– ಸಿ.ಸಿದ್ದಯ್ಯ
ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಬೆಳವಣಿಗೆಗೆ ಮತ್ತೊಂದು ಅಡ್ಡಿ
2018ರ ವಿಧನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಡೆದ ಒಟ್ಟು ಮತಗಳು- ಶೇ. 74.49. 2023ರಲ್ಲಿ ಇದರ ಪ್ರಮಾಣ ಶೇ. 78.88. ಅಂದರೆ, ಈ ಎರಡು ಪಕ್ಷಗಳು ಪಡೆದ ಒಟ್ಟು ಮತಗಳಲ್ಲಿ ಶೇ. 4.48 ರಷ್ಟು ಹೆಚ್ಚಾಗಿದೆ. 2018ರ ಚುನಾವಣೆಯಲ್ಲಿಯೂ ಈ ಎರಡು ಪಕ್ಷಗಳು ಒಟ್ಟಾರೆಯಾಗಿ ಅದರ ಹಿಂದಿನ ಚುನಾವಣೆಗಿಂತ ಹೆಚ್ಚು ಮತಗಳನ್ನು ಪಡೆದಿದ್ದವು. ಇದು, ಎರಡು ದೊಡ್ಡ ಪಕ್ಷಗಳ ನಡುವೆ ಸರಧಿಯಂತೆ ಅಧಿಕಾರ ಹಂಚಿಕೊಳ್ಳುವ ಇಂದಿನ ಪರಿಸ್ಥಿತಿಗೆ ಮತ್ತಷ್ಟು ಬಲ ಬಂದಿದೆ.
ಬಿಜೆಪಿ ಸೋತಿದೆ ನಿಜ. ಆದರೆ, ಅದು ಸೋತಿಲ್ಲ
65 ಸ್ಥಾನಗಳನ್ನಷ್ಟೇ ಗಳಿಸಿರುವ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಸೋತಿದೆ ನಿಜ. ಆದರೆ, ಅದರ ಮತಗಳಿಕೆಯಲ್ಲಿ ಕಳೆದ ಬಾರಿಯಷ್ಟೇ ಇದೆ ಎಂಬುದನ್ನು ಅರಿಯಬೇಕು. ಬಿಜೆಪಿ ಕಳೆದ ಚುನಾವಣೆಯಲ್ಲಿ ಶೇ. 36.35 ಮತಗಳನ್ನು ಗಳಿಸಿತ್ತು. ಈ ಬಾರಿ ಅದು ಶೇ. 36 ಮತಗಳನ್ನು ಗಳಿಸಿದೆ. ಅಂದರೆ, ಬಿಜೆಪಿಗೆ ಶೇ. 0.35 ರಷ್ಟು ಮಾತ್ರ ಮತ ಗಳಿಕೆಯ ಪ್ರಮಾಣ ಕಡಿಮೆಯಾಗಿದೆ. ಕಳೆದ ಚುನಾವಣೆಯಲ್ಲಿ 104 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ, ಈ ಬಾರಿ ಅಷ್ಟೇ ಮತಗಳನ್ನು ಪಡೆದು ಕೇವಲ 65 ಸ್ಥಾನಗಳನ್ನು ಮಾತ್ರ ಪಡೆದಿದೆ. ಇದರರ್ಥ, ಬಿಜೆಪಿ ವಿರೋಧಿ ಮತಗಳು ಹಂಚಿಹೋಗದೇ, ಅವು ಕ್ರೂಡೀಕರಣಗೊಂಡು ಕಾಂಗ್ರೆಸ್ ಕಡೆ ಹರಿದಿವೆ. ಎಡ ಪಕ್ಷಗಳು ಮತ್ತು ಪ್ರಜಾಸತ್ತಾತ್ಮಕ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದ ಕಡೆಗಳಲ್ಲೂ ‘ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವ ಸಾಮರ್ಥ್ಯ ಇರುವ ಅಭ್ಯರ್ಥಿಗಳಿಗೆ ಮತ ನೀಡಿ’ ಎಂಬ ಇವರದೇ ಘೋಷಣೆ ಒಂದಷ್ಟು ಕೆಲಸ ಮಾಡಿದೆ. ಇವರ ಮತಗಳಿಕೆ ಕಡಿಮೆಯಾಗಲು ಇದೂ ಒಂದು ಕಾರಣ. ಇದೇ ಪ್ರಯೋಗ ರಾ಼ಷ್ಟ್ರ ಮಟ್ಟದಲ್ಲಿ ನಡೆದರೆ, ಇದು, ಎರಡು ದೊಡ್ಡ ಬಂಡವಾಳಶಾಹಿ ಪಕ್ಷಗಳ ನಡುವೆ ಮಾತ್ರ ಅಧಿಕಾರ ಹಸ್ಥಾಂತರಕ್ಕೆ ಎಡೆ ಮಾಡಿಕೊಡುತ್ತದೆ. ಎಡ ಮತ್ತು ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳು, ಹಾಗೂ ಪ್ರಾದೇಶಿಕ ರಾಜಕೀಯ ಪಕ್ಷಗಳ ಬೆಳವಣಿಗೆಗೆ ಇದು ಅಡ್ಡಿಯಾಗುತ್ತದೆ. ಆಳುವ ಬಂಡವಾಳಶಾಹಿ ವರ್ಗ ಬಯಸುವುದೂ ಇಂತಹ ವ್ಯವಸ್ಥೆಯನ್ನೇ ಎಂಬುದನ್ನು ಮರೆಯದಿರೋಣ.
ಕರ್ನಾಟಕ ವಿಧಾನಸಭಾ ಚುನಾವಣೆ ಇಡೀ ದೇಶದ ಗಮನ ಸೆಳಿದಿದೆ. ದಕ್ಷಿಣ ಭಾರತದ ಏಕೈಕ ರಾಜ್ಯದಲ್ಲಿದ್ದ ಅಧಿಕಾರವನ್ನು ಬಿಜೆಪಿ ಕಳೆದುಕೊಂಡಿದೆ. ಇದು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದು ರಾಜಕೀಯ ವಿಶ್ಲೇಷಕರು ಹೇಳತೊಡಗಿದ್ದಾರೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಳ್ಳುವ ಸೂಚನೆಯನ್ನು ಈ ಪಲಿತಾಂಶ ತೋರಿಸುತ್ತದೆ ಎನ್ನುತ್ತಾರೆ. ಮೋದಿ ಆಕರ್ಷಣೆ ಕಡಿಮೆಯಾಗಿದೆ, ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಲಾಭ ಗಳಿಸುವ ಸಂಘಪರಿವಾರದ ತಂತ್ರಗಾರಿಕೆ ಇನ್ನು ಮುಂದೆ ನಡೆಯುವುದಿಲ್ಲ, ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದಾರೆ, ಬೆಲೆಯೇರಿಕೆ, ನಿರುದ್ಯೋಗದಿಂದ ಜನರು ನೊಂದಿದ್ದಾರೆ, ಇದು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಫಲನಗೊಂಡಿದೆ… ಎಂದೆಲ್ಲಾ ಕಾರಣಗಳನ್ನು ಕೊಡತೊಡಗಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿ ಸೋಲಿಗೆ ಈ ಅಂಶಗಳೂ ಕಾರಣ ಎಂಬುದನ್ನು ಅಲ್ಲಗಳೆಯಲಾಗದು. ಜೊತೆಗೆ, ಕೋಮುವಾದಿ ಬಿಜೆಪಿಯನ್ನು ಸೋಲಿಸಲೇಬೇಕೆಂದು ಪಣತೊಟ್ಟು ಪ್ರಗತಿಪರ ಮತ್ತು ಪ್ರಜಾಸತ್ತಾತ್ಮಕ ಸಂಘಟಣೆಗಳು, ರಾಜಕೀಯ ಶಕ್ತಿಗಳು, ಚಿಂತಕರು, ಎಡ ಪಕ್ಷಗಳು ವ್ಯಾಪಕ ಪ್ರಚಾರ, ಸಭೆ, ಸಮಾರಂಭ, ವಿಚಾರ ಸಂಕಿರಣ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ದುರಾಡಳಿತದ ವಿಷಯಗಳನ್ನು ಜನರ ನಡುವೆ ಕೊಂಡೊಯ್ಯಲು ಶ್ರಮಿಸಿದರು. ಇದಕ್ಕಾಗಿ, ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಬಲ್ಲ ಯಾವುದೇ ಪಕ್ಷಗಳ ಅಥವಾ ಪಕ್ಷೇತರ ಅಭ್ಯರ್ಥಿಗಳಿಗೆ ಮತ ನೀಡಲು ನಿರ್ಧರಿಸಿ, ಜನತೆಗೂ ಇದನ್ನೇ ಕರೆ ನೀಡಿದರು.
