ನವದೆಹಲಿ : ಕೊವಿಡ್‍ನ ಹೊಸ ರೂಪಾಂತರಿ ಓಮಿಕ್ರಾನ್ ನಿಂದಾಗಿ ಹೊಸ ಅಪಾಯಗಳು ಹೊಮ್ಮ;ಲಿವೆ ಎಂದು ಆತಂಕ ವ್ಯಕ್ತಪಡಿಸಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಇದನ್ನು ಎದುರಿಸಲು ಲಸಿಕೀಕರಣದ ವೇಗವನ್ನು ತುರ್ತಾಗಿ ಹೆಚ್ಚಿಸಬೇಕು ಎಂದು ಹೇಳಿದೆ. ಡಿಸೆಂಬರ್ 17-18ರಂದು ನವದೆಹಲಿಯಲ್ಲಿ ಸೇರಿದ ಪೊಲಿಟ್ ಬ್ಯುರೊ ಸಭೆಯ ನಂತರ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಅದು ಸರಕಾರವನ್ನು ಆಗ್ರಹಿಸಿದೆ.
ಈ ಸಭೆಯಲ್ಲಿ ಇತರ ಹಲವು ವಿಷಯಗಳನ್ನು ಚರ್ಚಿಸಲಾಯಿತು. ಮಹಿಳೆಯ ವಿವಾಹ ವಯಸ್ಸನ್ನು 18ರಿಂದ 21 ಕ್ಕೇರಿಸುವ ಸರಕಾರದ ಮಸೂದೆ ಅನಗತ್ಯವಾಗಿದೆ, ಇದಕ್ಕೆ ತನ್ನ ಬೆಂಬಲ ಇಲ್ಲ ಎಂದು ಅದು ಹೇಳಿದೆ.
ಸುಪ್ರಿಂ ಕೋರ್ಟ್ ರಚಿಸಿದ ಲಖಿಮ್ ಪುರ್ ಖೇರಿಯ ಘಟನೆಯ ಕುರಿತ ಎಸ್‍ಐಟಿಯ ಎಫ್‍ಐಆರ್ ಹೊರತಾಗಿಯೂ ಪ್ರಧಾನಿಗಳು ಒಬ್ಬ ಆರೋಪಿಯ ತಂದೆ ಸಚಿವ ಅಜಯ್ ಶರ್ಮಾರನ್ನು ಇನ್ನೂ ಸಂಪುಟದಿಂದ ವಜಾಗೊಳಿಸಿಲ್ಲ.ಇದನ್ನು ಕೂಡಲೇ ಮಾಡಬೇಕು ಎಂದು ಪೊಲಿಟ್ ಬ್ಯೂರೋ ಆಗ್ರಹಿಸಿದೆ.
ಡಿಸೆಂಬರ್ 16-17 ರಂದು ನಡೆಸಿದ ಯಶಸ್ವಿ ಮುಷ್ಕರಕ್ಕಾಗಿ ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳನ್ನು ಅದು ಅಭಿನಂದಿಸಿದೆ. ಖಾಸಗೀಕರಣ ಯೋಜನೆಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಅದು ಆಗ್ರಹಿಸಿದೆ.
