ಕೋವಿಡ್ ನ ಎರಡನೆಯ ಅಲೆ ದೇಶದಲ್ಲಿ ಹಾಹಾಕಾರ ಎಬ್ಬಿಸಿದ್ದು, ಇದರಿಂದ ಭಯಭೀತರಾದ ಜನರಲ್ಲಿ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ. ಈ ಪ್ರಶ್ನೆಗಳಿಗೆ ದೀರ್ಘ ಕಾಲ ಕರ್ನಾಟಕದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಕೆಲಸದ ಅಪಾರ ಅನುಭವವಿರುವ ಹಿರಿಯ ವೈದ್ಯರಾದ ಡಾ.ಕೆ.ಸುಶೀಲಾ ಈ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅದರ ಮುಂದುವರೆದ ಭಾಗ.
7. ಕೋವಿಡ್ ಚಿಕಿತ್ಸೆಯಲ್ಲಿ ರೆಮೆಡೆಸ್ವಿರ್ ಪರಿಣಾಮಕಾರಿಯೇ? ಕೋವಿಡ್ ರೋಗಪರೀಕ್ಷೆಯಲ್ಲಿ ಸಿ.ಟಿ. ಸ್ಕ್ಯಾನ್ ನ ಪಾತ್ರವೇನು? ಈ ಕುರಿತು ಇರುವ ವಿವಾದವೇನು?
ಕೋವಿಡ್ -19 ರೋಗದ ಹೆಸರಿನೊಂದಿಗೆ ಅತ್ಯಂತ ಹೆಚ್ಚು ಕೇಳಿ ಬರುವ ಸಿ.ಟಿ. ಸ್ಕ್ಯಾನ್ ಹಾಗೂ ರೆಮ್‌ಡೆಸಿವಿರ್. ತಜ್ಞರ ಅಭಿಪ್ರಾಯದಂತೆ ಹಲವು ಪ್ರಾರಂಭಿಕ ಹಂತದಲ್ಲಿರುವ ಕೋವಿಡ್-19 ರ ರೋಗಿಗಳನ್ನು ಶ್ವಾಸಕೋಸದ ಸಿ.ಟಿ. ಸ್ಕ್ಯಾನ್‌ಗೆ ಒಳಪಡಿಸಿದಾಗ, ಶ್ವಾಸಕೋಶದಲ್ಲಿ ಈ ರೋಗಕ್ಕೆ ಸಂಬಂಧಿಸಿದ ಕಲೆಗಳು ಕಾಣಿಸಿಕೊಂಡಿದ್ದವು. ಆದರೆ ಇಂತಹ ರೋಗಿಗಳು ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲದೆ ಸಂಪೂರ್ಣ ಗುಣಮುಖರಾಗಿದ್ದರು. ಹಾಗಾಗಿ ಕೋವಿಡ್ ಇದೆ ಎಂದು ಪತ್ತೆಯಾದೊಡನೆ ಸಿ.ಟಿ. ಸ್ಕ್ಯಾನ್ ಮಾಡುವುದು ಸರಿಯಲ್ಲ.
ಇದರಿಂದ ಶರೀರ, ಅತೀ ಹೆಚ್ಚಿನ ಪ್ರಮಾಣದಲ್ಲಿ ಅಪಾಯಕರವಾದ ರೇಡಿಯೆಷನ್‌ಗೆ ಒಳಗಾಗುತ್ತದೆ.
ಇದು ದುಬಾರಿ.
ಚಿಕ್ಕ ಪುಟ್ಟ ಊರುಗಳಲ್ಲಿ ಇದು ಲಭ್ಯವಿಲ್ಲ.
ಸೋಂಕು ಕಾಣಿಸಿದ 5-6 ದಿನಗಳಲ್ಲಿ, ಉಸಿರಾಟದ ತೊಂದರೆ ಕಾಣಿಸಿಕೊಂಡರೆ ರೋಗಿಯನ್ನು ಈ ಸ್ಕ್ಯಾನ್‌ಗೆ ಒಳಪಡುವುದು ಉತ್ತಮ. ಎಕ್ಸ್-ರೇ- ಇದು ಸಿ.ಟಿ. ಸ್ಕ್ಯಾನ್ ನಷ್ಟು ನಿಖರವಾಗಿ ಅಲ್ಲದಿದ್ದರೂ ಶ್ವಾಸಕೋಶಗಳಲ್ಲಿನ ಸೋಂಕು ಪತ್ತೆ ಹಚ್ಚುವಲ್ಲಿ ಸಹಕಾರಿ.
ಇಲ್ಲಿ ದೇಹಕ್ಕೆ ಸಿಗುವ ರೇಡಿಯೇಷನ್ ಪ್ರಮಾಣ ಸಿ.ಟಿ. ಸ್ಕ್ಯಾನ್‌ಗಿಂತ ಬಹಳ ಕಡಿಮೆ.
ಬಹಳ ಅಗ್ಗ.
ಚಿಕ್ಕ ಪುಟ್ಟ ಪ್ರದೇಶಗಳಲ್ಲೂ ಈ ಸೌಲಭ್ಯ ಲಭ್ಯ.
