ಸಾಹಿತ್ಯ ಅಥವಾ ಕಲೆ ಯಾರಿಗೆ ಋಣಿಯಾಗಿರಬೇಕು ? ಇದು ಸಾಂಸ್ಕೃತಿಕ ಲೋಕದ ಉತ್ತರದಾಯಿತ್ವದ ಪ್ರಶ್ನೆ.
ನಾ ದಿವಾಕರ
ಕರ್ನಾಟಕದ ಸಾಂಸ್ಕೃತಿಕ ಅಂಗಳದಲ್ಲಿ ಸೃಷ್ಟಿಯಾಗಿರುವ ಪ್ರಕ್ಷುಬ್ಧ ವಾತಾವರಣ ಇಡೀ ಸಾಹಿತ್ಯ ವಲಯವನ್ನೇ ಅಣಕಿಸುವಂತೆ ಕಾಣುತ್ತಿದೆ. ರಾಜ್ಯದ ಸಮಕಾಲೀನ ಸಾಂಸ್ಕೃತಿಕ ಇತಿಹಾಸದಲ್ಲಿ, ವಿಶೇಷವಾಗಿ ಸಾಹಿತ್ಯ ಚರಿತ್ರೆಯಲ್ಲಿ ಪ್ರಭುತ್ವದ ಹೊಸ್ತಿಲಲ್ಲಿ ಫಲಾಕಾಂಕ್ಷಿಗಳಾಗಿ ಸಾಲುಗಟ್ಟಿ ನಿಲ್ಲುವ ಪರಂಪರೆ ಹೊಸತೇನೂ ಅಲ್ಲ. ಭಾರತ ವಸಾಹತುಶಾಹಿಯಿಂದ ವಿಮೋಚನೆ ಪಡೆದು ಸ್ವತಂತ್ರ ಗಣತಂತ್ರ-ಪ್ರಜಾತಂತ್ರವನ್ನು ಒಪ್ಪಿಕೊಂಡಿದ್ದರೂ, ದೇಶದ ಆಳ್ವಿಕೆಯ ಕೇಂದ್ರಗಳಲ್ಲಿ ಹಾಗೂ ಇವುಗಳನ್ನು ನಿರ್ದೇಶಿಸುವ ಸಾಮಾಜಿಕ-ಸಾಂಸ್ಕೃತಿಕ ಜಗತ್ತಿನಲ್ಲಿ ರಾಜಪ್ರಭುತ್ವದ ಯಜಮಾನಿಕೆಯ ಸಂಸ್ಕೃತಿ ನಾಶವಾಗಿಲ್ಲ. ಪ್ರಜಾಪ್ರಭುತ್ವವನ್ನು ಮೌಲಿಕವಾಗಿ ಆಳ್ವಿಕೆಯ ನೆಲೆಗಳಿಗೇ ಕಟ್ಟಿಹಾಕಿ, ಚುನಾವಣೆ ಮತ್ತು ಅಧಿಕಾರ ರಾಜಕಾರಣಕ್ಕೆ ಸೀಮಿತಗೊಳಿಸಿರುವ ನಮ್ಮ ಸಮಾಜ ಬೌದ್ಧಿಕ ನೆಲೆಯಲ್ಲಿ ನೈಜ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಸಂಪೂರ್ಣ ವಿಫಲವಾಗಿದೆ.
ಹಾಗಾಗಿಯೇ ಏಳು ದಶಕಗಳ ಅನಂತರವೂ ಭಾರತದ ಶೈಕ್ಷಣಿಕ ಜಗತ್ತನ್ನೂ ಸೇರಿದಂತೆ ಬೌದ್ಧಿಕ ಸಾಮಗ್ರಿಯನ್ನು ಉತ್ಪಾದಿಸುವ ಎಲ್ಲ ಸಾಂಸ್ಕೃತಿಕ ನೆಲೆಗಳೂ ಸಹ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಅಲಂಕಾರಿಕವಾಗಿ ಬಳಸಿಕೊಳ್ಳುತ್ತಿವೆ. ಸಾಹಿತ್ಯ-ಕಲೆ-ರಂಗಭೂಮಿ ಇತ್ಯಾದಿ ಸಂವೇದನಾಶೀಲ ಸಾಂಸ್ಕೃತಿಕ ವಾಹಕಗಳು ಈ ಚೌಕಟ್ಟಿನಿಂದ ವಿಮೋಚನೆ ಪಡೆದುಕೊಳ್ಳುವುದು ಅಪೇಕ್ಷಿತವೇ. ಆದರೆ ಭಾರತದ ಜಾತಿ ವ್ಯವಸ್ಥೆ ಶತಮಾನಗಳಿಂದ ಪೋಷಿಸಿಕೊಂಡು ಬಂದಿರುವ ಯಜಮಾನಿಕೆಯ ಸಂಸ್ಕೃತಿ ಮತ್ತು ಆಧಿಪತ್ಯದ ಪರಂಪರೆಗಳು ಈ ವಲಯವನ್ನು ಆವರಿಸಿರುವುದರಿಂದ ಇಲ್ಲಿಯೂ ಸಹ ಮೇಲು-ಕೀಳು, ಶ್ರೇಷ್ಠ-ಕನಿಷ್ಠ, ಬಲಾಢ್ಯ-ದುರ್ಬಲ ಮುಂತಾದ ವಿಂಗಡನೆಗಳು ಆಳವಾಗಿ ಬೇರೂರಿದೆ. ಸಾಹಿತ್ಯವನ್ನೂ ಒಳಗೊಂಡಂತೆ ಜನಸಾಮಾನ್ಯರ ನಡುವೆ ತಮ್ಮ ಅಸ್ತಿತ್ವ ಹಾಗೂ ಅಸ್ಮಿತೆಗಳನ್ನು ಕಂಡುಕೊಳ್ಳಬೇಕಾದ ಸಾಂಸ್ಕೃತಿಕ ವಲಯ ಈ ಜಂಜಡದಿಂದ ಅವಶ್ಯವಾಗಿ ಹೊರಬರಬೇಕಿದೆ.