ಸಗಟು ಬೆಲೆ ಸೂಚ್ಯಂಕವು ಮೂವತ್ತು ವರ್ಷಗಳಲ್ಲೇ ಅತಿ ಹೆಚ್ಚಿನ ಏರಿಕೆ ಕಂಡಿದೆ. ಹಣದುಬ್ಬರದ ನಾಗಾಲೋಟದ ಜೊತೆಗೆ, ನಿರುದ್ಯೋಗ ಇವೆಲ್ಲ ಒಟ್ಟಾಗಿ ಜನರ ಮೇಲೆ ಹೆಚ್ಚಿನ ಸಂಕಟಗಳನ್ನು ಹೇರುತ್ತಿವೆ ಮತ್ತು ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಮತ್ತಷ್ಟು ಸಂಕೋಚನಕ್ಕೆ ಒಳಗಾಗಲು ಕೊಡುಗೆ ನೀಡುತ್ತಿವೆ.ಇಂತಹ ಸನ್ನಿವೇಶದಲ್ಲಿ ಆದಾಯ ತೆರಿಗೆ ವ್ಯಾಪ್ತಿಗೆ ಬರದ ಪ್ರತಿ ಕುಟುಂಬಕ್ಕೆ ಮಾಸಿಕ ರೂ.7,500 ಗಳಷ್ಟಾದರೂ ನೇರ ನಗದು ವರ್ಗಾವಣೆವನ್ನು ತಕ್ಷಣ ಮಾಡಬೇಕು ಎಂಬ ಆಗ್ರಹವನ್ನು ಸಿಪಿಐ(ಎಂ) ಪೊಲಿಟ್ ಬ್ಯುರೊ ಪುನರುಚ್ಚರಿಸಿದೆ.
ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಇಬ್ಬರು ಚುನಾವಣಾ ಆಯುಕ್ತರು ಬಂದು ಭೇಟಿ ಮಾಡಬೇಕು ಎಂದು ಪ್ರಧಾನ ಮಂತ್ರಿ ಕಚೇರಿ(ಪಿಎಂಒ) ಕರೆಸಿರುವುದು ಸಂವಿಧಾನದ ಉಲ್ಲಂಘನೆ ಮತ್ತು ಕಾನೂನು ಭಂಗದ ಕೃತ್ಯವಾಗಿದೆ ಎಂದಿರುವ ಪೊಲಿಟ್ ಬ್ಯುರೊ ಇದನ್ನು ಬಲವಾಗಿ ಖಂಡಿಸುತ್ತ ನಮ್ಮ ಸಾಂವಿಧಾನಿಕ ಪ್ರಾಧಿಕಾರಗಳ ಸ್ವಾತಂತ್ರ್ದದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕೆಂದು ಮೋದಿ ಸರ್ಕಾರವನ್ನು ಒತ್ತಾಯಿಸಿದೆ.
ಸಿಪಿಐ(ಎಂ) ಕೇಂದ್ರ ಸಮಿತಿ ಕಚೇರಿ ಪ್ರಕಟಿಸಿರುವ ಈ ಪತ್ರಿಕಾ ಹೇಳಿಕೆಯ ಪೂರ್ಣ ಪಾಟವನ್ನು ಈ ಮುಂದೆ ಕೊಡಲಾಗಿದೆ:
ಕೋವಿಡ್ ಮಹಾಸೋಂಕು: ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿವೆ : ಹೊಸ ರೂಪಾಂತರಿ ಓಮಿಕ್ರಾನ್ ಹೆಚ್ಚು ಜನರಿಗೆ ಸೋಂಕು ತಗಲಿಸುವುದರೊಂದಿಗೆ, ಮಹಾಸೋಂಕಿನ ಹೊಸ ಅಪಾಯಗಳು ಹೊರಹೊಮ್ಮುತ್ತಿವೆ. ದುರದೃಷ್ಟವಶಾತ್, ವರ್ಷಾಂತ್ಯದ ವೇಳೆಗೆ ದೇಶದ ಎಲ್ಲಾ ವಯಸ್ಕರಿಗೆ ಲಸಿಕೆ ಹಾಕುವ ಗುರಿಯನ್ನು ಘೋಷಿಸಿದ್ದರೂ, ಡಿಸೆಂಬರ್ 18 ರ ವೇಳೆಗೆ, ನಮ್ಮ ಜನಸಂಖ್ಯೆಯ ಕೇವಲ 39 ಪ್ರತಿಶತದಷ್ಟು ಜನರು ಮಾತ್ರ ಎರಡೂ ಡೋಸ್‌ಗಳೊಂದಿಗೆ ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿದ್ದಾರೆ.
