ಭಾರತ ವೈಜ್ಞಾನಿಕವಾಗಿ ಮುಂದುವರೆದ ರಾಷ್ಟ್ರವಾಗಿ ರೂಪುಗೊಳ್ಳುತ್ತಿದ್ದರೂ, ಈ ಭೌತಿಕ ಮುನ್ನಡೆಯು ಬೌದ್ಧಿಕವಾಗಿ ಸಮಾಜದ ತಳಸ್ತರವನ್ನು ತಲುಪಿ, ಅಲ್ಲಿ ಬದುಕು ಸವೆಸುವ ಕೋಟ್ಯಂತರ ಜನರ ನಿತ್ಯ ಜೀವನದಲ್ಲಿ ವೈಚಾರಿಕತೆಯನ್ನು ಬೆಳೆಸದೆ ಹೋದರೆ, ವಿಜ್ಞಾನ ಮತ್ತು ವೈಜ್ಞಾನಿಕ ಬೆಳವಣಿಗೆ ಕೇವಲ ಮೇಲ್ಪದರದ ಅಲಂಕಾರಿಕ ಹೊದಿಕೆಯಾಗಿಬಿಡುತ್ತದೆ. ಧಾರ್ಮಿಕ ಶ್ರದ್ಧಾ ನಂಬಿಕೆಗಳು ಮತ್ತು ಜನಮಾನಸದಲ್ಲಿ ಬೇರೂರಿರುವ ಸಾಂಪ್ರದಾಯಿಕ ಆಚರಣೆಗಳು ನಾಲ್ಕು ಗೋಡೆಗಳನ್ನು ದಾಟಿ ವಿಶಾಲ ಸಮಾಜವನ್ನು ಆವರಿಸತೊಡಗಿದಾಗ, ಅಲ್ಲಿ ಮಾನವನ ಬೌದ್ಧಿಕ ಪ್ರಗತಿಗೆ ಎದುರಾಗುವ ಸವಾಲುಗಳನ್ನು ವಸ್ತುನಿಷ್ಠವಾಗಿ ಎದುರಿಸುವುದು ಒಂದು ಪ್ರಬುದ್ಧ ಸಮಾಜದ ಧ್ಯೇಯವಾಗಿರಬೇಕು. ಅತೀತ ಶಕ್ತಿಗಳಲ್ಲಿನ ಅಥವಾ ಅಗೋಚರ ವಿದ್ಯಮಾನಗಳಲ್ಲಿನ ಅತಿಯಾದ ನಂಬಿಕೆಗಳು ಮನುಷ್ಯರ ವಿವೇಕ ಮತ್ತು ವಿವೇಚನೆಗಳನ್ನು ಕಸಿದುಕೊಂಡಾಗ, ಅದು ಸಮಾಜ ಮತ್ತು ಸಂಸ್ಕೃತಿಯನ್ನು ವಿಭಿನ್ನ ನೆಲೆಗಳಲ್ಲಿ ವ್ಯತ್ಯಯಗಳನ್ನು ಉಂಟುಮಾಡುತ್ತದೆ. ಸೃಜನಶೀಲ
-ನಾ ದಿವಾಕರ
ಭಾರತದಂತಹ ಸಾಂಪ್ರದಾಯಿಕ ಸಮಾಜದಲ್ಲಿ, ಜಾತಿ ವ್ಯವಸ್ಥೆಯ ಕರ್ಮಠ ವಿಧಿವಿಧಾನಗಳು ಈಗಲೂ ಸಮಾಜದ ಎಲ್ಲ ಸ್ತರಗಳನ್ನೂ ವ್ಯಾಪಿಸಿರುವ ಹೊತ್ತಿನಲ್ಲಿ, 21ನೇ ಶತಮಾನದ ವಿಕಸಿತ ಭಾರತ ತನ್ನ ಪ್ರಾಚೀನತೆಯ ಪೊರೆ ಕಳಚಿಕೊಂಡು ಆಧುನಿಕತೆಯ ಕವಚವನ್ನು ಅಳವಡಿಸಿಕೊಳ್ಳುವುದು ವರ್ತಮಾನದ ತುರ್ತು. ವೈಚಾರಿಕತೆ (Rationality ) ಅಥವಾ ಆಧುನಿಕತೆ ( Modernity) ವಿಶಾಲ ಸಮಾಜದಲ್ಲಿ ಪ್ರಕಟವಾಗುವುದು, ಸಮಾಜದ ಸಾಮೂಹಿಕ ನಡೆನುಡಿಗಳಲ್ಲಿ ಮತ್ತು ಇಲ್ಲಿ ವ್ಯಕ್ತವಾಗುವ ಸಾಂಸ್ಕೃತಿಕ ಅಭಿವ್ಯಕ್ತಿಗಳಲ್ಲಿ. ಹಳತೆಲ್ಲವನ್ನೂ ಸಾರಾಸಗಟಾಗಿ ನಿರಾಕರಿಸುವುದು ಅಸಾಧು ಎನಿಸಿದರೂ, ಅಲ್ಲಿರುವ ಅಮಾನುಷತೆಯನ್ನು, ಮನುಷ್ಯ ವಿರೋಧಿ ಧೋರಣೆಗಳನ್ನು ಹಾಗೂ ಮುಂಚಲನೆಗೆ ಅಡ್ಡಿ ಮಾಡುವಂತಹ ಆಚರಣೆಗಳನ್ನು ವರ್ಜಿಸಿ, ಮುಂದಡಿಯಿಡುವುದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುತ್ತದೆ.