ಕರ್ನಾಟಕದಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಸೋಲಿಸಬಲ್ಲ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಜೆಡಿಎಸ್ 30 ರಿಂದ 40 ಸ್ಥಾನಗಳಲ್ಲಿ ಪ್ರಭಲವಾಗಿದ್ದರೂ, ಬಿಜೆಪಿಯನ್ನು ಸೋಲಿಸಬೇಕೆಂಬ ಗುರಿಯೊಂದಿಗೆ ಹಲವು ಕ್ಷೇತ್ರಗಳಲ್ಲಿ ಜೆಡಿಎಸ್ ನ ಮತದಾರರೂ ಕಾಂಗ್ರೆಸ್ ಆಭ್ಯರ್ಥಿಗಳಿಗೆ ಮತ ನೀಡಿದ್ದಾರೆ. ಜೆಡಿಎಸ್ ನ ಮತ ಪ್ರಮಾಣವೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಡೆದ ಶೇ. 18.30 ರಿಂದ ಶೇ. 13.29 ಕ್ಕೆ ಇಳಿದು, ಶೇ. 5.1 ರಷ್ಟು ಮತ ಕಡಿಮೆಯಾಗಿದೆ. ಹೀಗಾಗಿ, ಕಳೆದ ಬಾರಿ 36 ಸ್ಥಾನಗಳಲ್ಲಿ ಜಯ ಗಳಿಸಿದ್ದ ಜೆಡಿಎಸ್ ಈ ಬಾರಿ 19 ಸ್ಥಾನಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು.
2018ರ ವಿಧನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಡೆದ ಒಟ್ಟು ಮತಗಳು- ಶೇ. 74.49. 2023ರಲ್ಲಿ ಇದರ ಪ್ರಮಾಣ ಶೇ. 78.88. ಅಂದರೆ, ಈ ಎರಡು ಪಕ್ಷಗಳು ಪಡೆದ ಒಟ್ಟು ಮತಗಳಲ್ಲಿ ಶೇ. 4.48 ರಷ್ಟು ಹೆಚ್ಚಾಗಿದೆ. 2018ರ ಚುನಾವಣೆಯಲ್ಲಿಯೂ ಈ ಎರಡು ಪಕ್ಷಗಳು ಒಟ್ಟಾರೆಯಾಗಿ ಅದರ ಹಿಂದಿನ ಚುನಾವಣೆಗಿಂತ ಹೆಚ್ಚು ಮತಗಳನ್ನು ಪಡೆದಿದ್ದವು. ಇದು, ಎರಡು ದೊಡ್ಡ ಪಕ್ಷಗಳ ನಡುವೆ ಸರಧಿಯಂತೆ ಅಧಿಕಾರ ಹಂಚಿಕೊಳ್ಳುವ ಇಂದಿನ ಪರಿಸ್ಥಿತಿಗೆ ಮತ್ತಷ್ಟು ಬಲ ಬಂದಿದೆ.
