ಮುಂಬೈ: ಜಿಲ್ಲಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನಿಗೆ ಹೊಸ ಮತ್ತು ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಿರುವ ಆದೇಶವನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಸ್.ವಿ. ಕೊತ್ವಾಲ್ ಅವರಿದ್ದ ಏಕ ಸದಸ್ಯ ಮುಂದೆ ಸೋಮವಾರ ವಿಚಾರಣಗೆ ಬಂದಿತು. ಈಗಾಗಲೇ ಪ್ರಕರಣದ ವಿಚಾರಣೆ ಆಲಿಸಿರುವ ಸಮನ್ವಯ ಪೀಠದ ಮುಂದೆಯೇ ಮೇಲ್ಮನವಿ ಸಲ್ಲಿಸುವಂತೆಯೂ ಏಕ ಸದಸ್ಯ ಪೀಠ ಆದೇಶ ನೀಡಿದೆ.
2021 ರಲ್ಲಿ ಹೈಕೋರ್ಟ್‌ನ ಮತ್ತೊಂದು ಪೀಠವು ದೂರುದಾರ ರಾಜೇಶ್ ಕುಂಟೆ ಅವರಿಗೆ ಪ್ರಕರಣದಲ್ಲಿ ಯಾವುದೇ ಹೊಸ ದಾಖಲೆಗಳನ್ನು ಸಲ್ಲಿಸಲು ಅವಕಾಶ ನೀಡಲಿಲ್ಲ ಎಂದು ಗಾಂಧಿ ತಮ್ಮ ಮನವಿಯಲ್ಲಿ ಹೇಳಿದ್ದಾರೆ. ಆದಾಗ್ಯೂ, ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಈ ವರ್ಷದ ಜೂನ್‌ನಲ್ಲಿ ಹೊಸ ದಾಖಲೆಗಳನ್ನು ಸಲ್ಲಿಸಲು ಕುಂಟೆಗೆ ಅನುಮತಿ ನೀಡಿತು. ಈ ಹಂತದಲ್ಲಿ ಅನುಮತಿಸಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಆದೇಶವು ಸಂಪೂರ್ಣ ಕಾನೂನುಬಾಹಿರ ಮತ್ತು ಪೂರ್ವಾಗ್ರಹ ಪೀಡಿತವಾದುದು ಎಂದು ರಾಹುಲ್ ಗಾಂಧಿ ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.
ಮಹಾತ್ಮ ಗಾಂಧಿಯ ಹತ್ಯೆಗೆ ಆರ್‌ಎಸ್‌ಎಸ್(ರಾಷ್ಟ್ರೀಯ ಸ್ವಯಂಸೇವಕ ಸಂಘ) ಕಾರಣ ಎಂದು ರಾಹುಲ್ ಗಾಂಧಿ ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ರಾಜೇಶ್ ಕುಂಟೆ ಆರೋಪಿಸಿ ಕ್ರಿಮಿನಲ್ ಮಾನನಷ್ಟ ಪ್ರಕಣ ದಾಖಲಿಸಿದ್ದಾರೆ.