ವೈಚಾರಿಕ ನಡಿಗೆಯಲ್ಲಿ ಸಮಾಜ
ಈ ಚಿಂತನಾ ಕ್ರಮವನ್ನು ರೂಢಿಸಿಕೊಳ್ಳಲು ಭಾರತೀಯರಾದ ನಮಗೆ ಯಾವುದೇ ಚಾರಿತ್ರಿಕ ಸಂಶೋಧನೆಯ ಅಗತ್ಯವಿಲ್ಲ ಅಥವಾ ಇದು ಕಠಿಣವಾದ ರಾಕೆಟ್ ವಿಜ್ಞಾನವೂ ಅಲ್ಲ. ಸ್ವಾತಂತ್ರ್ಯಪೂರ್ವದಲ್ಲಿ, ಆನಂತರದಲ್ಲೂ ಅನೇಕ ಚಿಂತಕರು ನಮ್ಮ ನಡುವೆ ಬಿಟ್ಟುಹೋಗಿರುವ ತಾತ್ವಿಕ ನೆಲೆಗಳಲ್ಲೇ ಈ ಸೂಕ್ಷ್ಮ ತರಂಗಗಳನ್ನು ನಾವು ಗುರುತಿಸಬಹುದು. ಕಳೆದ ಮೂರು ದಶಕಗಳ ಸಾಂಸ್ಕೃತಿಕ ರಾಜಕಾರಣ ಮತ್ತು ಮತೀಯವಾದಿ ಸಾಮಾಜಿಕ ಆಲೋಚನಾ ಕ್ರಮಗಳು ನಮ್ಮ ಬೌದ್ಧಿಕ ನೆಲೆಗಳನ್ನು ಇಡಿಯಾಗಿ ಆವರಿಸಿಕೊಂಡಿದ್ದು, ಚರಿತ್ರೆಯ ಸತ್ಯಗಳನ್ನು ಸುಳ್ಳುಮಾಡುವ, ವರ್ತಮಾನದ ಮಿಥ್ಯೆಗಳನ್ನು ಸತ್ಯ ಎಂದು ಬಿಂಬಿಸುವ ಒಂದು ಸಾಂಸ್ಕೃತಿಕ ಜಗತ್ತನ್ನು ಸೃಷ್ಟಿಸಿಬಿಟ್ಟಿದೆ. ಈ ಭ್ರಾಮಕ ಜಗತ್ತಿನಲ್ಲಿ ಉಗಮಿಸಿರುವ ಬೌದ್ಧಿಕ ಆಲೋಚನಾ ಕ್ರಮಗಳು ಹುಟ್ಟುಹಾಕಿರುವ ದ್ವೇಷಾಸೂಯೆಗಳು ಮತ್ತು ವಕ್ರದೃಷ್ಟಿಯ ಮುನ್ನೋಟಗಳು, ಭಾರತದ ಯುವ ಸಮೂಹವನ್ನು ತಪ್ಪುದಾರಿಗೆ ಕರೆದೊಯ್ಯುವ ಸೇತುವೆಗಳಾಗಿವೆ.
ಇದನ್ನೂ ಓದಿ: ಏ. 10ರ ವರೆಗೆ ಕಾಲುವೆಗೆ ನೀರು – ಸಚಿವ ಶಿವರಾಜ್ ತಂಗಡಗಿ ಹೇಳಿಕೆ
ಇಲ್ಲಿ ಬಲಿಯಾಗುವುದು ವರ್ತಮಾನದ ಸಮಾಜ ಮಾತ್ರವಲ್ಲ, ವಾಸ್ತವದಲ್ಲಿ ಈ ಸಮಾಜವನ್ನು ಉಜ್ವಲ ಭವಿಷ್ಯದೆಡೆಗೆ ಕೊಂಡೊಯ್ಯಲು ಅವಶ್ಯವಾಗಿ ಬೇಕಾಗುವ ಬೌದ್ಧಿಕ ಸೃಜನಶೀಲತೆ ಮತ್ತು ಭೌತಿಕ ಕ್ರಿಯಾಶೀಲತೆಯ ನೆಲೆಗಳು ವಿನಾಶದತ್ತ ಸಾಗುತ್ತವೆ. ಸಾಮಾನ್ಯವಾಗಿ ಸೃಜನಶೀಲತೆ (Creativity) ಯನ್ನು ನಿರ್ವಚಿಸುವಾಗ ಕಲೆ, ಸಾಹಿತ್ಯ , ರಂಗಭೂಮಿ ಮತ್ತು ಇತರ ಅಭಿವ್ಯಕ್ತಿ ಮಾಧ್ಯಮಗಳಿಗೆ ಅನ್ವಯಿಸಲಾಗುತ್ತದೆ. ಆದರೆ ವಿಶಾಲಾರ್ಥದಲ್ಲಿ ಸೃಜನಶೀಲತೆ ಎನ್ನುವುದು ಸಮಾಜದಲ್ಲಿ ಹೊಸತನ್ನು ಸೃಜಿಸುವ ಒಂದು ಬೌದ್ಧಿಕ ಪ್ರಕ್ರಿಯೆ, ಚಿಂತನಾ ವಿಧಾನ ಮತ್ತು ಸಾಂಸ್ಕೃತಿಕ ಚಲನೆ. ಪುರಾತನ ರೀತಿ ರಿವಾಜುಗಳನ್ನು, ಆಚರಣೆ ಮತ್ತು ಚಿಂತನೆಗಳನ್ನು ಸಂಪೂರ್ಣವಾಗಿ ನಿರಾಕರಿಸದೆಯೇ, ತಿರಸ್ಕರಿಸದೆಯೇ, ಅದರೊಳಗಿನ ಮಾನವ ವಿರೋಧಿ ಧೋರಣೆಗಳನ್ನು ತೊಡೆದುಹಾಕಿ, ಹೊಸ ಸಮಾಜವನ್ನು ಕಟ್ಟುವತ್ತ ಮುನ್ನಡೆಯುವುದು ಸೃಜನಶೀಲ ಎನಿಸಿಕೊಳ್ಳುತ್ತದೆ.