ಇದನ್ನೂ ಓದಿ : ಲೋಕಸಭೆ ಚುನಾವಣೆಗೂ ಮುನ್ನವೇ ಶುರುವಾಗಿದೆ ಬಿಜೆಪಿಯ ಅಂತ್ಯ..!
ಹಣದ ಪ್ರಭಾವ
ಜನತೆ ಕೇಂದ್ರ ಮತ್ತು ರಾಜ್ಯ ಬಿಜೆಪಿ (ಅವರೇ ಹೇಳುವಂತೆ ಡಬಲ್ ಎಂಜಿನ್ ಸರ್ಕಾರ) ಆಡಳಿತದಿಂದ ಬೇಸತ್ತಿದ್ದಾರೆ. ಮೋದಿಯವರ ಹುಸಿ ಭರವಸೆಗಳು, ಬಣ್ಣ ಬಣ್ಣದ ಮಾತುಗಳು, ಅವರ ನಟನೆಗಳು, ರೋಡ್ ಶೋಗಳು ಇವೆಲ್ಲವೂ ಬಹಳಷ್ಟು ಜನರಲ್ಲಿ ಅಸಹ್ಯ ಹುಟ್ಟಿಸಿವೆ. ಮೋದಿ ಸರ್ಕಾರದ ಜನವಿರೋಧಿ ನೀತಿಗಳಿಂದ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ, ನಿರುದ್ಯೋಗ ಸಮಸ್ಯೆಗಳಿಂದ ಜನತೆ ಸಂಕಷ್ಟಗಳಿಗೆ ಸಿಲುಕಿದ್ದಾರೆ. ಲಂಗು ಲಗಾಮಿಲ್ಲದೆ ಜಾರಿಯಾಗುತ್ತಿರುವ ಮುಕ್ತ ಆರ್ಥಿಕ ನೀತಿಗಳು ಜನರ ಬದುಕನ್ನು ಕಸಿದುಕೊಂಡಿವೆ. ಚಿಲ್ಲರೆ ವ್ಯಾಪಾರ ವಲಯ ಸೇರಿದಂತೆ ಬಹುತೇಕ ಎಲ್ಲಾ ವಲಯಗಳಲ್ಲೂ ವಿದೇಶಿ ನೇರ ಬಂಡವಾಳ ಹೂಡಿಕೆ(FDI)ಗೆ ಮುಕ್ತ ಅವಕಾಶಗಳನ್ನು ಕೊಟ್ಟಿರುವ ಪರಿಣಾಮ, ಮತ್ತು ಕಾರ್ಪೋರೇಟ್ ಕಂಪನಿಗಳು ಈ ವಲಯಗಳನ್ನು ಏಕಸ್ವಾಮ್ಯ ಮಾಡಿಕೊಳ್ಳಲು ಹೊರಟಿರುವ ಕಾರಣದಿಂದಾಗಿ, ಇವುಗಳ ಪೈಪೋಟಿ ಎದುರಿಸಲಾರದೆ ಲಕ್ಷಾಂತರ ಸಣ್ಣ ವ್ಯಾಪಾರಿಗಳು, ಸಣ್ಣ ಉದ್ಯಮಗಳು ಮುಚ್ಚಿಹೋಗಿವೆ ಅಥವಾ ಮುಚ್ಚಿಹೋಗುವ ಹಂತದಲ್ಲಿವೆ, ಲಾಭದಾಯಕ ಸಾರ್ವಜನಿಕ ಉದ್ಯಮಗಳ ಖಾಸಗೀಕರಣ ಅಡೆತಡೆ ಇಲ್ಲದೆ ನಡೆಯುತ್ತಿದೆ. ಸಾರ್ವಜನಿಕ ಉದ್ಯಮಗಳಲ್ಲಿ ಖಾಯಂ ನೌಕರರ ನೇಮಕಾತಿ ಸ್ಥಗಿತಗೊಂಡಿದೆ. ಸಾರ್ವಜನಿಕ ಬ್ಯಾಂಕುಗಳಿಂದ ಪಡೆದ ಉದ್ಯಮಿಗಳ 11 ಲಕ್ಷ ಕೋಟಿ ಸಾಲ ಮನ್ನಾ/ರೈಟ್ ಆಪ್ ಮಾಡಲಾಗಿದೆ. ಈ ರೀತಿ ಸಾರ್ವಜನಿಕರ ಸಂಪತ್ತನ್ನು ಕೆಲವೇ ಉದ್ಯಮಿಗಳು ದೋಚತೊಡಗಿದ್ದಾರೆ.….ಹೇಳುತ್ತಾ ಹೋದರೆ ಪಟ್ಟಿ ದೊಡ್ಡದಿದೆ. ಜೊತೆಗೆ ಕೊರೋನಾ ಸಂದರ್ಭದಲ್ಲಿ ಸಕಾಲಕ್ಕೆ ಸರ್ಕಾರದ ನೆರವು ಸಿಗದೆ, ಜನರು ಅನುಭವಿಸಿದ ನೋವುಗಳನ್ನು ಜನರು ಇನ್ನೂ ಮರೆತಿಲ್ಲ.
ಇಷ್ಟೆಲ್ಲಾ ಹೇಳುವಾಗಲೂ ಚುನಾವಣೆಯ ಗೆಲುವಿನಲ್ಲಿ ಹಣದ ಪ್ರಭಾವ ದಟ್ಟವಾಗಿ ಎದ್ದು ಕಾಣುತ್ತದೆ. ಬಿಜೆಪಿ ವಿರುದ್ದ ಅಸಮಾಧಾನ ಹೊಂದಿರುವ ಮತದಾರರನ್ನು ತಮ್ಮತ್ತ ಸೆಳೆಯಲು ರಾಜಕೀಯ ಪಕ್ಷಗಳು/ ಅಭ್ಯರ್ಥಿಗಳು ಬೃಹತ್ ಪ್ರಮಾಣದಲ್ಲಿ ಹಣ ‘ಚೆಲ್ಲಿದ್ದಾರೆ’. ತನ್ನ ಆಡಳಿತದಿಂದ ಬೇಸತ್ತು ದೂರ ಸರಿದಿರುವ ಮತದಾರರ ಮತ ಪಡೆಯಲು ಬಿಜೆಪಿ ಸಹಾ ಪೈಪೋಟಿಗೆ ಬಿದ್ದು ಹಣ ಹಂಚಿಕೆ ಮಾಡಿದೆ. ಈ ಎರಡು ದೊಡ್ಡ ರಾಷ್ಟ್ರೀಯ ಬಂಡವಾಳಶಾಹಿ ಪಕ್ಷಗಳ ಹಣದ ಎದುರು ನಿಲ್ಲಲಾಗದ, ಈ ಎರಡು ಪಕ್ಷಗಳಿಗೆ ಪೈಪೋಟಿ ನೀಡಲಾಗದ ಜನತಾದಳ 19 ಸ್ಥಾನ ಪಡೆಯಲೂ ಎದುರಿಸು ಬಿಡಬೇಕಾಯಿತು. ಸ್ಪರ್ಧೆ ಮಾಡಿದ್ದ ಬಹುತೇಕ ಇತರೆ ಸಣ್ಣ ಪುಟ್ಟ ಪಕ್ಷಗಳು ಠೇವಣಿ ಗಳಿಸಲೂ ಸಾಧ್ಯವಾಗದಷ್ಟು ಹೀನಾಯವಾಗಿ ಸೋತಿವೆ.