ಇಂದು ಜನರು ಕೋವಿಡ್ ಕಾಯಿಲೆಗೆ ರಾಮಬಾಣವೆಂದು ಭಾವಿಸುವ ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿರುವ ರೆಮ್‌ಡೆಸಿವಿರ್, ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಹಲವು ತಜ್ಞರ ಪ್ರಕಾರ ಹೆಚ್ಚಿನ ಪ್ರಯೋಜನಕಾರಿಯಲ್ಲ. ಇದು ವೈರಸ್‌ಗಳ ನಾಶಕ ಔಷಧವಾದರೂ ಸಾರ್ಸ್-ಕೋವ್-2 ವೈರಸ್‌ಗಳ ಸಾರದಲ್ಲಿ ಹೆಚ್ಚು ಸಫಲವಾಗಿಲ್ಲ. ಇದರ ಉಪಯೋಗದಿಂದ ಏನಾದರು ಪ್ರಯೋಜನವಿದ್ದರೆ ಅದು ಈ ವೈರಸ್ಸ್ ರೋಗಿಗಳ ದೇಹದಲ್ಲಿ ಶ್ರೀಘ್ರಾವಧಿಯಲ್ಲಿ ವಂಶಾಭಿವೃದ್ಧಿಗೊಳ್ಳುವ ಪ್ರಥಮ ಹಂತ ಹಾಗೂ ದ್ವೀತಿಯ ಹಂತದಲ್ಲಿ. ಪ್ರಾರಂಭದಲ್ಲಿ ರೋಗಿಯ ದೇಹದಿಂದ ಸಾಮಾನ್ಯವಾಗಿ ಸಾಧಾರಣಾ 10 ದಿನಗಳಲ್ಲಿ ಈ ವೈರಸ್‌ಗಳು ಮಾಯವಾಗುವುದರಿಂದ ಕಾಯಿಲೆಯ ಮುಂದಿನ ಹಂತಗಳಲ್ಲಿ ಇದರ ಬಳಕೆ ಅಪ್ರಯೋಜಕ ಹಾಗೂ ಈ ಔಷಧ ಕಿಡ್ನಿ ಹಾಗೂ ಲಿವರ್‌ಗಳ ಮೇಲೆ ತೀಕ್ಷ್ಣ ಅಡ್ಡಪರಿಣಾಮ ಬೀರುವ ಸಾಧ್ಯತೆ ಇದೆ. ಮುಂದಿನ ಹಂತಗಳಲ್ಲಿ ದೇಹದಲ್ಲಿ ಕಂಡುಬರುವ ತೀವ್ರತರ ಗುಣಲಕ್ಷಣಗಳಿಗೆ ವೈರಾಣುಗಳು ಕಾರಣವಲ್ಲ. ಬದಲು ಅದಾಗಲೇ ಇವುಗಳಿಂದ ಘಾಸಿಗೊಳಗಾದ ಪ್ರಮುಖ ಅಂಗಗಳ ನಿಷ್ಕ್ರಿಯತೆ ಹಾಗೂ ಈ ವೈರಸ್‌ಗಳನ್ನು ನಾಶಪಡಿಸಲು ದೇಹದ ಪ್ರಬಲ ರಕ್ಷಣಾ ವ್ಯೂಹ ತಯಾರಿಸಿದ ರಾಸಾಯನಿಕಗಳಿಂದ ದೇಹದ ಮೇಲಾಗುವ ದುಷ್ಪರಿಣಾಮ.
8. ಕೋವಿಡ್ ಚಿಕಿತ್ಸೆಯಲ್ಲಿ ಪ್ಲಾಸ್ಮಾ ಚಿಕಿತ್ಸೆ ಮತ್ತು ಡಿ.ಆರ್.ಡಿ.ಒ ಪ್ರಯೋಗಶಾಲೆಯಲ್ಲಿ ಹೊಸದಾಗಿ ತಯಾರಿಸಲಾಗಿರುವ `2 ಡಿಲಾ’ ಗಳ ಪಾತ್ರವೇನು?
ಹಲವು ತಜ್ಞರ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ಲಾಸ್ಮಾ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ ಅಲ್ಲ. ಇದರ ಅಲ್ಪ ಸ್ವಲ್ಪ ಪ್ರಯೋಜನ ಏನಾದರೂ ಇದ್ದರೆ, ಕಾಯಿಲೆಯ ಮೊದಲ ಹಂತದಲ್ಲಿ ವೈರಾಣು ವೃದ್ಧಿಗೊಳ್ಳುವಾಗ ಮಾತ್ರ. ಇತ್ತೀಚೆಗೆ ಪ್ಲಾಸ್ಮಾ ಚಿಕಿತ್ಸೆ ಕೈಬಿಡಲು ಐ.ಸಿ.ಎಂ.ಆರ್ ಮಾರ್ಗದರ್ಶಿ ಸೂತ್ರಗಳಲ್ಲಿ ಹೇಳಿದೆ.
