ಭಾರತದಲ್ಲಿ ಹಣಕಾಸು ಒಕ್ಕೂಟವಾದವು (ಫಿಸ್ಕಲ್ ಫೆಡೆರಲಿಸಂ) ಸದಾ ಸಮಸ್ಯಾತ್ಮಕವಾಗಿದೆ, ಲಂಬವಾದ ಹಾಗೂ ಸಮತಲವಾದ ಅಸಮತೋಲನವು (ವರ್ಟಿಕಲ್ ಅಂಡ್ ಹಾರಿಜಾಂಟಲ್ ಇಂಬ್ಯಾಲೆನ್ಸೆಸ್) ಬಹುಕಾಲದಿಂದ ಇವತ್ತಿನವರೆಗೂ ಉಳಿದುಕೊಂಡು ಬಂದಿದೆ ಮತ್ತು ಉಲ್ಬಣಗೊಳ್ಳುತ್ತಿದೆ ಕೂಡ. ಸಂಪನ್ಮೂಲಗಳು ಯಾವಾಗಲೂ ಒಕ್ಕೂಟ ಸರ್ಕಾರದ (ಯೂನಿಯನ್ ಗೌರ್ನಮೆಂಟ್)ಕೈಯಲ್ಲೇ ಕೇಂದ್ರೀಕೃತವಾಗಿ ಉಳಿದುಬಿಟ್ಟಿವೆ. ಅಭಿವೃದ್ಧಿಯ ಅಗತ್ಯಗಳಿಗೆ ಸಂಬಂಧಪಟ್ಟಂತೆ ರಾಜ್ಯಗಳು ಸಂಪನ್ಮೂಲಗಳ ತೀವ್ರಕೊರತೆಯನ್ನುಅನುಭವಿಸುತ್ತಿವೆ. ಅದಾಗಲೇ ಸೀಮಿತವಾಗಿರುವ ರಾಜ್ಯಗಳ ಹಣಕಾಸು ಹಾಗೂ ಆರ್ಥಿಕತೀರ್ಮಾನ ಮಾಡುವ ಅಧಿಕಾರಗಳು ಜಿಎಸ್‌ಟಿ ಜಾರಿಯ ನಂತರದ ಅವಧಿಯಲ್ಲಿಇನ್ನೂ ನಿರ್ಬಂಧಕ್ಕೊಳಗಾಗಿವೆ ಎಂದು ಕಾರ್ಯದರ್ಶಿ ಯು. ಬಸವರಾಜ ಹೇಳಿದ್ದಾರೆ.
1. ಭಾರತೀಯ ಸಂವಿಧಾನದಲ್ಲಿ ಕೇಂದ್ರ-ರಾಜ್ಯ ಸಂಬಂಧಗಳ ಕುರಿತಂತೆಇರುವ ಮೂಲ ಅಸಮತೋಲನ ಹುಟ್ಟುವುದೇ ಈ ಎರಡು ಪ್ರಮುಖ ಅಂಶಗಳಿಂದ: ನೀರಾವರಿ, ರಸ್ತೆ ನಿರ್ಮಾಣ, ವಿದ್ಯುಚ್ಛಕ್ತಿ ಉತ್ಪಾದನೆ, ಶಿಕ್ಷಣ ಹಾಗೂ ಆರೋಗ್ಯ ಸೇವೆ ಮುಂತಾದಅಭಿವೃದ್ಧಿ ವೆಚ್ಚಗಳು ಮತ್ತು ಕಾನೂನು ಹಾಗೂ ಸುವ್ಯವಸ್ಥೆ, ಸಾರ್ವತ್ರಿಕ ಆಡಳಿತ ಮುಂತಾದ ಆಡಳಿತಾತ್ಮಕ ವೆಚ್ಚಗಳ ಮುಖ್ಯ ಜವಾಬ್ದಾರಿಗಳನ್ನು ರಾಜ್ಯಗಳು ಹೊರಬೇಕಾಗುತ್ತದೆ; ಆದರೆಆದಾಯವನ್ನು ವಸೂಲಿಮಾಡುವ ಪ್ರಮುಖಅಧಿಕಾರವನ್ನುಒಕ್ಕೂಟ ಸರ್ಕಾರಕ್ಕೆ ನೀಡಲಾಗಿದೆ.
2. ದೇಶದ ಒಟ್ಟು ಆದಾಯದ ಶೇಕಡಾ 62.7 ರಷ್ಟು ಪಾಲನ್ನು ಕೇಂದ್ರ ಸರ್ಕಾರ ಪಡೆದರೆ ಉಳಿದ ಶೇಕಡಾ 37.3 ರಷ್ಟು ಪಾಲನ್ನು ಮಾತ್ರ ರಾಜ್ಯಗಳು ಪಡೆಯುತ್ತವೆ ಎಂಬುದನ್ನು 15 ನೇ ಹಣಕಾಸು ಆಯೋಗವು ಗಮನಿಸಿದೆ. ಮತ್ತೊಂದೆಡೆ ವೆಚ್ಚಗಳ ಹೊರೆ ಹೊರುವ ಜವಾಬ್ದಾರಿಯ ವಿಷಯದಲ್ಲಿ ರಾಜ್ಯ ಸರ್ಕಾರಗಳು ಶೇಕಡಾ 62.4 ರಷ್ಟನ್ನು ಭರಿಸಿದರೆ ಕೇಂದ್ರ ಸರ್ಕಾರವು ಕೇವಲ ಶೇಕಡಾ 37.6 ರಷ್ಟನ್ನು ಮಾತ್ರ ಭರಿಸುತ್ತದೆ ಎನ್ನುವುದನ್ನೂ ಆಯೋಗ ಎಚ್ಚರದಿಂದ ಗಮನಿಸಿದೆ (15 ನೇ ಹಣಕಾಸು ಆಯೋಗದ ಅಂತಿಮ ವರದಿ, ಅಧ್ಯಾಯ 6, ಪುಟ 150).