ಸಾಮಾಜಿಕ ನೈತಿಕತೆಯ ಕೊರತೆ
ತಳಸಮಾಜದ ಜನಸಾಮಾನ್ಯರ ಬದುಕು-ಬವಣೆಯ ಸುತ್ತ ಕಟ್ಟಲಾಗುವ ಅಕ್ಷರ ಲೋಕದ ಯಾವುದೇ ಪ್ರಕಾರವಾದರೂ ಮೂಲತಃ ಆಯಾ ಸಮಾಜಕ್ಕೆ ಬದ್ಧವಾಗಿರಬೇಕು. ಜೀವನ ಸೂಕ್ಷ್ಮತೆ ಮತ್ತು ಮಾನವ ಸಂವೇದನೆಗಳನ್ನು ಒಟ್ಟುಗೂಡಿಸುತ್ತಾ ಸಮಾಜದೊಳಗಿನ ದೌರ್ಬಲ್ಯಗಳನ್ನು ಹೊರಗೆಡಹುವುದೇ ಅಲ್ಲದೆ ಶತಮಾನಗಳಿಂದ ಕಾಡುತ್ತಿರುವ ಸಾಮಾಜಿಕ-ಸಾಂಸ್ಕೃತಿಕ ಪಿಡುಗುಗಳಿಗೆ ಪರಿಹಾರ ಸೂಚಿಸುವ ಚಿಕಿತ್ಸಕ ಗುಣವನ್ನು ಸಾಂಸ್ಕೃತಿಕ ಲೋಕ ರೂಢಿಸಿಕೊಳ್ಳಬೇಕು. ಈ ದೃಷ್ಟಿಯಿಂದ ನೋಡಿದಾಗ ಕನ್ನಡದ ಸಾಂಸ್ಕೃತಿಕ ವಲಯ ತನ್ನದೇ ಆದ ಕೊಡುಗೆಯನ್ನು ಸಲ್ಲಿಸಿದ್ದು, ಇಂದಿಗೂ ಸಹ ಚಿಕಿತ್ಸಕ ಗುಣದ ಸಂವೇದನಾಶೀಲ ಅಭಿವ್ಯಕ್ತಿಗೆ ಸಾಕ್ಷಿಯಾಗಿದೆ. ಚಿಕಿತ್ಸಕ ಗುಣದ ಸಾಹಿತ್ಯ ಮತ್ತು ರಂಗಪ್ರಯೋಗಗಳು ರಾಜ್ಯದ ತಳಸಮುದಾಯಗಳ ನಡುವೆ ಪ್ರವೇಶಿಸಿರುವುದೇ ಅಲ್ಲದೆ ಅಲ್ಲಿರಬಹುದಾದ ಅನಿಷ್ಟಗಳನ್ನು ಹೋಗಲಾಡಿಸಲು ನಿರಂತರ ಪ್ರಯತ್ನ ಮಾಡಿವೆ.
ಆದರೆ ಸಾಹಿತ್ಯ-ಸಾಂಸ್ಕೃತಿಕ ವಲಯವು ಪ್ರಭುತ್ವದ ಹಿಡಿತದಿಂದ, ಆಳ್ವಿಕೆಯ ಕೇಂದ್ರಗಳಿಂದ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿಫಲವಾಗುತ್ತಲೇ ಬಂದಿದೆ. ಪ್ರಶಸ್ತಿ ಸಮ್ಮಾನಗಳ ಹಂಬಲ, ಅಧಿಕಾರ ಕೇಂದ್ರಗಳ ಸಾಮೀಪ್ಯ ಮತ್ತು ಸಾಂಗತ್ಯದ ಹಪಹಪಿ, ತನ್ಮೂಲಕ ಆಯಾ ಜಾತಿ-ಸಮುದಾಯಗಳ ನಡುವೆ ಒಂದು ಸಾಮಾಜಿಕ ಸ್ಥಾನಮಾನವನ್ನು ಗಳಿಸುವ ಮಹತ್ವಾಕಾಂಕ್ಷೆಯೇ ಅಕ್ಷರ ಲೋಕದ ಪರಿಚಾರಕರ ಸ್ವಂತಿಕೆ ಮತ್ತು ಸ್ವಾವಲಂಬಿ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತದೆ. ಅಧಿಕಾರ ರಾಜಕಾರಣದ ಭ್ರಷ್ಟ ಪರಂಪರೆಯ ಬೇರುಗಳು ಸಾಂಸ್ಕೃತಿಕ-ಶೈಕ್ಷಣಿಕ ಜಗತ್ತಿನ ಒಳಪದರಗಳನ್ನೂ ಕಲುಷಿತಗೊಳಿಸಿರುವುದರಿಂದ ವಿಶ್ವವಿದ್ಯಾಲಯಗಳ ಉನ್ನತ ಸ್ಥಾನಗಳಿಂದ ಹಿಡಿದು ಅಕಾಡೆಮಿ-ಪ್ರಾಧಿಕಾರಗಳ ಅಧಿಕಾರಯುತ ಸ್ಥಾನಗಳವರೆಗೂ ಎಲ್ಲವೂ ಸಹ ಆಧಿಪತ್ಯದ ಕೇಂದ್ರ ಬಿಂದುಗಳಾಗಿ ಪರಿಣಮಿಸಿವೆ.