ಈ ಕೋವಿಡ್-19 ರ ಇನ್ನೊಂದು ಅತೀ ಅಪಾಯಕಾರೀ ಗುಣವೆಂದರೆ ರಕ್ತ ಹೆಪ್ಪುಗಟ್ಟುವಿಕೆ. ಆದರೆ ಇದನ್ನು ತಡೆಗಟ್ಟಲು ಬೇಕಾದ ಔಷಧ ಕೇವಲ ವೈದ್ಯರ ಸಲಹೆಯಂತೆ ಅವರ ಮೇಲುಸ್ತುವಾರಿಯಲ್ಲಿ ಉಪಯೋಗಿಸತಕ್ಕದ್ದು.
ಭಾರತದ ಔಷಧಗಳ ಗುಣಮಟ್ಟ ನಿಯಂತ್ರಣ ಪ್ರಾಧಿಕಾರ ಮೇ 8 ನೇ ತಾರೀಖು, ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಆರ್.ಡಿ.ಒ) ತಯಾರಿಸಿದ `2 ಡಿಲಾ’ (2 ಡಿಒಕ್ಸಿ ಡಿ ಗ್ಲೂಕೋಸ್) ಎನ್ನುವ ಔಷಧವನ್ನು ಕೋವಿಡ್-19 ರ ಚಿಕಿತ್ಸೆಯಲ್ಲಿ ತುರ್ತು ಸಂದರ್ಭಗಳಲ್ಲಿ ಬಳಸಲು ಅನುಮತಿ ನೀಡಿದೆ. ಇದರಿಂದ ಚಿಕಿತ್ಸೆ ಪ್ರಾರಂಭಿಸಿದ ಮೂರು ದಿನಗಳಲ್ಲಿ ರೋಗಿಯಲ್ಲಿ ಆಕ್ಸಿಜನ್‌ನ ಬಳಕೆಯಲ್ಲಿ ಪ್ರತಿಶತ 42 ರಿಂದ 43 ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ ಎಂದೂ, ರೋಗಿಯ ದೇಹದಲ್ಲಿ ರೋಗಾಣುಗಳು ಶೀಘ್ರವಾಗಿ ನಾಶವಾಗುವುದೆಂದೂ ತಿಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮಕಾರಿತನದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯ.
ಈ ಕಾಲದಲ್ಲಿ ಜನರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡ ಹಲವರು ಕೋವಿಡ್ ಬಾರದಂತಹ, ಬಂದರೆ ಧಿಡೀರನೆ ಗುಣಪಡಿಸುವಂತಹ ಔಷಧಗಳು ತಮ್ಮಲ್ಲಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಇವರ ಬಗ್ಗೆ ಇವರ ಔಷಧಗಳ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯವಿದೆ.
9. ಕೋವಿಡ್ ನಿಂದ ಬಳಲಿ ಗುಣಮುಖರಾದವರಿಗೆ ಮುಂದೆ ಬೇರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆಯೆ?
ಕೋವಿಡ್-19 ಕಾಯಿಲೆ ಸೋಂಕಿತರಲ್ಲಿ ಯಾವುದೇ ಗುಣಲಕ್ಷಣ ಉಳ್ಳವರು, ಸೋಂಕಿನಿಂದ ಭಾಧಿತರಾದವರೂ 8-10 ದಿನಗಳಲ್ಲಿ ವೈರಸ್ ನಾಶವಾಗಿ ಯಾವುದೇ ಅಪಾಯಕ್ಕೊಳಗಾಗದೇ ಹೆಚ್ಚಾಗಿ ಪೂರ್ಣವಾಗಿ ಗುಣಮುಖರಾಗುತ್ತಾರೆ. ಆದರೆ ಎಲ್ಲೋ ಕೆಲವರಲ್ಲಿ ಅದಾಗಲೇ ಘಾಸಿಗೊಂಡ ದೇಹದ ಪ್ರಮುಖ ಅಂಗಗಳ ನಿಷ್ಕ್ರಿಯತೆ ರೋಗಿಯ ಜೀವಕ್ಕೆ ಮುಂದೆ ಅಪಾಯ ಒಡ್ಡಬಹುದು.
ಆದರೆ ಹೀಗೆ ಗುಣವಾದವರಲ್ಲೂ ಕೆಲವರನ್ನು ತಿಂಗಳಿಗಿಂತಲೂ ಅಧಿಕ ಸಮಯ ಅತಿ ತೀವ್ರ ಕೆಮ್ಮು ಬಾಧಿಸಬಹುದು. ಇನ್ನು ಯಾವುದೇ ಸಮಸ್ಯೆಗಳಿಲ್ಲದವರೂ ಒಮ್ಮೆಲೇ ಕಿಡ್ನಿ, ಹೃದಯ, ಮಿದುಳು, ಲಿವರ್ ಮೊದಲಾದ ದೇಹದ ಪ್ರಮುಖ ಅಂಗಗಳ ಬಾಧೆಗೊಳಗಾಗಬಹುದು. ಧಿಡೀರನೆ ಮರಣವನ್ನು ಹೊಂದಬಹುದು.
ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡ ಹಲವರಲ್ಲಿ ಕಾಣಿಸಿಕೊಳ್ಳುತ್ತಿರುವ ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್ ಅಥವಾ ಮ್ಯುಕೊರ್ ಮೈಕೊಸಿಸ್) ಎನ್ನುವ ಬಹಳ ವಿರಳದಾದ ಸೋಂಕಿನ ಚಿಕಿತ್ಸೆ ವೈದ್ಯರಿಗೆ ಸವಾಲಾಗಿ ನಿಂತಿದೆ. ದೇಹದ ರೋಗ ರಕ್ಷಣಾ ವ್ಯವಸ್ಥೆ ದುರ್ಬಲವಾಗಿರುವ ಸಿಹಿಮೂತ್ರ, ಮೊದಲಾದ ರೋಗದಿಂದ ಬಳಲುವವರಲ್ಲಿ ಹಾಗೂ ಯಾವುದೇ ರೋಗದ ಚಿಕಿತ್ಸೆಗಾಗಿ ರೋಗ ರಕ್ಷಣಾ ವ್ಯೂಹವನ್ನು ದುರ್ಬಲಗೊಳಿಸುವ ಚಿಕಿತ್ಸೆ ಪಡೆಯುವ ರೋಗಿಗಳಲ್ಲಿ ಈ ಫಂಗಸ್ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ.
ಮೂಗಿನಲ್ಲಿ ಉಸಿರಾಟದ ತೊಂದರೆ, ಮುಖದ ಒಂದು ಭಾಗ ಊದಿಕೊಂಡು, ಮರಗಟ್ಟಿ, ನೋವಿನಿಂದ ಕೂಡಿರುವುದು, ಮೂಗಿನಿಂದ ಕಪ್ಪು ಅಥವಾ ರಕ್ತಮಿಶ್ರಿತ ಸ್ರಾವವಾಗುವುದು, ಹಲ್ಲು ಅಲುಗಾಡುವುದು ಹಾಗೂ ನೋವು, ದೃಷ್ಟಿ ಮಸಕಾಗುವುದು ಹಾಗೂ ವಸ್ತುಗಳೆಲ್ಲಾ ಎರಡಾಗಿ ಕಾಣುವುದು, ಕಣ್ಣುನೋವು, ಜ್ವರ, ಎದೆ ನೋವು, ಶ್ವಾಸಕೋಶದ ತೊಂದರೆಗಳಲ್ಲಿ ಹೆಚ್ಚಳವಾಗುವುದು, ರಕ್ತ ಹೆಪ್ಪುಗಟ್ಟುವುದು ಇದರ ಗುಣ ಲಕ್ಷಣಗಳು, ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಇದು ಸಾವಿಗೂ ಕಾರಣವಾಗಬಹುದು.
10. ವ್ಯಾಕ್ಸೀನ್ ಕೋವಿಡ್ ಮಹಾಸೋಂಕನ್ನು ಪೂರ್ಣವಾಗಿ ನಿವಾರಿಸಲು ಇರುವ ಏಕೈಕ ಪರಿಹಾರ ಎಂಬುದು ನಿಜವೇ? ವ್ಯಾಕ್ಸೀನ್ ಎಲ್ಲರೂ ಹಾಕಿಸಿಕೊಳ್ಳಬೇಕೆ? ಯಾರು ಹಾಕಿಸಿಕೊಳ್ಳಬಾರದು ?
ಕೋವಿಡ್ ಬಾರದಂತೆ ತಡೆಗಟ್ಟುವಲ್ಲಿ ಈಗ ನಮ್ಮ ದೇಶದಲ್ಲಿ ದೊರೆಯುವ ಲಸಿಕೆಯು, ಕೋವಿಡ್ ಬಾರದಂತೆ ತಡೆಗಟ್ಟುವಲ್ಲಿ ಶೇ. 70 ರಿಂದ 80 ಪರಿಣಾಮಕಾರಿ ಶಕ್ತಿಯನ್ನು ಹೊಂದಿದೆ. ಅಂದರೆ 2 ಲಸಿಕೆಯನ್ನು ಪಡೆದ ನಂತರವೂ ಪ್ರತಿ ನೂರು ಜನರಲ್ಲಿ 20 ರಿಂದ 30 ಜನರಿಗೆ ಈ ಕಾಯಿಲೆ ಬರುವ ಸಂಭವವಿದೆ. ಆದರೆ ಹೀಗೆ ಬಂದವರಲ್ಲಿ ಸಹ ಇದು ಅಲ್ಪವೂ ಮಧ್ಯಮ ತೀವ್ರತೆಯ ಕಾಯಿಲೆಯನ್ನು ಉಂಟು ಮಾಡಬಹುದು. ಆದರೆ ಲಸಿಕೆ ಪಡೆದವರಲ್ಲಿ ಅತೀ ತೀವ್ರಕಾಯಿಲೆ ಹಾಗೂ ಮರಣದ ಪ್ರಮಾಣ ಗಣನೀಯವಾಗಿ ಕಡಿತಗೊಳ್ಳುವುದು ಕಂಡು ಬಂದಿದೆ. ಹಾಗಾಗಿ 2 ಲಸಿಕೆಯನ್ನು ಪಡೆದವರೂ ಕೂಡಾ `ಕೋವಿಡ್-19 ತಡೆಗಟ್ಟುವ ನಿಯಮ’ಗಳಾದ ಮಾಸ್ಕ್ ಧಾರಣೆ, ದೈಹಿಕ ಅಂತರ ಕಾಪಾಡುವಿಕೆ ಮತ್ತು ಪದೇ ಪದೇ ಸಾಬೂನಿನೊಂದಿಗೆ ಕೈ ತೊಳೆಯುವುದನ್ನು ಕಡ್ಡಾಯವಾಗಿ ಮುಂದುವರಿಸುವುದು ಅಗತ್ಯ. ಯಾವುದೇ ಸೋಂಕು ಕಾಯಿಲೆ ಒಂದು ಸಮಾಜದಲ್ಲಿ ಒಬ್ಬರಿಂದೊಬ್ಬರಿಗೆ ಹರಡುವ ಸರಪಳಿಯ ಕೊಂಡಿ ತುಂಡಾಗಿ ಹತೋಟಿಗೆ ಬರಬೇಕಾದರೆ ಅಲ್ಲಿನ ಪ್ರತಿಶತ 60 ರಿಂದ 70 ಜನರ ದೇಹದಲ್ಲಿ ಆ ಸೋಂಕಿನ ರೋಗ ನಿರೋಧಕ ಶಕ್ತಿ ಇರುವುದು ಅವಶ್ಯಕ.
ಕೋವಿಡ್ ಲಸಿಕೆಯ ಎರಡೂ ಡೋಸುಗಳನ್ನು ಪಡೆದಾಗ ಉತ್ಪತ್ತಿಯಾಗುವ ರೋಗ ನಿರೋಧಕ ಶಕ್ತಿ ಇಂದಿನ ಅಂದಾಜಿನಂತೆ ದೇಹದಲ್ಲಿ ಉಳಿಯುವುದು ಒಂದರಿಂದ ಒಂದುವರೆ ವರ್ಷ. ಆದರೆ ಈ ಕಾಲದಲ್ಲಿ ನಾವು ನಮ್ಮ ದೇಶದ 80 ರಿಂದ 100 ಕೋಟಿ ಜನರಿಗೆ 2 ಡೋಸುಗಳ ಲಸಿಕೆಯನ್ನು ಅಂದರೆ ಒಟ್ಟು 160 ರಿಂದ 200 ಕೋಟಿ ಡೋಸು ಲಸಿಕೆ ನೀಡಲು ಸಾಧ್ಯವಾದರೆ ಹಾಗೂ ಜನರು ಕ್ರಮಬದ್ಧವಾಗಿ `ಕೋವಿಡ್ ತಡೆಗಟ್ಟುವ ನಿಯಮ ಪಾಲಿಸಿದರೆ ಇದು ಸಾಧ್ಯ’. ಆದರೆ ನಾಲ್ಕು ತಿಂಗಳಲ್ಲಿ ನಮ್ಮ ದೇಶದಲ್ಲಿ ಬರೇ (18) ಹದಿನೆಂಟು ಕೋಟಿ ಲಸಿಕೆ ನೀಡಲು ಸಾಧ್ಯವಾಗಿದೆ. ಈಗಾಗಲೇ ಲಸಿಕೆಯ ತೀವ್ರ ಕೊರತೆ ಕಾಡುತ್ತಿದೆ. ಹಾಗೂ ಈ ಸೋಂಕು ಯಾವುದೇ ಒಂದು ದೇಶದಲ್ಲಿ ಉಲ್ಬಣಗೊಂಡರೂ ಪ್ರಪಂಚದ ಉಳಿದ ದೇಶಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಮುಂದಿನ ದಿನಗಳಲ್ಲಿ ಉಧ್ಬವವಾಗುವ ರೂಪಾಂತರಿಗಳು ಈಗಿರುವ ಲಸಿಕೆಗಳಿಗೆ ಪ್ರತಿರೋಧ ಬೆಳೆಸಲು ಸಾಧ್ಯ. ಆಗ ಅವುಗಳನ್ನು ಮಣಿಸಿದ ಹೊಸ ಲಸಿಕೆಯ ಉತ್ಪಾದನೆ ಅಗತ್ಯ.
ಕೋವಿಡ್-19 ಪ್ರಪಂಚದಿಂದ ಪೂರ್ಣವಾಗಿ ನಿರ್ಮೂಲನ ಮಾಡುವುದು ಕಷ್ಟ. ಆದರೆ ಇದನ್ನು ಹತೋಟಿಯಲ್ಲಿ ಇಡಲು ಸಾಧ್ಯ. ಇದಕ್ಕಾಗಿ ಜನರ ಹೊಸದರಲ್ಲಿನ ರೋಗ ನಿರೋಧಕ ಶಕ್ತಿ ಕೆಳಗಿಳಿದಾಗ ಅದನ್ನು ಮೇಲಕ್ಕೆತ್ತಲು ನಿರ್ದಿಷ್ಟ ಕಾಲಕ್ಕೊಮ್ಮೆ ಲಸಿಕೆಯನ್ನು ನೀಡುವುದು ಅಗತ್ಯ. ಇದನ್ನು ಬೂಸ್ಟರ್ ಲಸಿಕೆ ಎನ್ನುತ್ತಾರೆ.