ಇದನ್ನೂ ಓದಿ: ಬಂಡವಾಳಶಾಹಿ ಪ್ರಪಂಚದ ತಣ್ಣನೆಯ ಕ್ರೌರ್ಯ ಶ್ರಮ-ಶ್ರಮಿಕ ಎರಡನ್ನೂ ವಿನಿಮಯ ಯೋಗ್ಯ ಸರಕು ಎಂದೇ ಭಾವಿಸುವ ಮಾರುಕಟ್ಟೆ ಆರ್ಥಿಕತೆ
3. ರಾಜ್ಯಗಳ ಬೇಡಿಕೆಗಳಿಗೆ ಅನುಸಾರವಾಗಿಯಲ್ಲದಿದ್ದರೂ, ಹಲವಾರು ಹಣಕಾಸು ಆಯೋಗಗಳು ರಾಜ್ಯಗಳ ಪಾಲನ್ನು ವಿವಿಧ ಮಟ್ಟಗಳಿಗೆ ಏರಿಸಲು ಶಿಫಾರಸು ಮಾಡಿವೆ. ಆ ಶಿಫಾರಸುಗಳನ್ನೂ ಕೂಡಒಕ್ಕೂಟ ಸರ್ಕಾರವುಜಾರಿ ಮಾಡಲಿಲ್ಲ. ಉದಾಹರಣೆಗೆ, 13ನೇ ಹಣಕಾಸು ಆಯೋಗವು ಶೇಕಡಾ 32 ರಷ್ಟನ್ನು, 14ನೇ ಆಯೋಗವು ಶೇಕಡಾ 42 ರಷ್ಟನ್ನು ಮತ್ತು 15ನೇ ಆಯೋಗವು ಶೇಕಡಾ 41 ರಷ್ಟನ್ನು ಶಿಫಾರಸು ಮಾಡಿತ್ತು. ಆದರೆ ಕರ್ನಾಟಕ ರಾಜ್ಯಕ್ಕೆ ಸಿಕ್ಕಿದ್ದು ಶೇಕಡಾ 28 ರಷ್ಟು, ಶೇಕಡಾ 35 ರಷ್ಟು ಮತ್ತು ಶೇಕಡಾ 30 ರಷ್ಟು ಅಷ್ಟೆ. ಆ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಉಲ್ಲಂಘಿಸಿತು.
4. ಒಕ್ಕೂಟ ಸರ್ಕಾರದ ತೆರಿಗೆಗಳನ್ನು ರಾಜ್ಯಗಳೊಂದಿಗೆ ನ್ಯಾಯ ಯುತವಾದ ತತ್ವದ ಆಧಾರದಲ್ಲಿ ಹಂಚಿಕೊಳ್ಳಬೇಕಾದ ಅವಶ್ಯಕತೆ ಇದೆ. ಒಕ್ಕೂಟ ಸರ್ಕಾರವು ರಾಜ್ಯಗಳಿಗೆ ವರ್ಗಾಯಿಸಬೇಕಾದ ತೆರಿಗೆಗಳು ಮತ್ತುಒಕ್ಕೂಟ ಸರ್ಕಾರದ ಪಾಲಿನ ಭಾಗವಾದ ತೆರಿಗೆಗಳನ್ನೂ ಒಳಗೊಂಡಂತೆ ರಾಜ್ಯಗಳ ತೆರಿಗೆಗಳು ಒಕ್ಕೂಟ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅನುಕ್ರಮವಾಗಿ ಖರ್ಚುಮಾಡುವ ಅಭಿವೃದ್ಧಿ ವೆಚ್ಚಗಳಿಗೆ ಅನುಪಾತದಲ್ಲಿರಬೇಕು.
5. ಈ ತತ್ವದಆಧಾರದಲ್ಲಿ, ಒಕ್ಕೂಟ ಸರ್ಕಾರದ ಒಟ್ಟುತೆರಿಗೆ ಸಂಗ್ರಹದ ಶೇಕಡಾ 50 ರಷ್ಟಕ್ಕೆ ಏರಿಸುವ ದಿಟ್ಟಕ್ರಮವನ್ನು 16ನೇ ಹಣಕಾಸು ಆಯೋಗವು ಕೈಗೊಳ್ಳಬೇಕು. ಒಕ್ಕೂಟ ಸರ್ಕಾರದ ಶೇಕಡಾ 50 ರಷ್ಟು ತೆರಿಗೆಯನ್ನು ರಾಜ್ಯಗಳಿಗೆ ವಿಕೇಂದ್ರೀಕರಿಸುವ ಕ್ರಮವನ್ನು ಆದಷ್ಟೂ ಬೇಗ ಕೈಗೊಳ್ಳಬೇಕಿದೆ.
