ಮಂಗಳೂರು : ದೇಶದಲ್ಲಿ ಕೋಮುವಾದಿ ಶಕ್ತಿಗಳು, ಬಂಡವಾಳಶಾಹಿ ಶಕ್ತಿಗಳ ಜೊತೆ ಸೇರಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಯತ್ನದಲ್ಲಿ ತೊಡಗಿವೆ, ಇದನ್ನು ಎದುರಿಸಲು ಮಾರ್ಕ್ಸ್‌ವಾದದಿಂದ ಮಾತ್ರ ಸಾಧ್ಯ ಎಂದು ಸಿಪಿಐಎ ಕರ್ನಾಟಕ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಹೇಳಿದರು.
ಸಿಪಿಐಎಂನ 24ನೇ ದಕ್ಷಿಣ ಕನ್ನಡ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ಆರ್ ಎಸ್ ಎಸ್ ತನ್ನ ಭಾಷಣಗಳಲ್ಲಿ ಮಾರ್ಕ್ಸ್ ವಾದವನ್ನು ಸದಾ ಅಲ್ಲಗಳೆಯುತ್ತದೆ,ವಿಮರ್ಶಿಸುತ್ತದೆ ಯಾಕೆಂದರೆ ಆರ್ ಎಸ್ ಎಸ್ ನವರಿಗೆ ಮಾರ್ಕ್ಸವಾದದ ಬಗ್ಗೆ ಭಯವಿದೆ ಆರ್ ಎಸ್ ಎಸ್ ನ ಕೋಮು ದೃವೀಕರಣದ ಮತ್ತು ಜನತೆಯನ್ನು ಬೌದ್ಧಿಕ ಗುಲಾಮಗಿರಿಗೆ ತಳ್ಳುವ ಸಾಂಸ್ಕೃತಿಕ ರಾಜಕಾರಣಕ್ಕೆ ಮಾರ್ಕ್ಸ್ ವಾದವೇ ಉತ್ತರವಾಗಿದ್ದು ಈ ಕಾರಣಕ್ಕೆ ಆರ್ ಎಸ್ ಎಸ್ ನಾಯಕರುಗಳಿಗೆ ಮರ್ಕ್ಸ್ ವಾದದ ಭಯವಿದೆ ಎಂದರು.
ಜಗತ್ತಿನಲ್ಲಿ ಸೋವಿಯತ್ ರಷ್ಯಾದ ಪತನದ ನಂತರ ಬಂಡವಾಳಶಾಹಿ ನೀತಿಗಳು ಪ್ರಬಲವಾಗತೊಡಗಿದವು ಬಂಡವಾಳಶಾಹಿ ಆರ್ಥಿಕ ನೀತಿಗಳು ಜಗತ್ತಿನ ಮೇಲೆ ತನ್ನ ಸ್ವಾಧೀನವನ್ನು ಪಡೆದುಕೊಂಡವು. ಈ ಕಾರಣಕ್ಕಾಗಿ ಸಂಪತ್ತು ಧನಿಕರ ಪರ ಕ್ರೋಡಿಕರಣವಾಗುತ್ತಿದೆ. ಬಡವರು ದಟ್ಟ ದಾರಿದ್ರ್ಯತೆಗೆ ತಲುಪುತ್ತಿದ್ದಾರೆ. ನವ ಉದಾರವವಾದಿ ಸಾಮ್ರಾಜ್ಯಶಾಹಿ ಪಥವನ್ನು ಬಲವಂತದ ದಬ್ಬಾಳಿಕೆಯ ಮೂಲಕ ಸಾದಿಸಲಾಗುತ್ತಿದೆ. ಪ್ಯಾಲೆಸ್ಥೀನ್ ಮೇಲೆ ಇಸ್ರೇಲ್ ದಾಳಿ, ರಷ್ಯಾ ಉಕ್ರೇನ್ ಯುದ್ಧಗಳು ನಡೆಯುತ್ತಿವೆ. ಇತಿಹಾಸದುದ್ದಕ್ಕೂ ವಿಶ್ವಶಾಂತಿಯನ್ನು ಬಯಸುತ್ತಿದ್ದ ಭಾರತವು 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಭಾರತ ಅಮೆರಿಕದ ಮಿತ್ರ ರಾಷ್ಟ್ರವಾಗಿ ಮಾರ್ಪಾಟಾಗಿದೆ. ಸಾಮ್ರಾಜ್ಯಶಾಹಿ ಅಮೆರಿಕದ ವಿದೇಶಾಂಗ ನೀತಿಯೊಂದಿಗೆ ಸಹಮತವನ್ನು ಹೊಂದಿದೆ. ಇದು ನಮ್ಮ ದೇಶವು ಸ್ವಾತಂತ್ರ್ಯ ನಂತರ ಉಳಿಸಿ ಬೆಳೆಸಿದ ಸಾಮ್ರಾಜ್ಯಶಾಹಿ ವಿರೋಧಿ ಅಲಿಪ್ತ ಧೋರಣೆಗೆ ವಿರುದ್ಧವಾಗಿದೆ ಎಂದರು.
