ವಲಸೆ ಕಾರ್ಮಿಕನ ಮೇಲೆ ಗುಂಪು ಹಲ್ಲೆ: ತನಿಖೆಗೆ ಸಿಪಿಐಎಂ ಆಗ್ರಹ

ಮಂಗಳೂರು: ನಗರದ ಹೊರವಲಯದ ಕುಡುಪು ಎಂಬಲ್ಲಿ ನಿನ್ನೆ ಸಂಜೆ (ಎಪ್ರಿಲ್ 27) ಕ್ರಿಕೆಟ್ ಆಡುತ್ತಿದ್ದ ಗುಂಪೊಂದು ಅಲ್ಲಿದ್ದ ವಲಸೆ ಕಾರ್ಮಿಕನೋರ್ವನನ್ನು ಥಳಿಸಿ ಹತ್ಯೆ ಗೈದಿರುವ ಕುರಿತು ಆತಂಕಕಾರಿ ಮಾಹಿತಿಗಳು ಹೊರಬೀಳುತ್ತಿದೆ. ಘಟನೆ ನಡೆದು ಒಂದು ದಿನದ ಕಳೆದಿದ್ದರೂ ಪೊಲೀಸ್ ಇಲಾಖೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡುತ್ತಿಲ್ಲ. ಇದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಗುಂಪು ಹಲ್ಲೆ, ಹತ್ಯೆಯಲ್ಲಿ ಭಾಗಿಯಾಗಿರುವ ರಾಜಕಿಯ ಹಿನ್ನಲೆಯ ಕೆಲವು ಪ್ರಭಾವಿಗಳನ್ನು ರಕ್ಷಿಸುವ, ಪ್ರಕರಣದ ತೀವ್ರತೆಯನ್ನು ತಗ್ಗಿಸುವ, ಪ್ರಕರಣವನ್ನು ದುರ್ಬಲಗೊಳಿಸುವ ಯತ್ನವೂ ಪ್ರಭಾವಿ ರಾಜಕಾರಣಿಗಳಿಂದ, ಸ್ಥಳೀಯ ಜನಪ್ರತಿನಿಧಿಗಳಿಂದ ನಡೆಯುತ್ತಿರುವ ಕುರಿತು ಅನುಮಾನಗಳು ಸಾರ್ವಜನಿಕ ವಲಯದಿಂದ ವ್ಯಕ್ತವಾಗುತ್ತಿದೆ. ರಾಜ್ಯ ಸರಕಾರ ಈ ಕುರಿತು ಗಮನ ಹರಿಸಬೇಕು, ಖುದ್ದು ಮುಖ್ಯಮಂತ್ರಿಗಳು ಈ ಗುಂಪು ಹಲ್ಲೆ, ಹತ್ಯೆ ಪ್ರಕರಣವನ್ನು ಗಂಭೀರಾವಗಿ ಪರಿಗಣಿಸಿ ಉತ್ತಮ ಹಿನ್ನಲೆಯ ಅಧಿಕಾರಿಗಳ ತಂಡವನ್ನು ತನಿಖೆಗೆ ನೇಮಿಸಬೇಕು ಎಂದು ಸಿಪಿಐಎಂ ದ.ಕ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದರು.

ಕುಡುಪು ಮೈದಾನದ ಸಮೀಪ ಬಂದ ವಲಸೆ ಕಾರ್ಮಿಕನನ್ನು ಆತನ ಧರ್ಮದ ಗುರುತಿನ ಕಾರಣಕ್ಕೆ ಕಲ್ಲು, ದೊಣ್ಣೆ, ಬ್ಯಾಟುಗಳಿಂದ ಅಲ್ಲಿದ್ದ ಗುಂಪು ಹಲ್ಲೆ ನಡೆಸಿ ಕೊಂದು ಹಾಕಿದೆ ಎಂದು ಎಲ್ಲೆಡೆ ಪುಕಾರು ಹಬ್ಬಿದೆ. ನತದೃಷ್ಟ ವಲಸೆ ಕಾರ್ಮಿಕ ದೇಶ ವಿರೋಧಿ ಘೋಷಣೆ ಕೂಗಿದ್ದಾನೆ ಎಂಬ ವದಂತಿಯನ್ನೂ ದುಷ್ಕರ್ಮಿಗಳ ಗುಂಪು ಹರಿಯಬಿಟ್ಟಿದೆ.