ಈ ಎರಡು ರಾಷ್ಟ್ರೀಯ ಪಕ್ಷಗಳು ಆಯ್ಕೆ ಮಾಡುವ ಅಭ್ಯರ್ಥಿಗಳೂ ದೊಡ್ಡ ಪ್ರಮಾಣದಲ್ಲಿ ಹಣ ವೆಚ್ಚ ಮಾಡುವ ಕೋಟ್ಯಾಧಿಪತಿಗಳೇ ಆಗಿರುತ್ತಾರೆ. ಜೊತೆಗೆ ಇವರಲ್ಲಿ ಬಹುತೇಕ ಅಭ್ಯರ್ಥಿಗಳು ರಿಯಲ್ ಎಸ್ಟೇಟ್ ಉದ್ಯಮಿಗಳು, ಕಾರ್ಖಾನೆ ಮಾಲೀಕರು, ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳನ್ನು ಹೊಂದಿರುವ ಮಾಲೀಕರು, ಗಣಿ ಧಣಿಗಳೇ ಆಗಿರುತ್ತಾರೆ. ಈ ಪಕ್ಷಗಳ ಚುನಾವಣಾ ವೆಚ್ಚಕ್ಕೆ ಸ್ಥಳೀಯ ಉದ್ಯಮಿಗಳು, ಗುತ್ತಿಗೆದಾರರು ದಾರಾಳವಾಗಿ ಹಣ ಹೊದಗಿಸುತ್ತಾರೆ. ಇದಲ್ಲಕ್ಕಿಂತ ಹೆಚ್ಚಾಗಿ ರಾಷ್ಟ್ರೀಯ ದೊಡ್ಡ ಬಂಡವಾಳದಾರರಿಂದ ಈ ಎರಡು ಪಕ್ಷಗಳ ಚುನಾವಣಾ ನಿಧಿಗೆ ನೂರಾರು, ಸಾವಿರಾರು ಕೋಟಿ ರೂಪಾಯಿ ಹಣ ಹರಿದು ಬರುತ್ತದೆ.
ಚುನಾವಣಾ ಬಾಂಡ್‌ಗಳ ಮೂಲಕ
ರಾಜಕೀಯ ಪಕ್ಷಗಳು ಬಹಿರಂಗ ಪಡಿಸಿರುವಂತೆ, ಮಾರ್ಚ್ 2018 ಮತ್ತು 2022 ರ ನಡುವೆ ಅನಾಮದೇಯ ಕಂಪನಿಗಳಿಂದ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಸಂದಾಯವಾದ ಹಣ ರೂ. 9,208 ಕೋಟಿ. ಇದರಲ್ಲಿ ಬಿಜೆಪಿ ಪಾಲು ರೂ. 5,270 ಕೋಟಿ. ಅಂದರೆ ಚುನಾವಣಾ ಬಾಂಡ್ ಗಳ ಮೂಲಕ ಸಂದಾಯವಾದ ಹಣದ ಶೇ. 57 ರಷ್ಟು ಬಿಜೆಪಿ ಪಕ್ಷಕ್ಕೆ ಬಂದಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂದ ಹಣ ರೂ. 964 ಕೋಟಿ. ಇನ್ನು ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟರನ್ನು ಹೇಗಾದರೂ ಮಾಡಿ ಅಧಿಕಾರದಿಂದ ದೂರ ಇಡಲು, ಮಮತಾ ಬ್ಯಾನರ್ಜಿ ಪಕ್ಷ ತೃಣಮೂಲ ಕಾಂಗ್ರೆಸ್ ಗೆ ಅನಾಮದೇಯ ಕಂಪನಿಗಳಿಂದ ನೀಡಿದ ದೇಣಿಗೆ ರೂ. 767 ಕೋಟಿ. ಈ ದೇಣಿಗೆ ಪಡೆದ ಪಕ್ಷಗಳ ಸಾಲಿನಲ್ಲಿ ಟಿಎಂಸಿ 3ನೇ ಸ್ಥಾನದಲ್ಲಿದೆ. ಈ ಮಾಹಿತಿಯನ್ನು ಚುನಾವಣಾ ಆಯೋಗದ ಅಂಕಿಅಂಶಗಳು ಹೇಳಿವೆ. ಇದು ರಾಜಕೀಯ ಪಕ್ಷಗಳು ಬಹಿರಂಗ ಪಡಿಸಿದ ಮೊತ್ತವಷ್ಟೆ. ಬಹಿರಂಗಕ್ಕೆ ಬಾರದ ದೇಣಿಗೆ ಹಲವು ಪಟ್ಟು ಹೆಚ್ಚಾಗಿದೆ.