ಸಿಪಿಐಎಂ ನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೆ ಪ್ರಕಾಶ್ ಮಾತನಾಡಿ, ಭಾರತದ ಉತ್ತರಕ್ಕೆ ನೇಪಾಳ ಮತ್ತು ದಕ್ಷಿಣಕ್ಕೆ ಶ್ರೀಲಂಕದಲ್ಲಿ ಮಾರ್ಕ್ಸ್ ವಾದಿ ಸರ್ಕಾರಗಳಿವೆ. ಪಾಕಿಸ್ತಾನದಲ್ಲಿ ಆರ್ಥಿಕ ತೀವ್ರ ಬಿಕ್ಕಟ್ಟು ಮತ್ತು ರಾಜಕೀಯ ಬಿಕ್ಕಟ್ಟುಗಳು ಮುಂದುವರಿದಿದ್ದು ಅಲ್ಲಿಯೂ ಎಡಪಕ್ಷಗಳು ಹಾಗೂ ಸಾಮೂಹಿಕ ಸಂಘಟನೆಗಳು ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಭಾರತದ ಸುತ್ತಮುತ್ತ ಕಮ್ಯುನಿಸ್ಟ್ ಪಕ್ಷಗಳ ಸರ್ಕಾರ ಮೂರು ಭಾಗದಿಂದಲೂ ಸುತ್ತುವರಿಯ ವಿಶೇಷ ವಿದ್ಯಮಾನವನ್ನು ನಾವು ಗಮನಿಸಬೇಕಾಗಿದ್ದು ಇದು ಭಾರತದ ಮಾರ್ಕ್ಸ್ ವಾದದ ಭವಿಷ್ಯವನ್ನು ತೋರಿಸುತ್ತದೆ ಎಂದರು.
ಪಕ್ಷದ ರಾಜ್ಯ ಸಮಿತಿ ಸದಸ್ಯರಾದ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟೋಲ್ ಗೇಟ್ ವಿರುದ್ಧದ ಹೋರಾಟ, ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ, ಜಿಲ್ಲೆಯ ಕೋಮು ಸೌಹಾರ್ದತೆಯ ಉಳಿವಿಗಾಗಿ ನಿತ್ಯ ಮಿಡಿಯುತ್ತಿರುವ ಜನಾನುರಾಗಿ ರಾಜಕೀಯ ಪಕ್ಷ ಒಂದಿದ್ದರೆ ಅದು CPIM ಮಾತ್ರವಾಗಿದ್ದು ,ಜಿಲ್ಲೆಯ ಅಲ್ಪಸಂಖ್ಯಾತರ,ದಲಿತರ ಆದಿವಾಸಿಗಳ ಮತ್ತು ದಮನಿತರ ನಿತ್ಯ ನೋವುಗಳಿಗೆ ಸದಾ ಸಿಪಿಐಎಂ ಮಿಡಿಯುತ್ತಿದೆ ಎಂದರು.
ಉದ್ಘಾಟನಾ ಸಮಾರಂಭದ ಮೊದಲಿಗೆ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯದರ್ಶಿಯಾಗಿರುವ ಮುನೀರ್ ಕಾಟಿಪಳ್ಳರವರು ಸ್ವಾಗತಿಸಿ ಡಾ. ಕೃಷ್ಣಪ್ಪ ಕೊಂಚಾಡಿ ವಂದಿಸಿದರು. ಸಮ್ಮೇಳನದ ಧ್ವಜಾರೋಹನವನ್ನು ಜಿಲ್ಲಾ ಸಮಿತಿ ಸದಸ್ಯರಾದ ಕೃಷ್ಣಪ್ಪ ಸಾಲ್ಯಾನ್ ನೆರವೇರಿಸಿದರು.ಈ ಸಂದರ್ಭದಲ್ಲಿ ಖ್ಯಾತ ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಜನಪರ ಚಳುವಳಿಯ ನಾಯಕರಾದ ಸಂಜೀವ ಬಳ್ಕೂರುರವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ ಮುಖಂಡರಾದ ಪದ್ಮಾವತಿ ಶೆಟ್ಟಿ, ಸುಕುಮಾರ್ ತೊಕೊಟ್ಟು ಸದಾಶಿವದಾಸ್ ಉಪಸ್ಥಿತರಿದ್ದರು.