18 ವರ್ಷದೊಳಗಿನ ಮಕ್ಕಳಲ್ಲಿ, ಗರ್ಭಿಣಿ ಸ್ತ್ರೀಯರಲ್ಲಿ ಹಾಗೂ ಹಾಲೂಡಿಸುವ ತಾಯಂದಿರಲ್ಲಿ ಈ ಲಸಿಕೆಯ ಗುಣಾವರ್ಗಗಳನ್ನು ತಿಳಿದುಕೊಳ್ಳಲು ಪ್ರಯೋಗ ನಡೆದಿಲ್ಲ. ಕೆಲವು ದೇಶಗಳಲ್ಲಿ 12 ರಿಂದ 18 ವರ್ಷಗಳ ತನಕದವರಿಗೆ ಲಸಿಕೆ ನೀಡಲು ಪ್ರಾರಂಭಿಸಿದ್ದಾರೆ. ಗರ್ಭಧಾರಣೆಯ ಮೂರನೇ ಹಂತದಲ್ಲಿರುವ ಗರ್ಭಣಿಯರಿಗೆ ಹಾಗೂ ಎದೆ ಹಾಲೂಡಿಸುವ ತಾಯಂದಿರಿಗೆ ಕೊಡಬಹುದು ಎಂದು ಅಭಿಪ್ರಾಯ ಕೆಲವು ತಜ್ಞರಿಂದ ಬರುತ್ತಿದೆ. ಆದರೆ ನಮ್ಮ ದೇಶದಲ್ಲಿ ಇದುವರೆಗೆ ಅನುಮತಿ ದೊರೆತಿಲ್ಲ.
11. ಎರಡನೇ ಅಲೆಯನ್ನು ಸರಿಯಾದ ದೂರದರ್ಶಿ ಯೋಜನೆ ಮತ್ತು ಅದರ ಜಾರಿಯಿಂದ ತಡೆಯುವುದು ಸಾಧ್ಯವಿತ್ತೇ?
ಎರಡನೆಯ ಅಲೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿತ್ತೋ ಇಲ್ಲವೋ ಎರಡನೇ ಅಲೆ ಬಂದಾಗಿದೆ. ಆದರೆ ಎರಡನೆಯ ಅಲೆಯ ಸೋಂಕು ಜನರಲ್ಲಿ, ಸಮಾಜದಲ್ಲಿ ಹಾಗೂ ದೇಶದಲ್ಲಿ ಇಂತಹ ಸಂಕಷ್ಟ ಹರಡುವುದನ್ನು ತಡೆಗಟ್ಟಲು ಸಾಧ್ಯವಿತ್ತು.
ಮೊದಲ ಅಲೆ ಮುಗಿಯುತ್ತಿದ್ದಂತೆ, ಆ ಅಲೆಗೆ ಕಾರಣವಾದ ವೈರಾಣು ತನ್ನೊಂದಿಗೆ, ತನ್ನ ಮೂಲದ ಪೀಳಿಗೆಯ ರೂಪಾಂತರಿಗಳೊಂದಿಗೆ ಇನ್ನೂ ಉಗ್ರವಾದ 2ನೇ ಅಲೆಯನ್ನು ಸಾಧಾರಣ 2021 ರ ಮಾರ್ಚ್ ಎಪ್ರಿಲ್‌ನಂತೆ ಸೃಷ್ಟಿಸಬಹುದೆನ್ನುವ ಮುನ್ಸೂಚನೆ ಹಲವು ತಜ್ಞರಿಂದ ದೊರಕಿತ್ತು.