ದೇಶದಲ್ಲಿ ಹೊಸ ಆರೋಗ್ಯ ತುರ್ತುಸ್ಥಿತಿ ಎರಗುವುದನ್ನು ತಡೆಗಟ್ಟಲು ಲಸಿಕೀಕರಣದ ವೇಗವನ್ನು ತುರ್ತಾಗಿ ಹೆಚ್ಚಿಸಬೇಕು.
ಮಹಿಳೆಯರ ಮದುವೆಯ ವಯಸ್ಸನ್ನು ಹೆಚ್ಚಿಸುವುದು : ಮಹಿಳೆಯರ ವಿವಾಹಯೋಗ್ಯ ವಯಸ್ಸನ್ನು ಪ್ರಸ್ತುತ 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸಲು ಬಿಜೆಪಿ ಸರ್ಕಾರ ಪ್ರಸ್ತಾಪಿಸಿರುವ ಮಸೂದೆಯನ್ನು ಸಿಪಿಐ(ಎಂ) ಬೆಂಬಲಿಸುವುದಿಲ್ಲ. ಅಂತಹ ವಿಧೇಯಕಕ್ಕೆ ಸರ್ಕಾರವು ಇದಕ್ಕೆ ಮನದಟ್ಟಾಗುವ ಕಾರಣಗಳನ್ನು ಮುಂದಿಟ್ಟಿಲ್ಲ.. ಈ ಕರಡು ಮಸೂದೆಯನ್ನು ಸಂಸತ್ತಿನ ಸಂಬಂಧಪಟ್ಟ ಸ್ಥಾಯಿ ಸಮಿತಿಗೆ ಆಳವಾದ ಪರೀಕ್ಷಣೆ ಮತ್ತು ಮತ್ತು ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚನೆಗಾಗಿ ಕಳುಹಿಸಬೇಕು.
ಒಬ್ಬ ಮಹಿಳೆ, 18 ನೇ ವಯಸ್ಸಿನಲ್ಲಿ, ಕಾನೂನುಬದ್ಧವಾಗಿ ವಯಸ್ಕಳು. ಮದುವೆಯ ಉದ್ದೇಶಗಳಿಗಾಗಿ, ಅವಳನ್ನು ಬಾಲಾಪರಾಧಿ ಎಂದು ಪರಿಗಣಿಸುವುದು ಸ್ವಯಂ-ವಿರೋಧಾಭಾಸವಾಗಿದೆ ಮತ್ತು ತಮ್ಮ ಸಂಗಾತಿಯ ವೈಯಕ್ತಿಕ ಆಯ್ಕೆಯನ್ನು ಮಾಡುವ ವಯಸ್ಕರ ಹಕ್ಕನ್ನು ಇದನ್ನು ಉಲ್ಲಂಘಿಸುತ್ತದೆ. ಈ ಪ್ರಸ್ತಾಪವು ಮಹಿಳೆ ತನ್ನ ಜೀವನದ ಹಾದಿಯನ್ನು ನಿರ್ಧರಿಸಲಾಗದಂತೆ ವಂಚಿಸುತ್ತದೆ.
ಕನಿಷ್ಠ ವಯಸ್ಸು 18 ವರ್ಷಗಳಾಗಿದ್ದರೂ ಸಹ, 2017 ರಲ್ಲಿ ಮಹಿಳೆಯರ ವಿವಾಹದ ಅಖಿಲ ಭಾರತ ಸರಾಸರಿ ವಯಸ್ಸು 22.1 ವರ್ಷಗಳು ಎಂದು ಅಧಿಕೃತ ಅಂಕಿಅಂಶಗಳು ತಿಳಿಸುತ್ತವೆ. ಆದ್ದರಿಂದ ಇಂತಹ ಕಾನೂನು ಅನಗತ್ಯ. ಈ ಮಸೂದೆಯ ಪರಿಶೀಲನೆ ಆರೋಗ್ಯದ ಕಾರಣಗಳಿಂದಾಗಿ ಆಗಿದ್ದರೆ, ಸರ್ಕಾರವು ಹೇಳಿಕೊಳ್ಳುವಂತೆ, ತಾಯಿ ಮತ್ತು ಶಿಶು ಮರಣವನ್ನು ತಡೆಗಟ್ಟಲು ಪೋಷಣೆ ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿದೆ. ಮಹಿಳೆಯರ ಮದುವೆ ವಯಸ್ಸನ್ನು ಹೆಚ್ಚಿಸುವುದು ಪರಿಹಾರವಲ್ಲ.
