ಭಾರತದ ಅತಿ ದೊಡ್ಡ ರೈತ ಸಂಘಟನೆ, ಅಖಿಲ ಭಾರತ ಕಿಸಾನ್ ಸಭಾ(ಎ.ಐ.ಕೆ.ಎಸ್) ದ ರಾಷ್ಟ್ರೀಯ ಅಧ್ಯಕ್ಷ ಡಾ. ಅಶೋಕ್ ಧವಳೆ ರವರು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ರೈತ ಚಳುವಳಿಯ ನೇತೃತ್ವ ವಹಿಸಿದ್ದು, ಸಂಯುಕ್ತ ಕಿಸಾನ್ ಮೋರ್ಚಾದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ. ಭಾರತೀಯ ಜನ ಸಮೂಹದ ವಿಶಾಲ ವಿಭಾಗವನ್ನು ಸಶಕ್ತಗೊಳಿಸುವ ಹಾಗೂ ಗ್ರಾಮೀಣ ಬಡವರ ಹಕ್ಕುಗಳಿಗಾಗಿ ಸತತವಾಗಿ ಶ್ರಮಿಸುತ್ತಿರುವ ಧವಳೆಯವರ ನಿರಂತರ ಪ್ರಯತ್ನವು ,ಭಾರತದ ಕಾರ್ಷಿಕ ಲೋಕವನ್ನು ಅತಿ ಸಮೀಪದಿಂದ ಕಾಣುವ ಅವಕಾಶವನ್ನು ಒದಗಿಸಿದೆ. ಭಾರತದ ಕೃಷಿ ಕ್ಷೇತ್ರದ ಬಗ್ಗೆ ವ್ಯಾಪಕವಾದ ಜ್ಞಾನದ ಜೊತೆಗೆ ಆರ್ಥಿಕ ಸುಧಾರಣೆ ನಂತರ ಆವರಿಸಿರುವ ಬಿಕ್ಕಟ್ಟಿನ ಕುರಿತು ಆಳವಾದ ತಿಳುವಳಿಕೆಯನ್ನು ಸಹ ಅವರು ಹೊಂದಿದ್ದಾರೆ.
ದೆಹಲಿ ರೈತ ಹೋರಾಟಕ್ಕೆ ಹತ್ತು ತಿಂಗಳು ತುಂಬಿರುವ ಹಿನ್ನೆಲೆಯಲ್ಲಿ “ಫ್ರಂಟ್ ಲೈನ್ “ ಪಾಕ್ಷಿಕಕ್ಕೆ ಅನುಪಮ ಕಾಟಕಮ್ (ಸೆ.24, 2021) ನಡೆಸಿದ ಸಂದರ್ಶನದ ಅನುವಾದ ಇಲ್ಲಿದೆ.
ಅನುವಾದ: ಟಿ.ಯಶವಂತ
ಭಾರತದ ಜನಸಂಖ್ಯೆಯ ಮೂರನೇ ಎರಡು ಭಾಗ ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನು ಅವಲಂಬಿಸಿದೆ. ಆರ್ಥಿಕ ಧೋರಣೆಗಳ ಅನುಷ್ಠಾನವು ತನ್ನ ಘೋಷಿತ ಉದ್ದೇಶವನ್ನು ಸಾಧಿಸುವ ಬದಲು ಹಾಗೂ ಈ ಕ್ಷೇತ್ರವನ್ನು ಸಕಾರಾತ್ಮಕವಾಗಿ ಪ್ರಭಾವಿಸುವ ಬದಲು ಭಾರತವನ್ನು, ಇವತ್ತಿಗೂ ಮುಂದುವರೆಯುತ್ತಿರುವ ಸತತವಾಗಿ ಕೃಷಿ ಬಿಕ್ಕಟ್ಟಿನ ಕಡೆಗೆ ತೆಗೆದುಕೊಂಡು ಹೋಗುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ.
ಸ್ವಾತಂತ್ರ‍್ಯ ಬಂದ 75 ವರ್ಷಗಳ ನಂತರವೂ ಭಾರತ ಜನಸಂಖ್ಯೆಯ ಮೂರನೇ ಎರಡರಷ್ಟು ಮಂದಿ ತಮ್ಮ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿರುವ ವಾಸ್ತವವೇ ಭಾರತದ ಕೃಷಿ ರಂಗವು ಸಂಕಟ ಹಾಗೂ ಬಿಕ್ಕಟ್ಟಿನಲ್ಲಿದೆ ಎಂಬುದರ ಸೂಚನೇಯೇ ಆಗಿದೆ. ಭಾರತೀಯ ಆರ್ಥಿಕತೆಯ ಸಂರಚನೆಯನ್ನು ಪರಿವರ್ತಿಸುವಲ್ಲಿ ಆರ್ಥಿಕ ಉದಾರೀಕರಣವು ವಿಫಲವಾಗಿದೆ. ಕೃಷಿ ರಂಗದ ಕಳಪೆ ಬೆಳವಣಿಗೆಯ ಕಾರಣದಿಂದ ಶೇಕಡಾ 50ಕ್ಕೂ ಹೆಚ್ಚು ಕೃಷಿ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿವೆ. ಗ್ರಾಮೀಣ ಬೇಡಿಕೆಯು ಶಾಶ್ವತವಾಗಿ ಪಾತಾಳ ಸ್ಥಿತಿಯಲ್ಲಿದೆ; ಗ್ರಾಮೀಣ ಪ್ರದೇಶಗಳ ಕೊಳ್ಳುವ ಶಕ್ತಿಯಲ್ಲಿ ಯಾವುದೇ ಬೆಳವಣಿಗೆ ಕಾಣುತ್ತಿಲ್ಲ. ತತ್ಪರಿಣಾಮವಾದ ಕೃಷಿಯ ಕಳಪೆ ಬೆಳವಣಿಗೆಯಿಂದ ಕೈಗಾರಿಕಾ ಬೆಳವಣಿಗೆಯೂ ಪ್ರತಿಕೂಲ ಪರಿಣಾಮಕ್ಕೆ ತುತ್ತಾಗಿದೆ.
ಆದರೆ ಕೃಷಿ ಕುರಿತೇ ಮಾತಾನಾಡುವುದಾದರೆ ಕೇರಳ, ಪಶ್ಚಿಮ ಬಂಗಾಳ ಹಾಗೂ ತ್ರಿಪುರ ಹೊರತುಪಡಿಸಿ ಕಾರ್ಷಿಕ ಸುಧಾರಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದ್ದರಿಂದಾಗಿ ಮತ್ತು ಗ್ರಾಮೀಣ ಮೂಲಸೌಕರ್ಯಗಳಲ್ಲಿ ಸಾರ್ವಜನಿಕ ಹೂಡಿಕೆಯ ಕಳಪೆ ಪ್ರಮಾಣದಿಂದಾಗಿ ಭಾರತದ ಕೃಷಿಯು ಐತಿಹಾಸಿಕವಾಗಿ ಬಿಕ್ಕಟ್ಟು ಗ್ರಸ್ಥವಾಗಿದೆ. ಈ ಕಾರಣದಿಂದ ಜಗತ್ತಿನಲ್ಲೇ ಅತಿ ಹೆಚ್ಚು ಗ್ರಾಮೀಣ ಅಸಮಾನತೆ ಇರುವ ದೇಶಗಳಲ್ಲಿ ಭಾರತವೂ ಕೂಡ ಒಂದು. ಗ್ರಾಮೀಣ ಸಮಾಜದಲ್ಲಿ ಅದಾಗಲೇ ಅಸ್ತಿತ್ವದಲ್ಲಿ ಇದ್ದ ಇಂತಹ ವೈರುಧ್ಯವು 1991ರ ನಂತರ ಗ್ರಾಮೀಣ ಸಮಾಜವನ್ನು ಆವರಿಸಿದ ಬಿಕ್ಕಟ್ಟಿನಿಂದ ಮತ್ತಷ್ಟು ಉಲ್ಬಣಗೊಂಡಿತು. ಕೃಷಿ ಬೆಳವಣಿಗೆ ದರ ನಿಧಾನಗೊಂಡಿತು. ಸಾರ್ವಜನಿಕ ಹೂಡಿಕೆ ಕುಸಿಯಲಾರಂಭಿಸಿತು. ಲಾಗುವಾಡು ಸಬ್ಸಿಡಿಗಳು ಕಡಿತಗೊಂಡಿದ್ದರಿಂದ ಲಾಗುವಾಡು ದರಗಳು ಏರಲಾರಂಭಿಸಿದವು.
ಮುಕ್ತ ವ್ಯಾಪಾರ ಒಪ್ಪಂದಗಳು ವಿನಾಶಕಾರಿ ಅಮದುಗಳ ಮಹಾ ಪ್ರವಾಹಕ್ಕೆ ಕಾರಣವಾಗಿ ಹಲವು ವಾಣಿಜ್ಯ ಬೆಳೆಗಳ ದರಗಳು ಕುಸಿದವು. ಇದರಿಂದಾಗಿ ಎಲ್ಲಾ ಬೆಳೆಗಳ ಲಾಭದಾಯಕತೆಯ ದರ ಕುಗ್ಗಿತು. ಕೃಷಿ ಸಾಲವನ್ನು ಸಣ್ಣ ಹಾಗೂ ಅತಿ ಸಣ್ಣ ರೈತರಿಂದ ಶ್ರೀಮಂತ ವಿಭಾಗಗಳು ಮತ್ತು ಕಾರ್ಪೊರೇಟ್ ಕೃಷಿ ವ್ಯಾಪಾರ ಸಂಸ್ಥೆಗಳ ಕಡೆ ತಿರುಗಿಸಲಾಯಿತು. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಇರುವ ಈ ನವ ಉದಾರೀಕರಣ ಧೋರಣೆಗಳೇ ನಮ್ಮ ಸುತ್ತ ಕಾಣುತ್ತಿರುವ ಪ್ರಸ್ತುತ ಕಾರ್ಷಿಕ ಬಿಕ್ಕಟ್ಟಿಗೆ ಕಾರಣವೆಂಬುದು ವಾಸ್ತವ. ಈ ನವ ಉದಾರೀಕರಣ ಧೋರಣೆಗಳು ಜಾರಿಗೆ ಬಂದ ವರ್ಷದೊಳಗೆ ನಡೆದ 1992ರ ಹರ್ಯಾಣದ ಹಿಸ್ಸಾರ್ ನಮ್ಮ ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಕುರಿತು ಅಂದಾಜಿಸಿ ಎಚ್ಚರಿಸಿದ್ದೆವು.
ಸುಧಾರಣೆಗಳು ಏಕೆ ವಿಫಲವಾದವು?
ಆರ್ಥಿಕ ಬೆಳವಣಿಗೆಯ ಹೊರತಾಗಿಯೂ ಭಾರತೀಯ ಕೃಷಿಯು ಕ್ಷಿಪ್ರಗತಿಯ ಹಲವು ಪಟ್ಟು ಬೆಳವಣಿಗೆಯನ್ನಾಗಲಿ ಅಥವಾ ಸಣ್ಣ ರೈತರ ವಿಮೋಚನೆಯನ್ನಾಗಲಿ ಅಥವಾ ವ್ಯಾಪಕವಾದ ಗ್ರಾಮೀಣ ಅಭಿವೃಧ್ಧಿಯನ್ನಾಗಲಿ ಸಾಧಿಸಲಿಲ್ಲ. ಏಕೆ?
ಈ ಕ್ಷೇತ್ರದ ಅಗತ್ಯವನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿತ್ತು. ಹಾಗಾಗಿಯೇ ಕೃಷಿ ರಂಗದ ಸುಧಾರಣೆಗಳು ವಿಫಲಗೊಂಡವು. ಈ ಕ್ಷೇತ್ರಕ್ಕೆ ಕಾರ್ಷಿಕ ಸುಧಾರಣೆ, ಹೆಚ್ಚಿನ ಸಾರ್ವಜನಿಕ ಹೂಡಿಕೆ ಹಾಗೂ ಬೆಂಬಲದ ಅಗತ್ಯವಿತ್ತು. ಆದರೆ ತಮ್ಮ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಇದ್ದರೂ ನೀತಿ ನಿರ್ಧಾರಕರು ಕೃಷಿ ರಂಗದ ವಿದೇಶಿ ಹಾಗೂ ದೇಶಿಯ ಮಾರುಕಟ್ಟೆಗಳನ್ನು ತೆರೆಯುವುದರಿಂದ ಈ ಕ್ಷೇತ್ರ ತನ್ನಷ್ಟಕ್ಕೇ ತಾನೇ ಬೆಳೆಯುತ್ತದೆ ಎಂದು ಭಾವಿಸಿದ್ದರು. ಪಶ್ಚಿಮ ಜಗತ್ತನ್ನು ಗಮನಿಸಿ. ಭಾರತದಲ್ಲಿ ನಾವು ಮಾಡಿದಂತೆ ಅವರು ಮಾರುಕಟ್ಟೆಗಳನ್ನು ತೆರೆದರೆ, ಪಶ್ಚಿಮದ ಕೃಷಿ ಒಂದು ವರ್ಷವೂ ಕೂಡ ಉಳಿಯಲಾರದು. ಹಾಗಾಗಿಯೇ ಪಶ್ಚಿಮದ ಕೃಷಿಯಲ್ಲಿ ಪ್ರಬಲವಾದ ರಕ್ಷಣಾತ್ಮಕ ಧೋರಣೆಗಳಿದ್ದು, ಇದನ್ನು ವಿಶ್ವ ವಾಣಿಜ್ಯ ಸಂಸ್ಥೆ(ಡಬ್ಲ್ಯೂಟಿಓ) ಒಪ್ಪಂದಗಳ ಮಾತುಕತೆಗಳಲ್ಲಿ ಕಿತ್ತು ಹಾಕಲು ಅವರು ಸಿದ್ದರಿಲ್ಲ. ವಿಚಿತ್ರವೆಂದರೆ ತಮ್ಮ ಕೃಷಿಯನ್ನು ಅವರು ರಕ್ಷಿಸಿಕೊಳ್ಳುತ್ತಿರುವಾಗಲೇ ಈ ದೇಶಗಳು ಭಾರತದಂತಹ ದೇಶಗಳನ್ನು ಕೃಷಿಯನ್ನು ತೆರೆಯುವಂತೆ ಒತ್ತಡ ಹಾಕಿವೆ. ಇದು ದ್ವಿಮುಖ ನೀತಿಯಾಗಿದ್ದರೂ ನಮ್ಮ ಸರ್ಕಾರ ಕೂಡ ಇಂತಹ ಅತಾರ್ಕಿಕ ಬೇಡಿಕೆಗೆ ಸಂಪೂರ್ಣವಾಗಿ ಶರಣಾಗಿದೆ.
