ಬೆಂಗಳೂರು : ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ಕರ್ನಾಟಕ ಹೈಕೋರ್ಟಿನ ತೀರ್ಪಿನ ಆಧಾರದಲ್ಲಿ ರಾಜ್ಯದ ವಿದ್ಯುತ್ ಗ್ರಾಹಕರ ಮೇಲೆ ಏಪ್ರಿಲ್ 1, 2025 ರಿಂದ ಭಾರಿ ಪ್ರಮಾಣದ ಹೊರೆಯನ್ನು ಹೊರಿಸುವ ಆದೇಶ ಹೊರಡಿಸಿರುವುದನ್ನು ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿಯ ತೀವ್ರವಾಗಿ ವಿರೋಧಿಸಿದೆ. ವಿದ್ಯುತ್
ಈ ಕುರಿತು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ.ಕೆ. ಪ್ರಕಾಶ್ ಪ್ರಕಟಣೆ ನೀಡಿದ್ದು, ಈ ಆದೇಶ ತಮ್ಮ ಸರ್ಕಾರ ಹೊರಡಿಸಿದ ಆದೇಶವಲ್ಲ ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ವಾಸ್ತವದಲ್ಲಿ ಈ ಹೊರೆಯನ್ನು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೊರಿಸುವ ಪ್ರಯತ್ನ ಮಾಡಲಾಗಿತ್ತು. ಈ ಹಿಂದೆ ಇದ್ದ ಕರ್ನಾಟಕ ವಿದ್ಯುತ್ ಮಂಡಳಿ (ಕೆಇಬಿ) ಯನ್ನು ರದ್ದುಗೊಳಿಸಿ ಕೆಪಿಟಿಸಿಎಲ್ ಮತ್ತು ಐದು ಎಸ್ಕಾಂಗಳನ್ನು ರಚಿಸಲಾಗಿತ್ತು. 2022 ರ ಮಾರ್ಚ್ ತಿಂಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ವಿದ್ಯುತ್ ಇಲಾಖೆಯ ನೌಕರರ ಪಿಂಚಿಣಿ ಮತ್ತು ಗ್ರಾಚುಯಿಟಿ ಪಾಲನ್ನು ಗ್ರಾಹಕರಿಂದ ಪಡೆಯಲು ಆದೇಶಿಸಬೇಕೆಂದು ಕೆ.ಇ.ಆರ್.ಸಿ. ಮುಂದೆ ಮೊದಲ ಬಾರಿಗೆ ಪ್ರಸ್ತಾಪವನ್ನು ಸಲ್ಲಿಸಿತ್ತು. ಇದನ್ನು ಕೆ.ಇ.ಅರ್.ಸಿ. ಒಪ್ಪಿರಲಿಲ್ಲ ಎಂದು ಜಾರ್ಜ್ ಅವರು ವಿವರಣೆ ನೀಡಿದ್ದಾರೆ.
ಇದನ್ನೂ ಓದಿ : ಹಲ್ಲೆಯಿಂದ ನೊಂದಿದ್ದೇನೆ; ಸ್ವಂತ ಊರಿಗೆ ಹೊರಟ ಮೀನುಗಾರ ಮಹಿಳೆ
ಸರ್ಕಾರದ ಈ ಪ್ರಸ್ತಾಪವನ್ನು ವಿರೋಧಿಸಿ ಎಫ್.ಕೆ.ಸಿ.ಸಿ.ಐ. ಹೈಕೋರ್ಟಿಗೆ ಸಲ್ಲಿಸಿದ ಅರ್ಜಿಯನ್ನು 2024 ಮಾರ್ಚ್ ನಲ್ಲಿ ಹೈಕೋರ್ಟ್ ತಿರಸ್ಕರಿಸಿತ್ತು. ಇದನ್ನು ಆಧರಿಸಿ ಕೆಪಿಟಿಸಿಎಲ್ ಮತ್ತು ಎಸ್ಕಾಂಗಳು ಮತ್ತೆ ಕೆ.ಇ.ಆರ್.ಸಿ.ಗೆ ಅರ್ಜಿ ಸಲ್ಲಿಸಿದ್ದವು. ಅದನ್ನು ಪುರಸ್ಕರಿಸಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿ ಕೆ.ಇ.ಅರ್.ಸಿ. ಆದೇಶ ಹೊರಡಿಸಿದೆ ಎಂದು ಇಂಧನ ಸಚಿವ ಜಾರ್ಜ್ ಅವರು ಹೇಳುತ್ತಿದ್ದಾರೆ. ಆ ಎರಡು ವಿದ್ಯುತ್ ಸಂಸ್ಥೆಗಳು ತಮ್ಮ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬ ಸತ್ಯಾಂಶವನ್ನು ಮರೆಮಾಚುತ್ತಿದ್ದಾರೆ ಎಂದು ಪ್ರಕಾಶ್ ಆರೋಪಿಸಿದ್ದಾರೆ.
ನೌಕರರಿಗೆ ಅವರ ಹಕ್ಕಿನ ಭಾಗವಾಗಿ ಸಿಗಬೇಕಾದ ನಿವೃತ್ತಿ ವೇತನ, ಗ್ಯಾಚ್ಯುಯಿಟಿಗಳಿಗೆ ಗ್ರಾಹಕರಿಂದ ಸುಲಿದು ಜನ ಸಾಮಾನ್ಯರನ್ನು ನೌಕರವರ್ಗದವರ ವಿರುದ್ಧ ಎತ್ತಿಕಟ್ಟುವ ಸಂಚು ಇದರಲ್ಲಿ ಅಡಗಿದೆ ಎಂಬುದನ್ನು ಗುರುತಿಸಬೇಕು.
ಹೀಗೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಪರಸ್ಪರ ದೋಷಾರೋಪಣೆ ಮಾಡಿಕೊಳ್ಳುತ್ತಾ ವಿದ್ಯುತ್ ಗ್ರಾಹಕರನ್ನು ಯಾಮಾರಿಸಲು ನೋಡುತ್ತಿವೆ ಎಂದಿದ್ದಾರೆ.ಈ ಹಿನ್ನೆಲೆಯಲ್ಲಿ ವಿದ್ಯುತ್ ಗ್ರಾಹಕರು ಮತ್ತು ನಾಡಿನ ಎಲ್ಲಾ ಜನಪರ ಸಂಘ ಸಂಸ್ಥೆಗಳು ಸರ್ಕಾರದ ಸುಲಿಗೆ ತಂತ್ರವನ್ನು ವಿರೋಧಿಸದೆ ಗತ್ಯಂತರವಿಲ್ಲ ಎಂದು ಪ್ರಕಾಶ್ ತಿಳಿಸಿದ್ದಾರೆ.