ಕ್ಯೂಬಾದ ಜುಲೈ 11 ಪ್ರತಿಭಟನೆಗಳಿಗೇನು ಕಾರಣ?

ಜುಲೈ 11ರಂದು ಕ್ಯೂಬಾದಲ್ಲಿ ಸಾವಿರಾರು ಜನ ಬೀದಿಗಿಳಿದು ಸರಕಾರದ ವಿರುದ್ಧ ಪ್ರತಿಭಟನೆ ಮಾಡಿದರು ಎಂದು ಜಾಗತಿಕ ಕಾರ್ಪೊರೆಟ್ ಮಾಧ್ಯಮಗಳು ವರದಿ ಮಾಡಿದವು. ಸರಕಾರದ, ವ್ಯವಸ್ಥೆಯ ವಿರುದ್ಧ ಮತ್ತು ಸರಕಾರಗಳ ಬದಲಾವಣೆಯ ಅಗತ್ಯವಿದೆ ಎಂಬ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು. ಪ್ರತಿಭಟನೆಗಳನ್ನು ದಮನಗಳ ಮೂಲಕ ನಿಯಂತ್ರ‍್ರಿಸಲಾಯಿತು. ಇದು 1959ರ ಕ್ರಾಂತಿಯ ನಂತರ ಮೊದಲ ಬಾರಿ ಹೀಗಾಗಿದೆ. ಕ್ಯಾಸ್ಟ್ರೋಗಳ ಅಥವಾ ಕ್ರಾಂತಿ ನಡೆಸಿದ ಪೀಳಿಗೆಯ ಪ್ರಭಾವಶಾಲಿ ನಾಯಕತ್ವವಿಲ್ಲದೆ ಕ್ಯೂಬನ್ ಕಮ್ಯುನಿಸ್ಟ್ ಸರಕಾರ ನಡೆಯಲಾರದು, ಬಿದ್ದು ಹೋಗುತ್ತದೆ. ಈಗಿನ ನಾಯಕತ್ವ ಕ್ಯೂಬಾದ ಸಮಸ್ಯೆಗಳನ್ನು ಸವಾಲುಗಳನ್ನು ಪರಿಹರಿಸಲಾಗದು. ಅದು ತನ್ನ ನಿಯಂತ್ರಣ ಕಳೆದುಕೊಳ್ಳುವ ಭಯದಿಂದ ವಿದೇಶೀ ಮಾನವೀಯ ಮಧ್ಯಪ್ರವೇಶವನ್ನು ನಿರಾಕರಿಸುತ್ತಿದೆ. ಅಮೆರಿಕದ ಮಾನವೀಯ ಮಧ್ಯಪ್ರವೇಶ ಅಗತ್ಯವಿದೆ, ಎಂದೆಲ್ಲ ಮಾಧ್ಯಮಗಳು ವರದಿ ಮಾಡಿದವು. ಈ ವರದಿಗಳು ಎಂದಿನಂತೆ ಅರೆ ಸತ್ಯಗಳು, ಹಸಿಸುಳ್ಳುಗಳು, ಹುಸಿ ನಿರೂಪಣೆ, ಅವಾಸ್ತವಿಕ ವಿಶ್ಲೇಷಣೆಗಳ ಮಿಶ್ರಣವಾಗಿದ್ದವು.