ಭಾರತದ ಸಮಕಾಲೀನ ಚರಿತ್ರೆಯಲ್ಲೂ ಇಂತಹ ಪ್ರಯತ್ನಗಳನ್ನು ನಾವು ಕಂಡಿದ್ದೇವೆ. ಕರ್ಮಠ ಜಾತಿ ಶ್ರೇಷ್ಠತೆಯ, ಧಾರ್ಮಿಕ ಮಡಿವಂತಿಕೆಯ ವಾತಾವರಣದಲ್ಲಿ ಬೆಳೆದ ಅನೇಕ ಸಾಹಿತಿ ಕಲಾವಿದರು ಈ ಸೃಜನಶೀಲ ಪ್ರಯತ್ನಗಳಿಗೆ ಸಾಕ್ಷಿಯಾಗಿರುವುದನ್ನು ಗುರುತಿಸಬಹುದು. 20ನೇ ಶತಮಾನದಲ್ಲಿ ಗುರುತಿಸಬಹುದಾದ ಈ ಗುಣಾತ್ಮಕ ಸುಧಾರಣೆ ಅಥವಾ ಪರಿವರ್ತನೆಯ ಚಿಂತನಾಕ್ರಮಗಳು, 21ನೇ ಶತಮಾನದಲ್ಲಿ ಮತ್ತಷ್ಟು ಮೊನಚಾಗಬೇಕಿತ್ತು. ಆಧುನಿಕತೆಯ ನಡಿಗೆಯಲ್ಲಿ ಹಿನ್ನೋಟ ಅತ್ಯವಶ್ಯ ಆದರೆ ಹಿನ್ನಡಿಗೆ ಅಪಾಯಕಾರಿ ಎಂಬ ಎಚ್ಚರಿಕೆಯೊಂದಿಗೆ ಸಮಾಜ ಮುಂದಡಿ ಇಟ್ಟಾಗ, ಇದು ಸಾಧ್ಯವಾಗುತ್ತದೆ. ದುರದೃಷ್ಟವಶಾತ್ ಡಿಜಿಟಲ್ ಯುಗದ ವಿಕಸಿತ ಭಾರತ ಈ ಗುಣಾತ್ಮಕತೆಗೆ ವಿಮುಖವಾಗುತ್ತಿದೆ. ಧಾರ್ಮಿಕ-ಆಧ್ಯಾತ್ಮಿಕ-ಜಾತಿ ಪಾರಮ್ಯದ ತಾತ್ವಿಕ ನೆಲೆಗಳು ಇಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ.
ಸೃಜನಶೀಲತೆಯ ಭಿನ್ನ ಆಯಾಮಗಳು
ಸೃಜನಶೀಲತೆಯ ಮತ್ತೊಂದು ಪ್ರಧಾನ ಲಕ್ಷಣ ಎಂದರೆ ಅದು ಸಮಾಜದಲ್ಲಿ ಮನುಜ ಸೂಕ್ಷ್ಮತೆಯನ್ನು ಬೆಳೆಸಲು ನೆರವಾಗುತ್ತದೆ. ಏಕೆಂದರೆ ಎಲ್ಲಾ ಪ್ರಾಚೀನ-ಪುರಾತನ ಸಮಾಜಗಳಲ್ಲೂ ಮನುಜ ಸಂಬಂಧಗಳು ಪ್ರಭಾವಿತವಾಗುತ್ತಿದ್ದುದು ಅಂದು ಜಾರಿಯಲ್ಲಿದ್ದ ಪಿತೃಪ್ರಧಾನ, ಊಳಿಗಮಾನ್ಯ, ಯಜಮಾನಿಕೆಯ ಮೌಲ್ಯಗಳಿಂದಲೇ. ಇದು ಸಾಂಸ್ಥಿಕವಾಗಿ ಮತಗಳನ್ನು ಮೀರಿದ, ಆಚರಣಾತ್ಮಕವಾಗಿ ಧರ್ಮ-ಅಧ್ಯಾತ್ಮ ಕೇಂದ್ರಗಳ ಗಡಿಗಳನ್ನು ಮೀರಿದ ಒಂದು ಲಕ್ಷಣ. ವರ್ತಮಾನದ ಆಧುನಿಕ ಸಮಾಜವನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಅತ್ಯವಶ್ಯವಾಗುವ ಆರೋಗ್ಯಕರ ಮಾನವೀಯ ಗುಣಾಂಶಗಳನ್ನು ತತ್ವ ಸಿದ್ದಾಂತಗಳಿಂದಾಚೆಗೂ ಪಡೆದುಕೊಂಡು, ಭವಿಷ್ಯಕ್ಕಾಗಿ ಆರೋಗ್ಯಕರ-ಸುಸ್ಥಿರ ಸಮಾಜವನ್ನು ರೂಪಿಸುವ ಜವಾಬ್ದಾರಿಯನ್ನು ವರ್ತಮಾನದ So called ಆಧುನಿಕ ಸಮಾಜ ಹೊರಲೇಬೇಕಿದೆ.