ಲಖಿಂಪುರ ಖೇರಿ ಕೊಲೆಗಳು : ಸುಪ್ರೀಂ ಕೋರ್ಟ್ ಸ್ಥಾಪಿಸಿದ ವಿಶೇಷ ತನಿಖಾ ತಂಡವು ಎಫ್‌ಐಆರ್ ದಾಖಲಿಸಿದ್ದು, ಅದರಲ್ಲಿ ಇದು “ಸಾವುಂಟುಮಾಡುವ ಪೂರ್ವ ಯೋಜಿತ ಪಿತೂರಿ” ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಎಂಟು ಮಂದಿಯನ್ನು ಬರ್ಬರವಾಗಿ ಸಾಯಿಸಲಾಯಿತು. ಪ್ರಮುಖ ಆರೋಪಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ. ಸಾರ್ವಜನಿಕರ ಆಕ್ರೋಶದ ಹೊರತಾಗಿಯೂ ಪ್ರಧಾನಿ ಮೋದಿ ಸಚಿವರನ್ನು ಸಂಪುಟದಿಂದ ವಜಾಗೊಳಿಸಿಲ್ಲ. ಇದನ್ನು ಕೂಡಲೇ ಮಾಡಬೇಕು ಎಂದು ಪೊಲಿಟ್ ಬ್ಯೂರೋ ಆಗ್ರಹಿಸುತ್ತದೆ.
ಯಶಸ್ವಿ ಬ್ಯಾಂಕ್ ಮುಷ್ಕರ : ಡಿಸೆಂಬರ್ 16-17 ರಂದು ನಡೆಸಿದ ಯಶಸ್ವಿ ಮುಷ್ಕರಕ್ಕಾಗಿ ಸುಮಾರು 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳನ್ನು ಸಿಪಿಐ(ಎಂ) ಪಾಲಿಟ್ ಬ್ಯೂರೋ ಅಭಿನಂದಿಸಿದೆ. ಈ ಮುಷ್ಕರಕ್ಕೆ ವಿವಿಧ ಕಾರ್ಮಿಕ ಸಂಘಗಳಿಂದ ವ್ಯಾಪಕ ಬೆಂಬಲ ಮತ್ತು ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿತು. ಏಕೆಂದರೆ, ಬ್ಯಾಂಕ್ ಸಂಘಗಳು ಬ್ಯಾಂಕ್ ಖಾತೆಗಳಲ್ಲಿ ಭಾರತೀಯ ಜನತೆಯ ಜೀವಿತಾವಧಿಯ ಉಳಿತಾಯವನ್ನು ಲೂಟಿ ಮಾಡಲು ಈ ಸರ್ಕಾರದ ಬಂಟರಿಗೆ ಹಸ್ತಾಂತರಿಸುತ್ತಿರುವ ವಿಧಾನವನ್ನು ಬಯಲಿಗೆ ತಂದಿವೆ. ಮೋದಿ ಸರ್ಕಾರದ ಈ ವರ್ಷಗಳಲ್ಲಿ ರೂ. 10.7 ಲಕ್ಷ ಕೋಟಿಗಿಂತಲೂ ಹೆಚ್ಚಿನ ಮೊತ್ತದ ಸಾಲಗಳನ್ನು ಮನ್ನಾ ಮಾಡಲಾಗಿದೆ ಮತ್ತು ಸಾರ್ವಜನಿಕ ಹಣದ ಮೂಲಕ ಬ್ಯಾಂಕುಗಳಿಗೆ ಮರು ಬಂಡವಾಳವನ್ನು ಹೊಂದಿಸಲಾಗಿದೆ.
ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಈ ರೀತಿ ಅಪಾಯಕ್ಕೆ ಸಿಲುಕಿಸುವ ಮೋದಿ ಸರ್ಕಾರವು ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಇದನ್ನೇ ನೆಪವಾಗಿ ಬಳಸಿಕೊಳ್ಳುತ್ತದೆ. ಇದು ದೇಶ ಮತ್ತು ಜನತೆಗೆ ವಿಪತ್ತು ತಂದೊಡ್ಡಲಿದೆ.
ಇಂತಹ ಖಾಸಗೀಕರಣ ಯೋಜನೆಗಳನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಪಾಲಿಟ್ ಬ್ಯೂರೋ ಆಗ್ರಹಿಸುತ್ತದೆ.
ಬೆಲೆ ಏರಿಕೆ : ಸಗಟು ಬೆಲೆ ಸೂಚ್ಯಂಕವು ನವೆಂಬರ್‌ನಲ್ಲಿ ಶೇಕಡಾ 14.2 ರಷ್ಟು ಏರಿಕೆಯಾಗಿದೆ, ಇದು ಮೂವತ್ತು ವರ್ಷಗಳಲ್ಲೇ ಅತಿ ಹೆಚ್ಚು ಏರಿಕೆ. ಸಗಟು ಇಂಧನ ಮತ್ತು ವಿದ್ಯುತ್ ಬೆಲೆಗಳು ಶೇಕಡಾ 39.81 ರಷ್ಟು ಏರಿಕೆಯಾಗಿವೆ; ಆಹಾರ ಮತ್ತು ಇಂಧನ ಬೆಲೆಗಳು ಹನ್ನೆರಡು ವರ್ಷಗಳ ದಾಖಲೆಯನ್ನು ತಲುಪಿವೆ. ಇದು ಜನರ ಸಂಕಷ್ಟವನ್ನು ಹೆಚ್ಚಿಸುತ್ತಿದೆ.
ಸಿಪಿಐ(ಎಂ) ಪೊಲಿಟ್ ಬ್ಯೂರೋ ಪಕ್ಷದ ಎಲ್ಲಾ ಘಟಕಗಳಿಗೆ ಪ್ರತಿಭಟನಾ ಕಾರ್ಯಗಳನ್ನು ಸಂಘಟಿಸಲು ಕರೆ ನೀಡಿದೆ.
ನಿರುದ್ಯೋಗ : ನವೆಂಬರ್ 2021 ರ ಒಂದೇ ತಿಂಗಳಲ್ಲಿ, 68 ಲಕ್ಷ ಸಂಬಳಕ್ಕೆ ದುಡಿಯುವ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ನಗರ ಉದ್ಯೋಗಹೀನತೆ ಕಳೆದ 17 ವಾರಗಳ ಅತಿ ಹೆಚ್ಚಿನ ಮಟ್ಟಕ್ಕೆ ಮತ್ತು ಮತ್ತು ಒಟ್ಟಾರೆ ನಿರುದ್ಯೋಗ ಕಳೆದ 9 ವಾರಗಳಲ್ಲೇ ಅತೀ ಹೆಚ್ಚಿನ ಮಟ್ಟ ತಲುಪಿದೆ.
ಹಣದುಬ್ಬರದ ನಾಗಾಲೋಟದ ಜೊತೆಗೆ, ಇವುಗಳು ಒಟ್ಟಾಗಿ ಜನರ ಮೇಲೆ ಹೆಚ್ಚಿನ ಸಂಕಟಗಳನ್ನು ಹೇರುತ್ತಿವೆ ಮತ್ತು ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಮತ್ತಷ್ಟು ಸಂಕೋಚನಕ್ಕೆ ಒಳಗಾಗಲು ಕೊಡುಗೆ ನೀಡುತ್ತಿವೆ ಮತ್ತು ಸರ್ಕಾರದ ಆರ್ಥಿಕ ಹಿಂಜರಿತವನ್ನು ಗಾಢವಾಗಿಸುತ್ತಿವೆ.