ಆದರೆ ಎಲ್ಲರ ನಿರೀಕ್ಷೆಗೂ ಮೀರಿ ಮೊದಲ ಅಲೆ ಅತ್ಯಂತ ಹೆಚ್ಚು ಜನಸಂಖ್ಯೆ ಹಾಗೂ ಸಾಂದ್ರತೆ ಇರುವ ನಮ್ಮ ದೇಶದಲ್ಲಿ ಇತರ ಕೆಲವು ದೇಶಗಳಿಗಿಂತ ಕಡಿಮೆ ಮಟ್ಟದಲ್ಲಿ ಸಾವುನೋವುಗಳನ್ನುಂಟು ಮಾಡಿತ್ತು. ಆಗ, ನಮ್ಮ ಘನ ಸರ್ಕಾರದ ನೇತೃತ್ವ ಹಾಗೂ ಭಾರತಾಂಬೆಯ ಕೃಪೆಯಿಂದ ನಾವು ಕೋವಿಡ್-19 ರ ದಾಳಿಯನ್ನು ಹಿಮ್ಮೆಟ್ಟಿಸಿದೆನೆಂದು ದೇಶ ವಿದೇಶಗಳಲ್ಲಿ ಸಾರಲಾಯಿತು. ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡೆವು. ಹಾಗಾಗಿ ತಜ್ಞರ ಸಲಹೆಯನ್ನು ಕಡೆಗಣಿಸಲಾಯಿತು. ದೈವದ ಕೃಪೆ ಪಡೆಯುವ ಸಲುವಾಗಿ ಹಲವು ಲಕ್ಷ ಜನ ಒಮ್ಮೆಗೆ ಒಂದೆಡೆ ಸೇರುವ `ಕುಂಭ ಮೇಳ’ಗಳನ್ನು ಒಂದು ವರ್ಷ ಮುಂಚಿತವಾಗಿ ನೆರವೇರಿಸಲು ಅನುಮತಿ ನೀಡಲಾಯಿತು. ಹಲವು ರಾಜ್ಯಗಳಲ್ಲಿ ದೀರ್ಘಾವಧಿ ಕಾಲ ನಡೆಯುವಂತೆ ಚುನಾವಣೆಗಳನ್ನು ಘೋಷಿಸಲಾಯಿತು. ಎಪ್ರಿಲ್ ತಿಂಗಳ ಪ್ರಾರಂಭದಲ್ಲೇ 2ನೇ ಅಲೆ ಶುರುವಾಗಿತ್ತು. ಆದರೆ ಸಭೆ, ಸಮಾರಂಭ, ಜಾತ್ರೆ ಹಾಗೂ ಚುನಾವಣಾ ಪ್ರಚಾರಗಳ ಸಭೆಗಳಲ್ಲಿ ಕೋವಿಡ್ ತಡೆಗಟ್ಟುವ ನಿಯಮಗಳನ್ನು ಸಂಪುರ್ಣ ಉಲ್ಲಂಘಿಸುತ್ತಾ ರಾಜಕಾರಣಿಗಳು ಹಾಗೂ ಜನರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದರು. ಕೋವಿಡ್ ಅಲೆ ಒಂದೇ ಸಮನೆ ಮೇಲ್ಮುಖವಾಗಿ ಓಡುತ್ತಿತ್ತು. ರೂಪಾಂತರಿ ವೈರಸ್‌ಗಳು, ಬಹಳ ಶೀಘ್ರವಾಗಿ ಜನರಲ್ಲಿ ಸೋಂಕುಂಟು ಮಾಡುತ್ತಿದ್ದವು.
ಈ ಅಲೆಯ ರೋಗಿಗಳಲ್ಲಿ ಆಕ್ಸಿಜನ್‌ನ ಅವಶ್ಯಕತೆ ಹೆಚ್ಚಿತ್ತು. ಆದರೆ ನಮ್ಮ ದೇಶದಲ್ಲಿ ಕೋವಿಡ್ ಜಯಿಸಿತೆಂಬ ಆಳುವವರ ಆಶ್ವಾಸನೆಗಳೊಳಗಾಗಿ ಅದಾಗಲೇ ಮೊದಲ ಅಲೆಯ ಸೋಂಕಿತರ ಚಿಕಿತ್ಸೆಗಾಗಿ ಸ್ಥಾಪಿಸಿದ ಹೆಚ್ಚುವರಿ ಆಸ್ಪತ್ರೆಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಆಕ್ಸಿಜನ್‌ನ ಉತ್ಪಾದನೆ, ರಾಜ್ಯಗಳ ನಡುವೆ ಅದರ ಸಮರ್ಪಕ ಹಂಚಿಕೆ, ಅವಶ್ಯಕತೆ ಇರುವ ಸ್ಥಳಗಳಿಗೆ ಅದರ ಸಾಗಾಣಿಕೆಗೆ ಸರ್ಕಾರ ಯಾವುದೇ ಯೋಜನೆ ನಿರೂಪಿಸಲಿಲ್ಲ. ಜನರಿಗೆ 2ನೇ ಅಲೆಗೆ ಸಮರ್ಪಕವಾಗಿ ಸನ್ನದ್ದರಾಗುವ ಸಲಹೆ ಸೂಚನೆಗಳನ್ನು ನೀಡುವ ಬದಲು ಸರ್ಕಾರ ‘ನಮ್ಮ ದೇಶ ಕೋವಿಡ್ ಗೆದ್ದಿದೆ’ ಎನ್ನುವ ತಪ್ಪು ಮಾಹಿತಿ ನೀಡುತ್ತಿತ್ತು.
