ವಸಂತರಾಜ ಎನ್ ಕೆ
ಕ್ಯೂಬಾ ಕೋವಿಡ್ ಮಹಾಸೋಂಕಿನ ಮೊದಲ ಅಲೆಯ ಅವಧಿಯಲ್ಲಿ ಅದರ ಉತ್ತಮ ನಿರ್ವಹಣೆಗೆ ಜಗತ್ತಿನ ಗಮನ ಸೆಳೆದಿತ್ತು. ಅದೇ ರೀತಿ ಇತ್ತೀಚಿನ ಕ್ಯೂಬಾದ ಕಮ್ಯುನಿಸ್ಟ್ ಪಕ್ಷದ 8ನೇ ಮಹಾಧಿವೇಶನವು, ‘ಕ್ಯಾಸ್ಟ್ರೋ ಯುಗ’ದ ಕೊನೆ ಮತ್ತು ಹೊಸ ಯುಗದ ಆರಂಭ, ಎಂಬ ಜಾಗತಿಕ ಮಾಧ್ಯಮಗಳು ವರದಿಗಳ ಮೂಲಕ ಮತ್ತೆ ಜಗತ್ತಿನ ಗಮನ ಸೆಳೆದಿತ್ತು. ಈ ಮಹಾಧಿವೇಶನದಲ್ಲಿ ಆದ ಪಕ್ಷದ ನಾಯಕತ್ವದ ಬದಲಾವಣೆಯನ್ನು ಹೀಗೆ ಬಣ್ಣಿಸಲಾಗಿತ್ತು. ಇದು ಮಹತ್ತರ ಚಾರಿತ್ರಿಕ ಬದಲಾವಣೆಗಳನ್ನು ಬಹುತೇಕ ವ್ಯಕ್ತಿಗಳ ಮೇಲೆ ಕೇಂದ್ರೀಕರಿಸಿ ಗುರುತಿಸುವ ಮಾಧ್ಯಮಗಳ ಚಾಳಿಯ ಪರಿಣಾಮ ಇರಬೇಕು. ಇತರ ಕೆಲವು ಮಾಧ್ಯಮಗಳು ಗುರುತಿಸಿದಂತೆ ಕ್ಯೂಬಾದ ಕಮ್ಯುನಿಸ್ಟ್ ಪಕ್ಷದ ನಾಯಕತ್ವವು ‘ಸಿಯೆರಾ ಮಿಸ್ತ್ರಾ ಪೀಳಿಗೆ’ಯ ಕ್ರಾಂತಿಕಾರಿಗಳಿಂದ ಹೊಸ ಪೀಳಿಗೆಯ ಕ್ರಾಂತಿಕಾರಿಗಳಿಗೆ ಬದಲಾಗಿದೆ, ಎಂದು ಅದನ್ನು ಬಣ್ಣಿಸುವುದು ಹೆಚ್ಚು ಸರಿಯಾದೀತು.