ಹಲವು ಕಡೆ ಜನ ಬೀದಿಗಿಳಿದು ಹಲವು ಸಮಸ್ಯೆಗಳ ಕುರಿತು ಪ್ರತಿಭಟನೆ ಮಾಡಿದ್ದು ಆಕ್ರೋಶ ವ್ಯಕ್ತಪಡಿಸಿದ್ದು ನಿಜ. ಆದರೆ ಅವರ ಘೋಷಣೆಗಳು ಆಯಾ ಪ್ರದೇಶದ ನಿರ್ದಿಷ್ಟ ಸಮಸ್ಯೆಗಳಿಗಷ್ಟೇ ಸೀಮಿತವಾಗಿದ್ದವು. ಅಮೆರಿಕ ಇತ್ತೀಚೆಗೆ ತೈಲ, ಮತ್ತಿತರ ಅಗತ್ಯ ವಸ್ತುಗಳ ಹಡುಗುಗಳು ಕ್ಯೂಬಾಕ್ಕೆ ಹೋಗುವುದನ್ನು ತಡೆಯುವುದನ್ನು ಇನ್ನಷ್ಟು ಬಿಗಿಗೊಳಿಸಿದ್ದರಿಂದ, ಹಲವು ಕಡೆ ಆಹಾರ, ಔಷಧಿ, ವಿದ್ಯುತ್ ಕೊರತೆಗಳು ಕಂಡು ಬಂದವು.  ವಿದ್ಯುತ್ ಕೊರತೆಯಿಂದಾಗಿ ಆಸ್ಪತ್ರೆ, ಅಗತ್ಯ ವಸ್ತು ಉತ್ಪಾದನೆಯ ಪ್ರದೇಶಗಳಿಗೆ ಆದ್ಯತೆ ಕೊಟ್ಟು ವಸತಿ ಪ್ರದೇಶಗಳಲ್ಲಿ ದೀರ್ಘ ಕಾಲದ ವಿದ್ಯುತ್ ಕಡಿತಗಳನ್ನು ಮಾಡಿದ್ದರಿಂದ ಈ ಪ್ರತಿಭಟನೆ, ಆಕ್ರೋಶ ಹೊಮ್ಮಿತ್ತು. ಆದರೆ ಹೆಚ್ಚಿನ ಈ ಪ್ರತಿಭಟನೆಗಳಲ್ಲಿ ಸರಕಾರದ, ವ್ಯವಸ್ಥೆಯ ವಿರುದ್ಧ ಮತ್ತು ಸರಕಾರಗಳ ಬದಲಾವಣೆಯ ಅಗತ್ಯವಿದೆ ಎಂಬ ಘೋಷಣೆಗಳನ್ನು ಕೂಗಿರಲಿಲ್ಲ. ಕೆಲವು ಕಡೆ ಮಾತ್ರ ಇಂತಹ ಘೋಷಣೆಗಳು ಕೇಳಿ ಬಂದವು. ಆದರೆ ಇಂತಹ ಪ್ರತಿಭಟನೆಗಳಲ್ಲಿ ಸರಕಾರದ ವ್ಯವಸ್ಥೆಯ ಈಗಾಗಲೇ ಗೊತ್ತಿರುವ ವಿರೋಧಿಗಳು ಸಂಘಟಿಸಿದ ಪ್ರತಿಭಟನೆಗಳಲ್ಲಿ ಮಾತ್ರ ಇಂತಹ ಘೊಷಣೆಗಳು ಕೇಳಿ ಬಂದವು. ಈ ಸಂಘಟಕರು ಅಮೆರಿಕ ‘ಮಾನವೀಯ ಮಧ್ಯಪ್ರವೇಶ ಮಾಡಬೇಕು’ ಎಂದು ಕರೆ ಕೊಟ್ಟರು. ಇವರು ಹಿಂದಿನಿಂದಲೂ ಅಮೆರಿಕದ ಆರ್ಥಿಕ ದಿಗ್ಬಂಧನಗಳನ್ನು ಬೆಂಬಲಿಸಿದವರು ಮತ್ತು ಕಮ್ಯುನಿಸ್ಟ್ ಸರಕಾರವನ್ನು ಕಿತ್ತೊಗೆಯಲು ದಿಗ್ಬಂಧನಗಳು ಅಗತ್ಯ ಎಂದು ವಾದಿಸಿದವರು. ಅಮೆರಿಕದ ಮತ್ತು ಅಂತರ‍್ರಾಷ್ಟ್ರೀಯ ಸಣ್ಣ ಸ್ವತಂತ್ರ ಮಾಧ್ಯಮಗಳು ವರದಿ ಮಾಡಿವೆ.