6. ಜಿ.ಎಸ್.ಟಿ.ಯನ್ನು ಚಾಲ್ತಿಗೆ ತರುವುದರೊಂದಿಗೆ ತೆರಿಗೆ ಆದಾಯವನ್ನು ನಿರ್ಧರಿಸುವ ರಾಜ್ಯಗಳ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಜಿ.ಎಸ್.ಟಿ.ಯ ನಿಜವಾದ ಸಂಗ್ರಹ ಮತ್ತುಜಿ.ಎಸ್.ಟಿ. ರಕ್ಷಿತ ಆದಾಯದ ನಡುವಿನ ವ್ಯತ್ಯಾಸವನ್ನು ರಾಜ್ಯಗಳಿಗೆ ತಾನು ತುಂಬಿಕೊಡುವುದಾಗಿ ಒಕ್ಕೂಟ ಸರ್ಕಾರವು ಕೊಟ್ಟ ಆಶ್ವಾಸನೆಯು ರಾಜ್ಯಗಳನ್ನು ದುಃಸ್ವಪ್ನವಾಗಿ ಕಾಡುತ್ತಿದೆ. 2017-18 ಮತ್ತು 2023-24 ರ ಅವಧಿಯಲ್ಲಿ ಕರ್ನಾಟಕದ ಸರ್ಕಾರವು ಶೇಕಡಾ 34 ರಷ್ಟು ಜಿ.ಎಸ್.ಟಿ.ಯ ನಷ್ಟ ಅನುಭವಿಸಿದೆ. ಈ ವ್ಯತ್ಯಾಸಗಳನ್ನು ರಾಜ್ಯಗಳಿಗೆ ತುಂಬಿಕೊಡುವ ಹೊಣೆಗಾರಿಕೆಯನ್ನುಒಕ್ಕೂಟ ಸರ್ಕಾರವು ಮುಂದುವರಿಸಬೇಕು.
7. ಸೆಸ್ (ವಿಶೇಷ ತೆರಿಗೆ) ಮತ್ತು ಸರ್ಚಾರ್ಜ್(ದಂಡತೆರಿಗೆ): ಈ ಎರಡು ತೆರಿಗೆಗಳನ್ನು ಒಕ್ಕೂಟ ಸರ್ಕಾರವು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತಿಲ್ಲ. ಇದು ನಮ್ಮಒಕ್ಕೂಟ ಹಣಕಾಸು ವ್ಯವಸ್ಥೆಯ ಬಗೆಗಿನ ಅತ್ಯಂತ ಅಪಾಯಕಾರಿ ಅಂಶವಾಗಿದೆ. ಪ್ರಸ್ತುತ ಒಕ್ಕೂಟ ಸರ್ಕಾರದ ಒಟ್ಟು ತೆರಿಗೆ ಆದಾಯದ ಶೇಕಡಾ 30 ರಷ್ಟು ಈ ಸೆಸ್ ಹಾಗೂ ಸರ್ಚಾರ್ಜ್ಆದಾಯ ಒಕ್ಕೂಟ ಸರ್ಕಾರಕ್ಕೆ ಲಭಿಸುತ್ತಿದೆ. ಒಕ್ಕೂಟ ಸರ್ಕಾರವು ಪ್ರತಿ ವರ್ಷವೂ ಈ ತೆರಿಗೆಗಳ ಪಾಲನ್ನು ಉದ್ದೇಶಪೂರ್ವಕವಾಗಿ ಏರಿಸುವ ಸ್ವೇಚ್ಛೆಯಲ್ಲಿ ನಿರತವಾಗಿದೆ. ಉದಾಹರಣೆಗೆ, 2014-15 ರಲ್ಲಿಒಟ್ಟುತೆರಿಗೆ ಆದಾಯದಲ್ಲಿಇವೆರಡರ ಪಾಲು ರೂ.1,67,960 ಕೋಟಿಯಾಗಿದ್ದರೆ, 2019-20 ರಲ್ಲಿಅದು ರೂ.2,55,275 ಕೋಟಿಗೆ ಹೆಚ್ಚಾಗಿ ಮತ್ತು 2023-24 ರಲ್ಲಿಅದುರೂ.5,98,069 ರಷ್ಟು ಹೆಚ್ಚಾಗಿದೆ. ಒಕ್ಕೂಟ ಸಕಾರದ ಈ ಏಕ ಸ್ವಾಮ್ಯತೆಯಿಂದಾಗಿ ಕರ್ನಾಟಕ ಸರ್ಕಾರವು 2017-18 ಮತ್ತು 2023-24 ರ ಅವಧಿಯಲ್ಲಿ ರೂ.53,382 ಕೋಟಿಯ ನಷ್ಟ ಅನುಭವಿಸಿತು. ಇದು ಸಂವಿಧಾನದ ಒಕ್ಕೂಟ ತತ್ವಕ್ಕೇ ವಿರುದ್ಧವಾಗಿದೆ.
8. ಸೆಸ್ಸುಗಳು ಹಾಗು ಸರ್ಚಾರ್ಜುಗಳು ವಿಭಜಿಸಿ ಹಂಚಬೇಕಾದ ಸಂಚಿತ ನಿಧಿಯ ಭಾಗವಾಗಬೇಕುಎಂದು ಸಿಪಿಐ(ಎಂ) ಕರ್ನಾಟಕರಾಜ್ಯ ಸಮಿತಿಯು 16ನೇ ಹಣಕಾಸು ಆಯೋಗವನ್ನು ಒತ್ತಾಯಿಸುತ್ತದೆ. ಸೆಸ್ಸುಗಳು ಹಾಗು ಸರ್ಚಾರ್ಜುಗಳ ಆದಾಯವನ್ನು ಒಕ್ಕೂಟ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಹಂಚಲು ಅನುವಾಗುವಂತೆ 270 ನೇ ವಿಧಿಗೆತಿದ್ದುಪಡಿತರಲು 16ನೇ ಹಣಕಾಸು ಆಯೋಗವು ಶಿಫಾರಸು ಮಾಡಬೇಕು.
