ಫ್ಲೈ ಒವರ್ ಕಳಪೆ ಕಾಮಗಾರಿ ವಿರುದ್ಧ ಸಿಪಿಐ(ಎಂ) ಪ್ರತಿಭಟನೆ

ಬೆಂಗಳೂರು : ಬೆಂಗಳೂರಿನ ಗೊರಗುಂಟೆಪಾಳ್ಯ ಹಾಗೂ ಪಾರ್ಲೆ ಟೋಲ್ ವರೆಗಿನ ಫ್ಲೈ ಒವರ್ ಕಳಪೆ ಕಾಮಗಾರಿಗೆ ಕಾರಣವಾಗಿರುವವರ ವಿರುದ್ಧ ತನಿಖೆ ನಡೆಸಿ ಕ್ರಮಿನಲ್ ದೂರು ದಾಖಲಿಸಿ, ದುರಸ್ಥಿ ಕಾರ್ಯಕ್ಕೆ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಬೇಕು ಎಂದು ಸಿಪಿಐಎಂ ಆಗ್ರಹಿಸಿದೆ.

ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ನೂರಾರು ಜನ ಭಾಗಿಯಾಗಿದ್ದರು. 8ನೇ ಮೈಲಿಯಿಂದ ಮೆರವಣಿಗೆ ನಡೆಸಲಾಯಿತು.

ಪ್ರತಿಭಟನೆ ಉದ್ದೇಶಿಸಿ ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಎನ್ ಪ್ರತಾಪ್ ಸಿಂಹ ಮಾತನಾಡಿ, ಸುಮಾರು 12 ವರ್ಷಗಳ ಮುಂಚೆ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ಪಾರ್ಲೆ ಟೋಲ್ ವರೆಗಿನ ಫ್ಲೈ ಒವರ್ 750 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಫ್ಲೈ ಓವರ್ ನಲ್ಲಿ ಸಂಚರಿಸುವ ವಾಹನಗಳಿಂದ ಟೋಲ್ ಸಂಗ್ರಹವನ್ನು ಮಾಡಲಾಗುತ್ತಿದೆ. ಅಲ್ಲದೇ, ಈ ಟೋಲ್ ಸಂಗ್ರಹವನ್ನು ಖಾಸಗೀ ಗುತ್ತಿಗೆದಾರರಿಗೆ ನೀಡಲಾಗಿದೆ. ಅಷ್ಟೇ ಅಲ್ಲದೆ, ಫೈ ಓವರ್ ನಿರ್ವಹಣೆಯನ್ನೂ ಕೂಡ ಖಾಸಗೀ ಗುತ್ತಿಗೆದಾರರಿಗೆ ನೀಡಲಾಗಿದೆ ಎಂದು ಆರೋಪಿಸಿದರು.

ಸಿಪಿಐಎಂ ರಾಜ್ಯ ಕಾರ್ಯದರ್ಶಿಮಂಡಳಿ ಸದಸ್ಯ ಡಾ.ಕೆ ಪ್ರಕಾಶ್ ಮಾತನಾಡಿ, ಕಳೆದ ಎರಡು ತಿಂಗಳಿಂದ ದಿಢೀರ್ ಎಂದು ಗೊರಗುಂಟೆಪಾಳ್ಯದಿಂದ ಪಾರ್ಲೆ ಟೋಲ್ ವರೆಗಿನ ಫ್ಲೈಒವರ್ ನಲ್ಲಿನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇದಕ್ಕೆ ಫ್ಲೈ ಓವರ್ ನ ಕಳಪೆ ಕಾಮಾಗಾರಿಯಿಂದ ಮತ್ತು ಪಿಲ್ಲರ್ ಗಳ ಅಸರ್ಮಪಕ ನಿರ್ವಹಣೆಯಿಂದಾಗಿ ವಾಹನ ಸಂಚಾರವು ಅಪಾಯಕಾರಿಯಾಗಿದೆ ಎಂದು ಸರಕಾರವೇ ಹೇಳುತ್ತಿದೆ. ಇಂದು ದುರಸ್ಥಿ ಮಾಡಲಾಗದಷ್ಟರ ಮಟ್ಟಿಗೆ ಫ್ಲೈ ಓವರ್ ಹದಗೆಟ್ಟಿದೆ. ಒಂದೆರಡು ತಿಂಗಳಲ್ಲಿ ಆಗಿರಬಹುದಾದ ಸಮಸ್ಯೆಯಲ್ಲ. ಬದಲಾಗಿ ಫೈ ಓವರ್ ನಿರ್ಮಾಣದ ಹಂತದಲ್ಲಿ ಸಿಮೆಂಟ್ ಹಾಗು ಇನ್ನಿತರ ಕಳಪೆ ಗುಣಮಟ್ಟದ ವಸ್ತುಗಳ ಬಳಕೆ ಹಾಗು ಅತೀವ ಭ್ರಷ್ಟಾಚಾರದಿಂದ ಆಗಿರುವ ಸಮಸ್ಯೆ ಇದಾಗಿದೆ. ಆದ್ದರಿಂದ ಈ ಕಳಪೆ ಕಾಮಾಗಾರಿಯ ಕುರಿತು ತಪ್ಪಿತಸ್ಥರ ವಿರುದ್ಧ ಸಮಗ್ರ ತನಿಖೆಗೆ ಅವರು ಒತ್ತಾಯಿಸಿದರು.