ಅಧ್ಯಕ್ಷರು ಜನರನ್ನು ಭೇಟಿ ಮಾಡಿ ಸಮಸ್ಯೆ ಆಲಿಸುತ್ತಿರುವುದು

ಜನರ ಪ್ರತಿಭಟನೆಗಳು ನಡೆಯಲಾರಂಭಿಸಿದಂತೆ ಸರಕಾರ ಅವರು ಎದುರಿಸುವ ಸಮಸ್ಯೆಗಳನ್ನು ಆಲಿಸಲು ಸರಕಾರದ ಪ್ರತಿನಿಧಿಗಳ ಹೋದರು. ಸ್ವತಃ ಅಧ್ಯಕ್ಷರೇ ಹಲವು ಕಡೆ ಭೇಟಿ ನೀಡಿದರು. ಮಾತ್ರವಲ್ಲದೆ ಟೆಲಿವಿಷನ್ ಭಾಷಣಗಳ ಮೂಲಕ ಸಮಸ್ಯೆಗಳ ಕಾರಣಗಳನ್ನು ವಿವರಿಸಿ, ಅದಕ್ಕೆ ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ವಿವರಿಸಿದರು. ಅಮೆರಿಕದ ದಿಗ್ಬಂಧನಗಳೇ ಈಗ ಉಲ್ಬಣಗೊಂಡ ಸಮಸ್ಯೆಗಳಿಗೆ ಮೂಲಕಾರಣ. ಅಮೆರಿಕಕ್ಕೆ ಮಾನವೀಯತೆ ಇದ್ದರೆ, ಜಗತ್ತಿನ ಎಲ್ಲ ದೇಶಗಳು ಒಕ್ಕೊರಲಿನಿಂದ ವಿಶ್ವಸಂಸ್ಥೆಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರಕಾರ ಆ ಆರ್ಥಿಕ ದಿಗ್ಬಂಧನಗಳನ್ನು ವಾಪಸು ತೆಗೆದುಕೊಂಡರೆ ಸಾಕು. ಬೇರೆ ಯಾವುದೇ ‘ಮಾನವೀಯ ಮಧ್ಯಪ್ರವೇಶದ ಅಗತ್ಯವಿಲ್ಲ. ಆದರೆ ಅಮೆರಿಕದ ಸರಕಾರದ ಹುನ್ನಾರ ಈ ಪರಿಸ್ಥಿತಿಯನ್ನು ಉಪಯೋಗಿಸಿ ಕ್ಯೂಬಾದಲ್ಲಿರುವ ಅಮೆರಿಕನ್ ಬೆಂಬಲಿಗರ ಮೂಲಕ ‘ಮಾನವೀಯ ಮಧ್ಯಪ್ರವೇಶ’ಕ್ಕೆ ಕರೆ ಕೊಡಿಸಿ ಅದನ್ನು ಮಿಲಿಟರಿ ಮಧ್ಯಪ್ರವೇಶ ಮತ್ತು ಸರಕಾರ/ವ್ಯವಸ್ಥೆಯ ಬದಲಾವಣೆಯತ್ತ ತಿರುಗಿಸುವುದು ಎಂದು ಎಚ್ಚರಿಸಿದರು. ಇಂತಹ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು, ಜನ ಸಹ ಪ್ರತಿಭಟಿಸಬೇಕು. ಅಮೆರಿಕದ ಆರ್ಥಿಕ ದಿಗ್ಬಂಧನಗಳನ್ನು ವಾಪಸು ಪಡೆಯಲು ಒತ್ತಾಯಿಸಬೇಕು ಎಂದು ಕರೆ ಕೊಟ್ಟರು. ಇದಕ್ಕೆ ಸ್ಪಂದಿಸಿ ಹಲವು ಕಡೆ ಸರಕಾರದ ಪರ ಭಾರೀ ಪ್ರದರ್ಶನಗಳು ನಡೆದವು. ಈ ಎಲ್ಲ ವಸ್ತುಸ್ಥಿತಿಯನ್ನು ಕಾರ್ಪೊರೆಟ್ ಮಾಧ್ಯಮಗಳು ವರದಿ ಮಾಡಲಿಲ್ಲ. ಮಾತ್ರವಲ್ಲ, ಕೆಲವು ಸರಕಾರ ಪರ ಪ್ರದರ್ಶನಗಳನ್ನು ಸರಕಾರ-ವಿರೋಧಿ ಪ್ರದರ್ಶನಗಳು ಎಂದು ಬಿಂಬಿಸಿದವು ಎಂದೂ ಅಮೆರಿಕದ ಮತ್ತು ಅಂತರ‍್ರಾಷ್ಟ್ರೀಯ ಸಣ್ಣ ಸ್ವತಂತ್ರ ಮಾಧ್ಯಮಗಳು ವರದಿ ಮಾಡಿವೆ.

ಲ್ಯಾಟಿನ್ ಅಮೆರಿಕದ ಇತರ ಹಲವು ದೇಶಗಳಲ್ಲಿ ಮತ್ತು ಜಗತ್ತಿನಾದ್ಯಂತ ಅಮೆರಿಕದ ‘ಮಗುವಿನ ಹಾಲು ಕಿತ್ತುಕೊಂಡು ಚಿವುಟಿ, ತಾಯಿಯನ್ನು ದೂಷಿಸುವ’ ಈ ತಂತ್ರವನ್ನು ಖಂಡಿಸಿ, ಅಮೆರಿಕದ ಆರ್ಥಿಕ ದಿಗ್ಬಂಧನಗಳನ್ನು ವಾಪಸು ಪಡೆಯಲು ಒತ್ತಾಯಿಸಿ ಪ್ರದರ್ಶನಗಳು ನಡೆದಿವೆ.

Donate Janashakthi Media

Leave a Reply

Your email address will not be published. Required fields are marked *