9. 15ನೇ ಆಯೋಗವು ಸೂಚಿಸಿದಂತೆ 2011 ರಜನಗಣತಿ ಮತ್ತು ಸಾಮಾಜಿಕ ವಲಯದಲ್ಲಿನ ಪ್ರಗತಿಯ ಮಾನದಂಡವನ್ನು ಪರಿಗಣಿಸಿದರೆರ, ಕರ್ನಾಟಕ ರಾಜ್ಯವು ಸಮತಲವಾದ (ಹಾರಿಜಾಂಟಲ್) ವಿಕೇಂದ್ರೀಕರಣ ಅಂಶದಲ್ಲಿ ಏಟನ್ನು ಅನುಭವಿಸಿದೆ ಮತ್ತುತುಲನೆಯ ಅಂಶದಲ್ಲಿ 1.066 ರಷ್ಟು ನಿವ್ವಳ ನಷ್ಟವನ್ನು ಅನುಭವಿಸಿದೆ. ಇದೇರೀತಿಯ ಪರಿಸ್ಥಿತಿ ಬಹುತೇಕ ಎಲ್ಲಾ ದಕ್ಷಿಣದ ರಾಜ್ಯಗಳದ್ದಿದೆ. ರಾಜ್ಯಗಳು ತಮ್ಮ ಸಾಮಾಜಿಕ ಹಾಗೂ ಮಾನವಾಭಿವೃದ್ಧಿ ಸೂಚ್ಯಾಂಕಗಳಲ್ಲಿ ಮಾಡಿದ ಸಾಧನೆಗಳಿಗಾಗಿ ಶಿಕ್ಷೆಯನ್ನು ಅನುಭವಿಸದಂತಾಗಲು 16ನೇ ಹಣಕಾಸು ಆಯೋಗವು ಹೊಸ ವಿಧಾನವೊಂದನ್ನು ರೂಪಿಸಬೇಕು.
10. ರಾಜ್ಯ ಸರ್ಕಾರಗಳೊಂದಿಗೆ ಯಾವುದೇರೀತಿಯಲ್ಲಿ ಸಮಾಲೋಚನೆ ಮಾಡದೆ ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ವಿನ್ಯಾಸಗೊಳಿಸಿ ಜಾರಿ ಮಾಡುವ ಕೇಂದ್ರ ಪ್ರಾಯೋಜಿತ ಯೋಜನೆಗಳ ವ್ಯಾಪಕ ವಿಸ್ತರಣೆಯು ಮತ್ತೊಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಅತಿರೇಕವಾಗಿ ಕೇಂದ್ರೀಕರಣಗೊಂಡ ಕಠಿಣ ಶೈಲಿಯ ಈ ಯೋಜನೆಗಳು ಅನೇಕ ವೇಳೆ ರಾಜ್ಯಗಳ ನಿರ್ದಿಷ್ಟ ಅಗತ್ಯಗಳಿಗೆ ಸೂಕ್ತವಾಗಿರುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಇಂತಹ ಯೋಜನೆಗಳ ಹಿಂದಿನ ವೆಚ್ಚಗಳ ಬಹುತೇಕ ಭಾಗವನ್ನು ರಾಜ್ಯ ಸರ್ಕಾರಗಳೇ ಭರಿಸುತ್ತವೆ. ಆದಕಾರಣ ರಾಜ್ಯಗಳು ತಮ್ಮಆದ್ಯತೆಗೆ ಅನುಸಾರವಾಗಿ ತಮ್ಮ ಸಂಪನ್ಮೂಲಗಳನ್ನು ಸರಿಯಾಗಿ ನಿಗದಿಮಾಡುವುದು ಕಷ್ಟವಾಗುತ್ತಿದೆ. ಅದೂ ಸಾಲದೆಂಬಂತೆ, ಈ ಯೋಜನೆಗಳ ಮೂಲಕ ವಿಧಿಸಲಾಗುವ ಷರತ್ತುಗಳು ರಾಜ್ಯಗಳ ಸ್ವಾಯತ್ತತೆಯ ಮೇಲೆ ದುಷ್ಪರಿಣಾಮ ಉಂಟುಮಾಡುತ್ತವೆ.
11. ಅಂದಿನ ಪ್ರಧಾನ ಮಂತ್ರಿಗಳು ಮೇ 4, 996 ರಂದುಕರೆದಿದ್ದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ, ರಾಜ್ಯದ ವಿಷಯಗಳಿಗೆ ಸಂಬಂಧಪಟ್ಟ ಕೇಂದ್ರ ಪ್ರಾಯೋಜಿತ ಎಲ್ಲಾ ಯೋಜನೆಗಳನ್ನು ರಾಜ್ಯಗಳಿಗೆ ಅನುದಾನ ಸಹಿತ ವರ್ಗಾಯಿಸಲಾಗುವುದೆಂದು ತೀರ್ಮಾನಿಸಲಾಗಿತ್ತು. ಆಗಿನಿಂದ, ಈ ಕುರಿತು ಹಲವಾರು ಪ್ರಯೋಗಗಳನ್ನು ಮಾಡಿದ್ದಾಗ್ಯೂ, ಈ ವಿಚಾರದಲ್ಲಿ ಪರಿಣಾಮಕಾರಿ ಪರಿಹಾರದೊರಕಲಿಲ್ಲ. ಬದಲಿಗೆ, ಹೆಚ್ಚು ಹೆಚ್ಚಾದ ಷರತ್ತುಗಳೊಂದಿಗೆ ಒಕ್ಕೂಟ ಸರ್ಕಾರವು ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಚಾಲ್ತಿಗೆ ತರುತ್ತಿದೆ.
