ಬೆಂಗಳೂರು: ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣ ಭಾಗದಲ್ಲಿಅಮಾಯಕರನ್ನು ಸುಲಿಗೆ ಮಾಡುತ್ತಿರುವ ಮೈಕ್ರೋ ಫೈನಾನ್ಸ್ ದಂಧೆಗೆ ಕಡಿವಾಣ ಹಾಕುವುದಾಗಿ ತಿಳಿಸಿದ್ದೂ, ಮೈಕ್ರೋ ಫೈನಾನ್ಸ್ ದಂಧೆ ನಡೆಸುತ್ತಿರುವವವ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಮೈಸೂರು ಮತ್ತು ಚಾಮರಾಜ ನಗರ ಜಿಲ್ಲೆ ಗಳ ಗ್ರಾಮೀಣ ಭಾಗದಲ್ಲಿ ಮೈಕ್ರೋ ಫೈನಾನ್ಸ್ ದಂಧೆ ಹೆಚ್ಚುತ್ತಿದೆ. ಜನರಿಗೆ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ದಂಧೆ ನಡೆಸುತ್ತಿರುವ ಸಂಸ್ಥೆಯ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಗ್ರಾಮೀಣ ಜನರಿಗೆ ಭದ್ರತೆ ಇಲ್ಲದೆ ಸಾಲ ನೀಡಿ ದುಬಾರಿ ಬಡ್ಡಿ ವಿಧಿಸಿ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ, ” ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿರುವ ಇಂತಹ ದಂಧೆಕೋರ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬೆಳಗಾವಿ| ಗಾಂಧೀಜಿ ಪುತ್ಥಳಿ ಅನಾವರಣಗೊಳಿಸಿದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ
ರೈತರು, ಸಾರ್ವಜನಿಕರಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್‌ನವರು ಸಾಲ ವಸೂಲಿ ಮಾಡುವಾಗ ಸೌಜನ್ಯದಿಂದ ವರ್ತಿಸಬೇಕು. ಇಲ್ಲವಾದರೆ, ನಿಮ್ಮ ವಿರುದ್ಧ ರೈತ ಸಂಘದಿಂದ ಹಳ್ಳಿ ಹಳ್ಳಿಯಲ್ಲೂ ಚಳವಳಿ ರೂಪಿಸಬೇಕಾಗುತ್ತದೆ ಎಂದು ಪಾಂಡವಪುರ ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಕೆ ನೀಡಿದರು.
ಪಾಣಡವಪುರ ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ್ ಸಭಾಂಗಣದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿ ಖಡಕ್ ಸೂಚನೆ ನೀಡಿದರು. ‘‘ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳದ್ದು ದೊಡ್ಡ ಸಮಸ್ಯೆಯಾಗಿಧಿದೆ. ರೈತರು, ಸಾರ್ವಜನಿಕರಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್‌ನವರು ಸಾಲ ವಸೂಲಾತಿ ಮಾಡುವಾಗ ದಬ್ಬಾಳಿಕೆ, ಒತ್ತಡ ಹಾಕುತ್ತಿದ್ದಾರೆ. ಮೈಕ್ರೋ ಫೈನಾನ್ಸ್‌ಗಳಿಗೆ ಹೆದರಿ ಸಾರ್ವಜನಿಕರು ಊರುಗಳನ್ನೇ ಬಿಟ್ಟು ಬೇರೆಡೆ ಗುಳೆ ಹೋಗುವ ಸ್ಥಿತಿ ಎದುರಾಗಿದೆ. ಇದರಿಂದ ಆ ಕುಟುಂಬದ ಮಕ್ಕಳ ಭವಿಷ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ,’’ ಎಂದು ಕಿಡಿಕಾರಿದರು.
‘‘ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ನೀಡುವ ಮೊದಲ, ಸಾಲ ಪಡೆಯುತ್ತಿರುವ ಗ್ರಾಹಕರಿಗೆ ಸಾಲದ ಅವಶ್ಯಕತೆ ಇದೆಯಾ ಎನ್ನುವ ಬಗ್ಗೆ ಪರಿಶೀಲನೆ ನಡೆಸಬೇಕು. ಸಾಲ ಪಡೆಯುತ್ತಿರುವ ವ್ಯಕ್ತಿಗಳ ಸಾಲದ ಹಣವನ್ನು ಅವರ ಅವಶ್ಯಕತೆಗೆ ಬಳಕೆ ಮಾಡಿಕೊಳ್ಳುತ್ತಾರೆಯೇ? ಇಲ್ಲಿಸಾಲ ಪಡೆದು ಬೇರೆಯವರಿಗೆ ನೀಡುತ್ತಾರಾ? ಎನ್ನುವ ಬಗ್ಗೆ ಮಾಹಿತಿ ಪಡೆದುಕೊಂಡು ಸಾಲ ನೀಡಬೇಕು, ನಿಮ್ಮಿಂದ ಸಾಲ ಪಡೆಯುವ ಬಹುತೇಕ ಮಂದಿ ಅನಕ್ಷರಸ್ಥರಾಗಿದ್ದಾರೆ. ಹಾಗಾಗಿ ಅವರಿಗೆ ಸಾಲ ಹಾಗೂ ಹಣದ ಮಹತ್ವ, ಬಳಕೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಮೈಕ್ರೋ ಫೈನಾನ್ಸ್ ಕಂಪನಿಗಳು ಮಾಡಬೇಕು,’’ ಎಂದು ತಿಳಿಸಿದರು
‘‘ಸಾಲ ನೀಡಿದ ಬಳಿಕ ಸರಿಯಾಗಿ ಮರುಪಾವತಿ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಜನರಿಗೆ ಸ್ವಲ್ಪ ಕಾಲಾವಕಾಶ ನೀಡಬೇಕು, ಒಬ್ಬರು ಸಾಲ ಕಟ್ಟಿಲ್ಲಎಂದು ಗುಂಪಿನ ಇತರೆ ಸದಸ್ಯರ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು, ಜನರೊಂದಿಗೆ ಸೌಜನ್ಯದಿಂದ ವರ್ತಿಸಿ ಸಾಲ ವಸೂಲಾತಿ ಮಾಡಬೇಕು. ಇಲ್ಲವಾದರೆ ಈ ಹಿಂದೆ ರೈತ ಸಂಘ ಸಾಲ ವಸೂಲಾತಿ ನಿಲ್ಲಿಸಿ ಎಂದು ಹಳ್ಳಿಗಳಲ್ಲಿಬೋರ್ಡ್ ಹಾಕಿ ನಡೆಸಿದ್ದ ಅಭಿಯಾನದ ಹೋರಾಟವನ್ನು ನಿಮ್ಮ ವಿರುದ್ಧ ಮತ್ತೆ ಆರಂಭಿಸಬೇಕಾಗುತ್ತದೆ,’’ ಎಂದು ಎಚ್ಚರಿಸಿದರು.
ಇದನ್ನೂ ನೋಡಿ: ಚಾಲಕರು| ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ನೋಂದಾವಣಿ ಮಾಡಿಕೊಳ್ಳುವುದು ಹೇಗೆ?