ಈ ನೈತಿಕ ಭ್ರಷ್ಟತೆ ಮತ್ತು ಬೌದ್ಧಿಕ ಅಪ್ರಾಮಾಣಿಕತೆಯೇ ಸಾಂಸ್ಕೃತಿಕ ವಲಯದಲ್ಲಿ ಸ್ಥಾನ-ಮಾನ-ಸಮ್ಮಾನಗಳ ಒಂದು ಹೊಸ ಜಗತ್ತನ್ನೇ ಸೃಷ್ಟಿಸಿರುವುದು ಒಪ್ಪಲೇಬೇಕಾದ ಸತ್ಯ. ಇದರ ಮೂಲ ಕಾರಣಗಳನ್ನು ಶೋಧಿಸುವುದಕ್ಕಿಂತಲೂ ಹೆಚ್ಚಾಗಿ ನಮ್ಮನ್ನು ಕಾಡಬೇಕಿರುವುದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇರುವ ಫಲಾಕಾಂಕ್ಷಿಗಳ ದಂಡು ಮತ್ತು ಅದರ ಹಿಂದಿನ ಸಾಂಸ್ಥಿಕ ಹಿತಾಸಕ್ತಿಗಳು. ಇಲ್ಲಿ ಬಲಿಯಾಗಿರುವುದು ನೈಜ ಸಾಂಸ್ಕೃತಿಕ ಮೌಲ್ಯಗಳು. ರಾಜ್ಯೋತ್ಸವದಿಂದ ಹಿಡಿದು ಅಕಾಡೆಮಿಗಳವರೆಗೆ ಪ್ರಶಸ್ತಿಗಳಿಗಾಗಿ ಅರ್ಜಿ ಹಾಕುವ ಒಂದು ಪರಂಪರೆ ಎಷ್ಟು ವ್ಯಾಪಕವಾಗಿದೆ ಎಂದರೆ ತಳಮಟ್ಟದ ಸಾಂಸ್ಕೃತಿಕ ನೆಲೆಗಳಲ್ಲೂ ಸಹ ಸಾಹಿತ್ಯಕ ಪ್ರತಿಭೆಯನ್ನು ಗುರುತಿಸಲು ಇದೇ ಮಾದರಿಯನ್ನು ಅನುಸರಿಸಲಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ ಸಾಂಸ್ಕೃತಿಕ ಸಂಘಟನೆಗಳೂ ಸಹ ಮೌಲಿಕ ಸಾಹಿತ್ಯಕ ಅಭಿವ್ಯಕ್ತಿಯನ್ನು ಗುರುತಿಸುವ ಗೊಡವೆಗೆ ಹೋಗದೆ, ಅರ್ಜಿ ಸಲ್ಲಿಸಿ ಸಾಲುಗಟ್ಟಿ ನಿಲ್ಲುವ ವಿಧಾನವನ್ನೇ ಅನುಸರಿಸುತ್ತವೆ.