12. ಸಂವಿಧಾನದ ಒಕ್ಕೂಟತತ್ವವನ್ನು ಒಕ್ಕೂಟ ಸರ್ಕಾರವು ಗೌರವಿಸಬೇಕು. ವಿಷಾದಕರ ಸಂಗತಿಯೆಂದರೆ ಒಕ್ಕೂಟ ಸರ್ಕಾರವು ರಾಜ್ಯಗಳ ಸಂಯುಕ್ತ ಹಣಕಾಸು ಕರ್ತವ್ಯಗಳು ಹಾಗೂ ಹಕ್ಕುಗಳ ಮೇಲೆ ಅತಿಕ್ರಮಣ ಮಾಡುತ್ತಿದೆ. ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ ಸಂಬಂಧಪಟ್ಟ ಒಕ್ಕೂಟ ಸರ್ಕಾರದ ಹಣಕಾಸಿನ ಪಾಲನ್ನು ರಾಜ್ಯಗಳಿಗೆ ಕಡಿತಗೊಳಿಸುತ್ತಿದೆ. ಇದರ ಪರಿಣಾಮವಾಗಿ, ರಾಜ್ಯಗಳ ಹಣಕಾಸಿನ ಹೊರೆಯು ಬಹುಮಟ್ಟಿಗೆ ಹೆಚ್ಚಾಗುತ್ತಿದೆ. ಉದಾಹರಣೆಗೆ, ಸಮಗ್ರ ಮಕ್ಕಳ ಅಭಿವೃದ್ದಿ ಸೇವಾ ಯೋಜನೆ (ಐಸಿಡಿಎಸ್)ಯಲ್ಲಿ ರಾಜ್ಯಗಳ ಪಾಲು 2014 ಕ್ಕೆ ಮುಂಚೆ ಶೇಕಡಾ 40 ರಷ್ಟುಇದ್ದದ್ದು ಶೇಕಡಾ 60 ಕ್ಕೆ ಏರಿದೆ, ಒಕ್ಕೂಟ ಸರ್ಕಾರದ ಪಾಲು ಶೇಕಡಾ 60 ರಿಂದ 40 ಕ್ಕೆ ಇಳಿದಿದೆ.
13. ಕರ್ನಾಟಕದಲ್ಲಿ, ಪ್ರಧಾನ ಮಂತ್ರಿ ಆವಾಸ್ ಯೋಜನಾ–ಗ್ರಾಮೀಣ (ಪಿಎಂಎವೈ-ರೂರಲ್) ಅಡಿಯಲ್ಲಿ 2019-20 ಮತ್ತು 2023-24ರ ಅವಧಿಯಲ್ಲಿರಾಜ್ಯ ಸರ್ಕಾರದ ಪಾಲು ಶೇಕಡಾ 93.41 ಇದೆ, ಅದೇ ಒಕ್ಕೂಟ ಸರ್ಕಾರದ್ದು ಕೇವಲ ಶೇಕಡಾ 6.59 ಮಾತ್ರ ಇದೆ. ಪ್ರಧಾನ ಮಂತ್ರಿ ಆವಾಸ್ ಯೋಜನಾ – ಪಟ್ಟಣ (ಪಿಎಂಎವೈ- ಅರ್ಬನ್) ಅಡಿಯಲ್ಲಿಅದೇ ಅವಧಿಯಲ್ಲಿ ರಾಜ್ಯದ್ದು ಶೇಕಡಾ 62.76 ಮತ್ತು ಒಕ್ಕೂಟದ್ದು ಶೇಕಡಾ 37.24 ಇದೆ. ಪ್ರಧಾನ ಮಂತ್ರಿ ಜನ ಆರೋಗ್ಯ ಮಿಷನ್ ಅಡಿಯಲ್ಲಿ 2023-24 ಅವಧಿಯಲ್ಲಿ ರಾಜ್ಯದ ಪಾಲು 77.97 ಇದೆ, ಒಕ್ಕೂಟ ಸರ್ಕಾರದ್ದು ಶೇಕಡಾ 22.03 ಇದೆ. ಹಾಗೆಯೇ, ಜಲ ಜೀವನ್ ಮಿಷನ್ ಅಡಿಯಲ್ಲಿ 2023-24 ಅವಧಿಯಲ್ಲಿ ರಾಜ್ಯದ್ದು ಶೇಕಡಾ 58.03 ಹಾಗೂ ಒಕ್ಕೂಟ ಸರ್ಕಾರದ್ದು ಶೇಕಡಾ 41.97 ಇದೆ. ಇನ್ನೂ ಹಲವಾರು ಯೋಜನೆಗಳಲ್ಲೂ ರಾಜ್ಯವು ಇದೇ ರೀತಿಯಲ್ಲಿ ಕಡಿತವನ್ನು ಎದುರಿಸುತ್ತಿದೆ.
14. ರಾಜ್ಯ ಹಾಗೂ ಪಂಚಾಯತುಗಳು ಮತ್ತು ಮುನಿಸಿ ಪಾಲಿಟಿಗಳ ವಿಷಯಗಳಿಗೆ ಸಂಬಂಧಪಟ್ಟಂತ ಕೇಂದ್ರ ಪ್ರಾಯೋಜಿತ ಎಲ್ಲಾ ಯೋಜನೆಗಳನ್ನು ಸಾಕಾಗುವಷ್ಟು ಅನುದಾನದೊಂದಿಗೆ ರಾಜ್ಯಕ್ಕೆ ವರ್ಗಾಯಿಸಬೇಕು ಎಂದು ಸಿಪಿಐ(ಎಂ) ಒತ್ತಾಯಿಸುತ್ತದೆ. ಒಕ್ಕೂಟ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಚರ್ಚೆಯ ಆಧಾರದಲ್ಲಿ ವಿಶಾಲ ಮಾರ್ಗದರ್ಶಿ ಸೂತ್ರಗಳನ್ನು ಕೂಲಂಕುಷವಾಗಿ ಯೋಜಿಸಬಹುದು. ಆದರೆ, ಯೋಜನೆಗಳ ಸೂತ್ರನಿರೂಪಣೆ ಹಾಗೂ ಅನುಷ್ಠಾನವನ್ನು ಸಾಕಾಗುವಷ್ಟು ಅನುದಾನದೊಂದಿಗೆ ರಾಜ್ಯಗಳಿಗೆ ವರ್ಗಾಯಿಸಬೇಕು. ವಿಕೇಂದ್ರೀಕರಣವನ್ನು ಖಾತ್ರಿಪಡಿಸುವಜೊತೆಯಲ್ಲಿ, ಕೇಂದ್ರದ ಯೋಜನೆಗಳನ್ನು ರಾಜ್ಯಗಳಿಗೆ ವರ್ಗಾಯಿಸುವುದರಿಂದ ಕಾರ್ಯಕ್ರಮ ಜಾರಿಯ ವೆಚ್ಚವನ್ನುಕಡಿಮೆ ಮಾಡಬಹುದು ಮತ್ತುಒಕ್ಕೂಟದ ಸಂಪನ್ಮೂಲಗಳನ್ನು ಕೂಡ ಉಳಿಸಬಹುದು.
