರೇಷ್ಮಾ ಹಾಡುಗಾರಿಕೆಯಿಂದಾಗಿ. ಹಾಗೆಯೇ ಲೋಕಪ್ರಸಿದ್ಧ “ನಿಂಬುಡ ನಿಂಬುಡಾ” ಹಾಡು ರಾಜಸ್ತಾನ ಜನಪದರ ಲೋಕಗೀತೆಯೇ ಆಗಿದೆ. ಅದು ಇವತ್ತಿಗೂ ಮಾಂತ್ರಿಕ ಲೋಕಪ್ರಿಯತೆ ಕಳಕೊಂಡಿಲ್ಲ .

ಸೂಫಿ ಸಿಂಗರ್ ಮೆಹರ್ದಿನ್ ಜತೆ ಲೇಖಕ ಮಲ್ಲಿಕಾರ್ಜುನ ಕಡಕೋಳ

ಅವತ್ತು ಮಧ್ಯಾಹ್ನ ರಾವನ್ ಅಥಾ ತಂತಿವಾದ್ಯ ಸಂಗೀತಕ್ಕೆ ಹತ್ತು ವರುಷದ ಬಾಲಕ ಕುಲದೀಪ ತಲೆಗೆ ಕೆಂಪು ಪಗಡಿ ಧರಿಸಿ ಸೊಗಸಾಗಿ ನೃತ್ಯ ಮಾಡುತ್ತಿದ್ದ. ಹಾಗೆ ಕುಲದೀಪ್ ನೃತ್ಯ ಮಾಡಿದ್ದು ಅವನ ಕಾಕಾ ಜಗದೀಪ್ ಸೊಗಸಾಗಿ ನುಡಿಸುತ್ತಿದ್ದ ರಾವನ್ ಅಥಾ ಎಂಬ ತಂತಿವಾದ್ಯ ಸಂಗೀತಕ್ಕೆ. ಬಹುತಂತಿ ನಾದಲೀಲೆಯ ಆ ಘಮಲು ಇನ್ನೂ ನನ್ನ ಮನದಲ್ಲಿ ಗುಂಯಿಗುಡುತ್ತಲಿದೆ. ಅಷ್ಟಕ್ಕೂ ಅದು ಆ ಊರಿನ ಒಂದು ದಿನದ ಸಂಗೀತ ನಾದ ನೃತ್ಯ ನಡವಳಿಕೆ ಆಗಿರಲಿಲ್ಲ. ಬಹಳಷ್ಟು ಕಡೆ ಅವು ನಿತ್ಯವೂ ಏರ್ಪಡುತ್ತವೆ.

ಮುಖ್ಯವಾಗಿ ರಾಯಲ್ ಪ್ಯಾಲೇಸ್ ಹೋಟೆಲ್ ಪ್ರತಿನಿತ್ಯವೂ ಅದನ್ನು ಏರ್ಪಡಿಸುತ್ತದೆ. ನಾವು ಅಪರಾಹ್ನದ ಊಟದ ವೇಳೆ ಅದೇ ಹೋಟೆಲಿನಲ್ಲಿ ಕುಲದೀಪ್ ಮತ್ತು ಆತನ ಕಾಕಾನ ಜುಗಲ್ ಸಂಗೀತ ನೃತ್ಯ ಸವಿ ಸವಿದದ್ದು. ರಾಯಲ್ ಪ್ಯಾಲೇಸ್ ಹೋಟೆಲಿಗೆ ಬಹುಪಾಲು ವಿದೇಶಿ ಪ್ರವಾಸಿಗರು ಆಗಮಿಸುತ್ತಾರೆ. ಅವರಿಗಾಗಿ ಜೈಪುರದ ಈ ಹೋಟೆಲ್ ತನ್ನ ನೆಲಮೂಲ ಸಂಸ್ಕೃತಿ ಪರಂಪರೆಯನ್ನು ನಿತ್ಯವೂ ಮೆರೆಯುತ್ತಲಿದೆ. ಹೌದು ಲೋಕಸಂಗೀತ ಮತ್ತು ಲೋಕನೃತ್ಯಗಳು ರಾಜಸ್ತಾನಿಗರ ಬದುಕಿನ ಅವಿಭಾಜ್ಯ ಅಂಗದಂತಾಗಿವೆ. ಲೋಕಸಂಸ್ಕೃತಿ ಮತ್ತು ಪರಾತ್ಪರ ಸೂಫಿಶಕ್ತಿಯ ಕ್ಷಿತಿಜವನ್ನು ಆಧುನಿಕತೆಯೊಂದಿಗೆ ಸಮೀಕರಿಸುವ ಸಾಧ್ಯತೆಗಳನ್ನು ಅವರು ಆಗುಮಾಡಿಕೊಂಡಿರುವುದು ಅಕ್ಷರಶಃ ಅಚ್ಚರಿ ಮತ್ತು ಅನುಕರಣೀಯ.

ಈ ವಿಡಿಯೋ ನೋಡಿ : ʻಬದುಕಿನ ಬೀಗದ ಕೀ ನಮ್ಮ ಕೈಲೇ ಇದೆʻ ಹಿರಿಯ ರಂಗಕರ್ಮಿ ಜೇವರ್ಗಿ ರಾಜಣ್ಣ ಜೊತೆ ಮಾತುಕತೆ ಜೈಪುರ

 

 

Donate Janashakthi Media

One thought on “ಜೈಪುರವೆಂಬ ಲೋಕಸಂಸ್ಕೃತಿಯ ನಾಡಿನಲ್ಲಿ ನಾಲ್ಕುದಿನ

Leave a Reply

Your email address will not be published. Required fields are marked *