ಪ್ರಭಾವೀ ವಲಯಗಳ ನೆಲೆಯಲ್ಲಿ
ಸಹಜವಾಗಿಯೇ ಇಲ್ಲಿ ಫಲಾಕಾಂಕ್ಷಿಗಳ ಸಾಮಾಜಿಕ ಪ್ರಾಬಲ್ಯ, ಆರ್ಥಿಕ ಕ್ಷಮತೆ ಅಥವಾ ಸಾಮುದಾಯಿಕ ಅಸ್ತಿತ್ವದ ನೆಲೆಗಳು ಪ್ರಧಾನವಾಗುತ್ತವೆ. ತಳಸಮಾಜದ ಸಾಂಸ್ಕೃತಿಕ ಸಂಸ್ಥೆಗಳೂ ಸಹ ಅಕ್ಷರ ಲೋಕದ ಸಾಮಗ್ರಿಗಳ ಮೌಲ್ಯಯುತ ಪರಾಮರ್ಶೆಗೆ ತೆರೆದುಕೊಳ್ಳದೆ ಅಸ್ಮಿತೆಯ ನೆಲೆಯಲ್ಲಿ ಪ್ರಶಸ್ತಿ-ಸಮ್ಮಾನಗಳನ್ನು ನಿರ್ಧರಿಸುವುದರಿಂದ ಅಸಂಖ್ಯಾತ ಎಲೆಮರೆಕಾಯಿಗಳು ಕಾಲಕ್ರಮೇಣ ಒಣಗಿಹೋಗುತ್ತವೆ. ಈ ವಿದ್ಯಮಾನದ ಒಂದು ವಿರಾಟ್ ಸ್ವರೂಪವನ್ನು ನಾವು ವಿಶಾಲ ನೆಲೆಯಲ್ಲಿ ಪ್ರಸ್ತುತ ಸಾಂಸ್ಕೃತಿಕ ಬಿಕ್ಕಟ್ಟಿನಲ್ಲಿ ಕಾಣಬಹುದು. ಇಂದು ಒಂದು ರಾಜಕೀಯ ಪಕ್ಷದ ಅಧಿಕಾರ ಪೀಠಗಳ ಕೈಕಟ್ಟಿ ಕುಳಿತ ಸಾಹಿತ್ಯಕ-ಸಾಂಸ್ಕೃತಿಕ ಪರಿಚಾರಕರು ನಮಗೆ ವಿನಮ್ರತೆಯ ಪ್ರತೀಕವಾಗಿ ಕಾಣಬಹುದು. ಆದರೆ ಈ ಸಾಂಸ್ಕೃತಿಕ ಕೂಟದ ಹಿಂದೆ ಆಯಕಟ್ಟಿನ ಸ್ಥಾನಗಳಿಗಾಗಿ, ಅಧಿಕಾರಯುತ ಹುದ್ದೆಗಳಿಗಾಗಿ, ಪ್ರತಿಷ್ಠಿತ ಪದವಿ ಪುರಸ್ಕಾರಗಳಿಗಾಗಿ ಇದೇ ರೀತಿ ಕೈಕಟ್ಟಿ ನಿಂತ ಒಂದು ಪರಂಪರೆಯೂ ನಮ್ಮಲ್ಲಿರುವುದನ್ನು ಮರೆಯುವಂತಿಲ್ಲ.
ಇಲ್ಲಿ ಇವರೇಕೆ ಹೀಗೆ ಎಂಬ ವ್ಯಕ್ತಿನಿಷ್ಠ ಪ್ರಶ್ನೆಗಿಂತಲೂ ಇದೇಕೆ ಹೀಗೆ ಎಂಬ ವಸ್ತುನಿಷ್ಠ ಜಿಜ್ಞಾಸೆ ನಮ್ಮನ್ನು ಕಾಡಬೇಕಿದೆ. ಭಾರತದ ಸಾಂಸ್ಕೃತಿಕ ವಲಯವು ಯಾವ ಕಾಲಘಟ್ಟದಲ್ಲಾದರೂ ರಾಜಕೀಯ ಪ್ರಭಾವಳಿಯಿಂದ ಮುಕ್ತವಾಗಿದ್ದುಂಟೇ ಎಂದು ಪ್ರಶ್ನಿಸಿಕೊಂಡಾಗ ನಿರಾಸೆಯಾಗುವುದೇ ಹೆಚ್ಚು. ಅಧಿಕಾರ ರಾಜಕಾರಣವು ತನ್ನ ರಾಜಕೀಯ ಪ್ರಾಬಲ್ಯ ಹಾಗೂ ಸಾಮಾಜಿಕ ಪಾರಮ್ಯವನ್ನು ಸಂರಕ್ಷಿಸುವ ಸಲುವಾಗಿ ಸಾಂಸ್ಕೃತಿಕ ಜಗತ್ತಿನ ಎಲ್ಲ ಮೂಲೆಗಳಲ್ಲೂ ತನ್ನದೇ ಆದ ಪ್ರಭಾವಿ ವಲಯಗಳನ್ನು ಸೃಷ್ಟಿಸುತ್ತಲೇ ಬಂದಿರುವುದು ಸ್ವತಂತ್ರ ಭಾರತದ ಲಕ್ಷಣ. ರಾಜಕೀಯ ಪಕ್ಷಗಳ ಸೈದ್ಧಾಂತಿಕ ನಿಲುವುಗಳು ಅಥವಾ ಸಂದರ್ಭೋಚಿತ ತಾತ್ವಿಕ ಪ್ರತಿಪಾದನೆಗಳು ಸಾಂಸ್ಕೃತಿಕ ಲೋಕದ ಸ್ವಾಯತ್ತತೆಯ ಮೇಲೆ ಪ್ರಹಾರ ನಡೆಸಿರುವುದನ್ನು ಪಕ್ಷಾತೀತವಾಗಿ ಎಲ್ಲ ಕಾಲಘಟ್ಟಗಳಲ್ಲೂ ಗುರುತಿಸಬಹುದು. ಈ ಪ್ರಹಾರದ ದಿಕ್ಕುದೆಸೆ ಅಥವಾ ಪ್ರಮಾಣದಲ್ಲಿ ವ್ಯತ್ಯಾಸ ಕಾಣಬಹುದೇ ಹೊರತು, ಅಂತಿಮ ಗುರಿಯಲ್ಲಿ ತೃಣಮಾತ್ರದ ವ್ಯತ್ಯಾಸವೂ ಕಾಣಲಾಗುವುದಿಲ್ಲ.
