ಬೆಂಗಳೂರು :ವೆನೆಜುವೆಲಾ ದೇಶದ ಮೇಲೆ ಅಮೆರಿಕವು, ಏಕಪಕ್ಷೀಯ ಮಿಲಿಟರಿ ಆಕ್ರಮಣ ನಡೆಸಿ ಅಧ್ಯಕ್ಷ ನಿಕೊಲಸ್ ಮಡುರೊ, ಪತ್ನಿ ಸಿಲಿಯಾ ರವರನ್ನು ಅಪಹರಣ ಮಾಡಿರುವುದನ್ನು ಖಂಡಿಸಿ ಸಿಪಿಐ(ಎಂ) ಕಾರ್ಯಕರ್ತರು ಬೆಂಗಳೂರಿನಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತಾನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಡಾ.ಕೆ ಪ್ರಕಾಶ್ರವರು, ವೆನೆಜುವೆಲಾದ ತೈಲ ಸಂಪತ್ತನ್ನು ಕೊಳ್ಳೆ ಹೊಡೆಯುವ ದುರುದ್ದೇಶಕ್ಕೆ ಅಡ್ಡಿಯಾಗಿದ್ದ ಕಾರಣಕ್ಕಾಗಿ ಮಡುರೋ ರವರನ್ನು ಪದಚ್ಯುತಗೊಳಿಸುವ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸಿದೆ. ಒಂದು ಸಾರ್ವಭೌಮ, ಸ್ವತಂತ್ರ ಹಾಗೂ ಚುನಾಯಿತ ಪ್ರಜಾಪ್ರಭುತ್ವ ರಾಷ್ಟç ಒಂದರ ಅಧ್ಯಕ್ಷರನ್ನು ಮತ್ತೊಂದು ದೇಶ ಮಿಲಿಟರಿ ಆಕ್ರಮಣದ ಮೂಲಕ ಅಪಹರಿಸಿರುವುದು ಹಿಂದೆಂದೂ ಕಂಡರಿಯದ ದೌರ್ಜನ್ಯವಾಗಿದೆ ಎಂದರು.
ವೆನೆಜುವೆಲಾ ದೇಶದ ಮೇಲೆ ನಡೆದಿರುವ ಧಾಳಿ, ಭಾರತ ಸೇರಿದಂತೆ ಇಡೀ ಪ್ರಪಂಚದ ಎಲ್ಲಾ ಸಾರ್ವಭೌಮ ದೇಶಗಳ ಮೇಲೆ ನಡೆದಿರುವ ಆಕ್ರಮಣವಾಗಿದೆ. ಕೂಡಲೇ ವೆನೆಜುವೆಲಾ ಅಧ್ಯಕ್ಷರನ್ನು ಬಿಡುಗಡೆ ಮಾಡುವಂತೆ ಭಾರತ ಸರ್ಕಾರ ಅಮೇರಿಕಾವನ್ನು ಒತ್ತಾಯಿಸಬೇಕು. ವಿಶ್ವಸಂಸ್ಥೆ ಭದ್ರತಾ ಮಂಡಳಿ ಕೂಡಲೇ ಅಮೇರಿಕಾದ ಪುಂಡಾಟಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಂದುವರಿದು ಮಾತಾನಾಡಿದ ಅವರು, ಮತ್ತೊಂದು ಸಾರ್ವಭೌಮ ದೇಶದ ಮೇಲೆ ಅಮೇರಿಕ ನಡೆಸಿರುವ ಮಿಲಿಟರಿ ದಬ್ಬಾಳಿಕೆಗೆ ಬಹಳ ದೀರ್ಘ ಇತಿಹಾಸವೇ ಇದೆ. ಈ ಹಿಂದೆ ಇರಾಕ್, ಲಿಬಿಯಾ ಮುಂತಾದ ದೇಶಗಳ ಮೇಲೆ ಆಕ್ರಮಣ ನಡೆಸಿ ಅದರ ಅಧ್ಯಕ್ಷರನ್ನು ಕಗ್ಗೊಲೆ ಮಾಡಿದೆ. ಈಗ ವೆನೆಜುವೆಲಾ ಅಧ್ಯಕ್ಷರ ಮೇಲೆ ಮಾದಕ ವಸ್ತು ಸರಬರಾಜು ಆರೋಪ ಹೊರಿಸುತ್ತಿರುವ ಆಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೀತಿಯಲ್ಲೇ ಈ ಹಿಂದೆ ಕೂಡ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ರವರ ಮೇಲೆ ಸಮೂಹ ವಿನಾಶಕ ಅಸ್ತç ಹೊಂದಿರುವ ಆರೋಪ ಹೊರಿಸಲಾಗಿತ್ತು. ಇವೆಲ್ಲವೂ ತನ್ನ ಹಿಡಿತದ ಮಾಧ್ಯಮಗಳನ್ನು ಬಳಸಿ ಆಮೇರಿಕಾ ನಡೆಸಿರುವ ಅಪಪ್ರಚಾರಗಳೇ ಆಗಿವೆ. ಭಾರತ ದೇಶವೂ ಕೂಡ ಸುಂಕ ಕಡಿತದ ಬೆದರಿಕೆ ಹಾಗೂ ಒತ್ತಡವನ್ನು ಆಮೇರಿಕಾದಿಂದ ಎದುರಿಸುತ್ತಿದೆ. ಇಂದು ವೆನೆಜುವೆಲಾ ದೇಶಕ್ಕೆ ಒದಗಿರುವ ಪರಿಸ್ಥಿತಿ ಯಾವುದೇ ದೇಶಕ್ಕಾದರೂ ಬರಬಹುದು. ಅದ್ದರಿಂದ ಇಂತಹ ಸಾಮ್ರಾಜ್ಯಶಾಹಿ ದಬ್ಬಾಳಿಕೆ ವಿರುದ್ಧ ರಾಜ್ಯದಲ್ಲಿ ಮತ್ತು ದೇಶದಲ್ಲಿ ಬೃಹತ್ ಪ್ರತಿಭಟನೆ ವ್ಯಕ್ತವಾಗುವಂತೆ ಸಿಪಿಐ(ಎಂ) ಪಕ್ಷ ಶ್ರಮಿಸಲಿದ್ದು ಎಲ್ಲಾ ಸಾಮ್ರಾಜ್ಯಶಾಹಿ ವಿರೋಧಿ ಶಕ್ತಿಗಳನ್ನು ಬೆಂಬಲಿಸುತ್ತದೆ ಎಂದು ತಿಳಿಸಿದರು.
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೋಪಾಲಕೃಷ್ಣ ಹರಳಹಳ್ಳಿ, ಚಂದ್ರಪ್ಪ ಹೊಸ್ಕೇರಾ, ಕೆ.ಎಸ್. ವಿಮಲಾ ರಾಜ್ಯ ಸಮಿತಿ ಸದಸ್ಯರಾದ ಟಿ.ಯಶವಂತ, ಸೂರಜ್ ನಿಧಿಯಂಗ್ ಸೇರಿದಂತೆ ಹಲವಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