ಕ್ಯೂಬಾದ ಸರ್ವಾಧಿಕಾರಿ ಬಾಟಿಸ್ಟಾ ನನ್ನು ಓಡಿಸುವ ಪ್ರಯತ್ನಗಳನ್ನು 1953ರಿಂದ ಆರಂಭಿಸಿ ಅಗಾಧ ಸವಾಲುಗಳನ್ನು ಹಲವು ವೈಫಲ್ಯಗಳ ನಂತರ ಸಿಯೆರಾ ಮಿಸ್ತ್ರಾ ಪರ್ವತ ಶ್ರೇಣಿಯಿಂದ ಫಿಡೆಲ್ ಮತ್ತು ರಾವುಲ್ ಕ್ಯಾಸ್ಟ್ರೋ ಹಾಗೂ ಚೆ ಗವೇರಾ ಅವರ ನಾಯಕತ್ವದಲ್ಲಿ 1959ರಲ್ಲಿ ಕ್ರಾಂತಿ ಸಾಧಿಸಿದ ಮೊದಲ ಪೀಳಿಗೆಯ ಕ್ರಾಂತಿಕಾರಿಗಳನ್ನು ‘ಸಿಯೆರಾ ಮಿಸ್ತ್ರಾ ಪೀಳಿಗೆ’ ಎಂದು ಕರೆಯಲಾಗುತ್ತದೆ. ಈ ಪೀಳಿಗೆಯ ನಾಯಕರು ಕ್ಯೂಬಾದ ಸಮಾಜವಾದಿ ಕ್ರಾಂತಿಯನ್ನು ದೈತ್ಯ ಅಮೆರಿಕನ್ ಸಾಮ್ರಾಜ್ಯಶಾಹಿ ದಾಳಿಯ ವಿರುದ್ಧ ರಕ್ಷಿಸಿ ಮುನ್ನಡೆಸಿದ್ದರು. ಇವರಿಂದ ಹೊಸ ಪೀಳಿಗೆಯ ಕ್ರಾಂತಿಕಾರಿ ಕಮ್ಯುನಿಸ್ಟರು ನಾಯಕತ್ವ ವಹಿಸಿಕೊಂಡಿದ್ದಾರೆ. ಇದು ಕ್ಯೂಬಾದಲ್ಲಿ ನಾಯಕತ್ವದ ಬದಲಾವಣೆಯೊಂದಿಗೆ ಕ್ರಾಂತಿಕಾರಿ ಕಮ್ಯುನಿಸ್ಟ್ ಪರಂಪರೆಯನ್ನು ಮುಂದುವರೆಸಿದೆ ಎಂಬುದು ಗಮನಾರ್ಹ.
ರಾವುಲ್ ಕ್ಯಾಸ್ಟ್ರೋ ಅವರ ಸ್ಥಾನದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾದ ಮಿಗೆಲ್ ಡಿಯಾಝ್ ಕನೆಲ್ ಅಧಿಕಾರ ವಹಿಸಿಕೊಳ್ಳುತ್ತಾ “ಕ್ರಾಂತಿಕಾರಿ ಹೋರಾಟಗಳ ಕಾಲದಲ್ಲಿ, ಕ್ರಾಂತಿಯನ್ನು ರಕ್ಷಿಸುವುದು ಬದ್ಧ ಕರ್ತವ್ಯವಾಗಿರುವಾಗಲೇ, ಕಮ್ಯುನಿಸ್ಟ್ ಪಕ್ಷವನ್ನು ಕಾಪಾಡಿಕೊಳ್ಳುವುದು ಅತ್ಯಂತ ಪ್ರಮುಖ ಕ್ರಾಂತಿಕಾರಿ ಕರ್ತವ್ಯವಾಗಿರುತ್ತದೆ” ಎಂದು ಹೇಳುವ ಮೂಲಕ ಕ್ಯೂಬಾದಲ್ಲಿ ಕ್ರಾಂತಿಕಾರಿ ಕಮ್ಯುನಿಸ್ಟ್ ಪರಂಪರೆಯ ಮುಂದುವರಿಕೆಯನ್ನು ಖಚಿತಪಡಿಸಿದರು. “ಮಹಾಧಿವೇಶನವು ಯೋಚನೆಗಳನ್ನು ದೃಢಗೊಳಿಸುವ, ಇತಿಹಾಸವನ್ನು ಗುರುತಿಸುವ, ಭವಿಷ್ಯವನ್ನು ರೂಪಿಸುವ ಸ್ಥಳ.” ನಿಜವಾಗಿಯೂ 8ನೇ ಮಹಾಧಿವೇಶನವು ಇಂತಹ ಸ್ಥಳವಾಗಿತ್ತು.