ಆದರೆ ಚಂದ್ರಯಾನ, ಮಂಗಳಯಾನದ ಶ್ರೇಯವನ್ನು ಹೆಗಲಿಗೇರಿಸಿಕೊಂಡಿರುವ ತಂತ್ರಜ್ಞಾನ ಯುಗದ ಡಿಜಿಟಲ್ ಭಾರತ ಈ ಜವಾಬ್ದಾರಿಯಿಂದ ವಿಮುಖವಾಗುತ್ತಿದೆ. ಮೂಢ ನಂಬಿಕೆ, ಮೌಢ್ಯಾಚರಣೆ ಹಾಗೂ ಅಂಧ ವಿಶ್ವಾಸಗಳು ತಳಸಮಾಜದಿಂದ ಮೇಲ್ಪದರದ ಗಣ್ಯ (Elite )ಸಮಾಜದವರೆಗೂ ವಿಸ್ತರಿಸಿರುವ ಭಾರತದಲ್ಲಿ ಕೊಂಚ ಮಟ್ಟಿಗಾದರೂ ಹೊಸ ಚಿಂತನೆಗಳನ್ನು ಹುಟ್ಟುಹಾಕುವ ಸೃಜನಶೀಲ ಪ್ರಯತ್ನಗಳು ಚಲನಚಿತ್ರಗಳ ಮೂಲಕ, ರಂಗಭೂಮಿ ಮತ್ತು ಸಾಹಿತ್ಯ ಕೃತಿಗಳ ಮೂಲಕ ನಡೆಯುತ್ತಿದ್ದವು. ಇಂದು ರಂಗಭೂಮಿಯನ್ನು ಹೊರತುಪಡಿಸಿ, ಉಳಿದೆಲ್ಲಾ ಸಾಂಸ್ಕೃತಿಕ ಆಯಾಮಗಳಲ್ಲೂ ಈ ಪ್ರಯತ್ನಗಳು ಹಿಮ್ಮೆಟ್ಟುತ್ತಿವೆ ಅಥವಾ ಹಿಮ್ಮೆಟ್ಟಿಸಲಾಗುತ್ತಿದೆ. ಕತೆ, ಕವಿತೆ, ಕಾದಂಬರಿ, ಚಲನಚಿತ್ರ, ನಾಟಕ ಹೀಗೆ ಎಲ್ಲ ಸಾಂಸ್ಕೃತಿಕ ನೆಲೆಗಳನ್ನೂ ಆವರಿಸಿರುವ ಕಲ್ಪಿತ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಚಿಂತನಾ ಕ್ರಮಗಳು ( Imagined Culture and Cultural Thought process) , ಸಂಸ್ಕೃತಿ ಮತ್ತು ಸ್ಥಾಪಿತ ಧರ್ಮ ಅಥವಾ ಅಧ್ಯಾತ್ಮಗಳನ್ನು ಸಮೀಕರಿಸುವ ಮೂಲಕ, ಅದರೊಳಗೆ ಸೃಜಿಸಲನುವಾಗಿದ್ದ ಹೊಸ ಚಿಂತನೆಗಳೆಲ್ಲವನ್ನೂ ಹೊಸಕಿ ಹಾಕುತ್ತಿವೆ.
ಹಾಗಾಗಿಯೇ ಭಾರತೀಯ ಚಲನಚಿತ್ರ ರಂಗ ಕೇವಲ ಮಾರುಕಟ್ಟೆ ಮತ್ತು ಸಾಮಾನ್ಯ ಪ್ರೇಕ್ಷಕರಿಗೆ ಸ್ಪಂದಿಸುವಂತಹ ರೋಚಕ ಕಥಾನಕಗಳನ್ನು ಪರದೆಯ ಮೇಲೆ ತರುತ್ತಿದೆ. ಈ ಕಾರ್ಪೋರೇಟ್ ಬಂಡವಾಳದ ನೆರಳಿನಲ್ಲೇ ಅಲ್ಲಲ್ಲಿ ಸೃಷ್ಟಿಯಾಗುತ್ತಿರುವ ಚಲನಚಿತ್ರಗಳು “ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವ ” ಒಂದು ಸಮಾಜದ ಸಾಂಸ್ಥಿಕ-ಸಾಂಘಿಕ ದಾಳಿಗಳನ್ನು ಎದುರಿಸಬೇಕಿದೆ. ಕಳೆದ ಹತ್ತು ವರ್ಷಗಳ ಚಲನಚಿತ್ರಗಳತ್ತ ಗಮನಹರಿಸಿದಾಗ ನಮಗೆ ಕಾಣುವುದಾದರೂ ಏನು ? ಚರಿತ್ರೆಯ ಮಿಥ್ಯೆಗಳನ್ನು ಪ್ರಮಾಣಿತ ಸತ್ಯ ಎಂದು ಬಿಂಬಿಸುವಂತಹ Propaganda ಚಿತ್ರಗಳು ಅಥವಾ ವರ್ತಮಾನದ ಸತ್ಯಘಟನೆಗಳನ್ನು ಅಲ್ಲಗಳೆಯುವ, ಸುಳ್ಳು ಎಂದು ಪ್ರಚಾರ ಮಾಡುವ ನಿರ್ದಿಷ್ಟ ಗುರಿಯ ಚಿತ್ರಕತೆಗಳು. ಇತ್ತೀಚೆಗೆ ಕಣ್ಣೆದುರು ನಡೆದ ಮಾನವ ನಿರ್ಮಿತ ಅನಾಹುತಗಳನ್ನು, ಅಮಾನುಷ ಹತ್ಯಾಕಾಂಡಗಳನ್ನು ಬಿಂಬಿಸುವುದಕ್ಕೂ ಈ “ಧಾರ್ಮಿಕ ಭಾವನೆಗಳ ” ವಾರಸುದಾರ ಶಕ್ತಿಗಳಿಂದ ಅನುಮತಿ ಪಡೆಯುವಂತಾಗಿದೆ.