ಇದನ್ನೂ ಓದಿ: ಷರಿಯಾ ನ್ಯಾಯಾಲಯಗಳಿಗೆ ಕಾನೂನಿನ ಮಾನ್ಯತೆ ಇಲ್ಲ: ಸುಪ್ರೀಂ ಕೋರ್ಟ್

ಆ ಮೂಲಕ ತಮ್ಮ ಗಂಭೀರ ದುಷ್ಕೃತ್ಯವನ್ನು ದೇಶ ಪ್ರೇಮದ ಲೇಬಲ್ ಅಂಟಿಸಿ ಸಮರ್ಥಿಸಿಕೊಳ್ಳುವ ಹೀನ ಯತ್ನವೂ ನಡೆಯುತ್ತಿದೆ. ಮಾಜಿ ಕಾರ್ಪೊರೇಟರ್ ಓರ್ವರ ಪತಿ ಈ ಗುಂಪನ್ನು ಹಲ್ಲೆ ನಡೆಸಲು ಪ್ರಚೋದಿಸಿದ್ದಾರೆ ಎಂಬ ಕುರಿತೂ ಸ್ಥಳೀಯರು ಮಾತಾಡಿಕೊಳ್ಳುತ್ತಿದ್ದಾರೆ. ಹತ್ಯೆಯ ತರುವಾಯ ಸ್ಥಳೀಯ ಜನಪ್ರತಿನಿಧಿಗಳೂ ಮಧ್ಯಪ್ರವೇಶಿಸಿ ಪ್ರಕರಣದ ತೀವ್ರತೆಯನ್ನು ತಗ್ಗಿಸುವ, ಕೆಲವರನ್ನು ಬಚಾವ್ ಮಾಡುವ ಯತ್ನ ನಡೆಸುತ್ತಿರುವ ಆರೋಪಗಳೂ ಕೇಳಿಬರುತ್ತಿದೆ. ಮಂಗಳೂರು ಪೊಲೀಸರು ಯಾವುದೇ ಅಧಿಕೃತ ಮಾಹಿತಿಯನ್ನು ಘಟನೆ ನಡೆದು ಒಂದು ದಿನ ಕಳೆದರೂ ನೀಡದಿರುವುದು ಪ್ರಕರಣದ ಕುರಿತು ಅನುಮಾನಗಳನ್ನು ಹೆಚ್ಚಿಸಿದೆ.

ಮಂಗಳೂರು ನಗರದಲ್ಲಿ ಈ ರೀತಿ ಗುಂಪು ಹಲ್ಲೆ, ಹತ್ಯೆ ನಡೆಯುವುದು ಕರಾವಳಿ ಜಿಲ್ಲೆಗಳು ಅಪಾಯದ ಗಡಿದಾಟುತ್ತಿರುವುದರ ಸಂಕೇತ, ಪೆಹಲ್ಗಾಮ್ ದುರಂತದ ಬೆನ್ನಲ್ಲೆ ಈ ಘಟನೆ ನಡೆದಿರುವುದು ಆಘಾತಕಾರಿ ವಿದ್ಯಾಮಾನ‌. ವಲಸೆ ಕಾರ್ಮಿಕರು, ಅವರ ಧರ್ಮದ ಹಾಗೂ ವಿವಿಧ ಗುರುತಿನ ಕಾರಣಕ್ಕೆ “ದೇಶಪ್ರೇಮ”ದ ಲೇಬಲ್ ಅಡಿ ದುಷ್ಕರ್ಮಿಗಳು ಬಹಿರಂಗವಾಗಿ ಹೊಡೆದು ಹಾಕುವುದು ಅನಾಗರಿಕತೆಯ ಪರಮಾವಧಿ.

ಇದರ ಸಾಮಾಜಿಕ ಪರಿಣಾಮಗಳು ಸರಿಪಡಿಸಲಾಗಷ್ಟು ಗಂಭೀರವಾಗಿರುತ್ತದೆ. ಸಿಪಿಐಎಂ ದ.ಕ ಜಿಲ್ಲಾ ಸಮಿತಿ ಈ ಘಟನೆಯನ್ನು ಬಲವಾಗಿ ಖಂಡಿಸುತ್ತದೆ. ಪೊಲೀಸ್ ಇಲಾಖೆ ಘಟನೆಯ ಕುರಿತು ತಕ್ಷಣವೆ ಸಾರ್ವಜನಿಕರಿಗೆ ಪೂರ್ಣ ಮಾಹಿತಿಯನ್ನು ಒದಗಿಸಬೇಕು.ಪ್ರಕರಣದ ತನಿಖೆಗಾಗಿ ದಕ್ಷ ಅಧಿಕಾರಿಗಳನ್ನು ಒಳಗೊಂಡ ವಿಶೆಷ ತನಿಖಾ ತಂಡವನ್ನು ನೇಮಿಸಬೇಕು ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸುತ್ತದೆ.

ಇದನ್ನೂ ನೋಡಿ: ಚಾಮರಾಜನಗರಕ್ಕೆ ಬರುವುದರಿಂದ ಅಧಿಕಾರ ಮತ್ತಷ್ಟು ಗಟ್ಟಿಯಾಗ್ತಿದೆ – ಸಿಎಂ ಸಿದ್ದರಾಮಯ್ಯ Janashakthi Media

Donate Janashakthi Media

Leave a Reply

Your email address will not be published. Required fields are marked *