ಹಾಸನ| ಸಚಿವ ಸಂಪುಟದಿಂದ ಮನುವಾದಿ ಅಮಿತ್ ಶಾ ವಜಾಗೊಳಿಸಿ : ಜನವರಿ 8ರಂದು ಹೆದ್ದಾರಿ ತಡೆ ಹೋರಾಟ

ಹಾಸನ: ಭಾರತದ ಸಂವಿಧಾನ ಶಿಲ್ಪಿ, ಬಾಬಾಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರ ಕುರಿತು ಅಪಮಾನಕರ ಮಾತುಗಳನ್ನಾಡಿರುವ ಕೇಂದ್ರ ಸರ್ಕಾರದ ಗೃಹ ಸಚಿವ, ಮನುವಾದಿ ಅಮಿತ್ ಶಾರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಬಂಧಿಸುವಂತೆ ಆಗ್ರಹಿಸಿ ಜನವರಿ 8ರಂದು ಹಾಸನದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟ ನಡೆಸಲಾಗುವುದು ಎಂದು ಸಿಪಿಐ(ಎಂ) ಜಿಲ್ಲಾ ಮುಖಂಡ ಧರ್ಮೇಶ್ ತಿಳಿಸಿದ್ದಾರೆ.

ಸಂವಿಧಾನ ಶಿಲ್ಪಿ, ಬಾಬಾಸಾಹೇಬ್‌ ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಡಿರುವ ಅಪಮಾನಕರ ಮಾತುಗಳು ಅತ್ಯಂತ ಖಂಡನೀಯವಾದುದು. ಈ ಮಾತುಗಳು ಅಮಿತ್ ಶಾ ಅವರ ಮನುವಾದಿ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ ಹಾಗೂ ಅವರು ಹಿಂದೆಯೂ ಈಗಲೂ ಮುಂದೆಯೂ ಬಾಬಾಸಾಹೇಬರನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಸಾಬೀತಾಗುತ್ತದೆ. ಇಂತಹ ಮನುವಾದಿ ಮನಸ್ಥಿತಿಯ ಅಮಿತ್ ಶಾ ಭಾರತದ ಗೃಹ ಸಚಿವರಾಗಿ ಮುಂದುವರಿದರೆ ಡಾ.ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು‌ ಅವರ ಆಶಯಗಳಿಗೆ ವಿರುದ್ಧವಾಗುತ್ತದೆ. ಹಾಗೂ ಭಾರತದ ಸಂವಿಧಾನದ ಮೂಲ ತತ್ವಗಳಿಗೆ ದಕ್ಕೆಯಾಗುತ್ತದೆ ಎಂದರು.

ಹಿರಿಯ ದಲಿತ ಮುಖಂಡ ಎಚ್.ಕೆ. ಸಂದೇಶ್ ಮಾತನಾಡಿ, ಭಾರತದ ಸಂವಿಧಾನದ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ದೇಶದ ರಾಜ್ಯ ಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿಯೇ ಭಾರತದ ಸಂವಿಧಾನ ಶಿಲ್ಪಿ ಬಾಬಾಸಾಹೆಬ್ ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಅಮಿತ್ ಶಾ ಅವರು ಆಡಿರುವ ಅಪಮಾನಕರ ಮಾತುಗಳು ಕೇವಲ ಆಕಸ್ಮಿಕವೇನೂ ಅಲ್ಲ. ಸಂವಿಧಾನದ ಕುರಿತ ಚರ್ಚೆಯ ಸಂದರ್ಭದಲ್ಲಿಯೇ ಸಂವಿಧಾನ ಶಿಲ್ಪಿಗೆ ಅವಮಾನ ಮಾಡುವುದು ಅವರ ನೈಜ ಉದ್ದೇಶವಾಗಿತ್ತು. ಅಮಿತ್ ಶಾ ಪ್ರತಿನಿಧಿಸುವ ಆರ್‌ಎಸ್‌ಎಸ್, ಜನಸಂಘ ಮತ್ತು ಬಿಜೆಪಿ ಭಾರತ ದೇಶವನ್ನು ಸಾರ್ವಭೌಮ, ಸಮಾಜವಾದಿ, ಮತಧರ್ಮ ನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ನಿರೂಪಿಸುವ ಭಾರತದ ಸಂವಿಧಾನ ಮತ್ತು ಅದರ ರಚನೆಗೆ ಅತ್ಯಂತ ಮಹತ್ವದ ಕೊಡುಗೆ ನೀಡಿದ ಡಾ. ಬಿ.ಆರ್.‌ ಅಂಬೇಡ್ಕರ್ ಅವರ ವಿರುದ್ಧ ಆರಂಭದಿಂದಲೂ ತೀವ್ರ ಅಸಮಾಧಾನ ಮತ್ತು‌ ಅತೃಪ್ತಿಯನ್ನು ಹೊರಹಾಕಿರುವುದು ಇಡೀ ದೇಶಕ್ಕೇ ಗೊತ್ತಿರುವ ಇತಿಹಾಸವಾಗಿದೆ ಎಂದರು.