PM CARES ಫಂಡ್
ಇದೂ ಅಲ್ಲದೆ, ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗುವಂತಹ ಯಾವುದೇ ರೀತಿಯ ತುರ್ತು ಅಥವಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವ ಉದ್ದೇಶದಿಂದ ‘ಪ್ರಧಾನ ಮಂತ್ರಿ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ ನಿಧಿ (PM CARES ಫಂಡ್)’ ಸ್ಥಾಪಿಸಲಾಗಿದೆ. ಈ ನಿಧಿಗೆ ಯಾರು ಮತ್ತು ಎಷ್ಟು ದೇಣಿಗೆ ಕೊಟ್ಟರು, ಆ ಹಣವನ್ನು ಯಾವುದಕ್ಕೆ ಎಷ್ಟು ವೆಚ್ಚ ಮಾಡಲಾಗಿದೆ ಎಂಬ ಲೆಕ್ಕವನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುತ್ತಿಲ್ಲ. ಈ ಹಣವನ್ನೂ ಚುನಾವಣೆಗೆ ಮತ್ತು ಸಂಘಪರಿವಾದ ಅಂಗ ಸಂಸ್ಥೆಗಳ ಬೆಳವಣಿಗೆಗೆ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿವೆ.
ಈ ಎಲ್ಲವನ್ನೂ ಗಮನಿಸಿದಾಗ, ಆಳುವ ಬಂಡವಾಳಶಾಹಿ ವರ್ಗ ಮತ್ತು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಸಾಮ್ರಾಜ್ಯಶಾಹಿ ರಾಷ್ಟ್ರಗಳು, ಭಾರತದಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್ ಈ ಎರಡರಲ್ಲಿ ಒಂದು ಪಕ್ಷದ ಬಹುಮತದ ಆಡಳಿತ ಬಯಸುತ್ತವೆ. ಅದಕ್ಕಾಗಿ ಇವು ಶ್ರಮಿಸುತ್ತವೆ ಮತ್ತು ಹಣದ ನೆರವು ನೀಡುತ್ತವೆ. ಜೊತೆಗೆ, ಯಾವ ಸಂದರ್ಭದಲ್ಲಿ ಯಾವ ಪಕ್ಷವನ್ನು ಅಧಿಕಾರಕ್ಕೆ ತರಬೇಕೋ, ಆ ಪಕ್ಷಗಳ ಪರವಾಗಿ ತಮ್ಮದೇ ಒಡೆತನದ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಮಾಡುತ್ತಾರೆ.
ಜನರಲ್ಲಿ ಈ ಎರಡು ಪಕ್ಷಗಳ ಬಂಡವಾಳಶಾಹಿ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಪರವಾದ, ಮತ್ತು ನವ-ಉದಾರವಾದಿ ನೀತಿಗಳ ಕುರಿತು ಅರಿವು ಮೂಡಿಸಲು ವ್ಯಾಪಕ ಪ್ರಚಾರ, ಪ್ರಕ್ಷೋಬೆ ಮತ್ತು ಜನರ ಸಮಸ್ಯೆಗಳ ಆಧಾರದಲ್ಲಿ ದೊಡ್ಡ ಪ್ರಮಾಣದ ಚಳುವಳಿ ನಡೆಯಬೇಕಿದೆ. ಇದಕ್ಕಾಗಿ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಒಂದುಗೂಡಿ ಕಾರ್ಯತಂತ್ರ ರೂಪಿಸುವ ತುರ್ತು ಅಗತ್ಯವಿದೆ.