ಇದನ್ನು ಓದಿ : ಸಾಂಸ್ಕೃತಿಕ ಲೋಕವೂ ರಾಜಕೀಯ ಸಂದಿಗ್ಧತೆಗಳೂ
ಅಂದರೆ ದೇಶದ ಆಡಳಿತ ವ್ಯವಸ್ಥೆಯನ್ನು ನಿರ್ವಹಿಸುವ ಅಧಿಕಾರ ಕೇಂದ್ರಗಳು, ಇದನ್ನು ನಿಯಂತ್ರಿಸುವ ಅಧಿಕಾರ ರಾಜಕಾರಣದ ಚೌಕಟ್ಟುಗಳು ತಮ್ಮ ರಾಜಕೀಯ ಅಸ್ತಿತ್ವವನ್ನು ಸುರಕ್ಷಿತವಾಗಿರಿಸಿಕೊಳ್ಳುವ ಸಲುವಾಗಿಯೆ ಸಾಂಸ್ಕೃತಿಕ ಜಗತ್ತಿನ ಮೇಲೆ ಸವಾರಿ ಮಾಡಲಿಚ್ಚಿಸುತ್ತವೆ. ಸಾಂಸ್ಥಿಕ ನೆಲೆಯಲ್ಲಿ ಸಾಂಸ್ಕೃತಿಕ ಧ್ವನಿಗೆ ಸ್ವತಂತ್ರ ಅಸ್ತಿತ್ವವನ್ನು ನೀಡುವಂತೆ ಮೇಲ್ನೋಟಕ್ಕೆ ಕಂಡುಬಂದರೂ, ಆಂತರಿಕವಾಗಿ ಈ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಸೂತ್ರಗಳನ್ನು ಅಧಿಕಾರ ರಾಜಕಾರಣ ಹೆಣೆದಿರುತ್ತದೆ. ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಈ ಸೂತ್ರಗಳ ಮೊದಲ ಕೊಂಡಿ ಬಂಡವಾಳ ಮತ್ತು ಬಂಡವಾಳಶಾಹಿಯ ಸುಪರ್ದಿಯಲ್ಲಿರುತ್ತದೆ. ವರ್ತಮಾನ ಭಾರತದ ಕಾರ್ಪೋರೇಟ್ ಆಡಳಿತದಲ್ಲಿ ಇದು ಮಾರುಕಟ್ಟೆಯ ವಶವಾಗಿರುತ್ತದೆ. ಸರ್ಕಾರದ ಅನುದಾನ, ಸಹಾಯಧನ ಅಥವಾ ಆರ್ಥಿಕ ನೆರವು ಇತ್ಯಾದಿ ಹಾದಿಗಳಲ್ಲಿ ಪ್ರಧಾನವಾಗಿ ಮಾರುಕಟ್ಟೆ ಶಕ್ತಿಗಳು ಕ್ರಿಯಾಶೀಲವಾಗಿರುತ್ತವೆ.
ಸಾಂಸ್ಕೃತಿಕ ಉತ್ತರದಾಯಿತ್ವ
ಹಾಗಾಗಿಯೇ ಸಾಂಸ್ಕೃತಿಕ ಜಗತ್ತನ್ನು ಪ್ರತಿನಿಧಿಸುವ ಸಾಂಸ್ಥಿಕ ನೆಲೆಗಳಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಅವಕಾಶವನ್ನೇ ನೀಡಲಾಗುವುದಿಲ್ಲ. ಈ ಸಂಸ್ಥೆಗಳನ್ನು ನಿರ್ವಹಿಸಲು ಬೇಕಾದ ಬೌದ್ಧಿಕ ಬಂಡವಾಳವನ್ನು ಒದಗಿಸಲು ಆಡಳಿತಾರೂಢ ಸರ್ಕಾರಗಳು ತಮ್ಮ ಸೈದ್ಧಾಂತಿಕ-ತಾತ್ವಿಕ ನೆಲೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವಂತಹ ವ್ಯಕ್ತಿಗಳನ್ನೇ ಆಯ್ಕೆ ಮಾಡುತ್ತವೆ. ಈ ಆಯ್ಕೆ ಪ್ರಕ್ರಿಯೆಯ ಹಿಂದೆ, ತೆರೆಮರೆಯಲ್ಲಿರುವ ಪ್ರಭಾವಿ ವಲಯವನ್ನು ಸಂಪರ್ಕಿಸದ ಹೊರತು, ಯಾವುದೇ ಸಂಸ್ಕೃತಿ-ಚಿಂತಕ ವ್ಯಕ್ತಿಗಳಿಗೆ, ಸಾಂಸ್ಥಿಕ ಚೌಕಟ್ಟಿನೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ತನ್ನ ಪ್ರವೇಶಕ್ಕೆ ಅವಕಾಶವಿಲ್ಲದ ಸಾಂಸ್ಥಿಕ ಜಗತ್ತಿನಲ್ಲಿ ಅಧಿಕಾರ ರಾಜಕಾರಣವು ತನ್ನ ಪರಿಚಾರಕರ ಮೂಲಕ ಒಳಪ್ರವೇಶ ಪಡೆಯುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸ್ವತಂತ್ರ ಸಂಸ್ಥೆ ಇದರ ಒಂದು ಜ್ವಲಂತ ನಿದರ್ಶನ . ಆದ್ದರಿಂದಲೇ ಕಸಾಪ ಚುನಾವಣೆಗಳಲ್ಲೂ ಸಹ ಅಧಿಕಾರ ರಾಜಕಾರಣವನ್ನು ನಿರ್ದೇಶಿಸುವ ಬಂಡವಾಳ , ಜಾತಿ ಇತ್ಯಾದಿಗಳೇ ಪ್ರಭಾವ ಬೀರುತ್ತವೆ.