ಕಡಿಮೆ ಉತ್ಪಾದಕತೆ
ಸುಧಾರಣೆಗಳ ಹಿನ್ನೆಲೆಯಲ್ಲಿ ಕೃಷಿಯಲ್ಲಿನ ಕಡಿಮೆ ಉತ್ಪಾದಕತೆ ಹಾಗೂ ಬೆಳೆಯುತ್ತಿರುವ ಶ್ರಮಶಕ್ತಿಯನ್ನು ಒಳಗೊಳ್ಳುವಲ್ಲಿ ಈ ವಲಯದ ಅಸಾಮರ್ಥ್ಯವು ಎದ್ದು ಕಾಣುವಂತಹದ್ದು. ರೈತರು ವಿಶೇಷವಾಗಿ ಸಣ್ಣ ರೈತರು ಇನ್ನೂ ಹೆಚ್ಚಿನ ಅಂಚಿಗೆ ತಳ್ಳಲ್ಪಡುತ್ತಿರುವುದಕ್ಕೆ ಕಾರಣವೇನು. ಈ ಬಗ್ಗೆ ವಿವರಿಸುತ್ತೀರಾ?
ಕೃಷಿಯಲ್ಲಿ ಕಡಿಮೆ ಉತ್ಪಾದಕತೆ ಇರುವುದು ಒಂದು ಗಂಭೀರ ಸಮಸ್ಯೆ. ಭಾರತದ ಹೊಲಗಳಲ್ಲಿ ಇರುವ ಇಳುವರಿ ಅಂತರ ತುಂಬಾ ದೊಡ್ಡದು. ನಿರಂತರವಾಗಿ ಸಾರ್ವಜನಿಕ ಕೃಷಿ ಸಂಶೋಧನೆಯನ್ನು ದುರ್ಬಲಗೊಳಿಸುತ್ತಿರುವುದು ಉತ್ಪಾದಕತೆಯ ಬೆಳವಣಿಗೆ ಕಳಪೆ ಪ್ರಮಾಣದಲ್ಲಿ ಇರಲು ಒಂದು ಕಾರಣ ಎಂದು ಎ.ಐ.ಕೆ.ಎಸ್. ಪ್ರತಿಪಾದಿಸುತ್ತದೆ. ನಮ್ಮ ಕೃಷಿ ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಕಡೇ ಪಕ್ಷ ಶೇಕಡಾ 2 ರಷ್ಟನ್ನಾದರೂ ಸಾರ್ವಜನಿಕ ಕೃಷಿ ಸಂಶೋಧನೆಗೆ ಹೂಡಿಕೆ ಮಾಡುವುದು ನಮ್ಮ ಅಗತ್ಯವಾಗಿದೆ. ಚೀನಾದಲ್ಲಿ ಈ ರೀತಿ ಆಗಿದೆ.
ಸಾರ್ವಜನಿಕ ಕೃಷಿ ಸಂಶೋಧನೆಯನ್ನು ಬಲಿಷ್ಠಗೊಳಿಸುವ ಮೂಲಕ ಮಾನ್ಸೊಂಟೊವನ್ನು ತನ್ನ ದೇಶದಿಂದ ಚೀನಾ ಹೊರಕ್ಕೆ ತಳ್ಳಿ ಮಾನ್ಸೊಂಟೊ ದರದ ಸುಮಾರು ಶೇಕಡಾ 25 ರಷ್ಟರಲ್ಲಿ ಅಷ್ಟೇ ಗರಿಷ್ಠ ಇಳುವರಿ ಬೀಜವನ್ನು ಉತ್ಪಾದಿಸಿದೆ. ಹೆಚ್ಚಿನ ಸಾರ್ವಜನಿಕ ಹೂಡಿಕೆಯಿಂದಾಗಿಯೇ ಸಂಶೋಧನಾ ವ್ಯವಸ್ಥೆಗೆ ಇಂತಹ ಬಲ ಬಂದಿದೆ. ನಾವು ಇಲ್ಲಿ ವಿಫಲವಾಗಿದ್ದೇವೆ. ಇಲ್ಲಿ ನಾವು ಕೃಷಿ ರಂಗದ ಮಾನ್ಸೊಂಟೊ ಮತ್ತು ಇದೇ ರೀತಿಯ ಕಾರ್ಪೊರೇಟ್ ಸಂಸ್ಥೆಗಳ ಅಡಿಯಾಳಾಗಿದ್ದೇವೆ.
ಅದೇ ರೀತಿ ನಮ್ಮ (ಕೃಷಿ) ವಿಸ್ತರಣಾ ವ್ಯವಸ್ಥೆಯನ್ನು ಎನ್‌ಜಿಓಗಳು ಹಾಗೂ ಖಾಸಗಿ ಲಾಗುವಾಡು ಡೀಲರ್‌ಗಳು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿವೆ. ಸಾರ್ವಜನಿಕ ಸಂಶೋಧನೆ ದುರ್ಬಲಗೊಂಡರೆ ಸಾರ್ವಜನಿಕ ವಿಸ್ತರಣೆ ದ್ವಂಸಗೊಳ್ಳುತ್ತದೆ.
ಮುಕ್ತ ವ್ಯಾಪಾರದ ಅಪಾಯಗಳು
ಮುಕ್ತ ವ್ಯಾಪಾರ ಹಾಗೂ ಸಾರ್ವಜನಿಕ ವೆಚ್ಚ ಕಡಿತವು ಭಾರತದ ಆಹಾರ ಭದ್ರತೆಗೆ ಅಪಾಯವನ್ನು ತರಲಿದೆ ಎಂದು ಮ್ಯಾಕ್ರೋ ಅರ್ಥಶಾಸ್ತ್ರಜ್ಞರು ಪದೇ ಪದೇ ಹೇಳಿದ್ದಾರೆ ಅಲ್ಲವೇ?