15. ಕೇಂದ್ರ ಪ್ರಾಯೋಜಿತ ಯೋಜನೆಗಳ ತ್ವರಿತ ಪ್ರಸರಣವು ಪಂಚಾಯತುಗಳು ಹಾಗೂ ಮುನಿಸಿಪಾಲಿಟಿಗಳ ಕಾರ್ಯನಿರ್ವಹಣೆಯ ವ್ಯಾಪ್ತಿಯಲ್ಲಿ ಕೇಂದ್ರವು ಅನಗತ್ಯ ಮೂಗು ತೂರಿಸಿದಂತಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಕೇಂದ್ರವು ರಾಜ್ಯ ಸರ್ಕಾರಗಳನ್ನು ಉಪೇಕ್ಷಿಸಿ ಸ್ಥಳೀಯ ಸಂಸ್ಥೆಗಳಿಗೆ ನೇರ ಹಣಕಾಸಿನ ಪೂರೈಕೆ ಮಾಡುತ್ತಿದೆ. ಇದನ್ನು ವಿಕೇಂದ್ರೀಕರಣದ ವಿಪರೀತ ಕೇಂದ್ರೀಕರಣದ ಕಲ್ಪನೆ ಎಂದು ಹೇಳಬಹುದು.ಇಂತಹ ಪ್ರಕರಣಗಳಲ್ಲಿ, ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಿರ್ಣಯ ಕೈಗೊಳ್ಳುವ ಅಧಿಕಾರ ನಿಯೋಜಿಸುವ ಬದಲು ನೇರವಾಗಿ ಕೇಂದ್ರ ಸರ್ಕಾರವೇತೀರ್ಮಾನ ತೆಗೆದುಕೊಳ್ಳುತ್ತದೆ. ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳುವ ಮಾದರಿಗಳನ್ನು ಕೇಂದ್ರ ಸರ್ಕಾರವೇ ನಿರ್ಧರಿಸುವ ಪ್ರಯತ್ನಇಲ್ಲಿಎದ್ದುಕಾಣುತ್ತಿದೆ. ವಿಕೇಂದ್ರೀಕರಣದ ಈ ವಿಕೃತ ದೃಷ್ಟಿಯನ್ನು ಪ್ರೋತ್ಸಾಹಿಸಬಾರದು ಮತ್ತುಒಟ್ಟಾರೆ ಸಂದರ್ಭದ ಮಿತಿಯಲ್ಲಿಸ್ಥಳೀಯ ಸಂಸ್ಥೆಗಳು ಕಾರ್ಯನಿರ್ವಹಿಸುವ ಪರಿಸ್ಥಿತಿಯನ್ನು ಸೃಷ್ಟಿಸುವ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡಬೇಕು. ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಯ ಅಥವಾ ಸರ್ಕಾರದ (ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರದ) ವೆಚ್ಚದ ಒಂದು ಶಾಸನಬದ್ಧ ಕನಿಷ್ಠ ಮಟ್ಟಕ್ಕೆ ಪಂಚಾಯತುಗಳು ಹಾಗೂ ಮುನಿಸಿಪಾಲಿಟಿಗಳ ವೆಚ್ಚದ ಗುರಿಯನ್ನುಹಣಕಾಸು ಆಯೋಗವು ನಿಗದಿಪಡಿಸುವ ಅಗತ್ಯವಿದೆ. ಸ್ಥಳೀಯ ಸಂಸ್ಥೆಗಳಿಗೆ ಒಕ್ಕೂಟ ಸರ್ಕಾರದ ಅನುದಾನವನ್ನುಕಡ್ಡಾಯವಾಗಿ ರಾಜ್ಯ ಸರ್ಕಾರಗಳ ಮೂಲಕ ಹಂಚುವಂತಾಗಬೇಕು.
