ವಿದ್ಯುತ್ ಸುಧಾರಣೆಗಳ ಕುರಿತ CPIM ರಾಜ್ಯ ಸಮಾವೇಶದಲ್ಲಿ ಖಾಸಗೀಕರಣದ ವಿರುದ್ಧ ನಿರ್ಣಯ
ಬೆಂಗಳೂರು: ವಿದ್ಯುತ್ ಉಚಿತ ನೀಡುವ ಯೋಜನೆಯಿಂದಾಗಿ ಸರ್ಕಾರದ ಮೇಲೆ ಹೆಚ್ಚುವರಿ ಹಣಕಾಸಿನ ಹೊರೆ ಬೀಳುತ್ತದೆ. ಇದನ್ನು ನಿಭಾಯಿಸಲು ಸರ್ಕಾರ ವಿದ್ಯುತ್ ಖಾಸಗೀಕರಣ ಮಾಡುವ ಅಪಾಯವಿದ್ದು, ಹೀಗಾಗಿ ಖಾಸಗಿ ವಿದ್ಯುತ್ ಕಂಪೆನಿಗಳ ಜೊತೆಗೆ ಮಾಡಿಕೊಂಡಿರುವ ದುಬಾರಿ ಒಪ್ಪಂದಗಳನ್ನು ಕೈಬಿಟ್ಟು ಸರ್ಕಾರವೇ ಜಲವಿದ್ಯುತ್, ಉಷ್ಣವಿದ್ಯುತ್ ಉತ್ಪಾದಿಸಬೇಕು ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಪ್ರಕಾಶ್ ಬುಧವಾರ ಹೇಳಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ವಿದ್ಯುತ್ ಸುಧಾರಣೆಗಳ ಕುರಿತ ಸಿಪಿಐಎಂ ರಾಜ್ಯ ಸಮಾವೇಶದಲ್ಲಿ ಕೆ.ಪ್ರಕಾಶ್ ಭಾಗವಹಿಸಿದ್ದರು. ಸಮಾವೇಶದ ನಂತರ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಅವರು, “ಸಿದ್ದರಾಮಯ್ಯ ಸರ್ಕಾರ ನೀಡಿರುವ ಉಚಿತ ವಿದ್ಯುತ್ ನೀತಿಯನ್ನು ಸಿಪಿಐಎಂ ಪಕ್ಷವು ಸ್ವಾಗತಿಸುತ್ತದೆ. ಈ ನೀತಿಯು ಜನ ಸಾಮಾನ್ಯರಿಗೆ,ಬಡವರಿಗೆ ಹಾಗೂ ಮಧ್ಯಮ ವರ್ಗಗಳಿಗೆ ಅನುಕೂಲವನ್ನು ಮಾಡಿಕೊಡುತ್ತದೆ. ಆದರೆ ಅದನ್ನು ಜಾರಿ ಮಾಡುವ ಪ್ರಕ್ರಿಯೆಯಲ್ಲಿ ಹಲವಾರು ಸಮಸ್ಯೆಗಳಿವೆ. ಅದನ್ನು ಸರಿಪಡಿಸಿ, ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕಿದೆ” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಇದನ್ನೂ ಓದಿ: ಜನರ ಬೆವರಲ್ಲಿ ಕಟ್ಟಿದ ವಿದ್ಯುತ್ ಕ್ಷೇತ್ರವನ್ನು ಅದಾನಿ – ಅಂಬಾನಿಗೆ ಮಾರಲು ಹೊರಟ ಸರ್ಕಾರ : ಮಹಮ್ಮದ್ ಸಮೀವುಲ್ಲಾ ಕಿಡಿ