ಒಂದು ವ್ಯವಸ್ಥೆಯಾಗಿ ಮುಕ್ತ ವ್ಯಾಪಾರವು ಜಗತ್ತಿನಾದ್ಯಂತ ಅಪಖ್ಯಾತಿಗೆ ಒಳಗಾಗಿದೆ. ಅಭಿವೃದ್ಧಿ ದೇಶಗಳು ಕೂಡ ಡಬ್ಲ್ಯೂಟಿಒವನ್ನು ಒಂದು ವಿಶ್ವಾಸಾರ್ಹ ಸಂಸ್ಥೆ ಎಂದು ಪರಿಗಣಿಸುತ್ತಿಲ್ಲ. ಆದ್ದರಿಂದಲೇ ಈ ದೇಶಗಳು ಹೆಚ್ಚು ಹೆಚ್ಚು ಪ್ರಾದೇಶಿಕ ಹಾಗೂ ದ್ವಿಪಕ್ಷೀಯ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಅದ್ಯತೆ ನೀಡುತ್ತಿವೆ. ಡಬ್ಲ್ಯೂಟಿಒ ಎಂಬುದು ಕೆಲಸ ಮಾಡುವ ಹಾಗೂ ಪ್ರಯೋಜನಕಾರಿ ಸಂಸ್ಥೆ ಆಗಿದ್ದರೆ ಏಕೆ ಇಂತಹ ಹೊಸ ಒಪ್ಪಂದಗಳ ಅಗತ್ಯ ಬರುತ್ತದೆ? ಆಫ್ರಿಕಾ, ಲ್ಯಾಟಿನ್ ಅಮೆರಿಕ ಹಾಗೂ ಏಷ್ಯಾದಾದ್ಯಂತ ಮುಕ್ತ ವ್ಯಾಪಾರ ಒಪ್ಪಂದಗಳು ಕಾರ್ಷಿಕ ಸಮಾಜವನ್ನು ಹಾಳುಗೆಡುವಿದೆ. ಅವುಗಳ ಮೇಲೆ ಅಗ್ಗದ ಅಮದುಗಳನ್ನು ತಂದು ಸುರಿಯಲಾಯಿತು. ಪರಿಣಾಮವಾಗಿ ದರಗಳು ಕುಸಿದು ಕಾರ್ಷಿಕ ಬಿಕ್ಕಟ್ಟು ಆಳಗೊಂಡಿತು.
ತಳಮಟ್ಟದ ಆಹಾರ ಧಾನ್ಯ ಉತ್ಪಾದನೆ ಇದ್ದ ದೇಶಗಳಲ್ಲಿ ಆಹಾರ ಭದ್ರತೆಯನ್ನು ಸಹ ಈ ಮುಕ್ತ ವ್ಯಾಪಾರ ಭಾಧಿಸಿದೆ. ವಾಣಿಜ್ಯ ಬೆಳೆಗಳನ್ನು ರಪ್ತು ಮಾಡಿ ಆಹಾರ ಧಾನ್ಯಗಳನ್ನು ಕೊಳ್ಳಲು ವಿದೇಶಿ ವಿನಿಮಯ ಗಳಿಸಲು ಈ ದೇಶಗಳು ಪ್ರಯತ್ನಿಸಿದವು. ಆದರೆ ವಾಣಿಜ್ಯ ಬೆಳೆಗಳ ಬೆಲೆಗಳು ಕುಸಿಯುತ್ತಿದ್ದಂತೆ ಅವುಗಳ ರಫ್ತು ಗಳಿಕೆಯೂ ಕುಸಿಯಿತು. ತತ್ಪರಿಣಾಮ, ಮೊದಲಿನಷ್ಟು ಪ್ರಮಾಣದ ಆಹಾರ ಧಾನ್ಯಗಳನ್ನು ಅಮದು ಮಾಡಿಕೊಳ್ಳಲು ಕಷ್ಟವಾಗತೊಡಗಿತು. ಹೀಗೆ ಇದು ಆ ದೇಶಗಳ ಆಹಾರ ಭದ್ರತೆಗೆ ಕಂಟಕವಾಗಿದೆ.
ಇದರ ಜೊತೆಗೆ ಸಾರ್ವಜನಿಕ ವೆಚ್ಚ ಕಡಿತವು, ಸಣ್ಣ ಮತ್ತು ಅತಿ ಸಣ್ಣ ರೈತರ ತೃಪ್ತಿಕರ ಲಾಭಾಂಶದೊಂದಿಗೆ ಉತ್ಪಾದನೆ ಮಾಡುವ ಸಾಮರ್ಥ್ಯವನ್ನು ತೀವ್ರವಾಗಿ ಭಾಧಿಸಿದೆ. ಸಬ್ಸಿಡಿಗಳ ಕಡಿತದಿಂದಾಗಿ ಹಾಗೂ ಕಾರ್ಪೊರೇಟ್‌ಗಳ ಲಾಭಕೋರತನದಿಂದಾಗಿ ಕೃಷಿ ಲಾಗುವಾಡು ದರಗಳು ಗಗನಕ್ಕೇರಿದವು. ರೈತರು ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಅವಲಂಬಿತರಾದರು. ಇವೆಲ್ಲವೂ ಸಣ್ಣ ಮತ್ತು ಅತಿ ಸಣ್ಣ ರೈತರು ತೀವ್ರವಾಗಿ ಹಿಂಡಲ್ಪಡಲು ಕಾರಣಗಳಾಗಿವೆ.
ಒಂದು ವೇಳೆ ಕೃಷಿ ವಲಯವು ಸುಧಾರಣೆಗಳ ಕಾರಣದಿಂದ ಬೆಳೆದಿದ್ದರೆ ಭಾರತದ ಬೆಳವಣಿಗೆ ದರಗಳು ಇನ್ನೂ ಹೆಚ್ಚಿನದಾಗಿರಬೇಕಿತ್ತು ಎಂಬುದನ್ನು ನೀವು ಒಪ್ಪುತ್ತೀರಾ?
ನವ ಉದಾರೀಕರಣ ಧೋರಣೆಗಳ ಕಳೆದ 30 ವರ್ಷಗಳಲ್ಲಿನ ಕೃಷಿ ಬೆಳವಣಿಗೆ ದರಕ್ಕಿಂತ, 1980ರ ದಶಕದ ಭಾರತದ ಕೃಷಿ ಬೆಳವಣಿಗೆ ದರ ಹೆಚ್ಚು ಇತ್ತು ಎಂಬುದು ಒಂದು ಸರಳವಾಗಿ ಕಾಣುವ ವಾಸ್ತವ. ಕೃಷಿಯಲ್ಲಿ ಯಾವುದೇ ಬೆಳವಣಿಗೆ ಸಾಧಿಸಲು ಸುಧಾರಣೆಗಳು ವಿಫಲವಾಗಿವೆ ಎಂದು ವಾದಿಸಲು ಇದೊಂದೇ ಸೂಚಕ ಸಾಕು.