ಈ ಸೋಂಕಿನ ವಿರುದ್ಧದ ಹೋರಾಟದಲ್ಲಿ ನೆರವು ನೀಡುವ ಲಸಿಕೆಯ ಬೃಹತ್ ಪ್ರಮಾಣದ ಉತ್ಪಾದನೆಯಾಗಲಿಲ್ಲ. ಉತ್ಪಾದನೆಯಾದ ಲಸಿಕೆಯೂ ಸಮರ್ಪಕವಾಗಿ ಹಂಚಿಕೆಯಾಗಲಿಲ್ಲ. ಹಲವು ರಾಜ್ಯಗಳು ತಮಗೆ ದೊರೆತ ಲಸಿಕೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಿಲ್ಲ. ಈ ಹತ್ತು ಹಲವು ಕೊರತೆಗಳು 2ನೇ ಅಲೆಯನ್ನು ಸಮರ್ಪಕವಾಗಿ ಎದುರಿಸುವಲ್ಲಿ ದೇಶ ವಿಫಲವಾಗಲು ಪ್ರಮುಖ ಕಾರಣಗಳಾದವು.
12. ಮೂರನೇ ಅಲೆಯ ಮಾತು ಕೇಳಿಬರುತ್ತಿದೆ, ಅದನ್ನಾದರೂ ತಡೆಗಟ್ಟಬಹುದೆ?
ಇದರ ನಡುವೆ ತಜ್ಞರು ಮೂರನೇ ಅಲೆಯ ಮುನ್ಸೂಚನೆ ನೀಡುತ್ತಿದ್ದಾರೆ. ಯಾವುದೇ ವಿಷಯದ ಮುನ್ಸೂಚನೆ ನೀಡಲು ಅದರ ಬಗೆಗಿನ ಹಿಂದಿನ ಮಾಹಿತಿಗಳ ನಿಖರ ಅಂಕೆ ಸಂಖ್ಯೆಗಳ ಅಧ್ಯಯನ ಅತ್ಯಗತ್ಯ. ಆದರೆ ನಮ್ಮ ದೇಶದಲ್ಲಿ ಈ ಮಾಹಿತೆಗಳೇ ಸರಿಯಾಗಿ ದೊರೆಯುತ್ತಿಲ್ಲ. ದೊರಕಿದ ಮಾಹಿತಿ ನಂಬಲಸಾಧ್ಯ ಎನ್ನುವುದು ಹೆಚ್ಚಿನ ತಜ್ಞರ ಅಭಿಪ್ರಾಯ. ಈ ಸೋಂಕಿಗೆ ಒಳಗಾಗುವ ಇದರಿಂದ ನರಳುವ, ಸಾವಿಗೀಡಾಗುವ ಜನರ ಸಂಖ್ಯೆ, ಪ್ರಮಾಣ ಸರ್ಕಾರ ನೀಡುವ ಮಾಹಿತಿಗಿಂತ 5-6 ಪಟ್ಟು ಹೆಚ್ಚು ಎನ್ನುವುದು ತಜ್ಞರ ಅಂದಾಜು. ಬೇರೆ ಕಾಲದಲ್ಲಿ ನಮ್ಮ ದೇಶದಲ್ಲಿ ದಿನಕ್ಕೆ 27 ರಿಂದ 30 ಸಾವಿರ ಸಾವುಗಳಾಗುತ್ತವೆ. ಈ ಸೋಂಕಿನಿಂದ ದಿನಕ್ಕೆ 3-4 ಸಾವಿರ ಹೆಚ್ಚು ಸಾವಾಗಿದ್ದರೆ ನಮ್ಮ ರುದ್ರಭೂಮಿಗಳಲ್ಲಿ ಶವ ಸಂಸ್ಕಾರಕ್ಕೆ ಈ ರೀತಿ ದಿನಗಟ್ಟಲೆ ಉದ್ದ ಸಾಲಿನಲ್ಲಿ ಕಾಯುವ ಪ್ರಮೇಯ ಖಂಡಿತಾ ಬರುತ್ತಿರಲಿಲ್ಲ ಎನ್ನುವುದು ಹಲವಾರು ಅಭಿಪ್ರಾಯ.
ಈ ಎರಡನೆಯ ಅಲೆ ಆದಷ್ಟು ಬೇಗ ಮುಗಿಯಲಿ. ಮೂರನೆಯ ಅಲೆ ಬಂದರೂ ಅದರ ಪ್ರಾಬಲ್ಯತೆ ಹಾಗೂ ತಡೆಯಲು ಸರ್ಕಾರ ಸಂಪೂರ್ಣ ಸಿದ್ದತೆ ಮಾಡಿಕೊಳ್ಳಲಿ. 3ನೇ ಅಲೆಯ ಸೋಂಕಿನ ಚಿಕಿತ್ಸೆಗೆ ಬೇಕಾದ ಸೂಕ್ತ ಔಷಧ ಹಾಗೂ ಸೋಂಕನ್ನು ತಡೆಗಟ್ಟುವ ಪ್ರಬಲ ಲಸಿಕೆ ಆದಷ್ಟು ಬೇಗ ಆವಿಷ್ಕಾರವಾಗಲಿ ಎಂದು ಹಾರೈಸೋಣ. ಲಸಿಕೆ ಹೋರಾಟದಲ್ಲಿ ನಾವೆಲ್ಲರೂ ಭಾಗಿಗಳಾಗಿ ಸೋಂಕನ್ನು ಸೋಲಿಸುವುದರಲ್ಲಿ ಯಶಸ್ವಿಯಾಗೋಣ.