ಅನಪೇಕ್ಷಿತ ಪ್ರತಿಗಾಮಿ ಲಕ್ಷಣಗಳು
ಕೇರಳದ ಪ್ರಸಿದ್ಧ ನಟ ಮೋಹನ್ ಲಾಲ್ ನಟನೆಯ ಎಂಪುರನ್ ಇದಕ್ಕೊಂದು ಜ್ವಲಂತ-ದುರಂತ ನಿದರ್ಶನ. 1983ರ ನೆಲ್ಲಿ, 1984ರ ಸಿಖ್ ನರಮೇಧ, 1989-90ರ ರಥಯಾತ್ರೆ, 1993ರ ಮುಂಬೈ, 2002ರ ಗೋದ್ರಾ- ಗುಜರಾತ್, 2020ರ ದೆಹಲಿ ಇವೆಲ್ಲವೂ ಸ್ವತಂತ್ರ ಭಾರತದ ಕಪ್ಪು ಚುಕ್ಕೆಗಳು. ಉತ್ತರದಾಯಿಗಳನ್ನೇ ಗುರುತಿಸಲಾಗದೆ ಈ ಮಾನವ ನಿರ್ಮಿತ ದುರಂತಗಳನ್ನು ನಾವು ವಿಸ್ಮೃತಿಯ ಕಂದಕದೊಳಗೆ ಹೂತುಹಾಕಿಬಿಟ್ಟಿದ್ದೇವೆ. ಈ ಘಟನೆಗಳನ್ನು ಸತ್ಯ ಎಂದು ಒಪ್ಪಿಕೊಳ್ಳದ ಸಮಾಜವೊಂದು ವರ್ತಮಾನದ ರಾಜಕೀಯ-ಸಾಂಸ್ಕೃತಿಕ-ಬೌದ್ಧಿಕ ಚಿಂತನಾ ಕ್ರಮಗಳನ್ನು ನಿರ್ದೇಶಿಸುತ್ತಿದೆ. ಈ ಚಿಂತನಾವಲಯವೇ ಇತಿಹಾಸದ ಪುಟಗಳಲ್ಲಿ ದಾಖಲಿತವಾಗದ ಪ್ರಸಂಗಗಳನ್ನೂ ಸಹ ಸತ್ಯಘಟನೆಗಳೆಂದು ಬಿಂಬಿಸುವ ಪ್ರಯತ್ನಗಳನ್ನು ಸತತವಾಗಿ ಮಾಡುತ್ತಲೇ ಇವೆ. ಫಲಿತಾಂಶ, ಪದ್ಮಾವತ್, ಛಾವಾ ಮಾರುಕಟ್ಟೆಯ ಫಲಾನುಭವಿಯಾಗುತ್ತದೆ, ಎಂಪುರನ್ 19 ದೃಶ್ಯಗಳನ್ನು ಕತ್ತರಿಸಿಕೊಂಡು ವಿಕಲಾಂಗವಾಗುತ್ತದೆ.
ಇದಕ್ಕಿಂತಲೂ ಗಂಭೀರವಾದ ಕೆಲವು ವಿದ್ಯಮಾನಗಳನ್ನು ಈ ಸಂದರ್ಭದಲ್ಲಿ ಗುರುತಿಸಲೇಬೇಕಿದೆ. ಎಂಪುರನ್ ನಾಯಕ ನಟ ಮೋಹನ್ ಲಾಲ್, ತನ್ನ ಅನುಗಾಲದ ಗೆಳೆಯ ಮತ್ತು ಮಲಯಾಳಿ ಚಿತ್ರರಂಗದ ಮೇರು ನಟ ಮಮ್ಮೂಟಿ ಶೀಘ್ರ ಗುಣಮುಖವಾಗಲಿ ಎಂದು ಶಬರಿಮಲೆ ದೇವಸ್ಥಾನದಲ್ಲಿ, ಮಮ್ಮೂಟಿ ಹೆಸರಿನಲ್ಲೇ (ಮುಹಮ್ಮದ್ ಕುಟ್ಟಿ) ಅರ್ಚನೆ ಮಾಡಿಸಿರುವುದು ಕೆಲವು ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಮಾಧ್ಯಮಮ್ ಪತ್ರಿಕೆಯ ಮಾಜಿ ಸಂಪಾದಕರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ವೇಳೆ ಮಮ್ಮೂಟಿಯ ಕೋರಿಕೆಯ ಮೇರೆ ಮೋಹನ್ ಲಾಲ್ ಪೂಜೆ ಮಾಡಿಸಿದ್ದರೆ, ಮಮ್ಮೂಟಿ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ. ಈ ವಿವಾದ ಗಂಭೀರ ಸ್ವರೂಪ ಪಡೆಯಲಿಲ್ಲವಾದರೂ, ಇದು ಮುಸ್ಲಿಂ ಸಮುದಾಯದಲ್ಲಿರುವ ಅಂಧಶ್ರದ್ಧೆ ಮತ್ತು ಮೂಲಭೂತವಾದ ಒಂದು ನಿದರ್ಶನವಾಗಿ ಕಾಣುತ್ತದೆ. ಮಮ್ಮೂಟಿಯಂತಹ ಒಬ್ಬ ಮೇರು ನಟನನ್ನು ನಿರ್ದಿಷ್ಟ ಧರ್ಮದ ಚೌಕಟ್ಟಿನೊಳಗೆ ಬಂಧಿಸುವುದೇ, ಚಲನಚಿತ್ರ ರಂಗದ ಸೃಜನಶೀಲತೆಯ ಕತ್ತುಹಿಸುಕಿದಂತೆ ಅಲ್ಲವೇ ?