ಆದರೆ ಮತ್ತೊಂದು ಅಂಶ ಇದೆ. 2015 ಹಾಗೂ 2022ರ ಮಧ್ಯೆ ಕೃಷಿ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ನರೇಂದ್ರ ಮೋದಿ ಸರ್ಕಾರವು ಹೇಳುತ್ತಿದೆ. ಇದೊಂದು ಪ್ರಸ್ತುತ ಬಿಜೆಪಿ ಆಳ್ವಿಕೆಯ ಅತಿ ದೊಡ್ಡ ವೈಪಲ್ಯವಾಗಿದೆ. ವಾಸ್ತವವಾಗಿ ಈ ಅವಧಿಯ ರೈತರ ಆದಾಯ ನಿಜ ಅರ್ಥದಲ್ಲಿ ಕುಸಿತ ಆಗಿರುವ ಸಾಧ್ಯತೆ ಇದೆ. ವಿನಾಶಕಾರಿ ನೋಟು ರದ್ದು, ದೂರಾಲೋಚನೆ ಇಲ್ಲದ ಸರಕು ಹಾಗೂ ಸೇವೆಗಳ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ, ಕೋವಿಡ್-19 ಬಿಕ್ಕಟ್ಟಿಗೆ ಅಮಾನವೀಯ ಪ್ರತಿಕ್ರಿಯೆಯಾಗಿ ಈ ಅವಧಿ ಉದ್ದಕ್ಕೂ ಹೇರಿದ ಕರಾಳ ಲಾಕ್‌ಡೌನ್ ಈ ಎಲ್ಲವೂ ರೈತರನ್ನು ಜರ್ಝರಿತಗೊಳಿಸಿವೆ. ರೈತರು ಆಕ್ರೋಶಗೊಂಡಿದ್ದಾರೆ. ಖಂಡಿತವಾಗಿ ಸುಧಾರಣೆಗಳು ತಮ್ಮ ಜೀವನದ ಸ್ಥಿತಿಯನ್ನು ಹದಗೆಡಿಸಿವೆ ಎಂದೇ ಅವರು ಭಾವಿಸಿದ್ದಾರೆ.
ರೈತ ಚಳುವಳಿಯ ವಿಕಾಸ
ಕಳೆದ ಮೂವತ್ತು ವರ್ಷಗಳಿಂದ ರೈತಾಪಿ ಹೋರಾಟಗಳ ಚಳುವಳಿಯನ್ನು ಮುನ್ನೆಡೆಸುತ್ತಿದ್ದೀರಾ, ಈ ಪ್ರಚಾರಾಂದೋಲನದ ಕೇಂದ್ರ ಪ್ರಶ್ನೆ ಯಾವುದು ಮತ್ತು ರೈತರು ಅಣಿನೆರೆಯುವಿಕೆಯ ವಿಕಾಸವನ್ನು ನೀವು ಹೇಗೆ ನೋಡುತ್ತೀರಾ?
ಕಳೆದ ಮೂವತ್ತು ವರ್ಷಗಳ ನವ ಉದಾರೀಕರಣ ಧೋರಣೆಗಳು ಉಂಟು ಮಾಡಿರುವ ಆಳವಾದ ಕಾರ್ಷಿಕ ಬಿಕ್ಕಟ್ಟು ಮತ್ತು ಈ ಬಿಕ್ಕಟ್ಟಿನ ಪರಿಣಾಮವು ಕಳೆದ 25 ವರ್ಷಗಳಲ್ಲಿ (1995 ರಿಂದ) 4 ಲಕ್ಷಕ್ಕೂ ಹೆಚ್ಚು ರೈತರ ಆತ್ಮಹತ್ಯೆಗಳಿಗೆ ಕಾರಣವಾಗಿದೆ. ಈ ಅವಧಿಯ ರೈತ ಚಳುವಳಿಯ ಕೇಂದ್ರ ವಿಷಯ ಇದೇ ಎಂದು ನಾನು ಪರಿಗಣಿಸುತ್ತೇನೆ.
ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಎಂಬ ಮೂಲಭೂತ ವಿಷಯದ ಜೊತೆಗೆ ಇನ್ನೂ ಹಲವು ವಿಷಯಗಳು ಇವೆ. ಅವುಗಳೆಂದರೆ, ಸಮಗ್ರ ಕೃಷಿ ವೆಚ್ಚದ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯನ್ನು ಖಾತರಿಪಡಿಸುವ ಕೇಂದ್ರೀಯ ಶಾಸನ (ಸ್ವಾಮಿನಾಥನ್ ಆಯೋಗದ ಸೂತ್ರ ಸಿ2+50% ಪ್ರಕಾರ) ಜಾರಿ ಮಾಡುವುದು, ವಿದ್ಯುತ್ ರಂಗವನ್ನು ಖಾಸಗೀಕರಣಗೊಳಿಸುವ ಹಾಗೂ ಎಲ್ಲರಿಗೂ ವಿದ್ಯುತ್ ದರವನ್ನು ದುಬಾರಿಗೊಳಿಸುವ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ವಾಪಸ್ಸು ಪಡೆಯಬೇಕು. ಡೀಸೆಲ್, ಪೆಟ್ರೋಲ್, ಅಡುಗೆ ಅನಿಲದ ಅಗಣಿತ ಏರಿಕೆಯನ್ನು ತಡೆಗಟ್ಟುವುದು; ರೈತರು ಮತ್ತು ಕೃಷಿ ಕೂಲಿಕಾರರಿಗೆ ಸಂಪೂರ್ಣ ಸಾಲಮನ್ನಾ ಮಾಡುವುದು (ಈಗಿನ ಕೇಂದ್ರ ಸರ್ಕಾರ ಏಳು ವರ್ಷಗಳಲ್ಲಿ ಕಾರ್ಪೊರೇಟ್‌ಗಳಿಗೆ ಲಕ್ಷಾಂತರ ಕೋಟಿ ರೂ.ಗಳನ್ನು ಮನ್ನಾ ಮಾಡಿದೆ). ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನಾ (ಪಿಎಂಎಫ್‌ಬಿವೈ) ಯಡಿಯಲ್ಲಿ ಈಗಿರುವ ವಿಮಾ ಕಂಪನಿಗಳಿಗೆ ನೆರವು ನೀಡುವ ಬದಲು ಸಂತ್ರಸ್ತ ರೈತರಿಗೆ ನೆರವಾಗುವಂತಹ ಬೆಳೆ ವಿಮಾ ಯೋಜನೆಯನ್ನು ಸಂಪೂರ್ಣ ಪುನರ‍್ರಚನೆ ಮಾಡುವುದು. ಎಲ್ಲಾ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಸಮರ್ಪಕ ಪ್ರಮಾಣದಲ್ಲಿ ಸುಲಭ ಸಾಲ ವ್ಯವಸ್ಥೆ; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯಡಿಯಲ್ಲಿ ಕೆಲಸದ ದಿನಗಳನ್ನು ಹಾಗೂ ಕೃಷಿ ಕೂಲಿಕಾರರ ವೇತನವನ್ನು ದುಪ್ಪಟ್ಟುಗೊಳಿಸುವುದು. ಆದಿವಾಸಿ ರೈತರಿಗೆ ಅರಣ್ಯ ಹಕ್ಕುಗಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು. ರೈತರನ್ನು ಅವರ ಭೂಮಿಯಿಂದ ಬಲವಂತದ ಒಕ್ಕಲೆಬ್ಬಿಸುವಿಕೆಗೆ ತಡೆ: ಹಾಗೂ ನೈಜ ಭೂ ಸುಧಾರಣೆ ಕಡೆ ಸಾಗುವುದು. ಇದರ ಜೊತೆಗೆ 4 ಕಾರ್ಮಿಕ ಸಂಹಿತೆಗಳನ್ನು ರದ್ದು ಪಡಿಸುವ ಕಾರ್ಮಿಕ ವರ್ಗದ ಆಗ್ರಹ ಮತ್ತು ಬಿಜೆಪಿ ತನ್ನ ಆಳ್ವಿಕೆಯಲ್ಲಿ ನಡೆಸುತ್ತಿರುವ ಖಾಸಗೀಕರಣದ ಮೂಲಕ ದೇಶ ಮಾರುವುದು ನಿಲ್ಲಿಸಬೇಕು ಎಂಬ ಜನರ ಒತ್ತಾಯವೂ ಕೂಡ ನಮ್ಮ ಆಗ್ರಹದಲ್ಲಿ ಸೇರಿದೆ.
ನವ ಉದಾರೀಕರಣ ಧೋರಣೆಗಳ ಕಳೆದ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲದ ಈ ರೈತ ಚಳುವಳಿಯ ವಿಕಾಸವು ಮೇಲೆ ಪಟ್ಟಿ ಮಾಡಿದ ವಿಷಯಗಳ ಮೇಲೆ ಏರಿಕೆಯ ಪ್ರವೃತ್ತಿ ಹೊಂದಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಆದರೆ ತನ್ನ ಕಾರ್ಪೊರೇಟ್ ಪರ ಧೋರಣೆಗಳನ್ನು ಜಾರಿ ಮಾಡಲು ಅತಿರೇಕದಿಂದ ವರ್ತಿಸುತ್ತಿರುವ ಮೋದಿ ಸರ್ಕಾರದ ಈ ಏಳು ವರ್ಷಗಳಲ್ಲಿ ರೈತ ಚಳುವಳಿ ಸಹಜವಾಗಿ ಮತ್ತಷ್ಟು ತೀವ್ರಗೊಂಡಿದೆ. 2017ರಲ್ಲಿ 11 ದಿನಗಳ ರೈತರ ಮುಷ್ಕರವು ಸೇರಿ ರಾಜಾಸ್ಥಾನ ಮತ್ತು ಮಹಾರಾಷ್ಟ್ರದ ದೊಡ್ಡ ಹೋರಾಟಗಳು ಹಾಗೂ 2018ರ ಎಐಕೆಎಸ್ ಮುನ್ನಡೆಸಿದ ಕಿಸಾನ್ ಲಾಂಗ್ ಮಾರ್ಚ್‌ನಲ್ಲಿ ಕಂಡಂತೆ ಈ ಧೋರಣೆಗಳಿಗೆ ರೈತರು ಬಲವಾದ ಪ್ರತಿರೋಧ ತೋರಿದ್ದಾರೆ. ನಂತರ 2018ರಲ್ಲಿ ದೇಶದ ರಾಜಧಾನಿಯಲ್ಲಿ ಎರಡು ಬೃಹತ್ ಮೆರವಣಿಗೆ ನಡೆದಿವೆ. ಒಂದನ್ನು ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಸಂಘಟಿಸಿದ್ದರೆ ಮತ್ತೊಂದನ್ನು ಸಿಐಟಿಯು-ಎಐಕೆಎಸ್-ಎಐಎಡಬ್ಲ್ಯುಯು ಸಂಘಟನೆಗಳು ಸಂಘಟಿಸಿದ್ದವು.
ದೆಹಲಿ ಗಡಿಗಳಲ್ಲಿ ಹಾಗೂ ದೇಶದಾದ್ಯಂತ ಈಗ ನಡೆಯುತ್ತಿರುವ ಎಸ್.ಕೆ.ಎಂ. ನೇತೃತ್ವದ ಐತಿಹಾಸಿಕ ರೈತ ಹೋರಾಟ ನವೆಂಬರ್ 26, 2020ರಂದು ಆರಂಭವಾಗಿ ಒಂಬತ್ತು ತಿಂಗಳುಗಳನ್ನು ಪೂರೈಸಿರುವುದು (ಈಗ ಹತ್ತು ತಿಂಗಳಾಗಿದೆ) ಈ ಮೊದಲಿನ ಇಂತಹ ಎಲ್ಲಾ ಹೋರಾಟಗಳ ಸಮಾಗಮವಾಗಿದೆ. ಕೇಂದ್ರ ಸರ್ಕಾರ ಹೇರಿರುವ ಈ ಮೂರು ಕರಾಳ ಕಾಯ್ದೆಗಳು ಹಸಿದವನ ಬಾಯಿಗೆ ವಿಷ ಹಾಕಿದಂತಾಗಿದೆ. ಈ ರೈತ ಹೋರಾಟ ಧರ್ಮ, ಜಾತಿ, ಪ್ರದೇಶ, ರಾಜ್ಯ ಹಾಗೂ ಭಾಷೆಯನ್ನು ಮೀರಿ ಮುನ್ನಡೆಯುತ್ತಿದೆ. ದಬ್ಬಾಳಿಕೆ ಹಾಗೂ ಅಪಪ್ರಚಾರವನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿದೆ. ಈ ಮೂಲಕ ಕಾರ್ಪೊರೇಟ್ ಕೋಮುವಾದ ಹಾಗೂ ನವ ಉದಾರವಾದಿ ಪಥಕ್ಕೆ ನೇರವಾಗಿ ಮುಖಾಮುಖಿಯಾಗಿದೆ. ವಿಜಯ ಸಿಗುವವರೆಗೂ ಹೋರಾಟವನ್ನು ವಿಶಾಲ ನೆಲೆಯಲ್ಲಿ ತೀವ್ರಗೊಳಿಸುವ ತೀರ್ಮಾನಕ್ಕೆ ರೈತರು ಬಂದಿದ್ದಾರೆ.
