ನವದೆಹಲಿ: ಸಂವಿಧಾನದ ಪೀಠಿಕೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಎಂಬ ಪದಗಳನ್ನು ತೆಗೆದುಹಾಕುವಂತೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸುವ ಅರ್ಜಿ ಪುರಸ್ಕರಿಸಿ ವಿಚಾರಣೆಗೆ ಸಂಬಂಧಿಸಿ ಪಟ್ಟಿ ಮಾಡಲು ತಿಳಿಸಲಾಗಿದೆ.
ಇದರಂತೆ, ಸೆಪ್ಟೆಂಬರ್ 23 ರಂದು ಸಿಜೆಐ ಯುಯು ಲಲಿತ್ ಅವರ ಮುಂದೆ ವಿಚಾರಣೆಗೆ ಬರಲಿದೆ. ಈ ಸಂಬಂಧ ಸುಬ್ರಮಣಿಯನ್ ಸ್ವಾಮಿ ಕೋರಿಕೆಗೆ ಆಕ್ಷೇಪಣೆ ಸಲ್ಲಿಕೆಯಾಗಿದ್ದು, ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ)ದ ರಾಜ್ಯಸಭಾ ಸದಸ್ಯ ಬಿನೋಯ್ ವಿಶ್ವಮ್ ಅರ್ಜಿ ಸಲ್ಲಿಸಿದ್ದಾರೆ.
ಸುಬ್ರಮಣಿಯನ್ ಸ್ವಾಮಿ ಅವರ ಮನವಿಯು ಸಂಪೂರ್ಣವಾಗಿ ಕಾನೂನಿನ ದುರ್ಬಳಕೆಯಾಗಿದ್ದು, ವಿಚಾರಣಾರ್ಹತೆ ಹೊಂದಿಲ್ಲ. ಹಾಗಾಗಿ ಅವರಿಗೆ ದುಬಾರಿ ದಂಡ ವಿಧಿಸಿ ಅದನ್ನು ವಜಾ ಮಾಡಬೇಕು ಎಂದು ಬಿನೋಯ್ ವಿಶ್ವಮ್ ಅವರು ಸಲ್ಲಿಸಿರುವ ಮಧ್ಯಪ್ರವೇಶ ಮನವಿಯಲ್ಲಿ ಕೋರಿದ್ದಾರೆ.
ರಾಜಕೀಯ ಪಕ್ಷವು ಧರ್ಮದ ಮೇಲೆ ಮತ ಕೇಳುವುದನ್ನು ಸರಾಗಗೊಳಿಸುವ ಉದ್ದೇಶವೊಂದನ್ನು ಇಟ್ಟುಕೊಂಡಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರ ಇಂತಹ ಬಾಲಿಶತನದ ಮನವಿಯನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಂವಿಧಾನಕ್ಕೆ 42ನೇ ತಿದ್ದುಪಡಿಯ ಮೂಲಕ “ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯ” ಎಂದು ಇದ್ದುದನ್ನು “ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ” ಎಂದು ಮಾಡಿರುವುದನ್ನು ಪ್ರಶ್ನಿಸಿ ಸುಬ್ರಮಣಿಯನ್ ಸ್ವಾಮಿ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಸಂವಿಧಾನದ 42ನೇ ತಿದ್ದುಪಡಿಯನ್ನು ಪ್ರಶ್ನಿಸಲಾಗಿದ್ದು, ಪ್ರಜಾಪ್ರತಿನಿಧಿ ಕಾಯಿದೆ 1951ರ ಸೆಕ್ಷನ್ 29(ಎ) ಅಡಿ ಬರುವ ಉಪ ವಿಧಿ 5 ಅನ್ನು ರದ್ದುಪಡಿಸುವಂತೆ ಸ್ವಾಮಿ ಮನವಿ ಮಾಡಿದ್ದಾರೆ. “ಧರ್ಮದ ಹೆಸರಿನಲ್ಲಿ ಮತ ಕೇಳುವುದನ್ನು ಸೆಕ್ಷನ್ 29(ಎ)ನಲ್ಲಿ ನಿರ್ಬಂಧಿಸಲಾಗಿದೆ” ಎಂದು ವಿಶ್ವಮ್ ವಾದಿಸಿದ್ದಾರೆ.
1976ರಲ್ಲಿ ಇಂದಿರಾ ಗಾಂಧಿ ಸರ್ಕಾರ 42ನೇ ಸಾಂವಿಧಾನಿಕ ತಿದ್ದುಪಡಿ ಮೂಲಕ ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳನ್ನು ಸೇರಿಸಲಾಗಿತ್ತು. ತಿದ್ದುಪಡಿಯು ಪೀಠಿಕೆಯಲ್ಲಿನ ಭಾರತದ ವಿವರಣೆಯನ್ನು “ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯ” ಎಂಬುದನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಪ್ರಜಾಸತ್ತಾತ್ಮಕ ಗಣರಾಜ್ಯ ಎಂದು ಬರೆಯಲಾಗಿತ್ತು.
ಈ ಹಿಂದೆ ಹಲವು ಬಾರಿ ಸಂವಿಧಾನ ಪೀಠಿಕೆಯಲ್ಲಿ ಸಮಾಜವಾದಿ, ಜಾತ್ಯತೀತ ಪದಗಳ ಬಗ್ಗೆ ವಿರೋಧ ವ್ಯಕ್ತಗೊಂಡಿದ್ದವು.
ಸಂವಿಧಾನದ ಪೀಠಿಕೆಯಲ್ಲಿ ಇರುವ ಸಮಾಜವಾದ ಶಬ್ದವನ್ನು ತೆಗೆದು ಹಾಕಬೇಕು ಎಂದು 2008ರಲ್ಲಿ ಸಲ್ಲಿಕೆಯಾಗಿದ್ದ ಅರ್ಜಿ ಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಸಮಾಜವಾದ ಎಂಬ ಶಬ್ದದ ಅರ್ಥವನ್ನು ತೀರಾ ಸಂಕುಚಿತವಾಗಿ ತಿಳಿದುಕೊಳ್ಳುವುದೇಕೆ? ವಿಸ್ತೃತವಾಗಿರುವ ಅರ್ಥದಲ್ಲಿ ಸಮಾಜವಾದ ಎಂದರೆ ಅಭಿವೃದ್ಧಿಯ ಸಂಕೇತ. ಅಭಿವೃದ್ಧಿ ಎಂದರೆ ಪ್ರಜಾಪ್ರಭುತ್ವದ ಮುಖವೇ ಆಗಿದೆ ಎಂದು ಆಗ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.