ಕರ್ನಾಟಕದ ಚಾಮರಾಜನಗರದ ಶಾಲೆಯಲ್ಲಿ ನಡೆದ ಪ್ರಸಂಗ ಇನ್ನೂ ಆಘಾತಕಾರಿಯಾಗಿದೆ. ಚಾಮರಾಜನಗರದ ಶಾಲೆಯಲ್ಲಿ ನಡೆದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಶಾಲಾ ಬಾಲಕಿಯೊಬ್ಬಳು ಎರಡು ಗೊಂಬೆಗಳನ್ನು ಶವದ ರೀತಿ ಮಲಗಿಸಿದ್ದು, ಒಂದನ್ನು ಕಪ್ಪುಬಟ್ಟೆಯಿಂದ, ಮತ್ತೊಂದನ್ನು ಚೇಳಿನ ಚಿತ್ರ ಇರುವ ಬಟ್ಟೆಯಿಂದ ಮುಚ್ಚಿದ್ದಾಳೆ. “ ಬುರ್ಖಾ ಧರಿಸಿದರೆ ಸತ್ತಮೇಲೆ ಶವಕ್ಕೆ ಏನೂ ಆಗುವುದಿಲ್ಲ, ತುಂಡುಡುಗೆ ತೊಟ್ಟರೆ ನರಕಕ್ಕೆ ಹೋಗುವುದಲ್ಲದೆ, ದೇಹವನ್ನು ಹಾವು ಚೇಳು ತಿನ್ನುತ್ತವೆ ” ಎಂಬ ವಿವರಣೆಯನ್ನೂ ನೀಡಿರುವುದು ವರದಿಯಾಗಿದೆ. ಸಹಜವಾಗಿ ಶಾಲಾ ಮಕ್ಕಳಲ್ಲಿ ಈ ಚಿಂತನೆ ಮೂಡುವುದು ಕೌಟುಂಬಿಕ ಪರಿಸರ ಮತ್ತು ಮಾರ್ಗದರ್ಶನದಲ್ಲಿ. ಈ ವಯೋಮಾನದ ಮಕ್ಕಳು ಸಾಮಾನ್ಯವಾಗಿ ಮನೆಯ ಹಿರಿಯರ ಮಾರ್ಗದರ್ಶನ ಪಡೆದಿರುತ್ತಾರೆ. ಶಾಲಾ ಮಕ್ಕಳಲ್ಲೇ ಇಂತಹ ಮೌಢ್ಯ ಮತ್ತು ಕ್ರೂರ ಚಿಂತನೆಗಳನ್ನು ಬಿತ್ತುವ ಒಂದು ಸಮಾಜವೂ ನಮ್ಮ ನಡುವೆ ಇರುವುದಕ್ಕೆ ಸಾಕ್ಷಿ.
ಈ ಎರಡೂ ಪ್ರಕರಣಗಳು ವಿವಾದವಾಗದೆ ಇದ್ದರೂ, ಹೆಚ್ಚು ಸಾರ್ವಜನಿಕ ಚರ್ಚೆಗೊಳಗಾಗಲಿಲ್ಲ, ಆಗಬೇಕಿತ್ತು. ಏಕೆಂದರೆ ಭಾರತದ ಬಹುಸಾಂಸ್ಕೃತಿಕ ಸಮನ್ವಯ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ನೈತಿಕ ಜವಾಬ್ದಾರಿ ಇರುವ ಸಾಂಸ್ಕೃತಿಕ-ಶೈಕ್ಷಣಿಕ ಜಗತ್ತಿನಲ್ಲಿ, ಕ್ರಿಯಾಶೀಲ ಮನಸ್ಸುಗಳನ್ನು ಧಾರ್ಮಿಕತೆಯ ಸಂಕೋಲೆಗಳಲ್ಲಿ ಬಂಧಿಸುವುದಾಗಲೀ, ಎಳೆಯ ಮನಸ್ಸುಗಳನ್ನು ಧಾರ್ಮಿಕ ಅಂಧವಿಶ್ವಾಸದ ಸರಳುಗಳ ಹಿಂದೆ ಕೂಡಿಹಾಕುವುದಾಗಲೀ, ಎರಡೂ ಅಪಾಯಕಾರಿಯೇ ಆಗುತ್ತದೆ. ಈ ಅಸಹಿಷ್ಣುತೆಯ ಮತ್ತೊಂದು ಆಯಾಮವನ್ನು ಮುಂಬೈನ ಹಾಸ್ಯ ಕಲಾವಿದ (Stand up Comedian) ಕುನಾಲ್ ಕಾಮ್ರಾ ಪ್ರಕರಣದಲ್ಲಿ ಗುರುತಿಸಬಹುದು . ಕಳೆದ ವಾರ ಕುನಾಲ್ ಕಾಮ್ರಾ ಬಿಡುಗಡೆ ಮಾಡಿದ ʼ ನಯಾ ಭಾರತ್ ʼ ಎಂಬ ಯುಟ್ಯೂಬ್ ವಿಡಿಯೋದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿಯ ವಿರುದ್ಧ ಟೀಕೆ ಮಾಡಿದ್ದಾರೆ ಎಂಬ ಕಾರಣಕ್ಕೆ ಶಿವಸೇನೆ ಕಾರ್ಯಕರ್ತರು ಆತನ ಕಾಮಿಡಿ ಪ್ರದರ್ಶನ ನಡೆಯುತ್ತಿದ್ದ ಸಭಾಂಗಣದ ಮೇಲೆ ದಾಳಿ ನಡೆಸಿದ್ದಾರೆ. ಸದ್ಯಕ್ಕೆ ನ್ಯಾಯಾಲಯದಿಂದ ಜಾಮೀನು ಪಡೆದಿರುವ ಕಾಮ್ರಾ ವಿರುದ್ಧ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. 500ಕ್ಕೂ ಹೆಚ್ಚು ಬೆದರಿಕೆ ಕರೆಗಳು ಬಂದಿರುವುದಾಗಿ ಕಲಾವಿದ ಸ್ವತಃ ಹೇಳಿಕೊಂಡಿದ್ದಾರೆ.