16. ರಾಜ್ಯಗಳು ಮಾರುಕಟ್ಟೆಯಿಂದ ಸಾಲ ಪಡೆಯುವುದು: ಸಂವಿಧಾನದ ಪರಿಚ್ಛೇದ 293 ನ್ನುತಿದ್ದುಪಡಿ ಮಾಡಿ ಮಾರುಕಟ್ಟೆಯಿಂದ ಸಾಲ ಪಡೆಯುವ ಅವಕಾಶದ ವಿಷಯದಲ್ಲಿ ರಾಜ್ಯಗಳಿಗೆ ಇನ್ನೂ ಹೆಚ್ಚಿನ ಸಡಿಲತೆ ಹಾಗೂ ಸ್ವಾಯತ್ತತೆಯನ್ನು ನೀಡಬೇಕು. ಹಣಕಾಸು ಹೊಣೆಗಾರಿಕೆ ಮತ್ತುಆಯವ್ಯಯ ನಿರ್ವಹಣೆಕಾಯಿದೆ (ಎಫ್‌ಆರ್‌ಬಿಎಂಆಕ್ಟ್ -ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಅಂಡ್ ಬಜೆಟ್ ಮ್ಯಾನೇಜ್‌ಮೆಂಟ್ ಆಕ್ಟ್) ಯ ಮೂಲಕ ರಾಜ್ಯಗಳ ಮೇಲೆ ಹೊರಿಸಿರುವ ಷರತ್ತುಗಳನ್ನು ಹಿಂತೆಗೆದುಕೊಳ್ಳಬೇಕು. ರಾಜ್ಯಗಳಿಗೆ ಹಣಕಾಸು ಕೊರತೆಯ ಶೇಕಡಾ 3 ರಷ್ಟ ರಮಿತಿಯನ್ನು ಹೇರಲಾಗಿದೆ, ಆದರೆಒಕ್ಕೂಟ ಸರ್ಕಾರಕ್ಕೆ ಸ್ವಾತಂತ್ರ್ಯ ನೀಡಲಾಗಿದೆ.ಈ ಷರತ್ತುಗಳನ್ನು ಬಳಸಿ ಒಕ್ಕೂಟ ಸರ್ಕಾರವು ರಾಜ್ಯಗಳ ಕೈತಿರುಚುವ ಕೆಲಸಮಾಡುತ್ತಿದೆ–ರಾಜ್ಯ ಸರ್ಕಾರಗಳು ನವ ಉದಾರವಾದಿ ಖಾಸಗೀಕರಣ ನೀತಿಯನ್ನು ಜಾರಿಮಾಡಲು ಸಿದ್ಧವಿದ್ದರೆ ಮಾತ್ರ ಹಣಕಾಸು ಕೊರತೆಯ ಶೇಕಡಾ 3 ರ ಮಿತಿಯನ್ನು ಮೀರಲು ಅವಕಾಶ ನೀಡಲಾಗುತ್ತದೆ. ಇದು ಸಂವಿಧಾನದ ಒಕ್ಕೂಟ ತತ್ವಕ್ಕೆ ತದ್ವಿರುದ್ಧವಾಗುತ್ತದೆ.
17. ಕೇಂದ್ರದ ಸಾಲಗಳ ಕಾರಣದಿಂದ ರಾಜ್ಯಗಳಿಗೆ ಋಣ ಪರಿಹಾರವನ್ನುಯಾವುದೇ ಷರತ್ತುಗಳಿಗೆ ತಳಕುಹಾಕಬಾರದು. ಕೇಂದ್ರ ಸಾಲದ ಮೇಲೆ ವಿಪರೀತ ಬಡ್ಡಿ ಹೇರುವ ನೀತಿಯನ್ನು ಕೈ ಬಿಟ್ಟು, ರಾಜ್ಯಗಳ ಸಾಲದ ಹೊರೆಯನ್ನು ಇಳಿಸಲು ಒಕ್ಕೂಟ ಸರ್ಕಾರವು ಒಂದು ವಿಧಾನವನ್ನು ರೂಪಿಸಬೇಕು. ವೇತನ ಆಯೋಗಗಳು ವೇತನ ಪರಿಷ್ಕರಣೆ ಮಾಡುವ ಕಾರಣದಿಂದ ಉಂಟಾಗುವ ಹೆಚ್ಚುವರಿ ಹಣಕಾಸಿನ ಹೊರೆಯ ಕನಿಷ್ಠ ಶೇಕಡಾ 50 ರಷ್ಟನ್ನುಕೇಂದ್ರ ಸರ್ಕಾರ ಭರಿಸುವಂತಾಗಬೇಕು. ತೆರಿಗೆ ರಿಯಾಯತಿಗಳು: ಕೇಂದ್ರತೆರಿಗೆ ರಿಯಾಯತಿಗಳನ್ನು ತುರ್ತಾಗಿ ಪುನರ್ವಿಮರ್ಶಿಸಬೇಕು ಮತ್ತುಅತಿಯಾದ ರಿಯಾಯತಿಗಳನ್ನು ಹಂತ ಹಂತವಾಗಿ ಕೈ ಬಿಡಬೇಕು. ತೆರಿಗೆ ರಿಯಾಯತಿಗಳಿಂದ ರಾಜ್ಯಗಳಿಗೆ ಉಂಟಾಗುವ ನಷ್ಟಗಳು ಹಾಗೂ ವಿರೂಪಗಳನ್ನು ಕೇಂದ್ರವು ತುಂಬಿಕೊಡಬೇಕು. ರಾಜ್ಯಗಳ ಸಾಲದ ಹೊರೆಯನ್ನು ಇಳಿಸಲು ಒಕ್ಕೂಟ ಸರ್ಕಾರವು ಒಂದು ವಿಧಾನವನ್ನುರೂಪಿಸ ಬೇಕು; ತಳ ಕಚ್ಚುವುದರ ವಿರುದ್ಧರಕ್ಷಣೆ ಪಡೆಯುವ ಸಲುವಾಗಿ ಕಾರ್ಪೊರೇಟುಗಳಿಗೆ ನೀಡುವ ತೆರಿಗೆರಿಯಾಯತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದುಗೂಡಿ ಮಿತಿಗಳನ್ನು ವಿಧಿಸಬೇಕು.