ಈ ಎಲ್ಲ ಸಾಂಸ್ಕೃತಿಕ ವಲಯಗಳನ್ನು ಮುನ್ನಡೆಸಬೇಕಾದ ಬೌದ್ಧಿಕ ಸಾಮಗ್ರಿಗಳು ತಯಾರಾಗುವುದು ನಮ್ಮ ವಿಶ್ವವಿದ್ಯಾಲಯಗಳಲ್ಲಿ ಅಥವಾ ಅತ್ಯುನ್ನತ ಶೈಕ್ಷಣಿಕ ಸಂಸ್ಥೆಗಳಲ್ಲಿ. ಈ ಸಂಸ್ಥೆಗಳಿಂದ ಸಂಶೋಧನೆಗಳನ್ನು ಪೂರೈಸಿ, ಪಿಎಚ್‌ಡಿ ಪದವಿಗಳನ್ನು ಪಡೆದು, ಕಾವ್ಯಮೀಮಾಂಸೆ, ಸಾಹಿತ್ಯಾಧ್ಯಯನ, ಸಂಗೀತಾಭ್ಯಾಸ, ಕಲಾನೈಪುಣ್ಯ, ರಂಗ ಕೌಶಲ್ಯ ಇತ್ಯಾದಿ ಕ್ಷೇತ್ರಗಳಲ್ಲಿ ಪರಿಣತಿ ಪಡೆದು ವಿಶಾಲ ಸಮಾಜವನ್ನು ಪ್ರವೇಶಿಸುವ ಒಂದು ಪೀಳಿಗೆಗೆ ಸಾಂಸ್ಥಿಕ ಸ್ವಾತಂತ್ರ್ಯ-ಸ್ವಾಯತ್ತತೆಯ ಪರಿಕಲ್ಪನೆ ಕನಿಷ್ಠ ಮಟ್ಟದಲ್ಲಾದರೂ ಇರಬೇಕಲ್ಲವೇ ? ತಾವು ಮಿದುಳಿನಲ್ಲಿ ತುಂಬಿಕೊಂಡ ಸಾಂಸ್ಕೃತಿಕ ಚಿಂತನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಿಸುವ ಹಾದಿಯಲ್ಲಿ, ನಿಸ್ವಾರ್ಥತೆ, ನಿಸ್ಪೃಹತೆ, ಉತ್ತರದಾಯಿತ್ವದ ಸೇವಾ ಮನೋಭಾವದಿಂದ ತಳಮಟ್ಟದ ಸಮಾಜದೊಳಗೆ ಒಂದಾಗಿ ಅಲ್ಲಿನ ಸಾಂಸ್ಕೃತಿಕ ಸಂವೇದನೆಗಳೊಂದಿಗೆ ತಮ್ಮನ್ನೂ ಗುರುತಿಸಿಕೊಳ್ಳುವ ಬೌದ್ಧಿಕ ವ್ಯವಧಾನವನ್ನು ಈ ಪೀಳಿಗೆಯವರಲ್ಲಿ ತುಂಬಬೇಕಲ್ಲವೇ ? ಇಲ್ಲಿ ಅವಶ್ಯವಾಗಿ ಬುದ್ಧಿಮತ್ತೆ-ಜ್ಞಾನ ಸಂಗ್ರಹಣೆಗಿಂತಲೂ ಮುಖ್ಯವಾಗಿ ಬೇಕಾಗುವುದು ಒಳಗೊಳ್ಳುವಿಕೆಯ ಧೋರಣೆ, ಸಾಮಾಜಿಕ ಅರಿವು ಮತ್ತು ತಳಸಮಾಜದೊಡನೆ ಗುರುತಿಸಿಕೊಳ್ಳುವ ಮನಸ್ಥಿತಿ.