ಗುತ್ತಿಗೆ ಕೃಷಿ
ಗುತ್ತಿಗೆ ಕೃಷಿ ಎಂಬುದು ಒಂದು ವಿವಾದಾತ್ಮಕ ವಿಷಯ. ಅದರ ಫಲಿತಾಂಶಗಳು ಭಿನ್ನ ವಿಭಿನ್ನವಾಗಿದ್ದಾಗ್ಯೂ ಗುತ್ತಿಗೆ ಕೃಷಿಯನ್ನು ಪ್ರೋತ್ಸಾಹಿಸಲಾಗುತ್ತಿದೆ. ನೀವು ಗುತ್ತಿಗೆ ಕೃಷಿಯ ಲಾಭ ನಷ್ಟಗಳ ಬಗ್ಗೆ ವಿವರಿಸಬಲ್ಲಿರಾ
ನಮ್ಮ ದೇಶದಲ್ಲಿ ಸ್ವಲ್ಪ ಸಮಯದಿಂದೀಚೆಗೆ ಗುತ್ತಿಗೆ ಕೃಷಿಯನ್ನು ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಅಗತ್ಯವೇನೆಂದರೆ ಗುತ್ತಿಗೆ ಕೃಷಿಯನ್ನು ರೈತ ಪರವಾಗಿರುವಂತೆ ಉತ್ತಮವಾಗಿ ನಿಯಂತ್ರಿಸುವುದು. ಕಾರ್ಪೊರೇಟ್ ಕಂಪನಿಗಳು ರೈತರಿಗೆ ಮೋಸ ಮಾಡದೇ ಒಪ್ಪಂದದಂತೆ ಬೆಲೆ ಪಾವತಿಸುವುದನ್ನು ಖಾತರಿಗೊಳಿಸಬೇಕಾಗಿದೆ. ಪರಿಸರಕ್ಕೆ ಮಾರಕವಾಗುವ ರೀತಿಯ ಕೃಷಿಯನ್ನು ರೈತರ ಮೇಲೆ ಕಂಪನಿಗಳು ಹೇರದಂತೆ ನಾವು ಖಾತರಿಗೊಳಿಸಬೇಕಾಗಿದೆ. ನಾವೊಂದು ರೈತ ಪರವಾದ ಸಂಕಷ್ಟ ಪರಿಹಾರ ವ್ಯವಸ್ಥೆಯೊಂದನ್ನು ಏರ್ಪಡಿಸಿಕೊಳ್ಳಬೇಕಾಗಿದೆ.
ಆದರೆ ಈಗ ಘೋಷಿಸಿರುವ ಕೃಷಿ ನೀತಿಗಳಲ್ಲಿ ಅತ್ಯಂತ ದುರ್ಬಲ ನಿಯಂತ್ರಣ ಕ್ರಮಗಳನ್ನು ಹೆಣೆಯಲಾಗಿದೆ. ಈ ಕ್ರಮಗಳು ಗುತ್ತಿಗೆ ಕೃಷಿಯಲ್ಲಿ ತೊಡಗುವ ಕಂಪನಿಗಳಿಗೆ ಮಾತ್ರ ನೆರವಾಗಲಿವೆ. ರೈತರು ಈ ಕಂಪನಿಗಳಿಗೆ ತಮ್ಮ ಭೂಮಿಯನ್ನು ಕಳೆದುಕೊಂಡು ಬಿಡಬಹುದು ಎಂಬ ಆತಂಕ ಆವರಿಸಿದೆ. ಹಾಗಾಗಿ ಗುತ್ತಿಗೆ ಕೃಷಿಗೆ ಸಂಬಂಧಿಸಿದಂತೆ ಕಠಿಣ ನಿಯಂತ್ರಣಗಳನ್ನು ಹೊಂದಬೇಕು. ಪ್ರತಿಯೊಂದು ರಾಜ್ಯದ ನಿರ್ದಿಷ್ಟ ಪರಿಸ್ಥಿತಿಯನ್ನು ಗಮನಕ್ಕೆ ತೆಗೆದುಕೊಂಡು ರಾಜ್ಯ ಸರ್ಕಾರಗಳೇ ಇಂತಹ ನಿಯಮಗಳನ್ನು ರೂಪಿಸಿ ಅಂಗೀಕರಿಸಬೇಕು.
ಹೊಸ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಎಐಕೆಎಸ್ ಸಕ್ರಿಯವಾಗಿ ಭಾಗವಹಿಸುತ್ತಿದೆ. ಕೃಷಿ ಕಾನೂನುಗಳ ಕುರಿತು ಹೇಳುವಿರಾ?
ಕೃಷಿ ಕಾಯ್ದೆಗಳು ಭಾರತೀಯ ರೈತರ ಜೀವನೋಪಾಯದ ಮೇಲಿನ ಗದಾಪ್ರಹಾರವಾಗಿದೆ. ಎಪಿಎಂಸಿ ಮಾರುಕಟ್ಟೆಗಳು ಹಾಗೂ ಅಗತ್ಯ ಸರಕುಗಳ ಕಾಯ್ದೆಗಳು 1960ರ ದಶಕದಿಂದಲೂ ರೈತರು ಮತ್ತು ಗ್ರಾಹಕರ ಹಕ್ಕುಗಳನ್ನು ರಕ್ಷಿಸುತ್ತಾ ಬಂದಿವೆ. ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯಲ್ಲಿ ಕೆಲವು ನ್ಯೂನತೆಗಳಿದ್ದಾಗ್ಯೂ ರೈತರಿಗೆ ಉತ್ತಮ ಮಾರುಕಟ್ಟೆ ದೊರಕುವಂತೆ ಮಾಡುವಲ್ಲಿ ಹಾಗೂ ಸ್ಥಿರವಾದ ಬೆಲೆ ಪಡೆಯಲು ಸಹಾಯ ಮಾಡಿವೆ. ಈ ನ್ಯೂನತೆಗಳನ್ನು ಸರಿಪಡಿಸಬೇಕಾಗಿತ್ತು. ಇದರ ಬದಲಾಗಿ ಸರ್ಕಾರವು ಈ ಕೃಷಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ನೆಗಡಿಗೆ ಮೂಗನ್ನೇ ಕತ್ತರಿಸಿ ಹಾಕಿದೆ.