“ವಿದ್ಯುತ್ ದರ ಹೆಚ್ಚಳದ ಹಾಗೂ ರೈತರ ಪಂಪ್ ಸೆಟ್‌ಗಳಿಗೆ ಮುಂದಿನ ಆರು ತಿಂಗಳ ಒಳಗೆ ಆಧಾರ್ ಲಿಂಕ್ ಮಾಡಬೇಕು ಎಂಬ ಕೆಇಆರ್‌ಸಿ ಆದೇಶವನ್ನು ನಾವು ವಿರೋಧಿಸುತ್ತೇವೆ. ಇಷ್ಟೆ ಅಲ್ಲದೆ, ಕೇಂದ್ರ ಸರ್ಕಾರ ಕಳೆದ ವರ್ಷ ಮಂಡಿಸಿದ ‘ವಿದ್ಯುತ್ ತಿದ್ದೊಪಡಿ ಮಸೂದೆ-2022’ ಮೂಲಕ ಇಡೀ ದೇಶದಲ್ಲಿ ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣ ಮಾಡುವ ಪ್ರಯತ್ನ ನಡೆಯುತ್ತಿದೆ. ರಾಜ್ಯದ ಉಚಿತ ವಿದ್ಯುತ್ ಘೋಷಣೆ, ಕೆಇಆರ್‌ಸಿ ಆದೇಶ ಹಾಗೂ ಕೇಂದ್ರದ ವಿದ್ಯುತ್ ತಿದ್ದುಪಡಿ ಮಸೂದೆ-2022 ಒಂದಕ್ಕೊಂದು ಅಂಟಿಕೊಂಡಿರುವ ವಿಚಾರಗಳಾಗಿವೆ. ಹೀಗಾಗಿಯೆ ವಿದ್ಯುತ್ ವಿತರಣೆಯನ್ನೂ ಪೂರ್ಣವಾಗಿ ಖಾಸಗೀಕರಣ ಮಾಡಬೇಕು ಎಂಬ ಪ್ರಸ್ತಾಪವಾಗುತ್ತಿದೆ” ಎಂದು ಹೇಳಿದರು.
ಒಂದು ವಿದ್ಯುತ್ ವಿತರಣೆ ಪೂರ್ಣವಾಗಿ ಖಾಸಗೀಕರಣಗೊಂಡರೆ ಬೆಸ್ಕಾಂ, ಮೆಸ್ಕಾಂ, ಸೇರಿದಂತೆ ವಿದ್ಯುತ್ ವಿತರಣೆ ಮಾಡುವ ಸರ್ಕಾರದ ಕಂಪೆನಿಗಳು ಇಲ್ಲದಂತಾಗುತ್ತದೆ. ಇದರಿಂದಾಗಿ ವಿತರಣೆ, ಉತ್ಪಾದನೆ ಸೇರಿದಂತೆ ಎಲ್ಲವೂ ಖಾಸಗೀಕರಣಗೊಳ್ಳುವ ಅಪಾಯ ಬಂದೊದಗುತ್ತದೆ ಎಂದು ಕೆ. ಪ್ರಕಾಶ್ ಹೇಳಿದರು.
“ವಿದ್ಯುತ್ ತಿದ್ದುಪಡಿ ಮಸೂದೆ-2022ಯಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ನವೀಕರಿಸಬಹುದಾದಂತಹ ಇಂಧನದ ವಿಚಾರಗಳನ್ನು ಹೇಳಲಾಗಿದೆ. ಆದರೆ ಈ ನವೀಕರಿಸಬಹುದಾದ ಇಂಧನಗಳ ಉತ್ಪಾದನೆ ಮಾಡುತ್ತಿರುವುದು 95% ಖಾಸಗಿಯವರಾಗಿದ್ದಾರೆ. ಸರ್ಕಾರವು ಖಾಸಗಿಯವರಿಂದ ಇದನ್ನು ಕೊಂಡುಕೊಳ್ಳಲೆ ಬೇಕು ಎಂಬ ಷರತ್ತು ವಿಧಿಸಲಾಗಿದೆ. ಜೊತೆಗೆ ಅವರಿಂದ ಕೊಂಡುಕೊಳ್ಳದೆ ಇದ್ದಲ್ಲಿ ದಂಡ ವಿಧಿಸುವ ಬಗ್ಗೆ ಕೂಡಾ ಪ್ರಸ್ತಾಪ ಮಾಡಲಾಗಿದೆ. ಸರ್ಕಾರ ಉತ್ಪಾದಿಸುವ ಕಡಿಮೆ ಬೆಲೆಯ ವಿದ್ಯುತ್ ಅನ್ನು ಬಿಟ್ಟು ಖಾಸಗಿಯವರು ನೀಡುವ ದುಬಾರಿ ಬೆಲೆಯ ವಿದ್ಯುತ್ ಖರೀದಿಸಲೇಬೇಕು ಎಂಬಂತೆ ಈ ಷರತ್ತುಗಳಿವೆ. ಆದರೆ ಇದರ ಪರಿಣಾಮ ಈ ವಿದ್ಯುತ್ ಬಳಸುವ ರೈತ, ಬಡ ಹಾಗೂ ಇತರ ಗ್ರಾಹಕರ ಮೇಲೆ ವಿಪರೀತವಾಗಿ ಬೀಳುತ್ತವೆ” ಎಂದು ಅವರು ಎಚ್ಚರಿಸಿದರು.