ಭೂತ ಭವಿಷ್ಯದ ತೂಗು ಸೇತುವೆಯಲ್ಲಿ
ಸ್ವಾತಂತ್ರ್ಯಪೂರ್ವದಿಂದಲೂ ಭಾರತದ ಸಾಹಿತ್ಯ, ಕಲೆ, ಸಂಗೀತ, ರಂಗಭೂಮಿ ಮತ್ತು ಮನರಂಜನಾ ಕೇಂದ್ರಿತ ಚಲನಚಿತ್ರಗಳಲ್ಲೂ ಸಹ ಸಮಾಜದ ಪ್ರಬಲ ವ್ಯಕ್ತಿಗಳನ್ನು, ಸಮುದಾಯಗಳನ್ನು ವ್ಯಂಗ್ಯವಾಗಿ ನೋಡುವ, ವಿಮರ್ಶಾತ್ಮಕವಾಗಿ ವಿಶ್ಲೇಷಿಸುವ ಮತ್ತು ಕೆಲವೊಮ್ಮೆ ಹಾಸ್ಯದ ವಸ್ತುಗಳನ್ನಾಗಿ ಬಿಂಬಿಸುವ ಸಂಸ್ಕೃತಿಯೊಂದು ಬೆಳೆದುಬಂದಿದೆ. ತಮ್ಮನ್ನು ಸಾರ್ವಜನಿಕವಾಗಿ ಲೇವಡಿ ಮಾಡುವ ಕಲಾಭಿವ್ಯಕ್ತಿಯನ್ನು ಗೌರವದಿಂದ ಕಾಣುವ ರಾಜಕೀಯ ನಾಯಕರನ್ನೂ ಭಾರತ ಕಂಡಿದೆ. ಇದು ಕೇವಲ ಸಾಂವಿಧಾನಿಕ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಾಗಿ ನೋಡಲಾಗುವುದಿಲ್ಲ. ಬದಲಾಗಿ, ಒಂದು ಆರೋಗ್ಯಕರ ಸಮಾಜದಲ್ಲಿ ಇರಬೇಕಾದ ಸೂಕ್ಷ್ಮ ಮನುಜ ಸಂಬಂಧಗಳು ಮತ್ತು ಸಂವೇದನೆಯ ಪ್ರಶ್ನೆಯಾಗಿ ನೋಡಬೇಕಾಗುತ್ತದೆ. ಆರ್.ಕೆ. ಲಕ್ಷ್ಮಣ್, ಚೋ ರಾಮಸ್ವಾಮಿ, ಕೆ. ಶಂಕರ್ ಪಿಳ್ಳೈ (ಶಂಕರ್) ಇವರಂತಹ ವ್ಯಂಗ್ಯ ಚಿತ್ರಕಾರರು, ಮಾಸ್ಟರ್ ಹಿರಣ್ಣಯ್ಯ ಅವರಂತಹ ಕನ್ನಡದ ರಂಗಕರ್ಮಿಗಳು ನಮ್ಮ ನಡುವೆ ಇದ್ದುದು ನಿಜವೇ ಎಂದು ಅನುಮಾನಿಸುವ ರೀತಿಯಲ್ಲಿ, ಪ್ರಸ್ತುತ ಜನಪ್ರತಿನಿಧಿಗಳು, ಸರ್ಕಾರಗಳು ಹಾಸ್ಯಪ್ರಜ್ಞೆಯನ್ನು ಕಳೆದುಕೊಂಡಿರುವುದು ಈ ಬೆಳವಣಿಗೆಗಳಿಂದ ಸ್ಪಷ್ಟವಾಗುತ್ತದೆ.
ಆತ್ಮವಿಮರ್ಶೆಯ ಕಲ್ಪನೆಯೇ ನಶಿಸುತ್ತಾ ಹೋಗುವಂತಹ ಯಾವುದೇ ಸಮಾಜಗಳಲ್ಲಿ ಹಾಸ್ಯಪ್ರಜ್ಞೆ ನಶಿಸುತ್ತಾ ಇಲ್ಲವಾಗುತ್ತಲೇ ಹೋಗುತ್ತದೆ. ವ್ಯಷ್ಟಿಯ ನೆಲೆಯಲ್ಲಿ ಕನ್ನಡಿಯಲ್ಲಿ ನೋಡಿಕೊಳ್ಳುವ, ಸಮಷ್ಟಿ ನೆಲೆಯಲ್ಲಿ ಕಣ್ತೆರೆದು ಒಳಗಣ್ಣಿನಿಂದ ನೋಡುವ ವಿವೇಕ ಮತ್ತು ವಿವೇಚನೆಯನ್ನು ಬೆಳೆಸಿಕೊಳ್ಳದೆ ಹೋದರೆ, ಅಂತಹ ಸಮಾಜಗಳು ಕ್ರಮೇಣವಾಗಿ ಜಡಗಟ್ಟುತ್ತವೆ. ಪೆರುಮಾಳ್ ಮುರುಗನ್ “ ತನ್ನೊಳಗಿನ ಸಾಹಿತಿ ಸತ್ತುಹೋಗಿದ್ದಾನೆ,,,,, ” ಎಂದು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬರಹ, ಹಾಡು, ಅಭಿನಯ, ನಟನೆ ಎಲ್ಲವೂ ಸಾಂಪ್ರದಾಯಿಕ ಸಮಾಜವೊಂದರ, ಮೂಲಭೂತವಾದಿ ಚಿಂತನಾ ಕ್ರಮಗಳ ವಕ್ರದೃಷ್ಟಿಯಲ್ಲೇ ಬೆಳೆಯಬೇಕಾದ ಪರಿಸ್ಥಿತಿಯೇ ಸಮಾಜವನ್ನು ಪ್ರಾಚೀನತೆಯ ಕಡೆಗೆ ಕರೆದೊಯ್ಯುವ ಸಾಂಸ್ಥಿಕ ವಾಹಕಗಳಾದಾಗ , ಯಾವುದೇ ಸಮಾಜವಾದರೂ ತನ್ನೊಳಗಿನ ಸೃಜನಶೀಲತೆಯ ಶಕ್ತಿ ಕಳೆದುಕೊಂಡು, ನೈತಿಕತೆಯ ಪಾತಾಳಕ್ಕೆ ಕುಸಿಯುತ್ತದೆ.