ಅವರಿಗೆ ಎ.ಪಿ.ಎಂ.ಸಿ. ಬೇಕಾಗಿಲ್ಲ. ಅವರು ಎಪಿಎಂಸಿಯನ್ನು ಕಳಚಿ ಹಾಕಲು ಹವಣಿಸುತ್ತಿದ್ದಾರೆ ಮತ್ತು ಕೃಷಿ ಮಾರುಕಟ್ಟೆಯನ್ನು ಅಧಾನಿ ಮತ್ತು ಅಂಬಾನಿಯಂತಹ ಖಾಸಗಿ ಕಾರ್ಪೊರೇಟ್ ಕುಳಗಳ ನಿಯಂತ್ರಣಕ್ಕೆ ಒಪ್ಪಿಸಲು ಬಯಸುತ್ತಿದ್ದಾರೆ. ಮಾರುಕಟ್ಟೆ ವ್ಯವಸ್ಥೆ ವಿನಾಶ ಹೊಂದಿದರೆ ರೈತರು ತಾವಾಗಿಯೇ ಕಾರ್ಪೊರೇಟ್‌ಗಳ ತೆಕ್ಕೆಗೆ ನೂಕಲ್ಪಡುತ್ತಾರೆ. ಇದರಿಂದಾಗಿ ಪಂಜಾಬ್, ಹರ್ಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತಾಪಿ ಜನತೆ ವಿನಾಶ ಹೊಂದುತ್ತಾರೆ. 2006ರಲ್ಲಿ ಬಿಹಾರ ರಾಜ್ಯದಲ್ಲಿ ಈ ರೀತಿ ಮಾರುಕಟ್ಟೆ ವ್ಯವಸ್ಥೆಯನ್ನು ಕಳಚಿ ಹಾಕಿದ ಪರಿಣಾಮವಾಗಿ ಅಲ್ಲಿನ ರೈತರು ಗಂಭೀರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಇದೇ ರೀತಿಯಲ್ಲಿ ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರುವುದರಿಂದ ಚಿಲ್ಲರೆ ವ್ಯಾಪಾರ ಮತ್ತು ಸರಕು ಸಾಗಾಣಿಕೆಯನ್ನು ಕಾರ್ಪೊರೇಟ್‌ಗಳ ವಶಕ್ಕೆ ನೀಡಲು ಅವಕಾಶವಾಗುತ್ತದೆ. ಇದರ ಅರ್ಥ ಏನೆಂದರೆ ಮಾರುಕಟ್ಟೆಯಲ್ಲಿ ಆಹಾರ ವಸ್ತುಗಳ ಬೆಲೆ ವಿಪರೀತ ಹೆಚ್ಚಾಗಿ ಗ್ರಾಹಕರಿಗೂ ತೊಂದರೆ ಆಗುತ್ತದೆ.
ಒಟ್ಟಾರೆಯಾಗಿ ಬಿಜೆಪಿ ಸರ್ಕಾರದ ಈ ಮೂರು ಕೃಷಿ ಕಾನೂನುಗಳು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಕಳಚಿ ಹಾಕುವ, ಆಹಾರ ಧಾನ್ಯಗಳನ್ನು ಸರ್ಕಾರ ಖರೀದಿಸುವ ವ್ಯವಸ್ಥೆಯನ್ನು ಕಳಚಿ ಹಾಕುವ, ಆ ಮೂಲಕ 81 ಕೋಟಿ ಭಾರತೀಯರು ಸೌಲಭ್ಯ ಪಡೆಯುತ್ತಿರುವ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಕಳಚಿ ಹಾಕುವ ಉದ್ದೇಶ ಹೊಂದಿದೆ. ಅದ್ದರಿಂದಲೇ ನಾವು ಹೇಳುತ್ತಿರುವುದು; ಈ ಕೃಷಿ ಕಾನೂನುಗಳು ಕೇವಲ ರೈತ ವಿರೋಧಿ ಮಾತ್ರವಲ್ಲ, ಮೂಲಭೂತವಾಗಿ ಜನ ವಿರೋಧಿಯಾಗಿವೆ .
ಅದೇ ರೀತಿ ಈ ಕೃಷಿ ಕಾನೂನುಗಳು ಸಂವಿಧಾನ ಬಾಹಿರವಾದವು. ಈ ವಿಷಯವಾಗಿ ನಮ್ಮ ಸಂವಿಧಾನವು ಸ್ಪಷ್ಟವಾದ ಗೆರೆಗಳನ್ನು ಎಳೆದಿದ್ದು ಕೃಷಿಯು ರಾಜ್ಯ ಸರ್ಕಾರಗಳ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಹೇಳಿದೆ. ಕೇಂದ್ರ ಸರ್ಕಾರ ಬೇರೆ ಎಲ್ಲಾ ವಿಚಾರಗಳಲ್ಲಿ ತೋರಿಸಿರುವಂತೆ ಸಂವಿಧಾನಕ್ಕೆ ಸಂಪೂರ್ಣ ಅಗೌರವವನ್ನು ಮತ್ತು ಅವಿಧೇಯತೆಯನ್ನು ತೋರಿಸಿ ಒಕ್ಕೂಟ ತತ್ವಗಳನ್ನು ಗಾಳಿಗೆ ತೂರಿದೆ ಮತ್ತು ರಾಜ್ಯಗಳ ಅಧಿಕಾರದಲ್ಲಿ ಹಸ್ತಕ್ಷೇಪ ನಡೆಸಿ ಸಂಸತ್ತಿನಲ್ಲಿ ಈ ಕಾನೂನುಗಳನ್ನು ಅಂಗೀಕರಿಸಿದೆ. ಎಡಪಕ್ಷಗಳು ಮತ್ತು ಇತರೆ ಪಕ್ಷಗಳ ಸಂಸದರು ಸಂಸತ್ತಿನಲ್ಲಿ ಪ್ರಬಲವಾಗಿ ವಿರೋಧಿಸಿವೆ. ಆದರೆ ಅಘಾತಕಾರಿಯಾಗಿ ಸರ್ವಾಧಿಕಾರಿ ಪ್ರಕ್ರಿಯೆಗಳನ್ನು ಬಳಸಿ ಈ ಕಾನೂನುಗಳಿಗೆ ಸಂಸತ್ತಿನ ಅಂಗೀಕಾರ ಪಡೆಯಲಾಗಿದೆ.
ನಮ್ಮ ಬೇಡಿಕೆ ಸುಸ್ಪಷ್ಟವಾಗಿದೆ. ಈ ಮೂರು ಕಾನೂನುಗಳನ್ನು ಹಿಂಪಡೆಯಲು ನಾವು ಬಯಸುತ್ತೇವೆ. ಈ ಬೇಡಿಕೆ ಈಡೇರುವವರೆಗೂ ಒಂಬತ್ತು (ಈಗ ಹತ್ತು) ತಿಂಗಳಿಂದಲೂ ನಡೆಸಿಕೊಂಡು ಬರುತ್ತಿರುವ ಐತಿಹಾಸಿಕ ಹೋರಾಟ ಮುಂದುವರೆಯುತ್ತದೆ.