18. ರಾಜ್ಯಗಳ ಸಂಗ್ರಹ ನಿಧಿ (ಕಾರ್ಪಸ್ ಫಂಡ್) ಯನ್ನುಸೂಕ್ತ ರೀತಿಯಲ್ಲಿ ಹೆಚ್ಚಿಸುವ ಸಲುವಾಗಿ ಪ್ರಾಕೃತಿಕ ಅನಾಹುತಗಳಿಗಾಗಿ ಇರುವ ಪರಿಹಾರ ನಿಧಿಯ ಈಗಿನ ಯೋಜನೆಯನ್ನು ಬದಲಾಯಿಸುವ ಅವಶ್ಯಕತೆ ಇದೆ. ಕೇಂದ್ರ ಸಾರ್ವಜನಿಕ ವಲಯದ ಘಟಕಗಳು (ಸಿಪಿಎಸ್‌ಯು), ರೈಲ್ವೇ ಇಲಾಖೆ, ರಾಷ್ಟ್ರೀಯ ಹೆದ್ದಾರಿಗಳು, ಬಂದರುಗಳು, ವಿಮಾನ ನಿಲ್ದಾಣಗಳು, ಭಾರಿ ನೀರಾವರಿ ಯೋಜನೆಗಳು ಮುಂತಾದವುಗಳಲ್ಲಿ ಕೇಂದ್ರ ಹಾಗೂ ರಾಜ್ಯಗಳ ಹಿತಾಸಕ್ತಿಗಳು ಒಳಗೊಂಡಿವೆ. ಆದ್ದರಿಂದ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಅಂತರ-ರಾಜ್ಯಗಳ ಸಮತೋಲನವನ್ನು ಖಾತ್ರಿ ಪಡಿಸಬೇಕಾದ ಅವಶ್ಯಕತೆ ಇದೆ.
19. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ಎಸ್.ಸಿ./ಎಸ್.ಟಿ.) ಜನಸಂಖ್ಯೆಯ ಪ್ರಮಾಣಕ್ಕೆತಕ್ಕಂತೆ ಬಜೆಟ್ ನಿಗದಿ ಮಾಡುವುದನ್ನು ಖಾತ್ರಿಪಡಿಸಲು, ಎಸ್.ಸಿ/ಎಸ್.ಟಿ. ಜನರನ್ನು ಉದ್ಧಾರ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಅಂಗೀಕರಿಸಿರುವ ಕರ್ನಾಟಕ ಪರಿಶಿಷ್ಟ ಜಾತಿಗಳು ಉಪ-ವಿಂಗಡಣೆ ಮತ್ತು ಪರಿಶಿಷ್ಟ ಪಂಗಡ ಉಪ-ವಿಂಗಡಣೆ ಕಾಯಿದೆ, 2013 ರರೀತಿಯಲ್ಲಿಒಕ್ಕೂಟ ಸರ್ಕಾರವು ಒಂದು ಶಾಸನವನ್ನುಅಂಗೀಕರಿಸಲು 16ನೇ ಹಣಕಾಸು ಆಯೋಗವು ಶಿಫಾರಸು ಮಾಡಬೇಕು.
20. ಕೊನೆಯಆದರೆ ಕನಿಷ್ಠ ಅಲ್ಲದ, ಭಾರತದಐಕ್ಯತೆ ಮತ್ತು ಸಮಗ್ರತೆಯು ನಮ್ಮ ಸಂವಿಧಾನದಒಕ್ಕೂಟತತ್ವದ ಮೇಲೆ ನಿಂತಿದೆ. 2014 ರ ನಂತರದ ಅವಧಿಯಲ್ಲಿ ಅದು ತೀವ್ರ ಸವೆತಕ್ಕೆ ತುತ್ತಾಗಿದೆ. ಒಕ್ಕೂಟ ಸರ್ಕಾರವು ಸಾಂವಿಧಾನಿಕ ಒಕ್ಕೂಟ ತತ್ವಗಳಿಗೆ ನಿಷ್ಠವಾಗಿಲ್ಲ. ಕರ್ನಾಟಕ, ಕೇರಳ ಮುಂತಾದ ಹಲವು ರಾಜ್ಯಗಳು ಹಣಕಾಸು ಆಯೋಗದ ಶಿಫಾರಸಿನ ಆಧಾರದಲ್ಲಿ ತೆರಿಗೆ ಆದಾಯದ ವರ್ಗಾವಣೆ ಕುರಿತು ಸುಪ್ರೀಂ ಕೋರ್ಟಿನ ಕದ ತಟ್ಟಬೇಕಾದ ಅನಿವಾರ್ಯತೆ ಬಂದಿದೆ. ಭಾರತೀಯ ಸಂವಿಧಾನದ ಒಕ್ಕೂಟ ತತ್ವದ ಸವೆತವಾಗಿರುವುದರ ತೀವ್ರವಾದ ಸಂಕೇತವಾಗಿದೆ. 16 ನೇ ಹಣಕಾಸು ಆಯೋಗವು ಸಂವಿಧಾನದ ಒಕ್ಕೂಟವಾದಿ ತತ್ವವನ್ನು ಕಾಪಾಡಬೇಕು. ಹಣಕಾಸು ಒಕ್ಕೂಟವಾದವು ಪ್ರಜಾಸತ್ತಾತ್ಮಕ ಹಾಗೂ ರಾಜಕೀಯ ಒಕ್ಕೂಟವಾದದ ಬುನಾದಿಯಾಗಿದೆ. ನಮ್ಮ ಸಂವಿಧಾನದ ಮೊದಲ ಪರಿಚ್ಛೇದದಲ್ಲಿಯೇ ಅದಕ್ಕೆ ಪದಗಳ ರೂಪದಲ್ಲಿ ಅತ್ಯುತ್ತಮವಾದ ಅಭಿವ್ಯಕ್ತಿಯನ್ನು ಹೀಗೆ ನೀಡಿದೆ: ಭಾರತವೆಂಬ ಇಂಡಿಯಾವು ರಾಜ್ಯಗಳ ಒಕ್ಕೂಟವಾಗಿರುತ್ತದೆ.
ಇದನ್ನೂ ನೋಡಿ: ಕಾಂಗ್ರೆಸ್ ಸರ್ಕಾರದ ಕೆಲವು ತಪ್ಪುಗಳು.. ತಿದ್ದಿಕೊಳ್ಳಲು ಇನ್ನೂ ಕಾಲ ಮಿಂಚಿಲ್ಲ.. Janashakthi Media