ಕೋವಿಡ್ ಪರಿಸ್ಥಿತಿಯಿಂದಾಗಿ ಎಪ್ರಿಲ್ 16 ರಿಂದ 19ರ ವರೆಗೆ ಹವಾನಾದಲ್ಲಿ ನಡೆದ 8ನೇ ಮಹಾಧಿವೇಶನದಲ್ಲಿ 7 ಲಕ್ಷ ಪಕ್ಷದ ಸದಸ್ಯರನ್ನು ಪ್ರತಿನಿಧಿಸುವ ಕೇವಲ 300 ಪ್ರತಿನಿಧಿಗಳು ಭಾಗವಹಿಸಿದ್ದರು. 7ನೇ ಮಹಾಧಿವೇಶನದಲ್ಲಿ 1 ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದರು. ಮಾರ್ಚ್ 4 ರಂದು ಮಹಾಧಿವೇಶನಕ್ಕೆ ಪ್ರತಿನಿಧಿಗಳನ್ನು ಆರಿಸಲು ಪ್ರಾಂತೀಯ ಮಟ್ಟದ ಸಭೆಗಳು ನಡೆದಿದ್ದವು. ಮಹಾಧಿವೇಶನದಲ್ಲಿ ಪ್ರಸ್ತುತಪಡಿಸಲಾದ ದಸ್ತಾವೇಜುಗಳನ್ನು ಮಾರ್ಚ್ 15-20 ಅವಧಿಯಲ್ಲಿ ಚರ್ಚಿಸಿ ತಿದ್ದುಪಡಿ ಮೊದಲೇ ಕಳಿಸಲು ಅನುವಾಗುವಂತೆ ಮೊದಲೇ ಪ್ರಾಂತ್ಯಗಳ ಪ್ರತಿನಿಧಿಗಳಿಗೆ ಹಂಚಲಾಗಿತ್ತು. ಮೂರು ಪ್ರಮುಖ ದಸ್ತಾವೇಜುಗಳನ್ನು ಮಹಾಧಿವೇಶನವು ಮೂರು ಸಮಾನಾಂತರ ಕಮಿಶನ್ ಗಳಲ್ಲಿ ಒಂದುವರೆ ದಿನಗಳ ಕಾಲ ವಿವರವಾಗಿ ಚರ್ಚಿಸಿ ತಿದ್ದುಪಡಿಗಳೊಂದಿಗೆ ಮುಖ್ಯ ಅಧಿವೇಶನಕ್ಕೆ ಅಂಗೀಕಾರಕ್ಕೆ ಕಳಿಸಿತು.
ʻಆರ್ಥಿಕ ಮತ್ತು ಸಾಮಾಜಿಕ ಕಮಿಶನ್’ 2016ರಲ್ಲಿ ನಡೆದ 7ನೇ ಮಹಾಧಿವೇಶನ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳಿಗೆ ಅಂಗೀಕರಿಸಿದ ನಿರ್ಣಯಗಳ ಜಾರಿ ಮತ್ತು ಪರಾಮರ್ಶೆಯನ್ನು ಮಾಡಿತು. ಎರಡನೆಯ ಕಮಿಶನ್ ಪಕ್ಷದ ಸಂಘಟನಾ ಸಾಧನೆ-ವೈಫಲ್ಯಗಳು ಮತ್ತು ಬಲ-ನ್ಯೂನತೆಗಳ ಕುರಿತು ಪರಾಮರ್ಶಿಸಿ ಪಕ್ಷವನ್ನು ಬಲಪಡಿಸುವ ವಿಧಾನಗಳ ಕುರಿತು ಚರ್ಚಿಸಿತು. ಮೂರನೆಯ ಕಮಿಶನ್ ಪಕ್ಷದ ಕಾರ್ಯಕರ್ತರ ಸಮಸ್ಯೆಗಳು ಸವಾಲುಗಳಿಗೆ ಮೀಸಲಾಗಿತ್ತು. ಈ ಕಮಿಶನ್ ಗಳ ವರದಿ ಮತ್ತು ಕರಡು ನಿರ್ಣಯಗಳನ್ನು ಪ್ರಧಾನ ಅಧಿವೇಶನ ಚರ್ಚಿಸಿ ಅಂಗೀಕರಿಸಿತು. 7ನೇ ಮಹಾಧಿವೇಶನ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳಿಗೆ ಅಂಗೀಕರಿಸಿದ ಮಾರ್ಗದರ್ಶಿ ಸೂತ್ರಗಳಲ್ಲಿ 17 ಸೂತ್ರಗಳನ್ನು ಮುಂದುವರೆಸಲಿದೆ, 92 ಸೂತ್ರಗಳನ್ನು ಕೈಬಿಡಲಿದೆ, 165 ಸೂತ್ರಗಳನ್ನು ಬದಲಾಯಿಸಲಿದೆ, 18 ಸೂತ್ರಗಳನ್ನು ಸೇರಿಸಲಿದೆ.
ಕೊನೆಯ ದಿನ ಕೇಂದ್ರ ಸಮಿತಿ, ಪೊಲಿಟ್ ಬ್ಯುರೊ, ಮಹಾಕಾರ್ಯದರ್ಶಿಗಳ ಸ್ಥಾನಗಳ ಆಯ್ಕೆ ನಡೆಯಿತು. ಈಗಾಗಲೇ ತಿಳಿಸಿದಂತೆ ಮಹಾಕಾರ್ಯದರ್ಶಿ ಸೇರಿದಂತೆ ‘ಸಿಯೆರಾ ಮಿಸ್ತ್ರಾ ಪೀಳಿಗೆ’ಯ ಜಾಗದಲ್ಲಿ ಹೊಸ ಪೀಳಿಗೆ ನಾಯಕರು ಬಂದಿದ್ದಾರೆ. ಈಗಾಗಲೇ ಹೊಸ ಸಂವಿಧಾನ ಮತ್ತು ಪಕ್ಷದ ನಿರ್ಣಯಗಳ ಪ್ರಕಾರ, ಸರಕಾರ ಮತ್ತು ಪಕ್ಷದ ಉನ್ನತ ಹುದ್ದೆಗಳಿಗೆ 5 ವರ್ಷಗಳ ಎರಡು ಅವಧಿಗಳ ಅವಕಾಶ ಮಾತ್ರ ಕೊಡಲಾಗಿದೆ. ಕೇಂದ್ರ ಸಮಿತಿಯ ಸದಸ್ಯರ ವಯೋಮಿತಿಯನ್ನು 60 ಮತ್ತು ಪೊಲಿಟ್ ಬ್ಯುರೊ ಸದಸ್ಯರದ್ದು 70 ಎಂದು ನಿಗದಿ ಮಾಡಲಾಗಿದೆ. ಆಡಳಿತದ/ಸರಕಾರದ ಕ್ಷೇತ್ರದಲ್ಲಿ ಅಧ್ಯಕ್ಷರು, ಪ್ರಧಾನಿ ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರು ಇರುವ ಒಂದು ಸಾಮೂಹಿಕ ನಾಯಕತ್ವವನ್ನು ಸರಕಾರಕ್ಕೆ ನಿಗದಿ ಮಾಡಲಾಗಿದೆ. ಒಂದೇ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಈ ಸ್ಥಾನಗಳನ್ನು ಹೊಂದಿರುವುದಿಲ್ಲ.