ದಸಂಸ ರಾಜ್ಯ ಸಂಚಾಲಕರು ಸೋಮಶೇಖರ್ ಮಾತನಾಡಿ, ಅಂಬೇಡ್ಕರ್ ಅವರ ಜಾತಿ ಹಿನ್ನೆಲೆಯನ್ನು ಎತ್ತಿ ತೋರಿಸುತ್ತಾ ಅಂಬೇಡ್ಕರ್ ಅವರು ಸಂವಿಧಾನ ಬರೆಯಲೇ ಇಲ್ಲ ಎನ್ನುವ ಸುಳ್ಳುಗಳನ್ನು ಪ್ರಚಾರ ಮಾಡುವುದರ ಜೊತೆಗೆ ಅಂಬೇಡ್ಕರ್ ಅವರು ರಚಿಸಿರುವ ಭಾರತದ ಸಂವಿಧಾನವನ್ನು ತಾನು ಒಪ್ಪುವುದೂ ಇಲ್ಲ ಎನ್ನುವುದನ್ನು ಆರ್‌ಎಸ್‌ಎಸ್ ಆಗ‌ ಬಹಿರಂಗವಾಗಿಯೇ ಹೇಳಿತ್ತು. ಅಂತಹ ಸಂಘಪರಿವಾರ ಮತ್ತು ಬಿಜೆಪಿಯ ಅಮಿತ್ ಶಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಆಡಿರುವ ಅಪಮಾನಕರವಾದ ಮಾತುಗಳು ಅವರ ಮನುವಾದಿ ಪರಂಪರೆಯ ಮುಂದುವರಿಕೆಯ ಭಾಗವಾಗಿಯೇ ಬಂದಿವೆ. ಇದು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವ ಮತ್ತು ಭಾರತದ ಸಂವಿಧಾನಕ್ಕೆ ಆಗಿರುವ ಅತ್ಯಂತ ಘೋರ ಅಪಮಾನವಾಗಿದೆ ಎಂದರು

ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ, ಮನುವಾದಿ ಅಮಿತ್ ಶಾ ಅವರನ್ನು ಕೂಡಲೇ ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಸಂವಿಧಾನ ಮತ್ತು ಸಂವಿಧಾನ ಶಿಲ್ಪಿಯನ್ನು ಅವಮಾನಿಸಿದ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಬಂಧಿಸಬೇಕೆಂದು ಆಗ್ರಹಿಸಿ ಹಾಸನ ಜಿಲ್ಲಾ ದಲಿತ- ಜನಪರ ಚಳುವಳಿಗಳ ಒಕ್ಕೂಟದ ನೇತೃತ್ವದಲ್ಲಿ 08 ಜನವರಿ 2025, ರಂದು ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ವೇಳೆ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಟಿ.ಆರ್. ವಿಜಯಕುಮಾರ್, ಹಿರಿಯ ದಲಿತ ಮುಖಂಡ ರಾಜಶೇಖರ್, ಅಂಬುಗ ಮಲ್ಲೇಶ್,ಹಾಸನ ಜಿಲ್ಲಾ ಕ್ರೈಸ್ತ ಹಿತರಕ್ಷಣಾ ವೇದಿಕೆಯ ಜೊಶಿವ, ಅಲ್ಪಸಂಖ್ಯಾತ ಮುಖಂಡ, ಸಮೀರ್ ಅಹಮದ್, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಂ.ಜಿ. ಪೃಥ್ವಿ ಇದ್ದರು

Donate Janashakthi Media

Leave a Reply

Your email address will not be published. Required fields are marked *