ಬಹುಶಃ ಭಾರತ ಡಿಜಿಟಲ್ ಯುಗದಲ್ಲಿ, ಕೃತಕ ಬುದ್ಧಿಮತ್ತೆಯ (Artificial Intellegence) ಜಗತ್ತಿನಲ್ಲಿ ಈ ದ್ವಂದ್ವವನ್ನು ಎದುರಿಸುತ್ತಿದೆ. ಭಾರತದ ಸಾಂಸ್ಕೃತಿಕ ರಾಜಕಾರಣ ಮತ್ತು ಎಲ್ಲ ಮತಗಳಲ್ಲಿ ಬೇರೂರಿರುವ ಮತೀಯವಾದಿ, ಸಾಂಪ್ರದಾಯಿಕ, ಮೂಲಭೂತವಾದಿ ಸಾಂಸ್ಥಿಕ ನೆಲೆಗಳು, ತಳಸ್ತರದ ಸಮಾಜವನ್ನು ಬೌದ್ಧಿಕವಾಗಿ ಸಶಸ್ತ್ರೀಕರಣಗೊಳಿಸಿದೆ (Weaponisation). ಈಗಾಗಲೇ ಎಂ.ಎಫ್ ಹುಸೇನ್ ಅವರ ದುರಂತ ಕಥನವನ್ನು ಹಾದು ಬಂದಿರುವ ಭಾರತಕ್ಕೆ ಈ ಸಾಂಸ್ಕೃತಿಕ ಅಸಹಿಷ್ಣುತೆ ಮತ್ತು ಅದರ ರಾಜಕೀಯ ಪರಿಣಾಮಗಳು (Political Ramnifications), ಸ್ವಸ್ಥ ಸಮಾಜದಲ್ಲಿ ಇರಲೇಬೇಕಾದ ಸೃಜನಶೀಲತೆಯನ್ನು ಹೊಸಕಿಹಾಕಿಬಿಡುತ್ತದೆ. ಇದು ಸಾಂಸ್ಕೃತಿಕ ಜಗತ್ತನ್ನು ಜಡಗಟ್ಟಿಸುವ ಒಂದು ಪ್ರಕ್ರಿಯೆ. ಹಿಂದೂ-ಕ್ರೈಸ್ತ-ಮುಸ್ಲಿಂ ಸಮಾಜಗಳಲ್ಲಿ ಸಾಂಪ್ರದಾಯಿಕತೆ ಮತ್ತು ಅಂಧಶ್ರದ್ಧೆಗೆ ಜೋತು ಬೀಳುವ ಒಂದು ತಲೆಮಾರು ಕ್ರಮೇಣ ಕೋಶೀಕರಣಕ್ಕೆ (Cellularisation) ಒಳಗಾಗುತ್ತಾ ತನ್ನೊಳಗಿನ ಸೃಜನಶೀಲತೆ ಮತ್ತು ಚಲನಶೀಲತೆಯನ್ನು ಕಳೆದುಕೊಳ್ಳುತ್ತದೆ.
ಡಿಜಿಟಲ್ ಭಾರತದ ಮಿಲೆನಿಯಂ ತಲೆಮಾರಿನ ಯುವ ಮನಸ್ಸುಗಳನ್ನು ಈ ನಿಟ್ಟಿನಲ್ಲಿ ಜಾಗೃತಗೊಳಿಸಬೇಕಿದೆ. ತನ್ನೊಳಗಿನ ಸೃಜನಶೀಲ ಅಭಿವ್ಯಕ್ತಿಯ ನೆಲೆಗಳನ್ನು ತಾನೇ ಕೊಂದುಹಾಕುವ ಸಮಾಜವು ಆತ್ಮಘಾತುಕತೆಯತ್ತ ವಾಲುತ್ತದೆ. ಜಾತಿ, ಮತ, ಧರ್ಮ ಮತ್ತು ನಂಬಿಕೆಗಳನ್ನು ದಾಟಿ ಈ ಅಪಾಯವನ್ನು ಮನಗಂಡು, ಭಾರತದ ಸಮನ್ವಯ ಸಮಾಜ ಮತ್ತು ಬಹುಸಾಂಸ್ಕೃತಿಕ ನೆಲೆಗಳನ್ನು ಕಾಪಾಡುವ ಜವಾಬ್ದಾರಿ, ಆರೋಗ್ಯಕರ ಸಮಾಜದ ಕಟ್ಟುವಿಕೆಯಲ್ಲಿ ತೊಡಗಿರುವ ಪ್ರತಿ ವ್ಯಕ್ತಿಯ ಆದ್ಯತೆಯಾಗಬೇಕಿದೆ. ಇಲ್ಲವಾದಲ್ಲಿ ಬಹುಶಃ ಭೌತಿಕವಾಗಿ ಮಂಗಳ ಗ್ರಹದಲ್ಲಿ ವಾಸಿಸುವ ನಾವು ಬೌದ್ಧಿಕವಾಗಿ ಶಿಲಾಯುಗಕ್ಕೆ ತಲುಪುತ್ತೇವೆ. ಇದು ಸಾರ್ವತ್ರಿಕ ಜವಾಬ್ದಾರಿಯೂ ಹೌದು, ಸಂಘಟನಾತ್ಮಕ ಸಾಂವಿಧಾನಿಕ ಹೊಣೆಗಾರಿಕೆಯೂ ಹೌದು.
ಇದನ್ನೂ ನೋಡಿ : ಸದನದಲ್ಲಿ ‘ಹನಿ ಟ್ರ್ಯಾಪ್’ ಸದ್ದು! – ಮೀನಾಕ್ಷಿ ಬಾಳಿ, ಕೆ.ಎಸ್. ವಿಮಲಾ ಮಾತುಕತೆ Janashakthi Media