ಇದನ್ನೂ ಓದಿ: ಪರಿಷ್ಕೃತ ಡೇಟಾ ರಕ್ಷಣಾ ಮಸೂದೆಗೆ ಸಂಪುಟ ಅಸ್ತು
“ವಿದ್ಯುತ್ ಉಚಿತ ನೀಡುವ ಯೋಜನೆಯಿಂದಾಗಿ ಸರ್ಕಾರದ ಮೇಲೆ ಹೆಚ್ಚುವರಿ ಹಣಕಾಸಿನ ಹೊರೆ ಬೀಳುತ್ತದೆ. ಇದನ್ನು ನಿಭಾಯಿಸಲು ಸರ್ಕಾರ ವಿದ್ಯುತ್ ಖಾಸಗೀಕರಣ ಮಾಡುವ ಅಪಾಯವೂ ಇವೆ. ಈ ವೆಚ್ಚಗಳನ್ನು ನಿಭಾಯಿಸಲು ಖಾಸಗಿ ವಿದ್ಯುತ್ ಕಂಪೆನಿಗಳ ಜೊತೆಗೆ ಮಾಡಿಕೊಂಡಿರುವ ದುಬಾರಿ ಪಿಪಿಎ ಒಪ್ಪಂದಗಳನ್ನು ಕೈಬಿಡಬೇಕಿದೆ. ಸರ್ಕಾರವೇ ಉತ್ಪಾದಿಸುವ ಜಲವಿದ್ಯುತ್, ಉಷ್ಣವಿದ್ಯುತ್ ಉತ್ಪಾದನೆ ಕಡಿಮೆ ದರದಲ್ಲಿ ಮಾಡಬಹುದಾಗಿದ್ದು, ಇದಕ್ಕೆ ಸರ್ಕಾರವೆ ಮುಂದಾಗಬೇಕಿದೆ” ಎಂದು ಅವರು ಸರ್ಕಾರಕ್ಕೆ ಸಲಹೆ ನೀಡಿದರು.
“ಸರ್ಕಾರದ ಉಚಿತ ವಿದ್ಯುತ್ ಯೋಜನೆ ನಿಜಕ್ಕೂ ಯಶಸ್ವಿ ಆಗಬೇಕೆಂದಿದ್ದರೆ, ಖಾಸಗೀಕರಣಕ್ಕೆ ಅವಕಾಶ ನೀಡುವ ಯೋಜನೆಯನ್ನು ಕೈಬಿಟ್ಟು, ಸರ್ಕಾರವೆ ಕಡಿಮೆ ವಚ್ಚದಲ್ಲಿ ವಿದ್ಯುತ್ ಅನ್ನು ಉತ್ಪಾದಿಸಬೇಕು. ಜೊತೆಗೆ ಭ್ರಷ್ಟಾಚಾರವನ್ನು ತಡೆದರೆ ಬಹಳ ದೊಡ್ಡ ಪ್ರಮಾಣದಲ್ಲಿ ಸರ್ಕಾರಕ್ಕೆ ಹಣ ಉಳಿಯುತ್ತದೆ. ಆದರೆ ಸರ್ಕಾರ ತನ್ನ ನವಉದಾರವಾದಿ ನೀತಿಗೆ ಬಲಿಯಾಗಿ ಖಾಸಗೀಕರಣ ಮಾಡಿದರೆ ಉಚಿತ ವಿದ್ಯುತ್ ಯೋಜನೆ ಖಂಡಿತಾ ಉಳಿಯಲು ಸಾಧ್ಯವಿಲ್ಲ. ಹೀಗಾಗಿ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಕೇಂದ್ರದ ವಿದ್ಯುತ್ ತಿದ್ದುಪಡಿ ಮಸೂದೆ-2022ಯನ್ನು ಜಾರಿ ಮಾಡುವುದಿಲ್ಲ ಎಂಬ ನಿರ್ಣಯವನ್ನು ಅಂಗೀಕರಿಸಬೇಕು” ಎಂದು ಕೆ. ಪ್ರಕಾಶ್ ಒತ್ತಾಯಿಸಿದರು.