ಆದರೆ ಸ್ಥಾನಗಳಿಗೆ ಹೊಸ ಆಯ್ಕೆಗೆ ವಯಸ್ಸು ಮಾತ್ರ ಮಾನದಂಡ ಆಗಿರಲಿಲ್ಲ. ತಳಮಟ್ಟದ ಮತ್ತು ಹಲವು ಹಂತಗಳ ಕೆಲಸದ ಅನುಭವ, ಸೈದ್ಧಾಂತಿಕ ಬದ್ಧತೆ, ಸಂಘಟನಾ ಶಿಸ್ತು ಮುಂತಾದ ಹಲವು ಮಾನದಂಡಗಳನ್ನು ರೂಪಿಸಲಾಗಿದೆ. ಈಗ ಮಹಾಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಮತ್ತು ಕಳೆದ ಮೂರು ವರ್ಷಗಳಿಂದ ದೇಶದ ಅಧ್ಯಕ್ಷರಾಗಿರುವ ಮಿಗೆಲ್ ಇಲೆಕ್ಟ್ರಾನಿಕ್ಸ್ ಇಂಜಿನಿಯರ್. ಕ್ರಾಂತಿಯ ಒಂದು ವರ್ಷದ ನಂತರ ಹುಟ್ಟಿ 61 ವರ್ಷ ವಯಸ್ಸಿನವರು. ಅವರು ಯಂಗ್ ಕಮ್ಯುನಿಸ್ಟ್ ಲೀಗ್ ನಲ್ಲಿ ಕೆಲಸ ಮಾಡಿ ಪಕ್ಷಕ್ಕೆ ಸೇರಿದವರು. ಮೂರು ವರ್ಷ ಮಿಲಿಟರಿ ಸೇವೆ ಮಾಡಿ, ನಿಕರಾಗುವಾದಲ್ಲಿ ಸೌಹಾರ್ದ ಮಿಲಿಟರಿ ಬೆಂಬಲ ಕೊಡಲು ಹೋದ ಒಂದು ಬ್ರಿಗೇಡಿನ ನಾಯಕರಾಗಿದ್ದವರು. ಎರಡು ಪ್ರಾಂತಗಳಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದವರು. ಆಮೇಲೆ ಕೇಂದ್ರಕ್ಕೆ ಬಂದು ಉಚ್ಛ ಶಿಕ್ಷಣದ ಮಂತ್ರಿಯಾಗಿದ್ದರು. 2003ರಿಂದ ಪೊಲಿಟ್ ಬ್ಯುರೊ ಸದಸ್ಯರಾಗಿದ್ದಾರೆ. ಹೊಸ ಕೇಂದ್ರ ಸಮಿತಿಯ ಅರ್ಧದಷ್ಟು ಮಹಿಳಾ ಸದಸ್ಯರಿದ್ದಾರೆ. ಪೊಲಿಟ್ ಬ್ಯುರೊದ 14 ಸದಸ್ಯರಲ್ಲಿ ಮೂವರು ಮಹಿಳೆಯರು. ಪಕ್ಷದ ಕಾರ್ಯಕರ್ತರಲ್ಲಿ ಸಹ ಶೇ. 54.2 ಮಹಿಳೆಯರು. ಶೇ.47.7 ಕರಿಯರು ಮತ್ತು ಬುಡಕಟ್ಟು ಮೂಲದವರು.
ಕ್ಯೂಬಾ ಎರಡು ತೀವ್ರ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಒಂದು ಜಗತ್ತಿನ ಇತರ ದೇಶಗಳಂತೆ ಕೋವಿಡ್ ಸೃಷ್ಟಿ ಮಾಡಿರುವ ಆರೋಗ್ಯ ಬಿಕ್ಕಟ್ಟು. ಪ್ರಬಲ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಇರುವ ಕ್ಯೂಬಾ ಇದನ್ನು ಸುಲಭವಾಗಿ ಎದುರಿಸುತ್ತಿದೆ. ತನ್ನದೇ ವ್ಯಾಕ್ಸೀನ್ ಅಭಿವೃದ್ಧಿಪಡಿಸಿ ಉತ್ಪಾದಿಸುವ ಹಾದಿಯಲ್ಲಿದೆ. ಆದರೆ ಎರಡನೆಯ ಬಿಕ್ಕಟ್ಟು ಅಮೆರಿಕನ್ ಸಾಮ್ರಾಜ್ಯಶಾಹಿಯು ಆರು ದಶಕಗಳ ಕಾಲ ಕ್ಯೂಬಾದ ಮೇಲೆ ಹೊರಿಸಿರುವ ಕ್ರೂರ ಆರ್ಥಿಕ ದಿಗ್ಬಂಧನ ತೀವ್ರವಾಗುತ್ತಾ ನಡೆದಿದ್ದು ದೊಡ್ಡ ಸವಾಲಾಗಿ ಮುಂದುವರೆದಿದೆ. ಕೆಲವು ಆವಶ್ಯಕ ವೈದ್ಯಕೀಯ ಸಾಮಗ್ರಿಗಳ ಆಮದು ಮಾಡಲಾಗದೆ ಆರೋಗ್ಯ ಬಿಕ್ಕಟ್ಟಿನ ಪರಿಹಾರದ ಮೇಲೂ ದುಷ್ಪರಿಣಾಮ ಬೀರಿದೆ. ಈ ಕ್ರೂರ ಆರ್ಥಿಕ ದಿಗ್ಬಂಧನವನ್ನು ತೆಗೆಯಬೇಕೆಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಪ್ರತಿ ವರ್ಷ (ಯು.ಎಸ್. ನ 2-3 ಬಾಲಬಡುಕ ದೇಶಗಳನ್ನು ಬಿಟ್ಟರೆ) 190ರಷ್ಟು ದೇಶಗಳು ಬೆಂಬಲಿಸಿದ ನಿರ್ಣಯವನ್ನು ಅಂಗೀಕರಿಸಿದರೂ ಸಹ ಅದು ಮುಂದುವರೆದಿದೆ. ಒಬಾಮ ಅವಧಿಯಲ್ಲಿ ಸ್ವಲ್ಪ ಮಟ್ಟಿಗೆ ಸಡಿಲಿಸಿ, ಆದರೆ ಟ್ರಂಪ್ ಅವಧಿಯಲ್ಲಿ ಮತ್ತೆ ಬಿಗಿಗೊಳಿಸಿ ಇನ್ನಷ್ಟು ಕ್ರೂರಗೊಳಿಸಲಾಗಿದೆ. ಕ್ಯೂಬಾದ ಆರ್ಥಿಕ ಈ ದಿಗ್ಬಂಧನದಿದಾಗಿ 2018ರಲ್ಲಿ 144 ಕೋಟಿ ಡಾಲರುಗಳಷ್ಟು ಭಾರೀ ನಷ್ಟ ಅನುಭವಿಸಿದೆ ಎಂದು ಅಂದಾಜು ಮಾಡಲಾಗಿದೆ.
ಈ ಅಭೂತಪೂರ್ವ ವಿಶೇಷ ಪರಿಸ್ಥಿತಿ ಎದುರಿಸಲು ಕ್ಯೂಬಾವು ಯೋಜಿತ ಸಾರ್ವಜನಿಕ ಒಡೆತನವು ಪ್ರಧಾನವಾಗಿರುವ ಸಮಾಜವಾದಿ ಆರ್ಥಿಕವನ್ನು ಮುಂದುವರೆಸುತ್ತಲೇ, ಕೆಲವು ಆಯ್ದ ಕ್ಷೇತ್ರಗಳಲ್ಲಿ ಸಣ್ಣ ಖಾಸಗಿ ಉದ್ಯಮಗಳು ಮತ್ತು ವಿದೇಶೀ ಬಂಡವಾಳಕ್ಕೆ ಅವಕಾಶ ಕೊಡುವ ನೀತಿಯನ್ನು ಅನುಸರಿಸುತ್ತಿದೆ. ಲೆನಿನ್ ಕಾಲದಲ್ಲಿ ತಂದ ನವ ಆರ್ಥಿಕ ನೀತಿ ಮತ್ತು ಚೀನಾದ ಆರ್ಥಿಕ ಸುಧಾರಣೆಗಳನ್ನು ಪರಾಮರ್ಶೆ ಮಾಡಿ ಅದರ ನಕಲು ಮಾಡದೆ, ಆದರೆ ಅವುಗಳ ಸಾಧನೆ-ವೈಫಲ್ಯಗಳೆರಡರಿಂದಲೂ ಪಾಠ ಕಲಿತು ತನ್ನದೇ ನೀತಿಗಳನ್ನು ರೂಪಿಸುತ್ತಿದೆ. ಕ್ಯೂಬಾಕ್ಕೆ 1991ರ ನಂತರದ ‘ವಿಶೇಷ ಅವಧಿ’ಯನ್ನು ನಿಭಾಯಿಸಿದ ಅನುಭವವೂ ಇದೆ. ಕ್ಯೂಬಾ ಯಾವತ್ತೂ ಚೀನಾ, ರಶ್ಯಾ ಗಳ ಆರ್ಥಿಕ ಮಾದರಿಗಳನ್ನು ನಕಲು ಮಾಡಲಿಲ್ಲ. ತನ್ನದೇ ಮಾದರಿಗಳನ್ನು ರೂಪಿಸಿಕೊಂಡಿದೆ. ಈಗಲೂ ಅದನ್ನೇ ಮಾಡುತ್ತಿದೆ. ಕ್ಯೂಬಾ ಹೇಗೆ ಇದನ್ನು ನಿಭಾಯಿಸುತ್ತದೆ ಎಂದು ಜಗತ್ತೇ ಕಾತರದಿಂದ ನೋಡುತ್ತಿದೆ.
ಅದೇ ರೀತಿ ರಾಜಕೀಯ ಕ್ಷೇತ್ರದಲ್ಲಿ ಕಮ್ಯುನಿಸ್ಟ್ ಪಕ್ಷದ ಪ್ರಾಥಮಿಕತೆಯನ್ನು ಬಿಟ್ಟುಕೊಡದೆ ಸಾರ್ವಜನಿಕ ಅಭಿಮತ ಸಂಗ್ರಹದ ಮೂಲಕ ಬಂದ ಪ್ರಸ್ತಾವಗಳನ್ನು ಸಂವಿಧಾನದ ತಿದ್ದುಪಡಿಗಳ ಮೂಲಕ ಜಾರಿಗೊಳಿಸುತ್ತಿದೆ. ಬಹು-ಪಕ್ಷೀಯ ವ್ಯವಸ್ಥೆ ತರದೆ ರಾಜಕೀಯ ಸುಧಾರಣೆಗಳಿಗೆ ಅರ್ಥವಿಲ್ಲ ಮತ್ತು ಕ್ಯೂಬಾ ‘ಏಕಪಕ್ಷೀಯ ಸರ್ವಾಧಿಕಾರ’ ಎಂಬ ಟೀಕೆಗಳಿಗೆ “ಹೌದು. ಏಕಪಕ್ಷೀಯ ಜೋಸ್ ಮಾರ್ತಿ ಹೇಳಿದ ಅರ್ಥದಲ್ಲಿ. ಯಾಕೆಂದರೆ ನಮ್ಮ ಸಮಾಜವನ್ನು ಸಾವಿರ ಹೋಳಾಗಿ ಒಡೆಯುವ ಕನಸು ಕಾಣುತ್ತಿರುವ ಸಾಮ್ರಾಜ್ಯಶಾಹಿಯ ಮಸಲತ್ತಿನ ವಿರುದ್ಧ ನಮ್ಮ ಬಳಿ ಇರುವ ಒಂದೇ ಗುರಾಣಿ ಜನತೆಯ ಐಕ್ಯತೆ. ಜನತೆಯ ಮುಂಚೂಣಿ ಸಂಘಟನೆಯಾದ ಕಮ್ಯುನಿಸ್ಟ್ ಪಕ್ಷ ಮಾತ್ರ ಈ ಐಕ್ಯತೆಯನ್ನು ಮತ್ತು ಕ್ರಾಂತಿಯ ಚಾರಿತ್ರಿಕ ನಿರಂತರತೆಯನ್ನು ಖಚಿತ ಪಡಿಸಲು ಸಾಧ್ಯ.” ಎಂದು ಹಿಂದಿನ ಉಪಮಹಾಕಾರ್ಯದರ್ಶಿ ಮಚಾದೊ ವೆಂಚುರಾ ಉತ್ತರಿಸಿದ್ದಾರೆ.