ಈ ಮನಸ್ಥಿತಿಯನ್ನು ಇಂದಿನ ಯುವ ಸಮಾಜದಲ್ಲಿ ಎಷ್ಟು ಪ್ರಮಾಣದಲ್ಲಿ ಕಾಣಲು ಸಾಧ್ಯ ? ಕ್ಷೇತ್ರ ಕಾರ್ಯವಿಲ್ಲದೆಯೇ ಸಂಶೋಧನೆ ನಡೆಸುವ ಅವಕಾಶಗಳನ್ನು ಆಧುನಿಕ ತಂತ್ರಜ್ಞಾನ ಕಲ್ಪಿಸಿಕೊಟ್ಟಿದೆ. ಅಧ್ಯಯನದ ಅವಶ್ಯಕತೆಯೇ ಇಲ್ಲದೆ ಡಾಕ್ಟರೇಟ್ ಪಡೆಯುವ ಅವಕಾಶವನ್ನು ಕಾರ್ಪೋರೇಟ್ ಮಾರುಕಟ್ಟೆ ಒದಗಿಸಿದೆ. ಸಾಹಿತ್ಯಕ ಮೀಮಾಂಸೆಗಳ ಪರಿಚಯವೇ ಇಲ್ಲದೆ ಉನ್ನತ ಪ್ರಶಸ್ತಿ ಸಮ್ಮಾನಗಳನ್ನು ಬಾಚಿಕೊಳ್ಳುವ ಅವಕಾಶವನ್ನು ಅಸ್ಮಿತೆಯ ರಾಜಕಾರಣ ಕಲ್ಪಿಸಿಕೊಟ್ಟಿದೆ. ಸಾವಿರಾರು ಕವಿತೆಗಳು ಹುಟ್ಟುತ್ತಿವೆ ಆದರೆ ಕಾವ್ಯ ಸೃಷ್ಟಿಯಾಗುತ್ತಿದೆಯೇ ? ಕತೆ-ಕಾದಂಬರಿಗಳು ಹೇರಳವಾಗಿ ಪ್ರಕಟವಾಗುತ್ತಿವೆ. ಆದರೆ ಸೃಜನಶೀಲ ಸಾಹಿತ್ಯದ ಕುರುಹಾದರೂ ಕಾಣಲು ಸಾದ್ಯವಾಗುತ್ತಿದೆಯೇ ? ಈ ಸೃಜನಶೀಲತೆಯ ಕೃಷಿಗೆ ಅತ್ಯವಶ್ಯವಾದ ಸಂವೇದನೆಯ ನೆಲೆಗಳೆಲ್ಲವನ್ನೂ ಅಧಿಕಾರ ರಾಜಕಾರಣ ಮತ್ತು ಕಾರ್ಪೋರೇಟ್ ಬಂಡವಾಳ ಬಹುಮಟ್ಟಿಗೆ ಶಿಥಿಲಗೊಳಿಸಿಬಿಟ್ಟಿವೆ.
ಹಾಗಾಗಿಯೇ ನಮ್ಮ ನಡುವಿನ 21ನೆಯ ಶತಮಾನದ ಸಾಹಿತ್ಯ ತಳಸಮಾಜದ ಬಿಕ್ಕಟ್ಟುಗಳಿಗೆ ಸ್ಪಂದಿಸಲಾಗುತ್ತಿಲ್ಲ. ಕಳೆದ ಎರಡು-ಮೂರು ದಶಕಗಳಲ್ಲಿ ರಾಜ್ಯವು ಕಂಡಿರುವ ಭೌತಿಕ ಹಿಂಸೆ, ಕೋಮುವಾದ, ಮತೀಯತೆ, ಮತಾಂಧತೆ, ಮಹಿಳಾ ದೌರ್ಜನ್ಯ, ಕಾರ್ಮಿಕ ಶೋಷಣೆ, ಜಾತಿ ತಾರತಮ್ಯ, ಅಸ್ಪೃಶ್ಯತೆ ಹಾಗೂ ಬೌದ್ಧಿಕ ಅವನತಿಯ ಸುತ್ತ ಸೃಜನಶೀಲ ಸಾಹಿತ್ಯ ಕೃತಿಗಳು ಏಕೆ ಹೊರಬರುತ್ತಿಲ್ಲ ? ಕೋಲಾರ ಚಿನ್ನದಗಣಿಯಿಂದ ಸಂಡೂರು ಗಣಿಗಳವರೆಗೆ ಹರಡಿರುವ ಬಂಡವಾಳ-ಮಾರುಕಟ್ಟೆಯ ಶೋಷಣೆಯಾಗಲೀ, ಕೋವಿದ್ ಸಮಯದಿಂದಾಚೆಗೂ ಕಾಣಬಹುದಾದ ವಲಸೆ ಕಾರ್ಮಿಕರ ನಿತ್ಯಬವಣೆಯಾಗಲೀ, ತಮ್ಮ ಶತಮಾನಗಳ ನೆಲೆಯನ್ನೇ ಕಳೆದುಕೊಂಡು ಅಬ್ಬೇಪಾರಿಗಳಾಗುತ್ತಿರುವ ಆದಿವಾಸಿಗಳ ಸವಾಲುಗಳಾಗಲೀ, ಶಿಕ್ಷಣ ಉದ್ಯೋಗ ಘನತೆಯ ಜೀವನದಿಂದ ವಂಚಿತರಾಗುತ್ತಲೇ ಇರುವ ತಳಮಟ್ಟದ ದಲಿತ-ಅಲ್ಪಸಂಖ್ಯಾತರಾಗಲೀ, ನಿರಂತರ ಶೋಷಣೆ-ಅತ್ಯಾಚಾರ-ದೌರ್ಜನ್ಯಕ್ಕೊಳಗಾಗುತ್ತಿರುವ ಮಹಿಳಾ ಸಂಕುಲವಾಗಲೀ ಏಕೆ ಸೃಜನಶೀಲ ಸಾಹಿತ್ಯದ ಪುಟಗಳನ್ನು ಅಲಂಕರಿಸುತ್ತಿಲ್ಲ ? ಇದಕ್ಕೆ ಉತ್ತರದಾಯಿ ಯಾರು ? ಈ ಪ್ರಶ್ನೆಗಳು ನಮ್ಮನ್ನು ಕಾಡಬೇಕಿದೆ.