750 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಫ್ಲೈ ಓವರ್‌ ನ್ನು ಈಗ ಕೆಡವಿ ಹೊಸದಾಗಿ ನಿರ್ಮಾಣ ಮಾಡುವುದಾಗಿ ಹೇಳಲಾಗುತ್ತಿದೆ. ಆದರೆ ಇಂದು ಮತ್ತೆ ಫೈ ಓವರ್ ಕೆಡವಿ ಮರುನಿರ್ಮಾಣ ಮಾಡಿದಲ್ಲಿ ರಾಜ್ಯ ಸರ್ಕಾರ ಸುಮಾರು 22 ಜಿಲ್ಲೆಗಳಿಗೆ ಹಾಗು ಹೊರ ರಾಜ್ಯಗಳಿಗೆ ಪ್ರವೇಶ ದ್ವಾರವಾಗಿರುವ ಈ ಪ್ರಮುಖ ರಸ್ತೆಯು ಸಂಪೂರ್ಣ ಬಂದ್ ಆಗಲಿದ್ದು, ಇದರಿಂದ ಪ್ರತಿನಿತ್ಯ ಲಕ್ಷಾಂತರ ಜನರಿಗೆ ಅತೀವ ಅನಾನೂಕೂಲವಾಗಲಿದೆ, ಅಲ್ಲದೇ ಈಗ ಹೊಸ ಫೈ ಓವರ್ ನಿರ್ಮಾಣಕ್ಕೆ ಕನಿಷ್ಠ 3000 ಕೋಟಿ ರೂ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ಪಾರ್ಲೆ ಟೋಲ್ ವರೆಗಿನ ಫೈ ಪ್ಲೈಒರ್ ಹದಗೆಟ್ಟರುವ ಮತ್ತು ಕಳಪೆ ಕಾಮಾಗಾರಿಗೆ ಕಾರಣವಾಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಾಗು ಅಂಥವರ ವಿರುದ್ಧ ಕ್ರಮಿನಲ್ ದೂರು ದಾಖಲಸಿ ಫ್ಲೈ ಒವರ್ ನ ದುರಸ್ಥಿ ಕಾರ್ಯಕ್ಕೆ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ಗೌರಮ್ಮ, ಸಿಪಿಐಎಂ ಹಿರಿಯ ಮುಖಂಡರಾದ ಹೆಚ್.ಎನ್. ಗೋಪಾಲಗೌಡ, ಬೆಂಗಳೂರು ಜಿಲ್ಲಾ ಮುಖಂಡರಾದ ಲೀಲಾವತಿ.ಟಿ, ಹುಳ್ಳಿ ಉಮೇಶ್, ಹನುಮಂತರಾವ್ ಹವಲ್ದಾರ್, ಚಂದ್ರಶೇಖರ್, ಮಂಗಳ ಕುಮಾರಿ, ನಂಜೇಗೌಡ, ವಿಜಯಲಕ್ಷ್ಮಿ, ರೇಣುಕ, ತಿಮ್ಮರಾಜು, ಸುಶೀಲಮ್ಮ, ಮಂಜುಳಾ, ರವಿ, ಚಾರ್ಲಿ ಸೇರಿದಂತೆ ನೂರಾರು ಜನ‌ಕಾರ್ಮಿಕರು ಮಹಿಳೆಯರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *