ಜಾನಪದ ವಿದ್ವಾಂಸ ಅಮೃತ ಸೋಮೇಶ್ವರ ನಿಧನಕ್ಕೆ ಸಿಪಿಐ(ಎಂ) ಮತ್ತು ಡಿವೈಎಫ್‌ಐ ಸಂತಾಪ

ಮಂಗಳೂರು: ಹಿರಿಯ ಸಾಹಿತಿ ಪ್ರೊ. ಅಮೃತ ಸೋಮೇಶ್ವರ ಅವರ ನಿಧನಕ್ಕೆ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲೆ ಮತ್ತು ಡಿವೈಎಫ್‌ಐ ತೀವ್ರ ಶೋಕ ಸೂಚಿಸಿದ್ದು, ತುಳುನಾಡಿನ ಜನಪದ, ಯಕ್ಷಗಾನ ಮೊದಲಾದ ರಂಗದಲ್ಲಿ ಅವರು ಮಾಡಿದ ಕೆಲಸ, ಸಂಶೋಧನೆಗಳು ನಾಡಿನ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ಉಳಿಯಲಿದೆ ಎಂದು ಹೇಳಿದೆ. ಜಾನಪದ ವಿದ್ವಾಂಸರಾದ ಅಮೃತ ಸೋಮೇಶ್ವರ ಅವರು ಜಿಲ್ಲೆಯ ಉಳ್ಳಾಲ ಬಳಿಯ ಸೋಮೇಶ್ವರದ ತಮ್ಮ ನಿವಾಸ “ಒಲುಮೆ”ಯಲ್ಲಿ ಶನಿವಾರ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಸಿಪಿಐ(ಎಂ) ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸಭೆಯಲ್ಲಿ ಶ್ರದ್ದಾಂಜಲಿಯನ್ನು ಸಲ್ಲಿಸಲಾಗಿದ್ದು, ತುಳುನಾಡಿನ ಜನಪದ, ಯಕ್ಷಗಾನ ಮೊದಲಾದ ರಂಗದಲ್ಲಿ ಅವರು ಮಾಡಿದ ಕೆಲಸ, ಸಂಶೋಧನೆಗಳು ನಾಡಿನ ಇತಿಹಾಸ ಪುಟಗಳಲ್ಲಿ ಅಚ್ಚಳಿಯದೆ ಉಳಿಯಲಿದೆ. ಅವರ ಅಗಲಿಕೆ ಕರಾವಳಿ ಜಿಲ್ಲೆಗಳ ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ ಎಂದು ಪಕ್ಷದ ಜಿಲ್ಲಾ ಸಮಿತಿ ಹೇಳಿದೆ.

“ವರ್ತಮಾನದ ಒತ್ತಡ, ಆಮಿಷಗಳ ಪ್ರಭಾವದ ಮುಂದೆ ಕರಾವಳಿಯ ಬೌದ್ದಿಕ ವಲಯ ಚಡಪಡಿಸುತ್ತಿರುವಾಗ ಅಮೃತರು ಯಾವುದೇ ರಾಜಿಯಿಲ್ಲದೆ ದೃಢವಾಗಿ ತಾನು ಪ್ರತಿಪಾದಿಸುವ ವಿಚಾರಗಳ ಜೊತೆ ನಿಂತದ್ದು ಸಣ್ಣ ಸಂಗತಿಯೇನಲ್ಲ. ಅರ್ಧ ಶತಮಾನಗಳ ಕಾಲ ಕಡಲ ತೀರದ ಬೌದ್ಧಿಕ ವಲಯವನ್ನು ಬರಹ, ಬದುಕು, ನಿಲುವುಗಳ ಮೂಲಕ ಪ್ರಭಾವಿಸಿದ ಅಮೃತ ಸೋಮೇಶ್ವರರು ದುಡಿಯುವ ಜನರ, ಶ್ರಮಿಕರ ಪರವಾದ ಚಳುವಳಿಗಳ ಹಿತೈಷಿಯಾಗಿಯೂ ಗುರುತಿಸಿಕೊಂಡಿದ್ದರು” ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಶ್ರದ್ದಾಂಜಲಿ ಹೇಳಿಕೆಯಲ್ಲಿ ಪ್ರಕಟಿಸಿದೆ.

ಇದನ್ನೂ ಓದಿ: ತುಳುನಾಡಿನ ಹಿರಿಯ ಸಾಹಿತಿ, ಜಾನಪದ ವಿದ್ವಾಂಸ ಅಮೃತ ಸೋಮೇಶ್ವರ(88) ಇನ್ನಿಲ್ಲ

ಡಿವೈಎಫ್ಐ ಕರ್ನಾಟಕ ಸಂತಾಪ

ಅಮೃತ ಸೋಮೇಶ್ವರ ಅವರನ್ನು ತುಳುನಾಡಿನ ಸಾಕ್ಷಿ ಪ್ರಜ್ಞೆ ಎಂದು ಬಣ್ಣಿಸಿರುವ ಡಿವೈಎಫ್‌ಐ, ಅವರ ಅಗಲಿಕೆ ತುಳುನಾಡಿನ ಬೌದ್ದಿಕ ವಲಯದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದ್ದು, ಅವರು ತಮ್ಮ ಅಧ್ಯಯನ, ಸಾಧನೆಗಳ ಮೂಲಕ ಅಮರರಾಗಿರುತ್ತಾರೆ ಎಂದು ಹೇಳಿದೆ.

“ಅಮೃತ ಸೋಮೇಶ್ವರ ಅವರು ಡಿವೈಎಫ್ಐ, ಎಸ್ಎಫ್ಐನ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಬೆನ್ನು ತಟ್ಟಿದ್ದರು, ಎಡ, ಜನಪರ ಸಂಘಟನೆಗಳ ಹಿತೈಷಿಯಾಗಿದ್ದರು. ಸೌಮ್ಯ ವ್ಯಕ್ತಿತ್ವ ಶ್ರೀಯುತರು ಪ್ರಶಸ್ತಿ, ಸ್ಥಾನಮಾನ, ಅಧಿಕಾರದ ಹಿಂದೆ ಯಾವತ್ತೂ ಹೋಗಿರಲಿಲ್ಲ, ಅದಕ್ಕಾಗಿ ಆಸೆಪಟ್ಟಿರಲಿಲ್ಲ. ತಮ್ಮ ಸುತ್ತಲೂ ಇದ್ದ ವಿದ್ವಾಂಸ ವಲಯ ರಾಜಿಕೋರತನ, ವ್ಯವಸ್ಥೆಯ ಬೆದರಿಕೆಯಿಂದ ಮೌನಕ್ಕೆ ಜಾರಿದಾಗಲೂ ಅಮೃತರು ತನ್ನ ಸೈದ್ದಾಂತಿಕ ನಿಲುವುಗಳ ವಿಷಯದಲ್ಲಿ ವಜ್ರದಷ್ಟು ಕಠಿಣವಾಗಿದ್ದರು. ಅಮೃತರು ತಮ್ಮ ಅಧ್ಯಯನ, ಸಾಧನೆಗಳ ಮೂಲಕ ಅಮರರಾಗಿರುತ್ತಾರೆ” ಎಂದು ಡಿವೈಎಫ್‌ಐ ಹೇಳಿದೆ.

ಮಂಗಳೂರು ಸಮೀಪದ ಕೋಟೆಕಾರು ಗ್ರಾಮದ ಅಡ್ಕ ನಿವಾಸಿಯಾಗಿದ್ದ ಅಮೃತ ಸೋಮೇಶ್ವರ ಅವರು 1935 ಸೆಪ್ಟೆಂಬರ್ 27‌ ರಂದು ಜನಿಸಿದರು. ತಮ್ಮ ಬಾಲ್ಯವನ್ನು ಮುಂಬೈಯಲ್ಲಿ ಕಳೆದ ಅವರು, ಪ್ರಾಥಮಿಕ ಶಿಕ್ಷಣವನ್ನು ಕೋಟೆಕಾರುನಲ್ಲಿರುವ ಸ್ಟೆಲ್ಲಾ ಮೇರಿಸ್ ಮತ್ತು ನಂತರ ಪ್ರೌಢಶಾಲೆಯನ್ನು ಇಲ್ಲಿನ ಆನಂದಾಶ್ರಮದಲ್ಲಿ ಮುಗಿಸಿದರು. ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಅಭ್ಯಾಸ ಮಾಡಿದ ಅವರು, ಖಾಸಗಿಯಾಗಿ ಓದಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ. ಪದವಿ ಪಡೆದಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ | ಉಪ ಮುಖ್ಯಮಂತ್ರಿಯಿದ್ದ ವೇದಿಕೆಯಲ್ಲೆ ಪೊಲೀಸ್ ಅಧಿಕಾರಿಗೆ ಥಳಿಸಿದ ಬಿಜೆಪಿ ಶಾಸಕ ಸುನಿಲ್ ಕುಮಾರ್!