ಕೊನೆಯದಾಗಿ
ಪ್ರಸ್ತುತ ಬೆಳವಣಿಗೆಗಳ ಅಧಿಕಾರ ರಾಜಕಾರಣದ ಭಂಡತನ ಮತ್ತು ಅವಕಾಶವಾದಿ ಸಾಂಸ್ಕೃತಿಕ ಲೋಕದ ನಿರ್ಲಜ್ಜ ಮೌನ ಇವೆರಡಕ್ಕೂ ಇಲ್ಲಿ ಉತ್ತರ ದೊರೆಯುತ್ತದೆ. ಸಮಾಜವನ್ನು ತಳಮಟ್ಟದವರೆಗೂ ಪ್ರಭಾವಿಸುವ ಮಾರುಕಟ್ಟೆ ಆರ್ಥಿಕತೆಯಲ್ಲಿ ಸಾಂಸ್ಕೃತಿಕ ವಲಯವನ್ನೂ ಸೇರಿದಂತೆ ಎಲ್ಲ ಸಾಮಾಜಿಕ ನೆಲೆಗಳನ್ನೂ ಸರಕುಗಳಂತೆಯೇ ಪರಿಗಣಿಸಲಾಗುತ್ತದೆ. ಜನಪ್ರತಿನಿಧಿಗಳನ್ನು ಖರೀದಿಸುವಂತೆಯೇ ಸಾಂಸ್ಕೃತಿಕ ನೆಲೆಗಳನ್ನೂ ಕೈವಶ ಮಾಡಿಕೊಳ್ಳುವ ಬಂಡವಾಳಶಾಹಿಯು ಅಕ್ಷರ ಲೋಕದ ಮೇಲೆ ತನ್ನ ಪೈಶಾಚಿಕ ಹಿಡಿತ ಸಾಧಿಸಲೆಂದೇ ಪುಸ್ತಕ ಜಗತ್ತನ್ನು ಬಹುದೊಡ್ಡ ಮಾರುಕಟ್ಟೆಯನ್ನಾಗಿ ಮಾಡಿರುವುದು ಕಣ್ಣೆದುರಿನ ದುರಂತ. ಅಧಿಕಾರ ರಾಜಕಾರಣವು ಸಾಹಿತ್ಯಕ ಸೃಜನಶೀಲತೆಯನ್ನು ಶಿಥಿಲಗೊಳಿಸುವ ಸಲುವಾಗಿಯೇ ಮಾರುಕಟ್ಟೆಯನ್ನು ಆಶ್ರಯಿಸುತ್ತದೆ. ಈ ಸಮ್ಮಿಶ್ರ ಆಳ್ವಿಕೆಯಲ್ಲಿ ತಮ್ಮದೇ ಆದ ನೆಲೆ ಉಳಿಸಿಕೊಳ್ಳಲು ಸಾಂಸ್ಕೃತಿಕ ಜಗತ್ತಿನ ಪರಿಚಾರಕರು ಕೆಲವೊಮ್ಮೆ “ ಕೈ ಕಟ್ ಬಾಯ್ಮುಚ್ ” ಸೂತ್ರವನ್ನು ಅನುಸರಿಸಬೇಕಾಗುತ್ತದೆ. ಇದನ್ನು ಧಿಕ್ಕರಿಸುವವರು ಶಾಶ್ವತವಾಗಿ ಹೊರಗುಳಿಯಬೇಕಾಗುತ್ತದೆ.
ವರ್ತಮಾನ ಭಾರತದ ಯುವ ತಲೆಮಾರು ಸಾಂಸ್ಕೃತಿಕ ಸ್ವಂತಿಕೆ, ಸ್ವಾತಂತ್ರ್ಯ, ಸ್ವಾಯತ್ತತೆ ಹಾಗೂ ಸೃಜನಶೀಲತೆಯನ್ನು ಉಳಿಸಿಕೊಳ್ಳಬೇಕಾದರೆ ಈ ಎಲ್ಲ ವಿದ್ಯಮಾನಗಳು ಸವಾಲಾಗಿ ನಿಲ್ಲುತ್ತವೆ. ಇದನ್ನು ಎದುರಿಸುವ ಕ್ಷಮತೆಯನ್ನು ಮಿಲೆನಿಯಂ ಮಕ್ಕಳಲ್ಲಾದರೂ ಬೆಳೆಸುವ ನೈತಿಕ ಜವಾಬ್ದಾರಿ ಹಿರಿಯ-ವಯಸ್ಕ ತಲೆಮಾರಿನ ಸಾಂಸ್ಕೃತಿಕ ಚಿಂತಕರ ಮೇಲಿದೆ. ಅಸ್ಮಿತೆಗಳಿಂದಾಚೆ ನಿಂತು ಯೋಚಿಸಬಹುದಾದರೆ ಇದು ಅಸಾಧ್ಯವೇನಲ್ಲ.
ಇದನ್ನು ನೋಡಿ : ನಾಟಕ | ದೇವರ ಹೆಣ – ಕಥೆ : ಕುಂ. ವೀರಭದ್ರಪ್ಪ, ನಿರ್ದೇಶನ : ವಸಂತ ಗಂಗೇರ್ Janashakthi Media