ಆದಾಯ ತೆರಿಗೆ ವ್ಯಾಪ್ತಿಗೆ ಬರದ ಪ್ರತಿ ಕುಟುಂಬಕ್ಕೆ ಮಾಸಿಕ ರೂ.7,500 ಗಳಷ್ಟಾದರೂ ನೇರ ನಗದು ವರ್ಗಾವಣೆವನ್ನು ತಕ್ಷಣ ಮಾಡಬೇಕು.
ಭಾರತದ ಚುನಾವಣಾ ಆಯೋಗವನ್ನು ಕರೆಸಿರುವ ಪ್ರಧಾನ ಮಂತ್ರಿ ಕಚೇರಿಯ ಕ್ರಮಕ್ಕೆ ಖಂಡನೆ : ಭಾರತದ ಚುನಾವಣಾ ಆಯೋಗ(ಇಸಿಐ)ವು ಸ್ವತಂತ್ರ ಸಾಂವಿಧಾನಿಕ ಪ್ರಾಧಿಕಾರವಾಗಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಬೇಕಾದ ಏಕೈಕ ಪ್ರಾಧಿಕಾರವಾಗಿದೆ. ಈ ಜವಾಬ್ದಾರಿಯನ್ನು ನಿರ್ವಹಿಸಲು, ಇಸಿಐ ಕಾರ್ಯಾಂಗ (ಸರ್ಕಾರ) ದಿಂದ ಸಂಪೂರ್ಣವಾಗಿ ಸ್ವತಂತ್ರವಾಗಿರಬೇಕು.
ಇತ್ತೀಚೆಗೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಇಬ್ಬರು ಚುನಾವಣಾ ಆಯುಕ್ತರು ಬಂದು ಭೇಟಿ ಮಾಡಬೇಕು ಎಂದು ಪ್ರಧಾನ ಮಂತ್ರಿ ಕಚೇರಿ(ಪಿಎಂಒ) ಕರೆಸಿರುವುದು ಸಂವಿಧಾನದ ಉಲ್ಲಂಘನೆ ಮತ್ತು ಕಾನೂನು ಭಂಗದ ಕೃತ್ಯವಾಗಿದೆ. ಮೋದಿ ಸರಕಾರದ ಇಂತಹ ಕ್ರಮಗಳಿಂದ ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಮತ್ತು ತಟಸ್ಥತೆಯ ಮೇಲಿನ ಜನರ ನಂಬಿಕೆ ಕಡಿಮೆಯಾಗುತ್ತದೆ.
ಸಿಪಿಐ(ಎಂ) ಪೊಲಿಟ್ ಬ್ಯೂರೋ ಇದನ್ನು ಬಲವಾಗಿ ಖಂಡಿಸುತ್ತದೆ ಮತ್ತು ನಮ್ಮ ಸಾಂವಿಧಾನಿಕ ಪ್ರಾಧಿಕಾರಗಳ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿಲ್ಲಿಸಬೇಕೆಂದು ಮೋದಿ ಸರ್ಕಾರವನ್ನು ಒತ್ತಾಯಿಸುತ್ತದೆ.
23 ನೇ ಮಹಾಧಿವೇಶನ : ಪೊಲಿಟ್ ಬ್ಯೂರೋ 23 ನೇ ಮಹಾಧಿವೇಶನದ ಕರಡು ರಾಜಕೀಯ ನಿರ್ಣಯವನ್ನು ಚರ್ಚಿಸಿ ಅಂತಿಮಗೊಳಿಸಿತು. ಇದನ್ನು ಈಗ 2022 ರ ಜನವರಿ 7 ರಿಂದ 9 ರವರೆಗೆ ಹೈದರಾಬಾದ್‌ನಲ್ಲಿ ನಡೆಯಲಿರುವ ಕೇಂದ್ರ ಸಮಿತಿಯ ಸಭೆಯ ಮುಂದೆ ಮಂಡಿಸಲಾಗುತ್ತದೆ ಎಂದು ಸಿಪಿಐಎಂ ತಿಳಿಸಿದೆ.