ಕನ್ನಡ ಸಂಘ, ಯಕ್ಷಗಾನ ಸಂಘದಂತ ಕೂಟಗಳನ್ನು ಆರಂಭಿಸಿ ತುಳು ಭಾಷೆಯ ಬೆಳವಣಿಗೆಗಾಗಿ ಅವರು ಶ್ರಮಿಸಿದ್ದು, ತುಳುನಾಡಿನ ಸಂಸ್ಕ್ರತಿ ಮತ್ತು ಕಲೆಯ ಬಗೆಗೆ ವಿಶೇಷ ಒಲವುಳ್ಳವಗಾಗಿದ್ದರು. ಸಣ್ಣಕತೆಗಳ ಸಂಕಲನಗಳಾದ ಎಲೆಗಿಳಿ, ರುದ್ರಶಿಲೆ ಸಾಕ್ಷಿ , ಕೆಂಪು ನೆನಪು, ಕವನ ಸಂಕಲನಳಾದ ವನಮಾಲೆ, ಭ್ರಮಣ ಉಪ್ಪು ಗಾಳಿ, ತೀರದ ತೆರೆ (ಕಾದಂಬರಿ), ಯಕ್ಷಗಾನ ಕೃತಿ ಸಂಪುಟ, ತುಳು ಪಾಡ್ದನದ ಕಥೆಗಳು, ಅವಿಲು, ತುಳು ಬದುಕು, ಯಕ್ಷಗಾನ ಹೆಜ್ಜೆಗುರುತು, ಭಗವತಿ ಆರಾಧನೆ, ಮೋಯ-ಮಲೆಯಾಳ ನಿಘಂಟು ಮೊದಲಾದ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ.

‘ತಂಬಿಲ’, ‘ರಂಗಿತ’ ಕವನ ಸಂಗ್ರಹ, ‘ಗೋಂದೋಲ್’, ‘ರಾಯ ರಾವುತೆ’ ಮೊದಲಾದ ನಾಟಕಗಳನ್ನು ಪ್ರಕಟಿಸಿದ್ದಾರೆ. ಅಲ್ಲದೆ ಸಾಕಷ್ಟು ಧ್ವನಿಸುರುಳಿಗಳಿಗೆ ಸಾಹಿತ್ಯವನ್ನು ಒದಗಿಸಿದ್ದಾರೆ. ಹಲವಾರು ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯ, ಸಂಶೋಧನಾಸಕ್ತರಿಗೆ ಸದಾ ಕಾಲ ಪ್ರೇರಕ, ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದ ಅವರಿಗೆ ಮಂಗಳೂರು‌ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು.

ಮೃತ ಅಮೃತ ಸೋಮೇಶ್ವರ ಅವರು ಪತ್ನಿ ನರ್ಮದಾ, ಮಕ್ಕಳಾದ ಚೇತನ್, ಜೀವನ್ ಸಹಿತ ಅಪಾರ ಬಂಧುಗಳನ್ನು ಅಗಲಿದ್ದು, ಸೋಮೇಶ್ವರ ಪುರಸಭೆ ಕಚೇರಿ ಬಳಿಯ ಅವರ ನಿವಾಸದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಜನವರಿಗೆ 7ರ ರವಿವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿಡಿಯೊ ನೋಡಿ: ಹಿಟ್ & ರನ್ ಪ್ರಕರಣಗಳ ಹೊಸ ಕಾನೂನಿಗೇಕೆ ಇಷ್ಟು ವಿರೋಧ? ಚಾಲಕರಿಗೆ ಇದು ತೂಗುಕತ್ತಿಯೇ? Janashakthi Media

Donate Janashakthi Media

Leave a Reply

Your email address will not be published. Required fields are marked *